ಕುಸಿಯುತ್ತಿರುವ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ

Update: 2020-10-05 19:30 GMT

ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಸುಮಾರು ಶೇ. 13.8. ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 75 ಲಕ್ಷ ಮುಸ್ಲಿಮರಿದ್ದಾರೆ. ಆದರೆ, ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ಸರಕಾರದ ಆಡಳಿತದಲ್ಲಿ (ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ) ಅತ್ಯಂತ ಕಡಿಮೆ ಎನ್ನಬಹುದು.ರಾಜಕೀಯ ಪ್ರಾತಿನಿಧ್ಯ ರಾಜ್ಯದಲ್ಲಿ 2004ರವರೆಗೆ ಮುಸ್ಲಿಮ್ ಸಮುದಾಯದ ಎರಡು-ಮೂರು ಜನ ಲೋಕಸಭಾ ಸದಸ್ಯರು ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗುತ್ತ ಬಂದಿದ್ದಾರೆ. ಆದರೆ, 2004ರಿಂದ ಇಲ್ಲಿಯವರೆಗೆ ಒಬ್ಬರೂ ಮುಸ್ಲಿಮ್ ಸಮುದಾಯದಿಂದ ಲೋಕಸಭೆಗೆ ಆಯ್ಕೆಯಾಗಿಲ್ಲದಿರುವುದು ಇಂದಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಈಗಲೂ ಕಾಂಗ್ರೆಸ್ ಪಕ್ಷದ ನಾಯಕರು/ಕಾರ್ಯಕರ್ತರು ಪ್ರಾಮಾಣಿಕವಾಗಿ ತನ್ನ ಪಕ್ಷದ ಅಭ್ಯರ್ಥಿಗೆ ಕೆಲಸ ಮಾಡಿದರೆ ಖಂಡಿತವಾಗಿಯೂ ಎರಡು-ಮೂರು ಸೀಟುಗಳಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲ್ಲಬಹುದು. ಈ ಹಿಂದೆ ಕಲಬುರಗಿ, ಧಾರವಾಡ, ಬೆಂಗಳೂರು ನಗರ ಕ್ಷೇತ್ರಗಳಿಂದ ಮುಸ್ಲಿಮ್ ಅಭ್ಯರ್ಥಿಗಳು ಸತತವಾಗಿ ಗೆದ್ದಿರುವ ಇತಿಹಾಸವಿದೆ. ಬೆಂಗಳೂರು ನಗರದಿಂದ ಸಿ.ಕೆ.ಜಾಫರ್ ಷರೀಫ್ ಎಂಟು ಚುನಾವಣೆಗಳಲ್ಲಿ ಗೆದ್ದಿದ್ದಾರೆ, ಫಕ್ರುದ್ದೀನ್ ಮುಹಸಿನ್ ಅವರು 1962-84ರವರೆಗೆ ಐದು ಸಲ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ, ಅಲ್ಲದೇ 1984ರಲ್ಲಿ ಅಝೀಝ್ ಸೇಠ್ ಒಮ್ಮೆ, 1989, 1991ರಲ್ಲಿ ಬಿ.ಎಂ. ಮುಜಾಹಿದ್ ಎರಡು ಸಲ ಹಾಗೂ 1996, 98, 99ರಲ್ಲಿ ಐ.ಜಿ.ಸನದಿ ಮೂರು ಸಲ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಿಂದ 1996ರಲ್ಲಿ ಒಮ್ಮೆ ಖಮರುಲ್ ಇಸ್ಲಾಂ ಹಾಗೂ 1998, 99 ಎರಡು ಸಲ, ಇಕ್ಬಾಲ್ ಅಹ್ಮದ್ ಸರಡಗಿ ಎರಡು ಸಲ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದಿಂದ ಒಮ್ಮೆ ಎಸ್. ಟಿ. ಖಾದ್ರಿ 1980ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದಿಂದ ಶೌಕತುಲ್ಲಾ ಶಾ ಅನ್ಸಾರಿ ಇವರು 1952ರ ಚುನಾವಣೆಯಲ್ಲಿ ಒಮ್ಮೆ ಆಯ್ಕೆಯಾಗಿದ್ದಾರೆ. 1967ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಎನ್. ಎಂ. ನಬಿಸಾಬ ಒಮ್ಮೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 1957 ಹಾಗೂ 1967ರಲ್ಲಿ ಎರಡು ಸಲ ಜೆ.ಎಂ.ಇಮಾಮಸಾಬ ಇವರು ಆಯ್ಕೆಯಾಗಿದ್ದಾರೆ. ಈಗ ಕಳೆದ ಹಲವು ವರ್ಷಗಳಿಂದ ಒಬ್ಬರು ಮುಸ್ಲಿಮ್ ಅಭ್ಯರ್ಥಿಯೂ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿಲ್ಲ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕಾಡಿಬೇಡಿ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದೆ.

ಅದರಂತೆಯೇ ರಾಜ್ಯ ವಿಧಾನಸಭೆಗೆ ಹಂತ ಹಂತವಾಗಿ ಆಯ್ಕೆಯಾಗುವ ಮುಸ್ಲಿಮ್ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಬಂದಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಮುಸ್ಲಿಮ್ ಸದಸ್ಯರು ಇಲ್ಲವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ 2018ರ ವಿಧಾನ ಸಭೆ ಚುನಾವಣೆಯಲ್ಲಿ 17 (ರಾಜ್ಯದ ಒಟ್ಟು ವಿಧಾನಸಭೆ ಕ್ಷೇತ್ರದಲ್ಲಿ ಕೇವಲ ಶೇ 7.58 ಮಾತ್ರ) ಜನರಿಗೆ ಬಿ-ಫಾರಂ ನೀಡಲಾಗಿತ್ತು. ಅದರಲ್ಲಿ ಕೇವಲ 7 ಜನ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜಾತ್ಯತೀತ ಜನತಾದಳದಿಂದ ಬೆರಳೆಣಿಕೆಯೆಷ್ಟು ಜನರಿಗೆ ಬಿ-ಫಾರಂ ನೀಡಿದ್ದರೂ, ಯಾರೊಬ್ಬರೂ ಆಯ್ಕೆಯಾಗಿಲ್ಲ. 1978ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 22 ಜನ ಮುಸ್ಲಿಮ್ ಸಮುದಾಯದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಇಲ್ಲಿಯವರೆಗಿನ ಅತೀ ಹೆಚ್ಚು ಸಂಖ್ಯೆ ಎನ್ನಬಹುದು. ಮುಸ್ಲಿಮ್ ಸಮುದಾಯವನ್ನು ರಾಜಕೀಯ ಜಾತ್ಯತೀತ ಪಕ್ಷಗಳು ಮತಬ್ಯಾಂಕನ್ನಾಗಿ ಬಳಸಿ ಬಿಸಾಕುವ ಪ್ರವೃತ್ತಿ ಅಥವಾ ಸಮುದಾಯದಲ್ಲಿ ರಾಜಕೀಯ ಜಾಗೃತಿ, ಚಾಣಾಕ್ಷತನ ಇಲ್ಲದಿರುವುದು ರಾಜಕೀಯ ಪ್ರಾತಿನಿಧ್ಯ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯದಲ್ಲಿ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಶೇಕಡಾವಾರು ಹೆಚ್ಚಿರುವುದರಿಂದ ರಾಜಕೀಯ ಪಕ್ಷಗಳು ಅಂತಹ ಕೆಲವು ನಗರ ಪ್ರದೇಶಗಳಲ್ಲಿ ಮಾತ್ರ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಿವೆ. ಗಂಗಾವತಿ, ಕೂಡ್ಲಗಿ ಅಂತಹ ಗ್ರಾಮೀಣ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗುತ್ತ ಬಂದಿದ್ದಾರೆ. ಆದರೆ, ಇತ್ತೀಚೆಗೆ ಜಾತ್ಯತೀತ ಪಕ್ಷಗಳಲ್ಲಿ ಮುಸ್ಲಿಮೇತರ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದರೆ ಮುಸ್ಲಿಮರು ಅವರಿಗೆ ಮತಹಾಕಬೇಕು. ಯಾಕೆಂದರೆ ಅವರೆಲ್ಲರೂ ಜಾತ್ಯತೀತ ನಾಯಕರು. ಅದೇ ಜಾತ್ಯತೀತ ಪಕ್ಷಗಳಿಂದ ಮುಸ್ಲಿಮರು ಚುನಾವಣೆಗೆ ನಿಂತರೆ ಮುಸ್ಲಿಮೇತರರು ಮತಹಾಕುವುದಕ್ಕೆ ಹಿಂಜರಿಯುತ್ತಾರೆ, ಯಾಕೆಂದರೆ ಮುಸ್ಲಿಮ್ ಅಭ್ಯರ್ಥಿ ಅವರಿಗೆ ಕೋಮುವಾದಿಯಾಗುತ್ತಾನೆ. ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗುತ್ತ ಬಂದಿರುವುದರಿಂದ ಮುಸ್ಲಿಮ್ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣವೆಂದರೆ ತಪ್ಪಾಗಲಾರದು. ಕಾರಣ, ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರಿಗೆ ಜಾತ್ಯತೀತ ಶಬ್ದದ ಅರ್ಥವನ್ನೇ ಹೇಳಿಕೊಟ್ಟಿಲ್ಲ. ಕಾರ್ಯಕರ್ತರು ಅರ್ಥಮಾಡಿಕೊಂಡಿದ್ದೇನೆಂದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿ ಮುಸ್ಲಿಮನಾಗಿದ್ದರೆ ಕೋಮುವಾದಿ ಹಾಗೂ ಮುಸ್ಲಿಮೇತರ ಅಭ್ಯರ್ಥಿ ಸ್ಪರ್ಧಿಸಿದರೆ ಜಾತ್ಯತೀತ ಎನ್ನುವಂತಾಗಿದೆ. ಯಾವುದೇ ಸಮುದಾಯಕ್ಕೆ ರಾಜಕೀಯ ನಾಯಕತ್ವ ಗ್ರಾಮೀಣ ಭಾಗದಿಂದಲೇ ಅತೀ ಹೆಚ್ಚು ಬೆಳೆಯುವ ಅವಕಾಶವಿದೆ. ಆದರೆ, ಮುಸ್ಲಿಮ್ ಸಮುದಾಯ ನಗರ ಕೇಂದ್ರಿತ ನಿವಾಸಿಯಾಗಿರುವುದರಿಂದ ಅವರ ನಾಯಕತ್ವ ನಗರಸಭೆಗೆ ಮಾತ್ರ ಸಿಮೀತವಾದಂತಿದೆ. ಈ ಜಾತ್ಯತೀತ ಪಕ್ಷಗಳು ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಸ್ಲಿಮರಿಗೆ ಅವಕಾಶವನ್ನೇ ನೀಡುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್, ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒಬ್ಬರೇ ಒಬ್ಬರು ಜಿಲ್ಲಾ ಪಂಚಾಯತ್ ಸದಸ್ಯರು ಮುಸ್ಲಿಮ್ ಸಮುದಾಯದಿಂದ ಆಯ್ಕೆಯಾಗಿಲ್ಲ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತಲಾ ಒಬ್ಬರು ಸದಸ್ಯರಿದ್ದಾರೆ. ಅದೇ ರೀತಿ ತಾಲೂಕು ಪಂಚಾಯತ್ ಚುನಾವಣೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಭ್ರಮನಿರಸಗೊಂಡು ಪರ್ಯಾಯ ಜಾತ್ಯತೀತ ಪಕ್ಷದ ಕಡೆಗೆ ವಾಲಬಹುದು. ಈ ರೀತಿ ಕಾಂಗ್ರೆಸ್ ಹೊರತುಪಡಿಸಿದ ಜಾತ್ಯತೀತ ಪಕ್ಷಗಳಿರುವ ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ದಿಲ್ಲಿ ಹಾಗೂ ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷ ಹೊರತುಪಡಿಸಿದ ಜಾತ್ಯತೀತ ಪಕ್ಷಗಳ ಬೆನ್ನಿಗೆ ನಿಂತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕರ್ನಾಟಕ ರಾಜ್ಯದಲ್ಲಿಯೂ ಸಹ ಮುಸ್ಲಿಮರು ಕಾಂಗ್ರೆಸ್ ಹೊರತುಪಡಿಸಿದ ಜಾತ್ಯತೀತ ಪಕ್ಷದ ಜೊತೆಗೆ ಹೋಗಬಹುದು. ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರು ಸಂಪೂರ್ಣ ಬೆಂಬಲ ನೀಡಿರುವ ಇತಿಹಾಸವಿದೆ. ಎಚ್.ಡಿ.ಕುಮಾರಸ್ವಾಮಿ ಮಾಡಿರುವ ತಪ್ಪಿನಿಂದಾಗಿ ಜೆಡಿಎಸ್ ಪಕ್ಷವನ್ನು ನಂಬಲಾರದಂತಹ ಸ್ಥಿತಿಯಲ್ಲಿ ರಾಜ್ಯದ ಮುಸ್ಲಿಮರಿದ್ದಾರೆ.

ಈಗ ಅನಿವಾರ್ಯವಾಗಿ ಬಹುತೇಕ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುತ್ತಿದ್ದಾರೆ. ಆದರೆ ಅದು ಶಾಶ್ವತವಲ್ಲ ಎನ್ನುವುದು ಕಾಂಗ್ರೆಸ್ ನಾಯಕತ್ವ ತಿಳಿದುಕೊಳ್ಳಬೇಕಿದೆ. ಇನ್ನು ಮುಂದಾದರೂ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರಿಗೆ ಜಾತ್ಯತೀತ ತತ್ವದ ಕುರಿತು ತರಬೇತಿ ನೀಡಿ, ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿ ಕರೆದುಕೊಂಡು ಹೋಗುವ ಮನಸ್ಥಿತಿ ತಯಾರು ಮಾಡಬೇಕಿದೆ. ಕೊಡುಕೊಳ್ಳುವಿಕೆ ಇದ್ದಾಗ ಮಾತ್ರ ಇಬ್ಬರಿಗೂ ಲಾಭವಾಗುತ್ತದೆ, ಇಲ್ಲದೆ ಇದ್ದರೆ ಇಬ್ಬರಿಗೂ ನಷ್ಟ ಎನ್ನುವ ಸತ್ಯ ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಲಿ. ಅಂತಹ ವಾತಾವರಣ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬೆಳೆಸಲಿ, ಕುಸಿಯುತ್ತಿರುವ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಅವರ ಜನಸಂಖ್ಯೆಗನುಗುಣವಾಗಿ ಬೆಳೆಯಲಿ ಎಂದು ಆಶಿಸೋಣ.

Writer - ಡಾ. ರಝಾಕ್ ಉಸ್ತಾದ

contributor

Editor - ಡಾ. ರಝಾಕ್ ಉಸ್ತಾದ

contributor

Similar News