ಹಿರಿಯ ನಾಗರಿಕರಿಗಾಗಿ ಬ್ಯಾಂಕಿಂಗ್ ಸೇವೆಗಳು
ಕೆವೈಸಿಯಿಂದ ಹಿಡಿದು ಮನೆಬಾಗಿಲಿಗೇ ಬ್ಯಾಂಕಿಂಗ್‌ವರೆಗೆ ವಿವಿಧ ಸೇವೆಗಳು ತಮಗೆ ಲಭ್ಯವಿದ್ದರೂ ಹಿರಿಯ ನಾಗರಿಕರಿಗೆ ಇದರ ಅರಿವೇ ಇಲ್ಲ!
ನಾವು ಬ್ಯಾಂಕುಗಳಿಗೆ ಭೇಟಿ ನೀಡಿದಾಗ ಅಲ್ಲಿ ಕನಿಷ್ಠ ಒಂದಿಬ್ಬರಾದರೂ ವಯಸ್ಸಾದ ಗ್ರಾಹಕರನ್ನು ನೋಡುತ್ತಿರುತ್ತೇವೆ. ಕೆಲವರಿಗೆ ಸರಿಯಾಗಿ ನಡೆದಾಡಲೂ ಸಾಧ್ಯವಿರುವುದಿಲ್ಲ, ಮನೆಯವರು ಕೈಹಿಡಿದುಕೊಂಡು ಕರೆತಂದಿರುತ್ತಾರೆ. ಇಂತಹ ಹಿರಿಯ ಜೀವಗಳು ಬ್ಯಾಂಕುಗಳಿಗೆ ಭೇಟಿ ನೀಡುವುದು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಕೆವೈಸಿ ದಾಖಲೆಗಳನ್ನು ಸಲ್ಲಿಸಲು ಅಥವಾ ಪಿಂಚಣಿದಾರರಾಗಿದ್ದರೆ ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು. ಹಿರಿಯ ನಾಗರಿಕರು ತಮ್ಮ ಮನೆಯಲ್ಲಿಯೇ ಕುಳಿತುಕೊಂಡು ಇವುಗಳನ್ನು ಸಲ್ಲಿಸಬಹುದಾಗಿದೆ. ಆದರೆ ಹೆಚ್ಚಿನ ಹಿರಿಯ ನಾಗರಿಕರಿಗೆ ಈ ಬಗ್ಗೆ ಅರಿವೇ ಇಲ್ಲ!
ಡಿಜಿಟಲ್ ಬ್ಯಾಂಕಿಂಗ್ ಹೆಚ್ಚುತ್ತಿರುವುದರಿಂದ ಇಂದು ಹೆಚ್ಚಿನ ಉಳಿತಾಯ ಖಾತೆದಾರರು ಬ್ಯಾಂಕುಗಳಿಗೆ ಭೇಟಿ ನೀಡುವುದೇ ಇಲ್ಲ. ಆದರೆ ಹೆಚ್ಚಿನ ಹಿರಿಯ ನಾಗರಿಕರಿಗೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಇನ್ನೂ ಸಾಧ್ಯವಾಗದಿರಬಹುದು ಮತ್ತು ತಮ್ಮ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಈಗಲೂ ತಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುತ್ತಿರಬಹುದು.
ಹಿರಿಯ ನಾಗರಿಕರು ಮತ್ತು ದೃಷ್ಟಿಮಾಂದ್ಯರು ಸೇರಿದಂತೆ ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗಾಗಿ ಎಲ್ಲ ಅಗತ್ಯ ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸುವಂತೆ ಆರ್‌ಬಿಐ ಎಲ್ಲ ಬ್ಯಾಂಕುಗಳಿಗೆ ಸೂಚಿಸಿದೆ.
ಹೆಚ್ಚಿನ ಬ್ಯಾಂಕುಗಳು ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಇವು ಖಾತೆಗಳ ಸುಗಮ ನಿರ್ವಹಣೆಗಾಗಿ ಮತ್ತು ಅವರ ಹಣಕ್ಕೆ ಗರಿಷ್ಠ ಪ್ರತಿಫಲಕ್ಕಾಗಿ ಅನೇಕ ವೈಶಿಷ್ಟಗಳನ್ನು ಒಳಗೊಂಡಿವೆ. ಅಲ್ಲದೆ ಬ್ಯಾಂಕುಗಳು ಸಂಪೂರ್ಣ ಕೆವೈಸಿ ಪಾಲನೆಯಾಗಿರುವ ಖಾತೆಯನ್ನು ತನ್ನ ದಾಖಲೆಗಳಲ್ಲಿರುವ ಗ್ರಾಹಕನ ಜನ್ಮ ದಿನಾಂಕದ ಆಧಾರದಲ್ಲಿ ಆಟೊಮ್ಯಾಟಿಕ್ ಆಗಿ ‘ಹಿರಿಯ ನಾಗರಿಕ ಖಾತೆ’ಯನ್ನಾಗಿ ಪರಿವರ್ತಿಸಲು ಬದ್ಧವಾಗಿವೆ. 70 ವರ್ಷಕ್ಕೂ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರಿಗಾಗಿ ಮನೆಯಿಂದಲೇ ಬಳಸಿಕೊಳ್ಳಬಹುದಾದ ಕೆಲವು ಬ್ಯಾಂಕಿಂಗ್ ವಹಿವಾಟುಗಳಿವೆ.
ಮನೆಬಾಗಿಲಿಗೇ ಬ್ಯಾಂಕಿಂಗ್ ಸೇವೆ
ಹಿರಿಯ ನಾಗರಿಕರು ತಮ್ಮ ಮನೆಯಲ್ಲಿಯೇ ಕುಳಿತುಂಕೊಡು ಕೆವೈಸಿ ದಾಖಲೆಗಳು ಮತ್ತು ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು. ಇದಕ್ಕಾಗಿ ಬ್ಯಾಂಕು ತನ್ನ ಆಡಳಿತ ಮಂಡಳಿಯ ನೀತಿಯನ್ನು ಅವಲಂಬಿಸಿ ಶುಲ್ಕವನ್ನು ವಿಧಿಸಬಹುದು. ಆದರೆ ಇತರ ಕೆಲವು ಸೌಲಭ್ಯಗಳನ್ನು ಹಿರಿಯ ನಾಗರಿಕರಿಗೆ ಉಚಿತವಾಗಿ ಒದಗಿಸುವಂತೆಯೂ ಬ್ಯಾಂಕುಗಳಿಗೆ ನಿರ್ದೇಶ ನೀಡಲಾಗಿದೆ.
70 ವರ್ಷಕ್ಕೂ ಹೆಚ್ಚಿನ ಪ್ರಾಯದ ಹಿರಿಯರು ಹಾಗೂ ಭಿನ್ನ ಸಾಮರ್ಥ್ಯದ ವ್ಯಕ್ತಿಗಳು ಅಥವಾ ದೀರ್ಘಕಾಲಿಕ ಅನಾರೋಗ್ಯ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿರುವವರಿಗೆ ನಗದು ಮತ್ತು ಚೆಕ್ ಸ್ವೀಕಾರ,ಖಾತೆಯಿಂದ ಹಿಂದೆಗೆದ ಹಣದ ಪಾವತಿ,ಡಿಡಿಗಳ ವಿತರಣೆ,ಕೆವೈಸಿ ಮತ್ತು ಜೀವಿತ ಪ್ರಮಾಣಪತ್ರ ಸಲ್ಲಿಕೆಯಂತಹ ಪ್ರಾಥಮಿಕ ಬ್ಯಾಂಕಿಂಗ್ ಸೇವೆಗಳನ್ನು ಮನೆಬಾಗಿಲಿಗೇ ಒದಗಿಸುವಂತೆ ಬ್ಯಾಂಕುಗಳಿಗೆ ನಿರ್ದೇಶ ನೀಡಲಾಗಿದೆ.
ಶಾಖೆಗೆ ಹಿರಿಯ ನಾಗರಿಕರ ಭೇಟಿ
ಹೀಗಿದ್ದರೂ, ಪಿಂಚಣಿದಾರರೋರ್ವರು ಶಾಖೆಗೆ ಭೇಟಿ ನೀಡುವುದು ಅಗತ್ಯವಾದರೆ ಅವರು ತನ್ನ ಜೀವಿತ ಪ್ರಮಾಣಪತ್ರವನ್ನು ತನಗೆ ಪಿಂಚಣಿಯನ್ನು ವಿತರಿಸುವ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಸಲ್ಲಿಸಬಹುದು. ಅಂತಹವರಿಗೆ ಪಿಂಚಣಿ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಈ ಪ್ರಮಾಣಪತ್ರವನ್ನು ಸ್ವೀಕರಿಸಿದ ಶಾಖೆಯು ಅದನ್ನು ತಕ್ಷಣ ಕೋರ್ ಬ್ಯಾಂಕಿಂಗ್ ಸೊಲ್ಯುಷನ್(ಸಿಬಿಎಸ್)ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಿರಿಯ ನಾಗರಿಕರು ಮತ್ತು ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಆದ್ಯತೆ ನೀಡುವ,ತಕ್ಷಣಕ್ಕೆ ಸ್ಪಷ್ಟವಾಗಿ ಗೋಚರಿಸಬಲ್ಲ ಪ್ರತ್ಯೇಕವಾದ ಕೌಂಟರ್‌ನ್ನು ಒದಗಿಸುವಂತೆಯೂ ಬ್ಯಾಂಕುಗಳಿಗೆ ಆರ್‌ಬಿಐ ಸೂಚಿಸಿದೆ.
ಕೆಲವೊಮ್ಮೆ ಹಿರಿಯ ನಾಗರಿಕರು ಚೆಕ್‌ಬುಕ್‌ನ್ನು ಪಡೆದುಕೊಳ್ಳಲು ಬೇರೆ ಯಾರನ್ನಾದರೂ ಬ್ಯಾಂಕ್ ಶಾಖೆಗೆ ಕಳುಹಿಸುತ್ತಾರೆ. ಚೆಕ್‌ಬುಕ್‌ಗಳನ್ನು ನೀಡಲು ಹಿರಿಯ ನಾಗರಿಕರು ಮತ್ತು ಭಿನ್ನ ಸಾಮರ್ಥ್ಯದ ವ್ಯಕ್ತಿಗಳು ಸೇರಿದಂತೆ ಯಾವುದೇ ಗ್ರಾಹಕರ ದೈಹಿಕ ಉಪಸ್ಥಿತಿಗಾಗಿ ಬ್ಯಾಂಕುಗಳು ಆಗ್ರಹಿಸುವಂತಿಲ್ಲ. ಅಲ್ಲದೆ ಬ್ಯಾಂಕುಗಳು ಗ್ರಾಹಕರ ಕೋರಿಕೆಯ ಮೇರೆಗೆ ಪ್ರತಿವರ್ಷ ಉಳಿತಾಯ ಖಾತೆಯಲ್ಲಿ 25 ಚೆಕ್ ಹಾಳೆಗಳನ್ನು ಉಚಿತವಾಗಿ ಒದಗಿಸಬೇಕಿದೆ. ಇದರೊಂದಿಗೆ ಶೂನ್ಯ ಶುಲ್ಕ ಖಾತೆಯಲ್ಲಿ ಇಂತಹ ಸೌಲಭ್ಯವನ್ನು ಒದಗಿಸಿದರೂ ಖಾತೆಯನ್ನು ಸಾಮಾನ್ಯ ಖಾತೆಯನ್ನಾಗಿ ಪರಿವರ್ತಿಸುವುದಿಲ್ಲ ಎಂದೂ ಆರ್‌ಬಿಐ ಸ್ಪಷ್ಟಪಡಿಸಿದೆ.