ಫ್ರಾನ್ಸ್ ನಲ್ಲಿ ಬೃಹತ್ ‘ಹಳದಿ ಬನಿಯನ್’ ಪ್ರತಿಭಟನೆ:ಅಲ್ಲಲ್ಲಿ ಹಿಂಸಾಚಾರ

Update: 2018-12-09 16:54 GMT

ಪ್ಯಾರಿಸ್, ಡಿ. 9: ಫ್ರಾನ್ಸ್‌ನಾದ್ಯಂತ ಶನಿವಾರ ಬೃಹತ್ ‘ಹಳದಿ ಬನಿಯನ್’ ಸರಕಾರ ವಿರೋಧಿ ಪ್ರತಿಭಟನೆ ನಡೆಯಿತು.

ಸುಮಾರು 1,36,000 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಹಾಗೂ 1,723 ಮಂದಿಯನ್ನು ಬಂಧಿಸಲಾಗಿದೆ ಎಂದು ಉಪ ಆಂತರಿಕ ಸಚಿವ ಲಾರಂಟ್ ನನೆಝ್ ತಿಳಿಸಿದರು.

ಡಿಸೆಂಬರ್ 1ರಂದು ನಡೆದ ಪ್ರತಿಭಟನೆಯಲ್ಲೂ ಸುಮಾರು ಇಷ್ಟೇ ಸಂಖ್ಯೆಯ ಜನರು ಪಾಲ್ಗೊಂಡಿದ್ದರು.

‘‘ರಾಷ್ಟ್ರೀಯ ಮಟ್ಟದಲ್ಲಿ ನಾವು 1,700ಕ್ಕೂ ಅಧಿಕ ಪ್ರತಿಭಟನಕಾರರನ್ನು ಬಂಧಿಸಿದ್ದೇವೆ. ಸುಮಾರು 8,000 ಮಂದಿ ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು’’ ಎಂದು ಅವರು ‘ಫ್ರಾನ್ಸ್ 2’ ಟೆಲಿವಿಶನ್ ಚಾನೆಲ್‌ಗೆ ತಿಳಿಸಿದರು.

ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ‘ಹಳದಿ ಬನಿಯನ್’ ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದರು. ಪೊಲೀಸರು ಇಟ್ಟಿದ್ದ ತಡೆಬೇಲಿಗಳಿಗೆ ಅವರು ಬೆಂಕಿ ಹಚ್ಚಿದರು ಹಾಗೂ ಪೊಲೀಸರತ್ತ ಕಲ್ಲುಗಳನ್ನು ತೂರಿದರು.

ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಸುಮಾರು 135 ಮಂದಿ ಗಾಯಗೊಂಡಿದ್ದಾರೆ.

ಪ್ಯಾರಿಸ್‌ನ ಚಾಂಪ್ಸ್-ಎಲೈಸೀ ಅವೆನ್ಯೂನಲ್ಲಿ ‘ಮ್ಯಾಕ್ರೋನ್ ರಾಜೀನಾಮೆ ನೀಡಿ’ ಎಂಬುದಾಗಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಕಳೆದ ವಾರ ನಡೆದ ಪ್ರತಿಭಟನೆಯ ವೇಳೆ ಈ ಸ್ಥಳದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು.

ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ತೈಲ ಬೆಲೆ ವಿರುದ್ಧ ಆರಂಭಗೊಂಡ ಪ್ರತಿಭಟನೆ, ಬಳಿಕ ಅಧ್ಯಕ್ಷ ಮ್ಯಾಕ್ರೋನ್ ವಿರುದ್ಧದ ಬಂಡಾಯವಾಗಿ ಮಾರ್ಪಟ್ಟಿತು.

ಗ್ರಾಂಡ್ಸ್ ಬೋಲ್‌ವರ್ಡ್ಸ್ ಜಿಲ್ಲೆಯಲ್ಲಿ ಮುಸುಕುಧಾರಿ ಪ್ರತಿಭಟನಕಾರರು ಪೊಲೀಸರತ್ತ ಕಲ್ಲುಗಳನ್ನು ತೂರಿದರು ಹಾಗೂ ಅವಸರವಸರವಾಗಿ ನಿರ್ಮಿಸಲ್ಪಟ್ಟ ತಡೆಬೇಲಿಗೆ ಬೆಂಕಿ ಹಚ್ಚಿದರು.

ಅಧ್ಯಕ್ಷರ ರಾಜೀನಾಮೆಗೆ ಹೆಚ್ಚುತ್ತಿರುವ ಆಗ್ರಹ

ಹೆಚ್ಚುತ್ತಿರುವ ಇಂಧನ ಬೆಲೆಯನ್ನು ಪ್ರತಿಭಟಿಸಿ ಜನರು ನವೆಂಬರ್ 17ರಂದು ರಸ್ತೆ ತಡೆ ಆರಂಭಿಸಿದರು.

ಆದರೆ, ನಂತರದ ದಿನಗಳಲ್ಲಿ ಅವರ ಬೇಡಿಕೆಗಳ ಪಟ್ಟಿ ಬೆಳೆದಿದೆ.

ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ರಾಜೀನಾಮೆ ನೀಡಬೇಕೆಂದು ಹೆಚ್ಚಿನವರು ಈಗ ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷರು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಅವರು ಆರೋಪಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News