ಪೊಲೀಸರು ಹೇಗಿರಬೇಕೆಂದು ಕಲಿಸಿಕೊಟ್ಟವರು ಮಧುಕರ್ ಶೆಟ್ಟಿ
# ಗೌಪ್ಯವಾಗಿರುವ ಗುಪ್ತಶೆಟ್ಟಿ ಹಳ್ಳಿಯ ಗುಟ್ಟು ಗೊತ್ತಾ..?
ಚಿಕ್ಕಮಗಳೂರು, ಡಿ.29: "ಸರ್...ಪೊಲೀಸ್ ಠಾಣಾಧಿಕಾರಿ ತಾನು ನೀಡಿದ ದೂರು ದಾಖಲಿಸಿಕೊಳ್ಳಲು ಹಣ ಕೇಳಿದ್ದಾರೆ. 2000 ಸಾವಿರ ಹಣ ಕೊಟ್ಟಿದ್ದೇನೆ. ಆದರೆ ದೂರು ದಾಖಲಾಗಿಲ್ಲ, ನನಗೆ ನ್ಯಾಯವೂ ಸಿಕ್ಕಿಲ್ಲ, ದಯಮಾಡಿ ನನಗೆ ನ್ಯಾಯ ಕೊಡಿಸಿ ಸಾರ್'...ಹೀಗೆಂದು ಚಿಕ್ಕಮಗಳೂರಿನಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದವರಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೂರವಾಣಿಯಲ್ಲಿ ನ್ಯಾಯಕ್ಕಾಗಿ ಅಂಗಲಾಚಿದ್ದೇ ತಡ, ಆ ಅಧಿಕಾರಿ ತಡ ಮಾಡದೇ ನೊಂದ ವ್ಯಕ್ತಿಯಿಂದ ಸಮಸ್ಯೆ ಆಲಿಸಿ ಸೀದಾ ಜಿಲ್ಲೆಯ ಮಲೆನಾಡು ಭಾಗದಲ್ಲಿದ್ದ ಪೊಲೀಸ್ ಠಾಣೆಗೆ ದಿಢೀರ್ ದಾಳಿ ಇಟ್ಟರು. ಸೀದಾ ಆ ಠಾಣಾಧಿಕಾರಿಯ ಜೇಬಿಗೆ ಕೈ ಹಾಕಿ ಹಣ ಕೈಲಿಡಿದು, "ಈ ಹಣ ಎಲ್ಲಿಂದ ಬಂತು ಲೆಕ್ಕ ಕೊಡು" ಎಂದು ಗದರಿಸಿದ್ದಲ್ಲದೇ ಶಿಸ್ತು ಕ್ರಮಕೈಗೊಂಡು ನೊಂದ ವ್ಯಕ್ತಿಗೆ ನ್ಯಾಯ ಕೊಡಿಸಿದ್ದರು. (ಠಾಣೆ, ಠಾಣಾಧಿಕಾರಿ ಹಾಗೂ ದಲಿತ ವ್ಯಕ್ತಿಯ ಹೆಸರು ಕಾರಣಾಂತರದಿಂದ ಬಹಿರಂಗ ಪಡಿಸಿಲ್ಲ)
ಮೇಲಿನ ಸಾಲುಗಳನ್ನು ಓದಿದವರು ಇದ್ಯಾವುದೋ ಸಿನೆಮಾದ ಕತೆ ಬಿಡಿ ಎಂದು ಉದ್ಗರಿಸಿದರೇ ಅದರಲ್ಲಿ ಅತಿಶಯೋಕ್ತಿ ಇಲ್ಲ. ಏಕೆಂದರೆ ಆ ಪೊಲೀಸ್ ಅಧಿಕಾರಿಯ ಕಾರ್ಯವೈಖರಿಯೇ ಹಾಗಿತ್ತು ಎಂದರೆ ನಂಬಲು ಕಷ್ಟ. ಆದರೆ ಇದು ಸತ್ಯ ಘಟನೆ. ಇಂತಹ ಸಾವಿರಾರು ಉದಾಹರಣೆಗಳು ಆ ಪೊಲೀಸ್ ಅಧಿಕಾರಿಯ ಹೆಸರನಲ್ಲಿ ದಾಖಲಾಗಿವೆ. ಅಷ್ಟಕ್ಕೂ ಆ ಅಧಿಕಾರಿ ಮತ್ತಿನ್ಯಾರೂ ಅಲ್ಲ. ಡಿ.28ರಂದು ಹೈದರಾಬಾದ್‍ನಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದ ಹಿರಿಯ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ.
ಹೌದು...ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಒಂದೆರೆಡೇ ವರ್ಷಗಳಲ್ಲಿ ತಮ್ಮ ಮಾನವೀಯ ಮುಖದ ಕಾರ್ಯವೈಖರಿಯಿಂದಾಗಿ ಮನೆ ಮಾತಾಗಿದ್ದವರು. ಅವರ ಹಠಾತ್ ನಿಧನದ ಸುದ್ದಿ ಕೇಳಿ ಜಿಲ್ಲಾದ್ಯಂತ ಜನರು ಕಂಬನಿ ಮಿಡಿಯುತ್ತಿದ್ದಾರೆ. ಅವರನ್ನು ಹತ್ತಿರದಿಂದ ಕಂಡ ಪೊಲೀಸ್ ಇಲಾಖಾಧಿಕಾರಿಗಳು, ಪೇದೆಗಳು ಹಾಗೂ ಸಿಬ್ಬಂದಿ ಸೇರಿದಂತೆ ಜಿಲ್ಲೆ ಎಲ್ಲ ಪಕ್ಷ, ಸಂಘಟನೆಗಳ ಸದಸ್ಯರು ಮಧುಕರ್ ಶೆಟ್ಟಿ ನಿಧನದ ಸುದ್ದಿ ಕೇಳಿ ತೀವ್ರ ನೊಂದುಕೊಂಡಿದ್ದಾರೆ.
ಮಧುಕರ್ ಶೆಟ್ಟಿ ಅವರು ಚಿಕ್ಕಮಗಳೂರು ಎಸ್ಪಿ ಆಗಿ ಬರುವುದಕ್ಕೂ ಮುನ್ನ ಎಎಸ್‍ಎಫ್ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅವರು ಜಿಲ್ಲೆಯಲ್ಲಿದ್ದಷ್ಟು ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದಲ್ಲದೇ, ಜಿಲ್ಲೆಯಾದ್ಯಂತ ಬಡವರು, ಸಾಮಾಜಿಕ ಹೋರಾಟಗಾರ ಪ್ರತೀ ಸಮಸ್ಯೆಗೆ ಕಾನೂನಿನಲ್ಲಿ ಸಾಧ್ಯವಿಲ್ಲದಿದ್ದರೂ ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದ ಬಗೆ ಶೆಟ್ಟಿ ಅವರನ್ನು ಜನರು ಸದಾ ನೆನಪಿನಲ್ಲಿಟ್ಟುಕೊಳ್ಳಲು ಕಾರಣವಾಗಿದೆ.
ಮಧುಕರ ಶೆಟ್ಟಿ ಖಡಕ್ ಐಪಿಎಸ್ ಅಧಿಕಾರಿಯಾಗಿದ್ದರೂ ಮಾನವೀಯತೆಯ ಪ್ರತಿರೂಪವಾಗಿದ್ದರು. ಬಡವರು, ನೊಂದವರ ಪರ ಅಪಾರ ಕಾಳಜಿ ಹೊಂದಿದ್ದರು ಎಂಬುದಕ್ಕೆ ಸಾಕಷ್ಟು ಘಟನೆಗಳಿವೆ. ಅವೆಲ್ಲದರ ಪೈಕಿ ಇಡೀ ಜಿಲ್ಲೆಯ ಜನರ ಮನಸ್ಸಿನಲ್ಲಿ ಅವರ ಹೆಸರು ಶಾಶ್ವತವಾಗಿ ನೆಲೆಕಂಡುಕೊಳ್ಳಲು ಗುಪ್ತಶೆಟ್ಟಿ ಘಟನೆ ಕಾರಣವಾಗಿದೆ.
ಗುಪ್ತಶೆಟ್ಟಿಹಳ್ಳಿಯ ಗುಟ್ಟು ಗೊತ್ತಾ..?
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿ ಗುಪ್ತಶೆಟ್ಟಿ ಎಂಬ 32 ಕುಟುಂಬಗಳಿರುವ ಗ್ರಾಮವಿದೆ. ಈ ಗ್ರಾಮಕ್ಕೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣವಾದ ಘಟನೆಯ ಹಿಂದೆ ಎಸ್ಪಿ ಮಧುಕರ್‍ಶೆಟ್ಟಿ ಅವರ ಮಾನವೀಯತೆ, ಬಡವರ ಬಗೆಗಿನ ಕಾಳಜಿಯ ಕಾರ್ಯವೈಖರಿಯ ಇತಿಹಾಸವಿದೆ. ಕೇವಲ ಸಿನೆಮಾಗಳಲ್ಲಿ ಮಾತ್ರ ಕಾಣ ಸಿಗುವ ಇಂತಹ ಘಟನೆ ಎಸ್ಪಿ ಮಧುಕರ್ ಶೆಟ್ಟಿ ತಮ್ಮ ಅಧಿಕಾರ ಬಳಸಿ ನಿಜ ಮಾಡಿದ್ದಾರೆ ಎಂಬುದನ್ನು ಗುಪ್ತಶೆಟ್ಟಿ ಹಳ್ಳಿ ಜನರ ಹೋರಾಟದ ನೇತೃತ್ವ ವಹಿಸಿದ್ದ ಸಿಪಿಐಎಂಎಲ್ ಪಕ್ಷದ ಮುಖಂಡ ರುದ್ರಯ್ಯ ಅವರೇ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಮಧುಕರ್ ಶೆಟ್ಟಿ ಜಿಲ್ಲಾ ಎಸ್ಪಿಯಾಗಿ ನೇಮಕಗೊಂಡ ಹೊತ್ತಿನಲ್ಲಿ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಹುಲ್ಲೆಮನೆ ಗ್ರಾಮದಲ್ಲಿ 32 ದಲಿತ ಕುಟುಂಬಗಳು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ದಲಿತ ಕಟುಂಬಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಬೀದಿ ಪಾಲಾಗುವ ಭೀತಿಯಿಂದ ಹುಲ್ಲೆಮನೆ ಗ್ರಾಮದ ನೂರಾರು ದಲಿತರು ಆತಂಕಕ್ಕೊಳಗಾಗಿದ್ದರು. ಆಗ ಸಿಪಿಐಎಂಎಲ್ ಪಕ್ಷದ ಮುಖಂಡರಾಗಿದ್ದ ಮೂಡಿಗೆರೆಯ ರುದ್ರಯ್ಯ ನೇತೃತ್ವದಲ್ಲಿ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ, ಪ್ರತಿಭಟನೆ ಆರಂಭಿಸಿದ್ದರು. ಹುಲ್ಲೆಮನೆ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಮುನ್ನ ದಲಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ರುದ್ರಯ್ಯ ಅಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರನ್ನು ಒತ್ತಾಯಿಸಿದ್ದರು. ರುದ್ರಯ್ಯ ಅವರು ಈ ಸಮಸ್ಯೆ ಸಂಬಂಧ ಎಸ್ಪಿ ಮಧುಕರ್ ಶೆಟ್ಟಿ ಅವರ ಬಳಿ ಚರ್ಚಿಸಿದ್ದರು.
ಮೂರು ತಿಂಗಳುಗಳ ಕಾಲ ನಡೆದ ನಿಂತರ ಧರಣಿಯಿಂದ ಸಮಸ್ಯೆ ಬಗೆಹರಿಯದಿದ್ದ ಸಂದರ್ಭ ಮಧ್ಯ ಪ್ರವೇಶ್ ಮಾಡಿದ ಎಸ್ಪಿ ಮಧುಕರ್ ಶೆಟ್ಟಿ ಅವರೇ ಈ ಸಮಸ್ಯೆ ಮುಂದಿಟ್ಟುಕೊಂಡು ಡಿಸಿ ಹರ್ಷಗುಪ್ತ ಅವರೊಂದಿಗೆ ಚರ್ಚಿಸಿ ಡಿಸಿಗೆ ಸಮಸ್ಯೆ ಮನವರಿಕೆ ಮಾಡಿದ್ದರು. ಅಂತಿಮವಾಗಿ ಭೂ ಮಾಲಕರಿಂದ ಒತ್ತುವರಿಯಾಗಿರುವ ಕಂದಾಯ ಜಮೀನನ್ನು ಖುಲ್ಲಾ ಮಾಡಿಸಿ, ಬೀದಿಪಾಲಾಗುವ ದಲಿತರಿಗೆ ಭೂಮಿ ಹಂಚಿಕೆ ಮಾಡುವ ನಿರ್ಧಾರಕ್ಕೆ ಹರ್ಷಗುಪ್ತ ಬರುವಂತೆ ಮಾಡುವಲ್ಲಿ ಎಸ್ಪಿ ಮಧುಕರ್ ಶೆಟ್ಟಿ ಯಶಕಂಡಿದ್ದರು.
ಒತ್ತುವರಿ ಜಮೀನು ಎಲ್ಲಿದೆ ಎಂದು ಹುಡುಕುತ್ತಾ ಹೋದ ಎಸ್ಪಿ ಮಧುಕರ್ ಶೆಟ್ಟಿ ಹಾಗೂ ಹರ್ಷಗುಪ್ಪ ಅವರಿಗೆ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿ ಭೈರೇಗೌಡ ಎಂಬವರು ನೂರಾರು ಎಕರೆ ಸರಕಾರ ಜಮೀನು ಕಬಳಿಸಿ ಕಾಫಿ ಬೆಳೆ ಬೆಳೆದಿರುವುದು ಪತ್ತೆಯಾಯಿತು. ತಡ ಮಾಡದ ಈ ಇಬ್ಬರು ಅಧಿಕಾರಿಗಳು ಭೂಮಾಲಕ ಭೈರೇಗೌಡ ಅವರಿಗೆ ನೋಟಿಸ್ ನೀಡಿ ಖುಲ್ಲಾ ಮಾಡಲು ಕಾಲಾವಕಾಶ ನೀಡಿದ್ದರು. ಇದಕ್ಕೆ ಬಗ್ಗದಿದ್ದಾಗ ಸ್ವತಃ ಮಧುಕರ್ ಶೆಟ್ಟಿ ಅಖಾಡಕ್ಕಿಳಿದು ಹಣ, ರಾಜಕಾರಣಿಗಳ ಒತ್ತಡ ಬಂದರೂ ಕ್ಯಾರೆ ಅನ್ನದೇ ಕಾನೂನಿಗೆ ಮಾನವೀಯತೆಯ ಸ್ಪರ್ಶನೀಡಿ ನೂರಾರು ಎಕರೆ ಒತ್ತುವರಿಯನ್ನು ಖುಲ್ಲಾ ಮಾಡಿಸಿರುವುದು ಅಂದು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ ಘಟನೆಯಾಗಿತ್ತು.
ಭೂಮಾಲಕನಿಂದ ಒತ್ತುವರಿಯಾಗಿದ್ದ ಜಮೀನು ಖುಲ್ಲಾ ಆಗುತ್ತಿದ್ದಂತೆ ರಾಜಕೀಯ ಒತ್ತಡ, ಬೆದರಿಕೆಯ ನಡುವೆ ಆ ಜಾಗದ ಸರ್ವೇ ಮಾಡಿಸಿದ ಈ ಇಬ್ಬರು ಅಧಿಕಾರಿಗಳು ಕೆಲವೇ ತಿಂಗಳುಗಳಲ್ಲಿ 32 ದಲಿತ ಕುಟಂಬಗಳಿಗೆ ತಲಾ ಎರಡು ಎಕರೆಯಂತೆ ಕಾಫಿ ಬೆಳೆಯಲಾಗದ್ದ ರೆಡಿಮೇಡ್ ತೋಟ ಹಂಚಿದ್ದಲ್ಲದೇ ಎಲ್ಲ ಕುಟುಂಬಗಳಿಗೂ ಹಕ್ಕುಪತ್ರ ಸೇರಿದಂತೆ ಅಲ್ಲಿಗೆ ರಸ್ತೆ, ವಿದ್ಯುತ್, ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಿದ್ದರು.
ಈ ಘಟನೆ ಜಿಲ್ಲೆಯಲ್ಲಲ್ಲದೇ ರಾಜ್ಯದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಘಟನೆಯಾಗಿದ್ದು, ಅಂದಿನ ಸಮ್ಮಿಶ್ರ ಸರಕಾರದ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ವರೆಗೂ ಭೂ ಮಾಲಕರು ದೂರು ಕೊಂಡೊಯ್ದಿದ್ದರು. ಆದರೆ ಯಾವ ಒತ್ತಡಗಳಿಗೂ ಮಣಿಯದ ಎಸ್ಪಿ ಮತ್ತು ಡಿಸಿ ಕಾನೂನಿನ ನೆಲೆಗಟ್ಟಿನಡಿಯಲ್ಲಿ ಮಾನವೀಯತೆ ಮೆರೆದು ಮನೆ ಮಾತಾದರು.
ಬೀದಿಪಾಲಾಗಬೇಕಿದ್ದ ಹುಲ್ಲೆಮನೆ ಗ್ರಾಮದ ದಲಿತರು ತಮ್ಮ ಬದುಕಿಗೆ ಆಸರೆಯಾದ ಎಸ್ಪಿ ಮಧುಕರ ಶೆಟ್ಟಿ ಹಾಗೂ ಡಿಸಿ ಹರ್ಷಗುಪ್ಪ ಅವರ ನೆನಪನ್ನು ಸದಾ ಹಸಿರಾಗಿಸಲು ತಮಗೆ ಜಮೀನು ಸಿಕ್ಕ ಗ್ರಾಮಕ್ಕೆ ಗುಪ್ತಶೆಟ್ಟಿಹಳ್ಳಿ ಎಂದು ನಾಮಕರಣ ಮಾಡಿ ಕಂದಾಯ ದಾಖಲೆಗಳಲ್ಲಿ ನಮೂದಾಗುವಂತೆ ಮಾಡುವ ಮೂಲಕ ಅಭಿಮಾನ ಮೆರೆದರು. ಇಂದಿಗೂ ಈ ಗ್ರಾಮ ಗುಪ್ತಶೆಟ್ಟಿಹಳ್ಳಿ ಎಂದೇ ಖ್ಯಾತಿ ಪಡೆದಿದ್ದು, ಬಹುತೇಕರಿಗೆ ಈ ಹೆಸರ ಹಿಂದಿನ ರೋಚಕತೆಯ ಅರಿವಿಲ್ಲ.
ದಕ್ಷತೆ, ಪ್ರಾಮಾಣಿಕತೆ, ಮಾನವೀಯತೆಯ ಪ್ರತಿರೂಪ
ಎಸ್ಪಿ ಮಧುಕರ್ ಶೆಟ್ಟಿ ಅವರು ಖಡಕ್ ಐಪಿಎಸ್ ಅಧಿಕಾರಿಯಾಗಿದ್ದರು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಜಿಲ್ಲೆಯ ಯಾವುದಾದರು ಠಾಣಾಧಿಕಾರಿ ಲಂಚ ಸ್ವೀಕರಿಸಿದ ಬಗ್ಗೆ ಖಚಿತ ಮಾಹಿತಿ ಗೊತ್ತಾದರೆ, ಆ ಠಾಣಾಧಿಕಾರಿ ಇರುವಲ್ಲಿಗೆ ದಿಢೀರ್ ಭೇಟಿ ನೀಡುತ್ತಿದ್ದ ಅವರು, ಠಾಣಾಧಿಕಾರಿಗೆ ಜೇಬಿಗೆ ಕೈ ಹಾಕಿ, ಈ ಹಣ ಎಲ್ಲಿಂದ ಬಂತು ಎಂದು ತರಾಟೆಗೆ ತೆಗೆಯುತ್ತಿದ್ದರು. ಅವರ ಅವಧಿಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿರುವ ಬಗ್ಗೆ ಸ್ವತಃ ಪೊಲೀಸರೇ ಮಾಹಿತಿ ನೀಡಿದ್ದಾರೆ.
ಇನ್ನು ಕೆಲ ಠಾಣಾಧಿಕಾರಿಗಳು ಬಡವರಿಗೆ ಹಲ್ಲೆ, ನಿಂದನೆ ಮಾಡಿದ ಘಟನೆ ಸಂಬಂಧ ಠಾಣಾಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಹಿಗ್ಗಾಮುಗ್ಗಾ ಒದೆ ನೀಡಿದ್ದಾರೆ. ಅವರಿಂದ ಒದೆ ತಿಂದವರಲ್ಲಿ ಕೆಲವರು ಇಂದಿಗೂ ಜಿಲ್ಲೆಯಲ್ಲಿದ್ದಾರೆ. ಪೊಲೀಸರು ತಪ್ಪು ಮಾಡಿದಾಗ ಸಹಿಸದ ಅವರು ಪ್ರತೀ ಹೊಸವರ್ಷದ ದಿನದಂದು ಎಸ್ಪಿ ಮನೆಯಲ್ಲಿ ಎಸ್ಪಿ ಎಂಬ ಅಹಂ ಎಲ್ಲದೇ ಅಧಿಕಾರಿಗಳು, ಪೇದೆಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರೆಂಬುದನ್ನೂ ಪೊಲೀಸರು ಹೇಳುತ್ತಾರೆ.
ಮಧುಕರ್ ಶೆಟ್ಟಿ ಅವರ ಅವಧಿಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿದ್ದವು. ಅವರ ಕಾರ್ಯವೈಖರಿ, ಭೀತಿಯಿಂದಾಗಿ ಲಂಚ ಬಾಕ ಪೊಲೀಸರು ಬದಲಾಗಿದ್ದರು. ಪೊಲೀಸರು ಹೇಗೆ ಕೆಲಸ ಮಾಡಬೇಕೆಂಬ ಬಗ್ಗೆ ಪೊಲೀಸರಿಗೆ ಪಾಠ ಮಾಡುತ್ತಿದ್ದ ಅವರಿಂದಾಗಿ ಜಿಲ್ಲೆಯ ಪೊಲೀಸ್ ಇಲಾಖೆ ಬಗ್ಗೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿತ್ತು. ಅತ್ಯಂತ ಸರಳ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಮಧುಕರ್ ಶೆಟ್ಟಿ ಅವರು ತಮ್ಮ ಕಚೇರಿಗೆ ದೂರು ಹಿಡಿದು ಬರುವವರೆಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿ ಸಮಸ್ಯೆ ಆಲಿಸಿ ಪರಿಹಾರ ಒದಗಿಸುತ್ತಿದ್ದರು. ಎಸ್ಪಿ ಕಚೇರಿ ಸಮೀಪದಲ್ಲೇ ಇದ್ದ ಅವರ ಮನೆಗೆ ಕಚೇರಿಯ ಬೇಲಿ ದಾಟಿಕೊಂಡು ನಡೆದುಕೊಂಡು ಹೋಗುತ್ತಿದ್ದರೆಂಬುದನ್ನು ಅವರನ್ನು ಹತ್ತಿರದಿಂದ ಕಂಡ ಪೊಲೀಸರು ಹೇಳುತ್ತಾರೆ.
ಸಮಾಜ ಸೇವಾ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದ ಅವರು ಆ ಬಗ್ಗೆ ಎಲ್ಲೂ ಪ್ರಚಾರ ಪಡೆಯುತ್ತಿರಲಿಲ್ಲ. ತಮ್ಮ ಪೊಲೀಸ್ ವಾಹನಗಳಲ್ಲಿ ಹೋಗುವ ವೇಳೆ ರಸ್ತೆ ಬದಿಗಳಲ್ಲಿ ಭಿಕ್ಷುಕರು, ಅನಾಥರನ್ನು ಕಂಡಲ್ಲಿ ಅಂತವರನ್ನು ಪೊಲೀಸ್ ವಾಹನದಲ್ಲೇ ಕರೆ ತಂದು ಸಿಬ್ಬಂದಿ ನೆರವಿನಿಂದ ಸ್ನಾನ, ತಲೆ ಕೂದಲು ಕತ್ತರಿಸಿ ಬೆಂಗಳೂರಿನ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳಿಸುತ್ತಿದ್ದರು. ಇನ್ನು ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಅವರು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತಮ್ಮ ಸಂಬಳದಲ್ಲಿ ಸಹಾಯ ಮಾಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಹೋರಾಟಗಾರರ ಬಗ್ಗೆ ವಿಶೇಷ ಕಾಳಜಿ
ಎಸ್ಪಿ ಮಧುಕರ್ ಶೆಟ್ಟಿ ಅವರಿಗೆ ಹೋರಾಟಗಾರರ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರು ಜಿಲ್ಲೆಗೆ ಎಸ್ಪಿ ಆಗಿ ಬಂದಿದ್ದ ಅವಧಿಯಲ್ಲಿ ನಕ್ಸಲ್ ಸಮಸ್ಯೆ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಆಗಾಗ್ಗೆ ಎನ್‍ಕೌಂಟರ್ ಗಳು ನಡೆಯುತ್ತಿದ್ದವು. ಆದರೆ ಮಧುಕರ್ ಶೆಟ್ಟಿ ಎಸ್ಪಿ ಆಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಎನ್‍ಕೌಂಟರ್ ನಡೆದಿಲ್ಲ. ನಕ್ಸಲ್ ಹೋರಾಟದ ಅರಿವು ಹೊಂದಿದ್ದ ಅವರು ಚಳವಳಿಯಲ್ಲಿರುವವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ನಡೆಸಿದ್ದರು. ಈ ಸಂಬಂಧ ನಕ್ಸಲರ ಬಗ್ಗೆ ಸಿಂಪಥಿ ಹೊಂದಿದ್ದ ಕೆಲ ಸಾಮಾಜಿಕ ಕಾರ್ಯಕರ್ತರ ಬಳಿ ಖುದ್ದು ಮಧುಕರ್ ಶೆಟ್ಟಿ ಹೋಗಿ ಚರ್ಚಿಸುತ್ತಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕಲ್ಪಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳ ಬಳಿಯೂ ಚರ್ಚಿಸುತ್ತಿದ್ದರು.
ನಕ್ಸಲರನ್ನು ಕೊಲ್ಲುವುದರಿಂದ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಮನವರಿಕೆ ಮತ್ತು ಅಭಿವೃದ್ಧಿಯಿಂದ ಸಮಸ್ಯೆಯನ್ನು ಕಡಿಮೆ ಮಾಡಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಇದರಿಂದಾಗಿ ಮಧುಕರ್ ಶೆಟ್ಟಿ ಅವರು ನಕ್ಸಲರ ಬಗ್ಗೆ ಬಗ್ಗೆ ಮೃಧುದೋರಣೆ ಹೊಂದಿದ್ದಾರೆಂಬ ಆರೋಪ ಎದುರಿಸಬೇಕಾಯಿತು. ಇದೇ ವೇಳೆ ಸರಕಾರಿ ಜಮೀನು ಒತ್ತುವರಿ ಮಾಡಿದ್ದ ಭೂಮಾಲಕರಲ್ಲಿ ಹುಲ್ಲೆಮನೆ ದಲಿತರ ಘಟನೆಯಿಂದಾಗಿ ನಡುಕ ಉಂಟಾಗಿತ್ತು. ಎಸ್ಪಿ ಮಧುಕರ್ ಶೆಟ್ಟಿ ಅವರನ್ನು ಎತ್ತಂಗಡಿ ಮಾಡಲು ಸಂಚು ನಡೆಯಿತು. ಕೆಲವೇ ದಿನಗಳಲ್ಲಿ ಜನಪರವಾಗಿದ್ದ ಪೊಲೀಸ್ ಅಧಿಕಾರಿಯನ್ನು ಅಂದಿನ ಸರಕಾರ ಬೆಂಗಳೂರಿಗೆ ವರ್ಗಾಯಿಸಿತ್ತು.
ಹೀಗೆ ಓರ್ವ ಐಪಿಎಸ್ ಅಧಿಕಾರಿಯಾಗಿ ತಮ್ಮದೇಯಾದ ಕಾರ್ಯವೈಖರಿಯಿಂದ ಮನೆಮಾತಾಗಿದ್ದ ಮಧುಕರ್ ಶೆಟ್ಟಿ ಅವರ ಬಗ್ಗೆ ಇಂತಹ ನೂರಾರು ಮಾನವೀಯ ಕಳಕಳಿಯ ವಿಷಯಗಳು ತೆರೆದುಕೊಳ್ಳುತ್ತವೆ. ಅಪರೂಪದ ಪೊಲೀಸ್ ಅಧಿಕಾರಿಯಾಗಿದ್ದ ಅವರ ಅಗಲಿಕೆ ಅವರನ್ನು ಬಲ್ಲ ಜಿಲ್ಲೆಯ ಜನರಿಗೆ ನೋವುಂಟು ಮಾಡಿರುವುದು ಸುಳ್ಳಲ್ಲ.
ಎಸ್ಪಿ ಮಧುಕರ್ ಶೆಟ್ಟಿಯಂತಹ ಪೊಲೀಸ್ ಅಧಿಕಾರಿ ಅಪರೂಪ. ಅವರಿಲ್ಲದಿದ್ದಲ್ಲಿ ಹುಲ್ಲೆಮನೆ ದಲಿತರ ಬದುಕು ಬೀದಿಪಾಲಾಗುತ್ತಿತ್ತು. ಅವರ ಹಠಾತ್ ನಿಧನದಿಂದ ದುಃಖವಾಗಿದೆ. ಪೊಲೀಸರು ಹೇಗಿರಬೇಕೆಂದು ಪೊಲೀಸ್ ಇಲಾಖೆಗೆ ಪಾಠದಂತಿದ್ದ ಅವರು ಮಾನವೀಯತೆ, ಜನಪರ ಕಾಳಜಿ ಹೊಂದಿದ್ದ ವ್ಯಕ್ತಿಯಾಗಿದ್ದರು.
- ರುದ್ದಯ್ಯ, ಸಿಪಿಐಎಂಲ್ ಪಕ್ಷದ ರಾಷ್ಟ್ರೀಯ ಸಂಚಾಲಕಮಧುಕರ್ ಶೆಟ್ಟಿ ಅವರು ನಕ್ಸಲರ ಸಿಂಪಥೈಸರ್ ಆಗಿರಲಿಲ್ಲ. ಆದರೆ ಆದಿವಾಸಿಗಳ, ದಲಿತರ ಭೂ ಸಮಸ್ಯೆ, ಮೂಲಸೌಕರ್ಯ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿದರೆ ನಕ್ಸಲ್ ಸಮಸ್ಯೆ ಇರುವುದಿಲ್ಲ ಎಂದು ಅವರು ಭಾವಿಸಿದ್ದರು. ಈ ಕಾರಣಕ್ಕೆ ಮಲೆನಾಡಿನ ಪ್ರಗತಿಪರ ಹೋರಾಟಗಾರರು, ಗಿರಿಜನ ಮುಖಂಡರೊಂದಿಗೆ ಆಗಾಗ್ಗೆ ಭೇಟಿಯಾಗಿ ಸಮಸ್ಯೆ ಕೇಳುತ್ತಿದ್ದರು. ಕೆಲ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಿದ್ದರು. ಗುಪ್ತಶೆಟ್ಟಿ ಹಳ್ಳಿಯಲ್ಲಿ ಭೂ ಮಾಲಕರಿಗೆ ಬಿಸಿ ಮುಟ್ಟಿಸಿದ ಪರಿಣಾಮ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಲು ಸಂಚು ನಡೆಯಿತು. ಅದರ ಭಾಗವಾಗಿ ಅವರನ್ನು ನಕ್ಸಲರ ಸಿಂಪಥೈಸರ್ ಎಂದು ಆರೋಪ ಹೊರಿಸಲಾಯಿತು.
-ಕೆ.ಎಲ್.ವಾಸು, ಹೋರಾಟಗಾರ, ಮಲೆನಾಡು ಉಳಿಸಿ ಹೋರಾಟ ವೇದಿಕೆ, ಕಳಸಮಧುಕರ್ ಶೆಟ್ಟಿ ಅವರು ರಾಜ್ಯದ ಐಪಿಎಸ್ ಅಧಿಕಾರಿಗಳಲ್ಲಿ ಜನಪರ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಅವರು ಚಿಕ್ಕಮಗಳೂರು ಎಸ್ಪಿಯಾಗಿದ್ದಾಗ ಉತ್ತಮ ಕೆಲಸಗಳ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವುದು ತಿಳಿದಿದೆ. ಅವರು ಕೆಲಸ ಮಾಡಿದ ಕಡೆಗಳಲ್ಲೆಲ್ಲ ಉತ್ತಮ ಕಾರ್ಯನಿರ್ವಹಣೆಗೆ ಹೆಸರಾದವರು. ಅಂತಹ ಅಧಿಕಾರಿಯ ಸೇವೆ ದೇಶದ ಪೊಲೀಸ್ ಇಲಾಖೆಗೆ ಅಗತ್ಯವಿತ್ತು.
- ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ