ನಮಗೆ ಆಘಾತವಾಗಿಲ್ಲ

Update: 2019-08-01 18:29 GMT

‘‘ಭಾರತವು ತನ್ನ ದೇಶದ ಮಿಲಿಯಗಟ್ಟಲೆ ನಾಗರಿಕರನ್ನು ವಿದೇಶಿಯರೆಂದು ಘೋಷಿಸುತ್ತಿದೆ.’’ ಅಸ್ಸಾಮ್‌ನಲ್ಲಿ ಭಾರತ ಮಾಡುತ್ತಿರುವ ಕುಚೇಷ್ಟೆಯನ್ನು ಉಲ್ಲೇಖಿಸಿ ಜುಲೈ ತಿಂಗಳ ಆದಿಯಲ್ಲಿ ‘ದಿ ಇಕನಾಮಿಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ತಲೆಬರಹ ಇದು. ‘‘ಇದು ಬೆಟ್ಟಗಳಲ್ಲಿ ಬುದ್ಧಿ ಭ್ರಮಣೆ’’ ಎಂದೂ ಅಲ್ಲಿ ಸೇರಿಸಲಾಗಿತ್ತು.

ನಾಗರಿಕ ರಾಷ್ಟ್ರೀಯ ನೋಂದಣಿಯನ್ನು ಆ ಪತ್ರಿಕೆ ‘ಕ್ರೂರವಾದ ಅಸಂಗತ ಆಟ’ವೆಂದು ಉಲ್ಲೇಖಿಸಿದೆ. ಅದು ಕಾಫ್ಕಾನ ಜಗತ್ತಿನ ಒಂದು ಭಾಗದಂತೆ ಕಾಣಿಸುತ್ತದೆ. ಯಾಕೆಂದರೆ ಭಾರತವು ಪುರಾವೆಯ ಹೊರೆಯನ್ನು ಹಿಂದು ಮುಂದು ಮಾಡಿದೆ. ‘‘ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲು ಅಸ್ಸಾಂ ತನ್ನ 3.3 ಕೋಟಿ ಜನರಿಗೆ ತಾವು ನಾಗರಿಕತ್ವ ಪಡೆಯಲು ಅರ್ಹರೆಂದು ಸಾಬೀತು ಪಡಿಸುವ ಜವಾಬ್ದಾರಿ ಹೊರಿಸಿದೆ. ಹೀಗೆ ಸಾಬೀತುಪಡಿಸಲಾಗದವರು ಲಾಕಪ್‌ನಲ್ಲಿರಬೇಕಾದ ಅಪಾಯ ಎದುರಿಸಬೇಕಾಗಿದೆ.’’ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸುವ ವರೆಗೆ ಅಲ್ಲಿ ಪ್ರತಿಯೊಬ್ಬರೂ ಅಪರಾಧಿ ಆಗಿರುತ್ತಾರೆ.

ಆದರೆ ‘ದಿ ಇಕನಾಮಿಸ್ಟ್’ ಪತ್ರಿಕೆ ಒಂದು ತಪ್ಪುಮಾಡಿದೆ. ಅದು ಹೀಗೆ ಬರೆದಿದೆ: ‘‘ತಮ್ಮ ಭಾರತೀಯತೆಯನ್ನು ಸಾಬೀತುಪಡಿಸಿಲ್ಲ ಎಂಬ ಕಾರಣಕ್ಕಾಗಿ ಒಬ್ಬ ಯುದ್ಧ ವೀರ ಮತ್ತು 59ರ ಹರೆಯದ ಒಬ್ಬಳು ವಿಧವೆಯನ್ನು ಜೈಲಿಗೆ ತಳ್ಳಿದಂತಹ ಪ್ರಕರಣಗಳನ್ನು ಓದಿ ಭಾರತದ ಜನ ಆಘಾತಕ್ಕೊಳಗಾಗಿದ್ದಾರೆ. ಆದರೆ ಅಸ್ಸಾಂ ರಾಜ್ಯ ಇಂತಹ ಇನ್ನಷ್ಟು ಜನ ಇರಬಹುದೆಂಬ ನಿರೀಕ್ಷೆಯಲ್ಲಿದೆ. ಇಂತಹವರಿಗಾಗಿ ಈಗಾಗಲೇ ಹತ್ತು ಶಿಬಿರಗಳನ್ನು ನಿರ್ಮಿಸಲು ಯೋಜಿಸಲಾಗಿದೆ.’’

ಪತ್ರಿಕೆ ಪ್ರಕಟಿಸಿರುವ ವಿಷಯದಲ್ಲಿ ತಪ್ಪಿಲ್ಲ. ನಾವು ಈ ಕಾನ್ಸಂಟ್ರೇಷನ್ ಕ್ಯಾಂಪ್ (ಮರಣ ಶಿಬಿರ)ಗಳನ್ನು ನಿರ್ಮಿಸುತ್ತಿದ್ದೇವೆ ಎಂಬುದು ಸತ್ಯ ಆದರೆ ಭಾರತದ ಜನರು ಈ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದಾರೆ ಎಂಬುದು ಮಾತ್ರ ನಿಜವಲ್ಲ. ಭಾರತೀಯರು ಸಾಮಾನ್ಯವಾಗಿ ಅಷ್ಟೊಂದು ಮೃದು ಹೃದಯಗಳಲ್ಲ; ಸಾಮೂಹಿಕ ಹಿಂಸೆಯೂ ಸೇರಿದಂತೆ ಹಾಗೆಲ್ಲಾ ಅವರು ಹಿಂಸೆಯಿಂದ ಆತಂಕಿತರಾಗುವುದಿಲ್ಲ. (ನಾವು ಬೀದಿಯಲ್ಲಿ ನಡೆಯುವ ಹಿಂಸೆಯನ್ನು ನಮ್ಮ ಮೊಬೈಲ್ ಫೋನ್ ಗಳಲ್ಲಿ ದಾಖಲಿಸಿಕೊಳ್ಳುತ್ತೇವೆ ಹೊರತು ಅಹಿಂಸೆಯನ್ನು ತಡೆಯಲು ಮುಂದಾಗುವುದಿಲ್ಲ.)

ಅಸ್ಸಾಮ್‌ನಲ್ಲಿ ಈ ಜನರನ್ನು (ಅಕ್ರಮ ವಲಸಿಗರನ್ನು) ನಾವು ಯಾವ ರೀತಿ ಇಟ್ಟಿದ್ದೇವೆಂಬುದನ್ನು ವರದಿ ಮಾಡಲು ಕಳೆದ ವರ್ಷ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಒಂದು ನಿಯೋಗವನ್ನು ಕಳುಹಿಸಿತು. ನಿಯೋಗ ತಂಡದಲ್ಲಿ ಮೂವರು ಸದಸ್ಯರಿದ್ದರು. ಡಾ. ಮಹೇಶ್ ಭಾರದ್ವಾಜ್, ಇಂದ್ರಜೀತ್ ಕುಮಾರ್ ಮತ್ತು ಹರ್ಷ ಮಂದರ್.
ಆ ಜನರನ್ನು ಹಲವು ವರ್ಷಗಳಿಂದ ಜೈಲಿನಲ್ಲಿಡಲಾಗಿದೆ. ‘‘ಕೆಲಸ ಹಾಗೂ ಯಾವುದೇ ರೀತಿಯ ಮನರಂಜನೆ ಇಲ್ಲ, ಅವರ ಕುಟುಂಬಗಳೊಂದಿಗೆ ಯಾವುದೇ ಸಂಪರ್ಕವಿಲ್ಲ ಹಾಗೂ ಬಿಡುಗಡೆಯ ಯಾವ ಭರವಸೆಯೂ ಇಲ್ಲ’’ ಎಂಬುದನ್ನು ತಂಡ ಕಂಡುಕೊಂಡಿತು.‘‘ವಿಶೇಷವಾಗಿ ಮಹಿಳೆಯರ ಶಿಬಿರದಲ್ಲಿರುವ ಮಹಿಳೆಯರು ಸತ್ತಾಗ ಶೋಕತಪ್ತರಾಗಿರುವವರ ಹಾಗೆ ಸತತವಾಗಿ ಅಳುತ್ತಿದ್ದರು’’

ಸರಕಾರವು ದಿಗ್ಬಂಧನ (ಡಿಟೆನ್ಷನ್) ಕೇಂದ್ರ ಹಾಗೂ ಜೈಲುಗಳ ನಡುವೆ ಯಾವುದೇ ರೀತಿಯ ವ್ಯತ್ಯಾಸ ಮಾಡದ ಕಾರಣ, ಅವರನ್ನು ಕೈದಿಗಳಂತೆ ನಡೆಸಿಕೊಳ್ಳಲಾಗಿತ್ತು. ಆದರೆ ಜೈಲಿನ ನಿಯಮಗಳ ಪ್ರಕಾರ ಸಿಗಬೇಕಾದ ಪೆರೋಲ್ ಹಾಗೂ ಕೂಲಿ ಕೆಲಸವನ್ನು ಅವರಿಗೆ ನಿರಾಕರಿಸಲಾಗಿತ್ತು.
ಭಾರತದ ಗೃಹ ಸಚಿವರು ಈ ಜನರನ್ನು ‘‘ಗೆದ್ದಲು ಹುಳ’’ ಗಳೆಂದು ಕರೆದಿದ್ದಾರೆ ಹಾಗೂ ಈ ಕಾನೂನನ್ನು ರಾಷ್ಟ್ರಾದ್ಯಂತ ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಎನ್‌ಆರ್‌ಸಿಯಿಂದ ನಲವತ್ತು ಲಕ್ಷ ಜನರ ಹೆಸರನ್ನು ಕೈಬಿಡಲಾಗಿತ್ತು. ಕಳೆದ ತಿಂಗಳು ಭಾರತದ ಎಲ್ಲೆಡೆಗೆ ವಿದೇಶಿಯರನ್ನು ಪತ್ತೆ ಹಚ್ಚುವ ನ್ಯಾಯಮಂಡಳಿ (ಟ್ರಿಬ್ಯೂನಲ್)ಗಳ ಸ್ಥಾಪನೆಯನ್ನು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಸಾಮಾಜಿಕ ಅಶಾಂತಿ ಹರಡುವ ಮತ್ತು ದೇಶದ ಸಾಂವಿಧಾನಿಕ ವ್ಯವಸ್ಥೆಗಳನ್ನೇ ಬದಲಿಸಬಹುದಾದ ಸರಕಾರದ ಈ ಆಜ್ಞೆ ಸಂಸತ್ತಿನಲ್ಲಿ ಯಾವುದೇ ಚರ್ಚೆಗಳಿಲ್ಲದೆ, ಸಾರ್ವಜನಿಕ ಚರ್ಚೆಯೂ ಇಲ್ಲದೆ ಅಂಗೀಕಾರಗೊಂಡಿತು. ಆಜ್ಞೆಗೆ ಈಗ ಇರುವ ಏಕೈಕ ವಿವರಣೆ ಎಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತನ್ನ ಚುನಾವಣಾ ಭಾಷಣಗಳಲ್ಲಿ ಪುನಃ ಪುನಃ ಹೇಳುತ್ತಿದ್ದ ಮಾತು, ನೀಡುತ್ತಿದ್ದ ಕಿಚ್ಚು ಹಚ್ಚುವ ಪ್ರತಿಜ್ಞೆ: ‘‘ದೇಶದ ಎಲ್ಲ ಭಾಗಗಳಿಗೂ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ವಿಸ್ತರಿಸುತ್ತೇವೆ. ಆ ಮೂಲಕ ದೇಶದ ಭದ್ರತೆಗೆ ಬೆದರಿಕೆಯಾಗಿರುವ ‘ಅಕ್ರಮ ವಲಸಿ’ಗರನ್ನು (ದಾಖಲೆ ಇಲ್ಲದ ಮುಸ್ಲಿಮರು ಅಂತ ಇದರ ಅರ್ಥ) ಗುರುತು ಹಚ್ಚಿ ದೇಶದಿಂದ ಹೊರಗೆ ಕಳುಹಿಸುತ್ತೇವೆ’’ ಎಂಬುದಾಗಿತ್ತು.

ಭಾರತದಾದ್ಯಂತ ಮುಂದಿನ ದಿನಗಳಲ್ಲಿ ತಾವು ಭಾರತೀಯರು ಎಂದು ಸಾಬೀತು ಮಾಡಬೇಕಾಗಿರುವ ಜನರ ಶಿಬಿರಗಳು ಸ್ಥಾಪನೆ ಗೊಳ್ಳುವುದನ್ನು ನಾವು ಕಾಣಲಿದ್ದೇವೆ. (ಪ್ರಾಯಶಃ ‘‘ಜೈ ಶ್ರೀರಾಮ್’’ ಎಂದು ಕೂಗುವ ಮೂಲಕ) ಅವರು ತಾವು ಭಾರತೀಯರೆಂದು ಸಾಬೀತು ಪಡಿಸಬೇಕಾದೀತು. ಹೀಗೆ ತಮ್ಮ ಭಾರತೀಯತೆಯನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾದಲ್ಲಿ ಜೀವಮಾನ ಪರ್ಯಂತ ಜೈಲುವಾಸ ಅನುಭವಿಸಬೇಕಾಗುತ್ತದೆ. ಅಂದಹಾಗೆ ಅವರು ಇದನ್ನು ತನ್ನ ಅಧಿಕಾರಾವಧಿ ಎಷ್ಟೆಂದು ತಿಳಿಯದ ಓರ್ವ ಸರಕಾರಿ ಅಧಿಕಾರಿಗೆ ಸಾಬೀತುಪಡಿಸಬೇಕು. ಆ ಅಧಿಕಾರಿಗೆ ತಿಂಗಳಿಗೆ ಇಂತಿಷ್ಟು ಜನರನ್ನು ಲಾಕಪ್ಪಿಗೆ ತಳ್ಳಬೇಕೆಂಬ ಮಾಸಿಕ ಗುರಿ ನಿಗದಿ ಮಾಡಲಾಗಿರುತ್ತದೆ.

ಇದರ ಜೊತೆಗೆ ನಾಗರಿಕತ್ವ ಮಸೂದೆ ಮಾಡಬಹುದಾದ ಅವಾಂತರಗಳು ಬೇರೆ ಇವೆ. ಭಾರತದ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತರು ಮಾತ್ರ (ಅಂದರೆ ಮುಸ್ಲಿಮರಲ್ಲ) ಭಾರತೀಯ ನಾಗರಿಕತ್ವವನ್ನು ಕೇಳಬಹುದು ಎನ್ನುತ್ತದೆ ಈ ಮಸೂದೆ. ಈಗ ನಿಮಗೆ ನೀವೇ ಕೇಳಿಕೊಳ್ಳಿ ನಮಗೆ ಆಘಾತ ಅಥವಾ ಇನ್ನೇನೋ ಆಗುತ್ತದೆಯೋ ಎಂದು. ಇದರಿಂದೆಲ್ಲ ನಮಗೆ ಆಘಾತವಾಗುತ್ತದೆಂದು ನನಗನ್ನಿಸುವುದಿಲ್ಲ. ಯಾವುದೇ ಮನುಷ್ಯ ಅಕ್ರಮ ಮಾನವ ಅಲ್ಲ. ಆದರೆ ಇದು ಈ ದೇಶದಲ್ಲಿ ಜನರು ಸಹಿಸಿಕೊಳ್ಳದ ಒಂದು ವಾದ.
 

        ಕೃಪೆ: ಸಂಡೇ ಟೈಮ್ಸ್ ಆಫ್ ಇಂಡಿಯಾ         

Writer - ಆಕಾರ್ ಪಟೇಲ್

contributor

Editor - ಆಕಾರ್ ಪಟೇಲ್

contributor

Similar News