ಹಕ್ಕನ್ನೇ ನೀಡದ ಅರಣ್ಯ ಹಕ್ಕು ಕಾನೂನು: ಸರ್ವೋಚ್ಚ ನ್ಯಾಯಾಲಯದ ಗಂಡಾಂತರಕಾರಿ ತೀರ್ಪು

Update: 2019-02-25 18:45 GMT

ಇದು ಭಾರತದ ಒಟ್ಟು ಜನಸಂಖ್ಯೆಯ ಶೇ. 8.6ರಷ್ಟು ಅಂದರೆ ಸುಮಾರು ಹತ್ತುವರೆ ಕೋಟಿಗೂ ಹೆಚ್ಚು ಜನಸಂಖ್ಯೆಯಾಗಿರುವ ಆದಿವಾಸಿ ಬುಡಕಟ್ಟು ಸಮುದಾಯಗಳು ಹಾಗೂ ಕೋಟ್ಯಂತರ ಇತರ ಸಮುದಾಯಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಸರ್ವನಾಶದತ್ತ ದೂಡುವ ತೀರ್ಪಾಗಿದೆ. ದೊಡ್ಡ ಕಾರ್ಪೊರೇಟ್‌ಗಳ ದುರಾಸೆ ಹಾಗೂ ಲೂಟಿಗೆ ಅನುಕೂಲಕರವಾಗಿರುವ ತೀರ್ಪು ಇದಾಗಿದೆ. ತೀರ್ಪು ಕೇವಲ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಾಕಿರುವ ಅರ್ಜಿಗಳು ತಿರಸ್ಕೃತಗೊಂಡಿರುವವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದ್ದರೂ ವಾಸ್ತವ ಬೇರೆಯೇ ಇದೆ.


ಹಕ್ಕನ್ನೇ ನೀಡದ ಅರಣ್ಯ ಹಕ್ಕು ಕಾನೂನು, ಭಾರತದ ಸರ್ವೋಚ್ಚ ನ್ಯಾಯಾಲಯ ಫೆಬ್ರವರಿ 13ರಂದು ಮಿಲಿಯಾಂತರ ಬುಡಕಟ್ಟು ಹಾಗೂ ಇನ್ನಿತರ ಸಮುದಾಯಗಳಿಗೆ ಮಾರಕವಾಗಬಹುದಾದ ತೀರ್ಪೊಂದನ್ನು ನೀಡಿತು. 2006ರ ಅರಣ್ಯ ಹಕ್ಕು ಕಾಯ್ದೆ ಯನ್ವಯ ಯಾರಿಗೆಲ್ಲಾ ಅರ್ಜಿಗಳನ್ನು ನಿರಾಕರಿಸಲಾಗಿದೆಯೋ ಅವರನ್ನೆಲ್ಲಾ ಅರಣ್ಯ ಪ್ರದೇಶಗಳಿಂದ ಹೊರಗೆ ಕಳಿಸಬೇಕೆಂದು ಸುಮಾರು 16ಕ್ಕೂ ಹೆಚ್ಚು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತು. ಅಷ್ಟೇ ಅಲ್ಲದೆ ಈ ತೀರ್ಪನ್ನು ಜಾರಿಗೊಳಿಸಿರುವ ಬಗೆಗಿನ ವರದಿಗಳನ್ನು ಇದೇ ಜುಲೈ 27, 2019ರೊಳಗೆ ತನಗೆ ಒಪ್ಪಿಸಬೇಕೆಂದು ತಾಕೀತು ಮಾಡಿತು. ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರಾದ ಅರುಣ್ ಮಿಶ್ರ, ನವೀನ್ ಸಿನ್ಹ, ಇಂದಿರಾ ಬ್ಯಾನರ್ಜಿಯವರಿದ್ದ ಪೀಠ ವೈಲ್ಡ್ ಲೈಫ್ ಫಸ್ಟ್ ಹಾಗೂ ಅರಣ್ಯ ಹಾಗೂ ಪರಿಸರ ಸಚಿವಾಲಯ ಇನ್ನಿತರರು ಮಧ್ಯೆ ಇದ್ದ ದಾವೆಯ ವಿಚಾರಣೆ ಅಂತಿಮಗೊಳಿಸಿ ಈ ತೀರ್ಪನ್ನು ನೀಡಿತು. ಇದು ಭಾರತದ ಒಟ್ಟು ಜನಸಂಖ್ಯೆಯ ಶೇ. 8.6ರಷ್ಟು ಅಂದರೆ ಸುಮಾರು ಹತ್ತುವರೆ ಕೋಟಿಗೂ ಹೆಚ್ಚು ಜನಸಂಖ್ಯೆಯಾಗಿರುವ ಆದಿವಾಸಿ ಬುಡಕಟ್ಟು ಸಮುದಾಯಗಳು ಹಾಗೂ ಕೋಟ್ಯಂತರ ಇತರ ಸಮುದಾಯಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಸರ್ವನಾಶದತ್ತ ದೂಡುವ ತೀರ್ಪಾಗಿದೆ. ದೊಡ್ಡ ಕಾರ್ಪೊರೇಟ್‌ಗಳ ದುರಾಸೆ ಹಾಗೂ ಲೂಟಿಗೆ ಅನುಕೂಲಕರವಾಗಿರುವ ತೀರ್ಪು ಇದಾಗಿದೆ. ತೀರ್ಪು ಕೇವಲ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಾಕಿರುವ ಅರ್ಜಿಗಳು ತಿರಸ್ಕೃತಗೊಂಡಿರುವವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದ್ದರೂ ವಾಸ್ತವ ಬೇರೆಯೇ ಇದೆ.

2006ರ ಅರಣ್ಯ ಹಕ್ಕು ಕಾಯ್ದೆ ದೊಡ್ಡ ಜನಸಮುದಾಯಗಳ ಹೆಚ್ಚುತ್ತಿದ್ದ ಪ್ರತಿರೋಧ ಹೋರಾಟಗಳನ್ನು ಸುಮ್ಮನಾಗಿಸಲು ಕೇವಲ ಮೂಗಿಗೆ ತುಪ್ಪಸವರುವ ಕ್ರಮ ಬಿಟ್ಟರೆ ಬೇರೇನಲ್ಲ ಎನ್ನುವುದು ಈ ಹದಿಮೂರು ವರ್ಷಗಳ ಅದು ಜಾರಿಯಾದ ಪರಿ ನೋಡಿದರೆ ಅರ್ಥವಾಗುವ ವಿಚಾರ. ಯಾಕೆಂದರೆ ಜಾರಿಗೊಳಿಸಿ ಹಕ್ಕುಪತ್ರ ನೀಡುವುದಕ್ಕಿಂತ ಜಾರಿಗೊಳಿಸಿ ಹಕ್ಕುಪತ್ರ ಸಿಗದಂತೆ ನೋಡಿಕೊಳ್ಳುವ ಅಂಶಗಳೇ ಅದೇ ಕಾಯ್ದೆಯ ಪ್ರಧಾನ ಅಂತರಾಳವಾಗಿದೆ. ಏನೋ ಮಹಾ ಕೊಟ್ಟಂತೆ ಮಾಡಿ ಏನನ್ನೂ ಕೊಡದಿರುವಂತೆ ಆ ಕಾಯ್ದೆಯನ್ನು ರೂಪಿಸಲಾಗಿದೆ. 75 ವರ್ಷಗಳಿಂದಲೂ ಅಂದರೆ ಮೂರು ಪೀಳಿಗೆಗಳಿಂದ ಇದ್ದವರಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯವಾಗುತ್ತದೆ ಎಂದು ಹೇಳಿ ಅದನ್ನು ಆಯಾ ಕುಟುಂಬಗಳೇ ಸಾಬೀತು ಮಾಡಬೇಕೆಂದು ಹೇಳಿದರೆ ಕ್ರೂರ ಕುತಂತ್ರವಾಗುವುದಿಲ್ಲವೇ?. ಕುಮರಿ ಬೇಸಾಯ, ಪೋಡು ಬೇಸಾಯ, ಬೇಟೆ, ಕಾಡುತ್ಪತ್ತಿ ಸಂಗ್ರಹ ಮಾಡುತ್ತಾ ಬಂದಿರುವ, ಅರಣ್ಯ ಪ್ರದೇಶ ಇಡೀ ಸಮುದಾಯಕ್ಕೇ ಸೇರಿದ್ದು ಎಂದು ನಂಬಿಕೊಂಡು ಪಾಲಿಸುತ್ತಾ ಬಂದ, ಯಾವುದೇ ದಾಖಲೆಗಳ ಬಗ್ಗೆ ಗೊತ್ತೇ ಇಲ್ಲದ, ಯಾರನ್ನೂ ಆಶ್ರಯಿಸದ, ಸರಕಾರಗಳನ್ನೂ ಕೂಡ ಆಶ್ರಯಿಸದೇ ತಲೆತಲಾಂತರಗಳಿಂದ ಸ್ವತಂತ್ರ ಬದುಕುಗಳನ್ನು ನಡೆಸುತ್ತಾ ಬಂದ ಜನಸಮುದಾಯಗಳು ಈಗ ಒಮ್ಮಿಂದೊಮ್ಮೆಗೆ ಮೂರು ಪೀಳಿಗೆಯ ಅರಣ್ಯವಾಸವನ್ನು ಸಾಬೀತು ಪಡಿಸಲು ಹೇಳಿದರೆ ಅದು ಸಾಧ್ಯವಾಗುವ ವಿಚಾರವೇ?. ಅದೂ ಕೂಡ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಿಂದಲೂ ಅರಣ್ಯ ವಾಸ್ತವ್ಯದ ದಾಖಲೆಗಳು ಹೇಗೆ ಹೊಂದಿಸಲು ಸಾಧ್ಯ?.

ಇದೊಂದು ದೊಡ್ಡ ಬಡಾಯಿಯ ಬುಡಕಟ್ಟುಪರ ಸೋಗಿನ ಕಾಯ್ದೆಯೆಂದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಹಾಗಾಗಿ ಬಹುಸಂಖ್ಯಾತ ಅರಣ್ಯವಾಸಿ ಸಮುದಾಯಗಳಿಗೆ ಯಾವುದೇ ದಾಖಲೆಗಳು ದೊರೆಯಲು ಸಾಧ್ಯವೇ ಇಲ್ಲದಿರುವ ಸ್ಥಿತಿಯಿದೆ. ಒಂದು ಸಣ್ಣ ಮಟ್ಟದಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಕೆಲವರು ವಿದ್ಯಾಭ್ಯಾಸ ಪಡೆದಿರುವವರು, ಆಶ್ರಮಶಾಲೆಗಳಲ್ಲಿ ಓದಿರುವವರು, ಕೆಲವು ದಾಖಲೆಗಳನ್ನು ಹೊಂದಿರುವವರು ಅಲ್ಲಲ್ಲಿ ಕಾಣಲು ಸಿಗಬಹುದು. ಆದರೆ ಭಾರತದ ಬಹುಸಂಖ್ಯಾತ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಭಾರತದ ಬಹುಪಾಲು ಆದಿವಾಸಿ ಬುಡಕಟ್ಟು ಸಮುದಾಯಗಳು ಪಾರಂಪರಿಕ ಬುಡಕಟ್ಟು ಸಮುದಾಯಗಳಾಗಿಯೇ ಈಗಲೂ ಇವೆ. ಇನ್ನು ಈ ದೇಶದ ವಿದ್ಯಾವಂತ ವರ್ಗದಿಂದ ಬಂದ ಅಧಿಕಾರಶಾಹಿ ವ್ಯವಸ್ಥೆಯ ಬಹುತೇಕರು ಅತ್ಯಂತ ಭ್ರಷ್ಟರಾಗಿದ್ದು ಹಾಗೂ ದೊಡ್ಡ ಆಸ್ತಿವಂತರ ಹಾಗೂ ಭಾರೀ ಕಾರ್ಪೊರೇಟ್‌ಗಳ ಪರವಾಗಿರುವುದರಿಂದ ಜನ ಸಾಮಾನ್ಯರಲ್ಲಿ ಸಾಮಾನ್ಯರಾದ ಅರಣ್ಯಪ್ರದೇಶವಾಸಿಗಳನ್ನು, ದಲಿತ ದಮನಿತರನ್ನು ಯಾಮಾರಿಸಿ ಅವರಿಗೆ ಸಿಗಬೇಕಾದ ಸೌಲಭ್ಯಗಳಿಗೂ ಕತ್ತರಿ ಹಾಕುತ್ತಾ ಬಂದಿರುವುದೇ ಇತಿಹಾಸ ತಾನೆ. ಹಾಗಾಗಿ ಅರಣ್ಯ ಹಕ್ಕು ನೀಡುವ ಬದಲಿಗೆ ಈ ಕಾಯ್ದೆಯ ಮೂಲಕ ಅರಣ್ಯಪ್ರದೇಶವಾಸಿಗಳನ್ನು ಆ ಪ್ರದೇಶಗಳಿಂದ ಹೊರದಬ್ಬಲು ಬಳಸುವ ಅಸ್ತ್ರವಾಗಿಯೇ ಬಳಸಲ್ಪಟ್ಟಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಈ ಕಾಯ್ದೆಗೆ ಭಾರೀ ಕ್ರಾಂತಿಕಾರಿ ಕಾಯ್ದೆಯೆಂಬಂತೆ ಪ್ರಚಾರ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರಗಳಿದ್ದ ರಾಜ್ಯಗಳಲ್ಲೂ ಇದು ಅನುಷ್ಠಾನವಾದ ಪರಿ ನೋಡಿದರೆ ಅದರ ಸಾಚಾತನದ ಅರಿವಾಗಬಹುದು. ನಂತರ ಬಂದ ಮೋದಿಯ ಬಿಜೆಪಿ ಸರಕಾರ ಆ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಪೊರೇಟ್‌ಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಿತು. ಸಭಾಪತಿಯಾಗಿದ್ದಾಗ ಕಾಗೋಡು ತಿಮ್ಮಪ್ಪರಾಜ್ಯ ಸರಕಾರದ ವಿರುದ್ಧ ಈ ಕಾಯ್ದೆ ಜಾರಿಗೊಳಿಸಿ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಗುಡುಗಿದ್ದೇ ಗುಡುಗಿದ್ದು ನಂತರ ಅವರನ್ನೇ ಮಂತ್ರಿ ಮಾಡಿದಾಗ ಎಷ್ಟು ಪ್ರಮಾಣದಲ್ಲಿ ಹಕ್ಕುಪತ್ರ ನೀಡಲಾಯಿತು ಎನ್ನುವುದು ಗೊತ್ತಿರುವ ಸಂಗತಿ ತಾನೆ. 29/ 02 / 2017ರ ರಾಜ್ಯ ಸರಕಾರದ ದಾಖಲೆಯ ಪ್ರಕಾರ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿದ 3,04,536 ಅರ್ಜಿಗಳಲ್ಲಿ ಕೇವಲ 13,049 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಿದೆ ಎಂದಿದೆ. ಸಾಮಾನ್ಯವಾಗಿ ಭಾರತದಲ್ಲಿ ಸರಕಾರಿ ದಾಖಲೆಗಳು ವಾಸ್ತವ ಸ್ಥಿತಿಯನ್ನೇ ಹೇಳುತ್ತವೆ ಎನ್ನುವಂತಿಲ್ಲ ಎನ್ನುವುದೇ ಎಲ್ಲರ ಅನುಭವದ ಮಾತು. ಕರ್ನಾಟಕದಲ್ಲಿ ಹತ್ತಾರು ಲಕ್ಷ ಜನರು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಅದರಲ್ಲಿ ಬುಡಕಟ್ಟು ಆದಿವಾಸಿ ಸಮುದಾಯಗಳೂ ಸೇರಿವೆ. ಮಲೆನಾಡು ಕರಾವಳಿಯ ಹಲವೆಡೆ ಮೀಸಲು ಅರಣ್ಯ, ರಕ್ಷಿತಾರಣ್ಯ, ಹುಲಿಯೋಜನೆ, ರಾಷ್ಟ್ರೀಯ ಉದ್ಯಾನವನ, ವಿದ್ಯುತ್ ಯೋಜನೆ, ನೌಕಾನೆಲೆ, ಅಣು ವಿದ್ಯುತ್ ಸ್ಥಾವರ, ನೀರಾವರಿಗಲ್ಲದ ಭಾರೀ ಜಲಾಶಯಗಳು, ಭಾರೀ ನೀರಾವರಿ ಜಲಾಶಯಗಳು ಹೀಗೆ ಹತ್ತು ಹಲವು ಇವೆ. ಪ್ರಮುಖವಾಗಿ ಕಾರ್ಪೊರೇಟ್‌ಗಳಿಗೆ ಅನುಕೂಲ ಕಲ್ಪಿಸಲು ಯೋಜನೆಗಳನ್ನು ಜಾರಿಗೊಳಿಸಿ ಲಕ್ಷಾಂತರ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಬದುಕುಗಳನ್ನು ಹರಣ ಮಾಡಿರುವ ಜೀವಂತ ಉದಾಹರಣೆಗಳಿವೆ. ಆ ಯೋಜನೆಗಳು ಜಾರಿಯಾಗಿ ದಶಕಗಳೇ ಕಳೆದಿದ್ದರೂ ಈಗಲೂ ಆ ಜನ ಸಮುದಾಯಗಳು ಭರವಸೆ ನೀಡಿದ್ದ ಪರಿಹಾರಕ್ಕಾಗಿ ಕೋರ್ಟು ಕಚೇರಿಗಳಿಗೆ ಎಡತಾಕುತ್ತಿವೆೆ. ಜನರ ಹೋರಾಟಗಳಿಂದಾಗಿ ಕೆಲವೆಡೆಗಳಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಲಾಗಿಲ್ಲದಿದ್ದರೂ ಕಾಗದಪತ್ರಗಳಲ್ಲಿ ಆ ಯೋಜನೆಗಳೊಂದಿಗೆ ಹತ್ತು ಹಲವು ಹೊಸ ಒಪ್ಪಂದಗಳು ಊರ್ಜಿತದಲ್ಲಿವೆ. ಕೆಲವು ಬಹಿರಂಗವಾಗಿವೆ ಹಲವು ಬಹಿರಂಗವಾಗಿಲ್ಲ. ಲಕ್ಷಾಂತರ ಬಡ ರೈತರು ಕೃಷಿ ಮಾಡುತ್ತಿರುವ ಬಗರ್ ಹುಕುಂ ಜಮೀನುಗಳನ್ನು ಭೂಹೀನರಿಗೆ ಹಂಚಲು ನೂರೆಂಟು ಇಲ್ಲಸಲ್ಲದ ಅಡ್ಡಿಗಳನ್ನು ಸರಕಾರ ಮತ್ತು ಅಧಿಕಾರಶಾಹಿ ಸೃಷ್ಟಿಸುತ್ತಾ ನನೆಗುದಿಗೆ ಬೀಳಿಸಿ ಇಟ್ಟಿದೆ. ಕಾಗೋಡು ತಿಮ್ಮಪ್ಪ ಸಭಾಪತಿಯಾಗಿ ಸದನದಲ್ಲಿ ಚಾಟಿ ಬೀಸಿದಂತೆ ಮಂತ್ರಿಯಾಗಿ ಕಾರ್ಯದಲ್ಲಿ ಅವರದೇ ಜಿಲ್ಲೆಯಲ್ಲಿ ಕೂಡ ಮಾಡಿ ತೋರಿಸಲಿಲ್ಲ. ಅದು ಅಷ್ಟು ಸುಲಭವೂ ಅಲ್ಲ.

ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ರಕ್ಷಣಾ ಕಾಯ್ದೆಯ ಬಗ್ಗೆ ದಾವೆ ಹೂಡಿರುವ ವೈಲ್ಡ್ ಲೈಫ್ ಫಸ್ಟ್ ಎಂಬಂತಹ ಸಂಘಟನೆಗಳಿಗೆ ಸೇರಿದವರಲ್ಲಿ ಹೆಚ್ಚಿನವರು ಹವಾನಿಯಂತ್ರಿತ ಮನೆಗಳಲ್ಲಿ, ಕಚೇರಿಗಳಲ್ಲಿ ಬಹುಪಾಲು ಕಳೆಯುವ ನಗರ ಕೇಂದ್ರಿತ ಕಂಫರ್ಟ್ ರೆನಿನ ಪರಿಸರ ಸಂರಕ್ಷಕರು. ತಣ್ಣಗಿದ್ದು ಸುತ್ತಲಿನ ಪರಿಸರದ ಉಷ್ಣತೆಯನ್ನು ಹೆಚ್ಚಿಸಿ ವಿದೇಶಿ ಅನುದಾನ, ಫೆಲೋಶಿಪ್, ಅದ್ಯಯನ ಪ್ರವಾಸ, ಕೊಡುಗೆ, ದೇಣಿಗೆ, ಸ್ಮರಣಿಕೆಗಳಿಗಾಗಿ ನಾಡಿನ ಪರಿಸರ ರಕ್ಷಣೆಯ ಸೋಗಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳು ನೂರಾರಿವೆ.

ಇಂತಹವುಗಳಿಗಾಗಿಯೇ ಬಾಯಿ ತೆರೆದುಕೊಂಡಿರುವ ಅಧ್ಯಾಪಕರು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಲೇಖಕರು ಮೊದಲಾದವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪರಿಸರದೊಂದಿಗೆ ದಿನನಿತ್ಯ ಬದುಕು ನಡೆಸುತ್ತಾ ಅದನ್ನು ಸಂರಕ್ಷಿಸಿಕೊಂಡು ಬಂದಿರುವ ಜನಸಮುದಾಯಗಳಿಗೆ ಪರಿಸರ ರಕ್ಷಣೆಯ ಪಾಠ ಮಾಡುತ್ತವೆ. ವಿಚಾರ ಸಂಕಿರಣಗಳಲ್ಲಿ ತಮ್ಮ ತಿರುಳೇ ಇಲ್ಲದ, ದಿಕ್ಕನ್ನೇ ತಪ್ಪಿಸುವ ಪದಾಡಂಬರದ ಪ್ರಬಂಧಗಳನ್ನು ಮಂಡಿಸಿ ಮಾಧ್ಯಮಗಳ ಮುಖಪುಟಗಳಲ್ಲಿ ತಮ್ಮ ಫೋಟೊ ಹಾಗೂ ಮಾತು ಅಚ್ಚಾಗುವಂತೆ ನೋಡಿಕೊಳ್ಳುತ್ತಾರೆ. ಟಿವಿ ಚಾನೆಲ್‌ಗಳ ಸ್ಥಿರ ಆಮಂತ್ರಿತ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ಅಪ್ರಾಮಾಣಿಕ ವಾಗ್ಝರಿಗಳ ತೌಡು ಕುಟ್ಟುತ್ತಿರುತ್ತಾರೆ. ಸರಕಾರ ಹಾಗೂ ಕಾರ್ಪೊರೇಟ್‌ಗಳಿಂದ ಸಿಗಬಹುದಾದ ಎಲ್ಲಾ ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಭಕ್ಷಿಸುಗಳು, ಎಂಜಲುಗಳು ತಮಗೇ ಸಿಗುವಂತೆ ಲಾಬಿ ಮಾಡುತ್ತಾರೆ. ಇದರಲ್ಲಿ ಆದಿವಾಸಿ ಸಮುದಾಯ ಹಾಗೂ ಅವರ ಸಂಸ್ಕೃತಿಗಳ ಬಗ್ಗೆ ಸಂಶೋಧನೆ ಹೆಸರಲ್ಲಿ ಮಾಹಿತಿ ಸಂಗ್ರಹಿಸಿ ಕಾರ್ಪೊರೇಟ್‌ಗಳಿಗೆ, ಅವರು ನಡೆಸುವ ವಸ್ತು ಸಂಗ್ರಹಾಲಯಗಳಿಗೆ, ಮತ್ತವರ ವಿಶ್ವವಿದ್ಯಾನಿಲಯಗಳಿಗೆ ಮಾರಿ ದಂಧೆ ನಡೆಸುವ, ಪುಸ್ತಕಗಳನ್ನು ಬರೆದು ಪ್ರಶಸ್ತಿ ಪಡೆಯುವ ಹಲವು ಸಂಶೋಧಕರು ಸೇರುತ್ತಾರೆ.

ಇವರು ಕಾರ್ಪೊರೇಟ್‌ಗಳ ಪರವಾಗಿ, ಆದರೆ ಅದರ ವಾಸನೆ ಗೊತ್ತಾಗದಂತೆ ತಮ್ಮ ಪ್ರಬಂಧ ಮಂಡನೆ, ಭಾಷಣಗಳನ್ನು ಮಾಡುತ್ತಾ ವಿದ್ಯಾವಂತ ಯುವ ಸಮುದಾಯವನ್ನು ದಾರಿತಪ್ಪಿಸುತ್ತಾ ಕಾರ್ಪೊರೇಟ್ ಪರಿಸರವಾದವನ್ನು ರೋಚಕವಾಗಿ ಬಿಂಬಿಸಿ ಅವರ ತಲೆಯಲ್ಲಿ ತುಂಬಿಸಿ ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಇಂತಹವರೇ ಜನಸಾಮಾನ್ಯರನ್ನು ಹೊರಹಾಕಿ ಪರಿಸರ ರಕ್ಷಿಸಲು ಹತ್ತು ಹಲವು ಕಾರ್ಪೊರೇಟ್ ಪ್ರಾಯೋಜಿತ ಸಂಘಟನೆಗಳಡಿ ಕೆಲಸ ಮಾಡುತ್ತಿದ್ದಾರೆ. ಇವರುಗಳ್ಯಾರೂ ಕೂಡ ಕೋಟ್ಯಂತರ ಜನಸಾಮಾನ್ಯರ ಬದುಕಿಗೇ ಕೊಳ್ಳಿ ಇಡುವ ಕಾರ್ಪೊರೇಟ್ ಪ್ರಾಯೋಜಿತ ಯೋಜನೆಗಳಿಗಾಗಲೀ ಇದೀಗ ಹೊರಬಿದ್ದಿರುವ ತೀರ್ಪಿನ ಬಗ್ಗೆಯಾಗಲೀ ಗಟ್ಟಿಯಾಗಿ ಮಾತನಾಡುವುದಿಲ್ಲ. ಹಲವರು ಸಮಾಜಕ್ಕಾಗಿ ಪರಿಸರ ಉಳಿವಿಗಾಗಿ ತ್ಯಾಗ ಮಾಡುವಂತೆ ಅಲ್ಲಿ ಬದುಕುತ್ತಿರುವ ಜನಸಾಮಾನ್ಯರಿಗೆ ಉಚಿತ ಬೋಧನೆ ಮಾಡುತ್ತಾರೆ. ಆದರೆ ತಾವು ಮಾತ್ರ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಒಳ್ಳೆಯ ತೇಗದ, ಬೀಟೆಯ ಮರದ ಸೋಫಾ ಸೆಟ್ಟುಗಳ, ಮಂಚಗಳ ಮೇಲೆ ಕುಳಿತು ಶ್ರೀಗಂಧದ ತುಂಡುಗಳಿಂದ ನಿರ್ಮಿಸಿದ ಕಲಾಕೃತಿಗಳನ್ನು ತೋರಿಸುತ್ತಾ ತಮ್ಮ ಸಂಗ್ರಹಗಳ ಬಗ್ಗೆ, ಕಲಾಭಿರುಚಿಗಳ ಬಗ್ಗೆ ಕೊಚ್ಚಿಕೊಳ್ಳುತ್ತಿರುತ್ತಾರೆ. ಇವರು ಕಾರ್ಪೊರೇಟ್‌ಗಳು ಇಲ್ಲವೇ ಅದಕ್ಕಿಂತಲೂ ಹೆಚ್ಚು ಅಪಾಯಕಾರಿಗಳು ಎನ್ನುವುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ವಿನಾಶಕಾರಿ ಕಾರ್ಪೊರೇಟ್ ಪರಿಸರವಾದದ ಸಮರ್ಥಕರು ಹಾಗೂ ಮುಖ್ಯ ವಾಹಕರು ಇವರೇ ಆಗಿದ್ದಾರೆ.

ಇದು ಚುನಾವಣಾ ವರ್ಷವಾಗಿರುವುದರಿಂದ ಈ ತೀರ್ಪು ಹೊರಬಿದ್ದ ಸಂದರ್ಭಕ್ಕೂ ಅದಕ್ಕೂ ಸಂಬಂಧ ಇಲ್ಲವೆನ್ನಲು ಕೂಡ ಆಗುವುದಿಲ್ಲ. ಯಾಕೆಂದರೆ ಸರಕಾರಿ ವಕೀಲರುಗಳ ತಂಡ ಸರಿಯಾಗಿ ವಾದ ಮಂಡಿಸದೇ ಇಂತಹ ತೀರ್ಪು ಹೊರಬೀಳುವಂತೆ ನೋಡಿಕೊಂಡಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಅದಕ್ಕೆ ಕಾರ್ಪೊರೇಟ್‌ಗಳ ಪ್ರಭಾವವೂ ಕಾರಣವಾಗಿರಬಹುದು. ಭಾರೀ ಕಾರ್ಪೊರೇಟ್‌ಗಳ ಹಾಗೂ ದೊಡ್ಡ ಆಸ್ತಿವಂತರ ಪರವಾಗಿ ಕೆಲಸ ಮಾಡುವಾಗಿನ ಶ್ರದ್ಧೆ ಆದಿವಾಸಿ ಜನಸಮುದಾಯ ಇನ್ನಿತರ ಬಡ ಜನಸಮುದಾಯಗಳ ಪರವಾಗಿ ಕೆಲಸ ಮಾಡುವಲ್ಲಿ ಸರಕಾರಗಳಿಗಾಗಲೀ ಅದರ ವಕೀಲರುಗಳಿಗಾಗಲೀ ಇರಲು ಅಸಾಧ್ಯ ತಾನೆ. ಅಲ್ಲದೆ ಮಿಲಿಯಾಂತರ ಜನರನ್ನು ಜುಲೈಯೊಳಗೆ ಒಕ್ಕಲೆಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅಷ್ಟು ಸುಲಭದ ವಿಚಾರವಲ್ಲ. ಸರಕಾರಗಳು ಭಾರೀ ಪ್ರತಿಭಟನೆಗಳನ್ನು ಎದುರಿಸಬೇಕಾಗಿ ಬಂದು ಪರಿಸ್ಥಿತಿ ಕೈ ಮೀರುವ ಸಂದರ್ಭವೂ ಇದೆ. ಈಗಾಗಲೇ ಮಧ್ಯ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳು ಸರಕಾರದ ವಿರುದ್ಧ ಸಶಸ್ತ್ರ ಸಂಘರ್ಷದಲ್ಲಿ ನಿರತವಾಗಿ ಬಹಳ ಕಾಲವಾಗಿದೆ.

ಈಗ ಹೊಸದಾಗಿ ಪೌರತ್ವದ ಕಾನೂನು ಜಾರಿಗೊಳಿಸಲು ಹೊರಟಿರುವುದರಿಂದಾಗಿ ಈಶಾನ್ಯ ಭಾರತದಲ್ಲಿ ಮೊದಲೇ ಇದ್ದ ಬೆಂಕಿಗೆ ತುಪ್ಪಸುರಿದಂತಾಗಿ ಸಂಘರ್ಷ ತೀವ್ರವಾಗಿ ಹಬ್ಬುತ್ತಿದೆ. ಇದೀಗ ನ್ಯಾಯಾಲಯದ ಈ ತೀರ್ಪನ್ನೂ ಜಾರಿಗೊಳಿಸಲು ಹೊರಟರೆ ಅಂತಹ ಸಂಘರ್ಷಗಳು ಮತ್ತಷ್ಟು ಹರಡುವ ಸಾಧ್ಯತೆಯೂ ಇದೆ. ಹಾಗಾಗಿ ನ್ಯಾಯಾಲಯದ ಆದೇಶವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸದಂತೆ ಮಾಡಿ ಕೇಂದ್ರ ಸರಕಾರವು ಭಾರೀ ಜನಪರವಾಗಿದೆ ಎಂಬಂತೆ ಬಿಂಬಿಸಿ ಅದನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸುವ ತಂತ್ರವೂ ಇದರ ಹಿಂದೆ ಇರಬಹುದು. ಆದರೆ ಈ ತೀರ್ಪಿನ ಹಿಂದೆ ಇಷ್ಟು ಮಾತ್ರವೇ ಹುರುಳಿದೆ ಎನ್ನಲು ಸಾಧ್ಯವಿಲ್ಲ. ಭಾರತದ ಮೂಲನಿವಾಸಿ ಬುಡಕಟ್ಟು ಸಮುದಾಯಗಳು ಇನ್ನಿತರ ಜನಸಮುದಾಯಗಳು ನೆಲೆಸಿರುವ ಶ್ರೀಮಂತ ಪಾರಿಸಾರಿಕ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿರುವ ಅಮೂಲ್ಯ ಸಂಪತ್ತನ್ನು ದೋಚಲು ಭಾರೀ ಕಾರ್ಪೊರೇಟ್‌ಗಳು ನೇರ ಹಾಗೂ ಪರೋಕ್ಷದ ಎಲ್ಲಾ ಮಾರ್ಗವನ್ನೂ ಅನುಸರಿಸುತ್ತಿರುವುದು ಸುಳ್ಳಲ್ಲ. ದಿವಾಳಿ ಎಂದು ಘೋಷಿಸಲು ಹೊರಟಿರುವ ಅನಿಲ್ ಅಂಬಾನಿ ಪರವಾಗಿ ಕೆಲಸ ಮಾಡಿ ತೀರ್ಪನ್ನು ತಿದ್ದಿದ ಕಾರಣಕ್ಕೆ ಕೆಲಸ ಕಳೆದುಕೊಂಡ ನ್ಯಾಯಾಂಗದ ಇಬ್ಬರು ಸಿಬ್ಬಂದಿಯ ತಾಜಾ ಉದಾಹರಣೆ ನಮ್ಮ ಮುಂದಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿ ದಿಕ್ಕೆಟ್ಟು ಕುಳಿತಿರುವ ಆಳುವ ಶಕ್ತಿಗಳು ತಮ್ಮ ಲಾಭಾಂಶಗಳನ್ನು ಖಾತರಿಗೊಳಿಸಲು ಎಚ್‌ಎಎಲ್, ಒಎನ್‌ಜಿಸಿ, ಬಿಎಸ್ಸೆನ್ನೆಲ್ ಮೊದಲಾದ ರತ್ನಗಳನ್ನೇ ಮುಳುಗಿಸುತ್ತಿರುವ ಸಂದರ್ಭವಿದು. ಇನ್ನು ಪರಿಸರ ಕಟ್ಟಿಕೊಂಡು ಅವರಿಗೇನಾಗಬೇಕಾಗಿದೆ. ಲಾಭ, ಮತ್ತಷ್ಟು ಲಾಭ ಹೀಗೆ ಅವರ ಕೊಳ್ಳೆಯ ಪ್ರಮಾಣ ಸುಲಭವಾಗಿ ಏರುತ್ತಲೇ ಇರಬೇಕು. ಅದಕ್ಕಾಗಿ ಯುದ್ಧಗಳೇ ನಡೆಯಲಿ, ಪ್ರಳಯವೇ ಬರಲಿ, ಜನಸಾಮಾನ್ಯರು ಸಾಯಲಿ, ಅವರು ಯಾವುದಕ್ಕೂ ಹೇಸುವುದಿಲ್ಲ. ಜನಸಾಮಾನ್ಯರು ತಮ್ಮ ಹಾಗೂ ಪರಿಸರದ ರಕ್ಷಣೆಗೆ ತಾವೇ ಮುಂದಾಗದಿದ್ದರೆ ಮುಂದೆ ಭಾರೀ ಅಪಾಯವಿದೆ.


ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News