ಮಾರಿ, ಸಾಲ ಮಾಡಿ ತುಪ್ಪ ತಿನ್ನುವ ದಾರಿಯಲ್ಲಿ ಭಾರತ
ಆರ್ಥಿಕ ಸಂಕಟದ ಕಾಲದಲ್ಲಿ ಸರಕಾರ ವೊಂದು ತರುವ ಬಜೆಟ್ ಏನೇನು ಉಡುಗೊರೆಗಳನ್ನು ತರುತ್ತದೆ ಎಂಬುದಕ್ಕಿಂತಲೂ ಅದು ಎಲ್ಲಿಂದ ಹಣ ಕ್ರೋಡೀಕರಿಸುತ್ತದೆ ಮತ್ತು ಅದನ್ನು ಎಲ್ಲಿ ವೆಚ್ಚ ಮಾಡಲಿದೆ ಎಂಬುದನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅನ್ನು ಗಮನಿಸಬೇಕಾಗುತ್ತದೆ.
ತೀರಾ ಹೊರನೋಟಕ್ಕೆ ಸರಕಾರ ಒಂದು ಅಭೂತಪೂರ್ವ ವಿತ್ತೀಯ ಕೊರತೆ ಹೊಂದಿರುವ ಬಜೆಟ್ ಮಂಡಿಸಿದೆ. 2019-20ರಲ್ಲಿ GDPಯ ಶೇ.4.6 ಇದ್ದ ವಿತ್ತೀಯ ಕೊರತೆ 20-21ರಲ್ಲಿ ಶೇ.3.3 ಇರಬೇಕೆಂದು ಊಹಿಸಿದ್ದು ಎಲ್ಲ ಊಹೆಗಳನ್ನು ತಲೆಕೆಳಗು ಮಾಡಿ ಶೇ.9.5ಗೆ ಏರಿದೆ. ಸರಕಾರ ಕೊರೋನ ಜಗನ್ಮಾರಿಯ ಕಾರಣಕ್ಕೆ ವೆಚ್ಚ ಮಾಡಿದ ಅಂದಾಜು 27.1 ಲಕ್ಷ ಕೋಟಿ ರೂ.ಗಳಲ್ಲಿ ಹಿಂದಿನ ಬಜೆಟ್ ಪ್ರಾವಧಾನಗಳೂ ಸೇರಿವೆ ಎಂಬುದು ಈ ತಲೆಕೆಳಗು ಊಹಿಸಿದ್ದಕ್ಕಿಂತ ಹೆಚ್ಚೇ ಗಂಭೀರವಾಗಿರಬಹುದು ಅನ್ನಿಸುತ್ತದೆ. ಏಕೆಂದರೆ ಈ ವಿತ್ತೀಯ ಕೊರತೆಯಲ್ಲಿ ತೆಗೆದುಕೊಂಡ ಸಾಲದ ಲೆಕ್ಕಾಚಾರ ಒಳಗೊಂಡಿಲ್ಲ. ಕಳೆದ ವರ್ಷಕ್ಕೇ 80,000ಕೋಟಿ ರೂ. ಇನ್ನೂ ಬೇಕಾಗಿದ್ದು, ಅದಕ್ಕಾಗಿ ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಅದನ್ನು ಪಡೆಯಲಿದ್ದೇವೆ ಎಂದು ಸಚಿವರು ತನ್ನ ಭಾಷಣದಲ್ಲಿ ಹೇಳಿದ್ದಾರೆ ಮತ್ತು 21-22ಕ್ಕೆ ಈ ವಿತ್ತೀಯ ಕೊರತೆ ಶೇ.6.8ಗೆ ಇಳಿಸುವ ಪ್ರಯತ್ನ ಮಾಡಲಿದ್ದೇವೆ (ಅದೂ ಬಹಳ ಹೆಚ್ಚೇ) ಎಂದವರು ಹೇಳಿದ್ದಾರೆ. ಈ ವಿಚಾರಗಳು ಪರಿಸ್ಥಿತಿ ಎಷ್ಟು ಗಂಭೀರ ಇವೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ.
ಆರೋಗ್ಯಕ್ಕೇನು ಮಾಡಿದರು?
ಸರಕಾರ ದೊಡ್ಡದೊಡ್ಡ ಅಂಕಿ-ಸಂಖ್ಯೆಗಳನ್ನು ಮುಂದಿಟ್ಟು ವಾಸ್ತವಗಳನ್ನು ಮರೆಮಾಚುವುದರಲ್ಲಿ ಬಹಳ ಚಾಣಾಕ್ಷತೆ ತೋರುತ್ತಾ ಬಂದಿದೆ. ಈ ಬಜೆಟ್‌ನಲ್ಲೂ ಅದು ಮುಂದುವರಿದಿದೆ. ಎಲ್ಲರೂ ಕುತೂಹಲ ಹೊಂದಿರುವ ಆರೋಗ್ಯ ಕ್ಷೇತ್ರಕ್ಕೆ ಈ ಬಜೆಟ್ ಏನು ಮಾಡಿದೆ ಎಂಬುದನ್ನು ಗಮನಿಸಿದರೆ ನಾನೇನು ಹೇಳುತ್ತಿದ್ದೇನೆ ಎಂಬುದು ಸ್ಪಷ್ಟವಾಗುತ್ತದೆ.
ಬಜೆಟ್ ದಾಖಲೆ ಹೊರತುಪಡಿಸಿ, ಒಳಗಿನ ಸೆಕ್ಟರ್‌ವಾರು ಹಂಚಿಕೆಗಳನ್ನು ಗಮನಿಸಿದರೆ, ಕಳೆದ ವರ್ಷದ ಹಂಚಿಕೆ 67,112 ಕೋಟಿರೂ.ಗಳು. ಈ ವರ್ಷ ಬಜೆಟ್‌ನಲ್ಲಿ ಅದು 73,932 ಕೋಟಿ ರೂ.ಗಳು. ಆದರೆ ಸಚಿವರು ‘ಆತ್ಮನಿರ್ಭರ ಸ್ವಸ್ಥಭಾರತ್’ ಯೋಜನೆ, ಪೋಷಕಾಂಶಗಳ ಯೋಜನೆ, ಜಲಜೀವನ್ ಮಿಷನ್, ಅರ್ಬನ್ ಸ್ವಸ್ಥಭಾರತ್, ಶುದ್ಧಗಾಳಿ, ವ್ಯಾಕ್ಸಿನ್ ನೀಡಿಕೆ ಎಲ್ಲ ಸೇರಿ ಆರೋಗ್ಯ ಕ್ಷೇತ್ರಕ್ಕೆ2,23,846 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ. ತಮಾಷೆ ಎಂದರೆ, ಆರೋಗ್ಯ ಸೆಕ್ಟರ್ ನೀಡಲಾಗಿರುವ 73,932 ಕೋಟಿ ರೂ.ಗಳಲ್ಲಿ 35,000 ಕೋಟಿ ಅಥವಾ ಅರ್ಧಕ್ಕರ್ಧ ಕೊರೋನ ವ್ಯಾಕ್ಸಿನ್‌ಗೆ ಹೋಗಲಿದೆಯಂತೆ! ಹಾಗಾಗಿ ಕೊನೆಗೆ ಆರೋಗ್ಯಕ್ಕೆಂದು ಉಳಿಯುವುದು ತೀರಾ ಕಡಿಮೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹಂಚಿಕೆ ಕಳೆದ ವರ್ಷಕ್ಕಿಂತ ಕಡಿಮೆಯೇ ಅಥವಾ ಕಳೆದ ವರ್ಷದಷ್ಟೇ ಇದೆ.
ಖಾಸಗೀಕರಣದ ಮಂತ್ರ
ಹಾಲಿ ಕೇಂದ್ರ ಸರಕಾರದ ಕಾರ್ಯವಿನ್ಯಾಸದಲ್ಲಿ ಒಂದು ಮಹತ್ವದ ಭಾಗ ಎಂದರೆ, ತಾನೇನೇ ಮಾಡಿದರೂ ಅದನ್ನು ಬಹಳ ಪಾಸಿಟಿವ್ ಆಗಿ ಮಾರ್ಕೆಟಿಂಗ್ ಮಾಡಿಕೊಳ್ಳುವುದು. ಅದು ಸರಕಾರದ ಆಸ್ತಿಯನ್ನು ಮಾರಿಕೊಳ್ಳುವಲ್ಲಿ ಕೂಡ. ಇದನ್ನು ‘‘ಮಾನೆಟೈಸಿಂಗ್’’ ಎಂಬ ಚೆಂದದ ಶಬ್ಧ ಬಳಸಿ ವಿವರಿಸಲಾಗುತ್ತಿದೆ. ಈ ಬಜೆಟ್‌ನಲ್ಲಿ ಸರಕಾರ ತಕ್ಷಣಕ್ಕೆ ಅಗತ್ಯವಿರುವ ಹಣ ಕ್ರೋಡೀಕರಣಕ್ಕೆ ಮಾತ್ರವಲ್ಲದೆ ದೀರ್ಘಕಾಲಿಕವಾಗಿಯೂ ಪರಿಣಾಮ ಬೀರಬಲ್ಲ ಹಲವು ತೀರ್ಮಾನಗಳನ್ನು ಕೈಗೊಂಡಿದೆ.
ಅಂತಹ ಕೆಲವು ತೀರ್ಮಾನಗಳು ಇಲ್ಲಿವೆ:
♦ವಿದ್ಯುತ್ ರಂಗದ ಖಾಸಗೀಕರಣಕ್ಕೆ ಮೊದಲ ಹಂತವಾಗಿ ವಿದ್ಯುತ್ ವಿತರಣಾ ಸಂಸ್ಥೆಗಳನ್ನು (ಡಿಸ್ಕಾಂ) ಮಾರುವುದಕ್ಕೆ ಸಜ್ಜುಪಡಿಸುವುದಕ್ಕಾಗಿ ಮುಂದಿನ ಐದು ವರ್ಷಗಳಿಗೆ 3,05,984 ಕೋಟಿ ರೂ.ಗಳನ್ನು ತೆರೆದಿರಿಸಲಾಗಿದೆ. ಇವು ಪೂರ್ವ ಪಾವತಿ ಮೀಟರ್ ಸ್ಥಾಪನೆ, ಫೀಡರ್‌ಗಳ ಪ್ರತ್ಯೇಕಿಸುವಿಕೆ, ಡಿಸ್ಕಾಂಗಳ ನಷ್ಟ ತುಂಬುವಿಕೆಗೆ ಬಳಕೆ ಆಗಲಿದೆ.
♦2,000ಕೋಟಿ ಮೌಲ್ಯದ ಏಳು ಪ್ರಮುಖ ಬಂದರು ಯೋಜನೆಗಳನ್ನು ಈ ಹಣಕಾಸು ವರ್ಷದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲಾಗುತ್ತದೆ.
♦ ಈ ಹಣಕಾಸು ವರ್ಷದಲ್ಲಿ ಎರಡೂ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಮತ್ತು ಒಂದು ಜನರಲ್ ಇನ್ಶೂರೆನ್ಸ್ ಕಂಪೆನಿ ಖಾಸಗೀಕರಣ ಆಗಲಿವೆ.
♦ಎಲ್‌ಐಸಿ ಶೇರ್‌ಗಳನ್ನು ಸಾರ್ವಜನಿಕರಿಗೆ ನೀಡಲು IPO ಈ ವರ್ಷ ಬರಲಿದೆ.
♦ ಸರಕಾರಿ ಇಲಾಖೆಗಳು, ಸಾರ್ವಜನಿಕ ರಂಗದ ಸಂಸ್ಥೆಗಳು, ಸಚಿವಾಲಯಗಳಲ್ಲಿರುವ ಬಳಕೆಯಾಗದ ಭೂಮಿ ಮತ್ತಿತರ ಆಸ್ತಿಗಳನ್ನು ನೇರ ಮಾರಾಟ ಅಥವಾ ಬೇರೆ ಹಾದಿಗಳ ಮೂಲಕ ಮಾನೆಟೈಸ್ ಮಾಡಿಕೊಳ್ಳಲಾಗುತ್ತದೆ.
♦ಒಟ್ಟು 1,75,000 ಕೋಟಿ ರೂ.ಗಳನ್ನು ಬಜೆಟ್ ವರ್ಷದಲ್ಲಿ ಹೂಡಿಕೆ ಹಿಂದೆಗೆತದ ಮೂಲಕ ಸರಕಾರ ಕ್ರೋಡೀಕರಿಸಲಿದೆ.
ಕೃಷಿಗೆ ಗಮನಾರ್ಹವಾದದ್ದೇನೂ ಇಲ್ಲ
ಇಂದು ರೈತರು ಬೀದಿಗಿಳಿದಿರುವಾಗ ಸರಕಾರ ಅವರ ಸಮಾಧಾನಕ್ಕಾಗಿಯಾದರೂ ಏನಾದರೂ ಪ್ರಕಟಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಸರಕಾರ ಬಾಯಿ ಮಾತಿನ ಬದ್ಧತೆಯಾಚೆಗೆ ಏನನ್ನೂ ಹೇಳಲಿಲ್ಲ. ಕೃಷಿಗೆ ಇಲಾಖಾವಾರು ಹಂಚಿಕೆ ವಾಸ್ತವದಲ್ಲಿ ಕಳೆದ ಬಜೆಟ್‌ಗಿಂತ ಕಡಿಮೆ ಆಗಿದೆ. 20-21ಕ್ಕೆ ಅದು 1,42,762 ಕೋಟಿ ರೂ. ಇದ್ದದ್ದು ಬಜೆಟ್ ವರ್ಷದಲ್ಲಿ 1,31,531 ಕೋಟಿ ರೂ.ಗಳಿಗೆ ಇಳಿದಿದೆ. ಆದರೆ ಆಪರೇಶನ್ ಗ್ರೀನ್ ಹೆಸರಲ್ಲಿ ಟೊಮ್ಯಾಟೊ, ಈರುಳ್ಳಿ, ಬಟಾಟೆಗಳಿಗೆ ಸೀಮಿತವಾಗಿದ್ದ ಕಾರ್ಪೊರೇಟ್ ಫಾರ್ಮಿಂಗ್ (ರೈತ ಉತ್ಪಾದಕ ಕಂಪೆನಿಗಳಿಗೆ ಪ್ರೋತ್ಸಾಹ ನೀಡುವ ಯೋಜನೆ) ಪ್ರೋತ್ಸಾಹವನ್ನು 22ಉತ್ಪನ್ನಗಳಿಗೆ ವಿಸ್ತರಿಸಲಾಗಿದೆ!
ಕೃಷಿ ಕಾಯ್ದೆಗಳಿಂದ ಗಂಭೀರ ಸ್ವರೂಪದ ಅಪಾಯಕ್ಕೀಡಾಗಲಿರುವ ಭೂರಹಿತ ಕೃಷಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಸರಕಾರ ಈ ಬಜೆಟ್‌ನಲ್ಲಿ ಏನಾದರೂ ಮಾಡಿದೆಯೇ ಎಂದು ನೋಡಿದರೆ ಸಿಗುವುದು ‘ಒಂದು ದೇಶ ಒಂದು ರೇಷನ್ ಕಾರ್ಡ್’ ಯೋಜನೆ ಮತ್ತು ಈ ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಸಂಗ್ರಹಕ್ಕಾಗಿ ಒಂದು ಪೋರ್ಟಲ್ ರಚನೆ. ಅದರ ಆಧಾರದಲ್ಲಿ ಅವರಿಗೆ ಆರೋಗ್ಯ, ವಸತಿ, ಕೌಶಲ, ವಿಮೆ, ಸಾಲ, ಆಹಾರ ನೀಡಲು ಸಾಧ್ಯವಾಗುವುದಂತೆ. ಸರಕಾರ ಎಷ್ಟು ಮುಂದಾಲೋಚನೆ ರಹಿತವಾಗಿ ಕೃಷಿ ಕಾಯ್ದೆಗಳನ್ನು ಅಗತ್ಯಕ್ಕಿಂತ ಹೆಚ್ಚು ವೇಗವಾಗಿ ತಂದಿದೆ ಎಂಬುದಕ್ಕೆ ಇದು ಸಾಕ್ಷಿ.
ಚುನಾವಣೆ ಮರೆತಿಲ್ಲ
ಈ ಸಂಕಟ- ಕಷ್ಟಗಳ ನಡುವೆ ಸರಕಾರ ಒಂದು ವಿಚಾರವನ್ನು ಮರೆತಿಲ್ಲ. ಅದೆಂದರೆ ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ತಮಿಳುನಾಡು ಬಂಪರ್ ಕೊಡುಗೆಗಳನ್ನು ಪಡೆದಿದೆ. ಅಲ್ಲಿಗೆ ಮೀನುಗಾರಿಕಾ ಬಂದರು ಅಭಿವೃದ್ಧಿ, ಸೀವೀಡ್ ಪಾರ್ಕ್, 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳು, ಮೆಟ್ರೊ ರೈಲು ಸಿಕ್ಕಿವೆ. ಕೇರಳಕ್ಕೆ 1,100ಕಿ.ಮೀ. ರಾಷ್ಟ್ರೀಯ ಹೆದ್ದಾರಿ, ಮೀನುಗಾರಿಕಾ ಬಂದರು ಅಭಿವೃದ್ಧಿ, ಮೆಟ್ರೊ ರೈಲುಗಳು ಸಿಕ್ಕಿವೆ. ಪಶ್ಚಿಮ ಬಂಗಾಳಕ್ಕೆ 675 ಕಿ.ಮೀ. ಮತ್ತು ಅಸ್ಸಾಂಗೆ 1,300 ಕಿ.ಮೀ. ರಸ್ತೆಗಳ ಜೊತೆಗೆ ಆ ಎರಡು ರಾಜ್ಯಗಳ ಚಹಾ ಕಾರ್ಮಿಕರ ಅಭಿವೃದ್ಧಿಗಾಗಿ 1,000 ಕೋಟಿಗಳ ನಿಧಿ ಸ್ಥಾಪನೆ ಆಗಿದೆ.
ಬಾಕಿ ಏನು?
ಕರ್ನಾಟಕಕ್ಕೆ ಈ ಬಜೆಟ್‌ಲ್ಲಿ ಕೊಡುಗೆ ಆಗಿ ದೊರೆತಿರುವ ಏಕೈಕ ಸಂಗತಿ ಎಂದರೆ 14,788 ಕೋಟಿ ರೂ.ಗಳ ವೆಚ್ಚದಲ್ಲಿ ಮೆಟ್ರೊ 2A, 2B ಹಂತಗಳ ಕಾಮಗಾರಿ. ಅದಿರಲಿ. ಇವೆಲ್ಲವೂ ಸಾಧನೆಯಾಗುವುದು ಅವಕ್ಕೆಲ್ಲ ಅಗತ್ಯ ಹಣಕಾಸು ಸಂಪನ್ಮೂಲ ಒದಗಿ ಬಂದಾಗ. ಅದಕ್ಕಾಗಿ ಸರಕಾರ ಬಜೆಟ್ ವರ್ಷದಲ್ಲಿ 12 ಲಕ್ಷ ಕೋಟಿ ರೂ.ಗಳನ್ನು ಸಾಲದ ಮೂಲಕ ಪಡೆಯುವ ಉದ್ದೇಶ ಹೊಂದಿದೆ. ಇದು ಬಹುತೇಕ ಒಟ್ಟು ಬಜೆಟ್‌ನ ಗಾತ್ರದ ಮೂರನೇ ಒಂದು ಭಾಗ ಎಂಬುದನ್ನು ಅರ್ಥ ಮಾಡಿಕೊಂಡರೆ ನಮ್ಮ ‘ಸಾಲ ಮಾಡಿ ತುಪ್ಪ ತಿನ್ನುವ ಸ್ಥಿತಿ’ ಎಷ್ಟು ದಯನೀಯ ಹಂತಕ್ಕೆ ತಲುಪಿದೆ ಎಂಬುದು ಅರಿವಾಗುತ್ತದೆ.