ಯಶಸ್ವಿ ಸಕ್ರಿಯ ಭಾರತೀಯ ಚಿತ್ರಕಾರರ ಪಟ್ಟಿಯಲ್ಲಿ ಅನೀಶ್ ಕಪೂರ್‌ಗೆ ಅಗ್ರ ಸ್ಥಾನ

Update: 2019-05-18 00:16 IST
ಯಶಸ್ವಿ ಸಕ್ರಿಯ ಭಾರತೀಯ ಚಿತ್ರಕಾರರ ಪಟ್ಟಿಯಲ್ಲಿ ಅನೀಶ್ ಕಪೂರ್‌ಗೆ ಅಗ್ರ ಸ್ಥಾನ
  • whatsapp icon

ಹೊಸದಿಲ್ಲಿ, ಮೇ 17: ಕಳೆದ (2018-19) ಸಾಲಿನಲ್ಲಿ ತಾನು ಬರೆದ ಚಿತ್ರಕಲೆಗಳ ಹರಾಜಿನಲ್ಲಿ 168.25 ಕೋಟಿ ರೂ. ಗಳಿಸಿರುವ ಅನೀಶ್ ಕಪೂರ್ ಜಾಗತಿಕ ಯಶಸ್ವೀ ಸಕ್ರಿಯ ಭಾರತೀಯ ಚಿತ್ರಕಾರರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯ ವರದಿ ತಿಳಿಸಿದೆ.

ಲಂಡನ್‌ನಲ್ಲಿ ನೆಲೆಸಿರುವ 65 ವರ್ಷದ ಅನೀಶ್ ಕಪೂರ್ ಅವರು ರಚಿಸಿರುವ ಹೆಸರಿಡದ ಸ್ಟೈನ್‌ಲೆಸ್ ಸ್ಟೀಲ್ ಶಿಲ್ಪಕೃತಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಕ್ರಿಸ್ಟೀಸ್ ಹರಾಜು ಪ್ರಕ್ರಿಯೆಯಲ್ಲಿ 9.31 ಕೋಟಿ ರೂ.ಗೆ ಮಾರಾಟವಾಗಿದೆ. ಸಮಕಾಲೀನ ಕಲಾವಿದರಲ್ಲಿ ಅನೀಶ್ ಕಪೂರ್ ಅವರ ರಚನೆಗಳು ವೌಲ್ಯದ ದೃಷ್ಟಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಗಳಿಸಿದೆ ಮತ್ತು ಕಳೆದ ಸಾಲಿನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ . ಕಳೆದ ಸಾಲಿನಲ್ಲಿ ಇವರು ರಚಿಸಿದ 102 ಚಿತ್ರಕಲೆಗಳು ಮಾರಾಟವಾಗಿದೆ ಎಂದು ಸರ್ವೆಯ ವರದಿ ತಿಳಿಸಿದೆ. ಚೀನಾದ ಶಾಂಘೈ ಮೂಲದ ಪ್ರಕಾಶನ ಸಂಸ್ಥೆ ‘ಹ್ಯೂಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್’ 2018ರ ಎಪ್ರಿಲ್‌ನಿಂದ 2019ರ ಮಾರ್ಚ್‌ವರೆಗಿನ ಅವಧಿಯಲ್ಲಿ ಭಾರತೀಯ ಸಕ್ರಿಯ ಚಿತ್ರಕಾರರ ಚಿತ್ರಕೃತಿಗಳು ಹರಾಜು ಪ್ರಕ್ರಿಯೆಯಲ್ಲಿ ಗಳಿಸಿದ ಮೊತ್ತದ ಆಧಾರದಲ್ಲಿ ಅಗ್ರ 50 ಚಿತ್ರಕಾರರ ಪಟ್ಟಿಯನ್ನು ತಯಾರಿಸಿದೆ. ಈ ವರ್ಷ ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟವಾದ ಭಾರತೀಯ ಕಲಾವಿದರ ರಚನೆಯೆಂದರೆ ಅಕ್ಬರ್ ಪದಮ್‌ಸಿಯವರ ‘ನೇಕೆಡ್ ನ್ಯೂಡ್’. 2018ರ ಜೂನ್‌ನಲ್ಲಿ ಪುಂದೋಲೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಚಿತ್ರ 11.70 ಕೋಟಿ ರೂ.ಗೆ ಮಾರಾಟವಾಗಿದೆ.

ಕೃಷೇನ್ ಖನ್ನಾ, ಜೋಗೆನ್ ಚೌಧುರಿ, ರಾಖಿಬ್ ಶಾ, ಸಕ್ತಿ ಬರ್ಮನ್, ಥೋಟ ವೈಕುಂಟಮ್ ಹಾಗೂ ಹಿಮ್ಮತ್ ಶಾ ಮುಂತಾದ ಚಿತ್ರಕಾರರ ಹೆಸರೂ ಈ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಶೇ.24ರಷ್ಟು ಮಹಿಳೆಯರು ಇರುವುದು ಗಮನಾರ್ಹವಾಗಿದೆ. ಸಕ್ರಿಯ ಮಹಿಳಾ ಚಿತ್ರಕಾರರ ಸಾಲಿನಲ್ಲಿ ಅರ್ಪಿತಾ ಸಿಂಗ್ ಪ್ರಥಮ ಸ್ಥಾನದಲ್ಲಿದ್ದು, ಕಳೆದ ವರ್ಷ ಇವರು ರಚಿಸಿದ 12 ಚಿತ್ರಕಲೆಗಳು 5.25 ಕೋಟಿ ರೂ. ಗಳಿಸಿವೆ. ಇವರು ರಚಿಸಿದ ‘ಅಶ್ವಮೇಧ’ ಚಿತ್ರಕಲೆ 1.87 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News