ವಜ್ರಮುಖಿಯೊಳಗಿಹಳು ಆಪ್ತ ಸ್ನೇಹಿತೆ!

Update: 2019-08-03 18:46 GMT

ಮೂವರು ಸ್ನೇಹಿತರು ಮೂವರು ಹುಡುಗಿಯರ ಜತೆಗೆ ರೆಸಾರ್ಟ್ ಒಂದಕ್ಕೆ ಹೋಗುತ್ತಾರೆ. ಅವರಲ್ಲಿ ದಿಲೀಪ್ ಎಂಬಾತ ಜಾಹೀರಾತುಗಳ ನಿರ್ದೇಶಕ. ಮತ್ತೋರ್ವ ಆತನಿಗೆ ರೂಪದರ್ಶಿಯರನ್ನು ನೀಡುವ ಸ್ನೇಹಿತ. ದಿಲೀಪನಿಗೆ ಹುಡುಗಿಯರ ಜತೆಗೆ ಸುತ್ತಾಡಬೇಕು ಎನ್ನುವ ಹುಚ್ಚು ಇಲ್ಲವಾದರೂ ಸ್ನೇಹಿತರ ಒತ್ತಾಯಕ್ಕೆ ಕಟ್ಟು ಬಿದ್ದು ರೆಸಾರ್ಟ್ ಗೆ ಹೋಗುತ್ತಾನೆ. ಕಾಡಿನಂತಿರುವ ದಾರಿಯಲ್ಲಿ ಹೋಗುವಾಗ ಅವರ ವಾಹನದ ಮುಂದೆ ಕಾರೊಂದು ಕೆಟ್ಟು ನಿಂತಿರುವುದು ಕಾಣಿಸುತ್ತದೆ. ಅಲ್ಲಿ ನೀತು ಎನ್ನುವ ಹುಡುಗಿ ಒಬ್ಬಳೇ ನಿಂತಿರುತ್ತಾಳೆ. ಆಕೆಯನ್ನು ಕೂಡ ತಮ್ಮ ವಾಹನದಲ್ಲೇ ಕರೆದೊಯ್ಯುವ ಸ್ನೇಹಿತರು ರೆಸಾರ್ಟ್ ತಲುಪುತ್ತಾರೆ. ಆದರೆ ಒಳಗೆ ಹೋಗಲು ದಾರಿ ಸರಿಯಾಗಿರದ ಕಾರಣ, ನೀತು ನೀಡುವ ಸಲಹೆಯಂತೇ ಪಕ್ಕದಲ್ಲಿರುವ ‘ವಜ್ರಮುಖಿ’ ಎನ್ನುವ ರೆಸಾರ್ಟ್ ಸೇರಿಕೊಳ್ಳುತ್ತಾರೆ. ನಿರೀಕ್ಷೆಯಂತೆ ರೆಸಾರ್ಟ್‌ಗೆ ಹೋದೊಡನೆ ನೀತು ರೂಪದಲ್ಲಿ ದೆವ್ವದ ಕಾಟ ಶುರುವಾಗುತ್ತದೆ.

ಇನ್ನೇನು ಎಲ್ಲ ದೆವ್ವದ ಕತೆಯ ಹಾಗೆ ಆಕೆಗೊಂದು ಹಗೆ, ಅದರ ಹಿಂದೆ ಒಂದು ರಹಸ್ಯ ಎಂದುಕೊಳ್ಳುವ ಪ್ರೇಕ್ಷಕನಿಗೆ ಬೆಚ್ಚಿ ಬೀಳಿಸುವ ತಿರುವೊಂದು ಎದುರಾಗುತ್ತದೆ. ಅದರ ಪ್ರಕಾರ ನೀತು ದೆವ್ವವೇ ಅಲ್ಲ. ಆಕೆ ಒಬ್ಬ ಪೊಲೀಸ್ ಅಧಿಕಾರಿ. ಇಲ್ಲಿ ಆಕೆಯ ತನಿಖೆಗೆ ಪೂರಕವಾದ ಮಾಹಿತಿಗಾಗಿ ನಿರ್ದೇಶಕರು ದಿಲೀಪ್‌ನ ಫ್ಲ್ಯಾಷ್ ಬ್ಯಾಕ್‌ಗೆ ಹೋಗುತ್ತಾರೆ. ಹೀಗೆ ಕ್ಷಣ ಕ್ಷಣವೂ ರೋಚಕವೆನಿಸುವ ತಿರುವುಗಳ ಮೂಲಕ ಕುತೂಹಲ ಕೆರಳಿಸುತ್ತದೆ ಚಿತ್ರ. ದಿಲೀಪ್ ಮಾಡಿರುವ ಅಪರಾಧವೇನು? ನೀತು ದೆವ್ವವಾಗಿ ಕಾಣಿಸಿದ್ದೇಕೆ? ನಿಜಕ್ಕೂ ಕತೆಯೊಳಗೆ ದೆವ್ವ ಇದೆಯೇ? ಮೊದಲಾದ ಪ್ರಶ್ನೆಗಳಿಗೆ ಚಿತ್ರ ಉತ್ತರ ನೀಡುತ್ತದೆ.

ಚಿತ್ರದ ನಾಯಕಿ ನೀತು ಪಾತ್ರದಲ್ಲಿ ನೀತು ಶೆಟ್ಟಿ ನಟಿಸಿದ್ದಾರೆ. ಅವರ ಪಾತ್ರದ ಹಿನ್ನೆಲೆಯನ್ನು ತುಸು ಬಿಗಿಯಾಗಿ ಹಿಡಿದಿಟ್ಟಿರುವ ಕಾರಣ ಅವರೇ ಚಿತ್ರದ ವಜ್ರಮುಖಿ ಎಂದು ಧೈರ್ಯದಿಂದ ಹೇಳಬಹುದು. ಆದರೆ ಅವರ ಇಂಟ್ರಡಕ್ಷನ್ ಸೇರಿದಂತೆ ಆರಂಭದ ದೃಶ್ಯಗಳು ಯಾವುದೇ ದೊಡ್ಡ ಮಟ್ಟದ ಇಂಪ್ಯಾಕ್ಟ್ ಮೂಡಿಸುವುದಿಲ್ಲ. ಆದರೆ ಯಾವಾಗ ಪೊಲೀಸ್ ಪಾತ್ರವಾಗಿ ಬದಲಾಗುತ್ತಾರೋ, ಆ ಕ್ಷಣದಿಂದ ಪ್ರೇಕ್ಷಕರಲ್ಲಿ ಹೊಸ ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಗುತ್ತಾರೆ. ದಿಲೀಪ್ ಪಾತ್ರದಲ್ಲಿ ದಿಲೀಪ್ ಪೈ ಮತ್ತು ಅವರ ಜೋಡಿಯಾಗಿ ನಟಿಸಿರುವ ಸಂಜನಾ ನಾಯ್ಡು ಸಿಕ್ಕಿರುವ ಪಾತ್ರವನ್ನು ಚೊಕ್ಕವಾಗಿಯೇ ನಿಭಾಯಿಸಿದ್ದಾರೆ. ಚಿತ್ರದಲ್ಲಿರುವ ಅನೇಕ ಹೊಸ ಕಲಾವಿದರು ಕೂಡ ಚೆನ್ನಾಗಿ ಅಭಿನಯ ನೀಡಿರುವುದು ಮತ್ತು ದೃಶ್ಯಗಳನ್ನು ಆಕರ್ಷಕವಾಗಿ ಚಿತ್ರೀಕರಿಸಿರುವಲ್ಲಿ ನಿರ್ದೇಶಕ ಮತ್ತು ಛಾಯಾಗ್ರಾಹಕರ ಶ್ರಮ ಎದ್ದು ಕಾಣುವಂತಿದೆ. ಹಾಡುಗಳು ಕೂಡ ಚೆನ್ನಾಗಿಯೇ ಮೂಡಿ ಬಂದಿದೆ. ಮೀನನಾಥ ಖ್ಯಾತಿಯ ರಾಘವೇಂದ್ರ ಅವರ ಹಾಸ್ಯ ಲವಲವಿಕೆ ನೀಡುತ್ತದೆ. ಆದರೆ ಚಿತ್ರದ ಮೊದಲಾರ್ಧವನ್ನು ಸಹಿಸುವುದು ಸ್ವಲ್ಪಕಷ್ಟವೇ.

ದೆವ್ವದ ಚಿತ್ರಗಳೆಂದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿನೆಮಾಗಳು ನೆನಪಾಗುವುದು ಸಹಜ. ಅದೇ ರೀತಿ ಅವರ ಚಿತ್ರಗಳಲ್ಲಿರುವ ಚೆಂಡಿನ ಜತೆಗೆ ಆಟವಾಡುವ ಮಗು, ಸಮಾಧಿ ಎಲ್ಲವೂ ಇಲ್ಲಿಯೂ ಇದೆ. ದೆವ್ವ ಹೋಯಿತು ಎನ್ನುವಾಗ ಇದೋ ಬಂದೆ ಎಂದು ಭಯಪಡಿಸುವ ರಾಘವ ಲಾರೆನ್ಸ್ ಶೈಲಿಯೂ ಇಲ್ಲಿದೆ. ಇವೆಲ್ಲದರ ಜತೆಯಲ್ಲಿ ‘ವಜ್ರಮುಖಿ’ ಎನ್ನುವ ಹೆಸರೇ ನೆನಪಿಸುವ ಚಂದ್ರಮುಖಿ ಚಿತ್ರದ ಭಾವಗಳೂ ಇಲ್ಲಿವೆ. ಹಾಗಾಗಿ ಶೀರ್ಷಿಕೆ ಮೇಲೆ ನಿರೀಕ್ಷೆ ಇಟ್ಟು ಸಿನೆಮಾ ನೋಡಲು ಹೋದರೆ ಖಂಡಿತವಾಗಿ ನಿರಾಶೆ ಇಲ್ಲ. ಇಲ್ಲಿಯೂ ಒಬ್ಬ ಆಪ್ತ ಸ್ನೇಹಿತೆಯ ಕತೆ ಇದೆ. ಹಾರರ್ ಆಸಕ್ತರು ನೋಡಿ ಖುಷಿ ಪಡಬಹುದಾದ ಸಿನೆಮಾ ಎನ್ನಬಹುದು.

ತಾರಾಗಣ: ನೀತು ಶೆಟ್ಟಿ, ದಿಲೀಪ್ ಪೈ

ನಿರ್ದೇಶನ: ಎನ್. ಆದಿತ್ಯ ಕುಣಿಗಲ್

ನಿರ್ಮಾಣ: ಶಶಿಕುಮಾರ್ ಪಿ. ಎಂ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News