‘ಸೆಕ್ಯುಲರಿಸಂ’ನ ಹಿನ್ನಡೆಗೆ ‘ಧರ್ಮ ನಿರಪೇಕ್ಷತೆ’ ಕಾರಣವೇ?
ಪ್ರಜಾತಂತ್ರದಂತೆ ಸೆಕ್ಯುಲರಿಸಂ ಕೂಡಾ ಜಗತ್ತಿನ ದಮನಿತ ಜನರು ಸಮಗ್ರ ಸ್ವಾತಂತ್ರ್ಯದೆಡೆಗೆ ಮಾಡುತ್ತಿರುವ ಮಹಾಪ್ರಸ್ಥಾನದಲ್ಲಿ ಒಂದು ಮೈಲಿಗಲ್ಲೇ ಆಗಿದೆ. ಅದು ಕೇವಲ ಪಶ್ಚಿಮದ ಹೆಗ್ಗಳಿಕೆಯಲ್ಲ. ಸೆಕ್ಯುಲರಿಸಂ ಎಂಬ ಆಧುನಿಕ ಸ್ವರೂಪವು ಹೊರಗಿನದ್ದಾಗಿದ್ದರೂ ಸೆಕ್ಯುಲರ್ ಸಾರದಲ್ಲಿರುವ ಪ್ರಜಾತಾಂತ್ರಿಕ ಆಶಯವು ಮಾತ್ರ ಜಗತ್ತಿನ ಎಲ್ಲಾ ದಮನಿತ ಜನರದ್ದೂ ಆಗಿದೆ.
ಅಯೋಧ್ಯೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಕಟ್ಟುತ್ತಿರುವ ರಾಮಮಂದಿರದ ಕೆಳಗೆ, ಬಾಬರಿ ಮಸೀದಿಯ ಅವಶೇಷಗಳ ಜೊತೆಗೆ ಆಗಸ್ಟ್ 5 ರಂದು ಈ ದೇಶದ ಪ್ರಜಾಸತ್ತೆ ಮತ್ತು ಸೌಹಾರ್ದ ಪರಂಪರೆಯ ಅವಶೇಷಗಳನ್ನೂ ಕೂಡಾ ಹೂಳಲಾಯಿತು. ಇಂದು ಅಲ್ಲಿ ರಾಮಮಂದಿರವನು ್ನಕಟ್ಟುತ್ತಿರುವುದು ಭಕ್ತಿಯ ಇಟ್ಟಿಗೆಗಳಿಂದಲ್ಲ. ಬದಲಿಗೆ ದ್ವೇಷದ ಇಟ್ಟಿಗೆಗಳಿಂದ. ಹೀಗಾಗಿ ಆ ರಾಮಮಂದಿರವು ಈ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷರಾಜಕಾರಣದ ಶಾಶ್ವತ ಸ್ಮಾರಕವಾಗಿಯೂ ಉಳಿಯಲಿದೆ. ಹಾಗಿದ್ದಲ್ಲಿ, ಸ್ವಾತಂತ್ರ್ಯ ಬಂದಮೇಲೆ ‘‘ಈ ದೇಶವನ್ನು ಸ್ವತಂತ್ರ ಸಾರ್ವಭೌಮಿ, ಸೆಕ್ಯುಲರ್ ಮತ್ತು ಸಮಾಜವಾದಿ ದೇಶ’’ವನ್ನಾಗಿಕಟ್ಟಲು ಈ ದೇಶದ ಜನ ತೊಟ್ಟ ಸಂಕಲ್ಪವೇನಾಯಿತು? ಈ ದೇಶದ ಪ್ರಜಾತಂತ್ರವನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಗಳಾದ ಸರಕಾರ ಹಾಗೂ ಸುಪ್ರೀಂಕೋರ್ಟುಗಳೂ ಸಹ ಪ್ರಜಾತಂತ್ರದ ನಾಶಕ್ಕೆ ಪುರೋಹಿತರಾದದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಈಗ ತೀವ್ರವಾದ ಜಿಜ್ಞಾಸೆಗಳು ನಡೆಯುತ್ತಿವೆ. ಇವುಗಳಲ್ಲಿ ಕೆಲವು ಚರ್ಚೆಗಳು ಈ ವೈಫಲ್ಯವನ್ನು ‘ಸೆಕ್ಯುಲರಿಸಂ’ನ ವೈಫಲ್ಯವೆಂದು ಬಣ್ಣಿಸುತ್ತವೆ.
ಪರದೇಶಿ ಸೆಕ್ಯುಲರಿಸಂ?:
ಸ್ವತಂತ್ರ ಭಾರತವು ಅಪ್ಪಿಕೊಂಡ ಸೆಕ್ಯುಲರಿಸಂ ಎಂಬ ‘ಧರ್ಮ ನಿರಪೇಕ್ಷತೆ’ಯು, ಪಾಶ್ಚಿಮಾತ್ಯ ಮೂಲದ್ದಾಗಿದೆ. ಅದಕ್ಕೆ ಈ ದೇಶದ ಸಹನಶೀಲ ಧಾರ್ಮಿಕ ಪರಂಪರೆಯನ್ನು ನಿರಾಕರಿಸುವ ಒಂದು ವಸಾಹತುಶಾಹಿ ದುರಹಂಕಾರವೂ ಇದೆ. ಆದ್ದರಿಂದ ಈ ಬಗೆಯ ಸೆಕ್ಯುಲರಿಸಂ ನಮ್ಮ ದೇಶದಲ್ಲಿ ಬೇರುಬಿಡಲಿಲ್ಲ ಎಂದು ಕೆಲವರು ವಿಶ್ಲೇಷಿಸುತ್ತಾರೆ. ಈ ಪಾಶ್ಚಿಮಾತ್ಯ ಸೆಕ್ಯುಲರಿಸಂನ ವಾರಸುದಾರರು ಇಂಗ್ಲಿಷ್ ಭಾಷೆಯಲ್ಲಿ ಈ ನೆಲದ ಇತಿಹಾಸವನ್ನು ತಿರಸ್ಕರಿಸುವ ರೀತಿಯಲ್ಲಿ ಉಪದೇಶಾತ್ಮಕವಾಗಿ ನಡೆದುಕೊಂಡಿದ್ದೂ, ರಾಜಕೀಯ ಮಟ್ಟದಲ್ಲಿ ಅದು ಅಲ್ಪಸಂಖ್ಯಾತರ ತುಷ್ಟೀಕರಣದ ಅವಕಾಶವಾದಿ ರಾಜಕಾರಣವಾಗಿ ಬದಲಾದದ್ದೂ ಸಹ ಸೆಕ್ಯುಲರಿಸಂ ವಿರುದ್ಧ ಧರ್ಮಿಷ್ಟ ಬಹುಸಂಖ್ಯಾತರು ಗುಪ್ತ ಬಂಡಾಯ ಏಳುವಂತಾಯಿತು ಎಂಬ ವಿವರಣೆಯನ್ನು ಸಹ ನೀಡಲಾಗುತ್ತಿದೆ. ಹೀಗಾಗಿ ಈ ದೇಶದಲ್ಲಿ ಧಾರ್ಮಿಕ ಸೌಹಾರ್ದ ಹಾಗೂ ಸಹಿಷ್ಣು ಸಮಾಜ ಉಳಿದುಕೊಳ್ಳಬೇಕೆಂದರೆ ‘ಧರ್ಮ ನಿರಪೇಕ್ಷತೆ’ ಎಂಬ ಧರ್ಮ ನಿರಾಕರಣಾ ಪರಿಕಲ್ಪನೆಯನ್ನು ಕೈಬಿಡಬೇಕಿದೆ. ಧರ್ಮದ ಭಾಷೆಯಲ್ಲಿ ಮಾತನಾಡುವ ಹಾಗೂ ‘ಸಹಿಷ್ಣು ಧಾರ್ಮಿಕತೆ’ಯನ್ನು ಒಳಗೊಳ್ಳುವ ಹೊಸ ಬಗೆಯ ‘ಸೆಕ್ಯುಲರಿಸಂ’ನ ಮೂಲಕ ಮಾತ್ರ ನಾವು ಇಂದು ಎದುರಿಸುತ್ತಿರುವ ಫ್ಯಾಶಿಸ್ಟ್ ಅಪಾಯದಿಂದ ಪಾರಾಗಬಹುದೆಂಬ ಒಂದು ಮೋಹಕ ರಾಜಕೀಯ ಪರಿಹಾರವು ಕೂಡಾ ಒಂದು ವರ್ಗದಲ್ಲಿ ಜನಪ್ರಿಯವಾಗುತ್ತಿದೆ.
ಈ ಗ್ರಹಿಕೆಯಲ್ಲಿ ಕೆಲವು ಸತ್ಯಗಳಿವೆ. ಇದಕ್ಕಿಂತ ಹೆಚ್ಚಾಗಿ ಈ ಗ್ರಹಿಕೆಯಲ್ಲಿರುವ ಪರವಶ ಮೋಹಕತೆಗಳು ಇಂದು ನಾವು ಎದುರಿಸುತ್ತಿರುವ ಅಪಾಯದ ಪ್ರಮುಖ ಹಾಗೂ ಮೂಲಭೂತ ಮಗ್ಗಲುಗಳನ್ನು ಮರೆಸಿಬಿಡುವ ಅಪಾಯವೂ ಇದೆಯೆಂದು ನನಗನ್ನಿಸುತ್ತದೆ.
ಸೆಕ್ಯುಲರಿಸಂ: ದಮನಿತ ಜನರ ಜಾಗತಿಕ ಗಳಿಕೆ
‘ಸೆಕ್ಯುಲರಿಸಂ’ ಎಂಬ ಪರಿಕಲ್ಪನೆಯು ಐತಿಹಾಸಿಕವಾಗಿ ಪ್ರಜಾತಂತ್ರದ ಅಂದರೆ ಜನರ ಸ್ವಾತಂತ್ರ್ಯಗಳನ್ನು ಹೆಚ್ಚಿಸುವ ಚಾರಿತ್ರಿಕ ಮುನ್ನಡೆಯ ಭಾಗವಾಗಿ ವಿಕಸಿತವಾದ ಪರಿಕಲ್ಪನೆ. ಅದರ ಆಧುನಿಕ ಶಾಸ್ತ್ರೀಯ ರೂಪ ಫ್ರೆಂಚ್ ಕ್ರಾಂತಿಯ ಮೂಸೆಯಲ್ಲಿ ಮೈದಳೆದರೂ ಅದರ ಹಿಂದೆ ಇಡೀ ಜಗತ್ತಿನ ಮನುಕುಲದ ಸ್ವಾತಂತ್ರ್ಯದ ನಡಿಗೆಗಳ ಹೆಜ್ಜೆಗುರುತುಗಳಿವೆ.
ಊಳಿಗಮಾನ್ಯ ಸಮಾಜಗಳಲ್ಲಿ ರಾಜಾಧಿಕಾರ, ಧರ್ಮಾಧಿಕಾರಗಳು ಒಂದೇ ಸಾಂಸ್ಥಿಕಾಧಿಕಾರವಾಗಿ ಜನರನ್ನು ದಮನ ಮಾಡುತ್ತಿದ್ದಾಗ ರಾಜಾಧಿಕಾರ ಮತ್ತು ಧರ್ಮಾಧಿಕಾರಗಳನ್ನು ಬೇರ್ಪಡಿಸಿ ರಾಜಾಧಿಕಾರವನ್ನು ಜನರ ನಿಯಂತ್ರಣಕ್ಕೆ ಒಳಪಡಿಸುವ ಪ್ರಜಾತಂತ್ರದ ಆಶಯಗಳು ಸೆಕ್ಯುಲರಿಸಂನ ಶಾಸ್ತ್ರೀಯ ಬೇರುಗಳು. ಪಶ್ಚಿಮದಲ್ಲಿ ಒಂದು ರೀತಿ ಅಭಿವ್ಯಕ್ತಗೊಂಡರೆ ಭಾರತದಂತಹ ದೇಶಗಳಲ್ಲಿ ಸ್ಥಾಪಿತ ರಾಜ್ಯಾಧಿಕಾರ ಹಾಗೂ ಸಾಂಸ್ಥಿಕ ಮತಾಧಿಕಾರದ ಕೇಂದ್ರಗಳ ವಿರುದ್ಧ ಧಾರ್ಮಿಕ ಬಂಡಾಯಗಳ ಸ್ವರೂಪದಲ್ಲೂ ಕೂಡಾ ಅಭಿವ್ಯಕ್ತಗೊಂಡಿವೆ. ಹಾಗೆ ನೋಡಿದರೆ ಭಾರತದ ಬೌದ್ಧ, ಜೈನ, ಬಸವ, ಸಿಖ್ ಅನ್ನು ಒಳಗೊಂಡಂತೆ ಶ್ರಮಣ ಪರಂಪರೆಯ ಎಲ್ಲಾ ಧಾರೆಗಳೂ ಸಾರದಲ್ಲಿ ಸಾಂಸ್ಥಿಕ ಅಧಿಕಾರದ ವಿರುದ್ಧದ ಭ್ರೂಣ ಬಂಡಾಯಗಳೇ ಆಗಿವೆ.
ಹೀಗಾಗಿ ಪ್ರಜಾತಂತ್ರದಂತೆ ಸೆಕ್ಯುಲರಿಸಂ ಕೂಡಾ ಜಗತ್ತಿನ ದಮನಿತ ಜನರು ಸಮಗ್ರ ಸ್ವಾತಂತ್ರ್ಯದೆಡೆಗೆ ಮಾಡುತ್ತಿರುವ ಮಹಾಪ್ರಸ್ಥಾನದಲ್ಲಿ ಒಂದು ಮೈಲಿಗಲ್ಲೇ ಆಗಿದೆ. ಅದು ಕೇವಲ ಪಶ್ಚಿಮದ ಹೆಗ್ಗಳಿಕೆಯಲ್ಲ. ಸೆಕ್ಯುಲರಿಸಂ ಎಂಬ ಆಧುನಿಕ ಸ್ವರೂಪವು ಹೊರಗಿನದ್ದಾಗಿದ್ದರೂ ಸೆಕ್ಯುಲರ್ ಸಾರದಲ್ಲಿರುವ ಪ್ರಜಾತಾಂತ್ರಿಕ ಆಶಯವು ಮಾತ್ರ ಜಗತ್ತಿನ ಎಲ್ಲಾ ದಮನಿತ ಜನರದ್ದೂ ಆಗಿದೆ.
ಆದ್ದರಿಂದ ಸೆಕ್ಯುಲರಿಸಂನ ದೇಶೀಯ ರೂಪಗಳ ಬಗ್ಗೆ ಪ್ರಗತಿಪರರಲ್ಲಿ ಭಿನ್ನತೆಗಳಿರಬಹುದು. ಆದರೆ ಅದರ ಸಾರಾರ್ಥದಲ್ಲಿ ಇರಬಾರದು. ಆಧ್ಯಾತ್ಮಿಕದ ಹೆಸರಿನಲ್ಲಿ ಐಹಿಕವನ್ನು ನಿಯಂತ್ರಿಸುವ ಧರ್ಮಾಧಿಕಾರಕ್ಕೆ ಕಡಿವಾಣ ಹಾಕುವ ಸೆಕ್ಯುಲರಿಸಂನ ಸಾರವನ್ನು ಬಲಪಂಥೀಯರನ್ನು ಬಿಟ್ಟು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಭಾರತದ ಸಾಂಸ್ಥಿಕ ಮತೀಯ ಹಾಗೂ ಮಠೀಯ ಸಂಸ್ಥೆಗಳೂ ಧಾರ್ಮಿಕ ಮುಸುಕಿನ ಲೌಕಿಕ ಶಕ್ತಿಕೇಂದ್ರಗಳೇ ಆಗಿವೆ. ಸೆಕ್ಯುಲರಿಸಂ ಅವುಗಳ ಅಧಿಕಾರವನ್ನು ಪ್ರಶ್ನಿಸುತ್ತದೆ. ಪ್ರಶ್ನಿಸಬೇಕು. ಆದ್ದರಿಂದಲೇ ಸಂಘಪರಿವಾರ ಸೆಕ್ಯುಲರಿಸಂ ಮತ್ತು ಸಮಾಜವಾದವನ್ನು ದೇಶದ ಸಂವಿಧಾನದ ಮುನ್ನುಡಿಯಿಂದಲೇ ತೆಗೆದುಹಾಕಬೇಕೆಂದು ಆಗ್ರಹಿಸುತ್ತದೆ. ಅದಕ್ಕೂ ಅವರು ಮುಂದಿಡುತ್ತಿರುವ ವಾದ ಸೆಕ್ಯುಲರಿಸಂ ಮತ್ತು ಸಮಾಜವಾದ ಪರದೇಶಿ ಪರಿಕಲ್ಪನೆಗಳು ಎಂಬುದೇ ಆಗಿದೆ. ಸೆಕ್ಯುಲರಿಸಂನ ವೈಫಲ್ಯವಾದದಲ್ಲಿ ಎದ್ದುಕಾಣುವ ಮತ್ತೊಂದು ಗಟ್ಟಿಯಾದ ಅಭಿಪ್ರಾಯ ಸೆಕ್ಯುಲರಿಸಂ ಎಂದರೆ ದೈವ-ಮತಧರ್ಮ ನಿರಾಕರಣೆ ಎಂಬುದು.
ಸೆಕ್ಯುಲರಿಸಂ ಎಂದರೆ ಧರ್ಮ ನಿರಾಕರಣೆಯೇ?
ಆದರೆ ಸೆಕ್ಯುಲರಿಸಂನ ಶಾಸ್ತ್ರೀಯ ಅರ್ಥದಲ್ಲಿ ಪ್ರಭುತ್ವವು ಯಾವುದೇ ಮತಧರ್ಮವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಷ್ಟೇ ಆಗಿದೆ. ಅಂದರೆ ಸೆಕ್ಯುಲರಿಸಂ ಮತಧರ್ಮವನ್ನು ಸಾರ್ವಜನಿಕದಿಂದ ಖಾಸಗಿಗೆ ತಳ್ಳುತ್ತದೆಯೇ ವಿನಾ ನಾಶಮಾಡುವುದಿಲ್ಲ.
ಆದರೆ ಭಾರತದಲ್ಲಿ ಆ ಅರ್ಥದಲ್ಲೂ ಸೆಕ್ಯುಲರಿಸಂ ಆಚರಣೆಗೆ ಬರಲೇ ಇಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಅದು ಸರ್ವಧರ್ಮ ಸಮಭಾವ ಎಂಬರ್ಥದಲ್ಲಿ ಬಳಕೆಗೆ ಬಂತೇ ವಿನಾ ದೈವ ನಿರಾಕರಣೆಯ ಅರ್ಥದಲ್ಲಿ ಅಲ್ಲವೇ ಅಲ್ಲ. ವಾಸ್ತವದಲ್ಲಿ, ವೈಜಾನಿಕ ಮನೋಭಾವ ಬೆಳೆಸಿಕೊಳ್ಳುವುದು ಕೂಡಾ ಮೂಲಭೂತ ಕರ್ತವ್ಯಗಳಾಗಿ ಸೇರಿದ್ದು 1976ರಲ್ಲಿ. ಅದು ಈಗ ಯಾರಿಗೂ ಗೊತ್ತೇ ಇಲ್ಲ ಎಂಬುದು ಮತ್ತೊಂದು ವಿಷಯ.
ಆದರೆ ಭಾರತದ ಈ ಸರ್ವಧರ್ಮ ಸಮಭಾವದ ಸೆಕ್ಯುಲರಿಸಂ ಕೂಡಾ ಆಚರಣೆಯಲ್ಲಿ ಏಕಕಾಲದಲ್ಲಿ ಬಹುಸಂಖ್ಯಾತ ಕೋಮುವಾದಕ್ಕೂ, ಅಲ್ಪಸಂಖ್ಯಾತ ಓಟ್ ಬ್ಯಾಂಕ್ ರಾಜಕಾರಣಕ್ಕೂ ಅವಕಾಶ ಮಾಡಿಕೊಟ್ಟಿತೇ ವಿನಾ ಸರ್ವಧರ್ಮವನ್ನು ಸಮವಾಗಿ ಭಾವಿಸುವ ಆರೋಗ್ಯಕರ ರಾಜಕಾರಣವನ್ನೂ ಬೆಳೆಸಲಿಲ್ಲ. ಹೀಗೆ ಭಾರತದಲ್ಲಿ ಸೆಕ್ಯುಲರಿಸಂ ಅನ್ನು ಮತಪಂಥ ನಿರಾಕರಣದ ಅರ್ಥದಲ್ಲಿ ಗ್ರಹಿಸಿರಲೂ ಇಲ್ಲ. ಸರ್ವಧರ್ಮ ಸಮಭಾವದ ಅರ್ಥದಲ್ಲಿ ಆಚರಣೆಯಲ್ಲೂ ಬರಲಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್‌ನ ಈ ಸರ್ವಧರ್ಮ ಸಮಭಾವದ ನೀತಿಗಳು ಆರೆಸ್ಸೆಸ್‌ನ ಕೋಮುವಾದಿ ರಾಜಕಾರಣವನ್ನು ನಿಗ್ರಹಿಸುವ ಉದ್ದೇಶವನ್ನೇ ಹೊಂದಿರಲಿಲ್ಲ. ಹೀಗಾಗಿ ಭಾರತದ ಸೆಕ್ಯುಲರಿಸಂನ ವೈಫಲ್ಯಕ್ಕೆ ಸೆಕ್ಯುಲರಿಸಂನ ಧರ್ಮ ನಿರಾಕರಣೆ ಕಾರಣ ಎಂಬುದರಲ್ಲಿ ಹೆಚ್ಚು ಹುರುಳಿದೆ ಎಂದು ಅನಿಸುವುದೇ ಇಲ್ಲ.
ಅದೇನೇ ಇದ್ದರೂ, ಭಾರತದಲ್ಲಿ ಬಹುಸಂಖ್ಯಾತ ಕೋಮುವಾದಿ ಅಥವಾ ಬ್ರಾಹ್ಮಣೀಯ ಫ್ಯಾಶಿಸ್ಟ್ ರಾಜಕಾರಣ ಸೆಕ್ಯುಲರಿಸಂ ಮೇಲೆ ಸ್ಪಷ್ಟ ಗೆಲುವು ಸಾಧಿಸಿದೆ ಹಾಗೂ ಒಂದು ಸಹಿಷ್ಣು ಹಾಗೂ ಸೌಹಾರ್ದ ಪರಂಪರೆಯಿದ್ದ ಸಮಾಜದಲ್ಲಿ ದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆ ವಿಜೃಂಭಿಸುತ್ತಿದೆ ಎಂಬುದಂತೂ ನಿಜ.
ಸೆಕ್ಯುಲರಿಸಂನ ಬಿಕ್ಕಟ್ಟೋ? ಪ್ರಜಾತಂತ್ರದ ಬಿಕ್ಕಟ್ಟೋ?
ಆದರೆ ಇದಕ್ಕೆ ಭಾರತದ ಸೆಕ್ಯುಲರ್ ರಾಜಕಾರಣ ಧಾರ್ಮಿಕ ಭಾಷೆಯಲ್ಲಿ ಮಾತನಾಡದ್ದು ಕಾರಣವೇ? ಅಥವಾ ಅಲ್ಪಸಂಖ್ಯಾತ ತುಷ್ಟೀಕರಣದ ವೋಟ್ ಬ್ಯಾಂಕ್ ಅವಕಾಶವಾದಿ ರಾಜಕಾರಣ ಕಾರಣವೇ? ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಬಿಕ್ಕಟ್ಟು ಕೇವಲ ಸೆಕ್ಯುಲರಿಸಂನ ಬಿಕ್ಕಟ್ಟೇ ಮತ್ತು ಅದರ ಪರಿಹಾರ ಕೇವಲ ಸೆಕ್ಯುಲರಿಸಂನ ಪುನರ್ ನಿರ್ವಚನದಲ್ಲಿದೆಯೇ? ಅಥವಾ ಸೆಕ್ಯುಲರಿಸಂನ ಬಿಕ್ಕಟ್ಟು ಭಾರತವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಜಾತಂತ್ರದ ಬಿಕ್ಕಟ್ಟಿನ ಅಭಿವ್ಯಕ್ತಿಯಾಗಿದ್ದು ಅದರ ಪರಿಹಾರವೂ ಸಹ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಬೇಕಾದ ಅನಿವಾರ್ಯತೆ ಇದೆಯೇ? ಇದರ ಜೊತೆಗೇ ಕೇಳಿಕೊಳ್ಳಬೇಕಾದ ಮತ್ತೊಂದು ಪ್ರಶ್ನೆಯೂ ಇದೆ. ಕೋಮುವಾದಿ ಧ್ರುವೀಕರಣದ ರಾಜಕೀಯವನ್ನು ಅಜೆಂಡಾವಾಗಿರಿಸಿಕೊಂಡ ಸಂಘಪರಿವಾರ, ಬಿಜೆಪಿಗಳು ಸ್ವಾತಂತ್ರ್ಯಾಪೂರ್ವದಿಂದಲೂ ಭಾರತದ ರಾಜಕಾರಣದಲ್ಲಿ ಅಸ್ತಿತ್ವದಲ್ಲಿದ್ದರೂ 90ರ ನಂತರವೇ ಮೇಲುಗೈ ಪಡೆದದ್ದು ಹೇಗೆ?
ಇದೇ ಪ್ರಶ್ನೆಯ ಮತ್ತೊಂದು ಮಗ್ಗಲು-1950-90ರ ನಡುವಿನ 40 ವರ್ಷಗಳಲ್ಲಿ ಇಂದಿಗೆ ಹೋಲಿಸಿದಲ್ಲಿ ಸಾಪೇಕ್ಷವಾಗಿ ಭಾರತೀಯ ಸಮಾಜದಲ್ಲಿ ಧಾರ್ಮಿಕ ಸೌಹಾರ್ದ ಮನೆಮಾಡಿತ್ತು. ಅದಕ್ಕೆ ಕಾರಣ ಆಗ ಸೆಕ್ಯುಲರ್ ವಾದಿಗಳು ಧಾರ್ಮಿಕ ಪರಿಭಾಷೆಯಲ್ಲಿ ಜನರೊಂದಿಗೆ ಸಂವಾದದಲ್ಲಿ ತೊಡಗಿದ್ದೇ?
ಚಳವಳಿಗಳ ಆಧ್ಯಾತ್ಮಿಕತೆ
ವಾಸ್ತವದಲ್ಲಿ 1947-80ರ ನಡುವಿನ ಅವಧಿ ಜಗತ್ತಿನಾದ್ಯಂತ ಒಂದು ಬಗೆಯ ಸಾಪೇಕ್ಷ ಶಾಂತಿಯ ಕಾಲಘಟ್ಟ. ಹೆಚ್ಚೂ ಕಡಿಮೆ ಎಲ್ಲಾ ದೇಶಗಳಲ್ಲೂ ಕಲ್ಯಾಣರಾಜ್ಯ ಪರಿಕಲ್ಪನೆಯ ಪ್ರಭುತ್ವಗಳಿದ್ದವು. ಭಾರತದಲ್ಲೂ ಸ್ವಾತಂತ್ರ್ಯ ಹೋರಾಟದ ಪ್ರಜಾತಾಂತ್ರಿಕ ಆಶಯಗಳು, ಪ್ರಗತಿ, ಸಮಾನತೆಯ ಕನಸುಗಳು ಭಾರತದ ರಾಜಕಾರಣದೊಳಗೇ ಇದ್ದ ಕೋಮುವಾದಿ ಶಕ್ತಿಗಳಿಗೆ ಬಲಿಷ್ಟರಾಗುವ ಅವಕಾಶ ಕೊಟ್ಟಿರಲಿಲ್ಲ. ಕಾಲಘಟ್ಟದಲ್ಲೂ ಸಹ ಯಾವ ಸಾಮಾಜಿಕ ಚಳವಳಿಗಳೂ ಅಥವಾ ರಾಜಕೀಯ ಪಕ್ಷಗಳು ದೈವ ನಿರಾಕರಣೆಯ ಅಥವಾ ಜನರ ನಂಬಿಕೆಯನ್ನು ತುಚ್ಛೀಕರಿಸುವ ಧೋರಣೆಗಳನ್ನೇನೂ ಹೊಂದಿರಲಿಲ್ಲ. ಹಾಗೆ ನೋಡಿದರೆ ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿದ್ದದ್ದು ಕಮ್ಯುನಿಷ್ಟ್ ಪಕ್ಷಗಳೇ ಮತ್ತು ಅವರನ್ನು ಧರ್ಮಭೀರುಗಳಾದ ಸಮಾಜದ ಕಟ್ಟಕಡೆಯ ಜನರೇ ಆಯ್ಕೆ ಮಾಡಿ ಕಳಿಸುತ್ತಿದ್ದರು. ಏಕೆಂದರೆ ಕಷ್ಟಜೀವಿಗಳ ಐಹಿಕ ಬದುಕಿನ ಎಲ್ಲಾ ಸಂಕಷ್ಟಗಳಿಗೂ ಇಂತಹ ಪಕ್ಷಗಳು ಜನರಿಗೆ ಹೆಗಲಾಗುತ್ತಿದ್ದವು. ಜೊತೆಗೂಡಿ ಪರಿಹಾರವನ್ನು ಗಳಿಸಿಕೊಳ್ಳುವ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸಗಳನ್ನು ಕೊಡುತ್ತಿದ್ದವು. ಈ ಚಳವಳಿಗಳು ಬಳಸುತ್ತಿದ್ದ ಭಾಷೆ ಧರ್ಮ ನಿರಾಕರಣೆಯ ಭಾಷೆಯೂ ಆಗಿರಲಿಲ್ಲ. ಹಾಗೆಯೇ ಧಾರ್ಮಿಕ ಭಾಷೆಯೂ ಆಗಿರಲಿಲ್ಲ. ಅದು ಜನರ ಕಷ್ಟಗಳನ್ನು ಹಂಚಿಕೊಳ್ಳುವ, ಒಟ್ಟುಗೂಡಿ ಹೋರಾಡುವುದರಲ್ಲೇ ಪರಿಹಾರವನ್ನು ಕಾಣುವ ಭಾಷೆ ಮತ್ತು ಪರಿಭಾಷೆಯಾಗಿತ್ತು. ಅಂದರೆ ಲೌಕಿಕದಂತೆ ಕಂಡರೂ ಎಲ್ಲರಲ್ಲೂ ತನ್ನನ್ನು ಕಾಣುವ ಅಧ್ಯಾತ್ಮದ ಭಾಷೆಯೂ ಆಗಿರುತ್ತಿತ್ತು. ಸೌಹಾರ್ದ ಎಂದರೆ ಅದೇ ಅಲ್ಲವೇ? ಹೀಗೆ ಮೊದಲ ನಾಲ್ಕು ದಶಕಗಳಲ್ಲಿ ಲೌಕಿಕ ಸಮತೆಯ ಕನಸಿನೊಂದಿಗೆ ಸರ್ವಧರ್ಮ ಸಮಭಾವದ ಮೌಲ್ಯಗಳು ಬೆರೆತು ಹೋಗಿದ್ದವು. ಉದಾರವಾದಿ ಸಂರಚನೆಯನ್ನು ಹೊಂದಿದ್ದ ಪ್ರಭುತ್ವವು ಉದಾರವಾದಿ ಧಾರ್ಮಿಕತೆಗೆ ಬೆಂಬಲವನ್ನೂ ನೀಡುತ್ತಿದ್ದುದರಿಂದ ಸಂಕುಚಿತ ಹಾಗೂ ಅಸಹಿಷ್ಣು ಮತಪಂಥಗಳು ಹೆಚ್ಚು ಬೆಳೆಯಲಾಗಿರಲಿಲ್ಲ.
ನವ-ಉದಾರವಾದ ಮತ್ತು ಅಸಹಿಷ್ಣು ಧಾರ್ಮಿಕತೆ
ಆದರೆ 90ರ ನಂತರದಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಬಂಡವಾಳಶಾಹಿಗಳನ್ನು ಮತ್ತು ಉಳ್ಳವರನ್ನು ರಕ್ಷಿಸಲು ಎಲ್ಲಾ ದೇಶಗಳು ಬಿಕ್ಕಟ್ಟಿನ ಭಾರವನ್ನು ಸಾಮಾನ್ಯರ ಮೇಲೆ ವರ್ಗಾಯಿಸಿದವು. ಜನರ ಹಕ್ಕುಗಳನ್ನು ಮೊಟಕುಗೊಳಿಸಿದವು. ಸಂವಿಧಾನ ಬಾಹಿರವಾಗಿ ಜನಸಮುದಾಯಗಳ ಸಂಪನ್ಮೂಲಗಳನ್ನು ಕಸಿದು ಬಂಡವಾಳಶಾಹಿಗಳಿಗೆ ವರ್ಗಾಯಿಸಿದವು. ಇದು ಸಮಾಜದಲ್ಲಿ ಜನರ ಆತಂಕಗಳನ್ನು ಹಾಗೂ ಅಭದ್ರತೆಗಳನ್ನು ಹೆಚ್ಚು ಮಾಡತೊಡಗಿದವು. ಉದಾರವಾದಿ ಪ್ರಭುತ್ವವು ಮಾರುಕಟ್ಟೆ ಶಕ್ತಿಗಳ ಪರವಾದ ನವ ಉದಾರವಾದಿ, ಪೊಲೀಸ್ ಪ್ರಭುತ್ವಗಳಾಗಿಯೂ ಬದಲಾದವು. ಮಾರುಕಟ್ಟೆ ಆರ್ಥಿಕತೆ ಹಾಗೂ ನವ ಉದಾರವಾದಿ ಪ್ರಭುತ್ವಗಳು ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಹಾಗೂ ಸಾಮಾಜಿಕ ನ್ಯಾಯದ ನೀತಿಯನ್ನು ಅಪಮೌಲ್ಯಗೊಳಿಸಿತು. ಬದಲಿಗೆ ಬಲವಿದ್ದವರು ಬದುಕುವುದೇ ಸಾಮಾಜಿಕ ನ್ಯಾಯವೆಂಬ ಸೋಷಿಯಲ್ ಡಾರ್ವಿನಿಸಂ ತತ್ವವನ್ನು, ಮೆರಿಟೋಕ್ರಸಿಯನ್ನು ಪ್ರಭುತ್ವದ ಬೆಂಬಲದೊಂದಿಗೆ ಮಾನ್ಯಗೊಳಿಸಿತು. ಸಾಮಾಜಿಕ ಅಸಮಾನತೆಯೇ ಸಹಜ ಸ್ಥಿತಿಯೆಂದು ನಂಬಿಸಿತು. ನ್ಯಾಯ ಹಾಗೂ ಸಮಾನತೆಯ ಆಶಯಗಳನ್ನು ಪರಕೀಯ ಮೌಲ್ಯಗಳೆಂದು ಪ್ರಚಾರ ಮಾಡಿತು. 90ರ ಪೂರ್ವದ ಸಾಪೇಕ್ಷ ಶಾಂತಿಯ ಕಾಲಘಟ್ಟದ ಉದಾರವಾದಿ ಪ್ರಭುತ್ವಗಳು ಸಂಕುಚಿತ ಹಾಗೂ ಅಸಹಿಷ್ಣು ಮತಪಂಥಗಳಿಗೆ ಉತ್ತೇಜನ ನೀಡಿರಲಿಲ್ಲ. ಆದರೆ 90ರ ನಂತರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾಲಘಟ್ಟದ ಪ್ರಭುತ್ವಗಳು ಅಸಮಾನತೆಯನ್ನು, ಅನ್ಯಾಯವನ್ನೂ ಮತ್ತು ಶ್ರೇಣೀಕರಣವನ್ನು ಸಹಜವಾಗಿಸುವ ಸಂಕುಚಿತ ಹಾಗೂ ಅಸಹಿಷ್ಣು ಧರ್ಮೀಯತೆಗಳನ್ನು ಬಹಿರಂಗವಾಗಿ ಪ್ರೋತ್ಸಾಹಿಸಿದವು. 1980ರಲ್ಲಿ ಇಂದಿರಾಗಾಂಧಿಯವರ ಪುನರಾಗಮನದೊಂದಿಗೆ ಸಂಕುಚಿತ ಹಾಗೂ ಅಸಹಿಷ್ಣು ಮತೀಯತೆಗೆ ಕಾಂಗ್ರೆಸೇ ಬೆಂಬಲ ನೀಡಲು ಪ್ರಾರಂಭಿಸಿತ್ತು. ಆವರೆಗೆ ರಾಜಕೀಯ ನೇಪಥ್ಯಕ್ಕೆ ಸರಿದಿದ್ದರೂ ಸಾಮಾಜಿಕವಾಗಿ ಜಾಲ ಹರಡುತ್ತಿದ್ದ ಸಂಘಪರಿವಾರಕ್ಕೆ 90ರ ನಂತರದಲ್ಲಂತೂ ದೊಡ್ಡ ಮಟ್ಟದಲ್ಲಿ ಆಳುವ ವರ್ಗಗಳ ಬೆಂಬಲ ದೊರೆಯಲು ಪ್ರಾರಂಭವಾಯಿತು. ಅದರ ಜನವಿರೋಧಿ ಸಿದ್ಧಾಂತಗಳಿಗೆ ದೊಡ್ಡ ಮಟ್ಟದಲ್ಲಿ ಮಾನ್ಯತೆ ಮತ್ತು ಅದರ ಸಂವಿಧಾನ ವಿರೋಧಿ ಕೋಮುದ್ವೇಷದ ವಿನಾಶಕಾರಿ ಚಟುವಟಿಕೆಗಳಿಗೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹಕಾರ ಹಾಗೂ ಪ್ರೋತ್ಸಾಹ ದೊರೆಯಿತು.
ಅದೇ ಸಮಯದಲ್ಲಿ ಪೊಲೀಸ್ ಪ್ರಭುತ್ವವಾಗಿ ಬದಲಾದ ವ್ಯವಸ್ಥೆ ಜನಚಳವಳಿಗಳನ್ನು ಬಗ್ಗುಬಡಿಯಿತು. ಈ ಪ್ರಹಾರಗಳನ್ನು ಎದುರಿಸಿಯೂ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಚಳವಳಿಗಳನ್ನು ಕಟ್ಟುವಲ್ಲಿ ಹಾಗೂ ಜನರೊಂದಿಗೆ ಇನ್ನೂ ಹೆಚ್ಚಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ಎಲ್ಲಾ ಚಳವಳಿಗಳು ವಿಫಲವಾದವು. ಹೊಸ ಸವಾಲನ್ನು ಎದುರಿಸಲು ಅಗತ್ಯವಿರುವ ಮಾರ್ಗಗಳನ್ನು ಆಧರಿಸದೆ ಚುನಾವಣಾ ರಾಜಕಾರಣದಂತಹ ಶಾರ್ಟ್‌ಕಟ್‌ಗಳ ಮೊರೆ ಹೋಗುತ್ತಾ ಜನರ ಕಣ್ಣಲ್ಲಿ ಇನ್ನಷ್ಟು ಅಪ್ರಸ್ತುತರಾಗುತ್ತಾ ಹೋದರು.
ಕಲ್ಪಿತ ಶತ್ರುವಿನ ವಿರುದ್ಧ ಅಸಹನೆ ಹಾಗೂ ದ್ವೇಶವನ್ನು ಬಿತ್ತುತ್ತಾ ಧರ್ಮದ ಮುಸುಕಿನ ಫ್ಯಾಶಿಸ್ಟ್ ರಾಜಕಾರಣವನ್ನು ಮಾಡುವ ಸಂಘಪರಿವಾರದ ಶಕ್ತಿಗಳು ಚಳವಳಿಗಳ ಗೈರುಹಾಜರಿಯು ಒದಗಿಸಿದ ಅವಕಾಶವನ್ನು ಬಳಸಿಕೊಂಡು ಪ್ರಭುತ್ವದ ಸಂಪೂರ್ಣ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಬೇರುಬಿಡುತ್ತಿವೆ. ಇದರೊಂದಿಗೆ ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳ ಯಾಜಮಾನ್ಯವನ್ನು ಸಾಧಿಸಿ, ಅದರ ಮೂಲಕ ಅತಂತ್ರ ಹಾಗೂ ಅಭದ್ರತೆಯಲ್ಲಿ ಸಿಲುಕಿರುವ ಸಾಮಾನ್ಯ ಜನರ ಮನೋಲೋಕವನ್ನೂ ಮತ್ತು ಧಾರ್ಮಿಕ ಲೋಕವನ್ನು ಆಳುತ್ತಿವೆ.
ಖ್ಯಾತ ಚಿಂತಕ ಬಾಲಗೋಪಾಲ್ ಅವರು ಹೇಳುತ್ತಿದ್ದಂತೆ ಮನುಷ್ಯನೊಳಗೆ ಸಹಜವಾಗಿ ಒಳ್ಳೆಯತನ ಮತ್ತು ದುಷ್ಟತನಗಳೆರಡೂ ಮನೆ ಮಾಡಿರುತ್ತವೆ. ಸಮಾನತೆಯ ಆಶಯದ ರಾಜಕಾರಣವು ಮನುಷ್ಯರಲ್ಲಿರುವ ಒಳ್ಳೆಯತನಕ್ಕೆ ಅಪೀಲ್ ಮಾಡಿದರೆ, ಬಂಡವಾಳಶಾಹಿ ಅಥವಾ ಫ್ಯಾಶಿಸ್ಟ್ ರಾಜಕಾರಣ ಮನುಷ್ಯರಲ್ಲಿ ಸಹಜವಾಗಿಯೇ ಉಳಿದುಕೊಂಡಿರುವ ದುಷ್ಟತನಕ್ಕೆ ಅಪೀಲ್ ಮಾಡುತ್ತದೆ. ಇವೆರಡರ ನಡುವೆ ಸದಾ ಸಂಘರ್ಷವಿದ್ದೇ ಇರುತ್ತದೆ. ಹೀಗೆ ಸೆಕ್ಯುಲರಿಸಂನ ಬಿಕ್ಕಟ್ಟು ಭಾಷೆ ಅಥವಾ ಪರಿಭಾಷೆಯ ಬಿಕ್ಕಟ್ಟಲ್ಲವೇ ಅಲ್ಲ. ಅದು ಫ್ಯಾಶಿಸ್ಟ್ ಕಾಲಘಟ್ಟದಲ್ಲಿ ಪ್ರಜಾತಂತ್ರ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ.
ಈ ಕಾಲಕ್ಕೆ ಬೇಕಿರುವ ಸೆಕ್ಯುಲರಿಸಂ
ಜನರಿಗೆ ಧರ್ಮವೆಂಬುದು ಕೇವಲ ಆಧ್ಯಾತ್ಮಿಕ ಸಾಧನವೂ ಅಲ್ಲ ಅಥವಾ ಕೇವಲ ಪಾರಮಾರ್ಥಿಕ ವ್ಯವಹಾರವೂ ಅಲ್ಲ. ಹಾಗೆ ಭಾವಿಸುವುದು ಒಂದು ಮಧ್ಯಮ ವರ್ಗದ ಮೋಹಕ ಭಾವುಕತೆಯಷ್ಟೆ. ಜನರಿಗೆ ಧರ್ಮವೆಂಬುದು ಲೌಕಿಕ ಹಾಗೂ ವ್ಯಾವಹಾರಿಕವೂ ಹೌದು. ಅಲೌಕಿಕವಾದದ್ದೂ ಹೌದು. ‘‘ಸಂಕಟ ಸಮಯದಿ ವೆಂಕಟರಮಣ’’ ಎಂಬುದು ಸುಮ್ಮನೆ ಬಂದ ಗಾದೆಯೇನಲ್ಲ. ಜನರ ಲೌಕಿಕ ಸಂಕಟಗಳಲ್ಲೇ ದೇವರು, ಧರ್ಮ, ಜನಚಳವಳಿಗಳು ಹಾಗೂ ಫ್ಯಾಶಿಸಂ ಎಲ್ಲವೂ ಜನ್ಮ ತಳೆಯುತ್ತವೆ. ಜನರ ಲೌಕಿಕ ಸಂಕಟಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಗತ್ಯವಿರುವುದು ಧಾರ್ಮಿಕ ಭಾಷೆಯೂ ಅಲ್ಲ. ಸೆಕ್ಯುಲರಿಸಂನ ಹೊಸ ಪರಿಕಲ್ಪನೆಗಳೂ ಅಲ್ಲ. ಅದೂ ಸೆಕ್ಯುಲರಿಸಂನ ಇಂದಿನ ವೈಫಲ್ಯಕ್ಕೆ ಪ್ರಧಾನ ಕಾರಣವೂ ಅಲ್ಲ. ಆದ್ದರಿಂದಲೇ ಪ್ರಧಾನ ಪರಿಹಾರವೂ ಅಲ್ಲ. ಇಂದು ಜನರ ಲೌಕಿಕ ಕಷ್ಟಗಳ ಲೌಕಿಕ ಕಾರಣಗಳ ವಿರುದ್ಧ ಕಷ್ಟದಲ್ಲಿರುವ ಎಲ್ಲರನ್ನೂ ಒಂದು ಮಾಡುವ ಲೌಕಿಕ ಚಳವಳಿಗಳು ಅತ್ಯಂತ ಅಗತ್ಯವಾಗಿವೆ. ಅಂತಹ ಚಳವಳಿಗಳೇ ಮತಧರ್ಮಗಳಾಚೆಯೂ ಎಲ್ಲರ ಬಾಧೆಗಳು ಒಂದೇ ಎನ್ನುವ ಆಧ್ಯಾತ್ಮಿಕತೆಯ ಅರಿವನ್ನೂ ಮೂಡಿಸುತ್ತವೆ. ಬೇರೆ ಬೇರೆ ಜಾತಿ ಧರ್ಮಗಳ ಕಷ್ಟಜೀವಿಗಳು ಪರಸ್ಪರ ಹೆಗಲಿಗೆ ಹೆಗಲಾಗಿ ಪ್ರಾಣಕ್ಕೆ ಪ್ರಾಣಕೊಟ್ಟು ನಡೆಸುವ ಹೋರಾಟಗಳೇ ಜನರನ್ನು ಒಡೆಯುವ ಸಂಕುಚಿತ ಹಾಗೂ ಅಸಹಿಷ್ಣು ಧಾರ್ಮಿಕತೆಗೆ ಜನರು ಬಲಿಯಾಗದಂತೆ ತಡೆಯುತ್ತದೆ. ಇದೇ ಇಂದು ಅಗತ್ಯವಿರುವ ಸೆಕ್ಯುಲರಿಸಂ. ಸೆಕ್ಯುಲರಿಸಂನ ಭಾಷೆಯು ಸಹಜವಾಗಿಯೇ ಕಷ್ಟಜೀವಿಗಳ ಸೌಹಾರ್ದದಿಂದ ಮೂಡುವುದರಿಂದ ಅದಕ್ಕೆ ಇಂಗ್ಲಿಷ್ ಸೆಕ್ಯುಲರ್ ವಿದ್ವಾಂಸರ ದುರಹಂಕಾರವೂ ಇರುವುದಿಲ್ಲ. ಜನರ ಸೌಹಾರ್ದವನ್ನು ಪೊರೆಯುವ ಧಾರ್ಮಿಕ ಪರಂಪರೆಗಳ ಬಗ್ಗೆ ತಿರ�