ಹೋರಾಟದಿಂದ ಮಾತ್ರ ಮನುಷ್ಯತ್ವ ಮತ್ತೆ ಸಿಕ್ಕೀತು

Update: 2019-07-11 18:49 GMT

ಬಹಿಷ್ಕೃತ ಹಿತಕಾರಿಣಿ ಸಭೆಯ ವತಿಯಿಂದ ಜನ ಜಾಗೃತಿಗಾಗಿ ಜಿಲ್ಲೆಯಲ್ಲೊಂದು ಸಭೆಯನ್ನು ಆಯೋಜಿಸುವ ಕಾರ್ಯಕ್ರಮವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಮ್ಮಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ‘ಮುಂಬೈ ಇಲಾಖಾ ಪ್ರಾಂತೀಯ ಬಹಿಷ್ಕೃತ ಪರಿಷತ್ತು ಮೂರನೆಯ ಅಧಿವೇಶನ’ ಅನ್ನುವ ಸಭೆ ಬಾಬಾ ಸಾಹೇಬರ ಅಧ್ಯಕ್ಷತೆಯಲ್ಲಿ ದಿನಾಂಕ 10-11ನೆಯ ಎಪ್ರಿಲ್ 1925ರಂದು ಆಯೋಜಿಸಲಾಯಿತು. ಅಂದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮಾತನಾಡುತ್ತಾ,

ಈ ದೇಶದಲ್ಲಾಗುತ್ತಿರುವ ವಿವಿಧ ಘಟನೆಗಳಲ್ಲಿ ನಮಗೆಲ್ಲ ಅತ್ಯಂತ ಹತ್ತಿರದ ಘಟನೆಯೆಂದರೆ ವೈಕಂನಲ್ಲಿಯ ಸತ್ಯಾಗ್ರಹ. ಹಾಗಾಗಿ ವೈಕಂ ಸತ್ಯಾಗ್ರಹದಿಂದ ನನಗೆ ಹೊಳೆದಿರುವ ವಿಚಾರಗಳನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ.

ವೈಕಂನಲ್ಲಿ ಯಾವ ಚರ್ಚೆಗಳಾಗುತ್ತಿವೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿದೆ. ಎಲ್ಲ ಜನರು, ಪ್ರಾಣಿಗಳು ಓಡಾಡುವಂತಹ ರಸ್ತೆಗಳ ಮೇಲೆ ನಾವೂ ಓಡಾಡುವಂತಾಗಬೇಕು ಅನ್ನೋ ಹಠ ವೈಕಂ ದಲಿತರು ಹಿಡಿದಿದ್ದಾರೆ.

ಈ ಸತ್ಯಾಗ್ರಹದಲ್ಲಾದ ಬದಲಾವಣೆಗಳ ಬಗ್ಗೆ ನಾನಿಲ್ಲಿ ಮಾತನಾಡುವುದಿಲ್ಲ, ಅದು ನಮಗೆ ಸಂಬಂಧಪಟ್ಟದ್ದೂ ಅಲ್ಲ. ಆದರೆ ಈ ಸತ್ಯಾಗ್ರಹ ಒಂದು ವರ್ಷಕ್ಕೂ ಮೇಲ್ಪಟ್ಟು ನಡೆದು ಕಡೆಗೆ ವಿಫಲವಾದದ್ದೊಂದೇ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸತ್ಯಾಗ್ರಹದಿಂದ ಕೆಲವು ರಾಜಕೀಯ ನೇತಾರರ ದೃಷ್ಟಿಕೋನ ಬದಲಾಗಿದೆ ಅನ್ನುವ ಮಾತು ಮಾತ್ರ ನಿಜ. ಏಕೆಂದರೆ ಮೊದಲು ರಾಜಕೀಯ, ಆಮೇಲೆ ಸಾಮಾಜಿಕ ಪ್ರಶ್ನೆಗಳು ಅನ್ನುವ ಮೀಮಾಂಸೆ ಹುಚ್ಚುತನದ್ದು ಅನ್ನುವುದೀಗ ಸಿದ್ಧವಾಗಿದೆ. ಇಷ್ಟು ದಿನ ಕೇವಲ ರಾಜಕೀಯ ಮಾಡಿದ ಮೇಲೆ ರಾಜಕೀಯದ ಗುರಿಯ ಅಡ್ಡ ಏನಾದರೂ ಬರುತ್ತಿದ್ದರೆ ಅದು ಸಾಮಾಜಿಕ ವಿಷಯ ಮಾತ್ರ. ಸಾಮಾಜಿಕ ಪ್ರಶ್ನೆ ಎಷ್ಟು ಮಹತ್ವದ್ದಾಗಿದೆ ಎಂದರೆ ಅದನ್ನು ಎಷ್ಟು ಕಡೆಗಣಿಸಿದರೂ ಒಂದಲ್ಲ ಒಂದು ದಿನ ಅದು ಮತ್ತೊಮ್ಮೆ ಬಾಯಿ ತೆರೆದು ನಿಲ್ಲುತ್ತದೆ. ಸಾಮಾಜಿಕ ಪ್ರಶ್ನೆಗಳನ್ನು ಬದಿಗೊತ್ತಿ ರಾಜಕಾರಣವನ್ನು ಕೈಗೆತ್ತಿಕೊಂಡ ಧುರೀಣರು ಅಥವಾ ಒತ್ತಾಯದಿಂದ ರಾಜಕಾರಣವನ್ನು ಕೈಗೆತ್ತಿಕೊಂಡವರು ಏನನ್ನೂ ಸಾಧಿಸಿಲ್ಲ. ಅಷ್ಟೇ ಅಲ್ಲ ಸಾಮಾಜಿಕ ಪ್ರಶ್ನೆಗಳನ್ನು ಬದಿಗೊತ್ತಿದ್ದರಿಂದ ಅವರು ತಮ್ಮ ರಾಜಕೀಯ ಗುರಿಯನ್ನು ಕೂಡ ಸಾಧಿಸಲಾಗಿಲ್ಲ ಅನ್ನುವುದಕ್ಕೆ ಹಿಂದಿನ ಪರಿಸ್ಥಿತಿಯೇ ಸಾಕ್ಷಿ. ಆ ಸಾಮಾಜಿಕ ಪ್ರಶ್ನೆಯನ್ನವರು ಮೊದಲೇ ಬಗೆಹರಿಸಿದಿದ್ದರೆ ಇಂದು ಎಲ್ಲೆಡೆ ವೈಮನಸ್ಸು ಕಾಣುತ್ತಿರಲಿಲ್ಲ. ಈ ವೈರತ್ವ ಹಾಗೂ ವೈಮನಸ್ಸನ್ನು ತೊಲಗಿಸಲು ಈ ದೇಶದಲ್ಲಾಗುತ್ತಿರುವ ಸಾಮಾಜಿಕ ಅನ್ಯಾಯವನ್ನು ನಿಲ್ಲಿಸುವುದು ಮೊದಲ ಹಾಗೂ ಮಹತ್ವದ ಕೆಲಸವಾಗಿದೆ ಹಾಗೂ ಪ್ರತಿಯೊಬ್ಬ ಹಿಂದೂವೂ ಇದನ್ನು ತನ್ನ ಪವಿತ್ರ ಕಾರ್ಯವೆಂದು ಕೊಂಡು ಮಾಡಬೇಕಾಗಿದೆ ಎಂದು ಹೇಳುವ ಮಹಾನುಭಾವ ಮಹಾತ್ಮಾ ಗಾಂಧೀಜಿಯವರು ಮೊದಲು ಈ ದೇಶದಲ್ಲಿ ಹುಟ್ಟಲೇ ಇಲ್ಲ. ಅವರ ಪ್ರಕಾರ ಸಾಮಾಜಿಕ ಹಾಗೂ ರಾಜಕೀಯ ಅನ್ನುವ ಎರಡು ಬೇರೆ ವಿಷಯಗಳಿಲ್ಲ, ಅವೆರಡೂ ಒಂದೇ. ಹಾಗಾಗಿ ಇಂದು ಮುಸಲ್ಮಾನರ ಐಕ್ಯ ಹಾಗೂ ಅಸ್ಪೃಶ್ಯ ನಿವಾರಣೆಯಾಗದೆ ಈ ದೇಶಕ್ಕೆ ಸ್ವಾತಂತ್ರ ಸಿಗಲಾರದು ಎಂದವರು ಯಾವಾಗಲೂ ಹೇಳುತ್ತಿರುತ್ತಾರೆ. ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಣುವಂತಹ ಕಸ್ತೂರ್ಬಾ ಗಾಂಧಿ ಹಾಗೂ ಲಕ್ಷ್ಮೀಯವರ ನಡುವೆ ಇರುವ ಪಕ್ಷಪಾತದಂತೆಯೇ ಗಾಂಧೀಜಿ ಹಾಗೂ ಅಸ್ಪೃಶ್ಯತೆ ಇವುಗಳ ನಡುವೆ ಪಕ್ಷಪಾತವಿದೆ. ಏಕೆಂದರೆ ಖಾದಿ ಪ್ರಸಾರ ಹಾಗೂ ಹಿಂದೂ ಮುಸಲ್ಮಾನರ ಐಕ್ಯದ ಬಗ್ಗೆಯೇ ಹೆಚ್ಚು ಒತ್ತು ಕೊಡುವ ಗಾಂಧೀಜಿಯವರು ಅಸ್ಪೃಶ್ಯ ನಿವಾರಣೆಯ ಬಗ್ಗೆ ಅಷ್ಟಾಗಿ ಒತ್ತು ಕೊಡುವುದಿಲ್ಲ. ಹಾಗೇನಾದರೂ ಅವರು ಒತ್ತು ಕೊಟ್ಟಿದ್ದಿದ್ದರೆ ‘‘ನೂಲು ತೆಗೆಯದವರ ಮಾತಿಗೆ ಬೆಲೆಯಿಲ್ಲ’’ ಎಂದು ಸಾರಿದಂತೆ ‘‘ಅಸ್ಪೃಶ್ಯತೆ ನಿವಾರಣೆ ಮಾಡದೆ ಕಾಂಗ್ರೆಸ್‌ನಲ್ಲಿ ಪ್ರವೇಶವಿಲ್ಲ’’ ಅನ್ನುವ ಹಠ ಅವರು ಹಿಡಿಯಬಹುದಿತ್ತು. ಇರಲಿ! ಯಾರೂ ಆತ್ಮೀಯತೆಯಿಂದ ಹತ್ತಿರ ಕೂರಿಸದಿರುವಾಗ ಗಾಂಧೀಜಿಯವರ ಸಹಾನುಭೂತಿ ಯಾವುದೇ ಕೆಲಸಕ್ಕಿಲ್ಲದ್ದು. ಈ ತೋರಿಕೆಯ ಸಹಾನುಭೂತಿಯಂತೆಯೇ ವೈಕಂನಲ್ಲಿರುವ ಸತ್ಯಾಗ್ರಹ ವ್ಯವಸ್ಥೆ ಮಾಡಲು ಅವರು ಸ್ವತಃ ವೈಕಂಗೆ ಹೋಗಿದ್ದರು ಹಾಗೂ ಅಲ್ಲಿ ಬ್ರಾಹ್ಮಣರಿಗೆ ಹೊಂದಿಕೊಳ್ಳುವ ಮೂರು ಮಾರ್ಗಗಳನ್ನು ತಿಳಿಹೇಳಿದರು. 1. ಜನಮತ ಸಂಗ್ರಹಿಸಿ ಎಂದು. 2. ಅಸ್ಪೃಶ್ಯತೆ ಇದೆ ಎಂದು ಹೇಳುವ ಶಾಸ್ತ್ರ ನಿಜವೋ ಸುಳ್ಳೋ ಎನ್ನುವುದನ್ನು ಯಾವುದಾದರೂ ಪಂಡಿತರಿಂದ ಖಚಿತಪಡಿಸಿಕೊಳ್ಳಿ ಎಂದು. 3. ಇಲ್ಲದಿದ್ದರೆ ತ್ರಾವಂಕೂರಿನ ದಿವಾನರನ್ನು ಸರಪಂಚರನ್ನಾಗಿ ನೇಮಿಸಿ ಕೆಲವೇ ಆಯ್ದ ಪಂಡಿತ ಪಂಚರ ಸಹಾಯದಿಂದ ಆ ವಿಷಯವನ್ನು ಮುಗಿಸಿ. ಆದರೆ ಆಶ್ಚರ್ಯದ ಸಂಗತಿಯೆಂದರೆ ಅಲ್ಲಿ ಒಬ್ಬ ಬ್ರಾಹ್ಮಣನಿಗೂ ಈ ಮೂರೂ ಮಾರ್ಗಗಳು ಸರಿಬರಲಿಲ್ಲ. ಅವರು ಅಸ್ಪೃಶ್ಯರನ್ನು ತಡೆಯುತ್ತಲೇ ಇದ್ದರು ಹಾಗೂ ತಮ್ಮ ನಿರ್ಧಾರಕ್ಕಂಟಿಕೊಂಡೇ ಇದ್ದರು. ಅಷ್ಟೇ ಅಲ್ಲ, ಇದು ದಲಿತರ ಮೇಲೆ ಅನ್ಯಾಯ ಎಂದು ಹೇಳುವ ಗಾಂಧೀಜಿಯವರಿಗೂ ಯಾವುದೋ ಒಂದು ಶಾಸ್ತ್ರ ಮುಂದಿಡುತ್ತಾ ತಮ್ಮನ್ನು ಸಮರ್ಥಿಸಿಕೊಂಡರು.

 ಹಿಂದೂಗಳ ಈ ಶಾಸ್ತ್ರಗಳನ್ನು ನಾನಿರುವವರೆಗೂ ಓದಿಲ್ಲ. ಹಾಗಾಗಿ ಅದರಲ್ಲಿ ಏನು ಅಡಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಈ ಶಾಸ್ತ್ರದಲ್ಲಿ ಅಸ್ಪೃಶ್ಯತೆ ಇರುವುದು ನಿಜ ಅನ್ನುವ ಖಾತ್ರಿ ನನಗಿದೆ. ಆದರೆ ವ್ಯಾವಹಾರಿಕ ಜೀವನದಲ್ಲಿ ಅಸ್ಪೃಶ್ಯತೆಯನ್ನು ಪಾಲಿಸುವುದು ಧರ್ಮ ಎಂದು ನಮ್ಮ ಧರ್ಮ ಮಾರ್ತಾಂಡರು ಎದೆತಟ್ಟಿ ಹೇಳಬಹುದು ಅಂದುಕೊಂಡಿರಲಿಲ್ಲ. ಇದರರ್ಥ ಒಂದೋ ನಾವು ಎಲ್ಲ ಶಾಸ್ತ್ರಗಳನ್ನು ಸುಟ್ಟು ಭಸ್ಮ ಮಾಡಬೇಕಾಗಿದೆ ಇಲ್ಲವೇ ಆ ಎಲ್ಲ ಶಾಸ್ತ್ರಗಳನ್ನು ವಿಸ್ತಾರವಾಗಿ ಅಭ್ಯಸಿಸಿ ಅಸ್ಪೃಶ್ಯತೆಯ ಸಂಬಂಧವಾಗಿ ತೆಗೆದುಕೊಂಡಿರುವ ನಿರ್ಣಯಗಳನ್ನು ಸುಳ್ಳು ಸಾಬೀತು ಮಾಡಬೇಕಾಗಿದೆ. ಆ ನಿರ್ಣಯಗಳನ್ನು ಸುಳ್ಳು ಸಾಬೀತು ಮಾಡುವುದರಲ್ಲಿ ನಮಗೆ ಅಪಯಶಸ್ಸು ಬಂದರೆ ಕಡೆಯ ತನಕ ಈ ಅಸ್ಪೃಶ್ಯತೆಯನ್ನು ನಾವು ಅನುಭವಿಸಬೇಕಾಗಿದೆ. ಇದೇ ನಮ್ಮ ಧರ್ಮ ಮಾರ್ತಾಂಡರ ದುರಾಗ್ರಹವಿದ್ದರೆ ಈ ಶಾಸ್ತ್ರಗಳನ್ನು ನಾವು ಬೇರೆಯೇ ರೀತಿಯಲ್ಲಿ ನಾಶ ಮಾಡುವುದು ಅಗತ್ಯವಾಗಿದೆ. ಇಂಗ್ಲೆಂಡ್‌ಲ್ಲಿ ಬರ್ಕ್ಲೆ ಅನ್ನುವ ದೊಡ್ಡ ತತ್ವಜ್ಞಾನಿ ಇದ್ದ. ಅವನು ಅನೇಕ ರೀತಿಯ ತತ್ವಜ್ಞಾನದ ಪ್ರಶ್ನೆಗಳನ್ನು ಕೇಳಿ ಜನರನ್ನು ಪೀಡಿಸುತ್ತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜನ ರೋಸಿ ಹೋಗಿದ್ದರು. ಹೀಗೆಯೇ ಬರ್ಕ್ಲೆನ ಪ್ರಶ್ನೆಗಳಿಂದ ರೋಸಿ ಹೋಗಿದ್ದ ಮನುಷ್ಯನೊಬ್ಬ ಡಾ. ಜಾನ್ಸನ್ ಅವರ ಸಹಾಯ ಕೇಳಲು ಅವರಲ್ಲಿಗೆ ಹೋಗಿ ಬರ್ಕ್ಲೆ ಹಾಕಿದ ಪ್ರಶ್ನೆಯನ್ನು ಅವರೆದುರುಗಿಟ್ಟು ಇದಕ್ಕೆ ಉತ್ತರ ಕಂಡುಕೊಳ್ಳುವಂತೆ ಯಾಚಿಸಿದ. ಡಾ. ಜಾನ್ಸನ್ ಅವರು ಹತ್ತಿರವೇ ಬಿದ್ದಿದ್ದ ಕಲ್ಲೊಂದರ ಮೇಲೆ ಪ್ರಶ್ನೆ ಬರೆದಿದ್ದ ಕಾಗದವನ್ನಿಟ್ಟು ಅದನ್ನು ಜೋರಾಗಿ ಒದ್ದು ‘‘ನೋಡು ಇದು ನಾನವನ ಪ್ರಶ್ನೆಗೆ ಕಂಡುಕೊಂಡ ಉತ್ತರ’’ ಅಂದರು. ಇದೇ ನ್ಯಾಯ ಈ ಶಾಸ್ತ್ರಗಳಿಗೂ ಅನ್ವಯಿಸುತ್ತದೆ. ನಿಜವಾಗಿಯೂ ಈ ಎಲ್ಲ ಶಾಸ್ತ್ರಗಳು ಜನತೆಗೆ ಅವಮಾನ ಮಾಡುವಂತಹವು. ಸರಕಾರ ಯಾವತ್ತೂ ಇವುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಏನಿಲ್ಲವೆಂದರೂ ಈ ಶಾಸ್ತ್ರಗಳನ್ನು ತಮ್ಮ ಅಸ್ತ್ರಗಳನ್ನಾಗಿ ಮಾಡಿಕೊಳ್ಳುವ ಜನ ಇಂದಿನ ಸಾಮಾಜಿಕ ಪರಿಸ್ಥಿತಿ ಸುಧಾರಿಸುವವರೆಗಾದರೂ ಸುಮ್ಮನಿರಬೇಕು. ಇಲ್ಲದಿದ್ದರೆ ನಾವೆಲ್ಲರೂ ಭಯಂಕರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ಸಮಾನರಾಗಿ ಪ್ರಸಂಗಕ್ಕನುಗುಣವಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಸಮಾಜದಲ್ಲಿ ಸುಖ ಶಾಂತಿ ನೆಲೆಸುವಂತೆ ವರ್ತಿಸುವುದೇ ಸಮಾಜ ರಚನೆಯ ಆದ್ಯ ಗುರಿಯಾಗಿದೆ. ಸಮಾಜದ ಕೆಲವೇ ಜನ ಪ್ರಬಲರಾಗಿ ಉಳಿದ ಜನರನ್ನು ಪೀಡಿಸುವುದರಿಂದಲೇ ಸಮಾಜ ಸಂಘಟನೆಯ ಗುರಿ ಸಾಧಿಸಲಾಗುತ್ತಿಲ್ಲ ಅನ್ನೋದು ಕಣ್ಣಿಗೆ ಕಂಡ ದಿನವೇ ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ಕಷ್ಟಪಟ್ಟು ಆ ಮತಾಂಧರ ಜುಟ್ಟು ಹಿಡಿದು ಅವರನ್ನು ಬಗ್ಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಎಲ್ಲರ ಪರಿಸ್ಥಿತಿಯನ್ನೂ ಸಮನಾಗಿಡಲು ಪ್ರತಿಯೊಬ್ಬರೂ ಹೋರಾಡಬೇಕು ಅನ್ನುವುದು ನನ್ನ ಬೇಡಿಕೆಯಲ್ಲ. ಇಜ್ಜೋಡು ಮದುವೆಗಳಲ್ಲಿ ಅಂದರೆ ಸಣ್ಣ ವಯಸ್ಸಿನ ಮದುಮಗ ಹಾಗೂ ದೊಡ್ಡ ವಯಸ್ಸಿನ ಮದುಮಗಳ ಮದುವೆ ಗೊತ್ತಾದರೆ ಯೌವನಾವಸ್ಥೆಗೆ ಬಂದಿರುವ ಹೆಂಡತಿಯನ್ನು ಕಟ್ಟಿಕೊಂಡು ಗಂಡನ ಪಚೀತಿ ಯಾಗುವುದು ಬೇಡ ಅಂದುಕೊಂಡು ಆಕೆಯ ಉಪ್ಪುಖಾರ ನಿಲ್ಲಿಸಿಬಿಡಿ ಎಂದು ಆಜ್ಞೆ ಕೊಡುತ್ತಾರೆ (ಇಲ್ಲಿ ಅಂಬೇಡ್ಕರರು ಚಿಕ್ಕವಯಸ್ಸಿನ ಮದುಮಗ ಅಂದರೆ ದಲಿತರು ಹಾಗೂ ದೊಡ್ಡ ವಯಸ್ಸಿನ ಮದುಮಗಳು ಅಂದರೆ ಮೇಲ್ಜಾತಿಯವರು ಅನ್ನುವ ರೀತಿಯಲ್ಲಿ ಮಾತನಾಡುತ್ತಾರೆ) ನಾವಿಲ್ಲಿ ದರಿದ್ರರಾದರೂ ಶ್ರೀಮಂತರ ಹಣ ದೋಚಿ ಅವರನ್ನು ದರಿದ್ರರನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ. ನಾವು ಕೇವಲ ಮಾನವ ಜಾತಿಗೆ ಸೇರಿದ ನಮ್ಮ ಹಕ್ಕುಗಳನ್ನು ನಮಗೆ ಕೊಡಿ ಎಂದಷ್ಟೇ ಹೇಳುತ್ತಿದ್ದೇವೆ. ಆದರೆ ಅವುಗಳನ್ನೇ ಪಡೆಯಲು ನಮಗೆ ಈ ಶಾಸ್ತ್ರಗಳು ಅಡ್ಡಿಯಾಗುತ್ತಿವೆ. ಮಾನವ ಹಕ್ಕುಗಳನ್ನು ಕಸಿದುಕೊಂಡಾಗಲೆಲ್ಲ ದೊಡ್ಡ ಹೋರಾಟಗಳೇ ಆಗಿವೆ. ಫ್ರಾನ್ಸ್‌ನಲ್ಲಿ ಶ್ರೀಮಂತರು ಬಡವರನ್ನು ಪೀಡಿಸಿದಾಗ ಬಡವರು ಶ್ರೀಮಂತರನ್ನು ಕೊಚ್ಚಿ ಹಾಕಿದ್ದಾರೆ. ಅಮೆರಿಕದಲ್ಲಿ ನೀಗ್ರೋ ಜನರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಆರು ವರ್ಷ ಅಮೆರಿಕನ್ ಜನ ತಮ್ಮ ತಮಲ್ಲೇ ಹೋರಾಡಿದ್ದಾರೆ ಈ ಹೋರಾಟದಲ್ಲಿ ಅನೇಕ ಜನ ಸಾವನ್ನಪ್ಪಿದ್ದಾರೆ ಅನ್ನುವುದು ನಿಜವಾದರೂ ಸತ್ತವರ ಬಲಿದಾನ ವ್ಯರ್ಥವಾಗಲಿಲ್ಲ. ಅವರ ಬಲಿದಾನದಿಂದ ಬದುಕಿದವರ ಜೀವನ ಸಾರ್ಥಕವಾಯಿತು. ಇಂತಹ ಹೋರಾಟದಿಂದಲೇ ನಮ್ಮಿಂದ ಕಸಿದುಕೊಂಡಿರುವ ಮನುಷ್ಯತ್ವ ಮರಳಿ ನಮಗೆ ದೊರಕೀತೆ ಇಲ್ಲ ಏನಾದರೂ ಸಣ್ಣ ಪುಟ್ಟ ಉಪಾಯದಿಂದ ದೊರಕೀತೆ ಅನ್ನುವ ಪ್ರಶ್ನೆಯನ್ನು ಬದಿಗಿಟ್ಟರೂ ಇಷ್ಟೊಂದು ಅನ್ಯಾಯ, ಅವಮಾನ, ಒತ್ತಾಯ ನಮ್ಮ ಮೇಲಾಗುತ್ತಿದ್ದರೂ ನಾವು ಮೂಕರಂತೆ, ಕಿವುಡರಂತೆ ಶಾಂತವಾಗಿದ್ದು ಕೈಲಾಗದವರಾಗಿದ್ದೇವೆ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನಮಗದರ ಬಗ್ಗೆ ದುಃಖವಿಲ್ಲ, ನಮಗೆ ಸಿಟ್ಟು ಬರುವುದಿಲ್ಲ, ನಮಗದರ ಅರಿವೂ ಇಲ್ಲ ಅನ್ನುವುದು ಸೋಜಿಗದ ವಿಷಯ. ಸಣ್ಣ ಇರುವೆ ಕೂಡ ತನ್ನ ಮೇಲೆ ಯಾರದ್ದಾದರೂ ಕಾಲು ಬಿದ್ದರೆ ಕಚ್ಚಿ ಪ್ರತೀಕಾರ ತೋರಿಸುತ್ತದೆ. ನಾವಿಷ್ಟು ದೊಡ್ಡವರಾಗಿದ್ದರೂ ನಮ್ಮ ಮೇಲೆ ಅನ್ಯಾಯವೆಸಗುತ್ತಿರುವವರ ವಿರುದ್ಧ ನಾವು ತಿರುಗೇಳುವುದಿಲ್ಲ. ಇದಕ್ಕೆ ಕಾರಣ ಹುಡುಕಲು ಹೊರಟಾಗ ನನಗೆ ಎರಡು ಕಾರಣಗಳು ಕಂಡವು. ಒಂದು ನಮ್ಮಲ್ಲಿ ಜ್ಞಾನ ಹಾಗೂ ಬುದ್ಧಿ ಇಲ್ಲ. ಇವೆರಡೂ ಇರುವವರು ತಮ್ಮ ಅಧಿಕಾರ ಉಪಯೋಗಿಸಿ ನಮ್ಮ ಮೇಲೆ ಅನ್ಯಾಯ ಮಾಡಿದರು ಹಾಗೂ ಹೇಗೆ ವರ್ತಿಸಬೇಕು ಹೇಗೆ ನಡೆದುಕೊಳ್ಳಬೇಕು ಎನ್ನುವ ನಿಯಮಗಳನ್ನು ನಮ್ಮನ್ನು ಕೇಳದೆ ನಮ್ಮ ಮೇಲೆ ಹೇರಿ ನಾವು ಹಾಗೇ ನಡೆದುಕೊಳ್ಳುವಂತೆ ಬಲವಂತ ಮಾಡಿದರು. ನಾವು ನಮ್ಮ ಕರ್ತವ್ಯದಿಂದ ವಿಮುಖರಾಗಿದ್ದರಿಂದಲೇ ಇಂದು ನಾವಿದನ್ನು ಅನುಭವಿಸುತ್ತಿದ್ದೇವೆ ಹಾಗೂ ನಾವೇ ನಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಂಡಂತಾಗಿದೆ. ನಮ್ಮ ಮನುಷ್ಯತ್ವವನ್ನು ಕಸಿದುಕೊಂಡವರನ್ನು ನಾವಂದೇ ಶಿಕ್ಷಿಸಿದ್ದಿದ್ದರೆ ಇಂದಿನ ಪರಿಸ್ಥಿತಿ ನಮಗೆ ಯಾವತ್ತೂ ಬರುತ್ತಿರಲಿಲ್ಲ ಹಾಗೂ ಚಿನ್ನದಂತಹ ಈ ಭೂಮಿಯ ಮೇಲೆ ಅನ್ನದ ಕಣ ಕಣಕ್ಕೂ ಪರರಲ್ಲಿ ಯಾಚಿಸುವ ದಯನೀಯ ಸ್ಥಿತಿ ನಮಗೆಂದೂ ಬರುತ್ತಿರಲಿಲ್ಲ. ಅನ್ಯಾಯವನ್ನು ವಿರೋಧಿಸುವ ಬದಲು ನಾವು ಹಳೆಯ ರೂಢಿ ಪರಂಪರೆಗಳನ್ನು ಆಲಂಗಿಸಿಕೊಂಡು ನಮ್ಮ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಕೇವಲ ಜವಾಬ್ದಾರಿಗಳನ್ನೇ ತಲೆಯ ಮೇಲೆ ಹೊತ್ತುಕೊಂಡು ಅವುಗಳನ್ನೂ ಸರಿಯಾಗಿ ನಿಭಾಯಿಸಲಾಗದೆ ತಂದೆ ತಾಯಿಗಳಾಗಿ ತಮ್ಮ ಮಕ್ಕಳ ಬಗ್ಗೆ ತಮ್ಮ ಕರ್ತವ್ಯವನ್ನು ಮರೆತಿದ್ದರಿಂದ ನಮ್ಮ ಮಕ್ಕಳ ನಾಶಕ್ಕೆ ನಾವು ತಂದೆ ತಾಯಂದಿರೇ ಕಾರಣರಾಗಿದ್ದೇವೆ. ನಮ್ಮಲ್ಲಿ ತಂದೆಯೇ ಮಗನ ಮದುವೆ ಮಾಡಬೇಕು ಅನ್ನುವ ಒಂದು ದೊಡ್ಡ ಜವಾಬ್ದಾರಿ ತಂದೆಯ ಮೇಲಿದೆ. ಹಾಗೆ ತಂದೆ ಮಗನ ಮದುವೆ ಮಾಡಿ ಕೊಡುತ್ತಾನೆ. ಮದುವೆ ಮಾಡಿಕೊಂಡು ಇನ್ನೇನು ಸಂಸಾರ ಆರಂಭವಾಗಿದೆ ಅನ್ನುವಾಗಲೇ ಆತ ತನ್ನ ಮಕ್ಕಳನ್ನು ಈ ಪ್ರಪಂಚಕ್ಕೆ ತರುವ ಪರಂಪರೆಯನ್ನು ಆರಂಭಿಸುತ್ತಾನೆ. ನಾಲ್ಕೈದು ವರ್ಷಗಳಲ್ಲಿ ಒಂದೆರಡು ಮಕ್ಕಳು ಹುಟ್ಟುತ್ತವೆ. ಅವು ದೊಡ್ಡವರಾಗುವುದರೊಳಗೆ ಅವರ ತಮ್ಮಂದಿರು, ತಂಗಿಯಂದಿರು ಆಗಮಿಸಿರುತ್ತಾರೆ. ಮೊದಲಿಬ್ಬರು ಮಕ್ಕಳ ಮದುವೆ ಆಗುತ್ತಲೇ ಹಿಂದಿರುವ ಮಕ್ಕಳು ಮದುವೆಗೆ ಸಿದ್ಧರಾಗಿ ನಿಲ್ಲುತ್ತಾರೆ. ಆಮೇಲೆ ಆ ಮಕ್ಕಳ ಮಗುವಿನ ಜವಾಬ್ದಾರಿ. ಈ ಪ್ರಕಾರ ಮೇಲ್ಜಾತಿಯವರಲ್ಲೂ ಇದೆ ಆದರೆ ಈ ಪದ್ಧತಿಯ ಅನಿಷ್ಟ ಪರಿಣಾಮ ನಮ್ಮಷ್ಟು ಅವರ ಮೇಲಾಗುವುದಿಲ್ಲ. ಏಕೆಂದರೆ ಅವರು ತಮ್ಮ ಮಕ್ಕಳ ಮದುವೆ ಮಾಡುವ ಮೊದಲು ಅವರನ್ನು ತಮ್ಮ ಕಾಲ ಮೇಲೆ ನಿಲ್ಲಿಸುತ್ತಾರೆ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರು ತಮ್ಮ ಹೆಂಡತಿ ಮಕ್ಕಳ ಜವಾಬ್ದಾರಿ ತಾವು ಹೊರುವಂತಾಗಲು ಸಹಾಯ ಮಾಡುತ್ತಾರೆ. ಹೀಗೆ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಮೊದಲು ಚೆನ್ನಾಗಿ ಓದಿಸಿ ಅವರು ಜವಾಬ್ದಾರಿ ಹೊರುವಂತಾದ ಮೇಲೆಯೇ ಮದುವೆ ಮಾಡುತ್ತಾರೆ. ಆದರೆ ನಮ್ಮ ಜನ ಮಕ್ಕಳ ಮದುವೆ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಒಂದೋ ಸಾಲ ಮಾಡಿ ಮದುವೆ ಮಾಡುವುದು. ಮದುವೆಯಾಗುವ ಹುಡುಗ ಸ್ವತಂತ್ರವಾಗಿ ಹಣಗಳಿಸುವ ಯೋಗ್ಯತೆ ಇಲ್ಲವಾಗುವುದರಿಂದ ಮೊದಲೇ ಸಾಲದಲ್ಲಿ ಮುಳುಗಿ ಮಕ್ಕಳಾದ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚುತ್ತದೆ. ತಮ್ಮ ಮಕ್ಕಳಿಗೆ ತನಗಿಂತ ಒಳ್ಳೆಯ ಶಿಕ್ಷಣ ಕೊಡಿಸುವ ಸಾಮರ್ಥ್ಯವಿರುವುದಿಲ್ಲ. ಹಾಗಾಗಿ ತಮ್ಮ ಸಂಸಾರವೇ ಬೆಳೆಯುತ್ತಿರುವಾಗ ಮಕ್ಕಳಿಗೆಲ್ಲಿ ಶಿಕ್ಷಣ ಕೊಡಿಸುವುದು ಅಂದುಕೊಂಡು ಬುದ್ಧಿ ಇರದ ಆ ಮಕ್ಕಳನ್ನು ಯಾವುದೋ ಕೆಲಸಕ್ಕೆ ಸೇರಿಸಿ ಅವರಿಂದ ಬರುವ ಹಣದಿಂದ ತಮ್ಮ ಸಂಸಾರ ಸರಿದೂಗಿಸುತ್ತಾರೆ.

ಮದುವೆಯ ಬಂಧನದಲ್ಲಿ ಸಿಕ್ಕು ತೊಳಲಾಡುವ ತಂದೆ ಬುದ್ಧಿಯನ್ನಂತೂ ಕಲಿಯುವುದಿಲ್ಲ. ಆದರೆ ತನ್ನ ಮಕ್ಕಳನ್ನೂ ಅದೇ ಸಂಸಾರ ಚಕ್ರದಲ್ಲಿ ಸಿಲುಕಿಸಿ ಅವರನ್ನು ಮುಳುಗಿಸಿಬಿಡುತ್ತಾನೆ. ನಮ್ಮ ಜಾತಿಯ ತಂದೆ ತಾಯಿಯಂದಿರು ತಮ್ಮ ಗಂಡು ಮಕ್ಕಳನ್ನು ಹಾಳು ಮಾಡುತ್ತಿರುವಂತೆಯೇ ಹೆಣ್ಣುಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರುತ್ತಾರೆ. ಸಣ್ಣ ವಯಸ್ಸಿನಲ್ಲಿ ಮಕ್ಕಳ ಮದುವೆ ಮಾಡುವುದರಿಂದ ಆಗುವ ನಷ್ಟಕ್ಕಿಂತಲೂ ಹೆಣ್ಣುಮಕ್ಕಳನ್ನು ದೇವದಾಸಿಯನ್ನಾಗಿ ಮಾಡುವುದರಲ್ಲ್ಲಿ ಅದಕ್ಕಿಂತಲೂ ಹೆಚ್ಚು ನಷ್ಟವಿದೆ. ಹೆಣ್ಣು ಮಕ್ಕಳನ್ನು ಹಿಂದೂ ದೇವತೆಗಳಿಗೆ ವಹಿಸಿಬಿಡುವ ಪರಂಪರೆ ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದರ ಪ್ರಸಾರ ನಮ್ಮ ಜಾತಿಯಲ್ಲೂ ಕೆಲವೆಡೆ ಜೋರಾಗಿದೆ. ಹಿಂದಿನ ಕಾಲದಲ್ಲಿ ಈ ಪದ್ಧತಿ ಸದ್ಭಾವನೆ ಪ್ರೇರಿತವಾಗಿಯೂ ಇದ್ದಿರಬಹುದು. ಆದರೆ ಇಂದು ದೇವರದಾಸಿ ಎಂದರೆ ಇಡೀ ಜಗತ್ತಿನ ಹೊಟ್ಟೆ ಹೊರೆಯುವವಳು ಎನ್ನುವುದೇ ನಿಜ. ಆಕೆ ದೇಹ ಮಾರಿ ತಮ್ಮ ಜನರ ಹೊಟ್ಟೆಹೊರೆಯ ತಕ್ಕದ್ದು!. ಈ ದೇವದಾಸಿಯನ್ನಾಗಿ ಮಾಡುವ ಪದ್ಧತಿ ಎಷ್ಟು ಗಟ್ಟಿಯಾಗಿ ಬೇರುಬಿಟ್ಟಿವೆ ಎಂದರೆ ಇದನ್ನು ಪಾಲಿಸುವ ಜನ ಕಾನೂನಿಗೂ ಹೆದರದವರಾಗಿದ್ದಾರೆ. ಇವರು ತಮ್ಮ ಮಗಳ ಹಿತಶತ್ರುಗಳಷ್ಟೇ ಅಲ್ಲ ಸಮಾಜದ ಶತ್ರುಗಳೂ ಕೂಡಾ. ಇವರು ಮಾಡುವ ಕೆಲಸದ ಪರಿಣಾಮ ಆದ್ಯ ವ್ಯವಸ್ಥೆ ಅಂದರೆ ಕುಟುಂಬ ಕೌಟುಂಬಿಕ ವ್ಯವಸ್ಥೆಯ ಮೇಲೂ ಆಗುತ್ತದೆ. ಏಕ ಪತ್ನಿ ಹಾಗೂ ಏಕ ಪತಿಯೇ ಸರಿಯಾದ ಕೌಟುಂಬಿಕ ಪದ್ಧತಿ. ಕುಟುಂಬವೆಂದರೆ ತಮ್ಮ ಪ್ರಜೆಯ ರಕ್ಷಣೆ ಹಾಗೂ ಪಾಲನೆ ಮಾಡಲು ಸಮಾಜ ರಚಿಸಿರುವ ಸಂಸ್ಥೆ. ಈ ಸಂಸ್ಥೆಯನ್ನು ನಡೆಸುವ ದಂಪತಿಗಳು ಹೆಚ್ಚು ಶುದ್ಧ, ಸಾತ್ವಿಕ ಹಾಗೂ ಸ್ವಾಭಿಮಾನಿಗಳಾಗಿದ್ದಷ್ಟು ಅವರ ಸಂತತಿಗಳು ಶುದ್ಧ ಸಾತ್ವಿಕ ಹಾಗೂ ಸ್ವಾಭಿಮಾನಿಗಳಾಗಿರುವ ಸಾಧ್ಯತೆಗಳಿರುತ್ತವೆ. ಓರ್ವ ಹೆಣ್ಣು ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವುದು, ಇಲ್ಲವೇ ಗಂಡಸೊಬ್ಬ ಹೆಚ್ಚು ಹೆಂಡತಿಯರನ್ನು ಹೊಂದಿರುವಂಥದ್ದು ಸರಿಯಲ್ಲ.

ಭಗವಂತನು ತಮ್ಮ ಭವಿಷ್ಯ ಒಪ್ಪಿಸಿರುವಂತಹ ಜನರಿಗೆ ತಮ್ಮ ಆದ್ಯ ಕರ್ತವ್ಯಗಳ ಪರಿಚಯವಿಲ್ಲದ್ದರಿಂದಲೇ ನಾವಿಂದು ಮಾನಸಿಕ ದೌರ್ಬಲ್ಯಗಳ ಗುಲಾಮರಾಗಿದ್ದೇವೆ. ಅವರಿಗೆ ಅದರ ಪರಿಚಯವಿದ್ದಿದ್ದರೆ ನಮ್ಮ ಪರಿಸ್ಥಿತಿ ದಯನೀಯವಾಗಿರುತ್ತಿರಲಿಲ್ಲ. ಆ ಜನ ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಅನ್ನುವುದು ಬಹಳ ದುಃಖದ ಸಂಗತಿ. ನಮ್ಮ ತಂದೆ ತಾಯಿಗಳು ಭವಿಷ್ಯದ ಬಗ್ಗೆ ಯೋಚಿಸದೆ ಸಿಕ್ಕಾಪಟ್ಟೆ ಮಕ್ಕಳನ್ನು ಹಡೆದು ಗುಲಾಮಗಿರಿಯ ಮಾರುಕಟ್ಟೆಯನ್ನೇ ತೆರೆದಿದ್ದಾರೆ ಅನ್ನೋದು ಮುಂಬರುವ ಅನರ್ಥದ ಸೂಚನೆಯಾಗಿದೆ. ಮಾನ್ಯರೇ, ನಮ್ಮ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಎಂದೆಲ್ಲ ನಾವು ಮಾತನಾಡಿಕೊಳ್ಳುತ್ತೇವೆ. ಆ ಜನ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಅನ್ನುವುದೆಲ್ಲ ನಿಜ. ಆದರೆ ಈ ಅನ್ಯಾಯವನ್ನು ತಡೆಗಟ್ಟುವುದು ಹೇಗೆ? ಇದಕ್ಕಿರುವ ಒಂದೇ ಉಪಾಯವೆಂದರೆ ಅನ್ಯಾಯ ಮಾಡುತ್ತಿರುವ ಜನರಿಗಿಂತಲೂ ಶಕ್ತಿ ಶಾಲಿಗಳಾಗಿ, ಬುದ್ಧಿವಂತರಾಗಿ ಅವರನ್ನು ಎದುರುಗೊಂಡು, ಅವರಿಗಿಂತ ಒಂದು ಕೈ ಮೇಲಾಗಿ ಅವರ ಕಪಿಮುಷ್ಟಿಯಿಂದ ನಮ್ಮನ್ನು ನಾವೇ ಬಿಡಿಸಿಕೊಳ್ಳುವುದು. ಇಂತಹ ಜಾಣತನ ಹಾಗೂ ಸಾಮರ್ಥ್ಯ ನಮಗೆ ಹೇಗೆ ಮತ್ತು ಯಾವಾಗ ಸಿಕ್ಕಿತ್ತು? ನಾವು ಜಾಣತನ ಹಾಗೂ ಸಾಮರ್ಥ್ಯವನ್ನು ಕಳೆದುಕೊಂಡಿರುವುದು ಮೇಲ್ಜಾತಿಯ ಜನ ನಮ್ಮ ಮೇಲೆ ಮಾಡುವ ಅನ್ಯಾಯದಿಂದಲ್ಲ. ಒಂದು ಪಕ್ಷ ಹಾಗಿದ್ದರೂ ಕೆಲವೊಂದಕ್ಕೆ ಪರಿಹಾರವಿದೆ. ನಮ್ಮ ಜನ ತಿನ್ನುವ ಕಡಿಮೆ ದರ್ಜೆಯ ಅನ್ನವನ್ನು ಉಳಿದ್ಯಾವ ಜಾತಿಯವರು ತಿನ್ನುವುದಿಲ್ಲ. ಆದರೆ ನಮ್ಮ ಜನ ಇದರ ಬಗ್ಗೆ ಯಾವತ್ತಾದರೂ ತಕರಾರು ಮಾಡಿದ್ದಾರೆಯೇ? ಊರೆಲ್ಲಾ ಸುತ್ತಿ ಬೇಡಿತಂದು ತಿನ್ನುವುದರಲ್ಲೇ ನಮ್ಮಲ್ಲಿಯ ಎಷ್ಟೋ ಜನರಿಗೆ ಅಭಿಮಾನವೆನಿಸುತ್ತಿದೆ. ಎಷ್ಟೋ ಮೇಲ್ಜಾತಿಯವರು ಒಳ್ಳೆಬಟ್ಟೆ ತೊಡುತ್ತಾರೆ. ಆದರೆ ನಮ್ಮ ಜನರಿಗೆ ಒಂದು ಪಂಚೆ, ಕಂಬಳಿ ಹಾಗೂ ದಪ್ಪದ ಐವತ್ತು ಮಳದ ಮುಂಡಾಸು ಬಿಟ್ಟರೆ ಬೇರೆಯೇನು ಸಿಗುವುದಿಲ್ಲ. ಆದರೆ ದಾರಿದ್ರದ ಬಗ್ಗೆ ನಮ್ಮ ಜನರು ಯಾವತ್ತಾದರೂ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆಯೇ? ಹೆಣದ ಮೇಲಿನ ಬಟ್ಟೆಯನ್ನೂ ತೊಡಲು ನಾವು ಸಿದ್ಧರಿರುತ್ತೇವೆ. ಸರಕಾರದ ದರ್ಬಾರು, ಕೋರ್ಟು ಕಚೇರಿಗಳಲ್ಲಿ ನಾವು ಒಳಗೆ ಹೋಗುವಂತಿಲ್ಲ ಅನ್ನುವ ಹಕ್ಕುಗಳನ್ನು ಕಳೆದುಕೊಂಡಾಗ್ಯೂ ನಮ್ಮ ಜನ ಸುಮ್ಮನಿದ್ದಾರೆ. ಮೇಲ್ಜಾತಿಯವರು ಯಾರಾದರೂ ಮನುಷ್ಯತ್ವಕ್ಕೆ ಬೆಲೆ ಕೊಟ್ಟು ಮೇಲೆ ಕುಳಿತುಕೊಳ್ಳಲು ಹೇಳಿದರೆ ನಮ್ಮ ಜನ ‘‘ಯಜಮಾನರೆ, ನಮ್ಮನ್ನು ಎಕ್ಕಡದಿಂದ ಹೊಡೆಯಿರಿ ಬೇಕಾದರೆ’’ ಎಂದು ನಾವೇ ಮುಂದಾಗಿ ಹೇಳುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75