ಕುಸ್ತಿಗೆ ಮಹತ್ವ ನಾಸ್ತಿ; ಬಾಕ್ಸಿಂಗ್ ಒಂದೇ ಆಸ್ತಿ!

Update: 2019-09-15 04:59 GMT

‘‘ಬಲ ಇದೆ ಅಂತ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ’’ ಇದೊಂದು ಸಂಭಾಷಣೆಗೆ ನ್ಯಾಯ ಒದಗಿಸಲು ಕ್ಲೈಮ್ಯಾಕ್ಸ್‌ನಲ್ಲಿ ಒಂದು ಭಯಾನಕ ಹೊಡೆದಾಟವನ್ನೇ ಇರಿಸಿದ್ದಾರೆ ನಿರ್ದೇಶಕರು. ಅದೊಂದನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ವಿಶೇಷವಾಗಿ ಗಮನ ಸೆಳೆಯುವಂತಹ ಅಂಶಗಳೇನೂ ಇಲ್ಲ ಎಂದು ಬೇಸರದಿಂದಲೇ ಹೇಳಬೇಕಾಗಿದೆ.

ಗಜೇಂದ್ರಗಡದ ಬೀದಿಯಲ್ಲಿ ಬಾಲಕನೊಬ್ಬ ಕುಸ್ತಿ ಪಂದ್ಯ ನಡೆಸುತ್ತಿರುತ್ತಾನೆ. ಹಾಗೆ ಪಂದ್ಯ ನಡೆಸಿ ಅದನ್ನು ಗೆಲ್ಲುವ ಮೂಲಕ ಒಪ್ಪೊತ್ತಿನ ಆಹಾರಕ್ಕಾಗಿ ಹಣ ಸಂಗ್ರಹಿಸುತ್ತಿದ್ದಾನೆ ಎನ್ನುವುದು ಆ ಊರಲ್ಲಿ ಸರ್ಕಾರ್ ಎಂದು ಗುರುತಿಸಿಕೊಂಡ ಮಹನೀಯನ ಕಣ್ಣಿಗೆ ಬೀಳುತ್ತದೆ. ತಕ್ಷಣವೇ ಆ ಬಾಲಕನನ್ನು ಮನೆಗೆ ಕರೆದೊಯ್ದು ಸಾಕು ಮಗನಂತೆ ನೋಡಿಕೊಳ್ಳುತ್ತಾನೆ. ಕೃಷ್ಣ ಎಂಬ ಹೆಸರಿನ ಆ ಬಾಲಕ ಕಿಚ್ಚನಾಗಿ ಬೆಳೆದು ಪೈಲ್ವಾನನಾಗಿ ಹೆಸರು ಮಾಡುತ್ತಾನೆ. ಆತನನ್ನು ಕುಸ್ತಿಯಲ್ಲಿ ಚಾಂಪಿಯನ್ ಮಾಡುವ ಆಸೆ ಸರ್ಕಾರ್‌ನದ್ದಾಗಿರುತ್ತದೆ. ಇದರ ನಡುವೆ ಕಿಚ್ಚನಿಗೆ ರುಕ್ಮಿಣಿ ಎನ್ನುವ ಹುಡುಗಿಯೊಂದಿಗೆ ಪ್ರೇಮವಾಗುತ್ತದೆ. ಅವರ ಮದುವೆಯೇ ಸರ್ಕಾರ್ ಕಿಚ್ಚನನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಲು ಕಾರಣವಾಗುತ್ತದೆ. ಇಂತಹದ್ದೊಂದು ಕತೆಯ ಕ್ಲೈಮ್ಯಾಕ್ಸ್ ಹೇಗಿರುತ್ತದೆ ಎನ್ನುವುದನ್ನು ಸಿನೆಮಾ ನೋಡುವ ಯಾರಿಗೂ ಹೇಳಿಕೊಡಬೇಕಾದ ಅಗತ್ಯ ಇರುವುದಿಲ್ಲ. ಅದಕ್ಕೆ ತಕ್ಕಂತೆ ಇರುವ ಅಂತ್ಯವನ್ನು ನೋಡಲೇಬೇಕೆಂಬ ಬಯಕೆ ಇದ್ದರೆ ಖಂಡಿತವಾಗಿ ಚಿತ್ರ ಮಂದಿರಕ್ಕೆ ಹೋಗಬಹುದು.

ಇದೇ ಚಿತ್ರದ ಕತೆಯೊಳಗೆ ಮುಖ್ಯವಾದ ಮತ್ತೊಂದು ಎಳೆ ಕೂಡ ಸಮಾನಾಂತರವಾಗಿ ಸಾಗುತ್ತಿರುತ್ತದೆ. ಅದು ಟೋನಿ ಮತ್ತು ಆತನ ಬಾಕ್ಸಿಂಗ್ ಗುರುವಿನದ್ದು. ಕೆಟ್ಟು ಹೋದ ತನ್ನ ಶಿಷ್ಯ ಟೋನಿಗೆ ಪಾಠ ಕಲಿಸಲು ಗುರು ಪರ್ಯಾಯವಾಗಿ ಹುಡುಕುವ ಬಾಕ್ಸರ್ ಅಂದರೆ ಕಿಚ್ಚ! ಕುಸ್ತಿ ಪಟು ಹೇಗೆ ಬಾಕ್ಸರ್ ಆಗಿ ಬದಲಾಗುತ್ತಾನೆ ಎನ್ನುವುದನ್ನು ಚಿತ್ರದ ಕೊನೆಗೆ ಚೆನ್ನಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಸುದೀಪ್ ತಲೆಗೂದಲು ಕತ್ತರಿಸಿಕೊಳ್ಳದ ಪೈಲ್ವಾನನಾಗಿ ಗಮನ ಸೆಳೆದಿರುವುದಕ್ಕಿಂತ ಹೆಚ್ಚು, ಸಿಕ್ಸ್ ಪ್ಯಾಕ್ ಮಾಡಿಕೊಂಡ ಬಾಕ್ಸರ್ ಆಗಿ ಮನ ಗೆಲ್ಲುತ್ತಾರೆ! ಸರ್ಕಾರ್ ಪಾತ್ರದಲ್ಲಿ ಸುನೀಲ್ ಶೆಟ್ಟಿಯನ್ನು ರುಚಿಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಲಾಗಿದೆ. ಅವರಿಗೆ ತೆಲುಗು ಭಾಷಿಕರು ಕಂಠದಾನ ನೀಡಿರುವುದು ಕಿವುಡನಿಗೆ ಅಂಧನೋರ್ವ ದಾರಿ ತೋರಿಸಿದಂತಾಗಿದೆ. ಇದರ ನಡುವೆ ತೆಲುಗು ಚಿತ್ರಗಳ ಪ್ರಭಾವದಿಂದ ನಿರ್ದೇಶಕ ಕೃಷ್ಣ ಒಂದಷ್ಟು ಪಾತ್ರಗಳನ್ನು ಬಲವಂತವಾಗಿ ಚಿತ್ರದೊಳಗೆ ತುರುಕಿದ್ದಾರೆ. ‘ವಿಕ್ರಮಾರ್ಕುಡು’ ಚಿತ್ರದ ಅಸಹಾಯಕ ಪೊಲೀಸ್, ‘ಮಗಧೀರ’ ಚಿತ್ರದ ರಣದೇವನ ಪಾತ್ರಗಳು ಇಲ್ಲಿಯೂ ಇವೆ! ಸಾಲದೆಂಬಂತೆ ಕಾಮಿಡಿ ಕಿಲಾಡಿ ಖ್ಯಾತಿಯ ಅಪ್ಪಣ್ಣನನ್ನು ವಡಿವೇಲು ಶೈಲಿಯಲ್ಲಿ ತೋರಿಸಲಾಗಿದೆ. ಕಾಣಸಿಗುವ ಪಾತ್ರಗಳಲ್ಲಿ ಇನಿತಾದರೂ ಸಹಜತೆ ಎದ್ದು ಕಾಣುವ ಪಾತ್ರ ಇದ್ದರೆ ಅದು ಶರತ್ ಲೋಹಿತಾಶ್ವ ಅವರದ್ದು. ಆದರೆ ಅವರು ನಿರ್ವಹಿಸಿದ ಬಾಕ್ಸಿಂಗ್ ಕೋಚ್‌ನ ಪಾತ್ರ ಮತ್ತು ಕಿಚ್ಚನ ಪಾತ್ರವನ್ನು ಪರಸ್ಪರ ಭೇಟಿ ಮಾಡಿಸಲು ಜನ್ಮಾಂತರದ ಸಂಗಮದ ಹಾಗೆ ಬಿಲ್ಡಪ್ ನೀಡಿರುವುದು ವಿಪರ್ಯಾಸ. ಅದೇ ರೀತಿ ಚಿತ್ರದ ಮೂಲಕ ಟೋನಿಯಾಗಿ ತಮ್ಮ ಪ್ರತಿಭೆಯನ್ನು ತೋರಿಸಿರುವ ಮತ್ತೋರ್ವ ಕಲಾವಿದನಾಗಿ ಕಬೀರ್ ದುಹಾನ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪಿಸಲೇಬೇಕು. ನಾಯಕಿ ರುಕ್ಮಿಣಿಯಾಗಿ ಆಕಾಂಕ್ಷ ಸಿಂಗ್ ತಮ್ಮ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಮೊದಲಾರ್ಧದಲ್ಲಿ ಜೇನಿಗೆ ಕಲ್ಲು ಹೊಡೆದು ಓಡುವ ಹುಡುಗಿ ದ್ವಿತೀಯಾರ್ಧಕ್ಕಾಗುವಾಗ ಜಾನು ಎಂಬ ಮಗುವಿಗೆ ತಾಯಿಯಾಗಿರುತ್ತಾಳೆ! ಎರಡೂ ಗೆಟಪ್‌ಗಳು ಕೂಡ ಆಕೆಗೆ ಹೊಂದುತ್ತವೆ. ಕಣ್ಮಣಿಯೇ ಎಂಬ ಪ್ರೇಮಗೀತೆ ಮತ್ತು ಅದರ ಕೊರಿಯಾಗ್ರಫಿ ಇಬ್ಬರ ಜೋಡಿಯನ್ನು ಆಕರ್ಷಕವಾಗಿಸಿದೆ. ಉಳಿದಂತೆ ಮೇಕಿಂಗ್ ನಲ್ಲಿ ಮಾಡಿರುವ ಯಡವಟ್ಟುಗಳು ಕಣ್ಣಿಗೆ ರಾಚುವಂತಿವೆ. ಹೊಡೆದಾಟದ ದಶ್ಯವೊಂದರಲ್ಲಿ ಬಣ್ಣಬದಲಾಗುವ ನಾಯಕನ ಬಟ್ಟೆ ಅದಕ್ಕೊಂದು ಉದಾಹರಣೆ! ಅದನ್ನು ಸಂಭಾಷಣೆಯ ಮೂಲಕ ಹೊಂದಿಸಲು ನೋಡಿ ಇನ್ನಷ್ಟು ಯಡವಟ್ಟು ಮಾಡಿಕೊಳ್ಳಲಾಗಿದೆ. ರಾಣನಾಗಿ ಸುಶಾಂತ್ ಸಿಂಗ್ ಖಳನಿಗಿಂತ ಹೆಚ್ಚು ಕಾಮಿಡಿಯೆನಿಸುವುದು ವಿಪರ್ಯಾಸ. ಬಾಕ್ಸಿಂಗ್ ಸೇರಿದಂತೆ ಯಾವುದೇ ಕ್ರೀಡೆ ಇರುವಂತಹ ಭಾರತೀಯ ಚಿತ್ರಗಳಲ್ಲಿ ಕೊನೆಗೊಂದು ಬ್ಲ್ಯಾಕ್‌ಮೇಲ್ ಗೇಮ್ ಇರುವುದನ್ನು ಹೆಚ್ಚಾಗಿ ಕಾಣಬಹುದು. ಇಲ್ಲಿಯೂ ಅದು ಇದೆ. ಆದರೆ ಅದಕ್ಕಿಂತ ಮುಖ್ಯವಾಗಿ ದೇಶದ ಬಾಲ ಪ್ರತಿಭೆಗಳನ್ನು ಬೆಳೆಸಲು ಬಾಕ್ಸರ್ ಆಗುವ ನಾಯಕ ಆ ಮಟ್ಟದ ಹೊಡೆದಾಟ ತಿನ್ನುವುದೇಕೆ ಎನ್ನುವುದೇ ಅರ್ಥವಾಗುವುದಿಲ್ಲ. ಸತತ ಐದು ಸುತ್ತಿನ ತನಕ ಸೋತ ನಾಯಕನ ಒಂದು ಕಣ್ಣು ಮಂಜಾಗುತ್ತದೆ. ಆ ಹೊತ್ತಿಗೆ ಪ್ರೇಕ್ಷಕನ ಎರಡೂ ಕಂಗಳು ಮಂಜಾದರೆ ವಿಶೇಷವಿಲ್ಲ. ಎಲ್ಲೆಲ್ಲೋ ಓಡುವ ಕತೆಗೆ ಒಂದು ಸಂದೇಶ ತುರುಕಿ ಚಿತ್ರವನ್ನು ಪೂರ್ತಿ ಮಾಡಲಾಗಿದೆ. ಚಿತ್ರಕತೆ ನಿಧಾನವಾಗಿದೆ ಮಾತ್ರವಲ್ಲ ಅಪಘಾತಗಳನ್ನು ಕೂಡ ಸ್ಲೋ ಮೋಶನಲ್ಲಿ ತೋರಿಸಲಾಗಿದೆ! ಒಟ್ಟು ಚಿತ್ರದ ಕಾಲಾವಧಿ ಹೆಚ್ಚಾಗಿದೆ ಅನಿಸುತ್ತದೆ. ಕೊನೆಗೂ ಸಾಕಷ್ಟು ಏಟು ತಿಂದು ಗೆಲ್ಲುವ ನಾಯಕನಂತೆ ಚಿತ್ರ ನೋಡಿದ ಬಳಿಕ ನಿಮ್ಮ ಮನಸಿಗೂ ಒಂದು ನಿರಾಳತೆ ಸಿಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ತಾರಾಗಣ: ಸುದೀಪ್. ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್

ನಿರ್ದೇಶನ: ಕೃಷ್ಣ

ನಿರ್ಮಾಣ: ಸ್ವಪ್ನ ಕೃಷ್ಣ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News