ದಿಲ್ಲಿ ದರ್ಬಾರ್

Update: 2018-11-17 18:34 GMT

ಜಾವ್ಡೇಕರ್ ಅಸ್ವಸ್ಥತೆಯ ಭೀತಿ!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ವಿನಯಶೀಲ ಮತ್ತು ಬಿಜೆಪಿಯ ಕಠಿಣ ಪರಿಶ್ರಮಿಗಳಲ್ಲೊಬ್ಬರು ಎಂದೇ ಪರಿಗಣಿಸಲಾಗಿದೆ. ಪ್ರತಿ ಚುನಾವಣೆಯಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಉದಾಹರಣೆಗೆ ಅವರು ಕರ್ನಾಟಕ ಚುನಾವಣೆ ಉಸ್ತುವಾರಿಯಾಗಿದ್ದರು. ಇದೀಗ ಡಿಸೆಂಬರ್ 7ರಂದು ಮತದಾನ ನಡೆಯುವ ರಾಜಸ್ಥಾನದ ಹೊಣೆ ಅವರ ಹೆಗಲೇರಿದೆ. ಹೆಚ್ಚು ಗಮನ ಹರಿಸಬೇಕಾದ ಎಚ್‌ಆರ್‌ಡಿ ಸಚಿವಾಲಯದ ವಿಚಾರಗಳಲ್ಲೂ ಅವರು ಸದಾ ಚಟುವಟಿಕೆಯಿಂದ ಇರುತ್ತಾರೆ. ಸಚಿವರು ಅದನ್ನು ಸರಿಯಾಗಿ ನಿಭಾಯಿಸುತ್ತಿದಾರೆ. ಆದರೆ ದೇಹ ಎಷ್ಟು ತಡೆದುಕೊಳ್ಳಲು ಸಾಧ್ಯ? ಕಳೆದ ವಾರ ದಿಲ್ಲಿಯ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ಎದೆನೋವಿನ ಕಾರಣದಿಂದ ಅವರು ದಾಖಲಾಗಿದ್ದಾರೆ ಎಂಬ ವಿಷಯ ತಿಳಿದಾಗ ಶಕ್ತಿ ಕೇಂದ್ರದಲ್ಲಿ ಎಲ್ಲರಿಗೂ ಕಸಿವಿಸಿಯಾಗಿತ್ತು. ಕೇಂದ್ರ ಸಚಿವ ಅನಂತ ಕುಮಾರ್ ಅಕಾಲಿಕ ನಿಧನದಿಂದ ಮತ್ತು ಮನೋಹರ್ ಪಾರಿಕ್ಕರ್ ಕ್ಯಾನ್ಸರ್‌ಪೀಡಿತರಾಗಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಜಾವ್ಡೇಕರ್ ಕೂಡಾ ಅಸ್ವಸ್ಥರಾಗಿದ್ದಾರೆ ಎನ್ನುವುದು ಖಂಡಿತವಾಗಿಯೂ ಬಿಜೆಪಿಯಲ್ಲಿ ಆತಂಕ ಹುಟ್ಟಿಸಿತ್ತು. ಅದೃಷ್ಟವಶಾತ್ ಜಾವ್ಡೇಕರ್‌ಗೆ ಗಂಭೀರ ಸ್ವರೂಪದ ಸಮಸ್ಯೆಯೇನೂ ಆಗಿಲ್ಲ ಎನ್ನುವುದು ತಿಳಿದಾಗ ಬಿಜೆಪಿ ಮುಖಂಡರ ಮುಖದಲ್ಲಿ ನಗು ಮಿಂಚಿತು.


ಜೋಗಿ ಹೋರಾಟದ ಸ್ಫೂರ್ತಿ
ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಹದಿನೈದು ವರ್ಷ ಕಾಲ ಅಧಿಕಾರದಿಂದ ಹೊರಗಿದ್ದರೂ, ಇಂದಿಗೂ ಕಿಂಗ್‌ಮೇಕರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೆ, ಜೋಗಿ ಕಿಂಗ್ ಆಗದಿದ್ದರೂ ಕಿಂಗ್ ಮೇಕರ್ ಅಂತೂ ಆಗುತ್ತಾರೆ. ಚುನಾವಣೆ ಪ್ರಚಾರ ವರದಿಗಾರಿಕೆಗೆ ಛತ್ತೀಸ್‌ಗಡಕ್ಕೆ ತೆರಳಿ ವಾಪಸಾಗಿರುವ ಪತ್ರಕರ್ತರ ಮನಸ್ಸು ಗೆದ್ದದ್ದು ಬಿಜೆಪಿಯೂ ಅಲ್ಲ; ಕಾಂಗ್ರೆಸ್ ಪಕ್ಷವೂ ಅಲ್ಲ. ಬದಲಾಗಿ ಅಜಿತ್ ಜೋಗಿ. ಜೋಗಿ ಅಧಿಕಾರದ ಸನಿಹಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯೂ ಅವರಿಗಿಲ್ಲ. ಆದರೆ, ಒಂದು ದಶಕದಿಂದ ಗಾಲಿಕುರ್ಚಿಗೆ ಅಂಟಿಕೊಂಡಿರುವ ಜೋಗಿಯವರ ಚೇತನ ಮಾತ್ರ ಎಲ್ಲರನ್ನೂ ಬೆರಗುಗೊಳಿಸಿದೆ. ಕೆಲ ತಿಂಗಳ ಹಿಂದೆ ಜೋಗಿಯವರ ಆರೋಗ್ಯಸ್ಥಿತಿ ಗಂಭೀರ; ಪುನಶ್ಚೇತನ ಕಷ್ಟಸಾಧ್ಯ ಎಂಬ ವಾತಾವರಣ ಇತ್ತು. ಆದರೆ ರಾಜ್ಯದ ಉದ್ದಗಲಕ್ಕೂ ಓಡಾಡಿ ತಮ್ಮ ಜನತಾ ಕಾಂಗ್ರೆಸ್ ಛತ್ತೀಸ್‌ಗಡ ಪಾರ್ಟಿ ಪರ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಇವರ ಪಕ್ಷ ಮಾಯಾವತಿಯ ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡಿದೆ. ಒಂದು ರಾತ್ರಿ ಜೋಗಿ ತೀವ್ರ ಜ್ವರ ಮತ್ತು ಸುಸ್ತಿನಿಂದ ಬಳಲಿದ ಒಂದು ಉದಾಹರಣೆಯನ್ನು ಪತ್ರಕರ್ತರು ನೀಡುತ್ತಾರೆ. ಆದರೆ ಮರುದಿನ ಚೇತರಿಸಿಕೊಂಡು, ಜ್ವರದ ನಡುವೆಯೂ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಅವರ ಉತ್ಸಾಹದ ಅರ್ಧದಷ್ಟು ಉತ್ಸಾಹ ಕಾಂಗ್ರೆಸ್ ಮುಖಂಡರಲ್ಲಿದ್ದರೆ, ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಕೈಗೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ.


ಜೋಶಿ ಪಾರ್ಟಿ ಮತ್ತು ಬಡ ಪತ್ರಕರ್ತರು
ಮುರಳಿ ಮನೋಹರ್ ಜೋಶಿ ದೀಪಾವಳಿ ಪೂರ್ವದಲ್ಲಿ ಆಯೋಜಿಸುವ ಸಂತೋಷಕೂಟಕ್ಕೆ ವಿಶೇಷ ಮಹತ್ವವಿದೆ. ಪೂರಿ ಬಾಜಿ ಮತ್ತು ಚಾಟ್ಸ್‌ನಂಥ ಅಧಿಕೃತ ಬನಾರಸ್ ಖಾದ್ಯಗಳಲ್ಲದೇ ರಾಜಕೀಯ ವಿಷಯಗಳ ಬಗ್ಗೆ ಜೋಶಿಯವರ ಮುಕ್ತ ಹಾಗೂ ಪ್ರಾಂಜ್ವಲ ಮನಸ್ಸಿನ ಅಭಿಪ್ರಾಯಗಳನ್ನು ಕೇಸರಿ ಪಕ್ಷದ ವರದಿಗಾರಿಕೆ ಮಾಡುವ ಪತ್ರಕರ್ತರು ಕಾಯುತ್ತಿರುತ್ತಾರೆ. ಆದರೆ ಈ ವರ್ಷ ಜೋಶಿ ನಿವಾಸದಲ್ಲಿ ಔತಣ ಸವಿಯಲು ಪತ್ರಕರ್ತರು ಕಾತರರಾಗಿದ್ದರೆ, ಅವರ ಮೊಬೈಲ್‌ಗಳಲ್ಲಿ ದಿಢೀರನೇ ಸಂದೇಶ ಮೊಳಗಿತು; ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರ ಜತೆ ಅನೌಪಚಾರಿಕ ಮಾತುಕತೆ ನಡೆಸುತ್ತಾರೆ ಎಂಬ ಸಂದೇಶ ಅದು. ಜೋಶಿ ಕೂಟ ಸಂಜೆ 4ಕ್ಕೆ ನಿಗದಿಯಾಗಿತ್ತು. ಬಿಜೆಪಿಯ ಅನೌಪಚಾರಿಕ ಸಂವಾದದ ಸಮಯವನ್ನು ಅತ್ಯಂತ ಜಾಗರೂಕವಾಗಿ ನಿಗದಿಪಡಿಸಿದಂತಿತ್ತು. ಎರಡು ಸ್ಥಳಗಳ ನಡುವಿನ ಅಂತರದ ಹಿನ್ನೆಲೆಯಲ್ಲಿ, ಪತ್ರಕರ್ತರು ಎರಡೂ ಕಡೆ ಭಾಗವಹಿಸಲು ಸಾಧ್ಯವೇ ಇರಲಿಲ್ಲ. ಪಕ್ಷದ ಹೆವಿವೈಟ್ ಎನಿಸಿಕೊಂಡ ಜೇಟ್ಲಿಯವರ ಮಾತನ್ನು ಬಿಡಲು ಸಾಧ್ಯವೇ ಇಲ್ಲ. ಬಹುತೇಕ ಮಂದಿ, ಮೌನವಾಗಿ ಬಿಜೆಪಿ ಕಚೇರಿಯತ್ತ ಹೆಜ್ಜೆ ಹಾಕಿದರು. ಆದರೆ ಜೋಶಿಯವರ ಪಾರ್ಟಿ ಮಾತ್ರ ಪ್ರತಿ ವರ್ಷದಂತೆ ಚೆನ್ನಾಗಿಯೇ ಇತ್ತು ಎಂಬ ಸುದ್ದಿ ಕೇಳಿಬಂತು.


ಪ್ರಧಾನಿಯ ಸೆಲ್ಫಿ ಮಿಲನ್!
ಕಳೆದ ಕೆಲ ವರ್ಷಗಳಿಂದ, ಪ್ರಮುಖ ಹಾಗೂ ಸೆಲ್ಫಿ ಆಕಾಂಕ್ಷಿ ಪತ್ರಕರ್ತರು ನರೇಂದ್ರ ಮೋದಿಯವರ ‘ದೀಪಾವಳಿ ಮಿಲನ’ವನ್ನು ಕಾಯುತ್ತಿದ್ದರು. ಈ ವರ್ಷ ಇದನ್ನು ಕೆಲವರು ‘ಸೆಲ್ಫಿ ಮಿಲನ್’ ಎಂದೂ ಕರೆದಿದ್ದರು. ದೀಪಾವಳಿ ಎರಡು ವಾರದ ಹಿಂದೆಯೇ ಮುಗಿದರೂ, ಮೋದಿ ಏಕೆ ಪತ್ರಕರ್ತರ ಜತೆ ಮಿಲನ ಏರ್ಪಡಿಸಿಲ್ಲ ಎನ್ನುವುದು ಸ್ಪಷ್ಟವಾಗಿ ಯಾರಿಗೂ ತಿಳಿಯದು. ಬಿಜೆಪಿ ಮುಖಂಡರು ವಿವಿಧ ಕಾರಣಗಳನ್ನು ಹೇಳುತ್ತಿದ್ದಾರೆ. ಅದರಲ್ಲಿ ಒಂದು ಕಾರಣ, ಅನಂತ ಕುಮಾರ್ ನಿಧನ. ವರ್ಷದ ಈ ಅವಧಿಯಲ್ಲಿ ಮೋದಿ ಸಂತೋಷದಿಂದ ಸೆಲ್ಫಿಗೆ ಫೋಸ್ ಕೊಡುತ್ತಾರೆ. ಕೆಲವೊಮ್ಮೆ ಪತ್ರಕರ್ತರಿಗೆ ಮತ್ತೊಮ್ಮೆ ಕ್ಲಿಕ್ಕಿಸುವಂತೆಯೂ ಕೇಳುತ್ತಾರೆ. ಇದಾದ ಬಳಿಕ ಮೋದಿ ವೇದಿಕೆಯಿಂದ ಮಾತನಾಡುತ್ತಾರೆ. ದಿಲ್ಲಿಯಲ್ಲಿ ಪಕ್ಷದ ಕಚೇರಿಯಲ್ಲಿದ್ದಾಗ ತಾನು ಹೇಗೆ ಇದೇ ಸ್ಥಳದಲ್ಲಿ ಪತ್ರಕರ್ತರನ್ನು ಭೇಟಿಯಾಗುತ್ತಿದ್ದೆ ಎಂದು ಮೆಲುಕು ಹಾಕುತ್ತಾರೆ. ಪತ್ರಿಕೆ ಬಗ್ಗೆ ಒಂದಷ್ಟು ಒಳ್ಳೆಯದನ್ನು ಹೇಳುತ್ತಾರೆ. ಇನ್ನೂ ಈ ಅಪೂರ್ವ ಮಿಲನ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಅದು ಚುನಾವಣೆ ನಡೆಯುವ ರಾಜ್ಯಗಳ ಫಲಿತಾಂಶವನ್ನು ಆಧರಿಸಿರುತ್ತದೆ. ಉತ್ತಮ ಫಲಿತಾಂಶ ಬಂದರೆ ಮಿಲನ ನಡೆಯುತ್ತದೆ. ಆದರೆ ಅದನ್ನು ದೀಪಾವಳಿ ಮಿಲನ ಎಂದು ಕರೆಯಲಾಗದು. ಇದನ್ನು ಕೇವಲ ಮಿಲನ ಎಂದಷ್ಟೇ ಕರೆಯಬಹುದು. ಕಾದು ನೋಡೋಣ.


ಪೂನಂ ಧಿಲ್ಲೊನ್ ಹೊಸ ಪಾತ್ರ
ಹಿರಿಯ ನಟಿ ಪೂನಮ್ ಧಿಲ್ಲೊನ್ 2004ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಅವರು ಈಗ ಮುಂಬೈ ಘಟಕದ ಉಪಾಧ್ಯಕ್ಷೆಯಾಗಿ ಸಕ್ರಿಯ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ಅಧಿಕಾರ ಸ್ವೀಕಾರದ ವೇಳೆ ಮಾತನಾಡಿದ ಧಿಲ್ಲೊನ್, ‘‘ರಾಜಕೀಯದಲ್ಲಿರುವ ಬಹುತೇಕ ಸಿನೆಮಾ ತಾರೆಯರಂತೆ ನಾನು ಆಲಂಕಾರಿಕ ವಸ್ತುವಾಗುವ ಬದಲು ಕಟ್ಟಾ ಕಾರ್ಯಕರ್ತೆಯಾಗಬಯಸುತ್ತೇನೆ’’ ಎಂದು ಹೇಳಿದರು. ತಮ್ಮ ಪಕ್ಷದ ಮಾಜಿ ಸದಸ್ಯೆ ಬಿಜೆಪಿ ಸೇರಿದ್ದು ಕಾಂಗ್ರೆಸಿಗರಿಗೆ ಮಾತ್ರ ಖುಷಿ ಕೊಟ್ಟಿದೆ! ಅವರು ಇದಕ್ಕೆ ನೀಡುವ ಕಾರಣ ಕುತೂಹಲಕಾರಿ. 1998-99ರಲ್ಲಿ ಪೂನಂ ಕಾಂಗ್ರೆಸ್ ಪಕ್ಷ ಸೇರಿದ್ದರು. ಅಂದರೆ ಅತ್ಯಂತ ಹಳೆಯ ಪಕ್ಷದ ಚುಕ್ಕಾಣಿಯನ್ನು ಸೋನಿಯಾ ಹಿಡಿದ ಅವಧಿ ಅದು. ಆದರೆ 2004ರಲ್ಲಿ ಧಿಲ್ಲೊನ್ ಬಿಜೆಪಿ ಸೇರಲು ಮುಂದಾದರು. ಅವರು ವಿರೋಧ ಪಕ್ಷದ ಸದಸ್ಯೆಯಾಗಬಯಸಿದರು. ಇದೀಗ ಮತ್ತೊಮ್ಮೆ ಧಿಲ್ಲೊನ್ ಸಕ್ರಿಯರಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹೇಳುವಂತೆ, ಅವರು ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ ಎಂದಾದರೆ, ಕಾಂಗ್ರೆಸಿಗರಿಗೆ ಅದೃಷ್ಟ ಖುಲಾಯಿಸಿದಂತೆ. ಏಕೆಂದರೆ ಧಿಲ್ಲೊನ್ ಸದಾ ಸೋಲುವವರ ಕಡೆಗಿರುತ್ತಾರೆ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News