'ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಹೋಗದಂತೆ ತಡೆಯುತ್ತಿರುವ ಸರ್ಕಾರದ ಕ್ರೌರ್ಯದ ಗಣಿತ'

Update: 2020-05-02 14:34 GMT

ನಿನ್ನೆ ಮೇ ದಿನ. ಅದರ ಬಹುಮಾನವೆಂಬಂತೆ ವಲಸೆ ಕಾರ್ಮಿಕರು ತಮ್ಮಊರುಗಳಿಗೆ ಹೋಗಲು ಉಚಿತವಾಗಿ  KSRTC ಸಾರಿಗೆ ಕಲ್ಪಿಸುತ್ತೇವೆಂದು ಕರ್ನಾಟಕದ ಬಿಜೆಪಿ ಸರ್ಕಾರ ಹೇಳಿತ್ತು. 

ಆದರೆ ಆಗುತ್ತಿರುವುದೇ ಬೇರೆ...

ಕಳೆದರಡು ತಿಂಗಳಿಂದ ಕೂಲಿ ಇರಲಿ ಹೊಟ್ಟೆಪಾಡಿಗು ಗತಿ  ಇಲ್ಲದೆ ತತ್ತರಿಸುತ್ತಿರುವ ವಲಸೆ ಕೂಲಿಗಳಿಂದ KSRTC ಮೂಲಕ ಸರ್ಕಾರ ಮೂರುಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡಲು ಮುಂದಾಗಿದೆ. ಅದಕ್ಕೆ ಮುಂದೊಡ್ಡುತ್ತಿರುವ ನೆಪ ಕೋವಿಡ್ ಮುನ್ನೆಚ್ಚರಿಕೆ.

 ಅಂದರೆ ಕೋವಿಡ್ ಕಾರಣದಿಂದ ಬಸ್ಸೊಳಗೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಸಲುವಾಗಿ 52 ಸೀಟುಗಳ ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯಬೇಕಿದೆ. ಹೀಗಾಗಿ ಉಳಿದ ಸೀಟುಗಳ ಟಿಕೇಟಿನ ಹೊರೆಯನ್ನು ಸರ್ಕಾರ ಪ್ರಯಾಣ ಮಾಡುವ ಸಂತ್ರಸ್ತ ವಲಸೆ ಕಾರ್ಮಿಕರ ಮೇಲೆ ಹಾಕುತ್ತಿದೆ. ಆದರಿಂದಲೇ ರೂಟ್ ಬಸ್ಸುಗಳನ್ನು ಬಿಡದೆ  ಪ್ರಯಾಣದ  ಗುತ್ತಿಗೆಯ ಮೇಲೆ ಬಸ್ಸನ್ನು ನೀಡುತ್ತಿದೆ.  

ತಮ್ಮದಲ್ಲದ ತಪ್ಪಿಗೆ ಇನ್ನಿಲ್ಲದ ಶಿಕ್ಷೆಯನ್ನು ಅನುಭವಿಸುತ್ತಿರುವ ವಲಸೆ ಕಾರ್ಮಿಕರನ್ನು ಒಂದು ನಾಗರಿಕ ಸರ್ಕಾರ ಪುಕ್ಕಟೆಯಾಗಿ  ಅವರವರ ಊರಿಗೆ ತಲುಪಿಸಬೇಕಿತ್ತು. ಆದರೆ ಇದು  ಹೃದಯಹೀನ ಸರ್ಕಾರ.  ಮತ್ತೀಗ ಈ ಸಂದರ್ಭದಲ್ಲೂ ಹೇಗೆ  ರಣಹದ್ದುಗಳಂತೆ ವಲಸೆ ಕಾರ್ಮಿಕರನ್ನು  ಸುಲಿಯುತ್ತಿದೆ ಎಂಬುದು ಈ ಸರಳ ಲೆಕ್ಕಾಚಾರ ನೋಡಿದರೆ ಅರ್ಥವಾಗುತ್ತದೆ:

ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 60 ಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅವರಲ್ಲಿ 28 ಲಕ್ಷ ಜನ ಕಟ್ಟಡ ಹಾಗು ಇತರ ನಿರ್ಮಾಣ ಕಾಮಗಾರಿಗಳಲ್ಲಿ  (Building And Other Construction Workers- BOCW) ಕೆಲಸ ಮಾಡುವ ಕಟ್ಟಡ ಕಾರ್ಮಿಕರು. ಈ ಕಟ್ಟಡ ವಲಯದ ದಿನಗೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ 1994ರಲ್ಲಿ ಒಂದು ಕಾಯಿದೆಯು ರೂಪಿತವಾಯಿತು. ಅದಕ್ಕೆ ಸಂಬಂಧಪಟ್ಟ ನೀತಿ ನಿಯಮಾವಳಿಗಳನ್ನು  ಕರ್ನಾಟಕ ಸರ್ಕಾರವು  2007ರಲ್ಲಿ  ರೂಪಿಸಿತು. ಈ ಕಾಯಿದೆಯಡಿ, ನಿರ್ಮಾಣವಾಗುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳ ಮೇಲೆ  ಶೇ. 1 ರಷ್ಟು ಸೆಸ್ ಅನ್ನು ವಿಧಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಕಟ್ಟಡ ಕಾರ್ಮಿಕರ  ಕಲ್ಯಾಣ ನಿಧಿ ಯನ್ನು ಸ್ಥಾಪಿಸಲಾಯಿತು.

ಈ ಹಣವನ್ನು ಕಟ್ಟಡ ಕಾರ್ಮಿಕರ  ಸಂಕ್ಷೇಮ, ವೈದ್ಯಕೀಯ, ಶಿಕ್ಷಣ , ಮರಣ, ವಿವಾಹ, ಕೌಶಲ್ಯ ತರಬೇತಿ ಹಾಗು ಅಪಘಾತ ಪರಿಹಾರಗಳಿ ಗಾಗಿ ವಿನಿಯೋಗಿಸಬೇಕೆಂದು ಕಾನೂನು  ಮಾಡಲಾಯಿತು. ಆದರೆ ಇದರ  ಸೌಲಭ್ಯ ಪಡೆಯಬೇಕೆಂದರೆ  ಕಟ್ಟಡ ಕಾರ್ಮಿಕರು ಇದರಡಿ ನೋಂದಾಯಿಸಿಕೊಂಡಿರಬೇಕು.

ಆದರೆ ಬಹುಪಾಲು ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು ಅನಕ್ಷರಸ್ಥರು ಆಗಿರುವುದರಿಂದ ಶೇ. 75 ಭಾಗ ಕೂಲಿಗಳು ನೋಂದಾಯಿಸಿ ಕೊಂಡಿಲ್ಲ. ಈ ಯೋಜನೆಗಳ ಅರಿವು ಅವರಿಗಿಲ್ಲ. ಹೀಗಾಗಿಯೇ ಇದರಲ್ಲಿ ಸಂಗ್ರಹವಾಗಿರುವ ಶೇ. 90 ರಷ್ಟು ಹಣ ವ್ಯಯವಾಗುವುದೇ ಇಲ್ಲ.

ಇವತ್ತಿನ ಕೋವಿಡ್ ಸಂದರ್ಭದಲ್ಲಿ ಹಾಗು  ವಲಸೆ ಕಾರ್ಮಿಕರು ಊರಿಗೆ ಹೋಗಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಈ ಅನ್ಯಾಯ ಇನ್ನಷ್ಟು ಅಮಾನುಷವಾಗಿ ನಡೆಯುತ್ತಿದೆ. 

ಉದಾಹರಣೆಗೆ:

ಕರ್ನಾಟಕದಲ್ಲಿ ಬಹುಪಾಲು ವಲಸೆ ಕಾರ್ಮಿಕರು ಕೆಲಸಮಾಡುವುದು ಕಟ್ಟಡ ಹಾಗು ಇತರ ನಿರ್ಮಾಣ ಕ್ಷೇತ್ರಗಳಲ್ಲಿ. 2019-20ರ ವೇಳೆಗೆ  ಕರ್ನಾಟಕದಲ್ಲಿ ಕಟ್ಟಡ ಹಾಗು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 8000 ಕೋಟಿ  ರು. ಹಣ ಕೊಳೆಯುತ್ತಾ ಬಿದ್ದಿತ್ತು. ಕಟ್ಟಡ ಕಾರ್ಮಿಕರ ಸಂಕಷ್ಟಗಳನ್ನೂ ಬಗೆಹರಿಸಲೆಂದೇ ತಾನೇ ಈ ಹಣ ಇರುವುದು? ಹಾಗಿದ್ದಲ್ಲಿ  ತಮ್ಮತಮ್ಮ ಊರಿಗೆ ಹೋಗಲು ಉಚಿತವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಿಕೊಡಲು  ಸರ್ಕಾರವು ಈ ಹಣವನ್ನು ಬಳಸಿಕೊಳ್ಳಬಹುದಲ್ಲಾ? ಅದಕ್ಕೆ ಎಷ್ಟು ಖರ್ಚಾಗಬಹುದು ? 

ಈಗ ಸರ್ಕಾರದ ಲೆಕ್ಕಾಚಾರದ ಪ್ರಕಾರ ಅಂದಾಜು ಒಂದು . ಲಕ್ಷ ವಲಸೆ ಕಾರ್ಮಿಕರಿಗೆ ವಸತಿ ಮತ್ತು ಆಹಾರ ವನ್ನು ಒದಗಿಸಲಾಗುತ್ತಿದೆ. ಅವರೆಲ್ಲರೂ ಊರಿಗೆ ಹೋಗಿ ಬದುಕು ಕಂಡುಕೊಳ್ಳಲು ಬಯಸುತ್ತಿರುತ್ತಾರೆ. ಇದರ ಜೊತೆಗೆ ಸರ್ಕಾರದ ಪರಿಹಾರ ವ್ಯಾಪ್ತಿಯಲ್ಲಿ ರದ  ಇನ್ನು ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ಹೋಗಲು ತವಕಿಸುತ್ತಿದ್ದಾರೆ. ಹೀಗಾಗಿ ಅವರ ಸಂಖ್ಯೆ ಹೆಚ್ಚೆಂದರೆ 5 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ . 

KSRTC ಯ ಒಂದು ಕರ್ನಾಟಕ ಸಾರಿಗೆ ಬಸ್ಸನ್ನು ಬಾಡಿಗೆಗೆ ತೆಗೆದುಕೊಂಡರೆ ಒಂದು ಕಿಮೀ ಗೆ 37 ರು. ಮತ್ತು ಟೋಲ್ ಶುಲ್ಕ  ತಲಾ ರು. 2 ಸೇರಿ ಒಟ್ಟು ಒಂದು ಕಿಮೀಗೆ 39 ರೂ.ಗಳಾಗುತ್ತದೆ. ಈಗ ಬೆಂಗಳೂರಿನಿಂದ ಬೀದರ್ 700 ಕಿಮಿ ದೂರದಲ್ಲಿದೆ.  , ಬೆಳಗಾವಿ 600, ರಾಯಚೂರು 450, ಕೋಲಾರ್ 70 ಕಿಮಿ ದೂರ. ಹೀಗಾಗಿ ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರ ಊರು ಬೆಂಗಳೂರಿನಿಂದ ಸರಾಸರಿ 500 ಕಿಮಿ ದೂರದಲ್ಲಿದೆ ಎಂದಿಟ್ಟುಕೊಳ್ಳೋಣ. ಹೀಗಾಗಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ಬರಲು ಒಟ್ಟು 1000 ಕಿಮಿ ಪ್ರಯಾಣವಾಗುತ್ತದೆ. KSRTC ಯ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರ ಮೇಲೆ ಹೇಳಿದಂತೆ ಕಿಮೀಗೆ 39 ರು.ಗಳಂತೆ 1000 ಕಿಮೀಗೆ  39000 ರು.ಗಳಾಗುತ್ತದೆ.

ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ  ದೈಹಿಕ ಅಂತರ  ಕಾಪಾಡಿಕೊಳ್ಳಲು ಒಂದು  ಬಸ್ಸಿನಲ್ಲಿ 52 ಜನರ ಬದಲು 30 ಜನರೇ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 3,300 ಬಸ್ಸುಗಳು ಬೇಕಾಗುತ್ತದೆ. 

ಆಗ ಒಂದು ಬಸ್ಸಿಗೆ 39,000 ರು.ನಂತೆ  ಒಂದು ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಬೇಕಾದ 3,300 ಬಸ್ಸುಗಳಿಗೆ ಬೇಕಾಗುವುದು ಕೇವಲ 13 ಕೋಟಿ ರೂ.ಗಳು ಮಾತ್ರ. ಈ ಲೆಕ್ಕಾಚಾರದಂತೆ  ಎಲ್ಲಾ ಐದು ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಬೇಕಾಗುವುದು  65 ಕೋಟಿ  ರೂ. ಗಳು ಮಾತ್ರ !! ಇದು ವಲಸೆ ಕಾರ್ಮಿಕರ ಸಂಕ್ಷೇಮ ನಿಧಿಯಲ್ಲಿ  ಬಳಸದೆ ಕೊಳೆಯುತ್ತಿರುವ 8000 ಕೋಟಿಯ ಶೇ. 1 ಕ್ಕಿಂತ ಕಡಿಮೆ!!! 

ಹೀಗೆ ಸರ್ಕಾರ ಬೇರೆ ಯಾವುದೇ ಹಣವನ್ನು ವೆಚ್ಚ ಮಾಡದೆ ಕಾರ್ಮಿಕರ ಸಂಕ್ಷೇಮಕ್ಕೆಂದೇ ಕೂಡಿಟ್ಟಿರುವ ಹಣದ ಅತ್ಯಲ್ಪ ಪಾಲನ್ನು ಅವರಿ ಗೆಂದೇ ವೆಚ್ಚ ಮಾಡಿದರು ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಊರಿಗೆ ತಲುಪಿಸಬಹುದು. ಆದರೂ ಸರ್ಕಾರವು ಏಕೆ ಕಾರ್ಮಿಕರ ದುಡ್ಡನು ಕಾರ್ಮಿಕರಿಗೆ ವೆಚ್ಚ ಮಾಡದೆ ಉಲ್ಟಾ ಅವರಿಂದಲೇ ಮೂರುಪಟ್ಟು ದುಡ್ಡನ್ನು ಹೀರುತ್ತಿದೆ ?? 

ಇದಕ್ಕೆ ಎರಡು ಅಮಾನುಷ ಹಾಗು ದುಷ್ಟ ಕಾರಣಗಳಿವೆ.. 

ಮೊದಲನೆಯದಾಗಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ,  ಕೇಂದ್ರ ಸರ್ಕಾರದ ಅಸಹಕಾರಿ ಧೋರಣೆಯಿಂದಾಗಿ ಹಾಗು ಇದೀಗ ಕೋವಿಡ್ ಲಾಕ್ದೌನಿನಿಂದಾಗಿ  ಮತ್ತು  ಕೇಂದ್ರ ವು ರಾಜ್ಯದ ತೆರಿಗೆ ಪಾಲಿನ ಪಾಲಿನ ಹಣವನ್ನು ಬಿಡುಗಡೆ ಮಾಡದಿರುವುದರಿಂದಾಗಿ ಕರ್ನಾಟಕ ಸರ್ಕಾರದ ಬಳಿ ಸರ್ಕಾರ ನಡೆಸುವುದಕ್ಕಿರಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೆಚ್ಚಗಳನ್ನು ಮಾಡುವುದಕ್ಕೂ ಹಣವಿಲ್ಲ. 

ಈ  ಬಿಕ್ಕಟ್ಟಿನಿಂದ ಪಾರಾಗಲು ದುಷ್ಟ ಕೇಂದ್ರ ಸರ್ಕಾರ ಮೊನ್ನೆ ಒಂದು ಸುತ್ತೋಲೆಯನ್ನು ಹೊರಡಿಸಿದೆ. 

ಅದರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ನಿಧಿಯಲ್ಲಿರುವ ಕಾರ್ಮಿಕರಿಗೆ ಸೇರಬೇಕಿರುವ 8000 ಕೋಟಿ  ಹಣವನ್ನು ಕೋವಿಡ್ ಹಾಗು ಇತರ ಬಾಬತ್ತುಗಳಿಗೆ ವೆಚ್ಚ ಮಾಡಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಆದೇಶಿಸಿದೆ. ..! 

ಆದ್ದರಿಂದಲೇ ಪ್ರಾರಂಭದಲ್ಲಿ 16,500 ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ಊರಿಗೆ ತಲುಪಿಸಿದ ಕರ್ನಾಟಕ ಸರ್ಕಾರ ನಿನ್ನೆಯಿಂದ ಅದನ್ನು ಬಂದ್ ಮಾಡಿಡೇ ಮತ್ತು  ಉಲ್ಟಾ ವಲಸೆಕಾರ್ಮಿಕರನ್ನೇ ಸುಲಿಯಲು ಹೊರಟಿದೆ. 

ಇನ್ನೊಂದು ಅಮಾನುಷ ಕಾರಣವೆಂದರೆ , ಮೇ 4 ರಿಂದ ಬಹುಪಾಲು ಆರ್ಥಿಕ ಚಟುವಟಿಕೆಗಳು ಒಂದೊಂದಾಗಿ ಪ್ರಾರಂಭವಾಗಲಿದ್ದು  ಮತ್ತೆ ಅಲ್ಲಿ  ಅಗ್ಗದ ದರದಲ್ಲಿ ಕೆಲಸ ಮಾಡಲು ಈ ವಲಸೆ ಕಾರ್ಮಿಕರ ಅಗತ್ಯವಿದೆ.  ಆದರೆ ಈ  ಕೋವಿಡ್ ಬಿಕ್ಕಟ್ಟಿನ ಈ ನಗರ ಮತ್ತು ಸರ್ಕಾರ ಗಳ ಅಮಾನುಷ ನಡವಳಿಕೆಗಳಿಂದ ಕಂಗೆಟ್ಟು  ಊರಿಗೆ ಹೊರಟಿರುವ ಈ ವಲಸೆ ಕಾರ್ಮಿಕರು  ಊರಿಗೆ ಹೋಗಿಬಿಟ್ಟರೆ ಸದ್ಯಕ್ಕೆ ವಾಪಸ್ ಬರುವ ಸೂಚನೆಗಳಿಲ್ಲ. ಹಾಗಾದಲ್ಲಿ ನಗರದ ಆರ್ಥಿಕತೆ ಅಗ್ಗದ ಕೂಲಿಯಿಲ್ಲದೆ ತಲೆ ಎತ್ತುವುದಿಲ್ಲ.

ಈ ಬಂಡವಾಳಶಾಹಿ ಪರ ದುಷ್ಟ ಲೆಕ್ಕಾಕಾರಗಳಿನ್ನಿಟ್ಟುಕೊಂದು  ವಲಸೆ ಕಾರ್ಮಿಕರು ಊರಿಗೆ ಹೋಗುವುದನ್ನು ತಪ್ಪಿಸಲೆಂದೇ ಮೂರುಪಟ್ಟು ಹೆಚ್ಚಿನ ದರವನ್ನು ವಿಧಿಸಿ ಊರಿಗೆ ಹೋಗುವವರನ್ನು ನಿರುತ್ತೇಜಗೊಳಿಸಲಾಗುತ್ತಿದೆ. ಇಂದು ಕಾರ್ಮಿಕ ದಿನಕ್ಕೆ ಶುಭಾಶಯಗಳನ್ನು ಹೇಳುವ ನೆಪದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ "ಮನವಿ" ಯ ಹಿಂದಿನ ಕ್ರೌರ್ಯವಿದು ... 

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News