‘ಕೋಮುವಾದಿ ವೈರಸ್’ ವಿರುದ್ಧ ಉದ್ಧವ್ ಠಾಕ್ರೆ ಎಚ್ಚರಿಕೆ

Update: 2020-04-04 16:14 GMT

ಮುಂಬೈ, ಎ.4: ಮಹಾರಾಷ್ಟ್ರದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಶನಿವಾರ 500ರ ಗಡಿಯನ್ನು ದಾಟಿದೆ. ಇದೇ ವೇಳೆ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19ರ ಕುರಿತು ‘ತಪ್ಪು ಸಂದೇಶಗಳ ’ ವಿರುದ್ಧ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ವಾಟ್ಸ್‌ಆ್ಯಪ್,ಟಿಕ್‌ಟಾಕ್ ಮತ್ತು ಟ್ವಿಟರ್‌ಗಳಲ್ಲಿ ಹಲವಾರು ಕೋಮು ವಿಭಜನಕಾರಿ ವೀಡಿಯೊಗಳು ಹರಿದಾಡುತ್ತಿವೆ ಎಂಬ ವರದಿಗಳ ನಡುವೆಯೇ ಠಾಕ್ರೆ ಅವರು ಇಂತಹ ಕೋಮು ದ್ವೇಷದ ಸಂದೇಶಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಕೊರೋನ ವೈರಸ್‌ನಂತೆ ಕೋಮುವಾದಿ ವೈರಸ್ ಕೂಡ ಇದೆ. ತಮಾಷೆಗಾಗಿಯೂ ಸರಿಯೇ,ಇಂತಹ ತಪ್ಪು ಸಂದೇಶಗಳನ್ನು ಹರಡುವವರು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡುವವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಕೊರೋನ ವೈರಸ್ ಯಾವುದೇ ಧರ್ಮವನ್ನು ನೋಡುವುದಿಲ್ಲ’ಎಂದು ಠಾಕ್ರೆ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಸಬೇಕೇ ಎನ್ನುವುದು ಜನರು ಸರಕಾರದ ನಿರ್ದೇಶಗಳನ್ನು ಹೇಗೆ ಪಾಲಿಸುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ದೇಶದಲ್ಲಿ ಕೊರೋನ ವೈರಸ್‌ನಿಂದ ಅತ್ಯಂತ ತೀವ್ರವಾಗಿ ಬಾಧಿತವಾಗಿರುವ ರಾಜ್ಯವಾಗಿದ್ದು,ಶನಿವಾರ 47 ಹೊಸ ಪ್ರಕರಣಗಳು ವರದಿಯಾಗಿವೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 537ಕ್ಕೇರಿದೆ. ರಾಜ್ಯದಲ್ಲಿ ಈವರೆಗೆ ಕನಿಷ್ಠ 20 ಸಾವುಗಳು ಸಂಭವಿಸಿವೆ.

ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಸಮಾವೇಶದ ಬಗ್ಗೆಯೂ ಮಾತನಾಡಿದ ಠಾಕ್ರೆ, “ದಿಲ್ಲಿಯಲ್ಲಿ ಏನಾಗಿತ್ತೋ ಅದು ಮಹಾರಾಷ್ಟ್ರದಲ್ಲಿ ಸಂಭವಿಸಲು ನಾವು ಅವಕಾಶ ನೀಡಲಿಲ್ಲ. ಮೊದಲಿಗೆ ತಬ್ಲೀಗಿ ಸಮಾವೇಶಕ್ಕೆ ನಾವು ಅನುಮತಿ ನೀಡಿದ್ದೆವಾದರೂ ಬಳಿಕ ಪರಿಸ್ಥಿತಿಯನ್ನು ಪರಿಗಣಿಸಿ ಅನುಮತಿಯನ್ನು ನಿರಾಕರಿಸಿದ್ದೆವು. ನಮ್ಮ ರಾಜ್ಯದಿಂದ ದಿಲ್ಲಿ ಸಮಾವೇಶಕ್ಕೆ ತೆರಳಿದ್ದ ಎಲ್ಲರನ್ನೂ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಮತ್ತು ಅವರನ್ನು ರಾಜ್ಯಾದ್ಯಂತ ವಿವಿಧ ಐಸೋಲೇಷನ್ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು. ಕೆಲವರು ಬಾಕಿ ಉಳಿದಿರಬಹುದು ಮತ್ತು ಅವರ ಸಂಪರ್ಕ ಸಾಧ್ಯವಾಗಿರದಿರಬಹುದು” ಎಂದ ಠಾಕ್ರೆ,ಅಂತಹವರು ಮುಂದೆ ಬಂದು ಸ್ವಯಂ ಘೋಷಣೆ ಮಾಡಿಕೊಂಡು ತಪಾಸಣೆಗೆ ಒಳಗಾಗುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News