ಇಂದಿನ ಈ ಅತಂತ್ರಕ್ಕೆ ಮೂಲ ಕಾರಣ ಯಾರು?

Update: 2019-04-29 18:31 GMT

ಜಾಗತೀಕರಣದಿಂದ ಜನಸಾಮಾನ್ಯರ ಬದುಕೇ ಬಂಗಾರವಾಗುತ್ತದೆ, ಉದ್ಯೋಗಾವಕಾಶಗಳ ಮಹಾಪೂರವೇ ಹರಿದು ಬರುತ್ತದೆ, ಭಾರತ ವಿಶ್ವದಲ್ಲೇ ದೊಡ್ಡ ಆರ್ಥಿಕ ಶಕ್ತಿಯಾಗುತ್ತದೆ. ಹೀಗೆಲ್ಲಾ ಬಿಂಬಿಸಿ ಯುವಜನರನ್ನು ಸುಮಾರು 30 ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರಕಾರವೇ ಯಾಮಾರಿಸಿತ್ತು. ಇದಕ್ಕೆ ಪೂರಕವಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಭಾರತದ ಬಗ್ಗೆ ಭಾರೀ ಆರ್ಥಿಕ ಬೆಳವಣಿಗೆಯ ಹುಸಿ ವರದಿಗಳನ್ನು ಪ್ರಕಟಿಸತೊಡಗಿದ್ದವು. ಮಧ್ಯಮ ವರ್ಗದ ದೊಡ್ಡ ಸಂಖ್ಯೆಯ ಜನರು ಅದನ್ನು ಪೂರ್ಣವಾಗಿ ನಂಬಿಬಿಟ್ಟರು. ಆರಂಭದ ಕೆಲ ವರ್ಷಗಳಲ್ಲಿ ಕೆಲವರಿಗೆ ಸಿಕ್ಕ ಅವಕಾಶಗಳನ್ನು ನೋಡಿ ಭಾರೀ ಸಂಖ್ಯೆಯ ಮಧ್ಯಮ ವರ್ಗದ ಯುವಸಮೂಹ ಹುಚ್ಚೆದ್ದು ಕುಣಿಯಲು ಶುರುವಾಗಿತ್ತು. ಆದರೆ ಆ ಉಬ್ಬಿದ್ದ ಕೃತಕ ಬಲೂನು ಕೆಲವೇ ವರ್ಷಗಳಲ್ಲಿ ಒಡೆದು ಯುವ ಸಮೂಹದ ಭರವಸೆಗಳು ನೆಲಕಚ್ಚಿದ್ದವು.


ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತವೆಂದು 1947ರ ನಂತರದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಅದನ್ನು ಸಮರ್ಥಿಸಲು ಸಂವಿಧಾನವನ್ನು ಮುಂದಿಟ್ಟುಕೊಂಡು ಬರಲಾಗಿದೆ. ಬ್ರಿಟಿಷರ ನೇರ ಆಳ್ವಿಕೆ ಕೊನೆಯಾದಾಗಿಂದಲೂ ನಮ್ಮ ದೇಶದ ಚುಕ್ಕಾಣಿ ಹಿಡಿದುಕೊಂಡು ಬಂದವರು ಯಾರು? ಅವರ ಹಿನ್ನೆಲೆಗಳೇನು? ಎಂದು ನೋಡಿದಾಗ ನಮ್ಮಲ್ಲಿ ಹಲವು ಗಂಭೀರವಾದ ಪ್ರಶ್ನೆಗಳು ಮೂಡಲೇಬೇಕು.!

ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಕರೆದುಕೊಂಡ ಪಕ್ಷದಲ್ಲಿ ನಾಯಕತ್ವದಲ್ಲಿ ಇದ್ದವರೆಲ್ಲಾ ಭಾರೀ ಆಸ್ತಿವಂತರಾದವರೇ ಆಗಿದ್ದರು. ಸಾವಿರಾರು ಎಕರೆಗಳ ಭೂಮಿಗಳ ಒಡೆಯರು, ಬ್ರಿಟಿಷ್ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಅದರ ನಾಯಕತ್ವ ಸ್ಥಾನದಲ್ಲಿದ್ದರು. ಅಲ್ಲದೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಎ. ಒ. ಹ್ಯೂಮ್ ಸ್ಥಾಪಿಸಿದ್ದೇ ಬ್ರಿಟಿಷ್ ಸರಕಾರದ ಕುತಂತ್ರದ ಭಾಗವಾಗಿತ್ತು. ಅದರಲ್ಲಿ ಇದ್ದ ಬಹುತೇಕ ಜನರು ಮೇಲ್ಜಾತಿ ಹಿನ್ನೆಲೆಯವರೇ ಆಗಿದ್ದರು. ಜೊತೆಗೆ ಟಾಟಾ, ಬಿರ್ಲಾ, ಸಿಂಘಾನಿಯಾ, ಮಫತ್‌ಲಾಲ್‌ಗಳಂತಹ ದಲ್ಲಾಳಿಗಳು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡವರಾಗಿದ್ದರು. ದಲ್ಲಾಳಿಗಳೆಂದರೆ ಸಣ್ಣ ಪುಟ್ಟ ದಲ್ಲಾಳಿಗಳಲ್ಲ ಇವರು ಬ್ರಿಟಿಷ್ ಈಸ್ಟ್ ಕಂಪೆನಿಯ ಭಾರೀ ದೊಡ್ಡ ದಲ್ಲಾಳಿಗಳಾಗಿದ್ದವರು. ಜೊತೆಗೆ ನೂರೆಂಟು ರಾಜಸಂಸ್ಥಾನಗಳ ಮುಖ್ಯಸ್ಥರು ಕೂಡ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರು. ಇವರೆೆಲ್ಲಾ ನಂತರ ಸಂವಿಧಾನ ಮುಂದಿಟ್ಟೇ ಭಾರೀ ಅವಕಾಶಗಳನ್ನು ಬಾಚಿಕೊಂಡಿದ್ದು ಈಗ ಇತಿಹಾಸ. ಅಂದರೆ ಇಲ್ಲಿ ಜನಸಾಮಾನ್ಯರಾರೂ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವದ ಭಾಗವಾಗಿರಲಿಲ್ಲ. ಬ್ರಿಟಿಷರು ತಮ್ಮ ನೇರ ಆಡಳಿತ ಕೊನೆಗೊಳಿಸಬೇಕಾಗಿ ಬಂದಾಗ ಈ ನಾಯಕತ್ವಗಳ ಕೈಗೇ ಅಧಿಕಾರ ಹಸ್ತಾಂತರಿಸಿದ್ದರು. ನಂತರ ಸಂವಿಧಾನ ರಚನೆಯ ಸಂದರ್ಭದಲ್ಲೂ ಈ ನಾಯಕರೇ ಮುಂಚೂಣಿಯಲ್ಲಿದ್ದವರು. \

ಸಂವಿಧಾನ ರಚನಾ ಪ್ರಕ್ರಿಯೆಗಳಲ್ಲೂ ಜನಸಾಮಾನ್ಯರನ್ನು ಒಳಗೊಳಿಸಿಕೊಳ್ಳಲಿಲ್ಲ. ಎಲ್ಲವನ್ನೂ ಮುಚ್ಚಿದ ಕೋಣೆಗಳಲ್ಲಿ ಕೆಲವೇ ಇಂತಹ ಮೇಲ್ಜಾತಿ ಮೇಲ್ವರ್ಗದ ನಾಯಕರೇ ತೀರ್ಮಾನಿಸಿದ್ದು, ಅಂಬೇಡ್ಕರ್ ಮಾತ್ರ ದಲಿತ ಸಮುದಾಯಗಳನ್ನು ಪ್ರತಿನಿಧಿಸಿ ಸಂವಿಧಾನ ರಚನೆಯಲ್ಲಿ ಇದ್ದವರು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಭಾರತದ ಸಂವಿಧಾನ ಜಗತ್ತಿನ ಬಂಡವಾಳಶಾಹಿ ದೇಶಗಳ ಸಂವಿಧಾನಗಳ ಅಂಶಗಳನ್ನೇ ಹೆಚ್ಚಾಗಿ ಒಳಗೊಳಿಸಿಕೊಂಡಿರುವುದು. ಧರ್ಮನಿರಪೇಕ್ಷತೆ, ಸೆಕ್ಯುಲರ್, ಸಮಾನ ಅವಕಾಶ, ಸಮಾನತೆಯಂತಹ ಅಂಶಗಳು ಪಾಶ್ಚಾತ್ಯ ಬಂಡವಾಳಶಾಹಿ ದೇಶಗಳ ಸಾಂವಿಧಾನಿಕ ಅಂಶಗಳೇ ಆಗಿವೆ. ಮೊದಲು ಮೇಲ್ಮಟ್ಟದಲ್ಲಿ ಇದ್ದ ಇಂತಹ ನೀತಿಗಳು ಇಂದು ಪಾಶ್ಚಾತ್ಯ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಇಲ್ಲದಂತಾಗಿದೆ. ಭಾರತದಂತಹ ಊಳಿಗಮಾನ್ಯ ವ್ಯವಸ್ಥೆ ಬದಲಾಗದ ದೇಶಗಳಲ್ಲಿ ಇಂತಹ ಮೌಲ್ಯಗಳು ಕೇವಲ ಸಂವಿಧಾನಾತ್ಮಕ ಆಶಯದ ಇಲ್ಲವೇ ಪದದ ಮಟ್ಟದಲ್ಲೇ ಇರುವುದು ಸಹಜ. ಕೇವಲ ದಲಿತ ದಮನಿತರ ಮೀಸಲಾತಿಯಂತಹ ಒಂದೆರಡು ಅಂಶಗಳನ್ನು ಮಾತ್ರ ಬಿ. ಆರ್. ಅಂಬೇಡ್ಕರ್‌ರ ಒತ್ತಾಸೆಯಿಂದಾಗಿ ಸಂವಿಧಾನದಲ್ಲಿ ಸೇರಿಸಿಕೊಳ್ಳಲಾಯಿತು. ಅದಕ್ಕೂ ಅಂಬೇಡ್ಕರ್ ಬಹಳ ಶ್ರಮ ಪಡಬೇಕಾಗಿ ಬಂದಿತ್ತು.

ನಂತರ ಅದು ಈ ದೇಶದ ದಲಿತ ದಮನಿತರನ್ನು ಸಮಾಧಾನ ಪಡಿಸುವ ಮೂಲಕ ತಮ್ಮ ವಿರುದ್ಧ ತಿರುಗಿ ಬೀಳದ ರೀತಿಯಲ್ಲಿ ನೋಡಿಕೊಳ್ಳಲು ಇರುವ ಒಳ್ಳೆಯ ಅಸ್ತ್ರ ಕೂಡ ಎಂಬುದನ್ನು ಮನಗಂಡ ಆಳುವ ಶಕ್ತಿಗಳು ಅದನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡು ಬಂದವು. ಭಾರತದ ಸಂವಿಧಾನ ರಚಿಸಿ ಅಂಗೀಕಾರ ಮಾಡಿಕೊಂಡ ನಂತರದ ಈ ಏಳು ದಶಕಗಳಲ್ಲಿ ಭಾರತ ಸಾಗಿ ಬಂದ ಹಾದಿ ನಂತರ ಈಗಿನ ಅತಂತ್ರತೆ ಹಾಗೂ ತೀವ್ರ ಬಿಕ್ಕಟ್ಟನ್ನು ನಾವು ಕ್ರಮವಾಗಿ ಗಮನಿಸಿದರೆ ಸಂವಿಧಾನವನ್ನು ಇಟ್ಟುಕೊಂಡು ಭಾರೀ ಆಸ್ತಿವಂತರು ಹಾಗೂ ಭಾರೀ ಕಾರ್ಪೊರೇಟುಗಳು ಸೇರಿದಂತೆ ಆಳುವ ಶಕ್ತಿಗಳು ದೇಶದ ಜನರನ್ನು ಹೇಗೆಲ್ಲಾ ವಂಚಿಸುತ್ತಾ ಬಂದಿವೆ ಎನ್ನುವುದು ಗೊತ್ತಾಗುತ್ತದೆ.

ನಮ್ಮ ಚುನಾವಣಾ ವ್ಯವಸ್ಥೆಯನ್ನೇ ನೋಡುವುದಾದರೆ ಬಹುಸಂಖ್ಯಾತ ಜನರು ತಿರಸ್ಕರಿಸಿರುವ ಪಕ್ಷಗಳೇ ಅಧಿಕಾರ ನಡೆಸುತ್ತಾ ಬಂದಿವೆ. ಅಂದರೆ ಒಟ್ಟು ಮತದಾರರ ಶೇಕಡಾ 40ರೊಳಗೇ ಮತ ಪಡೆದ ಪಕ್ಷಗಳೇ ಅಧಿಕಾರವನ್ನು ನಡೆಸುತ್ತಾ ಬಂದಿದೆ. ಹಲವು ಸಂದರ್ಭಗಳಲ್ಲಿ ಒಟ್ಟು ಮತದಾರರ ಶೇಕಡಾ 25ರಿಂದ 30ರಷ್ಟು ಮತ ಪಡೆದ ಪಕ್ಷಗಳೇ ರಾಜ್ಯಗಳಲ್ಲಿ, ಕೇಂದ್ರಗಳಲ್ಲಿ ಅಧಿಕಾರ ನಡೆಸಿವೆ. ಇನ್ನು ಕೆಲವು ಕಡೆಗಳಲ್ಲಿ ಶೇ.10-15ರಷ್ಟು ಹಾಸ್ಯಾಸ್ಪದ ಮಟ್ಟದ ಮತಚಲಾವಣೆಯಾಗಿದ್ದರೂ ಸರಕಾರಗಳನ್ನು ರಚಿಸಲಾಗಿತ್ತು.

ಕಾಂಗ್ರೆಸ್ ಪಕ್ಷ ತನ್ನ ಗೆಲುವಿಗಾಗಿ ದೇಶಾದ್ಯಂತ ನಿರಂತರವಾಗಿ ಚುನಾವಣಾ ಅಕ್ರಮಗಳನ್ನೇ ನಡೆಸಿಕೊಂಡು ಬಂದಿತ್ತು. ತನ್ನ ಗೂಂಡಾ ಪಡೆಗಳ ಮೂಲಕ ಜನಸಾಮಾನ್ಯರನ್ನು ಬೆದರಿಸಿ ಅವರ ಪರವಾಗಿ ತಾವೇ ಮತಗಳನ್ನು ಗುದ್ದಿ ಗೆಲುವು ಎಂದು ಬಿಂಬಿಸಿಕೊಂಡು ಬಂದಿರುವ ಅಸಂಖ್ಯಾತ ಉದಾಹರಣೆಗಳು ಕಾಂಗ್ರೆಸ್ ಹೆಸರಿನಲ್ಲೇ ಇವೆ. ಸಾಪೇಕ್ಷವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಇಂತಹುದು ನಗ್ನ ರೂಪದಲ್ಲಿತ್ತು. ನಂತರ ಗೆದ್ದುಬಂದ ಎಲ್ಲಾ ಪಕ್ಷಗಳೂ ಇಂತಹ ಕೃತ್ಯಗಳನ್ನು ಹಲವಾರು ಕಡೆಗಳಲ್ಲಿ ಮಾಡಿಕೊಂಡು ಬಂದಿವೆ. ಈಗ ಬಿಜೆಪಿ ವಿದ್ಯುನ್ಮಾನ ಮತಯಂತ್ರಗಳನ್ನೇ ತಮ್ಮ ಪರವಾಗಿ ಮತ ಶೇಖರಿಸುವಂತೆ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟು ಸುದ್ದಿಯಾಗುತ್ತಿವೆ. ಇನ್ನು ಪಂಜಾಬ್, ಈಶಾನ್ಯ ಭಾರತ, ಮಧ್ಯ ಭಾರತ, ಕಾಶ್ಮೀರಗಳಲ್ಲಿ ರಕ್ಷಣಾ ಪಡೆಗಳೇ ಜನರ ಹೆಸರಿನಲ್ಲಿ ಮತ ಪೆಟ್ಟಿಗೆ ತುಂಬಿಸಿಕೊಳ್ಳುವ ಕೃತ್ಯಗಳು ಈಗಲೂ ನಡೆಯುತ್ತಿವೆ. ಇನ್ನು ಸುಳ್ಳು ಗುರುತಿನ ಚೀಟಿ ಮೊದಲಾದ ಅಕ್ರಮಗಳ ಕತೆ ಬೇರೇ ಇದೆ. ಜಾತಿ, ಧರ್ಮ, ಹಣದ ಮೂಲಕ ಮಾಡುವ ಚುನಾವಣಾ ಅಕ್ರಮಗಳಿಗೆ ಲೆಕ್ಕವಿಲ್ಲ. ಇವು ಯಾವುವೂ ಕೂಡ ಪ್ರಜಾಪ್ರಭುತ್ವದ ಲಕ್ಷಣವಲ್ಲ.

ನಮ್ಮ ದೇಶದ ಬಹುತೇಕ ಸಂಪತ್ತನ್ನು ಬೆರಳೆಣಿಕೆಯ ಭಾರೀ ಕಾರ್ಪೊರೇಟುಗಳು ಕಬಳಿಸಿ ಶೇಖರಿಟ್ಟುಕೊಂಡಿರುವುದು ಈಗ ಗುಟ್ಟಿನ ವಿಚಾರವೇನೂ ಅಲ್ಲವಲ್ಲ. ಬ್ಯಾಂಕುಗಳಲ್ಲಿರುವ ಜನಸಾಮಾನ್ಯರ ಠೇವಣಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಹಣವನ್ನು ಬಹುತೇಕವಾಗಿ ಭಾರಿ ಕಾರ್ಪೊರೇಟುಗಳೇ ಸಾಲದ ರೂಪದಲ್ಲಿ ಪಡೆದು ನಂತರ ಮರುಪಾವತಿ ಮಾಡದೇ ದೋಚುತ್ತಿರುವುದೂ ಈಗ ಹೊಸ ಸುದ್ಧಿಯೇನೂ ಅಲ್ಲ. ಹಾಗೆ ದೋಚಿ ದೇಶ ತೊರೆದ ಲಲಿತ್ ಮೋದಿ, ವಿಜಯ ಮಲ್ಯ, ನೀರವ್ ಮೋದಿ ಸೇರಿದಂತೆ ನೂರಾರು ಕಾರ್ಪೊರೇಟುಗಳ ಪಟ್ಟಿಯೇ ಇದೆ. ಸಂವಿಧಾನದಲ್ಲಿ ಅಡಕವಾಗಿರುವ ದಲಿತ ದಮನಿತರಿಗೆ ಇರುವ ಮೀಸಲಾತಿಯನ್ನು ಈಗ ಮೇಲ್ಜಾತಿಯ ಬಡವರಿಗೆ ಎಂಬ ನೆಪದಲ್ಲಿ ಮತ್ತೆ ಅದೇ ಮೇಲ್ಜಾತಿಗಳಿಗೆ ನೀಡಲು ಶುರುವಾಗಿದೆ. ಅದು ಒಂದು ಕಡೆಯಾದರೆ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಹತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕಿ ಇಡೀ ದೇಶವನ್ನು ಹರಾಜಿಗಿಟ್ಟಿದ್ದು ಮೊದಲು ಕಾಂಗ್ರೆಸ್ ಪಕ್ಷವೇ ಅನ್ನುವುದರ ಬಗ್ಗೆ ಈಗ ಯಾರಿಗೂ ಅನುಮಾನ ಇಲ್ಲ. ಇವೆಲ್ಲದರ ಪರಿಣಾಮವಾಗಿ ಸಂವಿಧಾನದಲ್ಲಿ ಅಡಕವಾಗಿರುವ ಮೀಸಲಾತಿಗೆ ಅರ್ಥವೇ ಇಲ್ಲದಂತೆ ಮಾಡಿಡಲಾಗಿದೆ.

ಸಾರ್ವಜನಿಕ ಕ್ಷೇತ್ರಗಳೇ ಇಲ್ಲದ ಮೇಲೆ ಸರಕಾರ ಎಲ್ಲಿ ಮೀಸಲಾತಿ ಜಾರಿಗೊಳಿಸಲು ಸಾಧ್ಯ. ಕೆಲವೇ ಜನರನ್ನು ಮೀಸಲಾತಿ ಸೌಲಭ್ಯಗಳಡಿ ತಂದು ಬಹುಸಂಖ್ಯಾತ ಜನಸಾಮಾನ್ಯರನ್ನು ಅದನ್ನು ಮುಂದುಮಾಡಿ ನ್ಯಾಯಯುತವಾದ ಅವಕಾಶಗಳಿಂದ ವಂಚಿಸುವುದಷ್ಟೇ ಇದುವರೆಗೂ ನಡೆಯುತ್ತಾ ಬಂದಿರುವುದು. ಹಾಗೆ ಮೀಸಲಾತಿ ಪಡೆದ ದಲಿತ ದಮನಿತರಲ್ಲಿನ ಹಲವು ಜನರು ಆಳುವ ಶಕ್ತಿಗಳ ತುತ್ತೂರಿಗಳಾಗಿ ಪರಿವರ್ತಿತರಾಗಿ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಮುಂದಿಟ್ಟು ಬಹುಸಂಖ್ಯಾತ ದಲಿತ ದಮನಿತರ ಕಣ್ಣಿಗೆ ಮಣ್ಣೆರಚುತ್ತಾ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಮಾತ್ರ ನೋಡಿಕೊಳ್ಳುತ್ತಾ ಸಮುದಾಯವನ್ನು ಬಲಿಕೊಡುತ್ತಿರುವುದು ಈಗಂತೂ ಮೇಲ್ನೋಟಕ್ಕೇ ಎದ್ದು ಕಾಣುತ್ತದೆ.

  ಈಗ ಬ್ರಿಟನ್‌ವುಡ್ಸ್, ಡಂಕೆಲ್, ಗ್ಯಾಟ್ ಒಪ್ಪಂದಗಳ ಬಗ್ಗೆ ಹಲವರಿಗೆ ಅಷ್ಟಾಗಿ ಗೊತ್ತಿಲ್ಲದಿದ್ದರೂ ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ಬಗ್ಗೆ, ಜಾಗತೀಕರಣಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಯಾಕೆಂದರೆ ಜಾಗತೀಕರಣದಿಂದ ಜನಸಾಮಾನ್ಯರ ಬದುಕೇ ಬಂಗಾರವಾಗುತ್ತದೆ, ಉದ್ಯೋಗಾವಕಾಶಗಳ ಮಹಾಪೂರವೇ ಹರಿದು ಬರುತ್ತದೆ, ಭಾರತ ವಿಶ್ವದಲ್ಲೇ ದೊಡ್ಡ ಆರ್ಥಿಕ ಶಕ್ತಿಯಾಗುತ್ತದೆ. ಹೀಗೆಲ್ಲಾ ಬಿಂಬಿಸಿ ಯುವಜನರನ್ನು ಸುಮಾರು 30 ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರಕಾರವೇ ಯಾಮಾರಿಸಿತ್ತು. ಇದಕ್ಕೆ ಪೂರಕವಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಭಾರತದ ಬಗ್ಗೆ ಭಾರೀ ಆರ್ಥಿಕ ಬೆಳವಣಿಗೆಯ ಹುಸಿ ವರದಿಗಳನ್ನು ಪ್ರಕಟಿಸತೊಡಗಿದ್ದವು. ಮಧ್ಯಮ ವರ್ಗದ ದೊಡ್ಡ ಸಂಖ್ಯೆಯ ಜನರು ಅದನ್ನು ಪೂರ್ಣವಾಗಿ ನಂಬಿಬಿಟ್ಟರು. ಆರಂಭದ ಕೆಲ ವರ್ಷಗಳಲ್ಲಿ ಕೆಲವರಿಗೆ ಸಿಕ್ಕ ಅವಕಾಶಗಳನ್ನು ನೋಡಿ ಭಾರೀ ಸಂಖ್ಯೆಯ ಮಧ್ಯಮ ವರ್ಗದ ಯುವಸಮೂಹ ಹುಚ್ಚೆದ್ದು ಕುಣಿಯಲು ಶುರುವಾಗಿತ್ತು. ಆದರೆ ಆ ಉಬ್ಬಿದ್ದ ಕೃತಕ ಬಲೂನು ಕೆಲವೇ ವರ್ಷಗಳಲ್ಲಿ ಒಡೆದು ಯುವ ಸಮೂಹದ ಭರವಸೆಗಳು ನೆಲಕಚ್ಚಿದ್ದವು. ಭಾರೀ ಪ್ರಚಾರಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕ ಬಿಕ್ಕಟ್ಟಿಗೆ ಒಳಗಾಗಿ ಮೊದಲಿನ ಅವಕಾಶಗಳೆಲ್ಲಾ ಇಲ್ಲದಾಯಿತು. ಅವಕಾಶ ವಂಚಿತ ಅತೃಪ್ತ ಮಧ್ಯಮ ವರ್ಗ ಸಮೂಹ ಈಗ ಸರ್ವಾಧಿಕಾರವನ್ನು ಎತ್ತಿಹಿಡಿಯುತ್ತಾ ಮೋದಿಯ ಬಿಜೆಪಿಯ ದೊಡ್ಡ ಬೆಂಬಲಿಗರಾಗಿ ಮಾರ್ಪಟ್ಟಿದ್ದಾರೆ. ಅಂದರೆ ಈಗ ಆಳುವ ಶಕ್ತಿಗಳು ಜನಸಾಮಾನ್ಯರ ಮೇಲೆ ಹೇರಲು ಬಯಸುತ್ತಿರುವ ಫ್ಯಾಶಿಸ್ಟ್ ನಿರಂಕುಶಾಧಿಕಾರಕ್ಕೆ ಜನರ ಮಧ್ಯೆಯೇ ಬೆಂಬಲಿಗರನ್ನು ಸೃಷ್ಟಿಸಿಕೊಳ್ಳಲು ಹಿಂದಿನಿಂದ ಆಡಳಿತ ನಡೆಸಿಕೊಂಡು ಬಂದ ಸರಕಾರಗಳು ಎಲ್ಲಾ ಸಹಾಯ ಮಾಡಿವೆ ಎನ್ನಬಹುದು.

 ಬ್ರಿಟನ್ ವುಡ್ಸ್ ಸಂಸ್ಥೆಗಳೂ ಸೇರಿದಂತೆ ಗ್ಯಾಟ್, ಡಂಕೆಲ್, ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ಮೊದಲಾದ ಸಂಸ್ಥೆಗಳ ಒಪ್ಪಂದಗಳಿಗೆ ಸಹಿ ಹಾಕುವ ಮೊದಲು ಸಂಸತ್ತಿನಲ್ಲಿ ಚರ್ಚೆಗೇ ಇಟ್ಟಿರಲಿಲ್ಲ. ಆಗಿನ ಕಾಂಗ್ರೆಸ್ ಸರಕಾರ. ಅಂದರೆ ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಹೊರಗಿಟ್ಟು ದೇಶದ ಸಾರ್ವಭೌಮತೆಗೇ ಹಾನಿಯಾಗುವಂತಹ ಹತ್ತು ಹಲವು ಒಪ್ಪಂದಗಳಿಗೆ ಹಿಂದಿನ ಸರಕಾರಗಳು ಸಹಿ ಮಾಡಿದ್ದವು ಎನ್ನುವುದನ್ನು ನಾವಿಲ್ಲಿ ಸರಿಯಾಗಿ ಗುರುತಿಸಬೇಕು. ಜಾಗತೀಕರಣ, ಜಾಗತಿಕ ಹಳ್ಳಿ, ಎಂಬ ಮೋಹಕ ಶಬ್ದಗಳ ಮೂಲಕ ಜನಸಾಮಾನ್ಯರನ್ನು ಯಾಮಾರಿಸಲು ಆಗಿನ ಸರಕಾರಗಳು ಬಳಸಿದ ತಂತ್ರಗಳು ಒಂದೆರಡೇನಲ್ಲ. ಅಂದರೆ ಜಾಗತೀಕರಣದ ಹೆಸರಿನಲ್ಲಿ ಉದಾರೀಕರಣ ನೀತಿ ಅನುಸರಿಸಿದ್ದು ಕೆಲವೇ ಕಾರ್ಪೊರೇಟುಗಳು ಬಹುಸಂಖ್ಯಾತ ಜನಸಾಮಾನ್ಯರ ದುಡಿಮೆಯ ಗಳಿಕೆಯನ್ನು ಕಬಳಿಸಲು ಅನುಕೂಲ ಮಾಡಿಕೊಡಲು ಎನ್ನುವುದು ಈಗ ಸ್ಪಷ್ಟವಾಗಿ ಕಾಣತೊಡಗಿದೆ. ಇವೆಲ್ಲದರ ಹಿಂದೆ ಹಿಂದಿನ ಸರಕಾರಗಳು ನೇರವಾಗಿ ಇವೆ. ಹಾಗಾಗಿಯೇ ಮುಖೇಶ್ ಅಂಬಾನಿ, ಅದಾನಿಯಂತಹವರನ್ನು ಒಳಗೊಂಡ ಕಾರ್ಪೊರೇಟ್ ಕೂಟ ದೇಶದ ಎಲ್ಲವನ್ನೂ ತಮ್ಮ ನೇರ ನಿಯಂತ್ರಣಕ್ಕೆ ಈಗ ಒಳಪಡಿಸಲು ಸಾಧ್ಯವಾಗಿದ್ದು.

ಈಗ ನಮ್ಮದು ಅಂತ ಹೇಳಿಕೊಳ್ಳುವ ಯಾವ ಕ್ಷೇತ್ರವೂ ನಮ್ಮ ದೇಶದ ಸರಕಾರದ ಹಿಡಿತದಲ್ಲಿ ಇಲ್ಲದಂತಾಗಿವೆ ಎನ್ನುವುದೇ ಹಸಿ ಸತ್ಯ. ಕೃಷಿ, ಶಿಕ್ಷಣ, ಆರೋಗ್ಯ, ವಿದ್ಯುತ್, ಬ್ಯಾಂಕಿಂಗ್, ವಿಮೆ, ರಸ್ತೆ, ರಕ್ಷಣಾ ಕ್ಷೇತ್ರವನ್ನೊಳಗೊಂಡಂತೆ ಎಲ್ಲವನ್ನೂ ಜಾಗತಿಕ ಹಿತಾಸಕ್ತಿಯ ಭಾರೀ ಕಾರ್ಪೊರೇಟುಗಳೇ ನಿಯಂತ್ರಿಸುತ್ತಿದ್ದಾರೆ. ಕಟ್ಟಡವೇ ಏಳದ ಜಿಯೋ ವಿಶ್ವವಿದ್ಯಾನಿಲಯ, ಕಂಪೆನಿಯೇ ಶುರುವಾಗದಿದ್ದರೂ ರಫೇಲ್ ಡೀಲ್‌ಗಳಂತಹವು ಈಗಿನ ಮೋದಿಯ ಬಿಜೆಪಿ ಸರಕಾರದ ಸೇರ್ಪಡೆ ಅಷ್ಟೇ. ಇದುವರೆಗೂ ಆಳುವ ಶಕ್ತಿಗಳು ಸಂವಿಧಾನವನ್ನು ಬಳಸಿಕೊಂಡು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಾ ದೇಶದ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದರು. ಆದರೆ ಇಂದು ಆರ್ಥಿಕ ಬಿಕ್ಕಟ್ಟು ವಿಪರೀತವಾಗಿರುವುದರಿಂದ ಜನಸಾಮಾನ್ಯರ ಗಳಿಕೆಯೆಲ್ಲವನ್ನೂ ತಮ್ಮ ಜೇಬಿಗೆ ಇಳಿಸಿಕೊಳ್ಳುವ ದಾವಂತ ಅವರಿಗಿದೆ. ಹಾಗಾಗಿ ಸಂವಿಧಾನವನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ಅವರಿಗೆ ಮುಂಚಿನಷ್ಟು ಅನುಕೂಲಕರವಾಗಿ ಉಪಯೋಗಿಸಲು ಒಂದಷ್ಟು ತಡೆಗಳಿವೆ. ಹಾಗಾಗಿ ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನೇ ಇಲ್ಲದಂತೆ ಮಾಡುತ್ತಿದ್ದಾರೆ. ಅದಕ್ಕೆ ಇತ್ತೀಚಿನ ಸರ್ವೋಚ್ಚ ನ್ಯಾಯಾಲಯ ಎದುರಿಸುತ್ತಿರುವ ಬಿಕ್ಕಟ್ಟು ಒಂದು ಉದಾಹರಣೆಯಾಗಿದೆ.

ಅಂದರೆ ಸಂವಿಧಾನದ ಹೆಸರಿನಲ್ಲಿಯೇ ಈ ದೇಶವನ್ನು ಇಂತಹ ದುರಂತಮಯ ಸ್ಥಿತಿಗೆ ತರಲಾಗಿದೆ ಎನ್ನುವ ಸತ್ಯವನ್ನು ಮರೆಮಾಚಿ ಸಂವಿಧಾನ ಉಳಿಸಿದರೆ ದೇಶದ ರಕ್ಷಣೆ ಆಗುತ್ತದೆ ಎಂದು ಭಾವಿಸಿದರೆ ಅದು ಆಳುವ ಶಕ್ತಿಗಳಿಗೇ ಅನುಕೂಲ ಮಾಡಿಕೊಡುತ್ತದೆಯೇ ಹೊರತು ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವುದಿಲ್ಲ. ಕಣ್ಣೆದುರಿನ ಈ ಸತ್ಯವನ್ನು ಮರೆಮಾಚಿ ಮೋದಿಯ ಬಿಜೆಪಿ ಸರಕಾರ ತೊಲಗಿದರೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಹಸಿ ಭ್ರಮೆಗಳನ್ನು ಜನರ ಮಧ್ಯೆ ಬಿತ್ತುವ ಕೆಲಸ ನಡೆಯತ್ತಿದೆ. ಜನಕಾಳಜಿಯ ಮನಸ್ಸಿರುವ ಪ್ರಗತಿಪರವಲಯದಿಂದಲೂ ಈ ಕಾರ್ಯ ನಡೆಯುತ್ತಿರುವುದು ಆತಂಕಕಾರಿಯಾದ ವಿಚಾರ.


ಮಿಂಚಂಚೆ: nandakumarnandana67 @gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News