ಪಾರ್ಲಿಮೆಂಟಿನಲ್ಲಿ ಪ್ರಮಾಣವಚನವೆಂಬ ಪ್ರಹಸನ
ಹಿಂದೆಂದೂ ಕಾಣದ ಅಸಂಸದೀಯ ನಡವಳಿಕೆಗಳು 17ನೇ ಲೋಕಸಭೆಯ ಸದಸ್ಯರ ಪ್ರಮಾಣವಚನ ಸಂದರ್ಭದಲ್ಲಿ ಕಂಡು ಬಂದಿತು. ಭಾರತದ ಪ್ರಜಾಸತ್ತೆಯ ಮಂದಿರವಾದ ಪವಿತ್ರ ಪಾರ್ಲಿಮೆಂಟಿನಲ್ಲಿ ಅತ್ಯಂತ ಹೆಚ್ಚು ಬಾರಿ ‘ಜೈ ಶ್ರೀರಾಮ್’, ‘ವಂದೇ ಮಾತರಂ’ ಘೋಷಣೆ ಮೊಳಗಿತು. ಬಿಜೆಪಿ ಸಂಸದರು ರಾಮನ ಹೆಸರಿನಲ್ಲಿ ಜನರನ್ನು ಹೆದರಿಸುತ್ತಿದ್ದಾರೆ. ಇಲ್ಲಿಯವರೆಗೆ ಭಾರತದ ತಿರಂಗಾ ಧ್ವಜವನ್ನು ನಾಗಪುರದ ಅವರ ಕಚೆೇರಿ ಮೇಲೆ ಹಾರಿಸಲು ಬಿಡಲಿಲ್ಲ. ಬದಲಾಗಿ ಧ್ವಜ ಹಾರಿಸಲು ಬಂದವರ ಮೇಲೆ ಕೇಸು ಹಾಕಿದವರು ಈ ಸಂಘಿಗಳು. ಇಂದು ಇವರು ದೇಶಭಕ್ತಿಯ ಮಾತನ್ನು ಹೇಳುತ್ತಿರುವುದು ಹಾಸ್ಯಾಸ್ಪದ. ಸಾವರ್ಕರ್ ಬ್ರಿಟಿಷರ ಗುಲಾಮಗಿರಿಯನ್ನು ಒಪ್ಪಿಕೊಂಡವರು. ಜೀವನಪರ್ಯಂತ ಅವರ ಗುಲಾಮರಾಗಿರುವುದನ್ನು ಒಪ್ಪಿಮುಚ್ಚಳಿಕೆ ಬರೆದುಕೊಟ್ಟ ಅವರನ್ನು ‘ವೀರ’ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ.
ಬ್ರಿಟಿಷರಿಗೆ ತಲೆಬಾಗದೆ ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಬಲಿಕೊಟ್ಟವರು ನಿಜವಾದ ದೇಶಭಕ್ತರಾಗಿದ್ದಾರೆ. ‘ಸರ್ ಕಟಾ ಸಕತೇ ಹೈ ಲೇಕಿನ್ ಸರ್ ಝುಕಾ ಸಕತೇ ನಹಿಂ’’ ಎಂದು ನಗು ನಗುತ್ತಾ ಗಲ್ಲಿಗೇರಿದ್ದ ಅಶ್ಫಾಖುಲ್ಲಾಖಾನ್, ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರು ಮುಂತಾದವರು ನಿಜವಾದ ದೇಶಭಕ್ತರು. ಇಂತಹ ಪವಿತ್ರವಾದ ಸ್ವ್ವಾತಂತ್ರದ ದುರ್ಬಳಕೆ ಸಲ್ಲದು. ಭಾರತದ ಸಂಸತ್ ಭವನದಲ್ಲಿ ನಡೆದ ಕ್ಷುಲ್ಲಕ ಕಿರುಚಾಟವು ಸಂಸತ್ ಭವನದ ಪಾವಿತ್ರ್ಯಕ್ಕೆ ಮಸಿ ಬಳಿಯಿತು. ಅಲ್ಲಿ ‘ಜೈ ಶ್ರೀರಾಮ್’ ಘೋಷಣೆಯು ಅಣಕು ಪ್ರದರ್ಶನವಾಗಿ ಕಂಡುಬಂದಿತು. ಇದರಿಂದ ಉತ್ತೇಜಿತರಾಗಿ, ‘ಜೈ ಬಂಗಾಳ’, ‘ವಂದೇ ಮಾತರಂ, ‘ಜೈ ದುರ್ಗೆ’, ‘ ಜೈಕಾಳಿ’, ಅಲ್ಲಾಹು ಅಕ್ಬರ್, ಎಂದು ಕೂಗುತ್ತಿರುವ ಸಂಸತ್ ಸದಸ್ಯರಿದ್ದರು. ಬಿಜೆಪಿಯ ಸದಸ್ಯರು ಮೋದಿ ನಾಮ ಜಪಿಸುತ್ತಲೇ ಸಂಸತ್ತು ಪ್ರವೇಶಿಸಿದವರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರನ್ನು ಓಡಿಸಲು 1942ರಲ್ಲಿ ನಡೆದ ಭಾರತ ಬಿಟ್ಟು ತೊಲಗಿ- ಆಂದೋಲನದಲ್ಲಿ ಆರೆಸ್ಸೆಸ್ ಆಗಲಿ ಬಿಜೆಪಿ ಆಗಲಿ ಭಾಗವಹಿಸಿರಲಿಲ್ಲ. ಇದರಿಂದ ಅವರಿಗೆ ಭಾರತದ ಸ್ವಾತಂತ್ರದ ಸಂಕಟದ ದಿನಗಳ ಬಗ್ಗೆ ಯಾವುದೇ ಪರಿಜ್ಞಾನ ಇಲ್ಲವಾಗಿದೆ.
ಹಿಂದೂಗಳ ಆರಾಧ್ಯದೈವವಾದ ರಾಮನು ಮರ್ಯಾದಾ ಪುರುಷೋತ್ತಮ, ಪೂಜ್ಯನೀಯನೆಂದು ಪರಿಗಣಿಸಲ್ಪಟ್ಟಿದ್ದಾನೆ. ರಾಮಾಯಣವನ್ನು ತಮ್ಮ ಧರ್ಮ ಗ್ರಂಥವೆಂದೂ ಹಿಂದೂಗಳು ನಂಬುತ್ತಾರೆ. ಅಂತಹ ವ್ಯಕ್ತಿಯನ್ನು ಸಂಸತ್ತಿನಲ್ಲಿ ಅವಮಾನಿಸುವುದು ಸಂಸದರಿಗೆ ಸಲ್ಲದ ಮಾತು. ರಾಮನಾಮವನ್ನು ರಾಜಕೀಯಕ್ಕೆ ಬಂಡವಾಳ ಮಾಡಿಕೊಳ್ಳಲಾಯಿತು. ಕೇವಲ ವಿಪಕ್ಷವನ್ನು ಛೇಡಿಸಲು ಮತ್ತೆ ಮತ್ತೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಶಾಸಕರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಸಾಮಾನ್ಯ ಜನರ ರಾಮ ಇಂದು ಪಾರ್ಲಿಮೆಂಟಿನಲ್ಲಿ ವಿಪಕ್ಷದ ಜನರನ್ನು ಹೆದರಿಸುವ ಅಸ್ತ್ರವಾಗಿ ಬಳಕೆಯಾಗಿರುವುದು ವಿಷಾದನೀಯ. ಅವರಿಗೆ ರಾಮನಲ್ಲಿ ಯಾವುದೇ ವಿಶ್ವಾಸವಿಲ್ಲ. ಬದಲಾಗಿ ರಾಮನ ನಾಮವನ್ನು ಅನ್ಯ ಧರ್ಮೀಯರನ್ನು ಹೆದರಿಸಲು ಒಂದು ತಂತ್ರವಾಗಿ ಬಳಸುತ್ತಿದ್ದಾರೆ. ಸ್ವತ: ರಾಮನೇ ಎದುರಿಗೆ ಬಂದರೂ ಇದನ್ನು ಒಪ್ಪಲಾರ. ಮರ್ಯಾದಾ ಪುರುಷನನ್ನು ಸಂತೆಯ ಸರಕನ್ನಾಗಿಸಿರುವುದು ಶೋಚನೀಯ. ಧರ್ಮ, ದೇವರನ್ನು ನಂಬುವುದು ಬಿಡುವುದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಅಲ್ಲಾ, ಶಿವ, ರಾಮ, ಏಸು ಅವರವರ ವೈಯಕ್ತಿಕ ನಂಬಿಕೆಗೆ ಮಾತ್ರ ಸೀಮಿತವಾಗಿದೆ. ಅವು ಪಾರ್ಲಿಮೆಂಟಿನಲ್ಲಿ ಘೋಷಣೆಗಳಾಗಬಾರದು. ಅಸದುದ್ದಿನ್ ಉವೈಸಿ ಹಾಗೂ ಮಮತಾ ಬ್ಯಾನರ್ಜಿಯವರು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ ಸಂಸದರ ಕಿರುಚಾಟವು ಅತಿಯಾಗಿತ್ತು.
ಅಂತೂ ಪ್ರಮಾಣವಚನ ಸ್ವೀಕಾರ ಸಂದರ್ಭವು ಧರ್ಮಯುದ್ಧದ ರಣಭೂಮಿಯಾಗಿ ಮಾರ್ಪಟ್ಟಿದ್ದಂತೂ ನಿಜ. ಶ್ರೀರಾಮನು ಬಡ ಜನರ ಸಂಗಾತಿಯಾಗಿದ್ದಾನೆ. ಈ ಮರ್ಯಾದಾ ಪುರುಷ ರಾಮನ ಅಕ್ಕ ಪಕ್ಕದಲ್ಲಿ ತಮ್ಮ ಲಕ್ಷ್ಮಣ ಮತ್ತು ಪತ್ನಿ ಸೀತೆ, ಸೇವಕ ಹನುಮಂತರಿರುತ್ತಾರೆ. ಇಂತಹ ರಾಮನ ಕುಟುಂಬದ ಚಿತ್ರವನ್ನು ಜನರು ನಂಬುತ್ತಾರೆ. ಇಂತಹ ತುಂಬಿದ ಕುಟುಂಬದ ರಾಮನನ್ನು ಕುಟುಂಬದ ಫ್ರೇಮ್‌ನಿಂದ ಹೊರಗೆ ತೆಗೆದು ಏಕೈಕ ರಾಮನ ಮೂರ್ತಿ ನಿಲ್ಲಿಸಿದರೆ, ಅವನು ಜನ ಸಾಮಾನ್ಯರ ರಾಮನಾದಾನೇ? ಸಾಮಾನ್ಯ ಜನರದಲ್ಲ. ಬಿಜೆಪಿಯವರು ಶ್ರೀರಾಮನ ಕುಟುಂಬವನ್ನೇ ಮಾಯ ಮಾಡಿ, ಕೇವಲ ರಾಮನೊಬ್ಬನ ಮೂರ್ತಿಯನ್ನೇ ನಿಲ್ಲಿಸಿ ಸೀತೆಯ ಹಕ್ಕನ್ನೂ ಜಸೋದಾಬೆನ್‌ರಂತೆ ಕಸಿಯುತ್ತಿದ್ದಾರೆ. ಒಬ್ಬ ಸಂಸದನಂತೂ ‘‘ಜೈ ಗೋರಖನಾಥ’’ ಎಂದು ಕೂಡ ಹೇಳುತ್ತಾನೆ. ಎಂತಹ ಸ್ಥಿತಿಗೆ ತಲುಪಿತಲ್ಲಾ ನಮ್ಮ ಸಂಸತ್ತು?.
ಭಾರತೀಯ ಪ್ರಜಾತಂತ್ರ, ನಮ್ಮ ಹಕ್ಕು, ನಮ್ಮ ಸ್ವಾತಂತ್ರ್ಯ ಪಾರ್ಲಿಮೆಂಟಿನ ಇದೇ ಪವಿತ್ರ ಮಂದಿರದಲ್ಲಿ ಚರ್ಚಿತವಾಗುತ್ತವೆ. ಇಂತಹ ಸಂಸತ್ ಭವನದಲ್ಲಿ ಜನಪ್ರತಿನಿಧಿಗಳಿರುತ್ತಾರೆಯೇ ಹೊರತು ಧರ್ಮದ ವಾರಸುದಾರರು ಇರಬಾರದು. ಇಂತಹ ಸಂಸತ್ತಿನಲ್ಲಿ ಜನರನ್ನು ‘ಜೈಶ್ರೀರಾಮ್’ ಎಂದು ಕೂಗುತ್ತ ಜನರನ್ನು ಧರ್ಮದ ಹೆಸರಲ್ಲಿ ಉದ್ರೇಕಗೊಳಿಸುತ್ತಿರುವ ವಿಪರ್ಯಾಸ ನಮ್ಮ ಕಣ್ಣೆದುರಿಗಿದೆ. ಈ ಮೂಲಕ ಜನರನ್ನು ಭಯಭೀತಗೊಳಿಸಲಾಗುತ್ತಿದೆ. ಜನಮಾನಸದಲ್ಲಿ ಭಯ ಬಿತ್ತಲಾಗುತ್ತಿದೆ. ರಾಮನ ಹೆಸರನ್ನು ಈ ಮೂಲಕ ಅಪವಿತ್ರಗೊಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬಿ ಕ್ರಾಂತಿಕವಿ ‘ಪಾಶ್‘ನ ಕವಿತೆಯ ಸಾಲುಗಳು ನೆನಪಾಗುತ್ತವೆ.
ಪಾಶ್ ಹೇಳುತ್ತಾನೆ.
‘‘ದೇಶವೆಂದರೆ ಅಪ್ಪುಗೆಯಂತಹ ಬೆಚ್ಚನೆಯ
ಭಾವವೆಂದು ತಿಳಿದಿದ್ದೆವು.
ದೇಶವೆಂದರೆ ಕಾಯಕವೆಂಬನುಭಾವವೆಂದು ತಿಳಿದಿದ್ದೆವು,
ದೇಶವೆಂದರೆ ಬಲಿದಾನದಂಥ ಬದ್ಧತೆಯೆಂದು ತಿಳಿದಿದ್ದೆವು
ಒಂದು ವೇಳೆ ದೇಶವೆಂದರೆ
ಆತ್ಮರಹಿತ ಯಾವುದೋ ಕಾರ್ಖಾನೆಯೆನಿಸಿದರೆ
ಅಥವಾ ವಂಚನೆಯ ಪ್ರಯೋಗಶಾಲೆಯಾದರೆ
ಅದರಿಂದ ನಮಗೆ ಅಪಾಯವಿದೆ.’’