ಅರಣ್ಯ ಕಾಯ್ದೆ 1927ಕ್ಕೆ ತಿದ್ದುಪಡಿ: ಜನಸಮುದಾಯಗಳ, ಪರಿಸರದ ವಿನಾಶಕ್ಕೆ ಸೋಪಾನ?!

Update: 2019-07-22 18:25 GMT

ರಾಷ್ಟ್ರೀಯ ಅಭಿವೃದ್ಧಿಯ ಆಶೋತ್ತರಗಳನ್ನು ಹಾಗೂ ಅಂತರ್‌ರಾಷ್ಟ್ರೀಯ ಒಪ್ಪಂದಗಳ ಬದ್ಧತೆಗಳನ್ನು ಪೂರೈಸುವುದು ಈಗ ಹಳೇ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಲು ಇರುವ ಕಾರಣಗಳನ್ನಾಗಿ ಸರಕಾರ ಹೇಳಿಕೊಂಡಿದೆ. ಮುಂದುವರಿದು ಅರಣ್ಯ ಹಾಗೂ ಪರಿಸರ ರಕ್ಷಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಮಾನ್ಯ ಮಾಡುತ್ತದೆ. ಅಂದರೆ ನಮ್ಮ ದೇಶದ ಕಾಡುಗಳನ್ನು ನೇರವಾಗಿ ಖಾಸಗೀಕರಿಸುವ ಪ್ರಕ್ರಿಯೆ ಕೂಡ ಈ ತಿದ್ದುಪಡಿಗಳಲ್ಲಿ ಸೇರಿದೆ. ಅದರಿಂದ ಅರಣ್ಯ ಭಾರೀ ಕಾರ್ಪೊರೇಟ್‌ಗಳ ಕೈಗೇ ಹೋಗುತ್ತದೆ ಎನ್ನುವುದನ್ನು ಹೇಳಬೇಕಾಗಿಲ್ಲ ತಾನೆ.


 ಮೊನ್ನೆ ಉತ್ತರಪ್ರದೇಶದ ಸೋನಬದ್ರ ಜಿಲ್ಲೆಯ ಗ್ರಾಮವೊಂದರಲ್ಲಿ ಭೂಮಿ ಉಳುಮೆ ಮಾಡುತ್ತಿದ್ದ 10 ಜನ ಗೊಂಡಿ ಆದಿವಾಸಿಗಳನ್ನು ಸುಮಾರು 300ಕ್ಕೂ ಹೆಚ್ಚು ಜನರಿದ್ದ ಪ್ರಭಾವಿ ಭೂಮಾಲಕ ಗುಜ್ಜಾರರ ಗುಂಪು ಹಲ್ಲೆ ನಡೆಸಿ, ಗುಂಡಿಟ್ಟುಕೊಂದು ಹಾಕಿತು. ಹತ್ತಾರು ಜನ ಇತರ ಆದಿವಾಸಿಗಳನ್ನು ಗಾಯಗೊಳಿಸಿತು. ಇದು ಮಾಧ್ಯಮಗಳಲ್ಲಿ ಗಮನ ಸೆಳೆಯುವಂತಹ ಸುದ್ದಿಯಾಗಲೇ ಇಲ್ಲ. ದೇಶದ ಉದ್ದಗಲಕ್ಕೂ ಮುಸ್ಲಿಮರು, ದಲಿತರು, ಆದಿವಾಸಿ ಬುಡಕಟ್ಟುಗಳು, ಮಹಿಳೆಯರ ಮೇಲೆ ಕಿರಾತಕ ದಾಳಿಗಳು ನಡೆಯುತ್ತಿವೆ.

ಈ ದೇಶದ ಸುಮಾರು 20 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಆದಿವಾಸಿ ಬುಡಕಟ್ಟು ಸಮೂಹ ಹಿಂದೆಂದೂ ಇಲ್ಲದಷ್ಟು ಅಭದ್ರತೆಗಳನ್ನು ಎದುರಿಸಬೇಕಾದ ಸ್ಥಿತಿ ಈಗ ಎದುರಾಗಿದೆ. ಬ್ರಿಟಿಷರ ವಿರುದ್ಧ ಸಮರಶೀಲವಾಗಿ ಹೋರಾಡಿ ಅವರ ನಿದ್ದೆಗೆಡಿಸಿದ್ದ ಮಹಾನ್ ಚರಿತ್ರೆ ಇರುವ ಈ ದೇಶದ ಆದಿವಾಸಿ ಬುಡಕಟ್ಟು ಸಮೂಹ ಬಹುಶಃ ಅಂದು ಈ ಮಟ್ಟದ ಬೆದರಿಕೆಗಳನ್ನು ಎದುರಿಸಿರಲಾರದು ಎನಿಸುತ್ತದೆ. ಅಂದು ಸಮರಶೀಲ ಆದಿವಾಸಿಗಳನ್ನು ದಮನಿಸಿ ಅವರ ಪ್ರದೇಶಗಳನ್ನು ಆಕ್ರಮಿಸಿ ಅಲ್ಲಿನ ಸಂಪತ್ತನ್ನು ದೋಚಲು ಬ್ರಿಟಿಷ್ ಸರಕಾರ ಭಾರತೀಯ ಅರಣ್ಯ ಕಾಯ್ದೆ 1927 ಅನ್ನು ಜಾರಿಗೆ ತಂದಿತ್ತು. ಈಗಿನ ಮೋದಿ ಸರಕಾರ ಆ ಕರಾಳ ಕಾಯ್ದೆಯನ್ನು ಮತ್ತಷ್ಟು ಕರಾಳಗೊಳಿಸುವ ತಿದ್ದುಪಡಿಗಳನ್ನು ಮಾಡಲು ಹೊರಟಿದೆ. ಮತ್ತೊಂದು ಕಡೆ ನಿರಂತರವಾದ ಆದಿವಾಸಿ ಹೋರಾಟಗಳ ಪರಿಣಾಮವಾಗಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅನಿವಾರ್ಯವಾಗಿ ಅರಣ್ಯ ಹಕ್ಕು ಕಾಯ್ದೆ 2006 ಅನ್ನು ರೂಪಿಸ ಬೇಕಾಯಿತು. ಅದರ ಪ್ರಕಾರ 2005 ಡಿಸೆಂಬರ್ 13ಕ್ಕೂ ಪೂರ್ವದಿಂದ ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಾ ಬಂದವರಿಗೆ ಈ ಕಾಯ್ದೆಯ ಪ್ರಕಾರ ಅವರು ವಾಸಿಸುವ ಭೂಮಿಯ ಮೇಲೆ ಅವರಿಗೆ ಹಕ್ಕುಗಳನ್ನು ಕಾನೂನುಬದ್ಧಗೊಳಿಸಬಹುದೆಂದಿದೆ. ಆದರೆ ಆ ಕಾಯ್ದೆಯನ್ನು ವಾಸ್ತವದಲ್ಲಿ ಜಾರಿಮಾಡಲು ಮನಸ್ಸಿರದ ಸರಕಾರ ಹಲವಾರು ಗೊಂದಲ ಗೋಜಲುಗಳನ್ನು ಅದರೊಳಗೆ ಸೇರಿಸಿತ್ತು. ಅದರ ಉದ್ದೇಶ ಸ್ಪಷ್ಟ. ಆದಿವಾಸಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟಗಳನ್ನು ದಿಕ್ಕು ತಪ್ಪಿಸುವ ಗುರಿಯೇ ಅದಕ್ಕೆ ಪ್ರಧಾನವಾಗಿತ್ತು. ಹಾಗಾಗಿ ಅರಣ್ಯ ಹಕ್ಕು ಕಾಯ್ದೆಯಡಿ ತಾವಿರುವ ಭೂಮಿಗೆ ಹಕ್ಕು ಪತ್ರಕ್ಕಾಗಿ ಸಲ್ಲಿಸಿದ ಕೋಟ್ಯಂತರ ಅರ್ಜಿಗಳನ್ನು ಬಹುತೇಕವಾಗಿ ನಿರಾಕರಿಸಲಾಯಿತು.

ಅಂಗೀಕರಣಗೊಂಡ ಕೆಲವು ಸಾವಿರ ಅರ್ಜಿಗಳಲ್ಲಿ ಆದಿವಾಸಿಯೇತರ ಅನುಕೂಲಸ್ಥ ಅಕ್ರಮವಾಸಿಗಳದೇ ಗಣನೀಯವಾಗಿದೆ. ಜನರಿಗೆ ಆ ಕಾಯ್ದೆ ಬಗ್ಗೆ ತಿಳುವಳಿಕೆಯನ್ನೇ ನೀಡಿರಲಿಲ್ಲ. ಅಲ್ಲದೆ ಅದನ್ನು ಜಾರಿ ಮಾಡಲು ಕೂಡ ಹಲವಾರು ಕಾನೂನು ತೊಡಕುಗಳನ್ನು ಮುಂದಿಡಲು ಅವಕಾಶ ಅದರಲ್ಲಿ ಸೇರಿಸಲಾಗಿತ್ತು. ಅಧಿಕಾರಶಾಹಿ ಕೂಡ ಈ ಕಾಯ್ದೆಯನ್ನು ಹೇಗೆಲ್ಲಾ ಮಾಡಿ ಅನುಷ್ಠಾನಗೊಳ್ಳದಂತೆ ಮಾಡಬಹುದೆಂಬ ಲೆಕ್ಕಾಚಾರದೊಂದಿಗೆ ಕಾರ್ಯ ನಿರ್ವಹಿಸುತ್ತಾ ಬಂದಿತು. ಇದಕ್ಕೆ ಕರ್ನಾಟಕದಲ್ಲೂ ಸಾಕಷ್ಟು ಉದಾಹರಣೆಗಳಿವೆ. ಕಾಗೋಡು ತಿಮ್ಮಪ್ಪ ಕಳೆದ ಸರಕಾರದ ಕಂದಾಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಹಲವಾರು ಪ್ರಹಸನಗಳನ್ನು ನಾವಿಲ್ಲಿ ಗಮನಿಸಬಹುದು.

ಆದರೆ ಅದರಲ್ಲಿ ಗ್ರಾಮ ಪಂಚಾಯತ್‌ಗಳ ಅನುಮತಿಯನ್ನು ಯಾವುದೇ ಯೋಜನೆಗಳನ್ನು ಜಾರಿಗೊಳಿಸಲು ಕಡ್ಡಾಯ ಗೊಳಿಸಲಾಗಿತ್ತು. ಗ್ರಾಮ ಸಭೆಯ ಅನುಮೋದನೆಯನ್ನು ಕೂಡ ಕಡ್ಡಾಯಗೊಳಿಸಿತ್ತು. ಆದರೂ ಗ್ರಾಮ ಪಂಚಾಯತ್‌ಗಳನ್ನು ಲಂಚ ಹಾಗೂ ಬೆದರಿಕೆಯಡಿ ತಮ್ಮ ಪರವಾಗಿ ಮಾಡಿಕೊಂಡು ಹಾಗೂ ಕಾಟಾಚಾರದ ಗ್ರಾಮಸಭೆಗಳ ಅನುಮೋದನೆಗಳನ್ನು ಹೊಂದಿಸಿ ಭಾರೀ ಕಾರ್ಪೊರೇಟ್‌ಗಳು ತಮ್ಮ ಕೊಳ್ಳೆಯೋಜನೆಗಳಿಗೆ ಅನುಮತಿಗಳನ್ನು ಗಿಟ್ಟಿಸಿಕೊಂಡ ಹಲವು ಪ್ರಕರಣಗಳು ದೇಶಾದ್ಯಂತ ವರದಿಯಾಗಿದ್ದವು. ಅಲ್ಲದೇ ಸರಕಾರಗಳು ಕೂಡ ಅರಣ್ಯ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ಹಲವಾರು ಅಭಿವೃದ್ಧಿ ಹೆಸರಿನ ಯೋಜನೆಗಳನ್ನು ಜಾರಿ ಮಾಡಿದ ಹಲವು ಪ್ರಕರಣಗಳೂ ಇವೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಅದಕ್ಕೆ ಹಲವು ತಿದ್ದುಪಡಿಗಳನ್ನು ಮಾಡಿ ಮೊದಲಿದ್ದ ನಿಬಂಧನೆಗಳನ್ನು ಕಡಿತಗೊಳಿಸಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹೆಚ್ಚುಪೂರಕವನ್ನಾಗಿ ಮಾಡಿತ್ತು. ಆದರೆ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಸ್ಥಳೀಯ ಮಟ್ಟದ ಸಮಿತಿಗಳಂತಹ ರಚನೆಗಳನ್ನು ಸರಿಯಾಗಿ ಎಲ್ಲಿಯೂ ಮಾಡಿರಲಿಲ್ಲ. ಅದಕ್ಕೆ ಬೇಕಾದ ಹಣಕಾಸನ್ನೂ ಒದಗಿಸಿರಲಿಲ್ಲ. ಒಟ್ಟಿನಲ್ಲಿ ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಅರಣ್ಯವಾಸಿಗಳನ್ನು ಮಾನ್ಯ ಮಾಡುವ ಕೆಲಸಗಳನ್ನು ಯಾವ ಸರಕಾರಗಳೂ ಪ್ರಾಮಾಣಿಕವಾಗಿ ಮೊದಲಿನಿಂದಲೂ ಮಾಡಲಿಲ್ಲ. ಬದಲಿಗೆ ಅವರನ್ನು ಅವರ ವಾಸಸ್ಥಳಗಳಿಂದ ಲಕ್ಷಾಂತರ ಸಂಖ್ಯೆಗಳಲ್ಲಿ ವಿವಿಧ ಅಭಿವೃದ್ಧಿ ಹಾಗೂ ಪರಿಸರದ ಹೆಸರಿನ ಯೋಜನೆಗಳಡಿ ಒಕ್ಕಲೆಬ್ಬಿಸುವುದನ್ನು ದೇಶದ ಉದ್ದಗಲಕ್ಕೂ ಮಾಡುತ್ತಾ ಬಂದವು. ಆದರೆ ಪುನರ್ವಸತಿ ಪರಿಹಾರಗಳನ್ನು ನಾಮಮಾತ್ರಕ್ಕೆ ಇಳಿಸಿತು. ಸರಕಾರಗಳು ಹಾಗೂ ಭಾರೀ ಜಾಗತಿಕ ಕಾರ್ಪೊರೇಟ್‌ಗಳು ಶಾಮೀಲಾಗಿ ಇಂತಹ ಹಲವು ಮಾನವ ದುರಂತಗಳ ಸರಮಾಲೆಗಳನ್ನೇ ಮೊದಲಿನಿಂದಲೂ ಸೃಷ್ಟಿಸುತ್ತಾ ಬಂದವು.

ಇದೇ 2019ರ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಪರಿಸರ ಹಾಗೂ ಅರಣ್ಯ ರಕ್ಷಣೆಯ ನೆಪವೊಡ್ಡಿ ಸುಮಾರು 11ಲಕ್ಷಕ್ಕೂ ಹೆಚ್ಚು ಅರಣ್ಯವಾಸಿ ಸಮುದಾಯಗಳನ್ನು ಅಕ್ರಮವಾಸಿಗಳೆಂದು ಅವರನ್ನು ಒಕ್ಕಲೆಬ್ಬಿಸಬೇಕೆಂಬ ಆದೇಶವನ್ನು ಕಾಲನಿಬಂಧನೆಯೊಂದಿಗೆ ಹೊರಡಿಸಿತು. ಅಂತಹ ತೀರ್ಪು ಹೊರಬೀಳಲು ಕೂಡ ಸರಕಾರದ ನೀತಿಗಳೇ ಪ್ರಧಾನ ಕಾರಣವಾಗಿದೆ. ಸರಕಾರಗಳು ಅರಣ್ಯ ಹಕ್ಕು ಕಾಯ್ದೆಯನ್ನು ನ್ಯಾಯೋಚಿತವಾಗಿ ಜಾರಿಮಾಡಲಿಲ್ಲ. ಅವೈಜ್ಞಾನಿಕವಾಗಿ ಕೋಟ್ಯಂತರ ಅರಣ್ಯವಾಸಿ ಸಮುದಾಯಗಳನ್ನು ಅಕ್ರಮ ನಿವಾಸಿಗಳೆಂದು ಕಾನೂನು ಪ್ರಕಾರ ಘೋಷಿಸುವಂತಹ ಸ್ಥಿತಿಯನ್ನು ಕೆಲವು ಪರಿಸರಪ್ರೇಮಿಯೆಂದು ಹೇಳಿಕೊಳ್ಳುವ ಸರಕಾರೇತರ ಸಂಘ ಸಂಸ್ಥೆಗಳು ಹಾಗೂ ಸರಕಾರಗಳು ಸೇರಿ ನಿರ್ಮಾಣ ಮಾಡಿ ಬಿಟ್ಟವು. ಸರಕಾರ ನ್ಯಾಯಾಲಯದಲ್ಲಿ ಆದಿವಾಸಿ ಇನ್ನಿತರ ಅರಣ್ಯವಾಸಿ ಜನಸಮುದಾಯಗಳ ಬದುಕಿನ ಹಕ್ಕುಗಳನ್ನು ರಕ್ಷಿಸಬೇಕೆಂಬ ಸಂಕಲ್ಪದೊಂದಿಗೆ ತನ್ನ ವಾದ ಮಂಡಿಸದೆ ಹೋಯಿತು.

 ನ್ಯಾಯಾಲಯದ ಈ ತೀರ್ಪಿನ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾದ ಮೇಲೆ ಕಳೆದ ಮಾರ್ಚ್‌ನಲ್ಲಿ ಸರಕಾರ ನಾಮ ಮಾತ್ರಕ್ಕೆ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಿತು. ನ್ಯಾಯಾಲಯ ತನ್ನ ಹಿಂದಿನ ತೀರ್ಪಿನ ಜಾರಿಯನ್ನು ಸದ್ಯಕ್ಕೆ ತಡೆಹಿಡಿದಿದೆ. ಆ ಸಂದರ್ಭದಲ್ಲಿ ಈ ವಿಚಾರ ವಿಚಾರಣಾ ಹಂತದಲ್ಲಿರುವಾಗ ಕೇಂದ್ರ ಸರಕಾರ ಏನು ಮಾಡುತ್ತಿತ್ತು ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಈಗ ಅಕ್ರಮವಾಸಿಗಳೆಂದು ತೀರ್ಮಾನಿಸುವ ಮುನ್ನ ಅರಣ್ಯ ಹಕ್ಕು ಕಾಯ್ದೆಯ ನಿಯಮಗಳನ್ನು ಸರಿಯಾಗಿ ಅಳವಡಿಸಲಾಗಿದೆಯೇ ಎನ್ನುವ ಬಗ್ಗೆ ವರದಿಗಳನ್ನು ಕಳಿಸಿಕೊಡಲು ರಾಜ್ಯ ಸರಕಾರಗಳಿಗೆ ಕೇಳಲಾಗಿದೆ. ಸರಕಾರದ ಇಂತಹ ನಡೆಗಳು ಅರಣ್ಯವಾಸಿಗಳ ಸಹಾಯಕ್ಕೆ ಬರಲಾರದು ಎನ್ನುವುದನ್ನು ಸರಕಾರ ಈಗ ಮಾಡಲು ಹೊರಟಿರುವ ಅರಣ್ಯ ಕಾಯ್ದೆ 1927ಕ್ಕೆ ತಿದ್ದುಪಡಿಗಳು ಸ್ಪಷ್ಟಪಡಿಸುತ್ತವೆ.
ಬ್ರಿಟಿಷರು ಜಾರಿಗೆ ತಂದ ಭಾರತೀಯ ಅರಣ್ಯ ಕಾಯ್ದೆ 1927ಕ್ಕೆ 90 ವರ್ಷಗಳ ಇತಿಹಾಸವಿದೆ. ಬ್ರಿಟಿಷರು ಹೋದ ನಂತರವೂ ಭಾರತದಲ್ಲಿ ಮೂಲಭೂತವಾಗಿ ಇದೇ ಕಾಯ್ದೆಯೇ ಜಾರಿಯಲ್ಲಿದೆ ಎನ್ನುವುದು ಆಶ್ಚರ್ಯವಾದರೂ ಸತ್ಯ. ಅಂದರೆ ಭಾರತ ಗಳಿಸಿದ ಸ್ವಾತಂತ್ರ್ಯದ ಹೂರಣವೇನು ಎನ್ನುವುದಕ್ಕೆ ಇದು ಕೂಡ ಒಂದು ಉದಾಹರಣೆಯಾಗಿದೆ.

ಈಗ ಈ ಕಾಯ್ದೆಗೆ ತರುತ್ತಿರುವ ತಿದ್ದುಪಡಿಗಳು ಅರಣ್ಯ ಇಲಾಖೆಗೆ ಅಪರಿಮಿತ ಅಧಿಕಾರವನ್ನು ನೀಡುವಂತದ್ದಾಗಿದೆ. ಅರಣ್ಯ ಇಲಾಖೆಗೆ ಯಾವುದು ಅರಣ್ಯ, ಯಾವುದು ಅರಣ್ಯ ಅಲ್ಲವೆಂದು ತೀರ್ಮಾನಿಸುವ, ಅರಣ್ಯವಾಸಿಗಳ ಹಕ್ಕುಗಳನ್ನು ತಿರಸ್ಕರಿಸುವ ಇಲ್ಲವೇ ಮಾನ್ಯ ಮಾಡುವ ಅಧಿಕಾರಗಳನ್ನು ನೀಡುತ್ತದೆ. ಹಲವರು ವಿಶ್ಲೇಷಿಸುವ ಪ್ರಕಾರ ಇದು ಮತ್ತಷ್ಟು ಅರಣ್ಯ ನಾಶಕ್ಕೆ ಕೂಡ ಕಾರಣವಾಗುತ್ತದೆ. ಯಾಕೆಂದರೆ ಪ್ರಸ್ತಾವಿತ ತಿದ್ದುಪಡಿಗಳಲ್ಲಿ ಸರಕಾರಕ್ಕೆ ಗಣಿಗಾರಿಕೆ ಇತ್ಯಾದಿಗಳಿಗೆ ಅರಣ್ಯ ಪ್ರದೇಶಗಳನ್ನು ಬಿಟ್ಟುಕೊಡುವ ಅವಕಾಶವನ್ನು ಕಲ್ಪಿಸುತ್ತದೆ. ಅಂತಹ ಉದ್ದಿಮೆಗಳು ಅರಣ್ಯದಿಂದ ಹೊರಸಾಗಿಸುವ ಉತ್ಪನ್ನಗಳ ಮೌಲ್ಯದ ಶೇ. 10ನ್ನು ಮೀರದಂತೆ ತೆರಿಗೆಯನ್ನು ಹಾಕಿ ಆ ಹಣವನ್ನು ಅರಣ್ಯೀಕರಣ ಮಾಡಲು, ಅರಣ್ಯ ರಕ್ಷಣೆ ಸಂಬಂಧಿತ ಚಟುವಟಿಕೆಗಳಿಗೆ ಬಳಸಬೇಕೆಂದು ಹೇಳುತ್ತದೆ. ಇಲ್ಲಿ ಅರಣ್ಯೀಕರಣ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ತೆರಿಗೆ ಹಣ ಉಪಯೋಗಿಸಬೇಕೆಂದು ಹೇಳಿರುವುದು ಅರಣ್ಯ ಪ್ರದೇಶಗಳನ್ನು ಕಾರ್ಪೊರೇಟ್ ಕೊಳ್ಳೆಗಳಿಗೆ ಬಿಟ್ಟುಕೊಡಲು ಇರುವ ರಹದಾರಿಯಾಗಿ ಮಾತ್ರ ಪರಿವರ್ತಿತವಾಗುತ್ತದೆ ಎನ್ನುವುದು ಬಹಿರಂಗ ಸತ್ಯ.

ರಾಷ್ಟ್ರೀಯ ಅಭಿವೃದ್ಧಿಯ ಆಶೋತ್ತರಗಳನ್ನು ಹಾಗೂ ಅಂತರ್‌ರಾಷ್ಟ್ರೀಯ ಒಪ್ಪಂದಗಳ ಬದ್ಧತೆಗಳನ್ನು ಪೂರೈಸುವುದು ಈಗ ಹಳೇ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಲು ಇರುವ ಕಾರಣಗಳನ್ನಾಗಿ ಸರಕಾರ ಹೇಳಿಕೊಂಡಿದೆ. ಮುಂದುವರಿದು ಅರಣ್ಯ ಹಾಗೂ ಪರಿಸರ ರಕ್ಷಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಮಾನ್ಯ ಮಾಡುತ್ತದೆ. ಅಂದರೆ ನಮ್ಮ ದೇಶದ ಕಾಡುಗಳನ್ನು ನೇರವಾಗಿ ಖಾಸಗೀಕರಿಸುವ ಪ್ರಕ್ರಿಯೆ ಕೂಡ ಈ ತಿದ್ದುಪಡಿಗಳಲ್ಲಿ ಸೇರಿದೆ. ಅದರಿಂದ ಅರಣ್ಯ ಭಾರೀ ಕಾರ್ಪೊರೇಟ್‌ಗಳ ಕೈಗೇ ಹೋಗುತ್ತದೆ ಎನ್ನುವುದನ್ನು ಹೇಳಬೇಕಾಗಿಲ್ಲ ತಾನೆ.
ಅಗತ್ಯವೆಂದು ಕಂಡುಬಂದಲ್ಲಿ ಅರಣ್ಯವಾಸಿಗಳನ್ನು ಅಲ್ಲಿಂದ ಹೊರದೂಡುವ, ಅವರ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ಈ ತಿದ್ದುಪಡಿಗಳು ನೀಡುತ್ತವೆ.

ಈ ತಿದ್ದುಪಡಿಗಳು ಅರಣ್ಯ ಇಲಾಖೆಯನ್ನು ಅತ್ಯಾಧುನಿಕ ಬಂದೂಕುಗಳನ್ನು ನೀಡಿ ಸಶಸ್ತ್ರೀಕರಣಗೊಳಿಸುವುದರ ಜೊತೆಗೆ ಅರಣ್ಯ ಇಲಾಖೆ ಯಾರನ್ನೇ ಆದರೂ ಅರಣ್ಯ ರಕ್ಷಣೆ, ವನ್ಯ ಮೃಗ ರಕ್ಷಣೆ, ಅರಣ್ಯ ಅತಿಕ್ರಮಣ, ಕಾಡುತ್ಪನ್ನ ರಕ್ಷಣೆಯ ಹೆಸರಿನಲ್ಲಿ ಬಂಧಿಸುವ, ಶಿಕ್ಷಿಸುವ, ಗುಂಡಿಟ್ಟು ಕೊಲ್ಲುವ ಅಧಿಕಾರವನ್ನು ನೀಡುತ್ತದೆ. ಅರಣ್ಯ ಸಂಬಂಧಿತ ಅಪರಾಧಗಳನ್ನು ಮಾಡಿದವರನ್ನು ಮೊದಲಿನಂತೆ ಪೊಲೀಸರಿಗೆ ಒಪ್ಪಿಸುವ ಅಗತ್ಯ ಇಲ್ಲದಂತೆ ಮಾಡುತ್ತದೆ. ಇದು ಒಂದು ರೀತಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ರೀತಿಯಿದೆ. ಯಾಕೆಂದರೆ ಜನಸಾಮಾನ್ಯರ ಮೇಲೆ ದೌರ್ಜನ್ಯ ಹಾಗೂ ಅಕ್ರಮಗಳನ್ನು ಅರಣ್ಯ ಇಲಾಖೆ ನಡೆಸಿದರೂ ಅದರ ಮೇಲೆ ಯಾವುದೇ ಕ್ರಮ ಜರುಗದಂತೆ ಪೂರ್ಣ ಕಾನೂನು ರಕ್ಷಣೆ ನೀಡಲಾಗುತ್ತದೆ.

ಅರಣ್ಯ ಇಲಾಖೆಯಿಂದ ದೌರ್ಜನ್ಯಕ್ಕೆ ಒಳಗಾದವರೇ ತಮ್ಮ ನಿರಪರಾಧವನ್ನು ಮಾತ್ರ ಸಾಬೀತುಪಡಿಸಬೇಕಾದ ಹೊಣೆಗಾರಿಕೆ ಹೊರಿಸುತ್ತದೆ. ನಿರಪರಾಧ ಸಾಬೀತು ಮಾಡಿದರೂ ತಪ್ಪೆಸಗಿದ ಅರಣ್ಯ ಇಲಾಖೆಯ ಮೇಲೆ ದೂರು ಸಲ್ಲಿಸಿ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲದಂತೆ ಮಾಡುತ್ತದೆ.

ಅರಣ್ಯವಾಸಿಗಳು ಕಾನೂನು ಬದ್ಧ ದೇಶವಾಸಿಗಳೆಂದು ತಮ್ಮನ್ನು ತಾವೇ ಅರಣ್ಯ ಅಧಿಕಾರಿಗಳ ಮುಂದೆ ಸಾಬೀತು ಮಾಡಬೇಕಾಗುತ್ತದೆ. ಈ ದೇಶದಲ್ಲಿ ತಲೆತಲಾಂತರದಲ್ಲಿ ವಾಸಿಸುತ್ತಿದ್ದರೂ ಬಹುತೇಕ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಯಾವುದೇ ದಾಖಲೆಗಳು ಈಗಲೂ ಇಲ್ಲದಿರುವಾಗ ತಮ್ಮನ್ನು ತಾವೇ ಈ ದೇಶದ ಅರಣ್ಯದ ವಾಸಿಗಳೆಂದು ಅವರು ಹೇಗೆ ಸಾಬೀತು ಪಡಿಸಲು ಸಾಧ್ಯ. ಆ ತಿಳುವಳಿಕೆ ಕೂಡ ಅವರಲ್ಲಿ ಬಹುತೇಕರಿಗೆ ಇಲ್ಲ. ಆದಿವಾಸಿ ಬುಡಕಟ್ಟು ಸಮುದಾಯಗಳ ಕಾಡುತ್ಪತ್ತಿ ಸಂಗ್ರಹದ ಮೇಲಿನ ಹಕ್ಕನ್ನು ಈ ತಿದ್ದುಪಡಿಗಳು ಮೊಟಕುಗೊಳಿಸಿ ಅರಣ್ಯ ಇಲಾಖೆಯ ಹಿಡಿತಕ್ಕೆ ಒಪ್ಪಿಸುತ್ತದೆ. ಅಂದರೆ ಈ ತಿದ್ದುಪಡಿಗಳು ಜಾರಿಯಾದರೆ ಬದುಕಿನ ಮೂಲವಾದ ಕಾಡುತ್ಪನ್ನದ ಮೇಲಿನ ತಮ್ಮ ಪಾರಂಪರಿಕ ಹಕ್ಕನ್ನು ಆದಿವಾಸಿ ಬುಡಕಟ್ಟು ಸಮುದಾಯಗಳು ಕಳೆದುಕೊಳ್ಳಬೇಕಾಗುತ್ತದೆ. ಅದು ಯಾವುದೋ ಕಾರ್ಪೊರೇಟ್ ಇಲ್ಲವೇ ಮಾಫಿಯಾಗಳಿಗೆ ಅಧಿಕೃತವಾಗಿ ಹೋಗುತ್ತದೆ.

ಭಾರತದ ಅರಣ್ಯ ನಾಶದಲ್ಲಿ ಅರಣ್ಯ ಇಲಾಖೆಯದು ಸಿಂಹಪಾಲಾಗಿದೆ. ಅರಣ್ಯ ಇಲಾಖೆಯ ಹುಟ್ಟಿನ ಮೂಲವೇ ಅರಣ್ಯ ನಾಶವಾಗಿದೆ. ಬ್ರಿಟಿಷರು ಅಂದು ಭಾರತದ ಅರಣ್ಯಸಂಪತ್ತಿನ ಲೂಟಿಗಾಗಿಯೇ ಈ ಇಲಾಖೆಯನ್ನು ಹುಟ್ಟುಹಾಕಿದ್ದರು. ಅಂದಿನಿಂದ ಇಂದಿನವರೆಗೂ ಅರಣ್ಯ ಇಲಾಖೆ ಕಾಡಿನ ರಕ್ಷಣೆಯ ಹೆಸರಿನಲ್ಲಿ ಪ್ರಧಾನವಾಗಿ ನಾಶವನ್ನೇ ಮಾಡುತ್ತಾ ಬಂದಿದೆ. ಭಾರೀ ಕಾರ್ಪೊರೇಟ್‌ಗಳ ಹಿತಾಸಕ್ತಿಗಳನ್ನು ಕಾಪಾಡುವುದು ಮಾತ್ರವಲ್ಲದೇ ನಾಟಾ ಮಾಫಿಯಾ, ಕಾಡುತ್ಪನ್ನ ಮಾಫಿಯಾಗಳೊಂದಿಗೆ ನೇರವಾಗಿ ಈ ಇಲಾಖೆ ಶಾಮೀಲಾಗುತ್ತಾ ಅರಣ್ಯ ನಾಶಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣವಾಗಿದೆ. ಆದಿವಾಸಿ ಬುಡಕಟ್ಟು ಇನ್ನಿತರ ಅರಣ್ಯವಾಸಿ ಸಮುದಾಯಗಳ ಪ್ರಮುಖ ಕಂಟಕವಾಗಿ ಈ ಇಲಾಖೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಭಾರೀ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಪರಿಸರ ಹಾಗೂ ಅಂತರ್ಜಲದ ಶತ್ರುಗಳಾದ ಅಕೇಷಿಯಾ ಹಾಗೂ ನೀಲಗಿರಿ ಮರಗಳನ್ನು ಸಾಮಾಜಿಕ ಅರಣ್ಯ ಯೋಜನೆಯ ಹೆಸರಿನಲ್ಲಿ, ಸಾವಿರಾರು ಎಕರೆಗಳ ಪ್ರದೇಶದಲ್ಲಿ ಬೆಳೆಸಿದ್ದ ಚರಿತ್ರೆ ಇದರದ್ದಾಗಿದೆ. ಪಶ್ಚಿಮ ಘಟ್ಟಕ್ಕೆ ಸರಿಪಡಿಸಲಾಗದ ಹಾನಿ ಮಾಡಿದ ಮೇಲೆ ಈಗ ನೀಲಗಿರಿ, ಅಕೇಷಿಯಾ ಬೆಳೆಯುವುದನ್ನು ಪರಿಸರ ರಕ್ಷಣೆಯ ಹೆಸರಿನಲ್ಲಿ ನಿಷೇಧಿಸಿರುವ ನಾಟಕವನ್ನು ಸರಕಾರ ಮಾಡಿದೆ.

ಅಂದರೆ ಸಮರ್ಪಕವಾಗಿ ಜಾರಿ ಮಾಡದ ಅರಣ್ಯ ಹಕ್ಕು ಕಾಯ್ದೆ 2006 ಅನ್ನು ಕೂಡ ಸಂಪೂರ್ಣವಾಗಿ ಅಸ್ತಿತ್ವರಹಿತವನ್ನಾಗಿ ಈ ಅರಣ್ಯ ಕಾಯ್ದೆ 1927 ರ ತಿದ್ದುಪಡಿಗಳು ಮಾಡುತ್ತವೆ. ನಮ್ಮ ದೇಶದ ಅರಣ್ಯಭೂಮಿ ಮತ್ತದರ ಸಂಪತ್ತಿನ ಮೇಲೆ ಸಂಪೂರ್ಣ ಅಧಿಕಾರವನ್ನು ಸರಕಾರ ಪಡೆದು ಅದನ್ನು ಯಾರಿಗೆ ಬೇಕಾದರೂ ವರ್ಗಾಯಿಸಲು ಅನುಕೂಲವಾಗುವಂತೆ ಈ ತಿದ್ದುಪಡಿಗಳು ಇವೆ. ಈ ವಸಾಹತುಶಾಹಿಗಿಂತಲೂ ಕರಾಳವಾದ ಈ ತಿದ್ದುಪಡಿಗಳನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾಗಿವೆ. ಜನಸಾಮಾನ್ಯರು ಈ ತಿದ್ದುಪಡಿಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News