ಪಶ್ಚಿಮ ಘಟ್ಟದಲ್ಲಿ ಹೆಚ್ಚುತ್ತಿರುವ ಭೂಕುಸಿತಗಳೂ ಅಭಿವೃದ್ಧಿ ಹೆಸರಿನ ಯೋಜನೆಗಳೂ...

Update: 2019-09-09 18:28 GMT

ಈ ಬಾರಿ ಆದಂತಹ ಮಳೆ, ಭೂಕುಸಿತ, ನೆರೆ, ಸಾವುನೋವುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಲಕ್ಷಣಗಳು ಕಾಣಿಸುತ್ತಿವೆ. ನೇತ್ರಾವತಿ, ಶರಾವತಿ ನದಿಗಳ ನೀರು ಬೆಂಗಳೂರಿಗೆ ತಿರುಗಿಸುವಂತಹ ಯೋಜನೆಗಳಾಗಲೀ, ಅರಣ್ಯ ಪ್ರದೇಶಗಳ ಖಾಸಗೀಕರಣಗಳಾಗಲೀ, ಪರಿಸರ ರಕ್ಷಣೆಯ ನೆಪದಲ್ಲಿ ಜನಸಾಮಾನ್ಯರನ್ನು ಅವರ ಮೂಲಗಳಿಂದ ಒಕ್ಕಲೆಬ್ಬಿಸುವ ಯೋಜನೆಗಳಾಗಲೀ, ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಭೂಮಿಗಳನ್ನು ಕಾರ್ಪೊರೇಟುಗಳಿಗೆ ಪರಭಾರೆ ಮಾಡುವುದಾಗಲೀ ಬಿಡಿ ಬಿಡಿ ವಿಚಾರವಲ್ಲ.


ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಮಳೆಯಿನ್ನೂ ನಿಂತಿಲ್ಲ. ಈ ಬಾರಿ ಬಿದ್ದ ಮಳೆ ನೆರೆಯ ಮಹಾರಾಷ್ಟ್ರ, ಕೇರಳ, ರಾಜ್ಯದ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಅವಾಂತರಗಳನ್ನೇ ಸೃಷ್ಟಿಸಿದೆ. ನೂರಕ್ಕೂ ಹೆಚ್ಚು ಜನರ ಪ್ರಾಣಗಳೇ ಹೋಗಿವೆ. ಭಾರೀ ಪ್ರಮಾಣದ ಆಸ್ತಿಪಾಸ್ತಿಗಳಿಗೆ ಕೃಷಿ ಬೆಳೆಗಳಿಗೆ ಹಾನಿ ಮಾಡಿದೆ. ಮಲೆನಾಡಿನ ಅಡಿಕೆ, ಕಾಫಿ, ಏಲಕ್ಕಿ ಬೆಳೆಗಳು ಹಾಳಾಗಿ ಹೋಗಿವೆ. ಅಪಾರ ಪ್ರಮಾಣದಲ್ಲಿ ಪ್ರಾಕೃತಿಕ ನಾಶ ಸಂಭವಿಸಿದೆ. ಹಲವಾರು ಬೆಟ್ಟಗುಡ್ಡಗಳು ಕುಸಿದಿವೆ. ಕೇರಳದ ಮಲಪ್ಪುರಂ ಹಾಗೂ ವಯನಾಡಿನಲ್ಲಿ ಹತ್ತಾರು ಮನೆಗಳು ಗುಡ್ಡ ಕುಸಿತದಡಿ ಹೂತು ಹೋಗಿವೆ. ವಯನಾಡಿನಲ್ಲಿ ಒಂದೇ ಕಡೆ ಸುಮಾರು 40ಕ್ಕೂ ಹೆಚ್ಚು ಮನೆಗಳು ಮಣ್ಣಿನಡಿ ಹೂತು ಹೋಗಿವೆ. ಅಲ್ಲಿ ಮೊದಲಿದ್ದ ಚಹರೆಗಳೇ ಬದಲಾಗಿ ಹೋಗಿವೆ. ಕರ್ನಾಟಕದ ಮಲೆನಾಡಿನ ಹಲವಾರು ರಸ್ತೆಗಳು ಜರಿದಿವೆ. ಬಹಳ ಹಳೇ ಘಾಟಿ ರಸ್ತೆಯಾದ ಕೊಟ್ಟಿಗೆಹಾರದಿಂದ ಉಜಿರೆ ರಸ್ತೆ ಹಲವಾರು ಕಡೆಗಳಲ್ಲಿ ಕುಸಿದು ಸಂಚಾರಕ್ಕೇ ಯೋಗ್ಯವಲ್ಲದಂತಾಗಿದೆ. ಈ ರಸ್ತೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ರಸ್ತೆ. ಈ ಪ್ರಮಾಣದ ಕುಸಿತ ಹಿಂದೆಂದೂ ಸಂಭವಿಸಿರಲಿಲ್ಲ. ಬಹಳ ಹಿಂದೆ ಅಲ್ಲಿನ ಸ್ಥಳೀಯ ಜನಸಾಮಾನ್ಯರು ತಮ್ಮ ಸಂಚಾರಕ್ಕಾಗಿ ಮಾಡಿಕೊಂಡಿದ್ದ ಕಾಲುದಾರಿಯನ್ನೇ ಬ್ರಿಟಿಷರು ಮಲೆನಾಡಿನಿಂದ ಸಂಬಾರ ಪದಾರ್ಥ ಹಾಗೂ ಮರದ ದಿಮ್ಮಿಗಳನ್ನು ಸಾಗಿಸಲು ರಸ್ತೆಯನ್ನಾಗಿ ಮಾಡಿಸಿದ್ದರು. ಇದೀಗ ಆ ರಸ್ತೆಯ ಸ್ಥಿತಿ ಹೀಗಾಗಿದೆ. ಇತ್ತೀಚೆಗೆ ಲಘು ವಾಹನಗಳ ಸಂಚಾರಕ್ಕೆ ತೆರವುಗೊಳಿಸಿದ ಬೆನ್ನಲ್ಲೇ ಸಂಚಾರ ಸ್ಥಗಿತಗೊಳಿಸಲಾಯಿತು.

ಇದರ ಜೊತೆಗೆ ಬಸರಿಕಟ್ಟೆ, ಜಯಪುರ, ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಸಾಗರ, ತೀರ್ಥಹಳ್ಳಿ, ಆಗುಂಬೆ ಮೊದಲಾದ ಮಲೆನಾಡಿನ ಭಾಗಗಳಲ್ಲೂ ಭಾರೀ ನೆರೆ, ಮುಳುಗಡೆ ಹಾಗೂ ಭೂಕುಸಿತಗಳು ಸಂಭವಿಸಿವೆ. ಹಲವಾರು ಮನೆಗಳು ಕುಸಿದಿವೆ. ವನ್ಯ ಜೀವಿಗಳು ಜಾನುವಾರುಗಳ ಸಾವುಗಳಿಗೆ ಕಾರಣವಾಗಿವೆ. ಇಂದಿನ ಈ ಸ್ಥಿತಿಗೆ ಪಶ್ಚಿಮ ಘಟ್ಟ ಪ್ರದೇಶದ ಮೇಲೆ ಮಾಡಿದ ನಿರಂತರ ಹಾನಿಗಳು ಪ್ರಧಾನ ಕಾರಣಗಳಾಗಿವೆ. ಹತ್ತು ಹಲವು ಅಭಿವೃದ್ಧಿ ಹೆಸರಿನ ಯೋಜನೆಗಳು, ಪ್ರವಾಸೋದ್ದಿಮೆಯ ಯೋಜನೆಗಳು, ಗಣಿಗಾರಿಕೆಗಳು, ಭಾರೀ ಜಲಾಶಯಗಳು, ಭಾರೀ ವಿದ್ಯುತ್ ಯೋಜನೆಗಳು, ಅವೈಜ್ಞಾನಿಕ ರಸ್ತೆ ನಿರ್ಮಾಣಗಳು ಮೊದಲಾದವುಗಳಿಂದಾದ ಅರಣ್ಯನಾಶ ಹಾಗೂ ಸಾಮಾಜಿಕ ಅರಣ್ಯ ಯೋಜನೆಯ ಹೆಸರಿನ ಕಾರ್ಪೊರೇಟುಗಳಿಗೆ ಕಚ್ಚಾವಸ್ತು ಪೂರೈಸಲು ಮಾಡಿದ ಸಾವಿರಾರು ನೀಲಗಿರಿ ಹಾಗೂ ಅಕೇಷಿಯಾ ನೆಡುತೋಪುಗಳು ಇತ್ಯಾದಿಗಳು ಪ್ರಧಾನ ಕಾರಣಗಳಾಗಿವೆ. ಜೊತೆಗೆ ಜನವಾಸಕ್ಕೆ ಯೋಗ್ಯವಲ್ಲದ ಇಳಿಜಾರು ಪ್ರದೇಶಗಳನ್ನು ಕಡಿದು ರಸ್ತೆ, ಮನೆಗಳನ್ನು ಮಾಡಿದ್ದು ಕೂಡ ಕಾರಣವಾಗಿದೆ.

ಅರಣ್ಯ ಹಾಗೂ ಹುಲ್ಲುಗಾವಲುಗಳ ನಾಶದಿಂದಾಗಿ ಘಟ್ಟದ ತುದಿಗಳ ಭಾಗಗಳಲ್ಲಿ ಮಣ್ಣನ್ನು ಹಿಡಿದಿಡುವ ಮಳೆನೀರನ್ನು ಇಂಗಿಸುವ ನೈಸರ್ಗಿಕ ಯಂತ್ರಾಂಗಕ್ಕೆ ಕುತ್ತಾಗಿದೆ. ವಯನಾಡಿನಲ್ಲಿ ಆದ ಭಾರೀ ಭೂ ಕುಸಿತದ ಸುತ್ತಮುತ್ತ ಕೆಲವೇ ಕಿಲೋಮೀಟರುಗಳ ಅಂತರದಲ್ಲಿ ಸುಮಾರು ಐವತ್ತರಷ್ಟು ಕಲ್ಲು ಗಣಿಗಾರಿಕೆ ಕಾರ್ಯ ನಿರ್ವಹಿಸುತ್ತಿದ್ದವು ಎಂಬ ವರದಿಯಿದೆ. ಅದು ಸತ್ಯವೆಂದಾದರೆ ಅಲ್ಲಿ ಆದ ಭಾರೀ ಅಪಾಯಕಾರಿ ಭೂಕುಸಿತಕ್ಕೆ ಬೇರೆ ಕಾರಣಗಳನ್ನು ಹುಡುಕಬೇಕಿಲ್ಲ. ಬಂಡೆಗಳನ್ನು ಸ್ಫೋಟಕಗಳ ಮೂಲಕ ಸಿಡಿಸುವುದು, ಬಂಡೆಗಳನ್ನು ಕೊರೆದು ವಿಷಕಾರಿ ರಾಸಾಯನಿಕ ತುಂಬಿಸಿ ಬಂಡೆಗಳು ಸೀಳುಬಿಟ್ಟು ಕ್ರಮೇಣವಾಗಿ ಭಾಗವಾಗುವಂತೆ ಮಾಡುವ ಹಲವು ತಂತ್ರಗಳನ್ನು ಕಲ್ಲು ಗಣಿಗಾರಿಕೆಗಳಲ್ಲಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಈ ಎಲ್ಲಾ ತಂತ್ರಗಳೂ ಕೂಡ ಗಣಿಗಾರಿಕೆಯ ಸುತ್ತಮುತ್ತಲಿನ ಪ್ರದೇಶದ ಬೆಟ್ಟಗುಡ್ಡಗಳನ್ನು ಸಡಿಲಿಸುವ ಸಾಧ್ಯತೆ ಇದ್ದೇ ಇರುತ್ತದೆ. ಹುಲ್ಲು ಹಾಗೂ ಅರಣ್ಯ ಇಲ್ಲದಿದ್ದರಂತೂ ಅಪಾಯ ಮತ್ತೂ ಹೆಚ್ಚಿರುತ್ತದೆ.

ಇದೆಲ್ಲದರ ಜೊತೆಗೆ ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯ ಕಾರಣಗಳಿಂದಾಗಿ ಮಳೆಗಾಲದ ಅವಧಿ ಹಾಗೂ ಮಳೆ ಬೀಳುವ ಪ್ರಮಾಣಗಳಲ್ಲಿ ಹತ್ತು ಹಲವು ಏರುಪೇರಾಗುವ ಸಂಭವವಿದೆ. ಈ ಬಾರಿಯ ಮಳೆಗಾಲದಲ್ಲಿ ಬಿದ್ದ ಮಳೆಗಿಂತಲೂ ಹೆಚ್ಚಿನ ಮಳೆ ಹಿಂದೆಲ್ಲಾ ಬರುತ್ತಿತ್ತು. ಆದರೆ ಈ ಬಾರಿ ಒಂದು ವಾರದಲ್ಲಿ ಬಿದ್ದ ಮಳೆ ಹಿಂದೆ ಹೆಚ್ಚೂ ಕಡಿಮೆ ಒಂದು ತಿಂಗಳಲ್ಲಿ ಬೀಳುತ್ತಿತ್ತು ಎನ್ನಬಹುದು. ಈ ಬಾರಿಯ ಆನಾಹುತಕ್ಕೆ ಒಂದು ವಾರದ ಅವಧಿಯಲ್ಲಿ ಒಂದು ತಿಂಗಳು ಬೀಳುವಷ್ಟು ಮಳೆಯಾದುದು ಕೂಡ ಒಂದು ಮುಖ್ಯ ಕಾರಣವಾಗಿದೆ. ಬಿದ್ದ ಮಳೆನೀರು ಮಣ್ಣಿನೊಳಗೆ ಇಂಗಬೇಕಾದರೆ ಮಳೆ ಬಿಟ್ಟು ಬಿಟ್ಟು ಸುರಿಯುವುದು, ನಿಧಾನಕ್ಕೆ ಸುರಿಯುವುದು ಅಗತ್ಯ. ಒಮ್ಮೆಗೆ ಭಾರೀ ಮಳೆ ಬಿದ್ದಿದ್ದರಿಂದಾಗಿ ನೀರು ಇಂಗಿ ಅಂತರ್ಜಲವಾಗಲು ಸಮಯ ಸಿಗದೇ ಹೋಯಿತು. ಬಿದ್ದ ಮಳೆನೀರು ಬೆಟ್ಟಗುಡ್ಡಗಳ ಮೇಲಿನಿಂದ ದೊಡ್ಡ ಗಾತ್ರದಲ್ಲಿ ಹರಿದು ಬರುವಾಗ ಮೇಲ್ಮೈ ಮಣ್ಣನ್ನು ದೊಡ್ಡಮಟ್ಟದಲ್ಲಿ ಕೊರೆಯುವ ಸಂಭವವಿರುತ್ತದೆ. ಹಾಗೆ ಕೊರಕಲುಗಳಾಗಿ ಅಲ್ಲಿನ ಮಣ್ಣನ್ನು ಇಳಿಜಾರಿಗೆ ತಳ್ಳುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ ಬೆಟ್ಟ ಗುಡ್ಡಗಳ ಮಣ್ಣು ಸಡಿಲಗೊಂಡಿದ್ದ ಪಕ್ಷದಲ್ಲಿ ಸುರಿದ ಮಳೆನೀರು ಒಮ್ಮೆಗೆ ಮಣ್ಣನ್ನು ಇಳಿಜಾರಿಗೆ ದಬ್ಬತೊಡಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳಿಂದಲೂ ಭೂಕುಸಿತಗಳಾಗುವ ಸಂಭವವಿರುತ್ತವೆ.

 ಮಲೆನಾಡಿನ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗಲೀಕರಣಗಳು, ಅಂಕುಡೊಂಕಾದ ರಸ್ತೆಗಳನ್ನು ನೇರಗೊಳಿಸುವ, ಎತ್ತರದ ರಸ್ತೆಗಳನ್ನು ತಗ್ಗಿಸುವ ಹೀಗೆ ಹಲವು ರಸ್ತೆ ಕಾರ್ಯಗಳನ್ನು ನಡೆಸಲಾಗುತ್ತಿದೆ. ಹಾಗೆ ಮಾಡುವಾಗ ವೈಜ್ಞಾನಿಕ ರೀತಿಯಲ್ಲಿ, ಭೂಕುಸಿತಗಳಿಗೆ ಎಡೆಯಾಗದಂತೆ ಮಾಡದೆ, ಸಾವಿರಾರು ಮರಗಳನ್ನು ಕಡಿದು ನಾಶಮಾಡಿ ಬೇಕಾಬಿಟ್ಟಿಯಾಗಿ ಭಾರೀ ಯಂತ್ರಗಳನ್ನು ಬಳಸಿ ಮಣ್ಣುಗಳನ್ನು ಕಡಿದು ಜರಿಸಲಾಗಿದೆ. ಸಡಿಲವಾದ ಮಣ್ಣನ್ನು ರಸ್ತೆ ಅಗಲೀಕರಣಕ್ಕಾಗಿ ಬದಿಗಳಲ್ಲಿ ಸುರಿದಿಡಲಾಗಿದೆ. ಮಳೆ ಬಂದಾಗ ನೀರು ಈ ಸಡಿಲಗೊಡ ಮಣ್ಣನ್ನು ಕೊಚ್ಚಿಕೊಂಡು ತೊರೆ ನದಿಗಳಿಗೆ ಸೇರಿಸಿದೆ. ಅಲ್ಲದೆ ಗುಡ್ಡ ಪ್ರದೇಶದಲ್ಲಿ ಭೂಕುಸಿತಗಳಿಗೆ ಕಾರಣವಾಗಿದೆ. ಜಯಪುರ, ಶೃಂಗೇರಿ, ಮೂಡಿಗೆರೆ ಭಾಗಗಳಲ್ಲಿ ರಸ್ತೆ ಬದಿಯ ಭೂಕುಸಿತಗಳಿಗೆ ರಸ್ತೆ ಅಗಲೀಕರಣ ಹಾಗೂ ಅರಣ್ಯ ನಾಶ ಮುಖ್ಯ ಕಾರಣವಾಗಿವೆ. ತೊರೆ, ಹಳ್ಳ, ನದಿಗಳಲ್ಲಿ ಮಣ್ಣು ಸೇರಿ ನೆರೆ ಹಾನಿ ಜಾಸ್ತಿಯಾಗಲು ಕೂಡ ಕಾರಣವಾಗಿದೆ. ಈಗಲೂ ಬಾಳೆಹೊನ್ನೂರು ಭಾಗದಲ್ಲಿ ಭದ್ರಾ ನದಿ ಸಡಿಲಗೊಂಡಿರುವ ಕೆಂಪು ಮಣ್ಣಿನೊಂದಿಗೆ ಹರಿಯುತ್ತಿರುವುದನ್ನು ನೋಡಬಹುದು. ರಸ್ತೆ ಅಗಲೀಕರಣದ ಭರಾಟೆ ಕೂಡ ಬಹಳ ಜೋರಾಗಿಯೇ ನಡೆದಿದೆ. ಶಿವಮೊಗ್ಗ, ಆಗುಂಬೆ, ಭದ್ರಾವತಿ, ಮೂಡಿಗೆರೆ, ಚಿಕ್ಕಮಗಳೂರು, ಸಾಗರ, ಹೊನ್ನಾವರ, ತುಮಕೂರು ಮೊದಲಾದ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಹೆಸರಿನಲ್ಲಿ, ರಾಜ್ಯ ಹೆದ್ದಾರಿಯ ಹೆಸರಿನಲ್ಲಿ ರಸ್ತೆ ಅಗಲೀಕರಣಗಳ ಯೋಜನೆ ಆರಂಭವಾಗಿವೆ. ಇದಕ್ಕಾಗಿ ಯಾಂತ್ರಿಕ ಗರಗಸಕ್ಕೆ ಬಲಿಯಾಗುವ ಮರಗಳು ಲಕ್ಷಾಂತರ. ಅದರ ಸರಿಯಾದ ಲೆಕ್ಕ ಕೂಡ ಸಿಗಲಾರದು. ಈ ರಸ್ತೆಗಳು ಹಾದುಹೋಗುವ ಮಲೆನಾಡು ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಮರಗಳನ್ನು ಕಡಿಯಲಾಗುತ್ತಿದೆ.

ಇಷ್ಟೆಲ್ಲಾ ಪರಿಸರಕ್ಕೆ ಹಾನಿ ಮಾಡಿ ಮಾಡುವ ರಸ್ತೆ ಅಗಲೀಕರಣಗಳು ಪ್ರಧಾನವಾಗಿ ಭಾರೀ ಕಾರ್ಪೊರೇಟುಗಳಿಗೆ ಈ ಭಾಗಗಳಲ್ಲಿ ಗಣಿಗಾರಿಕೆ, ಪ್ರವಾಸೋದ್ಯಮ, ರೆಸಾರ್ಟ್ ಮೊದಲಾದ ಆರ್ಥಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಅನುಕೂಲ ಮಾಡಿಕೊಡುವುದು ಬಿಟ್ಟರೆ ಬೇರೇನಲ್ಲ. ಮಲೆನಾಡಿನ ಅಭಿವೃದ್ಧಿ ಇದರಲ್ಲಿ ಏನೂ ಆಗಲಾರದು. ಪಾರಿಸಾರಿಕವಾಗಿ ಹಾಗೂ ಆರ್ಥಿಕವಾಗಿ ಆಗುವ ಅನಾಹುತಗಳು ಮಾತ್ರ ಭಾರೀಯಾಗಲಿದೆ. ಮಲೆನಾಡು ಅಭಿವೃದ್ಧಿಯಾಗಲು ಮಾಡಬೇಕಾದುದು, ಭೂಹೀನರಿಗೆ ಭೂಮಿ ಹಂಚಿಕೆ, ಅಕ್ರಮ ಭೂಮಿಗಳ ವಶಪಡಿಸುವುದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ವಿಕೇಂದ್ರೀಕೃತ ಕೈಗಾರಿಕೀಕರಣ, ಪರಿಸರಕ್ಕೆ ಹಾನಿಯಾಗದ ರೀತಿಯ ಸಣ್ಣ ಹಾಗೂ ಮಧ್ಯಮ ಗಾತ್ರದ ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕು. ಆದರೆ ಇಂತಹ ಅಭಿವೃದ್ಧಿ ಮಾದರಿಗಳು ಆಳುವ ಶಕ್ತಿಗಳಿಗೆ ಹೆಚ್ಚು ಲಾಭ ತಂದುಕೊಡುವುದಿಲ್ಲ. ಹಾಗಾಗಿ ಅಂತಹ ಯೋಜನೆಗಳು ರೂಪುಗೊಳ್ಳುವುದೇ ಇಲ್ಲ.

ಈಗಾಗಲೇ ಶರಾವತಿ, ಹಾಗೂ ನೇತ್ರಾವತಿ ನದಿ ನೀರನ್ನು ತಿರುಗಿಸಿ ಬೆಂಗಳೂರಿನಂತಹ ಕಡೆಗೆ ಹರಿಸುವ ಯೋಜನೆ ಚಾಲ್ತಿಯಲ್ಲಿಡಲಾಗಿದೆ. ಗುಂಡ್ಯದಂತಹ ಕಡೆಗಳಲ್ಲಿ ಚೆಕ್ ಡ್ಯಾಮುಗಳನ್ನು ನಿರ್ಮಿಸಿ ನೂರಾರು ಎಕರೆ ಕಾಡನ್ನು ಮುಳುಗಿಸಿ ವಿದ್ಯುತ್ ಉತ್ಪಾದಿಸಲು ಕಾರ್ಪೊರೇಟುಗಳಿಗೆ ಅವಕಾಶ ನೀಡಲಾಗಿದೆ. ಪಶ್ಚಿಮ ಘಟ್ಟದ ಕುದುರೆಮುಖ, ಮೂಕಾಂಬಿಕಾ ವಲಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟು ಪ್ರಾಯೋಜಿತ ಹಲವು ಯೋಜನೆಗಳ ಪ್ರಸ್ತಾವನೆಗಳು ಚಾಲ್ತಿಯಲ್ಲಿವೆ. ಇವೆಲ್ಲದರ ಜೊತೆಗೆ ಪರಿಸರದ ಭಾಗವಾಗಿರುವ ಈ ಪ್ರದೇಶಗಳ ಮೂಲನಿವಾಸಿಗಳನ್ನು ಇನ್ನಿತರ ಜನಸಮುದಾಯಗಳನ್ನು ಒಕ್ಕಲೆಬ್ಬಿಸಿ ನಾಶ ಮಾಡಬಹುದಾದ ಹತ್ತು ಹಲವು ಯೋಜನೆಗಳು ಹಾಗೂ ಅಂತರ್‌ರಾಷ್ಟ್ರೀಯ ಒಪ್ಪಂದಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಬಹಿರಂಗಗೊಂಡ ಯೋಜನೆಗಳು ಕೆಲವಾದರೆ ಬಹಿರಂಗಗೊಳ್ಳದಿರುವ ಯೋಜನೆಗಳು ಹಲವಿವೆ. ಹಾಗಾಗಿಯೇ ಅರಣ್ಯ ಹಕ್ಕು ಕಾಯ್ದೆಯಾಗಲೀ ಬಗರ್ ಹುಕುಂ ಭೂಮಿ ನೀಡುವುದಾಗಲೀ ಒಣ ಭಾಷಣ ಆಶ್ವಾಸನೆಗಳಿಂದಾಚೆಗೆ ಜಾರಿಯಾಗುತ್ತಿಲ್ಲ. ರಸ್ತೆ ಅಗಲೀಕರಣಗಳು, ಅದಕ್ಕಾಗಿ ಮಾಡುತ್ತಿರುವ ಅರಣ್ಯನಾಶ ಹಾಗೂ ಮಣ್ಣಿನ ನಾಶಗಳನ್ನು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ದಿನೇ ದಿನೇ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿಗೂ ಪರಿಸರದ ಮೇಲೆ ಹೆಚ್ಚಾಗುತ್ತಿರುವ ಭಾರೀ ಕಾರ್ಪೊರೇಟು ದಾಳಿಗಳಿಗೂ ನೇರ ಸಂಬಂಧಗಳಿವೆ. ಸುಲಭವಾಗಿ ಬೃಹತ್ ಲಾಭ ಗಳಿಸಲು ಪರಿಸರ ಲೂಟಿಗೆ ಭಾರೀ ಕಾರ್ಪೊರೇಟುಗಳು ಎಲ್ಲಾ ಶ್ರಮಗಳನ್ನು ನಡೆಸುತ್ತಿವೆ. ದುರಂತವೆಂದರೆ ಪರಿಸರ ರಕ್ಷಣೆಯ ಹೆಸರಿನಲ್ಲೇ ಕಾರ್ಪೊರೇಟುಗಳು ಅರಣ್ಯ, ನದಿ, ಗುಡ್ಡ, ಬೆಟ್ಟಗಳನ್ನು ವಶಪಡಿಸಿಕೊಳ್ಳಲು ತೊಡಗಿದ್ದಾರೆ. ಅದಕ್ಕಾಗಿ ಅರಣ್ಯ ಕಾನೂನಿಗೆ ತಿದ್ದುಪಡಿಗಳನ್ನು ಕೂಡ ಮಾಡಲಾಗಿದೆ. ನದಿಗಳು, ಅರಣ್ಯಗಳನ್ನೇ ಖಾಸಗೀಕರಣ ಮಾಡುವ ಮೂಲಕ ಭಾರೀ ಕಾರ್ಪೊರೇಟುಗಳಿಗೆ ವಹಿಸಿಕೊಡುವ ಕಾರ್ಯ ಆರಂಭವಾಗಿ ಬಹಳ ಕಾಲವಾಗಿದೆ. ಈಗಾಗಲೇ ಅಂಬಾನಿ, ಅದಾನಿ, ಅಗರ್ವಾಲ್‌ಗಳಂತಹ ಉದ್ಯಮಿಗಳು ಲಕ್ಷಾಂತರ ಎಕರೆಗಳಷ್ಟು ಅರಣ್ಯ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಅದಕ್ಕೆ ಪರಿಸರ ರಕ್ಷಣೆಯ ಅಕರ್ಷಕ ಹೆಸರುಗಳನ್ನೂ ನೀಡಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಅರಣ್ಯೀಕರಣವೆಂಬ ಯೋಜನೆ ಕೂಡ ಜಾರಿಯಲ್ಲಿವೆ. ಇದುವರೆಗೆ ಆಳುತ್ತಾ ಬಂದ ಎಲ್ಲಾ ಸರಕಾರಗಳೂ ಹಾಗೂ ವಿರೋಧ ಪಕ್ಷಗಳೆನಿಸಿಕೊಂಡವು ಕೂಡಾ ಇವುಗಳೆಲ್ಲದರ ಹೊಣೆಗಾರವಾಗಿವೆ. ಈಗಿನ ಸರಕಾರ ಈ ಕೆಲಸಗಳನ್ನು ವೇಗಗೊಳಿಸಿದೆ.

ಈ ಬಾರಿ ಆದಂತಹ ಮಳೆ, ಭೂಕುಸಿತ, ನೆರೆ, ಸಾವುನೋವುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಲಕ್ಷಣಗಳು ಕಾಣಿಸುತ್ತಿವೆ. ನೇತ್ರಾವತಿ, ಶರಾವತಿ ನದಿಗಳ ನೀರು ಬೆಂಗಳೂರಿಗೆ ತಿರುಗಿಸುವಂತಹ ಯೋಜನೆಗಳಾಗಲೀ, ಅರಣ್ಯ ಪ್ರದೇಶಗಳ ಖಾಸಗೀಕರಣಗಳಾಗಲೀ, ಪರಿಸರ ರಕ್ಷಣೆಯ ನೆಪದಲ್ಲಿ ಜನಸಾಮಾನ್ಯರನ್ನು ಅವರ ಮೂಲಗಳಿಂದ ಒಕ್ಕಲೆಬ್ಬಿಸುವ ಯೋಜನೆಗಳಾಗಲೀ, ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಭೂಮಿಗಳನ್ನು ಕಾರ್ಪೊರೇಟುಗಳಿಗೆ ಪರಭಾರೆ ಮಾಡುವುದಾಗಲೀ ಬಿಡಿ ಬಿಡಿ ವಿಚಾರವಲ್ಲ. ಇಂತಹ ಹತ್ತು ಹಲವು ಯೋಜನೆಗಳನ್ನು ನೈಸರ್ಗಿಕ ಪ್ರಕೋಪಗಳನ್ನು ಜೋಡಿಸಿಕೊಂಡು ಒಟ್ಟಾರೆಯಾಗಿ ನೋಡದೇ ಕೇವಲ ಬಿಡಿಬಿಡಿಯಾಗಿ ನೋಡಲು ಹೋದರೆ ಸಮಸ್ಯೆಯ ಆಳ ಮತ್ತು ವಿಸ್ತಾರ ಅರ್ಥವಾಗದೇ ಹೋಗುತ್ತದೆ. ಪರಿಸರ ಹಾಗೂ ಜನಸಾಮಾನ್ಯರ ಬದುಕಿನ ರಕ್ಷಣೆಯ ವಿಚಾರ ನನೆಗುದಿಗೆ ಬೀಳುತ್ತದೆ. ಮುಂದಿನ ಪೀಳಿಗೆಗೆ ಬೆಂಗಾಡು ಮಾತ್ರ ಉಳಿಯುವ ಪರಿಸ್ಥಿತಿ ಬರುತ್ತದೆ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News