ಆರೋಪ ಪಟ್ಟಿ ಸಲ್ಲಿಸಿ ಬಳಿಕವೂ ತನಿಖೆ ಮುಂದುವರಿಸಲು ದಿಲ್ಲಿ ಪೊಲೀಸರ ಪರ ತೀರ್ಪು ನೀಡಿದ ನ್ಯಾಯಾಲಯ

Update: 2020-09-10 17:12 GMT

ಹೊಸದಿಲ್ಲಿ, ಸೆ. 10: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಗಲಭೆ ಸಂದರ್ಭ ದಿಲ್ಲಿಯ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ರತನ್ ಲಾಲ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರ ಪರವಾಗಿ ಕಾಕರ್‌ಡೂಮಾ ನ್ಯಾಯಾಲಯ ತೀರ್ಪು ನೀಡಿದೆ.

ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸಿದ ಬಳಿಕವೂ ಒಂದು ವೇಳೆ ಹೊಸ ಸಾಕ್ಷ್ಯಗಳು ಬೆಳಕಿಗೆ ಬಂದರೆ, ದಿಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಬಹುದು ಎಂದು ನ್ಯಾಯಾಲಯ ಹೇಳಿದೆ. ‘‘ನನ್ನ ಅಭಿಪ್ರಾಯದ ಪ್ರಕಾರ ಗಲಭೆ ಪ್ರಕರಣಗಳನ್ನು ಇತರ ಕ್ರಿಮಿನಲ್ ಪ್ರಕರಣಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ, ಗಲಭೆ ಪ್ರಕರಣದಲ್ಲಿ ಆರೋಪಿಗಳು ಹಾಗೂ ಸಂತ್ರಸ್ತರನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ. ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ’’ ಎಂದು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಯಾದವ್ ಹೇಳಿದ್ದಾರೆ. ತಮ್ಮ ಪ್ರಕರಣಗಳಲ್ಲಿ ಆರೋಪ ಪಟ್ಟಿ ಪೂರ್ಣಗೊಂಡಿದೆಯೇ ಅಥವಾ ತನಿಖೆ ಮುಂದುವರಿಯಲಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳಲ್ಲಿ ಕೇಳುವಂತೆ ದಿಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ರತನ್ ಲಾಲ್ ಅವರ ಹತ್ಯೆ ಪ್ರಕರಣದ 18 ಆರೋಪಿಗಳಲ್ಲಿ 6 ಆರೋಪಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಈ ಪ್ರಕರಣದ 18 ಆರೋಪಿಗಳಲ್ಲಿ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಓರ್ವ ಆರೋಪಿ ಜಾಮೀನಿನಲ್ಲಿ ಹೊರಗಿದ್ದಾನೆ. ಅಲ್ಲದೆ, ಈತ ತನ್ನ ಜಾಮೀನನನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾನೆ.

ಚಾಂದ್ ಬಾಗ್‌ನಲ್ಲಿ ಫೆಬ್ರವರಿ 24ರಂದು ಕರ್ತವ್ಯದಲ್ಲಿದ್ದ ಸಂದರ್ಭ ರತನ್ ಲಾಲ್ ಅವರನ್ನು ಹತ್ಯೆಗೈಯಲಾಗಿತ್ತು. ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ಮೆಹ್ಮೂದ್ ಪ್ರಾಚಾ, ತನಿಖಾಧಿಕಾರಿಗಳು ಜೂನ್ 8ರಂದು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದ ಕೊರತೆ ತುಂಬಲು ತನಿಖಾಧಿಕಾರಿಗಳು ಎರಡು ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದಾರೆ. ಇದು ಮೊದಲ ಆರೋಪ ಪಟ್ಟಿ ಸಲ್ಲಿಸುವ ಮುನ್ನ ತನಿಖೆಯನ್ನು ಪೂರ್ಣಗೊಳಿಸಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸುವ ಮೂಲಕ ಕೊರತೆಗಳನ್ನು ಮಚ್ಚಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಪ್ರಾಚಾ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News