ಜಾರ್ಜ್ ಫೆರ್ನಾಂಡಿಸ್: ಹೀಗೊಂದು ನೆನಪು

Update: 2019-02-08 10:55 GMT

ಜಾರ್ಜ್‌ರವರ ರಾಜಕೀಯ ಬದುಕು ವೈದೃಶ್ಯಗಳಿಂದ ಕೂಡಿತ್ತು ನಿಜ. ಆದರೆ ಅವರ ಹೋರಾಟದ ಕಿಚ್ಚು ಅವರು ಭಾರತದಲ್ಲಿ ಕಾರ್ಮಿಕ ಚಳವಳಿಗೆ ನೀಡಿದ ಕೊಡುಗೆ ಮತ್ತು ಓರ್ವ ವ್ಯಕ್ತಿಯಾಗಿ ಅವರು ಸಹಜೀವಿಗಳೊಂದಿಗೆ ಬೆರೆತು ಅವರ ಹೃದಯಗೆಲ್ಲುತ್ತಿದ್ದ ರೀತಿ ಅನನ್ಯವಾದುದು. ವಿಶ್ವದ ಬೆರಳೆಣಿಕೆಯ, ಶ್ರೇಷ್ಠ ವಾಗ್ಮಿಗಳಲ್ಲೊಬ್ಬರಾಗಿದ್ದ ಅವರ ಭಾಷಣಗಳಲ್ಲಿ ಸಾಹಿತ್ಯದ ಲಾಲಿತ್ಯವಿರುತ್ತಿತ್ತು. ಕೇಳುಗರನ್ನು ಮೋಡಿ ಮಾಡಿ ಅವರಲ್ಲಿ ವಿಚಾರ ಶಕ್ತಿಯನ್ನು ಉದ್ದೀಪನಗೊಳಿಸುವ ಮಾಂತ್ರಿಕ ಶಕ್ತಿ ಇರುತ್ತಿತ್ತು.

ಡಾ. ಬಿ. ಭಾಸ್ಕರ ರಾವ್

1990ರ ದಶಕದ ಮೊದಲ ಭಾಗ. ಒಂದು ದಿನ ನನಗೊಂದು ದೂರವಾಣಿ ಕರೆಬಂತು. ‘‘ಹಲೋ’’ ಎಂದೆ. ಆ ಕಡೆಯಧ್ವನಿ ಹೇಳಿತು: ‘‘ನಾನು ಬೆಂಗಳೂರಿನಿಂದ. ಜಾರ್ಜ್ ಫೆರ್ನಾಂಡಿಸ್‌ರ ಕಾರ್ಯದರ್ಶಿ ಮಾತಾಡುತ್ತಿದ್ದೇನೆ. ಫೆರ್ನಾಂಡಿಸ್‌ರು ನಿಮ್ಮನ್ನು ಭೇಟಿಮಾಡಲು ಬಯಸುತ್ತಾರೆ.’’ ನಾನು ಆಶ್ಚರ್ಯ, ಸ್ವಲ್ಪ ಆಘಾತದಿಂದ ‘‘ಎಲ್ಲಿ ಯಾವಾಗ?’’ ಎಂದೆ. ಅವರು ಇಂತಹ ದಿನಾಂಕದಂದು ಉಡುಪಿಗೆ ಬರುವವರಿದ್ದಾರೆ. ಅಲ್ಲಿ ನಗರ ಸಭೆಯ ಹಾಲ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಭೆ ಮುಗಿದ ಬಳಿಕ ನಿಮ್ಮನ್ನು ಭೇಟಿಯಾಗುತ್ತಾರೆ. ಮುಂದಿನ ಸಭೆ ಕಾಪುವಿನಲ್ಲಿ, ಇತ್ಯಾದಿ ವಿವರಗಳನ್ನು ಕಾರ್ಯದರ್ಶಿ ನೀಡಿದರು.

ನಿಗದಿತ ದಿನದಂದು ನಾನು ಅವರು ಹೇಳಿದ ವೇಳೆಗೆ ಸತ್ಯಮೂರ್ತಿ ಸಭಾಭವನಕ್ಕೆ ಹೋದೆ. ಸಭೆ ಮುಗಿಯುತ್ತಿದ್ದಂತೆ ಜಾರ್ಜ್ ಹೊರಬಂದರು. ಯಾರೋ ನನ್ನನ್ನು ಅವರಿಗೆ ಪರಿಚಯಿಸಿದರು. ಮುಗುಳ್ನಗೆ ಬೀರುತ್ತ ‘‘ಬನ್ನಿ’’ ಎಂದರು. ಹಿಂದಕ್ಕೆ ತಿರುಗಿ ‘‘ಪೋಯಿ ಬಾಳಪ್ಪ’’ ಎಂದು ಅವರ ಆಪ್ತಗೆಳೆಯ ಅಮ್ಮೆಂಬಳ ಬಾಳಪ್ಪನವರನ್ನು ಕೂಗಿ ಕರೆದರು.

ಹೊರಗೆ ಬರುತ್ತಿದ್ದಂತೆಯೇ ಅವರಿಗೆ ಸಿದ್ಧವಾಗಿದ್ದ ಕಾರಿನೆಡೆಗೆ ನಡೆಯುತ್ತ ನನ್ನನ್ನು ಜೊತೆಗೆ ಕರೆದುಕೊಂಡು ಹೋಗಿ ಅವರ ಜತೆ ಕುಳಿತುಕೊಳ್ಳುವಂತೆ ಹೇಳಿದರು. ಕಾಪು ತಲುಪುವ ತನಕ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಾವು ಮಾತಾಡಿದೆವು. ನಾನಾಗ ಅಂಕಣ ಬರೆಯುತ್ತಿದ್ದ ಪತ್ರಿಕೆಯ ಬಗ್ಗೆ ಕೇಳಿದರು. '‘I liked your article about me’’ ಎಂದರು. ನನಗೆ ಆಗ ಎಲ್ಲ ಸ್ಪಷ್ಟವಾಗತೊಡಗಿತು. 1990ರ ಫೆಬ್ರವರಿ 6ರಂದು ಉಡುಪಿ-ಮಂಗಳೂರು ರೈಲ್ವೆ ನಿರ್ಮಾಣರಂಭ ಸಮಾರಂಭದಲ್ಲಿ ಆಗ ಕೇಂದ್ರ ರೈಲ್ವೆ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸರು ಮಾಡಿದ ಭಾಷಣದ ಕುರಿತು 1990ರ ಮಾರ್ಚ್ 3ರ ನನ್ನ ಅಂಕಣದಲ್ಲಿ ನಾನು ಬರೆದಿದ್ದ ಲೇಖನದ ಬಗ್ಗೆ ಅವರು ಹೇಳುತ್ತಿದ್ದಾರೆಂದು ಗೊತ್ತಾಯಿತು. ಆ ಲೇಖನ ಪ್ರಕಟವಾಗಿ ಅದಾಗಲೇ ಸಾಕಷ್ಟು ಸಮಯ ಕಳೆದಿತ್ತು. ದೇಶದ ರಾಜಕಾರಣದಲ್ಲಿ ಜಾರ್ಜ್ ರಾಜಕೀಯ ಬದುಕಿನಲ್ಲಿ ಹಲವು ಬದಲಾವಣೆಗಳಾಗಿದ್ದವು. ಅವರ ಬಗ್ಗೆ ನಾನು ಏನು ಬರೆದಿದ್ದೇನೆಂಬುದು ನನಗೆ ಬಹುಪಾಲು ಮರೆತು ಹೋಗಿತ್ತು. ಆದರೆ ಜಾರ್ಜ್ ಆ ಬರಹ ಬರೆದ ಲೇಖಕನನ್ನು ಮರೆತಿಲ್ಲ. ಅವರ ಸೌಜನ್ಯಕ್ಕೆ, ಸರಳತೆಗೆ, ಹೃದಯವಂತಿಕೆಗೆ ಅದು ಸಾಕ್ಷಿಯಾಗಿತ್ತು. ತನ್ನ ಜೀವಮಾನದ ಉದ್ದಕ್ಕೂ ಹುಲಿಗಳ ಅಧ್ಯಯನ ನಡೆಸಿದ ಖ್ಯಾತ ಬೇಟೆಗಾರ ಜಿಮ್ ಕಾರ್ಬೆಟ್ ಹುಲಿಯನ್ನು ‘ಎ ಲಾರ್ಜ್-ಹಾರ್ಟೆಡ್ ಜಂಟ್ಲ್‌ಮ್ಯಾನ್’ ಎಂದು ಕರೆಯುತ್ತಾರೆ. ಭಾರತದ ರಾಜಕಾರಣದಲ್ಲಿ ಅನ್ಯಾಯ, ಕಾರ್ಮಿಕರ ಶೋಷಣೆ, ಅಸಮಾನತೆಯ ವಿರುದ್ಧ ತನ್ನ ಭಾಷಣಗಳಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ಜಾರ್ಜ್, ನಿಜವಾದ ಅರ್ಥದಲ್ಲಿ ಒಬ್ಬ ಅಸಾಮಾನ್ಯನಾದ ‘ಲಾರ್ಜ್-ಹಾರ್ಟೆಡ್ ಜಂಟ್ಲ್‌ಮ್ಯಾನ್’ ಆಗಿದ್ದರು. ಹಾಗೆ ಸುಮಾರು ಆರು ದಶಕಗಳ ಕಾಲ ಘರ್ಜಿಸಿದ ಹುಲಿಯೊಂದು ತನ್ನ ಬದುಕಿನ ಕೊನೆಯ ಎಂಟು ವರ್ಷಗಳಲ್ಲಿ ಮರೆಗುಳಿ ಕಾಯಿಲೆಗೆ ತುತ್ತಾಗಿ ವೌನವಾಗಿರಬೇಕಾಗಿ ಬಂದು ಈಗ ಮೊನ್ನೆ ಮಂಗಳವಾರ ಶಾಶ್ವತವಾಗಿ ವೌನವಾಯಿತೆಂಬುದು ಜಾಗತಿಕ ಕಾರ್ಮಿಕ ಸಮುದಾಯಕ್ಕೆ, ಹೋರಾಟಗಾರರಿಗೆ ಹಾಗೂ ಸ್ವಾತಂತ್ರಪ್ರಿಯರಿಗೆ ತುಂಬಲಾರದ ನಷ್ಟ.

ಕಾರು ಮುಂದೆ ಸಾಗುತ್ತಿದ್ದಂತೆ ಜಾರ್ಜ್ ನನ್ನ ಬಗ್ಗೆ ಕೇಳಿದರು. ನಾನು ಅವರ ಸಮಾಜವಾದಿ ಗೆಳೆಯ 1994ರ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್ ಅನಂತಮೂರ್ತಿಯವರ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿದಾಗ ಇನ್ನಷ್ಟು ಆತ್ಮೀಯರಾದರು. ಒಮ್ಮೆ ವಿಮಾನದಲ್ಲಿ ಜಾರ್ಜ್ ಜೊತೆ ಪ್ರಯಾಣಿಸುತ್ತಿದ್ದಾಗ ಬಹುರಾಷ್ಟ್ರೀಯ ಕಂಪೆನಿಯೊಂದು ಭಾರತದಲ್ಲಿ ನೆಲೆಯಾಗಲು ಅವಕಾಶ ನೀಡುವಂತೆ ಕೋರಿ ತನಗೆ ಬರೆದಿದ್ದ ಪತ್ರವೊಂದನ್ನು ಜಾರ್ಜ್ ತನ್ನ ಕಿಸೆಯಿಂದ ಸರಕ್ಕನೆ ಹೊರತೆಗೆದು ತನಗೆ ತೋರಿಸಿದ್ದನ್ನು ಅನಂತಮೂರ್ತಿ ನನ್ನೊಡನೆ ಹೇಳಿದ್ದರು. ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯನ್ನು ಜಾರ್ಜ್ ಫೆರ್ನಾಂಡಿಸರೇ ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದ್ದರು. ನಾನು ಬರೆಯುತ್ತಿದ್ದ ಪತ್ರಿಕೆಯಲ್ಲಿ ಯಾಕೆ ಸಂಪಾದಕೀಯವಿಲ್ಲ? ಎಂದು ಜಾರ್ಜ್ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡಲಾಗದೆ ನಾನು ತಡವರಿಸಿದೆ. ದೇಶದ ಅಂದಿನ ಸ್ಥಿತಿಯ ಬಗ್ಗೆ ಮಾತಾಡುತ್ತ ಅವರು ಒಂದು ಘಟನೆಯನ್ನು ಉದಾಹರಿಸಿದರು: ಆಗಿನ್ನೂ ರಾಷ್ಟ್ರೀಕೃತವಾಗಿರದಿದ್ದ ಬ್ಯಾಂಕ್ ಒಂದರ ಅಧ್ಯಕ್ಷರ ಪತ್ನಿ ಲಂಡನ್‌ನಲ್ಲಿ ಐದು ಲಕ್ಷ ರೂ. ವೌಲ್ಯದ ಶಾಪಿಂಗ್ ಮಾಡಿದ್ದನ್ನು ಉಲ್ಲೇಖಿಸಿ ಉದ್ಯಮಪತಿಗಳ ಬಗ್ಗೆ ಖಾರವಾಗಿಯೇ ಮಾತನಾಡಿದರು. ಸ್ವಲ್ಪ ಹೊತ್ತಿನಲ್ಲಿ ಕಾಪು ಬಂತು. ಕಾಪು ಪೇಟೆಯಲ್ಲಿ ಅವರ ಭಾಷಣ. ನಾನು ಅವರಿಗೆ ಥ್ಯಾಂಕ್ಸ್ ಹೇಳಿ ವಿದಾಯ ಕೋರಿದೆ. ಅವರ ಭಾಷಣ ಶುರುವಾಯಿತು. ಅಷ್ಟೇನೂ ದೊಡ್ಡ ಸಂಖ್ಯೆಯ ಶ್ರೋತೃಗಳಿರಲಿಲ್ಲ. ಆದರೆ ಜಾರ್ಜ್ ಆವೇಶದಿಂದಲೇ ಮಾತನಾಡಿದರು. ಅವರು ಆಗ ವಿರೋಧಿಸುತ್ತಿದ್ದ ಬಲಪಂಥೀಯ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡರು.

ಎಲ್ಲದಕ್ಕೂ ಮುಸ್ಲಿಮರನ್ನು ದೂರುವ, ದೂಷಿಸುವ ಅವರ ದೇಶ ಭಕ್ತಿಯನ್ನು ಪ್ರಶ್ನಿಸುವ/ಅವಮಾನಿಸುವ ಬಲಪಂಥೀಯ ರಾಜಕಾರಣವನ್ನು ಉಗ್ರವಾಗಿ ಟೀಕಿಸಿದರು. ಆ ರಾಜಕಾರಣದ ರೂವಾರಿಯಾಗಿದ್ದ ಅತ್ಯಂತ ಹಿರಿಯ ನಾಯಕರ ಹೆಸರನ್ನು ಪುನಃ ಪುನಃ ಹೇಳುತ್ತ ‘‘... ಜೀಯವರೇ ದಯಾಮಾಡಿ ಇತಿಹಾಸವನ್ನು ಓದಿ.’’ ಎಂದರು. ಭಾರತದ ಸೇನೆಯಲ್ಲಿ ಉನ್ನತ ಮಿಲಿಟರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಹಾಗೂ ಹುತಾತ್ಮರಾದ ಹಲವು ಮುಸ್ಲಿಂ ಸೇನಾಧಿಕಾರಿಗಳ ಹೆಸರನ್ನು ಕರಾರುವಾಕ್ಕಾಗಿ ಹೇಳುತ್ತ ‘‘ಇವರು ದೇಶ ಭಕ್ತರಲ್ಲವೆ?’’ಎಂದು ಚುಚ್ಚಿ ಕೆಣಕುವ ರೀತಿಯಲ್ಲಿ ಘರ್ಜಿಸಿದರು. ಭಾಷಣ ಮುಗಿದ ಮೇಲೆ ನಾನು ಉಡುಪಿಗೆ ಮರಳಿದೆ. ಕಾಲ ಚಲಿಸಿತು. 1998ರಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂತು. ಕಾಪುವಿನ ತನ್ನ ಭಾಷಣದಲ್ಲಿ ಯಾವ ನಾಯಕರ ಹೆಸರು ಹೇಳಿ ‘‘ದಯಮಾಡಿ ಇತಿಹಾಸ ಓದಿ’’ ಎಂದು ಗುಡುಗಿದ್ದರೋ ಅದೇ ನಾಯಕ ಮಹಾಶಯರ ಜತೆ ಕುಳಿತು ದಿಲ್ಲಿಯಲ್ಲಿ ನಗು ನಗುತ್ತ ಮಾತನಾಡುತ್ತ ಅಧಿಕಾರ ಹಂಚಿಕೊಂಡ ಫೆರ್ನಾಂಡಿಸರನ್ನು ಟಿವಿಯಲ್ಲಿ ನೋಡುತ್ತ ನಾನು ಅವಾಕ್ಕಾದೆ. ದಂಗಾಗಿಹೋದೆ. ರಾಜಕೀಯದಲ್ಲಿ ಹೀಗೂ ಸಾಧ್ಯವೇ? ಸಿದ್ಧಾಂತ ಯಾರಿಗೆ? ಯಾರನ್ನು ನಂಬುವುದು? ಅಂತ ಗೊಂದಲಕ್ಕೊಳಗಾದೆ. ಕರ್ನಾಟಕದಲ್ಲಿ ಜೆ.ಎಚ್.ಪಟೇಲರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗ ಅವರ ಆಪ್ತಗೆಳೆಯ ಅನಂತ ಮೂರ್ತಿ ಆ ಮೈತ್ರಿಯನ್ನು ಸಮರ್ಥಿಸುತ್ತ ಹೇಳಿದ ‘ಸೂಕ್ತ ಮತ್ತು ಸಕಾಲಿಕ’ ಎಂಬ ಎರಡು ಶಬ್ದಗಳು ನೆನಪಾದವು!

ಆದರೆ ದೇಶದ ಅಂದಿನ ರಾಜಕೀಯ ಸ್ಥಿತಿ ಜಾರ್ಜ್ ಅವರನ್ನು ಅಂತಹ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು ಎಂದು ಈಗ ಸಮಾಧಾನ ಪಟ್ಟುಕೊಳ್ಳುತ್ತೇನೆ. ಜಾರ್ಜ್‌ರವರ ರಾಜಕೀಯ ಬದುಕು ವೈದೃಶ್ಯಗಳಿಂದ ಕೂಡಿತ್ತು ನಿಜ. ಆದರೆ ಅವರ ಹೋರಾಟದ ಕಿಚ್ಚು ಅವರು ಭಾರತದಲ್ಲಿ ಕಾರ್ಮಿಕ ಚಳವಳಿಗೆ ನೀಡಿದ ಕೊಡುಗೆ ಮತ್ತು ಓರ್ವ ವ್ಯಕ್ತಿಯಾಗಿ ಅವರು ಸಹಜೀವಿಗಳೊಂದಿಗೆ ಬೆರೆತು ಅವರ ಹೃದಯಗೆಲ್ಲುತ್ತಿದ್ದ ರೀತಿ ಅನನ್ಯವಾದುದು. ವಿಶ್ವದ ಬೆರಳೆಣಿಕೆಯ, ಶ್ರೇಷ್ಠ ವಾಗ್ಮಿಗಳಲ್ಲೊಬ್ಬರಾಗಿದ್ದ ಅವರ ಭಾಷಣಗಳಲ್ಲಿ ಸಾಹಿತ್ಯದ ಲಾಲಿತ್ಯವಿರುತ್ತಿತ್ತು. ಕೇಳುಗರನ್ನು ಮೋಡಿ ಮಾಡಿ ಅವರಲ್ಲಿ ವಿಚಾರ ಶಕ್ತಿಯನ್ನು ಉದ್ದೀಪನಗೊಳಿಸುವ ಮಾಂತ್ರಿಕ ಶಕ್ತಿ ಇರುತ್ತಿತ್ತು. ಅವರ ಬಗ್ಗೆ ಹೇಳ ಬಹುದಾದ ಸಾರ್ವಕಾಲಿಕವಾದ ಮಾತುಗಳಲ್ಲಿ ಕೆಲವನ್ನು ನನ್ನ ಸುಮಾರು 30ವರ್ಷಗಳ ಹಿಂದಿನ ಬರಹದಿಂದ ಆಯ್ದು ಇಲ್ಲಿ ಪುನಃ ದಾಖಲಿಸುತ್ತಿದ್ದೇನೆ.

ಜಾರ್ಜ್ ಮಾತಿನ ಮೋಡಿ ಹೇಗಿರುತ್ತದೆಂದರೆ ನಾವು ಒಂದು ಕತೆ ಅಥವಾ ವಿಚಾರ ಪೂರ್ಣ ಲೇಖನ ಓದಿದಂತೆ. ಒಂದು ಕತೆ ಅಥವಾ ವಿಚಾರ ಪ್ರಚೋದಕ ಲೇಖನ ಓದಿದ ಮೇಲೆ ನಾವು ಸ್ವಲ್ಪ ಹೊತ್ತು ಅದರ ಗುಂಗಿನಲ್ಲೇ ಉಳಿಯುವಂತಾದರೆ ಆಗ ಅದು ಪರಿಣಾಮಕಾರಿ ಬರವಣಿಗೆಯೆನ್ನಬಹುದು. ಸಮಾಜವಾದಿ ಹಾಗೂ ಖ್ಯಾತ ಟ್ರೇಡ್ ಯೂನಿಯನ್ ನಾಯಕ ಜಾರ್ಜ್ ಫರ್ನಾಂಡಿಸ್‌ರ ಮಾತುಗಳನ್ನು ಕೇಳಿದ ಬಳಿಕ ಕಿವಿಯಲ್ಲುಳಿಯುವ ಗುಂಗು ಇಂಥದ್ದು ನಾವಾಡುವ ಮಾತುಗಳು ಸಮಾಜ ಹಾಗೂ ಬದುಕನ್ನು ನಾವು ಯಾವ ದೃಷ್ಟಿ ಕೋನದಿಂದ ನೋಡುತ್ತೇವೋ ಆ ದೃಷ್ಟಿ ಕೋನದ ಮತ್ತು ನಮ್ಮ ವ್ಯಕ್ತಿತ್ವದ ವ್ಯಾಖ್ಯಾನ. ಜಾರ್ಜ್ ಭಾಷಣವಿರಲಿ, ಪತ್ರಿಕಾ ಸಮ್ಮೇಳನವಿರಲಿ ಅದರಲ್ಲಿ ‘ಫೆರ್ನಾಂಡಿಸಿಯನ್’ ಅನ್ನಬಹುದಾದ ಅಂಶಗಳು ಪ್ರಕಟವಾಗಿಯೇ ಬಿಡುತ್ತವೆ; ಅಧಿಕಾರ ಕೇಂದ್ರೀಕರಣ ಮತ್ತು ಬಂಡವಾಳ ಶಾಹಿಗಳ ಬಗ್ಗೆ ಸಿಟ್ಟು; ಎಲ್ಲವೂ ಜನಪರವಾಗಿರಬೇಕೆಂಬ, ಜನಕೇಂದ್ರಿತವಾಗಿರಬೇಕೆಂಬ ಹಂಬಲ; ವ್ಯಂಗ್ಯದ ಮೂಲಕ ಮಾಮೂಲಿ ರಾಜಕೀಯ ಆಶ್ವಾಸನೆಗಳನ್ನು ಚುಚ್ಚುವುದು ಮತ್ತು ಇತರ ರಾಜಕಾರಣಿಗಳಿಗಿಂತ ತಾನು ಭಿನ್ನನೆಂಬುದನ್ನು ಸಾಬೀತು ಪಡಿಸುವ ತವಕ ಎಲ್ಲವೂ ಅಲ್ಲಿರುತ್ತವೆ.

ಶಬ್ದಗಳ ಅರ್ಥಪೂರ್ಣ ಕಸರತ್ತು, ಪದ ಪ್ರೇಮ ಸಾಹಿತ್ಯದಲ್ಲಿ ಮಾತ್ರವಲ್ಲ; ರಾಜಕೀಯ ಭಾಷಣದಲ್ಲಿ ಕೂಡ ಮುಖ್ಯ. ರಾಜಕಾರಣಿೆ ನಿಜವಾದ ಸಂವಹನ ಕಾರನಾಗಿದ್ದಾಗ, ಆತ ತುಂಡುತುಂಡು ವಾಕ್ಯಗಳ ರಚನೆಗೆ ಸರಳ ಪದಬಂಧಗಳಿಗೆ ಶಬ್ದಗಳ ಆಯ್ಕೆಗೆ ಮಹತ್ವ ನೀಡುತ್ತಾನೆ. ಮೂರ್ತವಾದ ಭಾಷೆಯಲ್ಲಿ ಮಾತನಾಡುತ್ತಾನೆ. ಮಂಗಳೂರು- ಮುಂಬೈ ರೈಲುಮಾರ್ಗ ನಿರ್ಮಾಣಾರಂಭ ಸಮಾರಂಭದಲ್ಲಿ ಜಾರ್ಜ್ ಫೆರ್ನಾಂಡಿಸ್‌ರವರಿಗಿಂತ ಮೊದಲು ಮಾತಾಡಿದವರೆಲ್ಲ ಕೊಂಕಣ ರೈಲು ಬೇಡಿಕೆ ಬಹಳ ವರ್ಷಗಳದ್ದು. ಅದು ಮೂವತ್ತು ವರ್ಷಗಳ ಬೇಡಿಕೆ ಎಂದರು. ಕೊನೆಯ ಭಾಷಣಕಾರರಾದ ಜಾರ್ಜ್ ‘‘ನನ್ನದು ಐವತ್ತು ವರ್ಷಗಳ ಕನಸು, ಬೇಡಿಕೆಯಲ್ಲ’’ ಎಂದರು. ‘ಕನಸು’ ಮತ್ತು ‘ಬೇಡಿಕೆ’ ಶಬ್ದಗಳ ನಡುವಣ ವ್ಯತ್ಯಾಸವನ್ನು ಮನದಟ್ಟುಮಾಡಲು ತಾನು ಹುಡುಗನಾಗಿದ್ದಾಗ ತನ್ನ ಕುಟುಂಬದವರ ಜತೆ ಮಂಗಳೂರಿನಿಂದ ಮುಂಬೈಗೆ ಹೋಗುವಾಗ ಪಡುತ್ತಿದ್ದ ಪಾಡನ್ನು, ಗೋಳನ್ನು ವಿವರಿಸಿದರು. ‘ಬೇಡಿಕೆ’ ಅರ್ಥಶಾಸ್ತ್ರದ ಪದ; ‘ಕನಸು’ ಕಾವ್ಯದ, ಸಾಹಿತ್ಯದ, ಮನೋವಿಜ್ಞಾನದ ಪದ. ರಾಜಕೀಯದಲ್ಲಿ,, ವಾಣಿಜ್ಯದಲ್ಲಿ ಚಲಾವಣೆಯಲ್ಲಿರುವ ಶಬ್ದ ‘ಬೇಡಿಕೆ’ ‘ಕನಸು’ ಅಲ್ಲ. ನೌಕರರ ‘ಬೇಡಿಕೆ’, ಹದಿಹರೆಯದ ‘ಕನಸು’. ಬೇಡಿಕೆ ಮತ್ತು ಕನಸಿನ ಮಧ್ಯೆ ಗೆರೆ ಎಳೆಯಬಲ್ಲ ಶಕ್ತಿ ಒಬ್ಬ ಲೇಖಕನದು, ಒಣ ರಾಜಕಾರಣಿಯದಲ್ಲ. ತನ್ನ ಕನಸನ್ನು ‘ ಬೇಡಿಕೆ’ಯಿಂದ ಪ್ರತ್ಯೇಕಿಸಿ ವಿಶದಪಡಿಸುತ್ತ ಜಾರ್ಜ್ ‘‘ನನ್ನದು ಉಡುಪಿಯಿಂದ ಮುಂಬೈಗೆ ಹೋಗುವ ಕನಸು’’ ಎಂದರು.

ಮಂಗಳೂರು-ಮುಂಬೈ ರೈಲು ಮಾರ್ಗ ಕೆಲಸವನ್ನು ಅತ್ತ ಮುಂಬೈ ಕಡೆಯಿಂದ ಇತ್ತ ಮಂಗಳೂರು ಕಡೆಯಿಂದ, ‘ಆ ಕಡೆಯಿಂದ ಈ ಕಡೆಯಿಂದ’ ಆರಂಭಿಸಬೇಕಾಗಿತ್ತು ಎಂದು ಭಾಷಣಕಾರರೊಬ್ಬರು ಹೇಳಿದ ವಾಕ್ಯವನ್ನೆತ್ತಿಕೊಂಡ ಜಾರ್ಜ್ ’’ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲ್ಲ; ಉಡುಪಿಯಿಂದ ಮಂಗಳೂರಿಗೆ, ಮಂಗಳೂರಿನಿಂದ ಉಡುಪಿಗೆ, ಉಡುಪಿಯಿಂದ ಉತ್ತರಕ್ಕೆ, ಮಡಗಾಂವ್‌ನಿಂದ ದಕ್ಷಿಣಕ್ಕೆ, ಪಣಜಿಯಿಂದ ರತ್ನಗಿರಿಗೆ, ರತ್ನಗಿರಿಯಿಂದ ಪಣಜಿಗೆ, ರೋಹಾದಿಂದ ದಸಗಾಂವ್‌ಗೆ, ದಸಗಾಂವ್‌ನಿಂದ ರೋಹಾಗೆ’ ಎಂದು ‘ಗೆ’ಗಳ ಒಂದು ಸರಪಳಿಯನ್ನೇ ನೇಯ್ದರು. ತಾನು ನೀಡುತ್ತಿರುವುದು ‘ಆಶ್ವಾಸನೆ ಅಲ್ಲ; ನಿರ್ಧಾರ’ ಎಂದು ಪುನಃ ‘ಆಶ್ವಾಸನೆ’ ಮತ್ತು ‘ನಿರ್ಧಾರ’ದ ನಡುವಣ ವ್ಯತ್ಯಾಸವನ್ನು ಗುರುತಿಸುವ ಮೂಲಕ ಮಾಮೂಲಿ ಆಶ್ವಾಸನೆಗಳ ಮಾಮೂಲಿ ರಾಜಕಾರಣಿ ತಾನಲ್ಲವೆಂದು ತನ್ನ ಭಿನ್ನತೆಯನ್ನು ಸೂಚಿಸಿದರು. ನಡುನಡುವೆ ಆವೇಶದ್ದೆನ್ನ ಬಹುದಾದ ಸ್ವಲ್ಪ ನಾಟಕ, ಗೆಸ್ಚರ್, ಅರ್ಥಪೂರ್ಣ ಮುಗುಳುನಗು. ರೈಲುಗಳನ್ನು ಜನತೆಯ ಬಳಿಗೆ ಕೊಂಡೊಯ್ಯಬೇಕೆನ್ನುವಾಗ, ರೈಲುಗಳನ್ನು ಒಂದು 'totality' ಯಾಗಿ ನೋಡಬೇಕೆನ್ನುವಾಗ ಕೂಡ ಜಾರ್ಜ್ ಮಾತಾಡಿದ್ದು ಸಾಹಿತ್ಯದ, ವಿಮರ್ಶೆಯ ಪರಿಭಾಷೆಯಲ್ಲಿ. ಆಧುನಿಕ ಕಾವ್ಯದ ವಿಮರ್ಶೆ ಕವನವನ್ನು ಒಂದು ಟೊಟ್ಯಾಲಿಟಿಯಾಗಿ ವಿಶ್ಲೇಷಿಸಬೇಕೆನ್ನುತ್ತದೆ. ಪದಗಳ, ತುಂಡು ಸಾಲುಗಳ ‘ಕೂದಲೆಳೆ ವಿಶ್ಲೇಷಣೆ’ಯಲ್ಲ; ಅಂತಿಮವಾಗಿ ಕವನ ನೀಡುವ ಅನುಭವದ ಸಮಗ್ರತೆ ಮುಖ್ಯ ಎನ್ನುತ್ತದೆ.

ಅಲ್ಲೊಮ್ಮೆ ಇಲ್ಲೊಮ್ಮೆ ಜಾರ್ಜ್ ಫೆರ್ನಾಂಡಿಸ್‌ರಂತಹ ನಾಯಕರ ಮಾತುಗಳನ್ನು ಕೇಳುವಾಗ ಇಲ್ಲಿ ವಾಗ್ಮಿಕಲೆ (rhetoric) ಯ ದೃಷ್ಟಿಯಿಂದ ಗಮನಿಸಬೇಕಾದ ಅಂಶಗಳಿವೆ ಅನಿಸುತ್ತದೆ. ಸಾರ್ವಜನಿಕ ಸಭೆಗಳಲ್ಲಿ ಸಮರ್ಥವಾಗಿ ಸಂವಹಿಸುವುದನ್ನು ಕಲಿಯಬಯಸುವ ವಿನಯಶೀಲ ರಾಜಕಾರಣೆಗಳಿಗೆ, ಅಮೆರಿಕದ ಹುತಾತ್ಮ ಹಾಗೂ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್‌ನ ಪ್ರಸಿದ್ಧ 'I have a dream' (ನನ್ನದೊಂದು ಕನಸಿದೆ) ಭಾಷಣವನ್ನು ಜ್ಞಾಪಿಸುವಂತೆ ಮಾತಾಡಬಲ್ಲ ಜಾರ್ಜ್ ಭಾಷಣ ಒಂದು ಪಠ್ಯವಾಗಬಲ್ಲುದು.

ಈ ಸಾಲುಗಳೊಂದಿಗೆ, ಅಗಲಿದ ಮಹಾನ್ ಕಾರ್ಮಿಕ ಚೇತನ ಜಾರ್ಜ್ ಫೆರ್ನಾಂಡಿಸರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ.

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News