ಶಬರಿಮಲೆ ಹೆಸರಲ್ಲಿ ರಾಜಕೀಯ ಪಕ್ಷಗಳ ಮೇಲಾಟ?
ಆರೆಸ್ಸೆಸ್, ಬಿಜೆಪಿಯಂತಹ ಸಂಘಟನೆಗಳು ಇಂದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಸಿಪಿಐ, ಸಿಪಿಐ(ಎಂ)ನಂತಹ ಪಕ್ಷಗಳು ಜನರ ಪ್ರಜ್ಞಾಮಟ್ಟವನ್ನು ಹೆಚ್ಚಿಸುವ ಬಗ್ಗೆ ಆಸಕ್ತಿ ವಹಿಸದೆ ಕೇವಲ ಓಟಿನ ರಾಜಕೀಯದಲ್ಲಿ ಮುಳುಗಿಹೋಗಿರುವುದೇ ಪ್ರತಿಗಾಮಿತನ ಮುನ್ನೆಲೆಗೆ ಬಂದು ಶಕ್ತಿ ವೃದ್ಧಿಸಿಕೊಳ್ಳಲು ಮುಖ್ಯ ಕಾರಣವಾಗಿದೆ. ವಾಸ್ತವದಲ್ಲಿ ಜನಸಾಮಾನ್ಯರಿಗೆ ಅಯ್ಯಪ್ಪದೇವಾಲಯಕ್ಕೆ ಮಹಿಳಾ ಪ್ರವೇಶ ಮುಖ್ಯ ವಿಚಾರವಾಗಿಲ್ಲ. ಕೇವಲ ಬ್ರಾಹ್ಮಣಶಾಹಿ ಕೋಮುವಾದಿ ಶಕ್ತಿಗಳಿಗೆ, ಎಡ ಪಕ್ಷಗಳಿಗೆ ಮತ್ತು ಕೆಲವು ಕಾರ್ಯಕರ್ತರಿಗೆ ಮಾತ್ರ ಅದೊಂದು ಪ್ರಮುಖ ವಿಚಾರವಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಭಾರೀ ವಿವಾದದ ಕೇಂದ್ರವನ್ನಾಗಿ ಮಾಡಲಾಗಿದೆ. ಶಬರಿಮಲೆ ದಕ್ಷಿಣಭಾರತದ ಪ್ರಸಿದ್ಧ ತೀರ್ಥ ಸ್ಥಳಗಳಲ್ಲಿ ಒಂದು. ಮುಖ್ಯವಾಗಿ ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣವಲ್ಲದೆ ಮಹಾರಾಷ್ಟ್ರದಿಂದಲೂ ಶಬರಿಮಲೆಯಲ್ಲಿರುವ ಧರ್ಮಶಾಸ್ತನೆಂದು ಕರೆಯಲ್ಪಡುವ ಅಯ್ಯಪ್ಪನನ್ನು ಪೂಜಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹೋಗುತ್ತಾರೆ. ಇಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಪ್ರವೇಶ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಅಲ್ಲಿಗೆ ಹೋಗುವವರಲ್ಲಿ ದಲಿತ, ಶೂದ್ರ ಹಿನ್ನೆಲೆಯವರೇ ಹೆಚ್ಚಿನವರು. ಹದಿನೆಂಟು ಮೆಟ್ಟಿಲನ್ನು ತುಳಿಯದೆ ಎಲ್ಲರೂ ಅಲ್ಲಿ ಹೋಗಬಹುದಿತ್ತು. ಹದಿನೆಂಟು ಮೆಟ್ಟಿಲನ್ನು ತುಳಿದು ಹೋಗಲು ಮಾತ್ರ ಮಹಿಳೆಯರಿಗೆ ಹಾಗೂ ವ್ರತ ಮಾಡದ, ಇರುಮುಡಿ ಕಟ್ಟು ಇರದ ಪುರುಷರಿಗೆ ನಿರ್ಬಂಧವಿತ್ತು. ಕೇವಲ 10 ವಯಸ್ಸಿನ ಒಳಗಿನ ಮತ್ತು 50 ವಯಸ್ಸು ದಾಟಿದ ಮಹಿಳೆಯರಿಗಷ್ಟೇ ಇರುಮುಡಿ ಕಟ್ಟು ಹೊತ್ತು ಹದಿನೆಂಟು ಮೆಟ್ಟಿಲನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆಯಲು ಅವಕಾಶವಿತ್ತು. ಇನ್ನು ವಿಶೇಷ ಕಾಣಿಕೆಗಳನ್ನು ಅಲ್ಲಿನ ಬ್ರಾಹ್ಮಣ ಪೂಜಾರಿಯಾದ ತಂತ್ರಿಯೆಂದು ಕರೆಯಲ್ಪಡುವ ವ್ಯಕ್ತಿಗೆ ನೀಡಿದರೆ ಯಾರು ಬೇಕಾದರೂ ದರ್ಶನ ಪಡೆಯಬಹುದಿತ್ತು. ವೃತ ಮಾಡದೇ ಇರುಮುಡಿಯಿಲ್ಲದೆ ಹದಿನೆಂಟು ಮೆಟ್ಟಿಲನ್ನೂ ಏರಿ ಹೋಗುವ ಅವಕಾಶ ಕೂಡ ಸಿಗುತ್ತಿತ್ತು. ಹಾಗೆ ಹೋದ ಬಹಳಷ್ಟು ಮಹಿಳೆಯರಿದ್ದಾರೆ. ಆದರೆ ಆ ವಿಶೇಷ ಕಾಣಿಕೆ ಮಾತ್ರ ಸ್ವಲ್ಪದುಬಾರಿಯಾದುದಾಗಿತ್ತು. 25 ಸಾವಿರ, 50 ಸಾವಿರ, ಲಕ್ಷ ರೂಪಾಯಿ ಹೀಗೆ ಹಣ ನೀಡುವ ಎಲ್ಲರಿಗೂ ವಿಶೇಷ ದರ್ಶನ ಸೌಲಭ್ಯ ಸಿಗುತ್ತಿತ್ತು. ಅಲ್ಲಿಗೆ ಮೊದಲಿನಿಂದಲೂ ಮಹಿಳೆಯರು ಭೇಟಿ ನೀಡುತ್ತಲೇ ಬಂದಿದ್ದಾರೆ. ಈ ವಾಸ್ತವಗಳು ಆ ಭಾಗದ ಜನರಿಗೆ ಗೊತ್ತಿರುವಂತಹದ್ದೇ ಆಗಿದೆ.
ಅಲ್ಲದೆ ಅಯ್ಯಪ್ಪನ ವಿಗ್ರಹವನ್ನು ಹೊತ್ತುಕೊಂಡು ಹೋಗಿ ಪಂಪಾ ನದಿಯಲ್ಲಿ ಸ್ನಾನ ಮಾಡಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಪಾಲಿಸುತ್ತಾ ಬರಲಾಗಿದೆ. ಆ ಸಂದರ್ಭದಲ್ಲಿ ಅಯ್ಯಪ್ಪನ ದರ್ಶನವನ್ನು ಎಲ್ಲಾ ವಯಸ್ಸಿನ ಮಹಿಳೆಯರು ಪಡೆಯುತ್ತಿದ್ದುದ್ದಲ್ಲದೇ ಅದೇ ವೇಳೆಯಲ್ಲೇ ಅದೇ ಸ್ಥಳದಲ್ಲಿ ಅವರು ಸ್ನಾನವನ್ನೂ ಮಾಡುತ್ತಿದ್ದರು. ಅಯ್ಯಪ್ಪನೊಂದಿಗೆ ಸ್ನಾನ ಮಾಡಿದರೆ ಪುಣ್ಯವೆಂಬ ನಂಬಿಕೆ ಅಲ್ಲಿ ಕೆಲಸಮಾಡುತ್ತಿತ್ತು. ಅಂದರೆ ಇದರ ಅರ್ಥ ಅಯ್ಯಪ್ಪನ ದೇವಸ್ಥಾನಕ್ಕೆ ಮಹಿಳೆಯರು ಹೋಗುವುದು ವಿಶೇಷವೇನೂ ಆಗಿರಲಿಲ್ಲ ಎಂದು ತಾನೆ?. ಮೊದಲಿರದ ಕಟ್ಟುಪಾಡುಗಳನ್ನು ನಂತರ ಹದಿನೆಂಟು ಮೆಟ್ಟಿಲ ವಿಚಾರದಲ್ಲಿ ಹೇರಲಾಯಿತು. ಹದಿನೆಂಟು ಮೆಟ್ಟಿಲನ್ನು ತುಳಿಯಬೇಕಾದರೆ ವ್ರತಾಚರಣೆ ಹಾಗೂ ಇರುಮುಡಿ ಕಟ್ಟು ಹೊಂದಿರ ಬೇಕಾದುದು ಕಡ್ಡಾಯ. ಹದಿನೆಂಟು ಮೆಟ್ಟಿಲೇರದೇ ಬೇರೆ ಭಾಗದಿಂದ ಅಯ್ಯಪ್ಪನ ದರ್ಶನಕ್ಕೆ ಹೋಗುವವರು ವ್ರತಾಚರಣೆ ಹಾಗೂ ಇರುಮುಡಿ ಕಟ್ಟು ಹೊರುವ ಅವಶ್ಯಕತೆಯಿಲ್ಲ. ಅದೇನೂ ಇಲ್ಲದೇನೆ ಎಲ್ಲರಿಗೂ ದರ್ಶನಕ್ಕೆ ಅವಕಾಶವಿತ್ತು. ಅಯ್ಯಪ್ಪನ ಪುರಾಣ ಕೂಡ ಮಹಿಳಾ ವಿರೋಧಿಯೆಂಬಂತೆ ಚಿತ್ರಿತವಾಗಿಲ್ಲ. ಮಹಿಳೆಯರನ್ನೂ ಒಳಗೊಂಡಂತೆ ಎಲ್ಲಾ ಜಾತಿ ಧರ್ಮಗಳ ಜನರನ್ನು ಒಳಗೊಂಡಿರುವ ಪುರಾಣ ಅಯ್ಯಪ್ಪನದ್ದಾಗಿದೆ. ಶಬರಿಯೆಂಬ ಮಹಿಳೆಯ ಹೆಸರನ್ನೇ ಅಯ್ಯಪ್ಪನಿರುವ ಬೆಟ್ಟಕ್ಕೆ ಜೋಡಿಸಲಾಗಿದೆ. ವಾವರ್‌ಎಂಬ ಮುಸ್ಲಿಂ ವ್ಯಕ್ತಿಯನ್ನೂ ಅಯ್ಯಪ್ಪನ ಪುರಾಣ ಪ್ರಾಮುಖ್ಯತೆಯೊಂದಿಗೆ ಸೇರಿಸಿಕೊಂಡಿದೆ. ಅಯ್ಯಪ್ಪದರ್ಶನ ಪಡೆಯಲು ಶಬರಿಮಲೆಗೆ ಹೋಗುವವರು ವಾವರ್ ಮಸೀದಿಯಿರುವ ಎರುಮಲೆ ಹಾಗೂ ಶಬರಿಗೆ ದರ್ಶನ ಕೊಟ್ಟ ಸ್ಥಳವೆಂದು ಹೇಳಲಾಗುವ ಕಡೆ ಭೇಟಿ ಕೊಟ್ಟು ದರ್ಶನ ಪಡೆದು ಹೋಗಬೇಕಾದುದು ಕಡ್ಡಾಯದ ರೀತಿ ಪಾಲಿಸಲಾಗುತ್ತದೆ. ಅಂದರೆ ಶಬರಿಮಲೆ ಸರ್ವಜನರಿಗೂ ಮುಕ್ತ ಪ್ರವೇಶವಿದ್ದ ತೀರ್ಥ ಸ್ಥಳ ಎಂಬುದು ಸ್ಪಷ್ಟವಾಗಿ ಮೇಲ್ನೋಟಕ್ಕೇ ಕಾಣಿಸುವಂತಹದು. ಕೇವಲ ಹದಿನೆಂಟು ಮೆಟ್ಟಿಲ ವಿಚಾರದಲ್ಲಿ ಮಾತ್ರ ವ್ರತಾಚರಣೆ ಹಾಗೂ ಇನ್ನಿತರ ಕಟ್ಟುಪಾಡುಗಳನ್ನು ಹೇರಲಾಗಿತ್ತು. ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹದಿನೆಂಟು ಮೆಟ್ಟಿಲೇರಲು ನಿಷೇಧವಿತ್ತು. ವಾಸ್ತವದಲ್ಲಿ ಅಯ್ಯಪ್ಪಬುಡಕಟ್ಟು ಸಂಸ್ಕೃತಿಯ ದೇವರು. ಅಯ್ಯಪ್ಪನ ಆರಾಧಕರು ಕೂಡ ಅವರೇ ಆಗಿದ್ದರು. ಆ ಬುಡಕಟ್ಟು ಸಮುದಾಯದಿಂದ ಅಯ್ಯಪ್ಪನನ್ನು ಕಸಿದಿದ್ದಲ್ಲದೇ ಹಳೇ ಮೂಲವಿಗ್ರಹವನ್ನು ಚಾಣಾಕ್ಷತೆಯಿಂದ ನಾಶಮಾಡಿ ಈಗಿನ ವಿಗ್ರಹವನ್ನು ವಿಶೇಷವಾಗಿ ರೂಪಿಸಿ ಇರಿಸಲಾಗಿದೆ ಎಂಬ ಮಾತಿದೆ. ಅಯ್ಯಪ್ಪಎಂಬ ಹೆಸರನ್ನು ಶ್ರೇಣಿಕೃತ ಸಮಾಜದ ಉನ್ನತರೆಂದು ಹೇಳಿಕೊಳ್ಳುತ್ತಿದ್ದವರು ಯಾರೂ ಇಟ್ಟುಕೊಂಡಿರುವ ಪರಂಪರೆಯಿಲ್ಲ. ಈಗಲೂ ಯಾವುದೇ ನಂಬೂದಿರಿ ಇಲ್ಲವೇ ಅಯ್ಯಂಗಾರ್ ಬ್ರಾಹ್ಮಣ ಹಿನ್ನೆಲೆಯವರು ಅಯ್ಯಪ್ಪನೆಂಬ ಹೆಸರನ್ನು ಇಟ್ಟುಕೊಳ್ಳುವುದಿಲ್ಲ. ಕೇರಳದ ಪ್ರಭಾವಿ ಮೇಲು ಜಾತಿಗಳಲ್ಲಿ ಒಂದಾಗಿರುವ ನಾಯರ್ ಸಮುದಾಯದವರಲ್ಲಿ ಕೆಲವರು ಮತ್ತು ಅದಕ್ಕಿಂತಲೂ ಕೆಳಗಿನ ಶ್ರೇಣಿಯವರೆಂದು ಬಿಂಬಿಸಲ್ಪಟ್ಟವರು ಹಲವರು ಮಾತ್ರ ಅಯ್ಯಪ್ಪನೆಂಬ ಹೆಸರನ್ನು ಇಟ್ಟುಕೊಂಡವರಿದ್ದಾರೆ. ಆದರೆ ವಿಚಿತ್ರವೆಂದರೆ ಅಯ್ಯಪ್ಪನನ್ನು ಪೂಜಿಸುವ ಪೂಜಾರಿಗಳು ತಂತ್ರಿಗಳೆನ್ನುವ ಕೇವಲ ಬ್ರಾಹ್ಮಣರು ಮಾತ್ರವಾಗಿದ್ದಾರೆ. ಅವರು ಶಬರಿಮಲೆ ಅಯ್ಯಪ್ಪನ ವಾರಸುದಾರರೆಂಬಂತೆ ವರ್ತಿಸುತ್ತಾರೆ. ಅಂದರೆ ಬೇರೆಡೆಗಳಂತೆ ಕೋಮು ಹಾಗೂ ಜಾತಿ ವಿಚಾರದಲ್ಲಿ ಸೋಂಕಿರದೇ ಇದ್ದ ಶಬರಿಮಲೆ ಅಯ್ಯಪ್ಪನನ್ನು ಈಗ ಕೋಮುವಾದೀಕರಿಸುವ ಕೆಲಸವನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನೆಪ ಹಿಡಿದು ಆರೆಸ್ಸೆಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಿರುಸಿನಿಂದ ಮಾಡತೊಡಗಿವೆ. ಇದಕ್ಕೆ ಕೇರಳದ ನಾಯರ್ ಸೊಸೈಟಿಯಂತಹ ಮೇಲು ಎಂದು ಬಿಂಬಿಸಿಕೊಳ್ಳುವ ಜಾತಿ ಸಂಘಟನೆಗಳು ಬೆಂಬಲಿಸುತ್ತಿವೆ. ಈ ಸಂಘಟನೆ ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ನೇರವಾಗಿ ಸಮರ್ಥಿಸದಿದ್ದರೂ ಅದು ತೆಗೆದುಕೊಳ್ಳುತ್ತಿರುವ ನಿಲುವುಗಳು ಬ್ರಾಹ್ಮಣಶಾಹಿ ಕೋಮುವಾದಿ ನಿಲುವುಗಳಾಗಿವೆ. ಇದಕ್ಕೆ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಎಂಬ ಈಡಿಗ ಸಮುದಾಯದ ಜಾತಿ ಸಂಘಟನೆಯ ಹಲವರು ಮತ್ತು ಅದರ ಶಿವಪುರಿ ಮಠ ಬೆಂಬಲಕ್ಕೆ ನಿಂತಿರುವುದು ಕಾಣಿಸುತ್ತಿದೆ. ಇವುಗಳು ಸರ್ವೋಚ್ಚ ನ್ಯಾಯಾಲಯದ ಶಬರಿ ಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಎಲ್ಲರಂತೆ ಪ್ರವೇಶ ನೀಡಬೇಕು ಎಂಬ ತೀರ್ಪನ್ನು ವಿರೋಧಿಸುತ್ತಾ ಜಾತಿ ಹಾಗೂ ಕೋಮು ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರುತ್ತಿವೆ.
ಸಂಘ ಪರಿವಾರದ ಇಂತಹ ಕೆಲಸಗಳಿಗೆ ಇಂದು ಶ್ರೀರಾಮನನ್ನು ಹಿಂದಿನಂತೆ ಉಪಯೋಗಿಸಲು ಸಾಧ್ಯವಿಲ್ಲದ ಸ್ಥಿತಿಯಿದೆ. ಅದು ಹಳೆಯ ಸವಕಲು ನಾಣ್ಯದಂತಾಗಿಬಿಟ್ಟಿದೆ. ಹಾಗಾಗಿ ದಕ್ಷಿಣದ ರಾಜ್ಯಗಳಲ್ಲಿ ಸಾಕಷ್ಟು ಪ್ರಭಾವ ಬೀರುವ ಶಬರಿಮಲೆ ಅಯ್ಯಪ್ಪನನ್ನು ಬಳಸುವ ಸಂಚುಗಳು ಜಾರಿಯಾಗುತ್ತಿವೆ. ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಸಂದರ್ಭ, ಈ ವಿಚಾರವನ್ನು ನ್ಯಾಯಾಲಯದ ಅಂಗಳಕ್ಕೆ ಒಯ್ದ ವ್ಯಕ್ತಿಗಳ ಹಿನ್ನೆಲೆ ಹಾಗೂ ನಂತರ ಈಗಿನ ಮಹಿಳಾ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುತ್ತಿರುವವರು ಶಬರಿಮಲೆ ಅಯ್ಯಪ್ಪದೇವಾಲಯ ಪ್ರವೇಶಕ್ಕೆ ಮಾಡುತ್ತಿರುವ ವಿವಿಧ ರೀತಿಯ ಯತ್ನಗಳು, ಸರಣಿ ಬಂದ್‌ಗಳು, ಹಲ್ಲೆ, ಹಾನಿ, ದೊಂಬಿ, ಬಾಂಬೆಸೆತ, ಕೊಲೆ, ಇತ್ಯಾದಿ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಯಾರಿಗಾದರೂ ಹಲವು ಅನುಮಾನಗಳು ಸುಳಿಯದೇ ಇರದು. ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ನೇತೃತ್ವದ ಎಡಪ್ರಜಾಸತ್ತಾತ್ಮಕ ರಂಗ ಸರಕಾರ ಪರಿಸ್ಥಿತಿಯ ಲಾಭಗಳನ್ನು ಪಡೆದು ಮುಂದಿನ ಚುನಾವಣೆಯಲ್ಲಿ ತನ್ನ ಮತಗಳನ್ನು ಹೆಚ್ಚಿಸಿಕೊಂಡು ಅಧಿಕಾರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ‘ಕೇರಳ ನವೋತ್ಥಾನ ಚಳವಳಿ’ ಎಂದು ಅದು ನಡೆಸುತ್ತಿರುವ ಪ್ರಹಸನ ಅದರ ಭಾಗವೇ ಆಗಿದೆ. ಪ್ರಹಸನವೆಂದು ಯಾಕೆ ಕರೆಯಬೇಕಾಗಿದೆಯೆಂದರೆ ಸಿಪಿಎಂನ ಹಲವಾರು ನಾಯಕರು ಕೂಡ ಜಾತೀಯತೆ, ದೇವರು, ಧರ್ಮ, ಲಿಂಗಗಳ ವಿಚಾರದಲ್ಲಿ ಅಂಧಶ್ರದ್ಧೆಗಳನ್ನು, ಅಸಮಾನತೆಗಳನ್ನು ಪಾಲಿಸುವವರಾಗಿದ್ದಾರೆ. ನಾಯಕತ್ವದಲ್ಲಿರುವವರ ಪ್ರಜ್ಞೆಯ ಮಟ್ಟದ ಪರಿಸ್ಥಿತಿ ಹೀಗಾದರೆ ಇನ್ನು ಕಾರ್ಯಕರ್ತರ ಕತೆ ಏನಾಗಿರಬೇಡ. ಕೇರಳದಲ್ಲಿ ಸಾಪೇಕ್ಷವಾಗಿ ಬೃಹತ್ ಹಣಕಾಸು ಜಾಲವಾಗಿರುವ ಸಹಕಾರ ಬ್ಯಾಂಕುಗಳ ಮೇಲಿನ ಹಿಡಿತ ಈ ಎಡಪಕ್ಷಗಳದೇ ಆಗಿದೆ. ಸಾಲ ಇನ್ನಿತರ ಸೌಲಭ್ಯಗಳು ಬೇಕಾದಲ್ಲಿ ಈ ಪಕ್ಷಗಳ ಮರ್ಜಿಯನ್ನು ಹಿಡಿಯಬೇಕಾದುದು ಅನಿವಾರ್ಯವೆಂಬ ಪರಿಸ್ಥಿತಿಯಿದೆ. ಇದು ಅಲ್ಲಿನ ಬಹುತೇಕರಿಗೆ ಗೊತ್ತಿರುವ ವಿಚಾರ. ಈ ಪಕ್ಷಗಳು ಬ್ಯಾಂಕಿಂಗ್ ಜಾಲದ ಅನುಕೂಲತೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಜನರಿಗೆ ಆಮಿಷವೊಡ್ಡಲು ಬಳಸಿಕೊಳ್ಳುತ್ತಿರುವುದು ಹೊಸ ವಿಚಾರವೇನಲ್ಲ. ಆರೆಸ್ಸೆಸ್, ಬಿಜೆಪಿಯಂತಹ ಸಂಘಟನೆಗಳು ಇಂದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಸಿಪಿಐ, ಸಿಪಿಐ(ಎಂ)ನಂತಹ ಪಕ್ಷಗಳು ಜನರ ಪ್ರಜ್ಞಾಮಟ್ಟವನ್ನು ಹೆಚ್ಚಿಸುವ ಬಗ್ಗೆ ಆಸಕ್ತಿ ವಹಿಸದೆ ಕೇವಲ ಓಟಿನ ರಾಜಕೀಯದಲ್ಲಿ ಮುಳುಗಿಹೋಗಿರುವುದೇ ಪ್ರತಿಗಾಮಿತನ ಮುನ್ನೆಲೆಗೆ ಬಂದು ಶಕ್ತಿ ವೃದ್ಧಿಸಿಕೊಳ್ಳಲು ಮುಖ್ಯ ಕಾರಣವಾಗಿದೆ. ವಾಸ್ತವದಲ್ಲಿ ಜನಸಾಮಾನ್ಯರಿಗೆ ಅಯ್ಯಪ್ಪದೇವಾಲಯಕ್ಕೆ ಮಹಿಳಾ ಪ್ರವೇಶ ಮುಖ್ಯ ವಿಚಾರವಾಗಿಲ್ಲ. ಕೇವಲ ಬ್ರಾಹ್ಮಣಶಾಹಿ ಕೋಮುವಾದಿ ಶಕ್ತಿಗಳಿಗೆ, ಎಡ ಪಕ್ಷಗಳಿಗೆ ಮತ್ತು ಕೆಲವು ಕಾರ್ಯಕರ್ತರಿಗೆ ಮಾತ್ರ ಅದೊಂದು ಪ್ರಮುಖ ವಿಚಾರವಾಗಿದೆ. ಆದರೆ ಇದರಿಂದ ದೇಶಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ನೋಡದೇ ಹೋದರೆ ಇಂತಹ ವಿವಾದ ಹುಟ್ಟು ಹಾಕಲು ನಡೆಸಿದ ಷಡ್ಯಂತ್ರಗಳ ಅರಿವು ನಮಗಾಗದೆ ಹೋಗಬಹುದು. ಕೇಂದ್ರದ ಮೋದಿ ಸರಕಾರ ರಫೇಲ್, ನೋಟು ನಿಷೇಧ, ಬ್ಯಾಂಕುಗಳ ವಿಲೀನ, ಸಾರ್ವಜನಿಕ ರಂಗದ ಸಂಸ್ಥೆಗಳ ನಾಶ ಹಾಗೂ ಖಾಸಗೀಕರಣ ಎಂಬಂತಹ ಹಗರಣಗಳನ್ನು ಹಾಗೂ ತನ್ನ ಆಳ್ವಿಕೆಯ ಐದು ವರ್ಷಗಳಲ್ಲಿ ದೇಶದ ಜನರಿಗೆ ಮಾಡಿರುವ ನಿರುದ್ಯೋಗದ ಹೆಚ್ಚಳ , ಕೈಗಾರಿಕೆಗಳ ನಾಶ ಮೊದಲಾದ ಗಂಭೀರ ಹಾನಿಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಅಧಿಕಾರ ಹಿಡಿಯುವ ಕಾರ್ಯಕ್ಕೆ ಮುಂದಾಗಿರುವುದು ಎದ್ದು ಕಾಣಿಸುತ್ತದೆ. ಹಾಗೆಯೇ ಕೇರಳ ಎದುರಿಸುತ್ತಿರುವ ಪ್ರವಾಹದ ಹಾನಿ, ಅಭಿವೃದ್ಧಿಹೀನತೆ, ಕೃಷಿ ಬಿಕ್ಕಟ್ಟು, ಗಲ್ಫ್ ಬಿಕ್ಕಟ್ಟಿನಿಂದ ಉದ್ಭವಿಸಿರುವ ಸಮಸ್ಯೆಗಳು, ಪರಾವಲಂಬಿ ಸರಬರಾಜು ವ್ಯವಸ್ಥೆ ಮೊದಲಾದವನ್ನು ಮರೆಮಾಚಲು ಅಯ್ಯಪ್ಪದೇವಾಲಯಕ್ಕೆ ಮಹಿಳಾ ಪ್ರವೇಶವನ್ನು ನವೋತ್ಥಾನ ಚಳವಳಿ ಎಂದು ಬಿಂಬಿಸತೊಡಗಿದೆ. ಶ್ರೀ ನಾರಾಯಣ ಗುರು ಮೊದಲಾದವರ ಕಾಲದಲ್ಲಿ ನಡೆದ ಕ್ರಾಂತಿಕಾರಕ ನಡೆಗಳಿಗೆ ಇದನ್ನು ಹೋಲಿಸಿ ತೋರಿಸುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮಹಿಳೆಯರ ದೇವಾಲಯ ಪ್ರವೇಶ ವಿಚಾರದ ಹಿಂದಿನ ರಾಜಕೀಯ ಷಡ್ಯಂತ್ರಗಳನ್ನು ಗ್ರಹಿಸದೇ ರಾಜಕೀಯ ಪಕ್ಷಗಳ ದಾಳಗಳಾದರೆ ಅದು ಭಾರೀ ದುಬಾರಿಯಾಗುತ್ತದೆ. ಈಗಿನ ಸಂದರ್ಭದ ಅಗತ್ಯಗಳನ್ನು ಮನಗಂಡು ಅದಕ್ಕೆ ತಕ್ಕಂತಹ ಸ್ಪಂದನೆ ಮತ್ತು ಪ್ರತಿಕ್ರಿಯೆಗಳು ಜನರಿಂದ ಆಗದೇ ಹೋದರೆ ದೊಡ್ಡ ಅಪಾಯಗಳಿಗೆ ಜನಸಾಮಾನ್ಯರು ಈಡಾಗಬೇಕಾಗುತ್ತದೆ.