ಕ್ಯಾನ್ಸರ್‌ಗೆ ವಿಮೆ ರಕ್ಷಣೆ ಈಗ ಮೊಬೈಲ್ ಆ್ಯಪ್‌ನಲ್ಲಿಯೇ ಲಭ್ಯ
ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಈ ಜಗತ್ತಿನಲ್ಲಿ ನಿಜವಾದ ಜಾತ್ಯತೀತವೆಂದರೆ ಕಾಯಿಲೆಗಳೇ. ಅವು ಜಾತಿ, ಜನಾಂಗ, ಧರ್ಮ ಅಥವಾ ಲಿಂಗವನ್ನು ಪರಿಗಣಿಸದೆ ತಮ್ಮ ದಾಳಿಗಳಿಗೆ ಯಾರನ್ನು ಬೇಕಾದರೂ ಗುರಿಯಾಗಿಸಿಕೊಳ್ಳುತ್ತವೆ. ಇಂದು ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ತುಂಬ ದುಬಾರಿಯಾಗಿದೆ. ಕ್ಯಾನ್ಸರ್‌ನಂತಹ ಕಾಯಿಲೆಗೆ ಲಕ್ಷಾಂತರ ರೂ.ಗಳನ್ನು ವ್ಯಯಿಸಬೇಕಾಗುತ್ತದೆ. ರೋಗಿಗಳಿಗೆ ನೆರವಾ ಗಲು ಆರೋಗ್ಯ ವಿಮೆ ಯೋಜನೆಗಳು ಇವೆಯಾದರೂ ಜನರಲ್ಲಿ ಅವುಗಳ ಬಗ್ಗೆ ತಿಳುವಳಿಕೆ ಕಡಿಮೆ. ಇದೀಗ ಕ್ಯಾನ್ಸರ್ ಕಾಯಿಲೆಯ ವಿರುದ್ಧ ನಿಮ್ಮ ಮೊಬೈಲ್ ಆ್ಯಪ್‌ನಲ್ಲಿ ವಿಮೆ ರಕ್ಷಣೆಯನ್ನು ಪಡೆದುಕೊಳ್ಳಬಹುದು.
ಭಾರತದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಆಸ್ಪತ್ರೆ ವೆಚ್ಚವೂ ದುಬಾರಿಯಾಗುತ್ತಿದೆ. ಆದಿತ್ಯ ಬಿರ್ಲಾ ಹೆಲ್ತ್ ಇನ್ಶೂರನ್ಸ್ ಈಗ ಮೊಬಿಕ್ವಿಕ್ ಸಹಯೋಗದಲ್ಲಿ ‘ಕ್ಯಾನ್ಸರ್‌ನಿಂದ ರಕ್ಷಣೆ’ಗೆ ನೂತನ ಯೋಜನೆಯನ್ನು ತಂದಿದೆ. ಈ ವಿಮೆಯನ್ನು ಯಾವುದೇ ಪೇಪರ್‌ವರ್ಕ್ ಅಥವಾ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲದೆ ಮೊಬಿಕ್ವಿಕ್ ಆ್ಯಪ್‌ನಿಂದ ಖರೀದಿಸಬಹುದು.
ಈ ಕ್ಯಾನ್ಸರ್ ಪ್ಲಾನ್ ಕ್ಯಾನ್ಸರ್‌ನ ಎಲ್ಲ ಪ್ರಮುಖ ಹಂತಗಳಲ್ಲಿ ಸಮಗ್ರ ರಕ್ಷಣೆಯನ್ನು ನೀಡುತ್ತದೆ ಮತ್ತು ಶೇ.100ರಷ್ಟು ಹಣ ಪಾವತಿಯ ಭರವಸೆಯನ್ನು ಮುಂದಿಟ್ಟಿದೆ. ವಿಮೆ ರಕ್ಷಣೆಯ ಮೊತ್ತ 1.5 ಲ.ರೂ.ಗಳಿಂದ 7.5 ಲ.ರೂ.ವರೆಗೆ ಇದೆ. 1.5ಲ.ರೂ.ಗಳ ವಿಮಾ ಪಾಲಿಸಿಗೆ 125 ರೂ.ಗಳ ವಾರ್ಷಿಕ ಪ್ರೀಮಿಯಂ ಪಾವತಿಸಬೇಕಾಗುತ್ತದೆ. 4.5 ಲ.ರೂ.ವಿಮೆಗೆ 375 ರೂ. ಮತ್ತು 7.5 ಲ.ರೂ.ವಿಮೆಗೆ 625 ರೂ.ಪ್ರೀಮಿಯಂ ಅನ್ನು ಭರಿಸಬೇಕಾಗುತ್ತದೆ. ಹೆಚ್ಚಿನ ವಿಮೆ ರಕ್ಷಣೆ ಬಯಸುವವರು 7.5 ಲ.ರೂ.ಗಳ ಎರಡು ಪಾಲಿಸಿಗಳನ್ನು ಖರೀದಿಸಬಹುದು.
ಕ್ಯಾನ್ಸರ್ ಪಾಲಿಸಿಯು ಬಾಯಿ, ಶ್ವಾಸಕೋಶ, ಸ್ತನ, ಗರ್ಭಾಶಯ, ಗುದ ಕ್ಯಾನ್ಸರ್‌ನಂತಹ ರೋಗಗಳಿಗೆ ವಿಮೆ ರಕ್ಷೆಯನ್ನು ನೀಡುತ್ತದೆ. ಭಾರತದಲ್ಲಿಯ ಎಲ್ಲ ಕ್ಯಾನ್ಸರ್‌ಗಳ ಶೇ.47.2 ಕ್ಯಾನ್ಸರ್‌ಗಳು ಈ ವರ್ಗಕ್ಕೇ ಸೇರುತ್ತವೆ. ಯಾವುದೇ ವೈದ್ಯಕೀಯ ದಾಖಲೆಗಳ ಅಗತ್ಯವಿಲ್ಲದೆ ಧೂಮಪಾನಿಗಳೂ ಈ ವಿಮ ರಕ್ಷಣೆಯನ್ನು ಪಡೆಯಬಹುದಾಗಿದೆ.
ಮೊಬಿಕ್ವಿಕ್ ಆ್ಯಪ್ ಮೂಲಕ ಯಾವುದೇ ಪೇಪರ್ ವರ್ಕ್ ಇಲ್ಲದೆ ಈ ವಿಮೆರಕ್ಷಣೆಯನ್ನು ಪಡೆಯಬಹುದು. ಯಾವುದೇ ಹೆಚ್ಚುವರಿ ವೈದ್ಯಕೀಯ ತಪಾಸಣೆಗಳು ಇಲ್ಲ ಮತ್ತು ಪಾಲಿಸಿಯನ್ನು ಗ್ರಾಹಕರಿಗೆ ತಕ್ಷಣ ಒದಗಿಸುತ್ತವೆ.
ಕ್ಯಾನ್ಸರ್‌ಗೆ ವಿಮೆ ರಕ್ಷಣೆ ಪಡೆಯಲು ನಿಮಗೆ ಗೊಂದಲವಿದೆಯೇ? ಕ್ಯಾನ್ಸರ್‌ಗೆ ಗುರಿಯಾಗಬಹುದೆಂಬ ಆತಂಕವಿರುವವರು, ಕುಟುಂಬದ ಇತಿಹಾಸದಲ್ಲಿ ಕ್ಯಾನ್ಸರ್ ಇರುವವರು ಖಂಡಿತವಾಗಿ ಈ ಕ್ಯಾನ್ಸರ್ ರಕ್ಷಣೆಯನ್ನು ಪಡೆಯಬೇಕು.
ಆದರೆ ಕೇವಲ ಕ್ಯಾನ್ಸರ್‌ಗೆ ವಿಮೆ ಖರೀದಿ ಉತ್ತಮ ಆಯ್ಕೆ ಏನಲ್ಲ. ಸಮಗ್ರ ಆರೋಗ್ಯ ವಿಮೆ ರಕ್ಷಣೆಯ ಪಾಲಿಸಿಗಳ ಮುಂದೆ ಯಾವುದೂ ಇಲ್ಲ. ಕ್ಯಾನ್ಸರ್ ವಿಮೆ ಯೋಜನೆಗಳು ಏಕಗಂಟಿನಲ್ಲಿ ಅಥವಾ ಪಾಲಿಸಿಯ ವೌಲ್ಯದ ಶೇಕಡಾವಾರು ಪ್ರಮಾಣದಲ್ಲಿ ಲಾಭಗಳನ್ನೊದಗಿಸುತ್ತವೆ. ಆದರೆ ಆರೋಗ್ಯ ವಿಮಾ ಪಾಲಿಸಿಗಳು ರೋಗಿಯ ವಾಸ್ತವ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತವೆ.
ತಜ್ಞರು ಹೇಳುವಂತೆ ಕ್ಯಾನ್ಸರ್ ವಿಮೆ ಪ್ಲಾನ್ ಖರೀದಿಸುವಾಗ ಪ್ರೀಮಿಯಂ ಮೊತ್ತ ಮಾತ್ರವಲ್ಲ, ಇತರ ಲಾಭಗಳು, ವೈಶಿಷ್ಟಗಳು ಮತ್ತು ಪಾಲಿಸಿಯಿಂದ ಹೊರತು ಪಡಿಸಲಾಗಿರುವ ಅಂಶಗಳ ಮೇಲೂ ಕಣ್ಣು ಹಾಯಿಸಬೇಕು. ಜೊತೆಗೆ ಪಾಲಿಸಿ ಕ್ಯಾನ್ಸರ್‌ನ ಎಲ್ಲ ಹಂತಗಳಲ್ಲಿ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಹಣಪಾವತಿಯನ್ನು ಮಾಡುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.