ಯುದ್ಧವೆಂಬ ಸಮೂಹ ಸನ್ನಿಯೂ.. ಆಳುವವರು ತೋಡುತ್ತಿರುವ ಖೆಡ್ಡಗಳೂ...

Update: 2019-03-04 18:46 GMT

ಎರಡೂ ದೇಶಗಳ ಆಳುವ ಶಕ್ತಿಗಳಿಗೆ ಆಯಾ ದೇಶಗಳ ಜನಸಮೂಹವನ್ನು ಯಾಮಾರಿಸಿ ಹಿಡಿದಿಡಲು ಕಾಶ್ಮೀರದಂತಹ ಸಮಸ್ಯೆಗಳು, ವೈರಿ ದೇಶಗಳೆಂಬ ಗುಮ್ಮಗಳು, ಯುದ್ಧಗಳೆಂಬ ಸನ್ನಿಗಳು ಅಗತ್ಯ. ಅವುಗಳನ್ನು ನಿರಂತರವಾಗಿ ಕಾಪಾಡುತ್ತಾ ಸಂದರ್ಭೋಚಿತವಾಗಿ ಬಳಸಿಕೊಳ್ಳುತ್ತಾ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಾ ಬರುತ್ತಿದ್ದಾರೆ. ಇಂತಹ ಕುತಂತ್ರಗಳನ್ನು ಜನಸಾಮಾನ್ಯರು ಮುಂಬರುವ ದಿನಗಳಲ್ಲಿ ಅರಿತುಕೊಂಡು ಈ ರೀತಿಯ ಬೆಳವಣಿಗೆಗಳ ಬಗ್ಗೆ ಸರಿಯಾದ ನಿಲುವು ತಾಳುತ್ತಾ, ಆಳುವವರು ತೋಡುವ ಖೆಡ್ಡಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬೀಳದೆ, ಎಚ್ಚರಿಕೆ ವಹಿಸಿ ಕ್ರಿಯಾಶೀಲರಾಗಬೇಕಾದ ಅಗತ್ಯ ತುಂಬಾ ಇದೆ.


ದೇಶದಾದ್ಯಂತ ಕಳೆದ ವಾರ ಪಾಕಿಸ್ತಾನದೊಂದಿಗೆ ಯುದ್ಧ ಸನ್ನಿಯನ್ನು ವ್ಯವಸ್ಥಿತವಾಗಿ ಹರಡಲಾಗಿತ್ತು. ಈ ಸಮೂಹ ಸನ್ನಿಯನ್ನು ಸೃಷ್ಟಿಮಾಡಲು ಸಂಘ ಪರಿವಾರ, ಆಳುವ ಪಕ್ಷದವರು ಹಾಗೂ ಟಿವಿ ಹಾಗೂ ಇನ್ನಿತರ ಮಾಧ್ಯಮಗಳು ಬಹಳ ಹೆಣಗಿದವು. ಕಾಶ್ಮೀರದ ಪುಲ್ವಾಮದಲ್ಲಿ 20 ವರ್ಷದ ಅಲ್ಲಿನ ಸ್ಥಳೀಯ ಯುವಕನೊಬ್ಬ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಕೊಂಡು ಎಪ್ಪತ್ತಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಭಾರಿ ಭದ್ರತೆಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಮಾರು 2,000ಕ್ಕೂ ಹೆಚ್ಚುಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ಆತ್ಮಾಹುತಿ ದಾಳಿ ಮಾಡಿ 40ಕ್ಕೂ ಹೆಚ್ಚು ಮೀಸಲು ಪೊಲೀಸರ ಮರಣಕ್ಕೆ ಕಾರಣನಾದದ್ದು ಭಾರೀ ಸುದ್ದಿಯಾಯಿತು. ಇದಾದ ನಂತರದಿಂದಲೇ ಯುದ್ಧ ಸನ್ನಿ ಸೃಷ್ಟಿಸಲು ನಿರಂತರವಾಗಿ ತೀವ್ರ ಪ್ರಯತ್ನಗಳು ಸಾಗಿದವು. ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ‘ಜೈಶೆ ಮುಹಮ್ಮದ್’ ಸಂಘಟನೆಯೇ ಇದರ ಸೂತ್ರದಾರಿ ಹಾಗೂ ಪಾಕಿಸ್ತಾನ ಸರಕಾರದ ನೇರ ಬೆಂಬಲದೊಂದಿಗೆ ಈ ದಾಳಿಯನ್ನು ನಡೆಸಲಾಗಿದೆ ಎಂಬ ವಾರ್ತೆಯನ್ನು ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಹರಡಿತು. ಜೊತೆಗೆ ಯಾವುದೋ ಆನ್ ಲೈನ್ ಸಂದೇಶವನ್ನು ಪ್ರಚುರಪಡಿಸಿ ಜೈಶೆ ಮುಹಮ್ಮದ್ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾಯಿತು.

ಆದರೆ ಪಾಕಿಸ್ತಾನ ಸೇನೆಯಾಗಲೀ ಪಾಕಿಸ್ತಾನದ ವ್ಯಕ್ತಿಗಳಾಗಲೀ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನುವ ಯಾವ ಪುರಾವೆಗಳೂ ಇದುವರೆಗೆ ಮುನ್ನೆಲೆಗೆ ಬಂದಿಲ್ಲ. ಜೈಶೆ ಮುಹಮ್ಮದ್ ಸಂಘಟನೆಯ ಮುಖ್ಯಸ್ಥನೆಂದು ಹೇಳಲಾದ ವ್ಯಕ್ತಿಯೊಬ್ಬನನ್ನು ಬಿಜೆಪಿಯ ವಾಜಪೇಯಿ ಸರಕಾರವೇ ಹಿಂದೆ ಬಿಡುಗಡೆ ಮಾಡಿ ಕಳಿಸಿತ್ತು ಸಂಘ ಪರಿವಾರ ಹಾಗೂ ಮೋದಿಯ ಕೇಂದ್ರ ಸರಕಾರ ಈ ದಾಳಿಯ ಹಾಗೂ 40ಕ್ಕೂ ಹೆಚ್ಚು ಜನ ಮೀಸಲು ಪೊಲೀಸರ ಮರಣದ ಲಾಭವನ್ನು ತನ್ನ ಅಧಿಕಾರದ ಮುಂದುವರಿಕೆಗಾಗಿ ಉಪಯೋಗಿಸಲು ಇನ್ನಿಲ್ಲದ ಶ್ರಮವನ್ನು ಹಾಕಲು ಶುರುವಿಟ್ಟಿತು. ಇದಾಗಿ ಕೆಲವೇ ದಿನಗಳ ನಂತರ ಭಾರತದ ಸೇನೆ ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿ ಬಾಲಕೋಟ್ ಎಂಬಲ್ಲಿ ವೈಮಾನಿಕ ದಾಳಿ ನಡೆಸಿ ‘ಜೈಶೆ ಮುಹಮ್ಮದ್ ಸಂಘಟನೆ’ಯ ಶಿಬಿರಗಳನ್ನು ನಾಶ ಮಾಡಿ 300ಕ್ಕೂ ಹೆಚ್ಚು ಸಂಘಟನೆಗೆ ಸೇರಿದವರನ್ನು ಹತ್ಯೆ ಮಾಡಿರುವುದಾಗಿ ಸುದ್ದಿ ಬಿತ್ತಲಾಯಿತು.

 ಪಾಕಿಸ್ತಾನದ ಮೇಲೆ ಯುದ್ಧವನ್ನೇ ಸಾರಲಾಗಿದೆ ಎಂಬಂತೆ ಟಿವಿ ಮಾಧ್ಯಮಗಳು ಅದರಲ್ಲೂ ಕನ್ನಡ ಟಿವಿ ಮಾಧ್ಯಮಗಳು ಬೊಬ್ಬಿರಿಯುತ್ತಾ ಯುದ್ಧದ ನೇರ ಪ್ರಸಾರವೆಂಬಂತೆ ಯಾವ್ಯಾವುದೋ ವೀಡಿಯೊ ಗೇಮ್ ದೃಶ್ಯಾವಳಿಗಳು, ಹಳೇ ಯುದ್ಧ ಸಿನೆಮಾದ ದೃಶ್ಯಾವಳಿಗಳನ್ನು ಸ್ಪರ್ಧೆಗೆ ಬಿದ್ದು ಬಿತ್ತರಿಸಿ ನಗರದ ಮಧ್ಯಮ ವರ್ಗದ ಯುವ ಪೀಳಿಗೆಯನ್ನು ತುದಿಗಾಲಲ್ಲಿ ನಿಲ್ಲಿಸಿ ಯಾಮಾರಿಸಿಬಿಟ್ಟವು. ಇಲ್ಲದ ಯುದ್ಧವನ್ನು ಇದೆಯೆಂಬಂತೆ ಬಿಂಬಿಸಿದ ಟಿವಿ ಆ್ಯಂಕರ್‌ಗಳು ತಮ್ಮ ವಾಹಿನಿಗಳ ಟಿಆರ್‌ಪಿ ಹೆಚ್ಚಿಸಲು ತಮ್ಮ ಶಕ್ತಿ ಮೀರಿ ಶ್ರಮಪಟ್ಟರು. ಬಿಜೆಪಿಯ ಅನಧಿಕೃತ ಪಡೆ ಹಸಿ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ವ್ಯಾಪಕವಾಗಿ ಹಬ್ಬಿಸಲು ಪ್ರಯತ್ನಿಸಿದವು. ಆದರೆ ವಾಯುಸೇನೆಯಿಂದಾಗಲೀ ಸೇನೆಯಿಂದಾಗಲೀ ಅಧಿಕೃತವಾಗಿ ದಾಳಿಯ ಬಗ್ಗೆ, ದಾಳಿಯಿಂದಾದ ಹಾನಿಯ ಬಗ್ಗೆ ಮಾಹಿತಿ ಇರಲಿಲ್ಲ. ನಂತರ ಇದು ಸೇನಾತ್ಮಕ ಕಾರ್ಯಾಚರಣೆಯಲ್ಲ, ಇದು ಕೇವಲ ಮುನ್ನೆಚ್ಚರಿಕಾ ಕಾರ್ಯಾಚರಣೆ ಮಾತ್ರ, ಯುದ್ಧವಲ್ಲ ಎಂದು ಭಾರತದ ರಕ್ಷಣಾ ಸಚಿವಾಲಯ ಅಧಿಕೃತವಾಗಿ ಹೇಳಬೇಕಾಗಿ ಬಂದಿತು. ಭಾರತ ಮಾಡಿತೆನ್ನಲಾದ ಈ ವಾಯು ದಾಳಿಯನ್ನು ದೇಶದಾದ್ಯಂತ ಹಲವು ರೀತಿಗಳಲ್ಲಿ ಸ್ವಾಗತಿಸಲಾಯಿತು. ಸಹಜವಾಗಿ ಸಂಘ ಪರಿವಾರ ಮತ್ತು ಬಿಜೆಪಿ ಇದನ್ನು ಮಹಾ ಸಾಧನೆಯೆಂಬಂತೆ ಸ್ವಾಗತಿಸಿ ಕಪೋಲ ಕಲ್ಪಿತ ಸುಳ್ಳುಗಳನ್ನು ಹರಡ ತೊಡಗಿದವು. ಸ್ವಾಗತಿಸಿದವರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸೇರದ ಒಂದು ದೊಡ್ಡ ಸಮೂಹ ಕೂಡ ಇತ್ತು. ಇದರಲ್ಲಿ ಯುದ್ಧವನ್ನು ವಿರೋಧಿಸುವವರು ಕೂಡ ಸೇರಿದ್ದರು. ‘‘ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದ್ದು ಸಕಾಲಿಕ, ಸ್ವಾಗತಾರ್ಹ ಆದರೆ ಪಾಕಿಸ್ತಾನದೊಂದಿಗೆ ಯುದ್ಧ ಕೂಡದು. ರಾಜತಾಂತ್ರಿಕವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು’’ ಎಂದೂ ಸೇರಿಸಿ ಅಡ್ಡಗೋಡೆಯ ಮೇಲೆ ದೀಪವಿಡುವ ರೀತಿಯಲ್ಲಿ ಮಾತನಾಡಿದ ಹಲವು ಬುದ್ಧ್ಧಿಜೀವಿಗಳು ಹಾಗೂ ಸಮಾಜಮುಖಿಯೆನಿಸಿಕೊಂಡವರು ಇದ್ದರು.

 ಹಲವರು ‘‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಖರೀದಿಸಿದ ಯುದ್ಧ ವಿಮಾನಗಳ ಕಾರ್ಯದಕ್ಷತೆಯಿಂದಾಗಿ ವೈಮಾನಿಕ ದಾಳಿ ಯಶಸ್ವಿಯಾಯಿತು, ಮೋದಿ ಕಾಲದಲ್ಲಿ ಖರೀದಿಸಿದ ಯದ್ಧ ವಿಮಾನಗಳಿಂದಲ್ಲ’’ ಎಂಬ ತಮ್ಮ ಮೂಗಿನ ನೇರದ ಹಸಿ ಕಾಂಗ್ರೆಸ್ ನಿಷ್ಠೆಯನ್ನು ಪ್ರದರ್ಶಿಸಲು ಈ ಸಂದರ್ಭವನ್ನು ಬಳಸಿಕೊಂಡರು. ದೊಡ್ಡ ಸಂಖ್ಯೆಯಲ್ಲಿ ವಾಯು ಸೇನೆಯ ಈ ಕಾರ್ಯವನ್ನು ಶ್ಲಾಘಿಸುತ್ತಾ ಸೆಲ್ಯೂಟ್‌ಗಳನ್ನು ನೀಡಿದರು. ಆದರೆ ಯಾವುದೇ ಒಂದು ದೇಶದ ಗಡಿ ದಾಟಿ ಏಕಪಕ್ಷೀಯವಾಗಿ ದಾಳಿ ಮಾಡುವುದು ರಾಜತಾಂತ್ರಿಕವಾಗಿಯೂ, ಪ್ರಜಾತಾಂತ್ರಿಕವಾಗಿಯೂ ತಪ್ಪು. ಅದು ಅನಗತ್ಯ ಸಂಘರ್ಷಕ್ಕೆ ಹಾಗೂ ನೇರವಾಗಿ ಯುದ್ಧಕ್ಕೆ ಆಹ್ವಾನಿಸುವ ವಿಚಾರವಾಗುತ್ತದೆ, ಯುದ್ಧವೆಂದಾಗ ಎರಡೂ ದೇಶಗಳ ಜನಸಾಮಾನ್ಯರ ಮಾರಣ ಹೋಮಕ್ಕೆ ಕಾರಣವಾಗುತ್ತದೆ ಎನ್ನುವ ಮಾರಕ ವಾಸ್ತವವನ್ನು ಮರೆತು ಮಾತನಾಡಿದವರೇ ಆ ಸಂದರ್ಭದಲ್ಲಿ ಹೆಚ್ಚಿನವರಾಗಿದ್ದರು. ಯಾವುದೇ ವಿವಾದಗಳಿದ್ದಲ್ಲಿ ಮಾತುಕತೆಯ ಮೂಲಕ ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗನುಗುಣವಾಗಿ ನಡೆದುಕೊಳ್ಳುವ ಮೂಲಕವೇ ಪರಿಹರಿಸಿಕೊಳ್ಳಬೇಕೆಂದು, ಯುದ್ಧ ಪರಿಹಾರವಲ್ಲ ಎಂದವರು ಕೂಡ ಪಾಕಿಸ್ತಾನದ ಗಡಿದಾಟಿ ಮಾಡಿದ ವೈಮಾನಿಕ ದಾಳಿಯನ್ನು ಸಮರ್ಥಿಸಿ ಅಭಿನಂದಿಸಿದರು. ಏಕಕಾಲದಲ್ಲಿ ಭಾರತ ಹಾಗೂ ಪಾಕಿಸ್ತಾನಗಳಲ್ಲಿ ದಾಳಿಯನ್ನು ಸ್ವಾಗತಿಸಿ ಸಂಭ್ರಮಿಸಿದ ವರದಿಗಳೂ, ಎರಡೂ ದೇಶಗಳಲ್ಲಿ ಯುದ್ಧ ಸನ್ನಿಯಲ್ಲಿ ಜನಸಾಮಾನ್ಯರನ್ನು ಕೆಡವುವ ಪ್ರಯತ್ನಗಳನ್ನು ನಡೆಸುತ್ತಿರುವ ವರದಿಗಳೂ ಇದ್ದವು.

ವಿರೋಧ ಪಕ್ಷಗಳು ಕೂಡ ಈ ಸಂದರ್ಭವನ್ನು ತಮ್ಮ ಪರವಾಗಿ ಉಪಯೋಗಿಸಿಕೊಳ್ಳಲು ಹೆಣಗಾಡತೊಡಗಿದವು. ಅಲ್ಲಿಗೆ ಸಂಘ ಪರಿವಾರ ಹಾಗೂ ಮೋದಿ ಸರಕಾರ ಏನನ್ನು ಬಯಸಿತ್ತೋ, ಏನು ಯೋಜಿಸಿತ್ತೋ ಅದಕ್ಕೆ ತಕ್ಕಂತೆ ದೊಡ್ಡ ಜನಸಮೂಹ, ಅದರಲ್ಲೂ ನಗರ ಕೇಂದ್ರಿತ ಮಧ್ಯಮ ವರ್ಗ ವರ್ತಿಸತೊಡಗಿತು. ವೈಮಾನಿಕ ದಾಳಿಯನ್ನು ಸ್ವಾಗತಿಸುತ್ತಾ ಯುದ್ಧವನ್ನು ವಿರೋಧಿಸುವ ನಿಲುವು ತೆಗೆದುಕೊಂಡವರೂ ಕೂಡ ಕಾರ್ಪೊರೇಟ್, ಸಂಘ ಪರಿವಾರ ಹಾಗೂ ಮೋದಿಯ ಬಿಜೆಪಿಯ ತಾಳಕ್ಕೆ ಹೆಜ್ಜೆ ಹಾಕಬೇಕಾದ ಸ್ಥಿತಿಯನ್ನು ನಿರ್ಮಿಸಲಾಯಿತು. ಸತ್ಯಾ ಸತ್ಯತೆಗಳ ಬಗ್ಗೆ ಪ್ರಶ್ನಿಸುವವರನ್ನು ರಾಷ್ಟ್ರದ್ರೋಹಿಗಳ ಪಟ್ಟಿಗೆ ಸೇರಿಸಿ ಹಳಿಯುವ ಕೆಲಸಗಳನ್ನು ವ್ಯಾಪಕವಾಗಿ ಮಾಡಲಾಯಿತು. ಆಳುವ ಶಕ್ತಿಗಳಿಗೆ ಬೇಕಾಗಿದ್ದ ಯುದ್ಧ ಸನ್ನಿಯಲ್ಲಿ ದೊಡ್ಡ ಜನಸಮೂಹವನ್ನು ಮುಳುಗಿಸಿ ಅವರನ್ನೆಲ್ಲಾ ತನ್ನ ಖೆಡ್ಡಕ್ಕೆ ಕೆಡವಿಕೊಂಡಿತು. ಟಾಟಾ ಸಮೂಹದ ರತನ್ ಟಾಟಾ ಆದಿಯಾಗಿ ಹಲವು ಕಾರ್ಪೊರೇಟ್‌ಗಳು ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯನ್ನು ಸ್ವಾಗತಿಸಿ ಸಮರ್ಥಿಸಿದ್ದನ್ನು ಸೂಕ್ಷ್ಮವಾಗಿ ನಾವು ಇಲ್ಲಿ ಗಮನಿಸಬೇಕು.

ಪುರಾವೆಯೆಂಬಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಖಾಸಗಿಯಾಗಿ ಹೇಳುತ್ತಿದ್ದ ಸತ್ಯವನ್ನು ಕರ್ನಾಟಕದ ಬಿಜೆಪಿ ನಾಯಕ ಯಡಿಯೂರಪ್ಪಬಹಿರಂಗವಾಗಿಯೇ ‘‘ಪುಲ್ವಾಮ ದಾಳಿ ಹಾಗೂ ಪಾಕಿಸ್ತಾನದೊಂದಿಗಿನ ಯುದ್ಧ ವಾತಾವರಣದಿಂದಾಗಿ ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ’’ ಎಂದು ಹೇಳಿಯೇ ಬಿಟ್ಟರು. ಈ ಹೇಳಿಕೆಯನ್ನು ಅಂತರ್‌ರಾಷ್ಟ್ರೀಯವಾಗಿ ಬಿಂಬಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.. ಅಲ್ಲಿಗೆ ಪಾಕಿಸ್ತಾನವೆಂಬ ಗುಮ್ಮನನ್ನು ಹಾಗೂ ಯುದ್ಧದ ವಿಚಾರವನ್ನು ಯಾಕೆ ಮುನ್ನೆಲೆಗೆ ತರಲಾಯಿತು ಎನ್ನುವುದು ಸ್ಪಷ್ಟವಾಗಿ ಬಹಿರಂಗವಾಯಿತು. ಮೋದಿ ಹಾಗೂ ಅಮಿತ್ ಶಾ ಕೂಡ ಬೇರೆ ರೀತಿಯಲ್ಲಿ ತನ್ನ ಪ್ರಚಾರ ಭಾಷಣಗಳಲ್ಲಿ ಇದನ್ನೇ ಹೇಳುತ್ತಿರುವುದು ಕೂಡ ಸ್ಪಷ್ಟವಾಗಿ ಪಾಕಿಸ್ತಾನದೊಂದಿಗಿನ ಈಗಿನ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವುದಕ್ಕೆ ನಿಜವಾದ ಕಾರಣಗಳನ್ನು ನಮ್ಮೆದುರು ತೆರೆದಿಡುತ್ತದೆ. ಇಂತಹುದೇ ತಂತ್ರಗಳನ್ನು ಹಿಂದಿನಿಂದಲೂ ಎಲ್ಲಾ ಸರಕಾರಗಳೂ ಮಾಡುತ್ತಾ ಬಂದಿರುವುದೇ ನಮ್ಮ ದೇಶದ ವಾಡಿಕೆ.

ಪಾಕಿಸ್ತಾನ ಸರಕಾರ ಹಾಗೂ ಪಾಕಿಸ್ತಾನದ ಸೇನೆ ಭಾರತದ ವಾಯುಸೇನೆಯ ವಿಮಾನಗಳು ತನ್ನ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದನ್ನು ಹಿಮ್ಮೆಟ್ಟಿಸಿರುವುದಾಗಿ ಅಧಿಕೃತವಾಗಿ ಹೇಳಿತು. ಹಿಮ್ಮೆಟ್ಟುವಾಗ ಭಾರತೀಯ ಯುದ್ಧ ವಿಮಾನಗಳು ಕೆಲವು ಬಾಂಬ್‌ಗಳನ್ನು ತನ್ನ ನೆಲದ ಮೇಲೆ ಹಾಕಿತು ಎಂದೂ ಹೇಳಿತು. ಆದರೆ ಯಾವುದೇ ನಷ್ಟಗಳು ಸಂಭವಿಸದಿದ್ದುದರಿಂದಾಗಿ ತಾನು ಪ್ರತಿದಾಳಿ ನಡೆಸಲಿಲ್ಲ. ಅದು ಅನಗತ್ಯವಾಗಿ ವಾತಾವರಣವನ್ನು ಹದಗೆಡಿಸುವ ಕ್ರಮವಾಗಿರುವುದರಿಂದಾಗಿ ಅಂತಹ ಕ್ರಮಕ್ಕೆ ತಾನು ಮುಂದಾಗಲಿಲ್ಲವೆಂದು ಹೇಳಿತು. ಇದನ್ನು ಅಲ್ಲಿನ ಪ್ರಧಾನಿ ವಿಸ್ತೃತವಾದ ವಿವರಣೆಗಳೊಂದಿಗೆ ಅಲ್ಲಿನ ಸಂಸತ್ತಿನಲ್ಲೂ ಪುನರುಚ್ಚರಿಸಿದರು. ಈ ಹೇಳಿಕೆಗಳನ್ನು ನಾವು ಪೂರ್ಣವಾಗಿ ನಂಬಬೇಕಿಲ್ಲದಿದ್ದರೂ ಪಾಕಿಸ್ತಾನಕ್ಕೆ ಈಗ ಯುದ್ಧ ನಡೆಯುವುದು ಬೇಡ ಎಂಬ ಸತ್ಯವನ್ನು ಈ ಹೇಳಿಕೆಗಳು ತೆರೆದಿಡುತ್ತಿರುವುದನ್ನು ನಿರಾಕರಿಸಲಾಗುವುದಿಲ್ಲ. ಇದನ್ನು ನಂತರದ ಘಟನೆಗಳು ಕೂಡ ಸ್ಪಷ್ಟಪಡಿಸುತ್ತವೆ. ಇದೀಗ ಭಾರತದ ಕೇಂದ್ರ ಸಚಿವ ಅಹ್ಲುವಾಲಿಯಾ ಭಾರತದ ವಾಯುಪಡೆ ಮಾಡಿದ ದಾಳಿಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಹೇಳಿಕೆ ನೀಡಿರುವ ವರದಿ ಬಂದಿದೆ. ಅಲ್ಲಿಗೆ ಪಾಕಿಸ್ತಾನ ಏನು ಹೇಳಿತ್ತೋ ಅದು ವಾಸ್ತವ ಎಂದಾಯಿತು. ಅಂದರೆ ಭಾರತ ಸರಕಾರ ಕೂಡ ಯುದ್ಧಕ್ಕೆ ತಯಾರಿಲ್ಲದಿದ್ದರೂ ಯುದ್ಧ ಭೀತಿ ಜನರ ನಡುವೆ ಜೀವಂತವಾಗಿಡಬೇಕು ಅಷ್ಟೇ. ಆದರೆ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವುದರಲ್ಲಿ ಭಾರತದಂತೆಯೇ ಪಾಕಿಸ್ತಾನದ ಸರಕಾರಗಳೂ ಯಾವತ್ತೂ ಹಿಂದೆ ಬಿದ್ದಿಲ್ಲ ಎನ್ನುವುದನ್ನು ಗಮನಿಸಬೇಕು.

ಆದರೆ ಭಾರತದ ಪ್ರಧಾನಿ ಅಧಿಕೃತವಾಗಿ ಈ ಬಗ್ಗೆ ಮಾತನ್ನೇ ಆಡದೆ ತನ್ನ ಚುನಾವಣಾ ಸಮಾವೇಶಗಳಲ್ಲಿ ಪಾಕಿಸ್ತಾನವನ್ನು ಗುರಿ ಮಾಡುತ್ತಾ, ‘‘ಭಾರತ ಈಗ ಸುರಕ್ಷಿತ ನಾಯಕತ್ವದಡಿಯಿದೆ’’ ಎಂದು ನಂಬಿಸುತ್ತಾ, ಭಾರತದ ಈಗಿನ ಬಹು ಮುಖ್ಯ ಸಮಸ್ಯೆ ಪಾಕಿಸ್ತಾನ ಎಂಬಂತೆ ಬಿಂಬಿಸುತ್ತಾ ಪುಲ್ವಾಮ ದಾಳಿಯಲ್ಲಿ ಮರಣ ಹೊಂದಿದ ಭದ್ರತಾ ಪಡೆಗಳ ನಷ್ಟ ಹಾಗೂ ಸೇನಾ ಕಾರ್ಯಾಚರಣೆಯನ್ನು ತನ್ನ ಚುನಾವಣಾ ಲಾಭಕ್ಕಾಗಿ ಆಕ್ರಮಣಕಾರಿಯಾಗಿ ಬಳಸತೊಡಗಿದರು. ತನ್ನ ಅವಧಿಯಲ್ಲಿ ಮಾಡಿದ ರಫೇಲ್ ಸೇರಿದಂತೆ ಹಲವು ಭಾರೀ ಮಟ್ಟದ ಹಗರಣಗಳನ್ನು ಹಾಗೂ ತನ್ನ ಸರಕಾರ ಎಲ್ಲಾ ರಂಗಗಳಲ್ಲೂ ಅತ್ಯಂತ ಕೆಟ್ಟ ರೀತಿಯಲ್ಲಿ ವಿಫಲವಾಗಿರುವ ಸತ್ಯಗಳನ್ನು ಜನರಿಂದ ಮರೆಮಾಚಿ ಮತ್ತೊಂದು ಅವಧಿಗೆ ಅಧಿಕಾರಕ್ಕೇರಲು ಇದನ್ನೆಲ್ಲಾ ವ್ಯವಸ್ಥಿತವಾಗಿ ಯೋಜಿಸಿ ಬಳಸತೊಡಗಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಹಲವು ಮಾಧ್ಯಮಗಳೂ ಸಂಘ ಪರಿವಾರ ಹಾಗೂ ಮೋದಿಯ ಈ ಕಾರ್ಯಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿರುವುದು ಕೂಡ ಎದ್ದು ಕಾಣುವ ವಿಚಾರ.

ಆದರೆ ಅವರೆಣಿಸಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯದೇ ಪಾಕಿಸ್ತಾನ ಭಾರತದ ವೈಮಾನಿಕ ಪಡೆಯ ವಿಂಗ್ ಕಮಾಂಡರ್ ಒಬ್ಬರನ್ನು ಸೆರೆಹಿಡಿದು ನಂತರ ಶಾಂತಿ ಸ್ಥಾಪನೆಯ ಉದ್ದೇಶದಿಂದ ಬಿಡುಗಡೆ ಮಾಡಿರುವುದಾಗಿ ಹೇಳುವ ಮೂಲಕ ರಾಜತಾಂತ್ರಿಕವಾಗಿ ಮೇಲುಗೈ ಸಾಧಿಸಿತು. ಸೆರೆಸಿಕ್ಕ ವಿಂಗ್ ಕಮಾಂಡರ್ ಪಾಕಿಸ್ತಾನ ತನ್ನನ್ನು ಗೌರವಯುತವಾಗಿ ನೋಡಿಕೊಂಡು ಗುಂಪುದಾಳಿಯಿಂದ ರಕ್ಷಿಸಿತು ಎಂದು ಹೇಳಿಕೆ ನೀಡಿದ್ದು ಅದಕ್ಕೆ ಮತ್ತೂ ಪೂರಕವಾಯಿತು. ನಂತರ ಭಾರತಕ್ಕೆ ಬೆದರಿ ವಿಂಗ್ ಕಮಾಂಡರ್‌ರನ್ನು ಬಿಡುಗಡೆ ಮಾಡಬೇಕಾಯಿತು ಎಂದು ಸಂಘಪರಿವಾರ ಹಾಗೂ ಬಿಜೆಪಿಯ ಭಕ್ತರು ಊಳಿಡತೊಡಗಿದರೆ ಜಿನೇವಾ ಒಪ್ಪಂದದ ಕಾರಣದಿಂದಾಗಿ ಪಾಕಿಸ್ತಾನ ಬಂಧಿತ ವಿಂಗ್ ಕಮಾಂಡರ್ ಅನ್ನು ಬಿಡುಗಡೆ ಮಾಡಿತು ಎಂದು ಹಲವರು ಹೇಳತೊಡಗಿದರು. ಆದರೆ ವಾಸ್ತವದಲ್ಲಿ ಪಾಕಿಸ್ತಾನ ತನ್ನ ರಾಜತಾಂತ್ರಿಕ ನಡೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಮೇಲುಗೈ ಸಾಧಿಸಿತೆಂದೇ ಹೇಳಬೇಕು. ಜಿನೇವಾ ಒಪ್ಪಂದ ಇದ್ದರೂ ಅದನ್ನು ಅಮೆರಿಕ, ಇಸ್ರೇಲ್, ರಶ್ಯಾ ಸೇರಿದಂತೆ ಯಾರೂ ಪಾಲಿಸುತ್ತಿಲ್ಲ ಎನ್ನುವುದೇ ಈಗಿರುವ ಸತ್ಯ. ಇದಕ್ಕೆ ಫೆಲೆಸ್ತೀನ್, ಅಫ್ಘಾನಿಸ್ತಾನ, ಇರಾಕ್, ಲಿಬಿಯಾ, ಚೆಚೆನ್ಯಾ ಸೇರಿದಂತೆ ಹಲವಾರು ಉದಾಹರಣೆಗಳಿವೆ. ಜೊತೆಗೆ ವಿಶ್ವ ಸಂಸ್ಥೆಯೇ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿ ಅದರ ಪ್ರಧಾನ ಪ್ರಾಯೋಜಕ ಅಮೆರಿಕವೇ ಅದನ್ನು ಕಡೆಗಣಿಸಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಭಾರತದ ದಾಳಿ ಹಾಗೂ ಸಮರ್ಥನೆಗಳಿಗೆ ಸರಿಯಾದ ಕಾರಣ ಹಾಗೂ ಪುರಾವೆಗಳನ್ನು ನೀಡಲು ಮೋದಿ ಸರಕಾರಕ್ಕೆ ಸಾಧ್ಯವಾಗದೇ ಹೋಯಿತು. ಅಲ್ ಝಝೀರಾ, ಬಿಬಿಸಿ, ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್ ಸೇರಿದಂತೆ ಅಂತರ್‌ರಾಷ್ಟ್ರೀಯ ಮಾಧ್ಯಮಗಳೂ ಕೂಡ ಭಾರತ ಪಾಕಿಸ್ತಾನದ ಮೇಲೆ ಮಾಡಿದ ದಾಳಿ ಹಾಗೂ ಉಂಟುಮಾಡಿದ ಹಾನಿಯ ಬಗ್ಗೆ ಯಾವುದೇ ಪುರಾವೆಗಳಿಲ್ಲದಿರುವ ವಿಚಾರವನ್ನು ಆಧಾರ ಸಹಿತ ಮುಂದಿಟ್ಟಿವೆ. ಮೊದಲಿಗೆ ಸೇನಾ ಕ್ರಮವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದ ವಿರೋಧ ಪಕ್ಷಗಳಲ್ಲಿ ನಂತರ ಕೆಲವು ಮೋದಿ ಸರಕಾರ ಸೇನೆಯನ್ನು ಹಾಗೂ ಪುಲ್ವಾಮ ದಾಳಿಯನ್ನು ತನ್ನ ಚುನಾವಣಾ ಗೆಲುವಿಗಾಗಿ ಬಳಸುತ್ತಿರುವುದನ್ನು ಟೀಕೆ ಮಾಡತೊಡಗಿದವು.

ವಾಸ್ತವದಲ್ಲಿ ಸಿಪಿಐ (ಎಂ) ಸೇರಿದಂತೆ ವಿರೋಧ ಪಕ್ಷಗಳೆಲ್ಲಾ ಪಾಕಿಸ್ತಾನದ ಪ್ರದೇಶಗಳ ಮೇಲೆ ನಡೆಸಿದ್ದೆನ್ನಲಾದ ಭಾರತದ ವೈಮಾನಿಕ ದಾಳಿಯನ್ನು ಬೆಂಬಲಿಸಿ ಸ್ವಾಗತಿಸಿ, ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಸರಕಾರದ ಜೊತೆಗೆ ತಾವಿದ್ದೇವೆಂದು ದೊಡ್ಡದಾಗಿ ಘೋಷಿಸಿ ಜನಸಾಮಾನ್ಯರ ಭಾವನೆಗಳನ್ನು ತಮ್ಮ ಪರವಾಗಿ ತಿರುಗಿಸಲು ಪ್ರಯತ್ನಿಸಿದವು. ಆ ಮೂಲಕ ಜನ ಸಾಮಾನ್ಯರನ್ನು ಯಾಮಾರಿಸಿ ಪಾಕಿಸ್ತಾನ ವಿರೋಧಿ ಯುದ್ಧ ಸನ್ನಿಯ ಖೆಡ್ಡಕ್ಕೆ ದೂಡುವ ಸಂಘ ಪರಿವಾರ ಹಾಗೂ ಮೋದಿಯ ಪ್ರಯತ್ನಗಳಿಗೆ ತಮ್ಮ ಸಾಥ್ ಅನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೊಟ್ಟವು. ಮೋದಿ ಮಾಡಿದ ನೋಟು ರದ್ದತಿ ವಿಚಾರದಲ್ಲೂ ಈ ಎಲ್ಲಾ ವಿರೋಧ ಪಕ್ಷಗಳು ಆರಂಭದಲ್ಲಿ ಬೆಂಬಲಿಸಿ ನಂತರ ಅಡ್ಡಗೋಡೆಯ ಮೇಲೆ ದೀಪವಿಡುವ ಮಾತುಗಳನ್ನು ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಇಂತಹ ಹಲವು ವಿಚಾರಗಳಲ್ಲಿ ವಿರೋಧ ಪಕ್ಷಗಳ ನಡೆಗಳು ಇದೇ ರೀತಿಯಲ್ಲೇ ಮುಂದುವರಿದುಕೊಂಡು ಬಂದಿರುವುದನ್ನು ನಾವು ಗಮನಿಸಬಹುದು. ಅಂದರೆ ಸಂಘ ಪರಿವಾರ ಹಾಗೂ ಮೋದಿ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಜನಸಾಮಾನ್ಯರನ್ನು ಸಂಘಟಿಸುವ ಬದಲು ಈ ಎಲ್ಲಾ ಪಕ್ಷಗಳು ಸರಕಾರದ ಅಂತಹ ನೀತಿಗಳನ್ನು ನೇರವಾಗಿ ಬೆಂಬಲಿಸುವುದು ಇಲ್ಲವೇ ಸ್ಪಷ್ಟವಾದ ನಿಲುವುಗಳನ್ನು ತಾಳದಿರುವುದು, ಸುಮ್ಮನಿದ್ದುಬಿಡುವುದು, ವಿರೋಧಿಸುವಂತೆ ನಾಟಕವಾಡುವುದು, ಜನಸಾಮಾನ್ಯರು ಸ್ವಯಂಪ್ರೇರಿತರಾಗಿ ವಿರೋಧಿಸಿದರೂ ಅದು ಪರಿಣಾಮಕಾರಿಯಾಗದಂತೆ ನೋಡಿಕೊಳ್ಳುವುದು ಹೀಗೆಲ್ಲಾ ಮಾಡುತ್ತಾ ಬಂದು ಓಟು ಲೆಕ್ಕಾಚಾರದ ವಿಚಾರದ ಮೇಲೆ ಮಾತ್ರ ಗಮನ ನೀಡುವ ಪರಿಪಾಠ ಇಟ್ಟುಕೊಂಡಿರೋದು ಗೊತ್ತಾಗುವ ವಿಚಾರ.

ಭಾರತವಾಗಲೀ ಪಾಕಿಸ್ತಾನವಾಗಲೀ ಪೂರ್ಣ ಪ್ರಮಾಣದ ಯುದ್ಧಕ್ಕೆ ಈಗ ತಯಾರಿಲ್ಲ ಎನ್ನುವುದೇ ವಾಸ್ತವ. ನೆರೆಯ ಚೀನಾವಾಗಲೀ, ಅಮೆರಿಕವಾಗಲೀ, ರಶ್ಯಾವಾಗಲೀ ಭಾರತ ಪಾಕ್ ಯುದ್ಧಕ್ಕಿಳಿಯುವುದನ್ನು ಸದ್ಯಕ್ಕೆ ಬೆಂಬಲಿಸುವುದಿಲ್ಲ. ಆದರೆ ಎರಡೂ ದೇಶಗಳ ಆಳುವ ಶಕ್ತಿಗಳಿಗೆ ಆಯಾ ದೇಶಗಳ ಜನಸಮೂಹವನ್ನು ಯಾಮಾರಿಸಿ ಹಿಡಿದಿಡಲು ಕಾಶ್ಮೀರದಂತಹ ಸಮಸ್ಯೆಗಳು, ವೈರಿ ದೇಶಗಳೆಂಬ ಗುಮ್ಮಗಳು, ಯುದ್ಧಗಳೆಂಬ ಸನ್ನಿಗಳು ಅಗತ್ಯ. ಅವುಗಳನ್ನು ನಿರಂತರವಾಗಿ ಕಾಪಾಡುತ್ತಾ ಸಂದರ್ಭೋಚಿತವಾಗಿ ಬಳಸಿಕೊಳ್ಳುತ್ತಾ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಾ ಬರುತ್ತಿದ್ದಾರೆ. ಇಂತಹ ಕುತಂತ್ರಗಳನ್ನು ಜನಸಾಮಾನ್ಯರು ಮುಂಬರುವ ದಿನಗಳಲ್ಲಿ ಅರಿತುಕೊಂಡು ಈ ರೀತಿಯ ಬೆಳವಣಿಗೆಗಳ ಬಗ್ಗೆ ಸರಿಯಾದ ನಿಲುವು ತಾಳುತ್ತಾ, ಆಳುವವರು ತೋಡುವ ಖೆಡ್ಡಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬೀಳದೆ, ಎಚ್ಚರಿಕೆ ವಹಿಸಿ ಕ್ರಿಯಾಶೀಲರಾಗಬೇಕಾದ ಅಗತ್ಯ ತುಂಬಾ ಇದೆ. ಯಾಕೆಂದರೆ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಆಳುವ ಶಕ್ತಿಗಳು ಎಂತಹ ದುಷ್ಟ ಕುತಂತ್ರಗಳಿಗೂ ತಯಾರಾಗುತ್ತವೆ ಎನ್ನುವುದನ್ನು ಮರೆಯಬಾರದು. ಉದ್ವ್ವಿಗ್ನತೆ, ಕೋಮುದ್ವೇಷ ಗಲಭೆ, ದಾಳಿ, ಸೇನಾ ವೈಭವೀಕರಣ, ಸೈನಿಕರ ಮಾರಣಹೋಮ, ಯುದ್ಧ ಸನ್ನಿಯ ಸೃಷ್ಟಿ, ಹೀಗೆ ಎಲ್ಲವನ್ನೂ ಸಂದರ್ಭೋಚಿತವಾಗಿ ಬಳಸುತ್ತಾ ನಿರಂಕುಶತೆಯಡಿ ಜನಸಾಮಾನ್ಯರನ್ನು ಸಿಲುಕಿಸಲು ಆ ಶಕ್ತಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ಮತ್ತೂ ಹೆಚ್ಚಾಗಲಿವೆ ಎನ್ನುವುದನ್ನೂ ಗಮನದಲ್ಲಿಡಬೇಕಾಗಿದೆ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News