ರವೀಶ್ ಕುಮಾರ್‌ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Update: 2019-08-02 17:37 GMT

ಹೊಸದಿಲ್ಲಿ, ಆ.2: ಏಶ್ಯಾದ ‘ನೋಬಲ್ ಪ್ರಶಸ್ತಿ’ ಎಂಬ ಹೆಗ್ಗಳಿಕೆ ಹೊಂದಿರುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಭಾರತದ ಅತ್ಯಂತ ಪ್ರಭಾವೀ ಟಿವಿ ಪತ್ರಕರ್ತರಾಗಿರುವ ರವೀಶ್ ಕುಮಾರ್ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಸತ್ಯದ ಪರ, ಸ್ವಾತಂತ್ರ್ಯದ ಪರ ಹಾಗೂ ಸಮಗ್ರತೆಯ ಪರವಾಗಿ ಧ್ವನಿ ಎತ್ತುವ ಧೈರ್ಯ ತೋರಿದ್ದಾರೆ. ಸಮಚಿತ್ತದ, ಹರಿತವಾದ, ಮಾಹಿತಿ ಹೊಂದಿದ ಟಿವಿ ಆ್ಯಂಕರ್ ಆಗಿದ್ದಾರೆ. ಕಾರ್ಯಕ್ರಮದ ಅತಿಥಿಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಪರ ವಹಿಸದೆ ಕಾರ್ಯಕ್ರಮ ನಿರ್ವಹಿಸುತ್ತಿರುವ ರವೀಶ್ ಕುಮಾರ್‌ಗೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ಮತ್ತು ಬೆದರಿಕೆ ಎದುರಾಗುತ್ತಿದೆ. ಆದರೆ ಪತ್ರಿಕಾ ಧರ್ಮಕ್ಕೆ ಚ್ಯುತಿಯಾಗದಂತೆ ಕಾರ್ಯ ನಿರ್ವಹಿಸುತ್ತಿರುವ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.

ರವೀಶ್ ಕುಮಾರ್ ಅವರಲ್ಲದೆ, ಮ್ಯಾನ್ಮಾರ್ ಮೂಲದ ಪತ್ರಕರ್ತ ಕೊ ಸ್ವೆವಿನ್, ಥೈಲ್ಯಾಂಡಿನ ಮಾನವ ಹಕ್ಕುಗಳ ಕಾರ್ಯಕರ್ತ ಆಂಖಾನಾ ನೀಲಪಜಿತ್, ಫಿಲಿಪ್ಪೀನ್ಸ್‌ನ ಪುಜಂತೆ ಕಯಾಬ್ಯಾಬ್ ಹಾಗೂ ದಕ್ಷಿಣ ಕೊರಿಯಾದ ಕಿಮ್ ಜೊಂಗ್‌ಕಿಯವರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

1996ರಿಂದಲೂ ಎನ್‌ಡಿಟಿವಿ ಜೊತೆ ಕಾರ್ಯನಿರ್ವಹಿಸುತ್ತಿರುವ ರವೀಶ್ ಕುಮಾರ್ ತಮ್ಮ ಭೀತಿಯಿಲ್ಲದ ನೇರ ನುಡಿಗಾಗಿ ಹೆಸರಾಗಿದ್ದರು ಮತ್ತು ಇದೇ ಕಾರಣಕ್ಕೆ ಇವರಿಗೆ ಹಲವು ಬಾರಿ ಜೀವಬೆದರಿಕೆ ಕರೆ ಬಂದಿತ್ತು. ಬಿಹಾರದ ಜಿತ್‌ವಾರ್‌ಪುರ ಎಂಬಲ್ಲಿ ಬಾಲ್ಯ ಕಳೆದ ರವೀಶ್ ಕುಮಾರ್ ದಿಲ್ಲಿ ವಿವಿಯಲ್ಲಿ ಉನ್ನತ ಅಧ್ಯಯನ ನಡೆಸುವಾಗ ಚರಿತ್ರೆ ಮತ್ತು ಸಾರ್ವಜನಿಕ ವ್ಯವಹಾರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿಂದೆ ಆರ್‌ಕೆ ಲಕ್ಷ್ಮಣ್, ಪಿ ಸಾಯಿನಾಥ್, ಅರುಣ್ ಶೌರಿ, ಕಿರಣ್ ಬೇಡಿ ಹಾಗೂ ಅರವಿಂದ್ ಕೇಜ್ರಿವಾಲ್ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತೀಯರಾಗಿದ್ದಾರೆ.

“ಮ್ಯಾಗ್ಸೆಸೆ ಪುರಸ್ಕೃತರ ಕೂಟಕ್ಕೆ ರವೀಶ್ ಕುಮಾರ್‌ಗೆ ಸುಸ್ವಾಗತ. ಈಗಿನ ಕಠಿಣ ದಿನಗಳಲ್ಲಿ ಅವರ ಧೀರ ಪತ್ರಿಕೋದ್ಯಮ ಮತ್ತಷ್ಟು ಬಲಿಷ್ಟವಾಗಲಿದೆ ಎಂಬ ಆಶಾವಾದ ಹೊಂದಿದ್ದೇನೆ” ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಟ್ವೀಟ್ ಮಾಡಿದ್ದಾರೆ.

ಸರಕಾರದ ಹಸ್ತಕ್ಷೇಪದಿಂದ ಬೆದರಿಕೆಗೆ ಒಳಗಾಗಿರುವ, ಕಟು ರಾಷ್ಟ್ರೀಯವಾದಿಗಳಿಂದ ಕಲುಷಿತಗೊಂಡಿರುವ, ಟ್ರೋಲ್‌ಗಳು ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುವವರಿಂದ, ಟಿಆರ್‌ಪಿ ಮೋಹಕ್ಕೆ ಒಳಗಾಗಿರುವ ಮಾಧ್ಯಮದ ವ್ಯಕ್ತಿಗಳ ನಡುವಿನ ಸ್ಪರ್ಧೆಗೆ ವೇದಿಕೆಯಾಗಿರುವ ಮಾಧ್ಯಮ ಕ್ಷೇತ್ರದಲ್ಲಿ, ಜನರಲ್ಲಿ ಕೌತುಕ ಹುಟ್ಟಿಸುವ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯ ಮಧ್ಯೆ ರವೀಶ್ ಕುಮಾರ್ ಸಂಯಮದ, ಸಮತೋಲಿತ, ವಸ್ತುನಿಷ್ಟ ವರದಿಗಾರಿಕೆಯ ಕರ್ತವ್ಯ ನಿಭಾಯಿಸಿದ್ದಾರೆ ಎಂದು ಮ್ಯಾಗ್ಸೇಸೆ ಪ್ರತಿಷ್ಠಾನ ಹೇಳಿದೆ.

ಜನತೆಯ ಸುದ್ದಿಮನೆ ಜನತೆ ಆಧಾರಿತ ಪತ್ರಿಕೋದ್ಯಮದ ನಿಟ್ಟಿನಲ್ಲಿ ಶ್ರಮಿಸುತ್ತಿರುವ ರವೀಶ್ ಕುಮಾರ್ ತಾವು ಕಾರ್ಯ ನಿರ್ವಹಿಸುತ್ತಿದ್ದ ಸುದ್ದಿಮನೆಯನ್ನು ‘ಜನತೆಯ ಸುದ್ದಿಮನೆ’ ಎಂದೇ ಕರೆಯುತ್ತಿದ್ದರು. ವೃತ್ತಿಪರ ಮೌಲ್ಯಗಳಾದ ಸಂಯಮ, ಉದ್ವೇಗರಹಿತ, ಸಮತೋಲನ, ವಸ್ತುನಿಷ್ಟ ವರದಿಗಾರಿಕೆ ಪತ್ರಕರ್ತರ ಕರ್ತವ್ಯವಾಗಬೇಕು ಎಂದು ಪ್ರತಿಪಾದಿಸುವ ಜೊತೆಗೆ ಇತರರಿಗೆ ಮಾದರಿಯಾಗಿದ್ದರು ಎಂದು ಮ್ಯಾಗ್ಸೆಸೆ ಪ್ರತಿಷ್ಟಾನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News