ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಾಗಿ ಸೌಮ್ಯಾ ಸ್ವಾಮಿನಾಥನ್ ನೇಮಕ

Update: 2019-03-07 17:52 GMT

ಹೊಸದಿಲ್ಲಿ, ಮಾ.7: ಭಾರತದ ಸೌಮ್ಯಾ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ದ ಮುಖ್ಯ ವಿಜ್ಞಾನಿಯಾಗಿ ನೇಮಕಗೊಂಡಿದ್ದಾರೆ. ಇವರು ಈ ಹುದ್ದೆಗೆ ನೇಮಕವಾಗಿರುವ ಪ್ರಥಮ ಭಾರತೀಯರಾಗಿದ್ದಾರೆ. ಡಬ್ಲ್ಯುಎಚ್‌ಒ ಸಂಸ್ಥೆಯನ್ನು ಆಧುನೀಕರಣಗೊಳಿಸಲು ಮತ್ತು ಸಶಕ್ತಗೊಳಿಸಲು ಸಂಸ್ಥೆಯ ಇತಿಹಾಸದಲ್ಲೇ ಕೈಗೊಂಡಿರುವ ವ್ಯಾಪಕ ಸುಧಾರಣೆ ಇದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಬ್ಲ್ಯುಎಚ್‌ಒದ ವೈಜ್ಞಾನಿಕ ಕಾರ್ಯಗಳಿಗೆ ಉತ್ತೇಜನ ನೀಡಲು ಹಾಗೂ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಗುಣಮಟ್ಟ ಹಾಗೂ ಸ್ಥಿರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ವಿಭಾಗಕ್ಕೆ ಮುಖ್ಯಸ್ಥೆಯನ್ನಾಗಿ ಸೌಮ್ಯಾ ಸ್ವಾಮಿನಾಥನ್‌ರನ್ನು ನೇಮಿಸಲಾಗಿದೆ . ಮಹತ್ವದ ಸಂಶೋಧನಾ ಕಾರ್ಯದ ಪ್ರಯೋಜವನ್ನು ಸದಸ್ಯ ರಾಷ್ಟ್ರಗಳು ಮೊದಲು ಪಡೆಯುವಂತೆ ಖಾತರಿಪಡಿಸಲೂ ಈ ನೇಮಕ ನಡೆಸಲಾಗಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

2017ರ ಅಕ್ಟೋಬರ್‌ನಲ್ಲಿ ಸೌಮ್ಯ ಸ್ವಾಮಿನಾಥನ್‌ರನ್ನು ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾ ನಿರ್ದೇಶಕರನ್ನಾಗಿ (ಡಿಡಿಜಿ) ನೇಮಕಗೊಳಿಸಲಾಗಿತ್ತು. ಇದಕ್ಕೂ ಮೊದಲು ಅವರು ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಡಿಡಿಜಿ ಹುದ್ದೆಗೆ ಮತ್ತೊಬ್ಬ ಮಹಿಳೆ ಸುಸಾನಾ ಜೇಕಬ್‌ ರನ್ನು ನೇಮಿಸಲಾಗಿದೆ.

ಸುಸಾನಾ ಇದುವರೆಗೆ ಡಬ್ಲ್ಯುಎಚ್‌ಒದ ಯುರೋಪ್ ವಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಭಾರತದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಸುದೀರ್ಘವಾಗಿ ಕಾರ್ಯ ನಿರ್ವಹಿಸಿರುವ ಸೌಮ್ಯಾ ಸ್ವಾಮಿನಾಥನ್, ಎಚ್‌ಐವಿ, ಟಿಬಿ ಮುಂತಾದ ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿರುವ ವಿಶ್ವಬ್ಯಾಂಕ್, ಡಬ್ಲುಎಚ್‌ಒ, ಯುಎನ್, ಯುನಿಸೆಫ್ ಮುಂತಾದ ಜಾಗತಿಕ ತಂಡದಲ್ಲೂ ಕಾರ್ಯನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News