ಫ್ರಾನ್ಸ್‌ನಲ್ಲಿ ನಿಲ್ಲದ ಜನಸಾಮಾನ್ಯರ ಬೇಗುದಿ
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ದೊಡ್ಡ ಕಾರ್ಪೊರೇಟುಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಫ್ರಾನ್ಸ್‌ನ ಜನಸಾಮಾನ್ಯರ ಬದುಕುಗಳನ್ನು ನಾಶಮಾಡುತ್ತಾ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಜನಸಮೂಹದ ಕೈಗೆಟಕದ ರೀತಿಯಲ್ಲಿ ಏರುವಂತೆ ಮಾಡಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆಯ ಭಾರವನ್ನು ಹೆಚ್ಚು ಮಾಡುತ್ತಾ ಅದೇ ವೇಳೆಯಲ್ಲಿ ಕಾರ್ಪೊರೇಟುಗಳ ಮೇಲಿನ ತೆರಿಗೆಯನ್ನು ಗೌಣವಾಗಿಸಿ ಭಾರೀ ಮಟ್ಟದಲ್ಲಿ ಇಳಿಸಿದ್ದಾರೆ. ಜನಸಾಮಾನ್ಯರ ದುಡಿಮೆಯ ಹಣವನ್ನು ನೇರವಾಗಿ ಕಾರ್ಪೊರೇಟುಗಳ ತಿಜೋರಿ ಸೇರುವಂತೆ ಮಾಡಿಟ್ಟಿದ್ದಾರೆ. ಮ್ಯಾಕ್ರಾನ್ ಕೂಡಲೇ ರಾಜೀನಾಮೆ ಕೊಟ್ಟು ಹುದ್ದೆಯಿಂದ ಕೆಳಗಿಳಿಯಬೇಕು ಎನ್ನುವುದೇ ಬಹುತೇಕ ಪ್ರತಿಭಟನಾಕಾರರ ಹಕ್ಕೊತ್ತಾಯವಾಗಿದೆ.
ಫ್ರಾನ್ಸ್‌ನಲ್ಲಿ ಕಳೆದ ವರ್ಷದ ಕೊನೆಯ ಭಾಗದಿಂದ ಅಂದರೆ ನವೆಂಬರ್ ನಿಂದ ಶುರುವಾದ ಜನರ ಪ್ರತಿರೋಧ 2019ರ ಮಾರ್ಚ್ ಕಳೆಯುತ್ತಿದ್ದರೂ ನಿಂತಿಲ್ಲ. ಇಡೀ ರಾಷ್ಟ್ರವೇ ಪ್ರಕ್ಷುಬ್ದ ಸ್ಥಿತಿಗೆ ಈಡಾಗಿದೆ. ಹೆದ್ದಾರಿಗಳು, ಶಾಲಾ ಕಾಲೇಜುಗಳು ಸರಿಯಾಗಿ ಕಾರ್ಯನಿರ್ವಹಿಸಲಾಗದಂತಾಗಿದೆ. ವ್ಯಾಪಾರ ವಹಿವಾಟುಗಳು ಶೇ. 20ರಿಂದ ಶೇ. 50ಕ್ಕೂ ಮೀರಿ ಇಳಿದು ಹೋಗಿದೆ. ರಾಷ್ಟ್ರಾದ್ಯಂತ ಸಾವಿರಾರು ತೈಲ ಬಂಕರ್‌ಗಳು ಕಾರ್ಯನಿರ್ವಹಿಸಲಾಗದೆ ಹೋಗಿವೆ. ಟ್ರಕ್ಕುಗಳ ಫೆಡರೇಷನ್ ಪ್ರಕಾರ ಪ್ರತಿಭಟನೆಗಳಿಂದಾಗಿ ಟ್ರಕ್ಕುಗಳು ರಸ್ತೆಗಿಳಿಯದ ಸ್ಥಿತಿ ನಿರ್ಮಾಣವಾಗಿ ನೂರಾರು ದಶಲಕ್ಷ ಯೂರೋಗಳು ನಷ್ಟವಾಗಿದೆ. ಫ್ರಾನ್ಸ್‌ನ ಒಂದು ಮುಖ್ಯ ಉದ್ದಿಮೆಯಾದ ಪ್ರವಾಸೋದ್ಯಮ ನೆಲಕಚ್ಚಿದೆ. ಅಂದರೆ ಐದು ತಿಂಗಳುಗಳ ಕಾಲದಿಂದ ಫ್ರಾನ್ಸ್‌ನ ಲಕ್ಷಗಟ್ಟಲೆ ಜನಸಮೂಹ ಬೀದಿ ಪ್ರತಿರೋಧಗಳಲ್ಲೇ ನಿರತವಾಗಿದೆ. ಈ ಪ್ರತಿಭಟನೆಗಳಲ್ಲಿ ತೊಡಗಿರುವವರು ಬಹುತೇಕ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು. ಹೈಸ್ಕೂಲು, ಕಾಲೇಜು ವಿದ್ಯಾರ್ಥಿ ಸಮೂಹವೂ ಇವರೊಂದಿಗೆ ಬೀದಿಗೆ ಇಳಿದು ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ಗ್ರಾಮೀಣ ಭಾಗದಿಂದ ಆರಂಭವಾದ ಹೋರಾಟ ಇಡೀ ಫ್ರಾನ್ಸ್‌ನಾದ್ಯಂತ ವ್ಯಾಪಿಸಿ ಬಿಟ್ಟಿದೆ. ಶಮನವಾಗುತ್ತಿಲ್ಲ. ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಒಂದೆನಿಸಿಕೊಂಡಿದ್ದ, ಫ್ರಾನ್ಸ್‌ನ ಜನಸಾಮಾನ್ಯರು ಈ ಪರಿಯ ತಿಂಗಾಳಾನುಗಟ್ಟಲೆ ಹೋರಾಟಕ್ಕೆ ಈಗ ನಿಂತಿದ್ದಾರೆಂದರೆ ಅಲ್ಲಿ ಮುಂದುವರಿದವರು ಯಾರಾಗಿದ್ದರು ಎನ್ನುವುದನ್ನು ಗ್ರಹಿಸಬಹುದು. ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಹದಗೆಡಿಸಿ ಇಡಲಾಗಿದೆ ಎನ್ನುವುದನ್ನು ಊಹಿಸಬಹುದು.
ಹಳದಿ ಅಂಗಿ (ಯೆಲ್ಲೋ ವೆಸ್ಟ್ ) ಪ್ರತಿಭಟನೆಯೆಂದು ಹೆಸರಾದ ಈ ಪ್ರತಿಭಟನೆ ಸದ್ಯಕ್ಕೆ ತಣ್ಣಗಾಗುವ ಸ್ಥಿತಿ ಕಾಣುತ್ತಿಲ್ಲ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ದೊಡ್ಡ ಕಾರ್ಪೊರೇಟುಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಫ್ರಾನ್ಸ್‌ನ ಜನಸಾಮಾನ್ಯರ ಬದುಕುಗಳನ್ನು ನಾಶಮಾಡುತ್ತಾ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಜನಸಮೂಹದ ಕೈಗೆಟುಕದ ರೀತಿಗಳಲ್ಲಿ ಏರುವಂತೆ ಮಾಡಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆಯ ಭಾರವನ್ನು ಹೆಚ್ಚು ಮಾಡುತ್ತಾ ಅದೇ ವೇಳೆಯಲ್ಲಿ ಕಾರ್ಪೊರೇಟುಗಳ ಮೇಲಿನ ತೆರಿಗೆಯನ್ನು ಗೌಣವಾಗಿಸಿ ಭಾರೀ ಮಟ್ಟದಲ್ಲಿ ಇಳಿಸಿದ್ದಾರೆ. ಜನಸಾಮಾನ್ಯರ ದುಡಿಮೆಯ ಹಣವನ್ನು ನೇರವಾಗಿ ಕಾರ್ಪೊರೇಟುಗಳ ತಿಜೋರಿ ಸೇರುವಂತೆ ಮಾಡಿಟ್ಟಿದ್ದಾರೆ. ಮ್ಯಾಕ್ರಾನ್ ಕೂಡಲೇ ರಾಜೀನಾಮೆ ಕೊಟ್ಟು ಹುದ್ದೆಯಿಂದ ಕೆಳಗಿಳಿಯಬೇಕು ಎನ್ನುವುದೇ ಬಹುತೇಕ ಪ್ರತಿಭಟನಾಕಾರರ ಹಕ್ಕೊತ್ತಾಯವಾಗಿದೆ. ಆದರೆ ಮಾಜಿ ಹಣಹೂಡಿಕೆದಾರ ಹಾಗೂ ಬ್ಯಾಂಕರ್ ಆಗಿರುವ ಮ್ಯಾಕ್ರಾನ್ ತನ್ನ ಅಧ್ಯಕ್ಷ ಸ್ಥಾನವನ್ನು ಹೇಗಾದರೂ ಉಳಿಸಿಕೊಳ್ಳಲು ಎಲ್ಲಾ ಕಸರತ್ತುಗಳನ್ನೂ ಮಾಡುತ್ತಾ ಬರುತ್ತಿದ್ದಾರೆ. ತನ್ನ ಪಡೆಗಳ ಮೂಲಕ ದಮನವನ್ನು ಮಾಡುತ್ತಾ ನೂರಾರು ಜನರನ್ನು ಸೆರೆಮನೆಗೆ ತಳ್ಳಿದ್ದಾರೆ. ಹಲವಾರು ಸಾವು ನೋವುಗಳಾಗಿವೆ.
ಅಲ್ಲದೆ ಈಗ ಸೈನ್ಯವನ್ನು ನಾಗರಿಕರ ಮೇಲೆ ಬಿಟ್ಟಿದ್ದಾರೆ. ಸೇನೆಗೆ ಪ್ರತಿಭಟನಾ ನಿರತರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ನೀಡಲಾಗಿದೆ. ಅಂದರೆ ಸೇನೆಯನ್ನು ನೇರವಾಗಿ ನಾಗರಿಕರ ಮೇಲೆ ಛೂ ಬಿಡಲಾಗಿದೆ. ಇದನ್ನು ಆಕ್ಷೇಪಿಸಿದವರಿಗೆ ಸುಳ್ಳುಗಳನ್ನು ಹೇಳುತ್ತಾ ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮ್ಯಾಕ್ರಾನ್ ಎಡವೂ ಅಲ್ಲದ ಬಲವೂ ಅಲ್ಲದ ಮಧ್ಯಮ ಮಾರ್ಗಿ ಎಂದು ಹೇಳಿಕೊಂಡು ಜನರಿಗೆ ಅಭಿವೃದ್ದಿಯ ಭಾರೀ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು. ಆನಂತರ ಅವರ ಎಲ್ಲಾ ಕಾರ್ಯಗಳು ಕೆಲವೇ ಜನ ಕಾರ್ಪೊರೇಟುಗಳಿಗಾಗಿ ಮಾತ್ರ ಮೀಸಲಾಗಿತ್ತು. ಅವರಿಗಾಗಿಯೇ ತಾವು ಫ್ರಾನ್ಸ್‌ನ ಅಧ್ಯಕ್ಷರಾದವರು ಎನ್ನುವಂತೆ ವರ್ತಿಸತೊಡಗಿದ್ದರು. ಅಪ್ಪಟ ಜನ ವಿರೋಧಿಯಾಗಿ ಇಡೀ ಫ್ರಾನ್ಸ್‌ನ ಜನಸಾಮಾನ್ಯರನ್ನು ಮೊದಲಿಗಿಂತಲೂ ತೀವ್ರವಾದ ಸಂಕಷ್ಟಗಳಿಗೆ ದೂಡಿ ಬಿಟ್ಟರು. ಅಲ್ಲಿನ ಆಳುವ ಶಕ್ತಿಗಳ ಸೇವೆಗೆ ಸಂಪೂರ್ಣವಾಗಿ ಟೊಂಕ ಕಟ್ಟಿ ನಿಂತುಬಿಟ್ಟರು.
ಎಲ್ಲಾ ಟೀಕೆಗಳನ್ನು ಮಟ್ಟಹಾಕುವ ಕಾರ್ಯ ಮಾಡತೊಡಗಿದರು. ಇಸ್ರೇಲಿನ ಜಿಯೋನಿಸ್ಟ್ ಜನಾಂಗೀಯವಾದಿ ನೀತಿಗಳನ್ನು ಬೆಂಬಲಿಸುತ್ತಾ ಅದರ ಟೀಕಾಕಾರರ ಮೇಲೆ ಕ್ರಮ ಕೈಗೊಳ್ಳಲು ತೊಡಗಿದರು. ಹಳದಿ ಅಂಗಿ ಪ್ರತಿಭಟನಾಕಾರರು ಇಸ್ರೇಲಿ ಜಿಯೋನಿಸ್ಟ್ ಜನಾಂಗೀಯವಾದವನ್ನು ಪ್ರಬಲವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. ಇದನ್ನು ವಿರೋಧಿಸಿದ ಅಧ್ಯಕ್ಷ ಮ್ಯಾಕ್ರಾನ್ ಇಸ್ರೇಲಿನ ಜನಾಂಗೀಯವಾದವನ್ನು ಟೀಕಿಸುವವರ ಮೇಲೆ ಕ್ರಮಕ್ಕೆ ಮುಂದಾದರು. ಜಿಯೋನಿಸ್ಟ್ ಜನಾಂಗೀಯವಾದವನ್ನು ಟೀಕಿಸುವುದೆಂದರೆ ಅದು ಸೆಮೆಟಿಕ್ ವಾದವನ್ನು ಟೀಕಿಸುವುದಕ್ಕೆ ಸಮವೆನ್ನುವ ಮಟ್ಟಕ್ಕೆ ಅವರು ತಮ್ಮ ನಿಲುವು ತಾಳಿ ಆ ಬಗ್ಗೆ ಕಾನೂನು ರಚಿಸಲು ಮುಂದಾಗಿದ್ದಾರೆ. ಕಕೇಶಿಯನ್ ಜನಾಂಗಕ್ಕೆ ಸೇರಿರುವ ಹಿಬ್ರೂ ಸೇರಿದಂತೆ ಸೆಮೆಟಿಕ್ ಭಾಷೆಗಳನ್ನು ಮಾತನಾಡುವವರನ್ನು ಸೆಮೆಟಿಕ್ ಎನ್ನಲಾಗುತ್ತದೆ. ಈಗಾಗಲೇ ಸೆಮಿಟಿಕ್ ವಾದವನ್ನು ಟೀಕಿಸಲು ಅಲ್ಲಿನ ಕಾನೂನಿನ ಪ್ರಕಾರ ನಿರ್ಬಂಧವಿದೆ.
ಮೊದಲು ಸಾಪೇಕ್ಷವಾಗಿ ಮುಕ್ತ ಅಭಿಪ್ರಾಯ ವಿನಿಮಯಗಳಿಗೆ ಅವಕಾಶವಿದ್ದ ರಾಷ್ಟ್ರದಲ್ಲಿ ಈಗ ಅವುಗಳಿಗೆ ಹಲವು ಕುಂಟು ನೆಪಗಳ ಹೆಸರಿನಲ್ಲಿ ನಿರ್ಬಂಧಗಳು ಬಿಗಿಯಾಗುತ್ತಿವೆ. ಇಸ್ರೇಲ್ ಫೆಲೆಸ್ತೇನಿನ ಮೇಲೆ ಮಾಡುತ್ತಿರುವ ದಾಳಿ ಹಾಗೂ ಹಾನಿಗಳನ್ನು ಖಂಡಿಸಿ ಮಾತನಾಡಿದರೆ ಜೈಲು ಎನ್ನುವ ಮಟ್ಟಕ್ಕೆ ಫ್ರಾನ್ಸ್‌ನ ತಥಾಕಥಿತ ಪ್ರಜಾಪ್ರಭುತ್ವದ ಇಂದಿನ ಸ್ಥಿತಿಯಾಗಿದೆ. ಇವೆಲ್ಲದರ ಜೊತೆಗೆ ಇಸ್ಲಾಮಿಕ್ ಧ್ವೇಷವನ್ನು ರಾಷ್ಟ್ರಾದ್ಯಂತ ಹರಿಬಿಡಲಾಗಿದೆ. ಜಾಗತಿಕವಾಗಿ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಾ ಜಗತ್ತಿನ ಜನಸಾಮಾನ್ಯರಲ್ಲಿ ಮುಸ್ಲಿಮರ ಬಗ್ಗೆ ಭಯವನ್ನು ಹುಟ್ಟಿಸಿ (ಇಸ್ಲಾಮೋಫೋಬಿಯಾ) ಅವರ ವಿರುದ್ಧ ದಾಳಿಗಳನ್ನು ಸಂಘಟಿಸುವಲ್ಲಿ ಅಮೆರಿಕದೊಂದಿಗೆ ಫ್ರಾನ್ಸ್ ಕೂಡ ಮುಂಚೂಣಿಯಲ್ಲಿದ್ದ ರಾಷ್ಟ್ರವೆನ್ನುವುದನ್ನು ಇಲ್ಲಿ ಗುರುತಿಸಬೇಕಾದ ಅಗತ್ಯವಿದೆ. ಈ ಎಲ್ಲಾ ನಡೆಗಳು ಅಲ್ಲಿನ ಆಳುವ ಶಕ್ತಿಗಳನ್ನು ಜನರ ನೇರದಾಳಿಗಳಿಂದ ರಕ್ಷಿಸಲು ಮಾಡಿದ ಕಸರತ್ತುಗಳಾಗಿದ್ದವು ಎನ್ನುವುದು ಈಗ ಪೂರ್ಣವಾಗಿ ಬಯಲಿಗೆ ಬಂದಿರುವ ವಿಚಾರವಾಗಿದೆ. ಆದರೆ ಅಂತಹ ಯಾವ ಪ್ರಯತ್ನಗಳೂ ಕೂಡ ಫ್ರಾನ್ಸ್‌ನ ಇಂದಿನ ಸ್ಫೋಟಕ ಪರಿಸ್ಥಿತಿ ಬಾರದಂತೆ ತಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ನಾವು ಕಾಣಬಹುದಾಗಿದೆ.
ನಿರುದ್ಯೋಗ ಸಮಸ್ಯೆ ಮುಗಿಲು ಮುಟ್ಟಿ ಜನರ ತಲಾ ಆದಾಯ ತೀವ್ರ ಕುಸಿತಕ್ಕೊಳಗಾಗಿದೆ. ಅದೇ ವೇಳೆ ಕೆಲವೇ ಕಾರ್ಪೊರೇಟುಗಳು ಲಾಭದ ಮೇಲೆ ಲಾಭ ಮಾಡುತ್ತಾ ಸಂಪತ್ತಿನ ಮೇಲೆ ಏಕಸ್ವಾಮ್ಯವನ್ನು ಸಾಧಿಸಿವೆ. ಮ್ಯಾಕ್ರಾನ್ ಸರಕಾರ ನೇರವಾಗಿ ಈ ಕಾರ್ಪೊರೇಟುಗಳ ಬೆಂಬಲಕ್ಕೆ ನಿಂತು ಜನಸಾಮಾನ್ಯರ ಮೇಲೆ ಇನ್ನಿಲ್ಲದ ಹೊರೆಗಳನ್ನು ಹೊರಿಸುತ್ತಿದೆ ಎನ್ನುವುದು ಹಳದಿ ಅಂಗಿ ಪ್ರತಿಭಟನಾಕಾರರ ಆಕ್ರೋಶವಾಗಿದೆ. ಹಾಗಾಗಿ ಅಧ್ಯಕ್ಷ ಮ್ಯಾಕ್ರಾನ್ ಕೂಡಲೇ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕೆಂಬ ಆಗ್ರಹ ದಿನೇ ದಿನೇ ಬಲಗೊಳ್ಳುತ್ತಿದೆ. ಹಳದಿ ಪ್ರತಿಭಟನಾಕಾರರ ನಾಯಕರೆನಿಸಿಕೊಂಡ ಕೆಲವು ಅವಕಾಶವಾದಿ ರಾಜಿಕೋರರು ಸರಕಾರದೊಂದಿಗೆ ರಾಜಿಯಾಗಲು ಬಯಸುತ್ತಿದ್ದರೂ ಪ್ರತಿಭಟನಾಕಾರರು ಅದನ್ನು ಒಪ್ಪುತ್ತಿಲ್ಲ. ಹಾಗಾಗಿ ಅಂತಹ ಅವಕಾಶವಾದಿ ರಾಜಿಕೋರರನ್ನು ಬಳಸಿಕೊಂಡು ಪ್ರತಿಭಟನೆಯನ್ನು ತಣ್ಣಗಾಗಿಸುವ ಸರಕಾರದ ಪ್ರಯತ್ನಕ್ಕೆ ಫಲ ಇದುವರೆಗೆ ಸಿಕ್ಕಿಲ್ಲ.
ಅಧ್ಯಕ್ಷ ಮ್ಯಾಕ್ರಾನ್‌ಗೆ ರಾಜೀನಾಮೆ ನೀಡಲು ಗಡುವು ನೀಡಿದ್ದ ಪ್ರತಿಭಟನಾನಿರತ ಜನಸಮೂಹ ನಂತರ ಗಡುವು ಮುಗಿದ ಕೂಡಲೇ ಕಳೆದ ವಾರ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಸೇರಿದಂತೆ ಎಲ್ಲೆಡೆ ಭಾರೀ ಪ್ರತಿಭಟನಾ ಪ್ರದರ್ಶನಗಳನ್ನು ಸಂಘಟಿಸಿದ್ದರು. ನಗರಗಳ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳು ಹಾಗೂ ವ್ಯಾಪಾರಿ, ವ್ಯವಹಾರಿ ಸಂಸ್ಥೆಗಳು ನೇರ ದಾಳಿಗಳಿಗೆ ಒಳಗಾದವು. ದಾಳಿಯಲ್ಲಿ ಹಲವಾರು ಮಾಲ್ ಹಾಗೂ ವ್ಯವಹಾರಿ ಸಂಸ್ಥೆಗಳು ಭಾರೀ ನಷ್ಟಕ್ಕೆ ಒಳಗಾದವು. ನಗರದ ಮೆಟ್ರೋಗಳು ಬಂದ್ ಆಗಿದ್ದವು. ಹಲವಾರು ಕಡೆಗಳಲ್ಲಿ ಬೆಂಕಿ ಹಚ್ಚಲಾಗಿತ್ತು. ದೊಂಬಿಗಳು ನಡೆದವು.
ಈ ಮಧ್ಯೆ ಅಲ್ಲಿನ ಕೆಥೊಲಿಕ್ ಕ್ರೈಸ್ತ ಧಾರ್ಮಿಕ ಮುಖ್ಯಸ್ಥ ಕಾರ್ಡಿನಲ್ ಫಿಲಿಪ್ ಬಾರ್ಬಾರಿನ್ ಮೇಲೆ ಲೈಂಗಿಕ ಪೀಡನೆಯ ಗುರುತರ ಆರೋಪ ಸಾಬೀತಾಗಿ ಶಿಕ್ಷಗೊಳಗಾಗಿದ್ದಾರೆ. ಇದು ಅಲ್ಲಿನ ಕೆಥೊಲಿಕ್ ಚರ್ಚ್‌ನ ಹಿರಿಮೆಗೆ ಭಾರಿ ಹೊಡೆತವನ್ನೇ ನೀಡಿದೆ. ಆರ್ಥಿಕ ಹಾಗೂ ಧಾರ್ಮಿಕ ಬಿಕ್ಕಟ್ಟುಗಳಿಂದಾಗಿ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಜನಸಾಮಾನ್ಯರಲ್ಲಿ ಇನ್ನಿಲ್ಲದ ಅಶಾಂತಿಗೆ ದಾರಿ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಮುಂದುವರಿದ ರಾಷ್ಟ್ರವೆಂದು ಹೆಗ್ಗಳಿಕೆ ಹೇಳಿಕೊಳ್ಳುತ್ತಿದ್ದ ಫ್ರಾನ್ಸ್ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬಿಕ್ಕಟ್ಟಿನ ಪರಿಣಾಮವಾಗಿ ಇಂದಿನ ಸ್ಥಿತಿಗೆ ತಲುಪಿದೆ.
ಅಧ್ಯಕ್ಷ ಮ್ಯಾಕ್ರಾನ್‌ನ ಮಧ್ಯಮ ಮಾರ್ಗ ನೇರವಾಗಿ ಹೇಗೆ ಕೆಲವೇ ಆಸ್ತಿವಂತ ಹಾಗೂ ಭಾರೀ ಕಾರ್ಪೊರೇಟುಗಳ ಸೇವೆಗೆ ನಿಂತಿದೆ ಎನ್ನುವುದಕ್ಕೆ ಇವುಗಳಿಗಿಂತಲೂ ಹೆಚ್ಚಿನ ಉದಾಹರಣೆ ಬೇಕಿಲ್ಲ ತಾನೆ. ಇದುವೇ ಮಧ್ಯಮಮಾರ್ಗವೆಂದು ವಾದಿಸುವವರ ನಿಜವಾದ ಹೂರಣ. ಮಧ್ಯಮ ಮಾರ್ಗಿಗಳು ಎಂದು ಹೇಳುವವರು ಬಹುತೇಕವಾಗಿ ಭಾರೀ ಅಪಾಯಕಾರಿಗಳಾಗಿಬಿಡುತ್ತಾರೆ.
ಯಾಕೆಂದರೆ ಇವರು ಇತರರಿಗಿಂತ ಆಕರ್ಷಕವಾಗಿ ಮಾತನಾಡುತ್ತಾ ಜನಸಾಮಾನ್ಯರ ಪರವೆಂದು ಬಿಂಬಿಸುತ್ತಾ ನೇರವಾಗಿ ಆಳುವ ಶಕ್ತಿಗಳ ಸೇವೆಗೆ ಯಾವುದೇ ಎಗ್ಗೂ ಇಲ್ಲದೇ ಟೊಂಕ ಕಟ್ಟಿ ನಿಂತುಬಿಡುತ್ತಾರೆ. ಆರಂಭದಲ್ಲಿ ಜನಸಾಮಾನ್ಯರಿಗೆ ಇವರನ್ನು ಸರಿಯಾಗಿ ಗ್ರಹಿಸಲು ಕಷ್ಟವಿರುತ್ತದೆ. ಕ್ರಮೇಣವಾಗಿ ಗ್ರಹಿಸುವಷ್ಟರಲ್ಲಿ ಅವರು ಜನಸಾಮಾನ್ಯರಿಗೆ ಮಾಡಬೇಕಾದ ಹಾನಿ ಹಾಗೂ ಅಪಾಯಗಳನ್ನು ಮಾಡಿ ಮುಗಿಸಿರುತ್ತಾರೆ. ಜಾಗತಿಕ ಕಾರ್ಪೊರೇಟುಗಳು ಮುಂದಕ್ಕೆ ತಂದಿರುವ ಸತ್ಯೋತ್ತರ ಕಾಲಘಟ್ಟವೆನ್ನುವ ಈಗಿನ ಕಾಲಘಟ್ಟದ ವರ್ಗೀಕರಣದ ಹೊಸ ಪರಿಕಲ್ಪನೆ ಮೂಲಕ ಸುಳ್ಳುಗಳೇ ಇಂದಿನ ಕಾಲದ ಸಹಜ ಗುಣಧರ್ಮವೆನ್ನುವಂತೆ ಮಾಡಿಡಲಾಗಿದೆ. ಜನಸಾಮಾನ್ಯರನ್ನು ಇದರ ಪ್ರಭಾವದಡಿ ಹೂತು ಹಾಕುವ ಕುತಂತ್ರಗಳನ್ನು ಮಾಡಲಾಗುತ್ತಿದೆ. ಕಾರ್ಪೊರೇಟು ಹಿಡಿತದಲ್ಲಿರುವ ಬಹುತೇಕ ಮಾಧ್ಯಮಗಳು ಇಂದು ಮಾಡುತ್ತಿರುವ ಕೆಲಸ ಇದೇ ಆಗಿದೆ. ಜಾಗತಿಕ ಮಾಧ್ಯಮ ದೈತ್ಯನೆನಿಸಿಕೊಂಡ ರೂಪರ್ಟ್ ಮುರ್ಡೋಕ್‌ನಿಂದ ಹಿಡಿದು ನ್ಯೂಸ್ 18ನ ಮುಖೇಶ್ ಅಂಬಾನಿ ಮುಂತಾದವರೆಲ್ಲರೂ ಮಾಡುತ್ತಿರುವ ಕೆಲಸ ಇದೇ ಆಗಿದೆ.
ಮಧ್ಯಮ ಮಾರ್ಗವೆನ್ನುವುದು ಕೂಡ ಒಂದು ದೊಡ್ಡ ಪೊಳ್ಳು ಹಾಗೂ ಸುಳ್ಳು. ಅದು ಆಳುವ ಶಕ್ತಿಗಳು ತಮ್ಮ ಹಿತಾಸಕ್ತಿಗಳನ್ನು ಮುಂದುವರಿಸಿಕೊಂಡು ಹೋಗಲು ರೂಪಿಸಿದ ಹುಸಿ ವಾದ. ಅದೇನೋ ಹೊಸದಾಗಿ ಬಂದಿರುವ ಜನಸಾಮಾನ್ಯರ ಪರವಾಗಿರುವ ಚಿಂತನೆ ಎಂಬಂತೆ ಬಿಂಬಿಸಲಾಗುತ್ತಿದೆ. ಈ ವಾದದ ಪ್ರಭಾವಕ್ಕೆ ಒಳಗಾಗಿರುವ, ಹಾಗೇನೆ ಈ ವಾದವನ್ನು ಚಾಣಾಕ್ಷತೆಯಿಂದ ಮುಂದಿಡುತ್ತಾ ಆಳುವವರಿಂದ ಹತ್ತು ಹಲವು ಸವಲತ್ತು, ರುಷುವತ್ತು, ಸೌಲಭ್ಯಗಳನ್ನು ಪಡೆಯುತ್ತಿರುವ ಹಲವು ಬರಹಗಾರರು, ಬುದ್ಧಿಜೀವಿಗಳು, ಚಿಂತಕರು ನಮ್ಮ ನಡುವೆ ಇದ್ದಾರೆ. ಯಾರೇ ಆದರೂ ಒಂದೋ ಬಹುಸಂಖ್ಯಾತ ಜನಸಾಮಾನ್ಯರ ಪರವಿರಬೇಕು, ಇಲ್ಲವೇ ಅಲ್ಪಸಂಖ್ಯಾತ ಆಳುವ ಶಕ್ತಿಗಳ ಪರವಾಗಿರಬೇಕು. ಈ ಎರಡೇ ಆಯ್ಕೆ ಇರುವುದು. ಈ ಸ್ಪಷ್ಟ ನಿಲುವುಗಳನ್ನು ತಾಳದೇ ಮಧ್ಯದಲ್ಲಿ ತಿಣುಕಾಡುತ್ತಾ ತಾವು ಎರಡೂ ಅಲ್ಲ ಎಂದು ಹೇಳುತ್ತಾ ಇರುವವರು ಸಾರಾಂಶದಲ್ಲಿ ಆಳುವ ಶಕ್ತಿಗಳ ಪರವಾಗಿಯೇ ಇರಬೇಕಾಗುತ್ತದೆ. ಹಾಗೇ ಇರುತ್ತಾರೆ ಕೂಡ. ಜಾಗತಿಕವಾಗಿ ಡೊನಾಲ್ಡ್ ಟ್ರಂಪ್, ಮ್ಯಾಕ್ರಾನ್, ನರೇಂದ್ರ ಮೋದಿಯಂತಹ ರಾಜಕೀಯ ಅಧಿಕಾರಸ್ಥರು ಸುಳ್ಳುಗಳನ್ನು ಆಕರ್ಷಕವಾಗಿ ಹಾಗೂ ಸಂಘಟಿತವಾಗಿ ಹೇಗೆಲ್ಲಾ ಹೇಳುತ್ತಾ ಜನರನ್ನು ಯಾಮಾರಿಸಲು ಸಾಧ್ಯ ಎನ್ನುವುದನ್ನು ತೋರಿಸಿ ಕೊಡುತ್ತಿದ್ದಾರೆ. ಭಾರತದಲ್ಲೂ ಈ ಅನುಭವ ಚೆನ್ನಾಗಿಯೇ ಆಗುತ್ತಿದೆ ತಾನೆ. ಈಗ ಚುನಾವಣಾ ಸಮಯವಾಗಿರುವುದರಿಂದ ಇದರ ನೇರ ಅನುಭವಕ್ಕೆ ಏನೂ ಕೊರತೆ ಇರುವುದಿಲ್ಲ ಅಲ್ಲವೆ.
ಮಿಂಚಂಚೆ: nandakumarnandana67gmail.com