ಕೊರೋನ ಸಾವಿನ ದವಡೆಯಿಂದ ಗುಣಮುಖರಾಗಿ ಹೊರಬಂದ ವೃದ್ಧ ದಂಪತಿ
ತಿರುವನಂತಪುರಂ,ಮಾ.30: ದೇಶದ ವಿವಿದೆಡೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಾಗು ಆ ಸೋಂಕಿಗೆ ವಯೋವೃದ್ಧರು ಹೆಚ್ಚಾಗಿ ಬಲಿಯಾಗುತ್ತಿರುವ ಸುದ್ದಿಗಳೇ ಪ್ರತಿದಿನ ಬರುತ್ತಿರುವಾಗ ಕೇರಳದಿಂದ ಒಂದು ಶುಭ ಸುದ್ದಿ ಬಂದಿದೆ. ಅಲ್ಲಿ ಕೊರೋನ ವೈರಸ್ ಪೀಡಿತರಾಗಿದ್ದ ವಯೋವೃದ್ಧ ದಂಪತಿಯೊಂದು ಇದೀಗ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
93 ವರ್ಷದ ಪತಿ ಹಾಗೂ 88 ವರ್ಷದ ಪತ್ನಿ ಕೊರೋನ ಸೋಂಕಿತರಾಗಿದ್ದು, ಇದೀಗ ಗುಣಮುಖರಾಗಿದ್ದಾರೆ. ಸಾವಿನ ದವಡೆಯಿಂದ ಅವರನ್ನು ರಕ್ಷಿಸಿ ತರಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.
ಈ ವೃದ್ಧ ದಂಪತಿ ಇಟಲಿಯಿಂದ ಬಂದಿದ್ದ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ಸೋಂಕಿಗೊಳಗಾಗಿದ್ದರು. ಸಾಲದ್ದಕ್ಕೆ ಈ ದಂಪತಿಗೆ ಮಧುಮೇಹ, ರಕ್ತದೊತ್ತಡ ಸಹಿತ ಇತರ ವೃದ್ಧಾಪ್ಯ ಸಂಬಂಧ ಕಾಯಿಲೆಗಳಿದ್ದವು. ಆದರೆ ಇದೀಗ ಈ ದಂಪತಿ ಸಹಿತ ಕುಟುಂಬದ ಸದಸ್ಯರೆಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು.
ಈ ದಂಪತಿಯನ್ನು ತೀವ್ರ ನಿಗಾ ವಿಭಾಗದ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿದ್ದಾಗ ಅದಕ್ಕೆ ದಂಪತಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಬಳಿಕ ಅವರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ನೋಡಲು ಸಾಧ್ಯವಾಗುವಂತೆ ಒಂದೇ ಕೊಠಡಿಯಲ್ಲಿ ಇರಿಸಲಾಯಿತು.
ಈ ನಡವೆ ಈ ದಂಪತಿಗೆ ಅತ್ಯುತ್ತಮ ಚಿಕಿತ್ಸೆ ನೀಡಿದ್ದ ನರ್ಸ್ ಗಳ ಪೈಕಿ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಆಕೆಗೆ ಕರೆ ಮಾಡಿರುವ ಸಚಿವೆ ಶೈಲಜಾ ಅವರು ಇಡೀ ಆರೋಗ್ಯ ಇಲಾಖೆ ನಿಮ್ಮ ಜೊತೆ ಇದೆ ಎಂದು ಭರವಸೆ ತುಂಬಿದ್ದಾರೆ.