ಗೋಹತ್ಯೆ ಮಸೂದೆ: ಮರೆ ಮಾಚಿದ ಸಾಲುಗಳು

Update: 2020-12-13 03:23 GMT

ಮೊನ್ನೆ ರಾಜ್ಯದ ಬಿಜೆಪಿ ಸರಕಾರವು ಎಲ್ಲಾ ಸಾಂವಿಧಾನಿಕ ನೈತಿಕತೆಗಳನ್ನು ಹಾಗೂ ನೀತಿ ನಿಯಮಗಳನ್ನು ಗಾಳಿಗೆ ತೂರಿ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಮಸೂದೆ -2020 ಅನ್ನು ಮಂಡಿಸಿತು. ಈ ಮಸೂದೆಯ ಮಂಡನೆಯ ಬಗ್ಗೆ ಯಾವ ಮಾಹಿತಿಯನ್ನು ಸರಕಾರವು ವಿರೋಧ ಪಕ್ಷಗಳಿಗೆ ಕೊಟ್ಟಿರಲಿಲ್ಲ. ಅದು ಬಿಡಿ.

ವಿಧಾನಮಂಡಲದಲ್ಲಿ ಅದರ ಬಗ್ಗೆ ಚರ್ಚೆಯಾಗಬೇಕೆಂದರೆ ಮಸೂದೆಯ ಪ್ರತಿಗಳನ್ನಾದರೂ ಎಲ್ಲಾ ಶಾಸಕರಿಗೆ ಕೊಡಬೇಕಲ್ಲವೇ? ಬಿಜೆಪಿ ಸರಕಾರ ಅದನ್ನೂ ಮಾಡಲಿಲ್ಲ.
ಹೀಗಾಗಿ ಸರಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ಸದನವನ್ನು ಬಹಿಷ್ಕರಿಸಿದವು.

ಆದರೆ ಇತ್ತೀಚೆಗೆ ತಾನೇ, ಭೂ ಸುಧಾರಣಾ ಕಾಯ್ದೆಯ ವಿಷಯದಲ್ಲಿ ರೈತರಿಗೆ ದ್ರೋಹ ಮಾಡಿದ್ದ ಜೆಡಿಎಸ್ ಬಿಜೆಪಿಗೆ ಬೆಂಬಲಿಸಿ ಪರಿಷತ್‌ನಲ್ಲಿ ಅನುಮೋದನೆ ಸಿಗುವಂತೆ ಮಾಡಿತ್ತಷ್ಟೇ.. ಜೆಡಿಎಸ್‌ನ ಈ ಅವಕಾಶವಾದಿ ಚಾಳಿಯ ವಿರುದ್ಧ ರಾಜ್ಯಾದ್ಯಂತ ಜನರು ಆಕ್ರೋಶದಿಂದ ಛೀಮಾರಿ ಹಾಕಿದ್ದಕ್ಕೋ ಅಥವಾ ಸದ್ಯದಲ್ಲೇ ಗ್ರಾಮ ಪಂಚಾಯತ್ ಚುನಾವಣೆಗಳೂ ಇರುವುದರಿಂದ ಈ ನಡೆ ತಮಗೆ ಪ್ರತಿಕೂಲವಾಗಬಹುದೆಂದು ಅರಿವಾಗಿದ್ದರಿಂದಲೋ...ಒಟ್ಟಿನಲ್ಲಿ, ಜೆಡಿಎಸ್ ಪಕ್ಷ ಗೋಹತ್ಯೆ ಮಸೂದೆಗೆ ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿತು. ಇದರಿಂದಾಗಿ ಪರಿಷತ್‌ನಲ್ಲಿ ತಮಗೆ ಬಹುಮತ ಸಿಗುವುದಿಲ್ಲ ಎಂದು ಸ್ಪಷ್ಟವಾದ ಮೇಲೆ ಬಿಜೆಪಿಯು ಪರೋಕ್ಷ ರೀತಿಯಲ್ಲಿ ಪರಿಷತ್‌ನಲ್ಲಿ ಮಸೂದೆಯನ್ನು ವಾಪಸ್ ತೆಗದುಕೊಂಡಿತು. ಈಗ ಅದನ್ನು ಸುಗ್ರೀವಾಜ್ಞೆಯ ರೂಪದಲ್ಲಿ ಜಾರಿ ಮಾಡುವ ಪ್ರಯತ್ನದಲ್ಲಿದೆ. ಆದರೆ ವಿಧಾನಮಂಡಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸುವಾಗ ಬಿಜೆಪಿ ಸರಕಾರ ಒಂದು ದೊಡ್ಡ ಕುತಂತ್ರವನ್ನು ಮಾಡಿದೆ.

ಮೊದಲನೆಯದಾಗಿ ಯಾರಿಗೂ ಮಸೂದೆಯ ಪ್ರತಿಯನ್ನು ಕೊಡಲಿಲ್ಲ. ಎರಡನೆಯದಾಗಿ ಮಂಡಿಸಿದ ಮಸೂದೆಯಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಿರುವ ಬಹುಮುಖ್ಯವಾದ ರೈತ ವಿರೋಧಿ ಅಂಶವೊಂದನ್ನು ಕನ್ನಡದ ಪ್ರತಿಯಲ್ಲಿ ಇಲ್ಲದಂತೆ ನೋಡಿಕೊಂಡಿದೆ.

ಮಸೂದೆಯ ಕನ್ನಡ ಪ್ರತಿಯಲ್ಲಿ ಗೋವುಗಳ ರಕ್ಷಣೆಗೆ ಸರಕಾರ ಅಥವಾ ಸರಕಾರವು ಅಂಗೀಕರಿಸುವ ಯಾವುದೇ ಸಂಘ ಸಂಸ್ಥೆಗಳಿಗೆ ಗೋಶಾಲೆ ಸ್ಥಾಪಿಸುವ ಅವಕಾಶವನ್ನು ನೀಡಲಾಗುವುದು ಎಂಬ ಅಂಶ ಸೆಕ್ಷನ್ 19ರಲ್ಲಿದೆ. ಅದರ ಪ್ರಕಾರ: ‘‘19. ಜಾನುವಾರುಗಳ ಪೋಷಣೆ ಕೈಗೊಳ್ಳಲು ಸಂಸ್ಥೆಗಳ ಸ್ಥಾಪನೆ: (1) ರಾಜ್ಯ ಸರಕಾರವು ಜಾನುವಾರುಗಳ ಪೋಷಣೆಯನ್ನು ಕೈಗೊಳ್ಳುವುದಕ್ಕಾಗಿ ಅಗತ್ಯವೆಂದು ಭಾವಿಸಬಹುದಾದ ಸ್ಥಳಗಳಲ್ಲಿ ಗೋಶಾಲೆಗಳನ್ನು ಒಳಗೊಂಡ ಸಂಸ್ಥೆಗಳನ್ನು ಸ್ಥಾಪಿಸಬಹುದು ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು ಅಥವಾ ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ 1960 (1960ರ ಕರ್ನಾಟಕ ಅಧಿನಿಯಮ 17)ಅಥವಾ ಯಾವುದೇ ಕೇಂದ್ರ ಅಧಿನಿಯಮದಡಿಯಲ್ಲಿ ನೋಂದಾಯಿಸಿದ ಸೊಸೈಟಿಗೆ ಅಥವಾ ಯಾವುದೇ ಸಂಸ್ಥೆ ಅಥವಾ ಸಂಘಕ್ಕೆ ಅನುಮತಿಯನ್ನು ನೀಡಬಹುದು’’.

ಮಸೂದೆಯ ಕನ್ನಡ ಪ್ರತಿಯಲ್ಲಿ ಇರುವುದು ಇಷ್ಟೇ. ಆದರೆ ಇಂಗ್ಲಿಷ್ ಪ್ರತಿಯಲ್ಲಿ ಈ ಮೇಲಿನ ಪ್ಯಾರಾದ ಜೊತೆಗೆ 19 (3) ಎಂಬ ಪ್ಯಾರಾ ಕೂಡಾ ಇದೆ. ಅದರ ಪ್ರಕಾರ 19 (3): The State government or subject previous sanstion of the State Government , the local authority, society or body of persons or associations establishing the institutions under sub section (1)  may levy such fees as may be prescribed  for the maintenance of the institution!! 

ಅಂದರೆ, ರಾಜ್ಯ ಸರಕಾರ ಅಥವಾ ರಾಜ್ಯ ಸರಕಾರದ ಅನುಮೋದನೆಯ ಮೇರೆಗೆ ಗೋಶಾಲೆಗಳನ್ನು ಸ್ಥಾಪಿಸುವ ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಸಂಘ ಸಂಸ್ಥೆಗಳು ಅದನ್ನು ನಿರ್ವಹಿಸಲು ಬೇಕಾದ ಶುಲ್ಕವನ್ನು ಸಂಗ್ರಹಿಸಬಹುದು.... !!

ಯಾರಿಂದ?... ಇನ್ಯಾರಿಂದ.. ಅವುಗಳನ್ನು ಸಾಕಲಾಗದೆ, ಕಡ್ಡಾಯವಾಗಿ ಗೋ ಶಾಲೆಗೇ ತಂದು ನೀಡಬೇಕಾದ ರೈತರಿಂದ ... 2009ರಲ್ಲಿ ಬಿಜೆಪಿ ಸರಕಾರ ಮಂಡಿಸಿದ್ದ ಗೋಹತ್ಯೆ ನಿಷೇಧ ಹಾಗೂ ಜಾನುವಾರು ರಕ್ಷಣಾ ಕಾಯ್ದೆ-2009ರಲ್ಲೂ ರೈತರೂ ಗೋಶಾಲೆಗಳಿಗೆ ಶುಲ್ಕ ತೆರಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿತ್ತು... ಇದು ಈ ಸರಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಯು ರೈತರ ಮೇಲೆ ಎಸಗಲಿರುವ ತಣ್ಣನೆಯ ಕ್ರೌರ್ಯದ ಸ್ವರೂಪ... ವಿಧಾನ ಮಂಡಲದಲ್ಲಿ ಮಸೂದೆಯನ್ನು ಚರ್ಚೆಗೇ ತರದೆ ಪಾಸು ಮಾಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿರುವುದು ಅದಕ್ಕೆ.. ಆದರೆ ಇಂಗ್ಲೀಷ್‌ನಲ್ಲಿರುವ ಈ ಸ್ಪಷ್ಟ ರೈತ ವಿರೋಧಿ ಅಂಶವು ಕನ್ನಡದಲ್ಲಿ ಕಾಣೆಯಾಗಲು ಕಾರಣವೇನು? ಅವಸರದಲ್ಲಿ ಶಾಸಕರು ಅವೆರಡನ್ನು ಹೋಲಿಕೆ ಮಾಡುವುದಿಲ್ಲ ಎಂಬ ಕುತಂತ್ರವಲ್ಲವೇ? ಇದು ರೈತ ದ್ರೋಹವಲ್ಲವೇ? ಇದು ಸಂವಿಧಾನ ಹಾಗೂ ಪ್ರಜಾತಂತ್ರ ವಿರೋಧಿ ನಡೆಯಲ್ಲವೇ? ಇದು ಜನರಿಂದ ಆಯ್ಕೆಯಾದ ಶಾಸಕರ ಹಕ್ಕು ಚ್ಯುತಿ ಅಲ್ಲವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News