ಉಸ್ತುವಾರಿ ರಕ್ಷಣಾ ಕಾರ್ಯದರ್ಶಿಯೇ ಖಾಯಂ: ಶ್ವೇತಭವನ
Update: 2019-05-10 18:29 GMT
ವಾಶಿಂಗ್ಟನ್, ಮೇ 10: ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್‌ರನ್ನೇ ಇಲಾಖೆಯ ಖಾಯಂ ಕಾರ್ಯದರ್ಶಿಯಾಗಿ ನೇಮಿಸುವ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿದ್ದಾರೆ ಎಂದು ಶ್ವೇತಭವನ ಗುರುವಾರ ಹೇಳಿದೆ.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೋಯಿಂಗ್ ಕಂಪೆನಿಯ ಮಾಜಿ ಆಡಳಿತಾಧಿಕಾರಿಯನ್ನು ಸೇನೆಯ ಮುಖ್ಯಸ್ಥರಾಗಿ ನೇಮಿಸಲು ಅಧ್ಯಕ್ಷರು ಮುಂದಾಗಿದ್ದಾರೆ.
ಅವರ ಉತ್ತರಾಧಿಕಾರಿ ಜಿಮ್ ಮ್ಯಾಟಿಸ್ ಕಳೆದ ವರ್ಷದ ಕೊನೆಯಲ್ಲಿ ರಾಜೀನಾಮೆ ನೀಡಿದ ಬಳಿಕ, ಪ್ಯಾಟ್ರಿಕ್ ಶಾನಹನ್ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಕ್ಷಣಾ ಇಲಾಖೆಯ ನೇತೃತ್ವ ವಹಿಸಲು ತಾನು ಅಗತ್ಯಕ್ಕಿಂತಲೂ ಹೆಚ್ಚಿನ ಅರ್ಹತೆ ಹೊಂದಿದ್ದೇನೆ ಎಂಬುದನ್ನು ಶಾನಹನ್ ಕಳೆದ ಕೆಲವು ತಿಂಗಳ ಅವಧಿಯಲ್ಲಿ ಸಾಬೀತುಪಡಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.