ತನ್ನ ಮೇಲೆ ದಾಳಿ ನಡೆಯುವ ಭೀತಿಯಿಂದ ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಕೊಂದ ಎಎಸ್‌ಐ
ಕಪುರ್ತಲಾ, ಮೇ 8: ಕರ್ಫ್ಯೂ ಸಮಯದಲ್ಲಿ ವಾಹನವನ್ನು ನಿಲ್ಲಿಸಿದ್ದಕ್ಕೆ ತನ್ನ ಮೇಲೆ ದಾಳಿ ನಡೆಸಬಹುದೆಂಬ ಭೀತಿಯಿಂದ ಪೊಲೀಸ್ ಅಧಿಕಾರಿಯೋರ್ವರು ಅಂತಾರಾಷ್ಟ್ರೀಯ ಕಬಡ್ಡಿ ಪಟುವನ್ನು ಗುಂಡಿಕ್ಕಿ ಕೊಂದ ಮತ್ತು ಆತನ ಸ್ನೇಹಿತನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಗುರುವಾರ ರಾತ್ರಿ ಕಪುರ್ತಲಾ ಜಿಲ್ಲೆಯ ಲಾಖನ್ ಕೆ ಪಡ್ಡಾ ಗ್ರಾಮದಲ್ಲಿ ನಡೆದಿದೆ.
ಎಎಸ್‌ಐ ಪರಮಜಿತ್ ಸಿಂಗ್ ರಾತ್ರಿ 10 ಗಂಟೆಯ ಸುಮಾರಿಗೆ ತನ್ನ ಸ್ನೇಹಿತ ಮಂಜುವನ್ನು ಬಿಡಲು ಕಾರಿನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದರು. ಪ್ರದೇಶದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು ಮುಂದಿನಿಂದ ಕಾರೊಂದು ಚಲಿಸುತ್ತಿದ್ದನ್ನು ಗಮನಿಸಿದ್ದ ಅವರು ಅದನ್ನು ಹಿಂಬಾಲಿಸಿ ನಿಲ್ಲಿಸುವಂತೆ ಸೂಚಿಸಿದ್ದರು. ಅದರಲ್ಲಿ ಪ್ರಯಾಣಿಸುತ್ತಿದ್ದ ಅಂತರರಾಷ್ಟ್ರೀಯ ಕಬಡ್ಡಿ ಪಟು ಅರವಿಂದರ್ಜಿತ್ ಸಿಂಗ್ ಮತ್ತು ಸ್ನೇಹಿತ ಪ್ರದೀಪ ಸಿಂಗ್ ಕಾರು ನಿಲ್ಲಿಸಿ ಕೆಳಕ್ಕಿಳಿದಿದ್ದು, ಅವರು ತನ್ನ ಮೇಲೆ ದಾಳಿ ಮಾಡಲಿದ್ದಾರೆ ಎಂದು ತಪ್ಪಾಗಿ ಗ್ರಹಿಸಿದ್ದ ಪರಮಜಿತ್ ಸಿಂಗ್ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಅವರತ್ತ ನಾಲ್ಕೈದು ಸುತ್ತು ಗುಂಡುಗಳನ್ನು ಹಾರಿಸಿದ್ದರು. ಅರವಿಂದರ್ಜಿತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರ ಗಾಯಗಳೊಡನೆ ಆಸ್ಪತ್ರೆಗೆ ದಾಖಲಾಗಿರುವ ಪ್ರದೀಪ ಸಿಂಗ್ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಎಎಸ್‌ಐ ಮತ್ತು ಸಿಂಗ್‌ದ್ವಯರ ನಡುವೆ ಯಾವುದೇ ದ್ವೇಷವಿರಲಿಲ್ಲ ಮತ್ತು ಇದು ತಪ್ಪು ತಿಳುವಳಿಕೆಯ ಪ್ರಕರಣವಾಗಿದೆ ಎಂದಿರುವ ಪೊಲೀಸರು,ಎಎಸ್‌ಐ ಮತ್ತು ಅವರ ಸ್ನೇಹಿತನನ್ನು ಬಂಧಿಸಿದ್ದಾರೆ.