ಕೊರೋನಾ ವೈರಸ್ ದಾಳಿ: ಸಾವಿನ ಸಂಖ್ಯೆ 131

Update: 2020-01-29 03:40 GMT

ವೂಹಾನ್, ಜ.29: ಕೊರೋನಾ ವೈರಸ್ ದಾಳಿಗೆ ತುತ್ತಾದವರ ಸಂಖ್ಯೆ 131ನ್ನು ತಲುಪಿದ್ದು, ಹ್ಯುಬೀ ಪ್ರಾಂತ್ಯವೊಂದರಲ್ಲೇ ಮತ್ತೆ 25 ಮಂದಿ ಮೃತಪಟ್ಟಿದ್ದಾರೆ. ಒಟ್ಟು 840 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಾಂಕ್ರಾಮಿಕದ ಕೇಂದ್ರಬಿಂದು ಹ್ಯುಬೀ ಪ್ರಾಂತ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ದೇಶಾದ್ಯಂತ ದೃಢಪಟ್ಟ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 5,300 ದಾಟಿದೆ ಎಂದು ಸರ್ಕಾರ ಪ್ರಕಟಿಸಿದೆ.

ತಮ್ಮ ನಾಗರಿಕರನ್ನು ರಕ್ಷಿಸುವ ಸಲುವಾಗಿ ಜಪಾನ್ 200 ಮಂದಿ ಹಾಗೂ ಅಮೆರಿಕ 240 ಮಂದಿಯನ್ನು ವಿಮಾನದ ಮೂಲಕ ನಗರದಿಂದ ಹೊರಕ್ಕೆ ಕರೆ ತಂದಿವೆ. ಮೊದಲ ಬಾರಿ ವೈರಸ್ ಸೋಂಕು ಕಾಣಿಸಿಕೊಂಡ ಕೈಗಾರಿಕಾ ನಗರ ವೂಹಾನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಐದು ಕೋಟಿ ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಇತರ ನಗರ ಹಾಗೂ ದೇಶಗಳಿಗೆ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.

ಫ್ರಾನ್ಸ್ ಕೂಡಾ ವೂಹಾನ್ ನಗರದಲ್ಲಿರುವ ಫ್ರೆಂಚ್ ಪ್ರಜೆಗಳನ್ನು ಹೊರಕ್ಕೆ ತರೆತರಲು ಮುಂದಾಗಿದೆ. ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಅವರು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಜತೆ ಮಾತನಾಡುವ ವೇಳೆ ಈ ವೈರಸ್ಸನ್ನು ಭೂತ ಎಂದು ಕರೆದಿದ್ದು, ಸ್ಥಿತಿಗತಿ ಬಗ್ಗೆ ಸಕಾಲಿಕ ಮಾಹಿತಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News