ಕೊನೆಗೂ ಸುಪ್ರೀಂ ಕೋರ್ಟು ಬಾಯಿಬಿಚ್ಚಿತು.. ಆದರೆ ಕಣ್ಣು ಬಿಟ್ಟಿತೇ?

Update: 2020-05-29 09:30 GMT

ಮೋದಿ ಸರ್ಕಾರದ ಬೇಜವಾಬ್ದಾರಿ ಲಾಕ್ ಡೌನ್ ನೀತಿಗಳಿಂದಾಗಿ ಹಿಂದೆಂದೂ ಕಾಣದ ರೀತಿಯಲ್ಲಿ  ವಲಸೆ ಕಾರ್ಮಿಕರ ಜೀವಿಸುವ ಹಾಗು ಘನತೆಯಿಂದ ಬದುಕುವ ಹಕ್ಕುಗಳ ದಾರುಣ ಹರಣವಾಗುತ್ತಿದೆ. ಸರ್ಕಾರಗಳು ಇಂತಹ ಮಾನವೀಯ  ದುರಂತಕ್ಕೆ ಕಾರಣವಾದಾಗ ಕೋರ್ಟುಗಳಾದರು ಜನತೆಯ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕಿತ್ತು. ಆದರೆ ಭಾರತದ ಸುಪ್ರೀಂ ಕೋರ್ಟು ತನ್ನ ಮೌನ ಹಾಗು ಜಾಣ ಕುರುಡಿನ ಮೂಲಕ ಈ ಭೀಭತ್ಸಕ್ಕೆ ಸಮ್ಮತಿ  ನೀಡಿಬಿಟ್ಟಿದೆ.

ಸುಪ್ರೀಂ ಕೋರ್ಟಿನ ಈ ಧೋರಣೆಯ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಅದು ನಿನ್ನೆ ವಲಸೆ ಕಾರ್ಮಿಕರ ಪರವಾಗಿ ಬಾಯಿ ಬಿಚ್ಚಿದೆ. ಕೆಲವು ಸಕಾರಾತ್ಮಕ ಆದೇಶಗಳನ್ನು ನೀಡಿದೆ. ಆದರೆ ಅದನ್ನು ಆಧರಿಸಿ ಮೋದಿ ಪ್ರಭೆಯಲ್ಲಿ ಮುಚ್ಚಿಕೊಂಡಿದ್ದ ಸುಪ್ರೀಂ ಕೋರ್ಟಿನ ನ್ಯಾಯದ ಒಳಗಣ್ಣು ತೆರೆದುಕೊಂಡಿತೆಂದು ವಿಶ್ವಾಸವಿಡಬಹುದೇ?

ಏಕೆಂದರೆ ಸುಪ್ರೀಂ ಕೋರ್ಟಿನ ನಿನ್ನೆಯ ಜನಪರ ಆದೇಶದ ಹಿಂದೆ ಪ್ರಧಾನವಾಗಿ ಕೆಲಸ ಮಾಡಿರುವುದು ಅಪಾರವಾದ ನೈತಿಕ ಒತ್ತಡವೇ ಹೊರತು ಕೋರ್ಟಿನ ತಿಳವಳಿಕೆಯಲ್ಲಿ ಆದ ಬದಲಾವಣೆಯಲ್ಲ ಎಂದು ಭಾವಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. 

ಕೋವಿಡ್ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟು ಜನರ ಹಕ್ಕುಗಳ ರಕ್ಷಣೆಯ ಬಗ್ಗೆ ತೋರಿದ ಅಪಾರ ನಿರ್ಲಕ್ಷ್ಯ ಹಾಗು  ಸ್ವತಂತ್ರ ವಿಚಕ್ಷಣೆ ಹಾಗು ವಿವೇಚನೆಯನ್ನು ಕಳೆದುಕೊಂಡು ಆಳುವ ಸರ್ಕಾರದ ನೀತಿಗಳಿಗೆ ನ್ಯಾಯಾಂಗದ ಸೀಲನ್ನು ಒತ್ತುವ ಕಚೇರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ  ಅಪಾರವಾದ ಟೀಕೆಗಳು ವ್ಯಕ್ತವಾಗುತ್ತಿತ್ತು. ಮೊನ್ನೆ ದೇಶದ ಗಣ್ಯ ಹಿರಿಯ ವಕೀಲರುಗಳು ಕೋರ್ಟಿಗೆ ಒಂದು ಬಹಿರಂಗ ಪತ್ರವನ್ನೇ ಬರೆದರು. ಹಲವಾರು ನಿವೃತ್ತ ಸುಪ್ರೀಂ ಕೋರ್ಟು ಹಾಗು ಹೈಕೋರ್ಟು ನ್ಯಾಯಾಧೀಶರು ಬಹಿರಂಗವಾಗಿ ಸುಪ್ರೀಂಕೋರ್ಟಿನ ನಡವಳಿಕೆಯನ್ನು ಸಾಂವಿಧಾನಿಕ ನೆಲೆಯಲ್ಲಿ ಟೀಕಿಸುತ್ತಾ ಬರಹಗಳನ್ನು ಬರೆದಿದ್ದರು.

ಇದೆಲ್ಲದರ ಒಟ್ಟು ಪರಿಣಾಮವಾಗಿ ಸುಪ್ರೀಂಕೋರ್ಟು ನಿನ್ನೆ ವಲಸೆಕಾರ್ಮಿಕರ ಬವಣೆಯನ್ನು  ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದಷ್ಟು ತುರ್ತು ಆದೇಶಗಳನ್ನು ಹೊರಡಿಸಿದೆ.

ಹೀಗಾಗಿ ಸುಪ್ರೀಂ ಕೋರ್ಟಿನ ನಿನ್ನೆಯ ಆದೇಶಗಳು ವಲಸೆ ಕಾರ್ಮಿಕರಿಗೆ ತಡವಾಗಿಯಾದರೂ ಅಲ್ಪಸ್ವಲ್ಪ ಪರಿಹಾರವನ್ನು ಒದಗಿಸಿಕೊಟ್ಟಿರುವುದನ್ನು ಸ್ವಾಗತಿಸುತ್ತಲೇ, We The People Of India- ಸುಪ್ರೀಂ ಕೋರ್ಟಿಗೆ ಕೆಲವು ಸಾಂವಿಧಾನಿಕ  ಹಾಗು ಮೂಲಭೂತ ಪ್ರಶ್ನೆಗಳನ್ನು ಕೂಡಾ ಕೇಳಲೇ ಬೇಕಿದೆ.

ಈಗ ಒದಗಿಸಲಾಗಿರುವ ಪರಿಹಾರಗಳು ಜನರಿಗೆ ಸಂವಿಧಾನ ಕೊಟ್ಟಿರುವ ಹಕ್ಕುಗಳ ಭಾಗವೇ ಹೊರತು ಕೋರ್ಟಾಗಲಿ ಸರ್ಕಾರವಾಗಲಿ ಹಾಕುತ್ತಿರುವ ಭಿಕ್ಷೆಯಲ್ಲ. ಹಾಗಿದ್ದರೂ ಯಾವ ತಿಳವಳಿಕೆಯ ಹಿನ್ನೆಲೆಯಲ್ಲಿ ಆ ಪರಿಹಾರಗಳನ್ನು ಕೋರ್ಟು ಈವರೆಗೆ ನಿರಾಕರಿಸುತ್ತಾ ಬಂದಿತ್ತು?

ಈಗ ಕೆಲವು ಪರಿಹಾರಗಳನ್ನು ಕೊಟ್ಟು ಕೋರ್ಟು ತನ್ನ ತಪ್ಪನ್ನು ತಿದ್ದುಕೊಂಡಿದೆ. ಆದರೆ ಆ ತಪ್ಪಿನ ಹಿಂದಿನ ತಿಳವಳಿಕೆಯನ್ನು  ತಿದ್ದುಕೊಂಡಿದೆಯೇ?

ಏಕೆಂದರೆ ಕೋರ್ಟಿನ ಆದೇಶಗಳಲ್ಲಿ ಅದರ ಬಗ್ಗೆ ಯಾವ ಸೂಚನೆಗಳು ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟಿನ ತಿಳವಳಿಕೆಯ ಬಗ್ಗೆ ಈಗಲೂ ಕೆಲವು ಪ್ರಶ್ನೆಗಳನ್ನು ಕೇಳಲೇಬೇಕಿದೆ.

1. ಸುಪ್ರೀಂ ಕೋರ್ಟು ವಲಸೆ ಕಾರ್ಮಿಕರ ದಾರುಣ ಪರಿಸ್ಥಿತಿಯ ಬಗ್ಗೆ ತೋರಿದ ನಿರ್ಲಕ್ಷ್ಯಕ್ಕೆ ಕೊಡುತ್ತಿರುವ ಸಾಂವಿಧಾನಿಕ ಸಮರ್ಥನೆ ಏನೆಂದರೆ:

"ಲಾಕ್ ಡೌನ್ ಕ್ರಮಗಳನ್ನು ಒಳಗೊಂಡಂತೆ ಕೋವಿಡ್ ಅನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ನೀತಿಗಳನ್ನು ರೂಪಿಸುವುದು (Policy matter) ಆಡಳಿತಾರೂಢ ಸರ್ಕಾರದ ಪರಮಾಧಿಕಾರ. ಅದರಲ್ಲಿ ಸಾಂವಿಧಾನಿಕ ವಿಷಯಗಳಿಲ್ಲವಾದ್ದರಿಂದ ನ್ಯಾಯಾಂಗವು ಮಧ್ಯಪ್ರವೇಶ ಮಾಡಲಾಗದು".

ಸುಪ್ರೀಂಕೋರ್ಟಿನ ಈ ತಿಳವಳಿಕೆಯು ಈಗ ಬದಲಾಗಿದೆಯೇ?

ವಾಸ್ತವವಾಗಿ ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಸಂವಿಧಾನವು ಜನರಿಗೆ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಸರ್ಕಾರಗಳು ಕಾನೂನು ಬಾಹಿರವಾಗಿ ಬರಖಾಸ್ತು ಮಾಡಲಾಗದು. ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲೂ ಜನರ ಈ ಮೂಲಭೂತ ಹಕ್ಕುಗಳ ರಕ್ಷಣೆಯ ಕರ್ತವ್ಯವನ್ನು ಸುಪ್ರೀಂ ಕೋರ್ಟು ಪಕ್ಕಕ್ಕೆ ಸರಿಸಲಾಗದು ಎಂಬುದು ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯದಿಂದ ಈ ದೇಶ ಕಲಿತ ಪಾಠ.

ಆ ಪಾಠವು ಇಂದಿನ ಸಂದರ್ಭಕ್ಕೂ ಮಾರ್ಗದರ್ಶಿಯಾಗಬೇಕಿತ್ತು ಎಂಬುದನ್ನು  ಸುಪ್ರೀಂಕೋರ್ಟು ಈಗಲಾದರು ಒಪ್ಪಿಕೊಳ್ಳುತ್ತದೆಯೇ ?

ಏಕೆಂದರೆ ಮೊದಲ ಲಾಕ್ ಡೌನ್ ಘೋಷಣೆಯಾದ ಮೂರನೇ ದಿನ ಮಾರ್ಚ್ 27ರಂದು ಸಭೆಯೊಂದರಲ್ಲಿ ಮಾತನಾಡುತ್ತಾ ಈ ದೇಶದ ಮುಖ್ಯನ್ಯಾಯಮೂರ್ತಿ ಬೊಬ್ಡೆ ಯವರು, "ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳು ಪರಸ್ಪರ ಪೂರಕವಾಗಿ ಮತ್ತು ಸೌಹಾರ್ದತೆಯಿಂದ ಕೆಲಸ ಮಾಡಬೇಕು" ಎಂದು ಘೋಷಿಸಿದ್ದರು. ಮತ್ತು ಅವರು ಮಾತ್ರವಲ್ಲ, ಇಡಿ ಸುಪ್ರೀಂಕೋರ್ಟೇ ಹಾಗೆಯೇ ಕೆಲಸ ಮಾಡುತ್ತಾ ಬಂದಿದ್ದರಿಂದಲೇ ದೇಶ ಈ ಪರಿಸ್ಥಿತಿಯನ್ನು ಅನುಭವಿಸುತ್ತಿದೆ.

ಈಗ ಆ ತಿಳವಳಿಕೆ ತಪ್ಪೆಂದು ಸುಪ್ರೀಂಕೋರ್ಟು ಒಪ್ಪಿಕೊಳ್ಳುತ್ತದೆಯೇ? 

2) ಹಾಗಿದ್ದಲ್ಲಿ ಕೋವಿಡ್ ಸಂದರ್ಭವನ್ನು ಎದುರಿಸಲು ಸರ್ಕಾರವು ತೆಗೆದುಕೊಳ್ಳುವ ಲಾಕ್ ಡೌನ್ ತರಹದ ಯಾವುದೇ Policy Matterಗಳು ಈ ದೇಶದ ಜನತೆಗೆ ಸಂವಿಧಾನವು ಕೊಟ್ಟಿರುವ ಜೀವಿಸುವ ಹಾಗು ಘನತೆಯಿಂದ ಬದುಕುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಬಾರದು.

ಹಾಗೊಂದು ವೇಳೆ ಜನರ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದು ತನ್ನ ಗಮನಕ್ಕೆ ಬಂದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ಜನರ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯ ಸುಪ್ರೀಂ ಕೋರ್ಟಿಗಿತ್ತು ಎಂಬುದನ್ನು ಈಗಲಾದರೂ ಸುಪ್ರೀಂ ಕೋರ್ಟು ಒಪ್ಪಿಕೊಳ್ಳುವುದೇ?

3) ಸುಪ್ರೀಕೋರ್ಟ್ ತಿಳುವಳಿಕೆಯಲ್ಲಿ ಬದಲಾವಣೆ ಬಂದಿರುವುದೇ ನಿಜವಾಗಿದ್ದಲ್ಲಿ, ಈ ದೇಶದ ದಿನಗೂಲಿಗಳ ಹಾಗು ವಲಸೆ ಕಾರ್ಮಿಕರ ಬದುಕಿನ ಮೇಲೆ ಏನು ಪರಿಣಾಮವಾಗುತ್ತದೆ ಎಂಬ ಪರಿವೇ ಇಲ್ಲದೆ ಕೇವಲ ನಾಲ್ಕು ಗಂಟೆ ಅವಕಾಶ ಕೊಟ್ಟು ಲಾಕ್ ಡೌನ್ ಜಾರಿಗೆ ತಂದ ಸರ್ಕಾರದ ಕ್ರಮವು ಜನರ ಮೂಲಭೂತ ಹಕ್ಕುಗಳನ್ನು ಹರಣ ಮಾಡಿದ ಸಂವಿಧಾನ ವಿರೋಧಿ ಕ್ರಮವೆಂದು ಈಗಲಾದರೂ ಸುಪ್ರೀಂ ಕೋರ್ಟು ಪರಿಗಣಿಸುವುದೇ?

4) ಮೊದಲ ಲಾಕ್ ಡೌನ್ ವಿಧಿಸಿದಾಗ ದೇಶದಲ್ಲಿ ಕೋವಿಡ್ ಬಾಧಿತರ ಸಂಖ್ಯೆ 500. 

ಮೂರನೇ ಲಾಕ್ ಡೌನಿನ ನಂತರ  ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರೆಳಲು  ಸರ್ಕಾರ ಅವಕಾಶ ಕೊಟ್ಟಾಗ ಕೋವಿಡ್ ಬಾಧಿತರ ಸಂಖ್ಯೆ 37000 ವಾಗಿತ್ತು. 

ಲಾಕ್ ಡೌನ್  ಘೋಷಣೆಯಾದ ಕೂಡಲೇ ತಮ್ಮ ಬದುಕುವ ಹಕ್ಕನ್ನೇ ಕಳೆದುಕೊಂಡ ಲಕ್ಷಾಂತರ ವಲಸೆ ಕಾರ್ಮಿಕರು ಮಕ್ಕಳು ಮರಿಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ಬಿರುಬಿಸಿಲಿನಲ್ಲಿ ಸಾವಿರಾರು ಮೈಲಿ ನಡೆಯುತ್ತಾ ಹೊರಟರು. ಈ ಅವಧಿಯಲ್ಲಿ ಒಂದು ನಾಗರಿಕ ಸರ್ಕಾರ ಕೊಡಬಾರದಷ್ಟು ಯಾತನೆಯನ್ನು ವಲಸೆ ಕಾರ್ಮಿಕರಿಗೆ ಕೊಟ್ಟಿತು . 180ಕ್ಕೂ ಹೆಚ್ಚು ಜನ ದಾರಿಯಲ್ಲೇ ಹಸಿವಿನಿಂದ ಪ್ರಾಣ ಬಿಟ್ಟರು. ಲಾಕ್ ಡೌನ್ ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಪೊಲೀಸರು ಹೀನಾಯವಾಗಿ ನಡೆಸಿಕೊಂಡರು. ಸಸಿಗಿಡಗಳ ಮೇಲೆ ಸಿಂಪಡಿಸುವ ರಾಸಾಯನಿಕಗಳನ್ನು ಅವರ ಮೇಲೆ ಪ್ರಯೋಗಿಸಿದರು...

ಈ ಮಾನವ ಹಕ್ಕುಗಳ ಉಲ್ಲಂಘನೆ ಗಮನಕ್ಕೆ ಬಂದರೂ ಸುಪ್ರೀಂ ಕೋರ್ಟು ಕಣ್ಣು ಮುಚ್ಚಿಕೊಂಡು ಕೂತಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಉತ್ತರಿಸಲೇಬೇಕಾದ ಒಂದು ಸಾಂವಿಧಾನಿಕ ಪ್ರಶ್ನೆಯಿದೆ:

ಕೋವಿಡ್ ಬಾಧಿತರ ಸಂಖ್ಯೆ ಸಾವಿರಗಟ್ಟಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಅವಕಾಶ ಮಾಡಿಕೊಡಬಹುದಾಗಿದ್ದಲ್ಲಿ, ವಲಸೆ ಕಾರ್ಮಿಕರನ್ನು ಮನೆಗೆ ತೆರಳಲು ಅವಕಾಶ ಕೊಟ್ಟು ಲಾಕ್ ಡೌನ್ ಘೋಷಿಸಬಹುದಿತ್ತಲ್ಲವೇ?, ಇದು ಜನರ ಬದುಕುವ ಹಕ್ಕಿನ ಬಗ್ಗೆ ಸರ್ಕಾರದ ನಿಷ್ಕಾಳಜಿಯನ್ನು ತೋರುತ್ತದಲ್ಲವೇ?

ಲಾಕ್ ಡೌನ್ ಎಷ್ಟು ಅವಧಿಗೆ ಮಾಡಬೇಕು ಮತ್ತು ಯಾವಾಗ ಸಂಚಾರಕ್ಕೆ ಅವಕಾಶ ಕೊಡಬೇಕು ಎಂಬ ತೀರ್ಮಾನ  ಸರ್ಕಾರದ ಪರಮಾಧಿಕಾರವೇ ಆದರೂ ಸರ್ಕಾರದ ತೀರ್ಮಾನಗಳು ಜನರ ಬದುಕಿನ ಕಾಳಜಿ, ತರ್ಕ ಹಾಗು ವಿವೇಚನೆ ಮತ್ತು ಕಾನೂನು ರೀತ್ಯ ಸ್ಥಾಪಿಸಲಾದ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಅದನ್ನು ರದ್ದು ಮಾಡುವ ಅಥವಾ ಸರಿಯಾದ ರೀತಿಯಲ್ಲಿ ಬದಲಾಯಿಸಿ "ಸಂಪೂರ್ಣ ನ್ಯಾಯ " ಒದಗಿಸುವ ಸಾಂವಿಧಾನಿಕ  ಅಧಿಕಾರ  ಸೆಕ್ಷನ್  32, ಹಾಗೂ 142ರ  ಪ್ರಕಾರ ಸುಪ್ರೀಂ ಕೋರ್ಟಿಗಿದೆಯಲ್ಲವೇ?

ಆದ್ದರಿಂದ ಲಾಕ್ ಡೌನ್ ಜಾರಿಗೆ ತಂದ ರೀತಿಯಲ್ಲಿ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು   ಸುಪ್ರೀಂಕೋರ್ಟ್ ಈಗಲಾದರೂ ಪರಿಗಣಿಸುತ್ತದೆಯೇ?

6) ಮಾರ್ಚ್ 24ರಂದು ಮೊದಲ ಲಾಕ್ದೌನ್ ಘೋಷಣೆಯಾಯಿತು.

ಮಾರ್ಚ್ 25ಕ್ಕೆ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಕಾಲ್ನಡಿಗೆ ಪ್ರಯಾಣವನ್ನು ಪ್ರಾರಂಭಿಸಿದರು. ಮಾರ್ಚ್ 27ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಯಿತು. ಮಾರ್ಚ್ 31ರಂದು ಅದರ ವಿಚಾರಣೆಯಾದಾಗ ಕೇಂದ್ರ ಸರ್ಕಾರದ ವಕೀಲರು:

"ಎಲ್ಲಾ ವಲಸಿಗರನ್ನು ಹತ್ತಿರದ ಪ್ರದೇಶದಲ್ಲಿ ವಸತಿ ಊಟ ಕೊಟ್ಟು ಇರಿಸಲಾಗಿದೆ" ಎಂದೂ "ಯಾವೊಬ್ಬ ವಲಸಿಗನೂ ಬೀದಿಯ ಮೇಲಿಲ್ಲ"ವೆಂದು ಹೇಳಿಕೆ ನೀಡಿದರು. ಅಹವಾಲುದಾರರು ಅದು ನಿಜವಲ್ಲವೆಂದು ಹೇಳಿದರೂ ಕೋರ್ಟು ಯಾವ ತರ್ಕ ಅಥವಾ ಪುರಾವೆಯಿಲ್ಲದಿದ್ದರೂ ಸರ್ಕಾರದ ಮೌಖಿಕ ಹೇಳಿಕೆಯನ್ನೇ ಸಂಪೂರ್ಣವಾಗಿ ಅಂಗೀಕರಿಸಿತು.

ಏಪ್ರಿಲ್  7ರಂದು ಮತ್ತೊಂದು ಅರ್ಜಿಯನ್ನು ವಿಲೇವಾರಿ ಮಾಡುತ್ತಾ ಮುಖ್ಯ ನ್ಯಾಯಮೂರ್ತಿ ಬೋಬ್ದೆ ಯವರು "ವಲಸೆ ಕಾರ್ಮಿಕರಿಗೆ ಎರಡು ಹೊತ್ತು ಆಹಾರ ಸಿಗುತ್ತಿದೆ ಎಂದಾದ ಮೇಲೆ ಅವರಿಗೆ ಹೆಚ್ಚುವರಿಯಾಗಿ ಹಣ ಕೊಡಬೇಕಾದ ಅಗತ್ಯವೇನಿದೆ" ಎಂದು ಅಭಿಪ್ರಾಯಪಟ್ಟರು.

ಏಪ್ರಿಲ್ 21ರಂದು ಮತ್ತೊಂದು ಸಾರ್ವಜನಿಕ ಅರ್ಜಿಯಲ್ಲಿ ಹೇಗೆ ಈಗಲೂ ಬೀದಿಯ ಮೇಲೆ ಲಕ್ಷಾಂತರ ವಲಸಿಗರು ಇನ್ನು ನಡೆದು ಹೋಗುತ್ತಿದ್ದಾರೆಂದು ಹಾಗು ಶೆಲ್ಟರ್ ಗಳಲ್ಲಿರುವ ಕಾರ್ಮಿಕರಲ್ಲಿ ಶೇ. 90ಕ್ಕೂ ಹೆಚ್ಚು ಜನರಿಗೆ ಆಹಾರವು ಸಿಕ್ಕಿಲ್ಲವೆಂಬ ಸ್ವತಂತ್ರ ಅಧ್ಯಯನಗಳ ವರದಿಯನ್ನು ಕೋರ್ಟಿನ ಮುಂದಿಡಲಾಯಿತು. ಆದರೆ  ಕೋರ್ಟು ಖಾಸಗಿ ಅಧ್ಯಯನಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲವೆಂದು ಹೇಳಿತು.

ಮೇ 8ರಂದು ಔರಂಗಾಬಾದಿನಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ಟ್ರೇನು ಹರಿದು ಕೊಂದುಹಾಕಿತು. ಇದು ವಲಸೆ ಕಾರ್ಮಿಕರು ಮೊದಲ ಲಾಕ್ ಡೌನ್ ಘೋಷಿತವಾಗಿ ಒಂದೂವರೆ ತಿಂಗಳು ಕಳೆದ ಮೇಲೂ ಬೀದಿಯ ಮೇಲೆ ನಡೆದೇ ಹೋಗುತ್ತಿರುವುದಕ್ಕೆ ಮತ್ತು ಅನಾಥ ಹೆಣಗಳಾಗಿ  ಪ್ರಾಣ ಬಿಡುತ್ತಿರುವುದಕ್ಕೆ ಪುರಾವೆಯಾಗಿತ್ತು ಮತ್ತು "ಯಾವೊಬ್ಬ ವಲಸೆ ಕಾರ್ಮಿಕನು ಬೀದಿಯ ಮೇಲಿಲ್ಲ" ಎಂಬ ಸರ್ಕಾರದ ಹೇಳಿಕೆಯು ಸುಳ್ಳೆಂಬುದನ್ನೂ ಸಾಬೀತು ಮಾಡಿತ್ತು.

ಆದರೆ ಆಗಲೂ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ "ನಡೆದುಹೋಗುತ್ತಿರುವ ಕಾರ್ಮಿಕರನ್ನು ತಡೆಯಲು ನಾವು ಏನು  ಮಾಡಲಾಗುವುದಿಲ್ಲ" ಎಂಬ ಸರ್ಕಾರದ ಹೇಳಿಕೆಯನ್ನು ಒಪ್ಪಿಕೊಂಡಿತೇ ಹೊರತು ಸರ್ಕಾರದ ಸುಳ್ಳನ್ನು ಪ್ರಶ್ನಿಸುವ  ಗೋಜಿಗೆ ಹೋಗಲಿಲ್ಲ.

ಮೇ 1ರಿಂದ ವಲಸೆ ಕಾರ್ಮಿಕರಿಗೆಂದು ಶ್ರಮಿಕ ಎಕ್ಸ್ ಪ್ರೆಸ್ ಟ್ರೈನುಗಳನ್ನು ಬಿಡಲಾಯಿತು. ತಿಂಗಳಾನುಗಟ್ಟಲೆ ಕೆಲಸವಿಲ್ಲದೇ ಕಂಗೆಟ್ಟಿರುವ ವಲಸೆ ಕಾರ್ಮಿಕರಿಂದ ಪ್ರಯಾಣ ದರ ವಸೂಲಿ ಮಾಡಬಾರದೆಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಯಿತು.

ಆದರೆ ಸುಪ್ರೀಂ ಕೋರ್ಟು ಇಂಥಾ ವಿಷಯಗಳ ಬಗ್ಗೆ ಕೋರ್ಟು ಏನು ಮಾಡಲಾಗುವುದಿಲ್ಲ, ಅದು ರೈಲ್ವೆ ಇಲಾಖೆ ಹಾಗು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ ಎಂದು ಅರ್ಜಿಯನ್ನು ತಳ್ಳಿಹಾಕಿತು. ಆ ಮೂಲಕ ಕೇಂದ್ರ  ಸರ್ಕಾರ ಹಾಗು ರೈಲ್ವೆ ಇಲಾಖೆ ಮಾಡುತ್ತಿದ್ದ ಮಾನವ ಹಕ್ಕುಗಳ ಹಾಗು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಗಣನೆಗೆ ತೆಗೆದುಕೊಳ್ಳುವುದನ್ನು ನಿರಾಕರಿಸಿತು.

ಹೀಗೆ ಮಾರ್ಚ್ 27 ರಿಂದ ಮೇ 22ರವರೆಗೆ ವಲಸೆಕಾರ್ಮಿಕರ ಮೂಲಭೂತ ಹಕ್ಕುಗಳಿಗೆ ಸಂಬಂಧಪಟ್ಟಂತೆ ಪಟ್ಟಂತೆ ಕನಿಷ್ಠ 10 ಸಾರ್ವಜನಿಕ ಅರ್ಜಿಗಳನ್ನು ದಾಖಲಿಸಲಾಗಿತ್ತು. ಆದರೆ ಈ ಹತ್ತೂ ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟು ಸ್ವತಂತ್ರ ನಿಲುವನ್ನು ತೆಗೆದುಕೊಳ್ಳುವ ಬದಲು ಸರ್ಕಾರ ಕೊಟ್ಟ ಹೇಳಿಕೆಯನ್ನೇ ಸತ್ಯ ಎಂದು ಪರಿಗಣಿಸಿ ವಲಸೆ ಕಾರ್ಮಿಕರ ಹಕ್ಕುಗಳನ್ನು ವಜಾ ಮಾಡಿತು.

ಈಗ ಸುಪ್ರೀಂಕೋರ್ಟ್ ನ ವಲಸೆ ಕಾರ್ಮಿಕರಿಗೆ ಉಚಿತ ಆಹಾರ, ವಸತಿ ಮತ್ತು ಪ್ರಯಾಣಕ್ಕೆ ಅವಕಾಶ ಕೊಡಲು ಆದೇಶವನ್ನೇನೋ ನೀಡಿದೆ. ಆದರೆ ವಲಸೆ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ನ್ಯಾಯಪೀಠದಲ್ಲಿ ಸುಳ್ಳನ್ನೇ ಹೇಳುತ್ತಾ ಬಂದ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಮಾತನ್ನು ಹೇಳಿಲ್ಲ. ಆದ್ದರಿಂದ ಈಗಲಾದರೂ ಸುಪ್ರೀಂಕೋರ್ಟು ಸರ್ಕಾರದ ಈ ಅಪರಾಧದ  ಬಗ್ಗೆ ಒಂದು ವಾಗ್ದಂಡನೆಯನ್ನಾದರೂ ವಿಧಿಸುವುದೇ?, ಹಾಗು  ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಗ ಅದು ಹೇಳುವುದನ್ನೇ ಸತ್ಯವೆಂದು ಭಾವಿಸದೆ ಸ್ವತಂತ್ರವಾಗಿ ಸತ್ಯವನ್ನು ತಿಳಿದುಕೊಳ್ಳುವ ಸಾಂಸ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವ ಭರವಸೆ ನೀಡುವುದೇ?

 6)  ಇಷ್ಟು ಮಾತ್ರವಲ್ಲ. ಈ ಪ್ರಕ್ರಿಯೆಯಲ್ಲಿ ನ್ಯಾಯಪೀಠದಲ್ಲಿ ಕುಳಿತುಕೊಂಡು ನ್ಯಾಯಾಧೀಶರು ಅಧಿಕೃತವಾಗಿ  ಕೆಲವು Observations  ಮಾಡಿದ್ದಾರೆ:

"ಕಾರ್ಮಿಕರಿಗೆ ಆಹಾರ ಕೊಟ್ಟ ಮೇಲೆ ಹಣಕಾಸು ಸಹಾಯವೇಕೆ?"

" ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾರೆ  ನ್ಯಾಯಾಲಯ ಏನು ಮಾಡಲು ಸಾಧ್ಯ?"

"ಪ್ರಯಾಣ ದರ ನಿಗದಿ ಕೋರ್ಟಿಗೆ ಸಂಬಂಧಪಟ್ಟ ವಿಷಯವಲ್ಲ"...ಇತ್ಯಾದಿ .

ಈ ನಿಲುವುಗಳ ಹಿಂದಿರುವ ತಿಳವಳಿಕೆಯನ್ನು ಕೋರ್ಟು ಮರುಪರಿಶೀಲನೆ ಮಾಡುವುದೇ?

7)  ಮತ್ತೊಂದು ಪ್ರಮುಖ ಪ್ರಶ್ನೆಗೆ ಸುಪ್ರೀಂ ಉತ್ತರ ಕೊಡಲೇ ಬೇಕು:

ನಡೆದು ಹೋಗುತ್ತಿರುವ ವಲಸೆ ಕಾರ್ಮಿಕರ ಬಗೆ ನಾವೇನು ಮಾಡಲಾಗುವುದಿಲ್ಲ ಎಂದು ಆದೇಶ ನೀಡಿದ ತ್ರಿಸದಸ್ಯ  ನ್ಯಾಯಪೀಠದ ಮುಂದೆ ಅದೇ ದಿನ (ನ್ಯಾ. ಅಶೋಕ್ ಭೂಷಣ್  ಹಾಗು ಇತರರು , ಮೇ 15 ) ಸಣ್ಣ ಹಾಗು ಮಧ್ಯಮ ಉದ್ಯಮಗಳ ಮಾಲೀಕರು ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ ಕೊಡಬೇಕೆಂಬ ಸರ್ಕಾರದ ಆದೇಶವನ್ನು ರದ್ದು ಮಾಡಬೇಕೆಂದು ಅಹವಾಲು ಸಲ್ಲಿಸಿದ್ದರು. ವಲಸೆ ಕಾರ್ಮಿಕರ ಬಗ್ಗೆ ನಾವೇನು ಮಾಡಲು ಸಾಧ್ಯವಿಲ್ಲವೆಂದ ಅದೇ ಪೀಠ ಸಣ್ಣ ಮತ್ತು ಉದ್ದಿಮೆದಾರರ ಅಹವಾಲು ತುಂಬಾ ಗಂಭೀರವಾದದ್ದು, ಆದ್ದರಿಂದ ತುರ್ತಾಗಿ ಪರಿಗಣಿಸಿ ಎಂದು ಸರ್ಕಾರಕ್ಕೆ ಆದೇಶ ನೀಡಿತು!

ಅದೇ ರೀತಿ, ವಲಸೆ ಕಾರ್ಮಿಕರ ರೈಲು ಪ್ರಯಾಣ ಶುಲ್ಕವನ್ನು ಯಾರು ಭರಿಸಬೇಕೆಂಬುದು ಸರ್ಕಾರಕ್ಕೆ ಸಂಬಂಧಪಟ್ಟ   ವಿಷಯವೆಂದು ಕಾರ್ಮಿಕರ ಅರ್ಜಿಯನ್ನು ವಜಾ ಮಾಡಿದ ಪೀಠವೇ  ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ವಿಮಾನದಲ್ಲಿ  ಕರೆತರುವ ಬಗ್ಗೆ ಮಧ್ಯದ ಸೀಟುಗಳನ್ನು ಬಳಸಿಕೊಳ್ಳಬೇಕೋ ಬೇಡವೋ ಎಂಬ  ಸಣ್ಣ ಪುಟ್ಟ  ವಿಷಯಗಳನ್ನು ಅತ್ಯಂತ ಜತನದಿಂದ ಪರಿಗಣಿಸಿ ಕೂಡಲೇ ಅನಿವಾಸಿ ಭಾರತೀಯರನ್ನು ಕರೆತನ್ನಿ ಎಂದು ಆದೇಶಿಸಿತು..

ವಲಸೆ ಕಾರ್ಮಿಕರು ಹಾಗು ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೇಲ್ವರ್ಗದ  ಭಾರತೀಯರು ಇಬ್ಬರು ಸಮಾನ ನಾಗರಿಕರೇ ಆಗಿದ್ದಲ್ಲಿ, ಕಾರ್ಮಿಕರು ಹಾಗು ಉದ್ದಿಮೆದಾರರು ಇಬ್ಬರು ಸಮಾನ ನಾಗರೀಕರೇ ಆಗಿದ್ದಲ್ಲಿ ಎರಡು ತದ್ವಿರುದ್ಧ ತೀರ್ಮಾನಗಳನ್ನು ಸುಪ್ರೀಂ ಕೋರ್ಟು ಹೇಗೆ ಕೊಡಲು ಸಾಧ್ಯವಾಯಿತು?, ಈ ಬಗೆಯ ವರ್ಗ ತಾರತಮ್ಯದ  ಹಿಂದಿನ ಸಾಂವಿಧಾನಿಕ ತಿಳವಳಿಕೆ ಏನು?.

ನಿಜ... ಸುಪ್ರೀಂಕೋರ್ಟ್ ನಿನ್ನೆ ವಲಸೆ ಕಾರ್ಮಿಕರಿಗೆ ಕೊಟ್ಟಿರುವ ಅಲ್ಪಸ್ವಲ್ಪ ಪರಿಹಾರವನ್ನು ಸ್ವಾಗತಿಸಬೇಕು. ಆದರೆ ಅದೇ ಸಮಯದಲ್ಲಿ  ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿದ ಬೇಜವಾಬ್ದಾರಿ, ಸಂವಿಧಾನ ಬಾಹಿರ ಹಾಗು ವರ್ಗ ತಾರತಮ್ಯದ ಆದೇಶಗಳನ್ನು ಅದರ ಹಿಂದಿನ ತಿಳವಳಿಕೆಗಳನ್ನು ಸಹ ಪ್ರಶ್ನಿಸಲೇ ಬೇಕು ಹಾಗು ಬದಲಾಗುವಂತೆ ಆಗ್ರಹಿಸಬೇಕು.. ಆಗ ಮಾತ್ರ ನಿಜವಾದ ಪರಿಹಾರ ಸಿಕ್ಕಂತಾಗುತ್ತದೆ ..

 ಅಲ್ಲವೇ?

- ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News