ಶಿವಮೊಗ್ಗ: 'ಬೋರ್ಡ್'ಗಳ ಗದ್ದುಗೆಯೇರಲು ಯಡಿಯೂರಪ್ಪ- ಈಶ್ವರಪ್ಪ ಬೆಂಬಲಿಗರ ಭಾರೀ ಪೈಪೋಟಿ

Update: 2019-09-19 17:34 GMT

ಶಿವಮೊಗ್ಗ, ಸೆ.19: ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನದ ಗದ್ದುಗೆಯೇರಲು ಮುಖ್ಯಮಂತ್ರಿ ತವರೂರು ಜಿಲ್ಲೆಯ ಬಿಜೆಪಿ ನಾಯಕರು-ಕಾರ್ಯಕರ್ತರು ತೀವ್ರ ಲಾಬಿ ನಡೆಸಲಾರಂಭಿಸಿದ್ದಾರೆ. ಅದರಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರ ನಡುವೆ ತೀವ್ರ ಪೈಪೋಟಿಯೇ ಏರ್ಪಟ್ಟಿದೆ. ಸರ್ಕಾರದ ಉನ್ನತ ಸ್ಥಾನದಲ್ಲಿ ಈ ಇಬ್ಬರು ನಾಯಕರಿರುವುದು, ತವರೂರ ಬೆಂಬಲಿಗರಲ್ಲಿರುವ 'ಗದ್ದುಗೆ' ಆಸೆ ಮತ್ತಷ್ಟು ಹೆಚ್ಚಾಗಿಸಿದೆ. 

ಈ ನಡುವೆ ಬಿಎಸ್ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ನಗರದ ನಿವಾಸಿ, ಕೆ.ಪಿ.ಪುರುಷೋತ್ತಮರವರಿಗೆ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಹುದ್ದೆ ಒಲಿದು ಒಂದಿದೆ. ಇದು ಬಿಜೆಪಿ ಆಕಾಂಕ್ಷಿಗಳನ್ನು ಮತ್ತಷ್ಟು ತುದಿಗಾಲ ಮೇಲೆ ನಿಲ್ಲಿಸಿದೆ. ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಅಲ್ಲದೇ, ಸಾಕಷ್ಟು ಕುತೂಹಲ ಮೂಡಿಸಿದೆ. 

ಮತ್ತೊಂದೆಡೆ, ಕೆಲ ಆಕಾಂಕ್ಷಿಗಳು ಹುದ್ದೆ ಗಿಟ್ಟಿಸಿಕೊಳ್ಳಲು ನಾನಾ ತಂತ್ರಗಾರಿಕೆ-ಕಸರತ್ತು ನಡೆಸುತ್ತಿದ್ದಾರೆ. ಪಕ್ಷದಲ್ಲಿನ ಹಿರಿತನ, ಜಾತಿ, ವರಿಷ್ಠರ ಜೊತೆಗಿರುವ ಸಂಪರ್ಕ, ನಾಯಕರೊಂದಿಗಿರುವ ಆತ್ಮೀಯತೆ ಮತ್ತಿತರ ಅಂಶಗಳನ್ನು ಒರೆಗಚ್ಚುತ್ತಿದ್ದಾರೆ. ಇನ್ನೂ ಕೆಲವರು ಪಕ್ಷದ ರಾಷ್ಟ್ರ-ರಾಜ್ಯದ ಪ್ರಭಾವಿ ನಾಯಕರು, ಮಠಾಧೀಶರು, ಸಂಘ-ಪರಿವಾರದ ವರಿಷ್ಠರ ಮೂಲಕ ಶಿಫಾರಸ್ಸು ಮಾಡುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.

ಯಾರಿಗೆ ಸಿಂಹಪಾಲು?: ಬಿ.ಎಸ್.ವೈ. ಹಾಗೂ ಈಶ್ವರಪ್ಪ ಬಣದಲ್ಲಿ ಯಾರ್ಯಾರಿಗೆ ನಿಗಮ-ಮಂಡಳಿಗಳ ಗದ್ದುಗೆಯ ಭಾಗ್ಯ ಲಭಿಸಲಿದೆ? ಎರಡು ಬಣದಲ್ಲಿ ಯಾವ ಬಣದವರಿಗೆ ಸಿಂಹಪಾಲು ದೊರಕಲಿದೆ ? ಯಾರ ಕೈ ಮೇಲಾಗಲಿದೆ? ಎಂಬ ಚರ್ಚೆಗಳು ಬಿರುಸಿನಿಂದ ನಡೆಯಲಾರಂಭಿಸಿದೆ. ಮೇಲ್ನೋಟಕ್ಕೆ ಸಿಎಂ ಬಿ.ಎಸ್.ವೈ. ಬಣದವರಿಗೆ ಹೆಚ್ಚಿನ ಆದ್ಯತೆ ಸಿಗುವ ಲಕ್ಷಣಗಳು ಗೋಚರವಾಗುತ್ತಿವೆ. 

ತಲೆನೋವು: ನಿಗಮ-ಮಂಡಳಿಗಳ ಮೇಲೆ ಭಾರೀ ದೊಡ್ಡ ಸಂಖ್ಯೆಯಲ್ಲಿ ಆಪ್ತರು ಕಣ್ಣಿಟ್ಟಿರುವುದು ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ. ಯಾರಿಗೆ ಅವಕಾಶ ಕಲ್ಪಿಸಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ. ಅಧಿಕಾರ ವಂಚಿತ ಆಪ್ತರು ಎಲ್ಲಿ ಮುನಿಸಿಕೊಳ್ಳಲಿದ್ದಾರೋ? ಮುಂದಿನ ಚುನಾವಣೆ ವೇಳೆ ಒಳ ಹೊಡೆತ ನೀಡಲಿದ್ದಾರೋ? ಎಂಬ ಚಿಂತೆಯಲ್ಲಿಯೂ ಇದ್ದಾರೆ. 

ಜನಪ್ರತಿನಿಧಿಗಳು: ಈ ನಡುವೆ ಜಿಲ್ಲೆಯ ಕೆಲ ಬಿಜೆಪಿ ಶಾಸಕರು ಕೂಡ ಪ್ರಮುಖ ಬೋರ್ಡ್‍ಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲ ಶಾಸಕರು ಪ್ರಮುಖ ಬೋರ್ಡ್‍ಗಳ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಶಾಸಕರುಗಳು, ಪಕ್ಷದ ನಾಯಕರು-ಕಾರ್ಯಕರ್ತರಿಗೆ ಬೋರ್ಡ್‍ಗಳ ಪಟ್ಟ ಬಿಟ್ಟು ಕೊಡಬೇಕೆಂಬ ವಾದವೂ ಕೇಳಿಬರಲಾರಂಭಿಸಿದೆ. 

ಒಟ್ಟಾರೆ ರಾಜ್ಯ ಆಡಳಿತದ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ, ನಿಗಮ-ಮಂಡಳಿಗಳ ಗದ್ದುಗೆಯೇರುವ ವಿಷಯವು ಕಾವೇರಿದ ಚರ್ಚೆಗೆ ಎಡೆ ಮಾಡಿಕೊಟ್ಟಿರುವುದಂತೂ ಸತ್ಯ ಸಂಗತಿ.

ಎಂಎಲ್‍ಎ-ಎಂಎಲ್‍ಸಿಗಳಲ್ಲಿ ಯಾರಿಗೆ ಪಟ್ಟ?
ಒಂದೆಡೆ ಬಿಜೆಪಿ ನಾಯಕರು-ಕಾರ್ಯಕರ್ತರು ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದರೆ, ಇನ್ನೊಂದೆಡೆ ಆ ಪಕ್ಷದ ವಿಧಾನಸಭೆ ಸದಸ್ಯರು ಕೂಡ ಬೋರ್ಡ್‍ಗಳ ಮೇಲೆ ಚಿತ್ತ ಹರಿಸಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಹೊರತುಪಡಿಸಿ ಜಿಲ್ಲೆಯಲ್ಲಿ ಇನ್ನೂ ನಾಲ್ವರು ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಒಂದಿಬ್ಬರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದವರು. ಇದೀಗ ಅವರು ಸಹಜವಾಗಿಯೇ ರಾಜ್ಯ ಮಟ್ಟದ ನಿಗಮ-ಮಂಡಳಿಗಳತ್ತ ಚಿತ್ತ ನೆಟ್ಟಿದ್ದಾರೆ. ಮತ್ತೊಂದೆಡೆ ಎಂ.ಎಲ್.ಸಿ. ಗಳಿದ್ದಾರೆ. ಜಿಲ್ಲೆಯ ಯಾವ ಎಂ.ಎಲ್.ಎ.-ಎಂ.ಎಲ್.ಸಿ.ಗಳಿಗೆ ಬೋರ್ಡ್‍ಗಳ ಪಟ್ಟ ಸಿಗಲಿದೆ ಎಂಬುವುದು ಕುತೂಹಲ ಕೆರಳಿಸಿದೆ. 

ಸೂಡಾ-ಕಾಡಾಕ್ಕೆ ಸಖತ್ ಡಿಮ್ಯಾಂಡ್
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ), ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ), ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ (ಎಂ.ಎ.ಡಿ.ಬಿ.) ಗಳಿವೆ. ಇವುಗಳಿಗೆ ಅಧ್ಯಕ್ಷ, ಸದಸ್ಯರನ್ನು ಸರ್ಕಾರ ನೇಮಿಸುತ್ತದೆ. ಇವುಗಳಲ್ಲಿ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿರುವ ಹಾಗೂ ತನ್ನದೆ ಆದ ಮಹತ್ವ ಪಡೆದುಕೊಂಡಿರುವ, ಸೂಡಾ ಮತ್ತು ಕಾಡಾ ಅಧ್ಯಕ್ಷ ಸ್ಥಾನಗಳಿಗೆ ಬಿಜೆಪಿಯಲ್ಲಿ ಸಖತ್ ಡಿಮ್ಯಾಂಡ್ ಹಾಗೂ ಪೈಪೋಟಿ ಕಂಡುಬಂದಿದೆ. ಇನ್ನೊಂದೆಡೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನಕ್ಕೂ ಭಾರೀ ಬೇಡಿಕೆ ಬಿಜೆಪಿಯಲ್ಲಿದೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News