2 ತಿಂಗಳುಗಳ ಕಾಲ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ, ಕೈಗೆಟಕುವ ದರದಲ್ಲಿ ವಸತಿ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಮೇ 15: ಕೊರೋನ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ರೈತರು, ವಲಸೆ ಕಾರ್ಮಿಕರು ಹಾಗೂ ಮಧ್ಯಮವರ್ಗಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ.
ಕಂಗೆಟ್ಟಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಮೋದಿ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಎರಡನೆ ಕಂತನ್ನು ನಿರ್ಮಲಾ ಅವರು ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ವಲಸಿಗ ಕಾರ್ಮಿಕರಿಗೆ ಉಚಿತ ಪಡಿತರ ಆಹಾರಧಾನ್ಯ, ರೈತರಿಗೆ ರಿಯಾಯಿತಿ ದರದಲ್ಲಿ ಸಾಲ ಹಾಗೂ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂ.ವರೆಗೆ ಬಂಡವಾಳ ಸಾಲ, ವಲಸೆ ಕಾರ್ಮಿಕರಿಗೆ ನರೇಗಾದಡಿ ಉದ್ಯೋಗ, ಒಂದೇ ದೇಶ, ಒಂದೇ ರೇಶನ್ ಕಾರ್ಡ್ ಯೋಜನೆಯ ಅನುಷ್ಠಾನ ಇವು ವಿತ್ತ ಸಚಿವೆ ಪ್ರಕಟಿಸಿದ ಎರಡನೇ ಕಂತಿನ ಪ್ಯಾಕೇಜ್‌ನ ಪ್ರಮುಖ ಅಂಶಗಳಾಗಿವೆ.
ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳುಗಳವರೆಗೆ 5 ಕೆ.ಜಿ. ಅಕ್ಕಿ ಅಥವಾ ಗೋಧಿ ಹಾಗೂ 1 ಕೆ.ಜಿ. ಬೇಳೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ 50 ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ಗ ಬಂಡವಾಳ ಸಾಲವನ್ನು ನೀಡಲಾಗುವುದೆಂದು ಸೀತಾರಾಮನ್, ಪ್ಯಾಕೇಜ್‌ನ ವಿವರಗಳನ್ನು ಪ್ರಕಟಿಸುತ್ತಾ ತಿಳಿಸಿದರು.
ದೇಶಾದ್ಯಂತ ಒಂದೇ ಮಾದರಿ ಕೂಲಿ ದರ ಇರುವಂತೆ ನೋಡಿಕೊಳ್ಳಲಾಗುವುದು. ನಗರಪ್ರದೇಶಗಳಲ್ಲಿರುವ ಬಡಕಾರ್ಮಿಕರಿಗೆ 3 ಕೋಟಿ ಮುಖಗವಸು ಒದಗಿಸಲಾಗುವುದು ಎಂದರು. ವಲಸೆ ಕಾರ್ಮಿಕರಿಗೆ ಉಚಿತವಾಗಿ ಬೇಳೆ ಹಾಗೂ ಆಹಾರಧಾನ್ಯ ನೀಡುವುದರಿಂದ 3500 ಕೋಟಿ ರೂ. ವೆಚ್ಚವಾಗಲಿದ್ದು, ಸಂಪೂರ್ಣವಾಗಿ ಕೇಂದ್ರ ಸರಕಾರವೇ ಅದನ್ನು ಭರಿಸಲಿದೆ.
ರೈತರ ನೆರವಿಗೂ ನಿರ್ಮಲಾ ಸೀತಾರಾಮನ್ ಭರ್ಜರಿ ಪ್ಯಾಕೇಜ್ ಘೋಷಿಸಿದ್ದಾರೆ. ನಬಾರ್ಡ್ ಸಂಸ್ಥೆಯು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ರೈತರಿಗೆ 30 ಸಾವಿರ ಕೋಟಿ ರೂ. ಮೊತ್ತದ ಹೆಚ್ಚುವರಿ ತುರ್ತು ಬಂಡವಾಳವನ್ನು ಸಾಲವನ್ನು ಒದಗಿಸಿದ್ದಾರೆ.
6 ಲಕ್ಷದಿಂದ 18 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವಿರುವ ಮಧ್ಯಮ ವರ್ಗದ ಜನರಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುವ ಯೋಜನೆಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರೇಶನ್ ಕಾರ್ಡ್‌ಗಳ ಅಂತರ್‌ರಾಜ್ಯ ಪೋರ್ಟೆಬಿಲಿಟಿಗೂ ಅವಕಾಶ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದಾಗಿ ವಲಸೆ ಕಾರ್ಮಿಕರು ತಾವು ಎಲ್ಲಿ ಹೋದರೂ, ಪಡಿತರ ಕಾರ್ಡ್ ಮೂಲಕ ಆಹಾರಧಾನ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ.
ಲಾಕ್‌ಡೌನ್‌ನಿಂದಾಗಿ ಆರ್ಥಿಕ ಬಿಕ್ಕಟ್ಟನ್ನೆದುರಿಸುತ್ತಿರುವ ಸಣ್ಣ ಉದ್ಯಮಗಳಿಗೂ ವಿತ್ತ ಸಚಿವೆ ಹೊಸ ಹುರುಪು ತುಂಬಲು ಯತ್ನಿಸಿದ್ದು, ಮುದ್ರಾ-ಶಿಶು ಸಾಲ ಯೋಜನೆಯಡಿ ನೀಡಲಾದ 50 ಸಾವಿರ ರೂ.ವರೆಗಿನ ಸಾಲದ ಬಡ್ಡಿಯಲ್ಲಿ ಶೇ.2ರಷ್ಟು ಕಡಿತವನ್ನು ಘೋಷಿಸಿದ್ದಾರೆ.
ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ರೂ.ಮೊತ್ತದ ಪ್ಯಾಕೇಜ್‌ನ ಉಳಿದ ಯೋಜನೆಗಳನ್ನು ಮುಂದಿನ ಕಂತುಗಳಲ್ಲಿ ಪ್ರಕಟಿಸಲಾಗುವುದೆಂದು ನಿರ್ಮಲಾ ತಿಳಿಸಿದರು. ಬುಧವಾರದಂದು ವಿತ್ತ ಸಚಿವೆ ಪ್ರಕಟಿಸಿದ ಮೊದಲ ಕಂತಿನ ಪ್ಯಾಕೇಜ್‌ನಲ್ಲಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಬೆಂಬಲವಾಗಿ 3 ಲಕ್ಷ ಕೋಟಿ ರೂ. ಮೊತ್ತದ ಸಾಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದರು. ಇದರ ಜೊತೆಗೆ ಬ್ಯಾಂಕೇತರ ಸಂಸ್ಥೆಗಳು ಹಾಗೂ ವಿದ್ಯುತ್ ಸರಬರಾಜು ಕಂಪೆನಿಗಳಿಗೂ ಹಲವಾರು ಆರ್ಥಿಕ ಸವಲತ್ತುಗಳನ್ನು ಪ್ರಕಟಿಸಿದ್ದರು.
ಮೋದಿ ಪ್ಯಾಕೇಜ್ 2.0 ಹೈಲೈಟ್ಸ್
*ಎಲ್ಲಾ ವಲಸಿಗರಿಗೆ ಎರಡು ತಿಂಗಳು ಉಚಿತ ಆಹಾರಧಾನ್ಯ ವಿತರಣೆ. ರೇಶನ್ ಕಾರ್ಡ್ ಇಲ್ಲದವರಿಗೂ ಪಡಿತರ ಕಾರ್ಡ್ ಇಲ್ಲದವರಿಗೂ ಪ್ರತಿ ವ್ಯಕ್ತಿಗೆ 1 ಕೆ.ಜಿ. ಬೇಳೆ, 5 ಕೆ.ಜಿ. ಅಕ್ಕಿ ಅಥವಾ ಗೋಧಿ.ಇದರಿಂದ 8 ಕೋಟಿ ವಲಸಿಗರಿಗೆ ನೆರವು
*ಅರೆಕಾಲಿಕ ನೌಕರರಿಗೆ ವಿಶೇಷ ಸಾಮಾಜಿಕ ಭದ್ರತಾ ಯೋಜನೆ
*ಒಂದು ದೇಶ ಒಂದು ಪಡಿತರ ಕಾರ್ಡ್ ಯೋಜನೆ ಮಾರ್ಚ್ 31ರೊಳಗೆ ಜಾರಿ. ರೇಶನ್ ಕಾರ್ಡ್‌ಗೆ ರಾಷ್ಟ್ರಮಟ್ಟದ ಪೋರ್ಟೆಬಿಲಿಟಿ ಸೌಲಭ್ಯ. 67 ಕೋಟಿ ಪಡಿತರದಾರರಿಗೆ ಪ್ರಯೋಜನ
*50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಪುನಾರಂಭಿಸಲು ತಲಾ 10 ಸಾವಿರ ರೂ. ಇದಕ್ಕಾಗಿ 5 ಸಾವಿರ ಕೋಟಿ ರೂ ಮೀಸಲು.
*ಅನ್ನದಾತರಿಗೆ ಹೆಚ್ಚುವರಿ ತುರ್ತು ಸಾಲ ಸೌಲಭ್ಯ. ನಬಾರ್ಡ್ ಮೂಲಕ 30 ಸಾವಿರ ಕೋಟಿ ರೂ. ಸಾಲ. ಮೀನುಗಾರಿಕೆ, ಹೈನುಗಾರಿಕೆಗೂ ಕಡಿಮೆ ಬಡ್ಡಿದರದ ಸಾಲ. ಮೇ 31ರವರೆಗೆ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ.
* ಹೊಸದಾಗಿ 25 ಸಾವಿರ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
*ವಸತಿ ಕಾರ್ಮಿಕರಿಗೆ ವಸತಿ ಸೌಲಭ್ಯ. ಖಾಸಗಿ ಸಹಭಾಗಿತ್ವದಲ್ಲಿ ಸರಕಾರದಿಂದ ಮನೆ ನಿರ್ಮಾಣ.
*ವಲಸೆ ಕಾರ್ಮಿಕರ ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್
*ವಲಸೆ ಕಾರ್ಮಿಕರಿಗ ಎಂನರೇಗಾದಲ್ಲಿ ಸೇರ್ಪಡೆಯಾಗಲು ಅವಕಾಶ
*ಸಂತ್ರಸ್ತ ವಲಸೆ ಕಾರ್ಮಿಕರ ಊಟಕ್ಕೆ 11 ಸಾವಿರ ಕೋಟಿ ರೂ. ನೆರವು
*ಮಧ್ಯಮವರ್ಗದ ಜನರಿಗೆ ಗೃಹ ಸಾಲ ಸಬ್ಸಿಡಿ ಸ್ಕೀಮ್. 2020ಕ್ಕೆ ಮುಗಿಯಬೇಕಿದ್ದ ಗೃಹ ಸಾಲ ಸಬ್ಸಿಡಿ ಯೋಜನೆ ಮಾರ್ಚ್ 31,2021ರವರೆಗೆ ವಿಸ್ತರಣೆ. ಇದಕ್ಕಾಗಿ 70 ಸಾವಿರ ಕೋಟಿ ರೂ. ಮೀಸಲು. 2.5ಕೋಟಿ ಜನರಿಗೆ ಇದರಿಂದ ಪ್ರಯೋಜನ.
*ಮುದ್ರಾ ಶಿಶು ಸಾಲ ಪಡೆದವರ ಶೇ.2ರಷ್ಟು ಬಡ್ಡಿ ಕೇಂದ್ರ ಭರಿಸಲಿದೆ. 3 ತಿಂಗಳ ಬಳಿಕ ಇಎಂಐ ಪಾವತಿಸಿದರೆ ಶೇ.2ರಷ್ಟು ಬಡ್ಡಿ ಕಡಿತ.
*ಒಂದೇ ಭಾರತ ಏಕವೇತನ ವೇತನ ಪದ್ಧತಿ ಜಾರಿಗೆ ಶ್ರಮ
*ಕನಿಷ್ಠ 10 ಜನ ಕಾರ್ಮಿಕರಿರುವ ಸಂಸ್ಥೆಗಳಿಗೆ ಇಎಸ್‌ಐಸಿ ಸೌಲಭ್ಯ ವಿಸ್ತರಣೆ
*ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡಲು ಅವಕಾಶ ನೀಡುವ ಕಾನೂನು ಜಾರಿ
*ಉದ್ಯೋಗ ಕಳೆದುಕೊಂಡವರಿಗೆ ಸರಕಾರದ ಮರುಕೌಶಲ್ಯ ತರಬೇತಿ
*ನೌಕರರ ಗ್ರಾಚ್ಯುಯಿಟಿ ಅವಧಿ 5ರಿಂದ 1 ವರ್ಷಕ್ಕೆ ಇಳಿಕ