ಇಲ್ಲಿ ಯಾರೂ ಶುದ್ಧರಲ್ಲ, ಯಾರೂ ಅಶುದ್ಧರಲ್ಲ - ಡಿಎನ್‌ಎ ನುಡಿವ ಸತ್ಯ

Update: 2020-10-16 07:08 GMT

ಭಾಗ-1

ಅನೇಕ ವರ್ಗಗಳು ತಮ್ಮ ತಳಿಗಳೇ ಶುದ್ಧ ಮತ್ತು ಶ್ರೇಷ್ಠವೆಂದು ಹಾಗೂ ತಮ್ಮ ನಾಗರಿಕತೆಯೇ ಎಲ್ಲರಿಗಿಂತ ಮಿಗಿಲು ಮತ್ತು ಸನಾತನವೆಂದು ಹೇಳಿಕೊಂಡು ಓಡಾಡುತ್ತಿವೆ. ಇಂತಹ ಹುಸಿ ಗರ್ವವನ್ನು ಒಡೆದು ಸಂಶೋಧನೆಗಳ ಮೂಲಕ ನಿಜವನ್ನು ಜನರ ಮುಖಕ್ಕೆ ಹಿಡಿದು ತೋರಿಸುವ ಕೆಲಸವನ್ನು ತಳಿ ವಿಜ್ಞಾನ ತಣ್ಣಗೆ ಮಾಡುತ್ತಿದೆ. ಎಡಪಂಥೀಯರು ಭಾವಿಸಿದ ಹಾಗೆ ತಳಿವಿಜ್ಞಾನ ಇಂದು ಕೇವಲ ರೇಸ್ ಸೈನ್ಸ್ ಆಗಿಲ್ಲ. ಜಗತ್ತಿನ ಮನುಷ್ಯರೆಲ್ಲರೂ ಒಂದೇ ವೃಕ್ಷದ ವಿಶಿಷ್ಟ ಕವಲುಗಳು ಎಂಬ ಅನುಭಾವಿಗಳ ದರ್ಶನ ನೂರಕ್ಕೆ ನೂರು ನಿಜ ಎಂದು ಸಾರಿ ಹೇಳುತ್ತಿದೆ.

ಭಾರತದಲ್ಲಿ ಬಹಳ ಕಾಲದಿಂದಲೂ ಕೆಲವು ವರ್ಗಗಳ ಜನರು ಶ್ರೇಷ್ಠ ಮತ್ತು ನಿಕೃಷ್ಟ ಎಂಬ ಪ್ರಮೇಯಗಳನ್ನು ರೂಪಿಸಿ ಸಂಪತ್ತಿನ ವಾರಸುದಾರರಾಗಿದ್ದಾರೆ. ಕಿಪ್ಲಿಂಗ್ ವಸಾಹತುಗಳನ್ನು ಆಳುವುದು ಬ್ರಿಟಿಷರಿಗೆ ಹೊರೆಯೆಂದು ಹೇಗೆ ಹೇಳಿದನೋ ಹೆಚ್ಚೂ ಕಡಿಮೆ ಅದೇ ಥಿಯರಿಯನ್ನು ಭಾರತದ ದ್ವಿಜರು ಹೇಳುತ್ತಾ ಬಂದಿದ್ದಾರೆ. ಶೂದ್ರಾತಿಶೂದ್ರರಿಗೆ ನಾಗರಿಕತೆಯನ್ನು ಕಲಿಸುವುದು ನಮ್ಮ ಕರ್ಮ ಎಂದು ಅವರು ನಂಬಿಕೊಂಡ ಹಾಗೆ ಕಾಣಿಸುತ್ತದೆ. ರಕ್ತ ಶುದ್ಧತೆ, ಜ್ಞಾನದ ಮೇಲಿನ ಯಜಮಾನಿಕೆ, ಆಹಾರ ಪದ್ಧತಿ, ವಿವಾಹ ನಿಯಮಗಳು, ಹಲವು ವಿಧಿ ನಿಷೇಧಗಳು ಮುಂತಾದ ವಿಷಯಗಳನ್ನು ಮುಂದು ಮಾಡಿ ತಾರತಮ್ಯವನ್ನು ನಿಯಮಬದ್ಧಗೊಳಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಕಾರ ಯುದ್ಧದಲ್ಲಿ ಸೋತವರು ತಳಮಟ್ಟಕ್ಕೆ ಸೇರಿ ಹೋದರು. ಯುದ್ಧ ರಕ್ತಪಾತದಿಂದಲೂ ಕೂಡಿತ್ತು. ಅದಕ್ಕೂ ಮಿಗಿಲಾಗಿ ಮನುಷ್ಯರ ಸಾಂಸ್ಕೃತಿಕ ಮನಸ್ಸಿನ ಮೇಲೆ ಸಾರಿದ್ದ ಯುದ್ಧ ಭೌತಿಕ ಯುದ್ಧಕ್ಕಿಂತ ಭೀಕರವಾಗಿತ್ತು. ಸಾಂಸ್ಕೃತಿಕ ಪದ್ಧತಿ, ಆಹಾರ ಪದ್ಧತಿ, ವೃತ್ತಿ ನಿಯಮ ಮುಂತಾದವುಗಳನ್ನು ಬಿಡಲು ಒಪ್ಪದವರು ಹಿಂದೆಯೇ ಉಳಿದು ಬಿಟ್ಟರು. ಅವರನ್ನು ಸಾಮಾಜಿಕ ವ್ಯವಸ್ಥೆಯ ಹೈರಾರ್ಕಿಯಲ್ಲಿ ಪಾದದಿಂದಲೂ ಕೆಳಕ್ಕೆ ತುಳಿಯಲಾಯಿತು. ಬದಲಾದ ಕೆಲವರು ಮೇಲಿನ ಸ್ತರಕ್ಕೂ ಏರಿ ಹೋದರು. ಅಂದರೆ ತಳಜಾತಿಗಳ ಪ್ರಕಾರ ಕೆಟ್ಟವರು ಉದ್ಧಾರವಾದರು. ವೃತ್ತಿಮೂಲ ಹಿಡಿದು ಕೂತವರು ನಶಿಸಿ ಹೋಗತೊಡಗಿದರು. ನೆಲೆ ನಿಂತ ಸಮುದಾಯಗಳ ಏಳಿಗೆಗೆ ಬೇಕಾದ ಸೇವೆಗಳನ್ನು ಸಲ್ಲಿಸುತ್ತಿದ್ದವರು, ವಸ್ತುಗಳನ್ನು ನಿರ್ಮಿಸಿಕೊಡುತ್ತಿದ್ದವರು ಎಡಗೈ ಜಾತಿಗಳಿಗೆ ಸೇರಿದವರಾದರು. ಹಾಗಾಗಿ ಎಲ್ಲ ಸಮುದಾಯಗಳಲ್ಲೂ ಇಂದು ಎಡಗೈ ಬಲಗೈ ಜಾತಿಗಳಿವೆ. ಸೇವೆ ಪಡೆದವರು ಉತ್ತಮ ಕುಲದವರು ಎನ್ನಿಸಿಕೊಂಡರು. ಪಶುಪಾಲಕರು ಮುಂತಾದ ಜಾತಿಗಳು ಅತ್ತಲೂ ಇಲ್ಲದೆ ಇತ್ತಲೂ ಇಲ್ಲದೆ ನಡುವೆಯೇ ಕೂತರು. ಅರಣ್ಯ ವಾಸಿಗಳು ಜಾತಿ ವ್ಯವಸ್ಥೆಯ ಹೊರಗೆ ಕೂತರು. ಜಾತಿ ವ್ಯವಸ್ಥೆ ಒಳಗೆ ಬರಬೇಕಾದರೆ ತಳಸ್ತರದಲ್ಲಿರಬೇಕು ಎಂಬ ನಿಯಮ ಹೇರಲಾಯಿತು. ಮಾನವಶಾಸ್ತ್ರೀಯ ಅಧ್ಯಯನಗಳಲ್ಲಿ ಇದಕ್ಕೆ ಅಪವಾದಗಳೂ ಇವೆ. ಆದರೆ ಸಂಖ್ಯೆ ಮಾತ್ರ ನಗಣ್ಯ.

ಹಾಗಿದ್ದರೆ ನೂರಾರು ವರ್ಷಗಳಿಂದ ರಕ್ತಶುದ್ಧತೆ, ಜಾತಿ ಶುದ್ಧತೆಯ ವಿಚಾರದಲ್ಲಿ ಪ್ರತಿಪಾದಿಸಿಕೊಂಡು ಬಂದಿರುವ ಸಂಗತಿಗಳ ಕುರಿತು ಡಿಎನ್‌ಎ ಅಧ್ಯಯನಗಳು ಏನು ಹೇಳುತ್ತವೆ? ಡೇವಿಡ್ ರೈಖ್, ಲಾಲ್‌ಜಿ ಸಿಂಗ್, ತಂಗರಾಜು ಮುಂತಾದವರ ತಂಡದ ಸಂಶೋಧನೆಗಳ ಪ್ರಕಾರ ಇಂದು ಯಾವ ಜಾತಿ, ಬುಡಕಟ್ಟುಗಳೂ ಸಹ ತಳಿ ಶುದ್ಧವಾಗಿಲ್ಲ. ಹಾಗಿದ್ದರೆ ಮಿಶ್ರಣ ಯಾವಾಗಿನಿಂದ ಪ್ರಾರಂಭವಾಗಿದೆ? ಯಾರು ಯಾರೊಂದಿಗೆ ಮಿಶ್ರಣವಾಗಿದ್ದಾರೆ. ಮಿಶ್ರಣವಾಗಿದ್ದಾರೆಂದು ಹೇಗೆ ಪತ್ತೆ ಹಚ್ಚುವುದು? ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕು ಎಂದು ಜನರು ಯಾವಾಗಿನಿಂದ ಭಾವಿಸಹತ್ತಿದರು? ಎಂಬೆಲ್ಲ ಪ್ರಶ್ನೆಗಳು ಹುಟ್ಟುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ನಿಖರ ಉತ್ತರ ಕಂಡುಕೊಳ್ಳಲು ರೈಖ್ ಮತ್ತು ಭಾರತೀಯ ವಿಜ್ಞಾನಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಮೂಲ ವಿಜ್ಞಾನ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳ ನಂತರ ತಳಿವಿಜ್ಞಾನದಲ್ಲಿ ಭಾರತ ಮೂಲದ ವಿಜ್ಞಾನಿಗಳು ಜಗತ್ತು ಗುರುತಿಸುವಷ್ಟು ಹೆಸರು ಮಾಡುತ್ತಿದ್ದಾರೆ. ತಂಗರಾಜು ಮತ್ತು ಸಿಂಗ್ ಅವರು ರೈಖ್ ಅವರ ನೆರವಿನೊಂದಿಗೆ ಹೈದರಾಬಾದಿನ ಸಿಸಿಎಂಬಿಯ (ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯುಲರ್ ಬಯಾಲಜಿ) ಮೂಲಕ ಭಾಷಿಕ, ಭೌಗೋಳಿಕ, ಸಾಂಸ್ಕೃತಿಕವಾಗಿ ಸ್ಪಷ್ಟ ವ್ಯತ್ಯಾಸಗಳಿರುವ 25 ಗುಂಪುಗಳನ್ನು ದೇಶದುದ್ದಗಲಕ್ಕೂ ಆರಿಸಿ ಸುಮಾರು 18 ಸಾವಿರ ಡಿಎನ್‌ಎ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದಾರೆ.

ರೈಖ್ ಹೇಳುವಂತೆ, ಭಾರತದ ಜನರ ಇತಿಹಾಸವನ್ನು ಪ್ರಾಥಮಿಕವಾಗಿ ಗ್ರಹಿಸುವ ನಿಟ್ಟಿನಲ್ಲಿ ಆಧುನಿಕ ಮನುಷ್ಯರು ಮತ್ತು ನಿಯಾಂಡರ್ತಾಲ್ ಮನುಷ್ಯರ ನಡುವೆ ಸಂಕರಗಳು ನಡೆದಿವೆಯೇ? ನಡೆದಿದ್ದರೆ ಯಾವ ಪ್ರಮಾಣದಲ್ಲಿ ನಡೆದಿವೆ? ಎಂಬ ಅಂಶವನ್ನು ರೆಫರೆನ್ಸ್ ಪಾಯಿಂಟಾಗಿ ಇಟ್ಟುಕೊಂಡು 2010ರಿಂದಲೇ ಅಧ್ಯಯನ ಪ್ರಾರಂಭಿಸಲಾಗಿದೆ. ಇದರ ಆಧಾರದ ಮೇಲೆ ಹಲವು ಹೈಪೊಥಿಸೀಸ್ ಗಳನ್ನು ಮಾಡಲಾಗಿದೆ.

 ಮೊದಲನೆಯದು, ಯುರೋಪು ಮತ್ತು ಭಾರತೀಯರು ಪೂರ್ವ ಏಶ್ಯ ಹಾಗೂ ಹಾನ್ ಚೈನೀಯರಿಂದ ಬೇರ್ಪಟ್ಟವರೇ? ಎಂಬುದಾಗಿದೆ. ಪ್ರಾಚೀನ ಭಾರತೀಯರ ಡಿಎನ್‌ಎ ಚೀನಾದ ಡಿಎನ್‌ಎ ಜೊತೆ ತಾಳೆಯಾಗುತ್ತದೆ. ಬದಲಾಗಿ ಯುರೋಪಿಯನ್ನರ ಜೊತೆ ತಾಳೆಯಾಗುವುದಿಲ್ಲ. ಹಾಗಾಗಿ ಈ ವಾದ ನಿಲ್ಲುವುದಿಲ್ಲ.

ಎರಡನೆಯದು, ಚೀನಿಯರು ಮತ್ತು ಭಾರತೀಯರು ಯುರೋಪಿನ ಪ್ರಾಚೀನ ಪೂರ್ವಿಕರಿಂದ ಕವಲೊಡೆದವರೇ ಎಂದರೆ ಅದೂ ಇಲ್ಲ. ಯುರೋಪಿಯನ್ನರ ಜಿನೋಮಿಗೆ ಭಾರತೀಯರ ಜಿನೋಮು ಹೆಚ್ಚು ತಾಳೆಯಾಗುತ್ತದೆ. ಆದರೆ ಚೀನಿಯರು ಮತ್ತು ಯುರೋಪಿಯನ್ನರವು ತಾಳೆಯಾಗಲಿಲ್ಲ. ಇದರ ಆಧಾರದ ಮೇಲೆ ಅಧ್ಯಯನ ನಡೆಸುತ್ತಾ ಹೋಗಲಾಗಿದೆ. ಯುರೋಪಿಯನ್ನರು, ಮಧ್ಯ ಏಷಿಯನ್ನರು, ಯುರೋಪಿಗೆ ಸಮೀಪದ ಪೂರ್ವದ ಜನರು ಒಂದೇ ಮೂಲದವರು ಎಂಬುದು ದೃಢವಾದರೆ, ಪೂರ್ವ ಏಷಿಯಾದ ಜನರು ಯುರೇಷಿಯಾದ ಜನರಿಗಿಂತ ಭಿನ್ನವಾದ ಮೂಲದಿಂದ ವಿಕಾಸವಾಗಿದ್ದಾರೆ ಎಂಬುದು ದೃಢಪಟ್ಟಿದೆ. ಅದರಂತೆ ಇಂದಿನ ಚೀನಾದ ಜನರು ಮತ್ತು ಪೂರ್ವ ಏಷಿಯನ್ನರು ಒಂದೇ ಮರದ ಕವಲುಗಳು ಎಂಬುದು ದೃಢಪಟ್ಟಿದೆ.

ಇದಕ್ಕೆ ರೆಫರೆನ್ಸ್ ಪಾಯಿಂಟ್ ಆಗಿ ದೊಡ್ಡ ಮಟ್ಟದ ಸಹಾಯ ಮಾಡಿರುವುದು ಅಂಡಮಾನಿನ ಬುಡಕಟ್ಟು ಜನರು. ಮುಖ್ಯ ಭೂಮಿಯಿಂದ ನೂರಾರು ಮೈಲಿ ದೂರದಲ್ಲಿರುವ ನೀಗ್ರೋ ಸ್ವರೂಪದ ಈ ಜನರು ತಮ್ಮ ಒಡಲಿನಲ್ಲಿ ಸಾವಿರಾರು ವರ್ಷಗಳ ಭಾರತದ ಜನರ ಚರಿತ್ರೆಯನ್ನು ಹೊತ್ತುಕೊಂಡು ಓಡಾಡುತ್ತಿದ್ದಾರೆ.

ಸುಮಾರು ಹದಿನೈದು ವರ್ಷಗಳ ದೀರ್ಘ ಸಂಶೋಧನೆಯ ನಂತರ ಈ ಎಲ್ಲ ತಳಿವಿಜ್ಞಾನಿಗಳು ಭಾರತ ಮತ್ತು ಯುರೋಪಿನ ಜನರ ತಳಿ ನಕಾಶೆಯನ್ನು ರೂಪಿಸಿದ್ದಾರೆ. ಈ ಪ್ರಯತ್ನದಲ್ಲಿ ಎರಡೂ ಖಂಡಗಳ ತುಸು ಮಟ್ಟಿಗೆ ಇಡೀ ಜಗತ್ತಿನ ಜನರ ತಳಿ ನಕಾಶೆ ಸಿದ್ಧಗೊಂಡಿದೆ. ಭಾರತದ ಜನರಲ್ಲಿ ಮೂರು ಪ್ರಧಾನ ಗುಂಪುಗಳಿವೆ. ದಕ್ಷಿಣ ಭಾರತದ ಪೂರ್ವಿಕರು (ಎಎಸ್‌ಐ), ಉತ್ತರ ಭಾರತದ ಪೂರ್ವಿಕರು (ಎಎನ್‌ಐ) ಮತ್ತು ಅಂಡಮಾನಿಗರು. ದಕ್ಷಿಣ ಭಾರತೀಯರ ಜಿನೋಮ್ ಅಂಡಮಾನಿಗರೊಂದಿಗೆ ಶೇ.75ರಷ್ಟು ತಾಳೆಯಾಗುವುದರಿಂದ, ಅದೇ ಮೂಲದಿಂದ ಕವಲೊಡೆದ ದಾಖಲೆಗಳು ಸಿಗುವುದರಿಂದ ಅದನ್ನು ಸದ್ಯಕ್ಕೆ ಪಕ್ಕಕ್ಕೆ ಇಡಬಹುದು. ಹಾಗೆ ಮಾಡಿದ ಮೇಲೆ ಎಎಸ್‌ಐ ಮತ್ತು ಎಎನ್‌ಐ ಗುಂಪುಗಳ ಕತೆ ಏನು ಎಂದು ನೋಡಬಹುದು. ಭಾರತದಲ್ಲಿ ಮನುಷ್ಯರು ವಾಸಿಸಿದ್ದ ಕುರುಹುಗಳು ಮೂರುಲಕ್ಷವರ್ಷಗಳಷ್ಟು ಹಿಂದಕ್ಕೆ ಹೋದರೂ ಈಗ ಸಿದ್ಧಗೊಂಡಿರುವ ಜಿನೋಮಿನ ಪ್ರಕಾರ 65 ಸಾವಿರ ವರ್ಷಗಳಿಂದ ಈಚೆಗಿನ ಜನರ ಜೈವಿಕ ದಾಖಲೆಗಳೇ ಮುಖ್ಯವಾದವುಗಳು. 65 ಸಾವಿರ ವರ್ಷಗಳ ಆಸುಪಾಸಿನಲ್ಲಿ ಆಫ್ರಿಕಾದಿಂದ ಕಡೆಯ ಅಲೆಯಾಗಿ ಜನರು ಭಾರತಕ್ಕೆ ಬಂದಿದ್ದಾರೆ. ಡಿಎನ್‌ಎ ನಕಾಶೆಯ ಪ್ರಕಾರ 65 ಸಾವಿರ ವರ್ಷಗಳಿಂದ ಸುಮಾರು 10 ಸಾವಿರ ವರ್ಷಗಳ ಹಿಂದಿನ ಅವಧಿಯವರೆಗೆ ವಲಸೆಗಳಿರಲಿಲ್ಲ. ಹೆಚ್ಚು ಸಂಘರ್ಷಗಳಿಲ್ಲದಿದ್ದಾಗ ನಾಗರಿಕತೆಯ ಹೊಸ ಸಾಧ್ಯತೆಗಳು ಪ್ರಾರಂಭವಾದ ಹಾಗೆ ಕಾಣಿಸುತ್ತವೆ. ಬೇಟೆ ಮತ್ತು ಸಂಗ್ರಹಣೆಗಳು ಪ್ರಧಾನ ವೃತ್ತಿಯನ್ನಾಗಿಸಿಕೊಂಡಿದ್ದ ಈ ಜನರು ಕಾಲಾ ನಂತರದಲ್ಲಿ ವಿಕಾಸಗೊಂಡು ಸಿಂಧೂವಿನಂತಹ ಬೃಹತ್ತಾದ, ಜಗತ್ತು ನಿಬ್ಬೆರಗಾಗಿ ನೋಡುವ ನಗರ ನಾಗರಿಕತೆಗಳನ್ನು ಕಟ್ಟಿ ಬೆಳೆಸಿದರು. ಹಲವು ಶಿಸ್ತುಗಳ ವಿದ್ವಾಂಸರ ಪ್ರಕಾರ ದೇವರನ್ನು ಭೌತಿಕ ಸಂಕೇತಗಳಲ್ಲಿ ಕಲ್ಪಿಸಿಕೊಂಡು, ಸಂಕೇತಗಳನ್ನು ರೂಪಿಸಿ ಆಚರಿಸುವುದು ನಾಗರಿಕತೆಯೊಂದು ಹರಳುಗಟ್ಟಿದಾಗ ಮಾತ್ರ. ಅದು ಸಿಂಧೂ ನಾಗರಿಕತೆಯಲ್ಲಿ ಸಾಧ್ಯವಾಗಿತ್ತು.

ಆಫ್ರಿಕಾದಿಂದ ಬಂದ ಜನರ ವಂಶಸ್ಥರು ಈಗಲೂ ಅಂಡಮಾನಿನ ಕಾಡುಗಳಲ್ಲಿದ್ದಾರೆ. ಕೆಲವೇ ನೂರು ಜನರಿರುವ ಓಂಗೆ, ಜರವಾಗಳು ಬೇಟೆ, ಸಂಗ್ರಹಣೆಗಳಂತಹ ಆದಿಮ ಜೀವನ ಕ್ರಮದಿಂದ ಆಚೆಗೆ ಬರುತ್ತಿಲ್ಲ. ಜೀವನ ಕ್ರಮವನ್ನುಬದಲಾಯಿಸಿಕೊಳ್ಳಲಾಗದ ಜನ ಸಮೂಹಗಳು ಉಳಿದು ಬಾಳಲಾಗದ ಒತ್ತಡ ನಿರ್ಮಾಣವಾಗಿರುವುದು ಆಧುನಿಕತೆಯ ಭೀಕರ ಕ್ರೌರ್ಯ. ಆದರೆ ಆಧುನಿಕತೆಯ ಎಲ್ಲ ಸವಲತ್ತುಗಳನ್ನು ಮುಕ್ಕುತ್ತಿರುವ ಭಾರತದ ಒಂದು ವರ್ಗ ಪದೇ ಪದೇ ನಾಸ್ಟಾಲ್ಜಿಯಾದ ಅಪೀಮನ್ನು ಜನರಿಗೆ ತಿನ್ನಿಸುತ್ತಾ ಭೂತದಲ್ಲಿ ಬದುಕಲು ಜನರನ್ನು ಪ್ರೇರೇಪಿಸುತ್ತಿದೆ. ಇದು ಎರಡು ಸಾವಿರ ವರ್ಷಗಳ ಹಿಂದಿನಿಂದಲೇ ಪ್ರಾರಂಭವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲಾಗದ ಅಮಾಯಕರೂ ಹುಂಬರೂ ಆದ ಉಳಿದ ವರ್ಗಗಳ ಹುಡುಗರು ದೀಪಕ್ಕೆ ಪತಂಗ ಮೋಹಗೊಂಡು ನಾಶವಾಗುವಂತೆ ಉದುರಿ ಹೋಗುತ್ತಿದ್ದಾರೆ. ಜನರನ್ನು ಭೂತಕಾಲದ ನಶೆಯಲ್ಲಿ ಮುಳುಗಿಸಿ ನಾಳೆಗಳ ಬಗ್ಗೆ ಯೋಚಿಸಿ, ನಾಳೆಗಳಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಎಲ್ಲರಿಗಿಂತ ಮೊದಲೇ ಕಬ್ಜಾ ಮಾಡಿಕೊಳ್ಳುವ ದುಷ್ಟ ಅವಕಾಶವಾದಿ ಜನರು ಭಾರತದಲ್ಲಿ ಮಾತ್ರವೇ ಅಲ್ಲ, ಬಹಳ ದೇಶಗಳಲ್ಲಿ ಇವರ ಸಂತತಿ ಇದೆ. ಮಕ್ಕಳ ಕೈಗೆ ಬಾಂಬು, ಬಂದೂಕುಗಳನ್ನು ಹೊರಿಸಿರುವವರು ಇದೇ ಸಂತತಿಯವರು. ಮಕ್ಕಳು, ಯುವಕರು ಬುದ್ಧಿಹೀನರಾಗಿ ಅಥವಾ ಕಸಿಮಾಡಿದ ಮೆದುಳನ್ನು ಹೊತ್ತುಕೊಂಡು ಬೆಳೆಯುತ್ತಿದ್ದರೆ ಇವರು ಮಾತ್ರ ಅನ್ಯಗ್ರಹಗಳಲ್ಲಿ ಉಪನಗರಗಳನ್ನು ನಿರ್ಮಿಸುವ ಉಮೇದಿನಲ್ಲಿದ್ದಾರೆ. ನಮ್ಮ ಯುವಕರು ದೇಶ ರಾಷ್ಟ್ರಗಳ, ಜಾತಿ ಧರ್ಮಗಳ ಶ್ರೇಷ್ಠತೆಯ ಭೀಕರ ಕಾಯಿಲೆ ಅಂಟಿಸಿಕೊಂಡು ಮನುಕುಲದ ನಾಶಕ್ಕೆ ಬೇಕಾದ ಬತ್ತಿಯನ್ನು ಹೊಸೆಯುತ್ತಾ ಕೂತಿದ್ದಾರೆ.

 ಅನೇಕ ವರ್ಗಗಳು ತಮ್ಮ ತಳಿಗಳೇ ಶುದ್ಧ ಮತ್ತು ಶ್ರೇಷ್ಠವೆಂದು ಹಾಗೂ ತಮ್ಮ ನಾಗರಿಕತೆಯೇ ಎಲ್ಲರಿಗಿಂತ ಮಿಗಿಲು ಮತ್ತು ಸನಾತನವೆಂದು ಹೇಳಿಕೊಂಡು ಓಡಾಡುತ್ತಿವೆ. ಇಂತಹ ಹುಸಿ ಗರ್ವವನ್ನು ಒಡೆದು ಸಂಶೋಧನೆಗಳ ಮೂಲಕ ನಿಜವನ್ನು ಜನರ ಮುಖಕ್ಕೆ ಹಿಡಿದು ತೋರಿಸುವ ಕೆಲಸವನ್ನು ತಳಿ ವಿಜ್ಞಾನ ತಣ್ಣಗೆ ಮಾಡುತ್ತಿದೆ. ಎಡಪಂಥೀಯರು ಭಾವಿಸಿದ ಹಾಗೆ ತಳಿವಿಜ್ಞಾನ ಇಂದು ಕೇವಲ ರೇಸ್ ಸೈನ್ಸ್ ಆಗಿಲ್ಲ. ಜಗತ್ತಿನ ಮನುಷ್ಯರೆಲ್ಲರೂ ಒಂದೇ ವೃಕ್ಷದ ವಿಶಿಷ್ಟ ಕವಲುಗಳು ಎಂಬ ಅನುಭಾವಿಗಳ ದರ್ಶನ ನೂರಕ್ಕೆ ನೂರು ನಿಜ ಎಂದು ಸಾರಿ ಹೇಳುತ್ತಿದೆ. ಅಷ್ಟೆ ಅಲ್ಲ ಮನುಷ್ಯನೊಳಗಿರುವ ಡಿಎನ್‌ಎಗಳಲ್ಲಿ ಶೇ. 50ರಷ್ಟು ಸೀಬೆಹಣ್ಣಿನೊಳಗೂ ಇವೆ. ಅಂದರೆ ಈ ಸೌರಮಂಡಲದ ಚರಾಚರವಸ್ತುಗಳೆಲ್ಲ ಒಂದೇ ಮೂಲದವು ಎಂಬ ಪ್ರಮೇಯ ಮಂಡಿಸಿದ ಡಾರ್ವಿನ್, ಐನ್‌ಸ್ಟೈನ್ ಮುಂತಾದ ವಿಜ್ಞಾನಿಗಳ ಪ್ರಮೇಯವನ್ನು ನಿಜ ಎಂದು ಲ್ಯಾಬೊರೇಟರಿಗಳ ಮೂಲಕ ತಳಿವಿಜ್ಞಾನ ಸಾಧಿಸಿ ತೋರಿಸುತ್ತಿದೆ.

ಪದೇ ಪದೇ ಜಿನೋಮ್ ಎಂಬ ಪದ ಬಳಕೆಯಾಗುತ್ತಿದೆಯಲ್ಲ ಏನು ಹಾಗೆಂದರೆ? ಮನುಷ್ಯರಲ್ಲಿ ಒಟ್ಟು 23 ಜೊತೆ ಕ್ರೋಮೋಸೋಮುಗಳಿವೆ. ಅವುಗಳಲ್ಲಿ 22 ಜೋಡಿಗಳು ನಮ್ಮೋಳಗೆ ಸಮಾನವಾಗಿರುತ್ತವೆ ಅವನ್ನು ಆಟೋಸೋಮುಗಳು ಎಂದು ಕರೆಯಲಾಗುತ್ತದೆ. 23 ನೇ ಜೋಡಿಯಿದೆಯಲ್ಲ ಅದು ನಾವು ಗಂಡಾಗಬೇಕೋ ಇಲ್ಲ ಹೆಣ್ಣಾಗಬೇಕೋ ಎಂದು ನಿರ್ಧರಿಸುತ್ತದೆ. ಎಕ್ಸ್, ವೈ ಕ್ರೋಮೋಸೋಮು ಎಂದು ಕರೆಯುವುದು ಇದನ್ನೇ. ಹಾಗೆಯೇ ನಮ್ಮೋಳಗೆ ಸುಮಾರು 35ರಿಂದ 40ಸಾವಿರ ಜೀನುಗಳಿವೆ. ಅವು ಡಿಎನ್‌ಎಗಳಿಂದ ರೂಪುಗೊಂಡಿರುತ್ತವೆ. ಮೊದಲೇ ಹೇಳಿದ ಹಾಗೆ ನಮ್ಮಲ್ಲಿ 300 ಕೋಟಿ ಡಿಎನ್‌ಎಗಳಿವೆ. ಈ ಡಿಎನ್‌ಎ ಮಾಲಿಕ್ಯೂಲುಗಳು, ನಮ್ಮ ವರ್ತನೆಗಳನ್ನು, ಆನುವಂಶಿಕತೆಯನ್ನು, ರೋಗಗಳನ್ನು, ಆರೋಗ್ಯವನ್ನು ಪೂರ್ವಿಕರಿಂದ ಹೊತ್ತು ವರ್ಗಾಯಿಸುತ್ತಿರುತ್ತವೆ. ಇವು ಲಕ್ಷಾಂತರ ವರ್ಷಗಳ ಡಿಜಿಟಲ್ ಲೈಬ್ರರಿಯಂತೆ ನಮ್ಮಿಳಗೆ ಹುದುಗಿ ಕೂತಿವೆ. ಇದನ್ನು ತಿರುಚಲಾಗದು ಮತ್ತು ಅಳಿಸಲಾಗದು. ಹಾಗಾಗಿ ಅಳಿಸಲಾಗದ ಲಿಪಿಗಳಂತೆ ನಮ್ಮಿಳಗಿವೆ. ಆದರೆ ಕೃತಕ ಅಂಗಾಂಗಗಳ ಸೃಷ್ಟಿ ಮತ್ತು ಅಳವಡಿಕೆ ಮುಂತಾದ ಚಟುವಟಿಕೆಗಳು ಈ ಅಕ್ಷರ ತಿದ್ದುವ ಕೆಲಸವನ್ನು ಮಾಡಲಾರಂಭಿಸಿವೆ. ಹಾಗೆಯೇ ಕೃತಕ ಭ್ರೂಣಗಳು. ಡಾಲಿ ಎಂಬ ಕ್ಲೋನಿಂಗ್ ವಿಧಾನದ ಕುರಿಯ ಸೃಷ್ಟಿ ಇದಕ್ಕೆ ಅತ್ಯುತ್ತಮ ಉದಾಹರಣೆ.

ನಮಗೆ ಏನು ಬಳುವಳಿಯಾಗಿ ಬರದಿದ್ದರೂ ಅಜ್ಜ ಅಜ್ಜಿ, ಅಪ್ಪಅಮ್ಮಂದಿರ ಗುಣ ಸ್ವಭಾವ, ಆರೋಗ್ಯ, ಅನಾರೋಗ್ಯಗಳು ಬೇಡವೆಂದರೂ ಬೆಂಬಿಡದೆ ಈ ಡಿಎನ್‌ಎಗಳ ಮೂಲಕ ಬರುತ್ತವೆ. ಈ ಡಿಎನ್‌ಎಗಳಿಂ ರೂಪುಗೊಳ್ಳುವ ಜೀನುಗಳು ವ್ಯಕ್ತ, ಅವ್ಯಕ್ತ ರೂಪದಲ್ಲಿರುತ್ತವೆ. ಇವುಗಳನ್ನು ಸ್ವಿಚ್ ಆನ್ ಅಥವಾ ಸ್ವಿಚ್ ಆಫ್ ಮಾಡಲು ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಕೊಂಬಿಲ್ಲದ, ಹೆಚ್ಚು ಹಾಲುಕೊಡುವ ಹಸುವಿನ ಸೃಷ್ಟಿಯಾಗಿದ್ದು ಹೀಗೆಯೇ. ವಿಜ್ಞಾನಿಗಳು ಕೊಂಬಿನ ಹುಟ್ಟಿಗೆ ಕಾರಣವಾಗುವ ಜೀನುಗಳನ್ನು ಸ್ವಿಚ್ ಆಫ್ ಮಾಡಿದರು, ಹಾಲು ಹೆಚ್ಚಿಸುವ ಜೀನುಗಳ ಸ್ವಿಚ್ ಆನ್ ಮಾಡಿದರು. ಇದು ತಪ್ಪೆಸರಿಯೇ ಎಂಬ ವಾದದ ಹಾದಿ ಬೇರೆ. ಅದು ಇನ್ನೊಂದು ದೀರ್ಘ ಕಥನವಾಗುತ್ತದೆ. ಈಗ ಜೀನ್ ಎಡಿಟಿಂಗ್ ಎಂಬ ಜೈವಿಕ ವೈಜ್ಞಾನಿಕ ತಂ್ರಜ್ಞಾನ ಚಾಲ್ತಿಗೊಳ್ಳುತ್ತಿದೆ. ಇರಲಿ, ತಳಿವಿಜ್ಞಾನವು ನಮ್ಮೆಲ್ಲರ ಒಳಗೆ ಇರುವ ಗೋರಾನನ್ನು ಎತ್ತಿ ತೋರಿಸುತ್ತಿದೆ. ವಿವೇಕಿಗಳಿಗೆ ಗೋರಾನಿಗೆ ಆದಂತೆ ವಿವೇಕ ಹುಟ್ಟುತ್ತದೆ. ಮೂರ್ಖರಿಗೆ ಅದು ಸಾಧ್ಯವಾಗುವುದಿಲ್ಲವಷ್ಟೆ.

ಈ ಜೀನು ಮತ್ತು ಕ್ರೋಮೋಸೋಮುಗಳನ್ನು ಮಿಶ್ರಣಗೊಳಿಸಿ ಮನುಷ್ಯನ ಜೈವಿಕ ಇತಿಹಾಸದ ನಕ್ಷೆ ತಯಾರಿಸಲಾಗುತ್ತದೆ. ಇದನ್ನೇ ‘ಜಿನೋಮಿಕ್‌ಸೀಕ್ವೆನ್ಸ್’ ಎಂದು ಕರೆಯುವುದು ಅಥವಾ ಡಿಎನ್‌ಎ ಮತ್ತು ಕ್ರೋಮೋಸೋಮುಗಳ ಕುರಿತಾದ ಅಧ್ಯಯನವಿದು. ಮನುಷ್ಯರ ಇತಿಹಾಸ ತಿಳಿಯಲು ಯಾಕೆ ಈ ವಿಧಾನ ಬಳಸುತ್ತಾರೆಂದರೆ, ಡಿಎನ್‌ಎಗಳಲ್ಲಿ ಮೈಟೊಕಾಂಡ್ರಿಯಲ್ ಡಿಎನ್‌ಎ ಎಂಬುದೊಂದಿದೆ. ಅದು ತಾಯಿಯ ಮೂಲಕ ಮಕ್ಕಳಿಗೆ ಹರಿದು ಬರುತ್ತದೆ. ಇದರ ಮೂಲಕ ತಾಯಿ ಕಡೆಯ ಸಂಬಂಧವನ್ನು ಸಂದೇಹಗಳಿಗೆ ಅವಕಾಶವಿಲ್ಲದಂತೆ ಸತ್ಯಗಳನ್ನು ಕಂಡುಕೊಳ್ಳಬಹುದು. ಹಾಗೆಯೇ ತಂದೆಯ ಕಡೆಯ ಸಂಬಂಧವನ್ನು ತಿಳಿದುಕೊಳ್ಳಲು ವೈ ಕ್ರೋಮೋಸೋಮುಗಳು ನೆರವಿಗೆ ಬರುತ್ತವೆ. ಇವುಗಳಿಂದಲೂ ನಿಖರ ಫಲಿತಾಂಶ ಸಾಧ್ಯ. ಹಾಗಾಗಿಯೇ ಜಿನೋಮ್ ಸೀಕ್ವೆನ್ಸ್ ಮಾಡಲು ಶುರುಮಾಡಿದ್ದು. ಹೀಗೆ ಮಾಡಲು ಪ್ರಾರಂಭಿಸಿದ ಮೇಲೆ ನಾಗರಿಕತೆಗಳು ಬೆಚ್ಚಿ ಬೀಳುವ ಸಂಗತಿಗಳು ಹೊರಬೀಳತೊಡಗಿದವು. ಭಾರತದ ಉದಾಹರಣೆಯನ್ನೆ ನೋಡಿದರೆ ಶೇ. 20ರಿಂದ 80ರಷ್ಟು ಗಂಡಸರ ಡಿಎನ್‌ಎ ಯುರೋಪಿನ/ ಕಕೇಶಿಯನ್ನರ/ಸ್ಟೆಪ್ ಜನರ ಡಿಎನ್‌ಎಗೆ ತಾಳೆಯಾಗುತ್ತದೆ. ಆದರೆ ಮೈಟೋಕಾಂಡ್ರಿಯಲ್ ಡಿಎನ್‌ಎ ನೋಡಿದರೆ ಉತ್ತರ ಭಾರತೀಯರೂ ಸೇರಿದಂತೆ ಇಡೀ ಭಾರತದ ಮಾತೃಮೂಲ ಒಂದೇ ಆಗಿದೆ. ಅದು 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ಭಾರತಕ್ಕೆ ಬಂದ ತಾಯಿಮೂಲಕ್ಕೆ ಹೋಗಿ ತಲುಪುತ್ತಿದೆ. ಭಾರತದ ಜಾತಿ ಬುಡಕಟ್ಟುಗಳಲ್ಲಿ ಯಾವ ಯಾವ ಪ್ರಮಾಣದಲ್ಲಿ ಮಿಶ್ರಣಗಳಿವೆಯೆಂಬುದನ್ನು ರೈಖ್ ಆದಿಯಾಗಿ ತಳಿವಿಜ್ಞಾನಿಗಳು ವಿವರಿಸಿದ್ದಾರೆ. ನೋಡಿ.

ಈ ಪಟ್ಟಿ ವಿವರಿಸುವ ಅಂಶಗಳು ಸ್ವಯಂವೇದ್ಯವಾಗಿವೆ. ಮೇಲು ಸ್ತರಕ್ಕೆ ಸೇರಿದ ಜಾತಿಗಳು ಹೆಚ್ಚು ಎಎನ್‌ಐ ಡಿಎನ್‌ಎ ಹೊಂದಿವೆ ಮತ್ತು ಭಾಷಿಕವಾಗಿ ಇಂಡೋ ಯುರೋಪಿಯನ್ ಆಗಿವೆ. ಎಎಸ್‌ಐ ಗುಂಪಿನ ಜಾತಿಗಳು ಬಹುಪಾಲು ಸಾರಿ ತಳಸ್ತರಕ್ಕೆ ಸೇರಿವೆ ಹಾಗೂ ದ್ರಾವಿಡ ಭಾಷೆಗಳನ್ನು ಮಾತನಾ ಡುತ್ತವೆ. ಆಶ್ಚರ್ಯವೆಂದರೆ ಅನೇಕ ಬುಡಕಟ್ಟುಗಳ ಭಾಷೆಯೂ ಇಂಡೋ ಯುರೋಪಿಯನ್ ಭಾಷಾ ಗುಂಪಿಗೆ ಸೇರಿರುವುದು ಆಶ್ಚರ್ಯಕರ ಸಂಗತಿ. ಅವು ತಮ್ಮ ಭಾಷೆಗಳನ್ನು ವಿಕಾಸದ ಹಾದಿಯಲ್ಲಿ ನೀಗಿಕೊಂಡಿರಬಹುದು.

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News