ಮೋದಿ ಸರಕಾರದ ಮೂರು ಮರಣ ಶಾಸನಗಳು

Update: 2020-09-22 19:30 GMT

ಸರಕಾರ ಹೇಳುವ ಪ್ರಕಾರ ಈ ಮಸೂದೆಗಳು ರೈತ ಪರವಾಗಿದ್ದಲ್ಲಿ ಎರಡೂ ಸದನಗಳಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳನ್ನು ಬಯಲುಗೊಳಿಸಿ ಇಡೀ ರಾಷ್ಟ್ರಕ್ಕೆ ತಮ್ಮ ಸದಿಂಗಿತವನ್ನು ಸಾಬೀತುಪಡಿಸಬಹುದಾಗಿತ್ತು. ಸರಕಾರ ಅಂತಹ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೂ ಮುಂದಾಗದೆ ಕೋವಿಡ್-19 ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಕ್ಕೆ ಮಾಸ್ಕ್ ತೊಡಿಸಿ ಈ ಮರಣ ಶಾಸನಗಳನ್ನು ಜಾರಿ ಮಾಡಿರುವುದು ಸರಕಾರದ ದುಷ್ಟ ಉದ್ದೇಶಗಳಿಗೆ ಒಂದು ಮಹತ್ವದ ಪುರಾವೆಯೇ ಆಗಿದೆ. 


ಭಾರತದ ರೈತರ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತಹ ಮೂರು ರೈತ ವಿರೋಧಿ ಸುಗ್ರೀವಾಜ್ಞೆಗಳಿಗೆ ಕಳೆದ ವಾರ ಮೋದಿ ಸರಕಾರ ಅತ್ಯಂತ ಅಪ್ರಜಾತಾಂತ್ರಿಕವಾಗಿ ಸದನದ ಎರಡೂ ಮನೆಗಳಲ್ಲಿ ‘ಅನುಮೋದನೆ’ ದಕ್ಕಿಸಿಕೊಂಡಿದೆ. ಇದಕ್ಕಾಗಿ ಲೋಕಸಭೆಯಲ್ಲಿ ಸಾಮ, ದಾನ, ಭೇದದ ಉಪಾಯಗಳನ್ನು ಬಳಸಿದರೆ ರಾಜ್ಯಸಭೆಯಲ್ಲಂತೂ ದಂಡೋಪಾಯವನ್ನೂ ಬಳಸಿದೆ. ಇನ್ನು ನಮ್ಮ ರಾಷ್ಟ್ರಪತಿಯವರಂತೂ ಹೇಗೂ ಮೋದಿ ಸರಕಾರದ ನೀತಿಗಳಿಗೆ ಮಧ್ಯರಾತ್ರಿಯಲ್ಲೂ ನಿದ್ದೆಗಣ್ಣಿನಲ್ಲಿ ಸಹಿಹಾಕಲು ಸಿದ್ಧ್ದರಿದ್ದೇ ಇರುತ್ತಾರೆ. ಆದ್ದರಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದ ಕೀರ್ತಿಯೂ ಸಹ ಮೋದಿ ಸರಕಾರಕ್ಕೆ ದಕ್ಕಲಿದೆ.

ಹಾಗೆ ನೋಡಿದರೆ ಸರಕಾರ ಹೇಳುವ ಪ್ರಕಾರ ಈ ಮಸೂದೆಗಳು ರೈತ ಪರವಾಗಿದ್ದಲ್ಲಿ ಎರಡೂ ಸದನಗಳಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳನ್ನು ಬಯಲುಗೊಳಿಸಿ ಇಡೀ ರಾಷ್ಟ್ರಕ್ಕೆ ತಮ್ಮ ಸದಿಂಗಿತವನ್ನು ಸಾಬೀತುಪಡಿಸಬಹುದಾಗಿತ್ತು. ಸರಕಾರ ಅಂತಹ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೂ ಮುಂದಾಗದೆ ಕೋವಿಡ್-19 ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಕ್ಕೆ ಮಾಸ್ಕ್ ತೊಡಿಸಿ ಈ ಮರಣ ಶಾಸನಗಳನ್ನು ಜಾರಿ ಮಾಡಿರುವುದು ಸರಕಾರದ ದುಷ್ಟ ಉದ್ದೇಶಗಳಿಗೆ ಒಂದು ಮಹತ್ವದ ಪುರಾವೆಯೇ ಆಗಿದೆ. ಈ ಮೂರೂ ಶಾಸನಗಳ ಮೇಲ್ನೋಟದ ಓದು ಅನುಮಾನವನ್ನು ಹುಟ್ಟಿಸಿದರೆ ಮಸೂದೆಯ ಪೂರ್ಣ ವಿವರಗಳು ಆತಂಕವನ್ನೇ ಹುಟ್ಟಿಸುತ್ತವೆ. ಮೋದಿ ಸರಕಾರದ ರಾಜಕೀಯಕ್ಕೆ ತಕ್ಕನಾಗಿ ಈ ಮಸೂದೆಗಳ ಒಳತಿರುಳಿಗೆ ತದ್ವಿರುದ್ಧವಾದ ಅರ್ಥವನ್ನು ಸ್ಪುರಿಸುವ ಹೆಸರುಗಳನ್ನು ಈ ಮೂರೂ ಮಸೂದೆಗಳಿಗೆ ಇಡಲಾಗಿದೆ.

ಸರಳವಾಗಿ ಆ ಮೂರು ಮಸೂದೆಗಳನ್ನು 1. APMCಯನ್ನು ಬದಿಗೆ ಸರಿಸುವ ಕಾಯ್ದೆ. 2. ಕಾಂಟ್ರಾಕ್ಟ್ ಫಾರ್ಮಿಂಗ್ ಜಾರಿ ಮಾಡುವ ಕಾಯ್ದೆ ಮತ್ತು 3. ಬೃಹತ್ ಕೃಷಿ ಕಂಪೆನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯ್ದೆ ಎಂದು ಹೇಳಬಹುದು.

1.APMCಯನ್ನು ಮೂಲೆಗುಂಪು ಮಾಡುವ ಮಸೂದೆ:
ಸರಕಾರದ ಪರಿಭಾಷೆಯಲ್ಲಿ ಈ ಮಸೂದೆಗೆ The Famers Produce Trade and Commerce (Promotion and Facilitation) Bill, 2020 ಎಂದು ಕರೆಯಲಾಗುತ್ತದೆ. ಅಂದರೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಮಸೂದೆ ಎಂದರ್ಥ. ಮೇಲ್ನೋಟಕ್ಕೆ ರೈತಪರ ಧ್ವನಿಯಲ್ಲಿರುವ ಈ ಮಸೂದೆಯು ನಿಜಕ್ಕೂ ರೈತರ ಉತ್ಪನ್ನಗಳ ವಾಣಿಜ್ಯದಲ್ಲಿ ರೈತರಿಗೆ ಸೌಕರ್ಯವನ್ನೂ ಉತ್ತೇಜನವನ್ನೂ ನೀಡಲಿದೆಯೇ?

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡುವ ಸಲುವಾಗಿಯೇ ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡ APMC ಕೃಷಿ ಉತ್ಪನ್ನ ಮಾರಾಟ ಸಮಿತಿಗಳು ರೂಪುಗೊಂಡವು. ಸರಕಾರವು APMC ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP)ಯನ್ನು ಕೊಟ್ಟು ಅವರ ಸರಕುಗಳನ್ನು ಖರೀದಿಸುತ್ತಿತ್ತು. ಹಾಗೆ ರೈತರಿಂದ ಖರೀದಿಸಿದ ಧಾನ್ಯಗಳ ಮೂಲಕವೇ ದೇಶಾದ್ಯಂತ ಬಡಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿ ಈ ದೇಶದ ಜನರ ಆಹಾರ ಭದ್ರತೆಯನ್ನು ಖಾತರಿಗೊಳಿಸುತ್ತಿತ್ತು. 2013ರಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯ ನಂತರ ಈ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿರುವುದಕ್ಕೆ ಈ ವ್ಯವಸ್ಥೆಯೇ ಕಾರಣ. APMC ಹಾಗೂ MSP ವ್ಯವಸ್ಥೆಯ ಕಾರಣದಿಂದಾಗಿಯೇ ಈ ದೇಶದ ಕೋಟ್ಯಂತರ ರೈತರ ಆದಾಯ ಸುನಿಶ್ಚಿತವಾಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ರೈತರಿಗೆ ಹಲವಾರು ತೊಂದರೆಗಳಿದ್ದುದು ನಿಜ.

APMCಯಲ್ಲಿ ರೈತರಿಗಿಂತ ವ್ಯಾಪಾರಿಗಳು ಮತ್ತು ದಲಾಳಿಗಳು ಸಶಕ್ತರಾಗಿದ್ದಾರೆ. ಅವರಿಂದ ರೈತರಿಗೆ ತೂಕದಲ್ಲಿ, ಪ್ರಮಾಣದಲ್ಲಿ ಹಾಗೂ ಬೆಲೆಯ ಪಾವತಿಯಲ್ಲಿ ಹಲವಾರು ಬಾರಿ ಮೋಸವಾಗುತ್ತಿದೆ. ಹಾಗೆಯೇ MSP ವ್ಯವಸ್ಥೆಯು ಪಂಜಾಬ್, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾದಂತಹ ರಾಜ್ಯಗಳನ್ನು ಬಿಟ್ಟರೆ ಎಲ್ಲಾ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಅಕ್ಕಿ, ಗೋಧಿ ಮತ್ತು ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ರೈತ ಬೆಳೆಯುವ ಎಲ್ಲ್ಲ ಬೆಳೆಗಳು MSP ಅಡಿ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ MSP ಲೆಕ್ಕಾಚಾರದಲ್ಲೇ ರೈತರ ಎಲ್ಲ ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶದ ರೈತರೆಲ್ಲಾ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಹೀಗೆ ಈಗಿರುವ APMC ಹಾಗೂ MSP ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಈವ್ಯವಸ್ಥೆಯಲ್ಲಿ ರೈತಪರ ಸುಧಾರಣೆಗಳ ಅಗತ್ಯವಿದ್ದದ್ದು ನಿಜ. ಹಾಗಿದ್ದಲ್ಲಿ ಮೋದಿ ಸರಕಾರ ತಂದಿರುವ ಈ ಹೊಸ ಮಸೂದೆ/ಕಾಯ್ದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆಯೇ?

 -ಮೋದಿ ಸರಕಾರದ The Famers Produce Trade and Commerce (Promotion and Facilitation) Bill, 2020 ಎಂಬ ಈ ಕಾಯ್ದೆ APMC ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅದನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿ ಅದರ ಜಾಗದಲ್ಲಿ ರೈತರಿಗೆ ಯಾವ ಪಾತ್ರವೂ ಇಲ್ಲದ ದೊಡ್ದದೊಡ್ಡ ಬಂಡವಾಳಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು ಮತ್ತು ಖಾಸಗಿ APMCಗಳ ಸ್ಥಾಪನಗೆ ಅವಕಾಶ ಮಾಡಿಕೊಡುತ್ತದೆ. ಹಾಲಿ ಇರುವ APMCಯಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೊಳ್ಳುವವರ ಹಾಗೂ ಮಾರುವವರ ಮೇಲೆ ಸರಕಾರ ತೆರಿಗೆಯನ್ನು ಮತ್ತು ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಈ ಹೊಸ ಕಾಯ್ದೆಯು ಖಾಸಗಿ ಮಂಡಿಗಳಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆ ಮೂಲಕ ಖಾಸಗಿ ಮಂಡಿಗಳಿಗೆ ಉತ್ತೇಜನ ಕೊಡುತ್ತಾ ಹಾಲಿ ಇರುವ APMCಯಿಂದಲೂ ವ್ಯಾಪಾರಿಗಳು ಹಾಗೂ ಮಾರಾಟಗಾರು ಖಾಸಗಿ ಮಂಡಿಯತ್ತ ಆಕರ್ಷಿತರಾಗಿ ಹಳೆಯ APMC ನಿಧಾನವಾಗಿ ಸಾವನ್ನಪ್ಪುವಂತೆ ಮಾಡುತ್ತವೆ. ಎಲ್ಲಕಿಂತ ಮುಖ್ಯವಾದ ವಿಷಯವೇನೆಂದರೆ APMC ಇಲ್ಲವಾದರೆ ರೈತರಿಗೆ MSP ದರಗಳು ದಕ್ಕುತ್ತವೆಯೇ ಎಂಬುದು..

ವಾಸ್ತವವಾಗಿ ಪ್ರಧಾನಿಗಳು ಪದೇ ಪದೇ MSP ರದ್ದು ಮಾಡುವುದಿಲ್ಲ ಎಂದು ಹೇಳುತ್ತಿರುವುದರಲ್ಲಿ ಅರ್ಧ ಸತ್ಯ ಮಾತ್ರ ಇದೆ. ಹಾಲಿ ಅಸ್ತಿತ್ವದಲ್ಲಿರುವ APMCಗಳಲ್ಲಿ MSP ರದ್ದು ಮಾಡಲಾಗುವುದು ಎಂಬ ನಿಯಮವೇನೂ ಕಾಯ್ದೆಯಲ್ಲಿಲ್ಲ ಎಂಬುದು ನಿಜ. ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಖಾಸಗಿ ಮಂಡಿಗಳಲ್ಲಿ MSPಯನ್ನು ಖಾತರಿಪಡಿಸುವ ನಿಯಮವೂ ಕಾಯ್ದೆಯಲ್ಲಿಲ್ಲ ಎಂಬುದನ್ನು ಪ್ರಧಾನಿ ರೈತರಿಂದ ಮುಚ್ಚಿಡುತ್ತಿದ್ದಾರೆ. ಹಾಗೂ ಈ ಹೊಸ ಕಾಯ್ದೆಯಿಂದಾಗಿ ಹಳೆಯ APMCಗಳು ನಿಧಾನವಾಗಿ ರದ್ದಾಗಿ ಕೆಲವು ವರ್ಷಗಳ ನಂತರ ಬಹುಪಾಲು ಖಾಸಗಿ ಮಂಡಿಗಳ ಕಾರ್ಟೆಲ್‌ಗಳೇ ಉಳಿದುಕೊಳ್ಳುವುದರಿಂದ ಸರಕಾರ ಕಾಲಕ್ರಮೇಣ MSP ಹೊಣೆಗಾರಿಕೆಯಿಂದ ಮುಕ್ತವಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಪ್ರಾರಂಭದಲ್ಲಿ ದೊಡ್ಡ ಕೃಷಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರೂ ಎಲ್ಲಉದ್ದಿಮೆಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾರ್ಪೊರೇಟ್ ಉದ್ದಿಮೆಗಳೇ ಬಹಳ ಬೇಗ ಏಕಸ್ವಾಮ್ಯ ಸಾಧಿಸುತ್ತವೆ. ಈ ವ್ಯವಹಾರಕ್ಕೆ ಈಗಾಗಲೇ ಅಂಬಾನಿ, ಅದಾನಿ ಹಾಗೂ ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳೂ ದಾಳಿ ಇಡಲು ಸಿದ್ಧವಾಗುತ್ತಿವೆ. ಇಂತಹ ದೊಡ್ಡ ಉದ್ದಿಮೆಗಳ ಮುಂದೆ ಸಣ್ಣಪುಟ್ಟವರ ಮಂಡಿಗಳು ಉಳಿಯಲು ಸಾಧ್ಯವೇ ಇಲ್ಲ. ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನೆನಪಿಸಿಕೊಳ್ಳೋಣ.

ದೊಡ್ಡ ಬಂಡವಾಳಿಗರು ತಮ್ಮ ನಡುವೆ ಕಾರ್ಟೆಲ್‌ಗಳನ್ನು ಮಾಡಿಕೊಂಡು ದರದ ಯಾವ ಲಾಭವೂ ರೈತರಿಗೆ ಸಿಗದಂತೆ ಮಾಡುತ್ತಾರೆ. ಆಗ ರೈತರು ಬೇರೆ ಯಾವುದೇ ಆಯ್ಕೆ ಇಲ್ಲದೆ ಇದೇ ಕಾರ್ಟೆಲ್‌ಗಳಿಗೆ ಅವರು ವಿಧಿಸುವ ಬೆಲೆಗೆ ಮಾರಿಕೊಳ್ಳಬೇಕಾಗುತ್ತದೆ. ಬಿಹಾರದಲ್ಲಿ 2006ರಲ್ಲೇ APMCಗಳು ರದ್ದಾಗಿದ್ದು ಅಲ್ಲಿ ಯಾವುದೇ ಖಾಸಗಿ ಮಂಡಿಗಳು ರೈತರಿಗೆ ಸ್ಪರ್ಧಾತ್ಮಕ ದರಗಳನ್ನು ನೀಡುತ್ತಿಲ್ಲ. ವಾಸ್ತವದಲ್ಲಿ ಅಲ್ಲಿನ ರೈತರಿಗೆ ಬಹಳಷ್ಟು ಬಾರಿ ಇತರ ರಾಜ್ಯಗಳ ರೈತರಿಗೆ ಸಿಗುತ್ತಿರುವ MSP ಮುಕ್ಕಾಲು ಪಾಲೂ ಸಿಗುತ್ತಿಲ್ಲ.

APMCಗಳೇ ಇಲ್ಲದಿರುವ ಸಂದರ್ಭದಲ್ಲಿ ಸರಕಾರವು ಪಡಿತರ ವ್ಯವಸ್ಥೆಗಾಗಿ ಆಹಾರ ಖರೀದಿಯನ್ನು ನಿಲ್ಲಿಸುತ್ತದೆ. ವಾಸ್ತವದಲ್ಲಿ 2015 ರಿಂದಲೂ ಮೋದಿ ಸರಕಾರವು ಪಡಿತರ ಬಿಲ್ಲನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗಿದೆ. 2016ರಲ್ಲಿ ಶಾಂತಕುಮಾರ್ ಸಮಿತಿಯೂ ಸಹ ಸರಕಾರಕ್ಕೆ ಆಹಾರ ಪಡಿತರ ಸಬ್ಸಿಡಿಯನ್ನು ಶೇ.50ರಷ್ಟು ಕಡಿತಗೊಳಿಸಬೇಕೆಂದು ಶಿಫಾರಸು ಮಾಡಿತ್ತು. 2018 ಮತ್ತು 2020 ರಲ್ಲಿ ಸರಕಾರದ ಕಾರ್ಯದರ್ಶಿಗಳ ಸಮಿತಿಯು ಪಡಿತರ ಸೌಲಭ್ಯವನ್ನು 80 ಕೋಟಿ ಜನರಿಂದ 20 ಕೋಟಿ ಜನರಿಗೆ ಇಳಿಸುವಂತೆ ಮತ್ತು ಪಡಿತರ ದರವನ್ನು ಎರಡು ಪಟ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಈ APMCಮೂಲೆಗುಂಪು ಕಾಯ್ದೆಯು ಸರಕಾರದ ಈ ಉದ್ದೇಶವನ್ನು ಸುಲಭವಾಗಿ ಈಡೇರುವಂತೆ ಮಾಡಿ ದೇಶದ ಕೋಟ್ಯಂತರ ಬಡವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸಲಿದೆ.

ಹೀಗೆ APMC ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರಕಾರ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ ರೈತರನ್ನು ಅವರ ಗುಲಾಮಗಿರಿಗೆ ದೂಡಲಿದೆ. ಇಂತಹ ಕಾಯ್ದೆಯನ್ನು ಬೆಂಬಲಿಸಲು ಸಾಧ್ಯವೇ?

2.ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆ:

ರೈತ ಹಿಡುವಳಿಗಳು ಸಣ್ಣದಾಗುತ್ತಿರುವಂತೆ ಕೃಷಿ ಲಾಭದಾಯಕವಾಗುವುದಿಲ್ಲ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಸಣ್ಣ ರೈತರು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಕಾಯ್ದೆ ತರಲು ಸರಕಾರ ಮುಂದಿಡುತ್ತಿರುವ ಕಾರಣ. ಆದರೆ ಕಾಂಟ್ರಾಕ್ಟ್ ಫಾರ್ಮಿಂಗ್ ಈ ಸಮಸ್ಯೆಗೆ ಪರಿಹಾರವೇ? ಮೋದಿ ಸರಕಾರ ತರುತ್ತಿರುವ ಎರಡನೇ ಮರಣ ಶಾಸನವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಶಾಸನದ ಮೂಲಕ ಸರಕಾರವು ರೈತರ ಹಿಡುವಳಿಗಳನ್ನು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅನುವು ಮಾಡಿಕೊಡುತ್ತದೆ. ಮಸೂದೆಯ ನಿಜವಾದ ಅರ್ಥವನ್ನು ಬಚ್ಚಿಡಲು ಅದಕ್ಕೆ The Farmers (Empowerment and Protection) Price Assurance and Farm services ಎಂಬ ಉದ್ದನೆಯ ಮತ್ತು ತಪ್ಪು ಅರ್ಥವನ್ನು ಕೊಡುವ ಹೆಸರನ್ನು ಮೋದಿ ಸರಕಾರ ಇಟ್ಟಿದೆ.

ಈ ಮಸೂದೆಯ ಪ್ರಕಾರ ರೈತಾಪಿ ಹಾಗೂ ದೊಡ್ಡ ಕಾರ್ಪೊರೇಟ್ ಕಂಪೆನಿಗಳು (ಸರಕಾರದ ಭಾಷೆಯಲ್ಲಿ ಹೇಳುವುದಾದರೆ Sponosores ಪ್ರಾಯೋಜಕರು ) ಬೆಲೆ, ಗುಣಮಟ್ಟ (quality, grade, and standard ) ಹಾಗೂ ಬೆಳೆಗಳ ಬಗ್ಗೆ ಪೂರ್ವಭಾವಿ ಒಪ್ಪಂದಕ್ಕೆ ಬರಬಹುದು ಹಾಗೂ ಆ ಒಪ್ಪಂದಗಳಿಗೆ ಸರಕಾರ ರೂಪಿಸಿರುವ ಚೌಕಟ್ಟು ರೈತರ ಪರವಾಗಿದೆ ಮತ್ತು ಅವರನ್ನು ಸಬಲೀಕರಿಸುವುದಕ್ಕೆ ಪೂರಕವಾಗಿದೆ ಎಂದು ಸರಕಾರದ ವಾದ. ಆದರೆ ಸರಕಾರದ ಈ ಭರವಸೆ ಎಷ್ಟು ಸುಳ್ಳು ಎಂಬುದನ್ನು ಆ ಮಸೂದೆಯ ಕೆಳಗಿನ ಮೂರು ಅಂಶಗಳನ್ನು ಮಾತ್ರ ನೋಡಿದರೂ ಅರ್ಥವಾಗುತ್ತದೆ.

ಮಸೂದೆಯ 4 ನೇ ಸೆಕ್ಷನ್‌ನ 2ನೇ ಸಬ್ ಕ್ಲಾಸಿನ ಪ್ರಕಾರ:
ರೈತಾಪಿ ಹಾಗೂ ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರಕಾರ ಅಥವಾ ಸರಕಾರದಿಂದ ಗುರುತಿಸಲ್ಪಟ್ಟ ‘ಸ್ವತಂತ್ರ’ ಏಜೆನ್ಸಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು ಮತ್ತು ಅದಕ್ಕೆ ಬದ್ಧವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ ಪರಿಶೀಲಿಸದೆ ಒಪ್ಪಿಕೊಂಡರೆ ಆ ನಂತರ ಸರಕನ್ನು ತಿರಸ್ಕರಿಸುವಂತಿಲ್ಲ ಎಂದರ್ಥ. ಕೊನೆಯ ಸಾಲಿನಲ್ಲಿ ರೈತಪರ ಧ್ವನಿ ಕಂಡು ಬಂದರೂ ಒಟ್ಟಾರೆ ತಾತ್ಪರ್ಯವೇನು? ಒಂದು ವೇಳೆ ಸರಕು ಸ್ವೀಕರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿದಾಗ ಒಪ್ಪಂದದ ಗುಣಮಟ್ಟಕ್ಕೆ ತಕ್ಕ ಹಾಗೆ ಸರಕಿಲ್ಲ ಎಂದರೆ ಡೆಲಿವರಿಯನ್ನು ತಿರಸ್ಕರಿಸಬಹುದು ಎನ್ನುವುದೇ ಈ ಸಬ್ ಕ್ಲಾಸಿನ ನಿಜವಾದ ತಾತ್ಪರ್ಯ.

ಆಗ ರೈತನಿಗೆ ಇರುವ ದಾರಿಗಳೇನು?
ಮಸೂದೆಯ 13 ಮತ್ತು 14 ನೇ ಸೆಕ್ಷನ್‌ನ ಪ್ರಕಾರ ಆಗ ರೈತ ತಾನು ಒಪ್ಪಂದ ಮಾಡಿಕೊಂಡ ಪ್ರಾಯೋಜಕ ದೈತ್ಯ ಕಂಪೆನಿಯ ಬಗ್ಗೆ ಆ ಪ್ರದೇಶದ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು. ಆಗ ತಹಶೀಲ್ದಾರ್ ಪ್ರಾಯೋಜಕ, ರೈತ ಹಾಗೂ ಮೂರನೇ ವ್ಯಕ್ತಿಗಳು ಇರುವ ಒಂದು ಸಂಧಾನ ಸಮಿತಿ ಮಾಡುತ್ತಾರೆ. ಅದು 30 ದಿನಗಳೊಳಗೆ ಸಂಧಾನ ಕ್ಕೆ ಬರಬೇಕು. ಅದು ಆಗದಿದ್ದಲ್ಲಿ ತಹಶೀಲ್ದಾರ್ ಮುಂದಿನ 30 ದಿನಗಳೊಳಗೆ ವ್ಯಾಜ್ಯ ಬಗೆಹರಿಸಬೇಕು. ಈ ತೀರ್ಮಾನವು ಸರಿ ಬರಲಿಲ್ಲವೆಂದರೆ ಡಿಸಿ ನೇತೃತ್ವದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದು. ಅದು ಮುಂದಿನ 30ದಿನಗಳಲ್ಲಿ ಏನು ತೀರ್ಮಾನ ಕೊಡುತ್ತದೋ ಅದು ಅಖೈರು. ಎಲ್ಲಸರಕಾರಗಳೂ ಮತ್ತು ಪಕ್ಷಗಳು ಬಹಿರಂಗವಾಗಿ ಮತ್ತು ಸ್ಪರ್ಧಾತ್ಮಕವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿಗೆ ಪರವಾದ ನೀತಿಗಳನ್ನು ಘೋಷಿಸುತ್ತಿರುವಾಗ, ಅವರಡಿ ಕೆಲಸ ಮಾಡುವ ಅಧಿಕಾರಿಗಳ ಕೋರ್ಟ್‌ಗಳು ಕಂಪೆನಿಗಳ ವಿರುದ್ಧ ಸೊಲ್ಲೆತ್ತಬಲ್ಲವೇ? ಜೊತೆಗೆ, ಈ ಇಡೀ ವ್ಯಾಜ್ಯದ ಅವಧಿಯಲ್ಲಿ ರೈತ ತನ್ನ ಸರಕನ್ನು ಬೇರೆಡೆ ಮಾರುವ ಹಾಗೂ ಇಲ್ಲ. ಸಂಗ್ರಹಿಸಿಟ್ಟುಕೊಳ್ಳಲು ಸಣ್ಣಪುಟ್ಟ ರೈತರಿಗೆ ಯಾವುದೇ ಸೌಕರ್ಯವೂ ಇರುವುದಿಲ್ಲ. ನೂರು ದಿನಗಳ ಕಾಲ ಬೆಳೆದ ಬೆಳೆಗೆ ಹಣ ದಕ್ಕಲಿಲ್ಲವೆಂದರೆ ರೈತರಿಗೆ ನೇಣು ಹಾಕಿಕೊಳ್ಳುವುದು ಬಿಟ್ಟು ಬೇರೆ ಪರ್ಯಾಯವು ಇರುವುದಿಲ್ಲ. ಮತ್ತೊಂದೆಡೆ ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ಕಂಪೆನಿಗಳಿಗೆ ಈ ವ್ಯಾಜ್ಯಗಳಿಂದ ಯಾವ ತೊಂದರೆಯೂ ಆಗುವುದಿಲ್ಲ. ವಾಸ್ತವದಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಗೆ ಸಹಕಾರಿ ಕೃಷಿ ಅಥವಾ ಅಂಬೇಡ್ಕರ್ ಹೇಳಿದಂತೆ ಕೃಷಿಯ ರಾಷ್ಟ್ರೀಕರಣ ನಿಜವಾದ ಪರಿಹಾರ. ಕೃಷಿಯ ಕಾರ್ಪೊರೇಟೀಕರಣವಲ್ಲ.

3. ಬೃಹತ್ ಕೃಷಿ ಕಂಪೆನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯ್ದೆ ಅರ್ಥಾತ್ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ. (Essential Commodities (Amendment) Act)

1955ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಾಗ ಅದರ ಹಿಂದಿದ್ದ ಉದ್ದೇಶ ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇನ್ನಿತ್ಯಾದಿ ಸರಕುಗಳನ್ನು ದೊಡ್ದದೊಡ್ದ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು, ಕಾಳಸಂತೆ ಹಾಗೂ ಕಳ್ಳದಂಧೆಯನ್ನು ಮಾಡುತ್ತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಬಾರದೆಂಬುದಾಗಿತ್ತು.

ಸರಕಾರದ ಪ್ರಕಾರ ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರಕಾರದ ಮಧ್ಯಪ್ರವೇಶದಿಂದಾಗಿ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕುತ್ತದೆ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಅಗ್ರಿ ಬಿಝಿನೆಸ್ ಕಂಪೆನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯ್ದೆ ಅವಕಾಶ ಕಲ್ಪಿಸಿಕೊಡುತ್ತದೆ. ಹಾಗಿದ್ದಲ್ಲಿ ದೊಡ್ಡ ದೊಡ್ಡ ಅಗ್ರಿ ಬಿಝಿನೆಸ್ ಕಂಪೆನಿಗಳು ಅಪಾರ ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವುದಿಲ್ಲವೇ? ಈ ಕಾಯ್ದೆಯ ಪ್ರಕಾರ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳ ಆದರೆ ಮಾತ್ರ ಹಾಗೂ ಯುದ್ಧ, ಬರ ಇನ್ನಿತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರಕಾರ ಮಧ್ಯಪ್ರವೇಶ ಮಾಡುತ್ತದಂತೆ!!

ಅಷ್ಟು ಮಾತ್ರವಲ್ಲ.. ಯುದ್ಧ, ಕ್ಷಾಮ ಬಂದಾಗಲೂ ಕೂಡ ಖಾಸಗಿ ಕಂಪೆನಿಗಳು ರಫ್ತಿಗಾಗಿ ಹಾಗೂ ಕೈಗಾರಿಕೋತ್ಪಾದನೆಗಾಗಿ ಮಾಡಿಕೊಂಡ ಸಂಗ್ರಹವನ್ನು ಮುಟ್ಟುವುದಿಲ್ಲ ಎಂಬ ಭರವಸೆಯನ್ನು ಈ ಕಾಯ್ದೆ ಖುಲ್ಲಂಖುಲ್ಲಾ ನೀಡುತ್ತದೆ. ಹೀಗೆ ಸಾರಾಂಶದಲ್ಲಿ ಈ ಮೂರೂ ಮಸೂದೆಗಳೂ ದೇಶದ ಹಿತಾಸಕ್ತಿಗಿಂತ, ಜನರ ಕಲ್ಯಾಣಕ್ಕಿಂತ ಅಗ್ರಿ ಬಿಝಿನೆಸ್ ಕಂಪೆನಿಗಳಿಗೆ ಅವಕಾಶ ಮಾಡಿಕೊಡುವ ದೇಶದ್ರೋಹಿ ಮಸೂದೆಗಳೇ ಆಗಿವೆ. ಹೊಟ್ಟೆಗೆ ಅನ್ನ ತಿನ್ನುವ ಯಾರೇ ಆದರೂ ಈ ಮಸೂದೆಯನ್ನು ಬೆಂಬಲಿಸಲು ಸಾಧ್ಯವೇ?..

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News