1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್‌ನ ಕರಾಳ ಹಸ್ತ ಮತ್ತು ಕ್ಷೇಪ
1984ರ ಸಿಖ್ ನರಮೇಧದ ಪ್ರಕರಣದಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿಗೆ ಅವಕಾಶವಾದದಿಂದ ವರ್ತಿಸುತ್ತಿರುವುದು ಆರೆಸ್ಸೆಸ್ ಮತ್ತು ಬಿಜೆಪಿಗಳು. ಗುಜರಾತ್‌ನಲ್ಲಿ ಸಂಘ ಪರಿವಾರ ನಡೆಸಿದ ಮುಸ್ಲಿಮರ ಮಾರಣಹೋಮದ ಬಗ್ಗೆ ಬಿಜೆಪಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದಾಗಲೆಲ್ಲ ಕಾಂಗ್ರೆಸ್‌ನವರು ಸಿಖ್ ನರಮೇಧ ನಡೆಸಲಿಲ್ಲವೇ ಎಂದು ಪ್ರತಿದಾಳಿ ನಡೆಸಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಅದರಲ್ಲೂ 1999ರಿಂದ ಬಿಜೆಪಿಯ ಆಪ್ತಮಿತ್ರನಾಗಿದ್ದ ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಸಮಾಜವಾದಿ ಜಾರ್ಜ್ ಫೆರ್ನಾಂಡಿಸ್‌ರವರಂತೂ ಗುಜರಾತ್ ಪಾಪದಿಂದ ಬಿಜೆಪಿಯನ್ನು ರಕ್ಷಿಸಲು 84ರ ಸಿಖ್ ನರಮೇಧವನ್ನು ಪ್ರತ್ಯಸ್ತ್ರವನ್ನಾಗಿ ಬಳಸುವುದರಲ್ಲಿ ನಿಸ್ಸೀಮರಾಗಿದ್ದರು. 2002ರಲ್ಲಿ ಸಂಸತ್‌ನಲ್ಲಿ ಪೊಟಾ ಬಗ್ಗೆ ನಡೆದ ಚರ್ಚೆಯಲ್ಲೂ ಜಾರ್ಜ್ ಫೆರ್ನಾಂಡಿಸರು ಸಮಾಜವಾದಿಯಾಗಿದ್ದಾಗ ಕಲಿತ ವಾಕ್ಚಾತುರ್ಯವನ್ನೆಲ್ಲಾ ಬಳಸಿಕೊಂಡು ಸಿಖ್ ನರಮೇಧದ ಮುಂದೆ ಗುಜರಾತ್ ನರಮೇಧ ಏನೂ ಅಲ್ಲವೆಂದು ವಾದಿಸಿದ್ದರು.
ಮೋದಿ ಸರಕಾರವು ಜಬರ್‌ದಸ್ತಿಯಿಂದ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ಕಳೆದ ಮೂರು ತಿಂಗಳಿಂದ ತೀವ್ರವಾಗಿ ನಡೆಯುತ್ತಿರುವ ರೈತಜನಾಂದೋಲನದ ಬಗ್ಗೆ ನಿನ್ನೆ ರಾಜ್ಯಸಭೆಯಲ್ಲಿ ಪ್ರಧಾನಿ ಅಧಿಕೃತವಾಗಿ ಬಾಯಿ ಬಿಚ್ಚಿದ್ದಾರೆ. ಆದರೆ ಬಾಯಿಬಿಟ್ಟರೆ ಬಣ್ಣಗೇಡು ಎಂಬಂತೆ ಭಾಷಣದುದ್ದಕ್ಕೂ ಹಸಿಸುಳ್ಳು, ಅವಹೇಳನ ಹಾಗೂ ಆತ್ಮವಂಚನೆಯ ಮಾತುಗಳನ್ನೇ ಹರಿಬಿಟ್ಟಿದ್ದಾರೆಯೇ ಹೊರತು ಜನರ ಆಕ್ರೋಶವನ್ನು ಅರ್ಥಮಾಡಿಕೊಳ್ಳುವ ಅಥವಾ ತನ್ನ ಸರಕಾರದ ತಪ್ಪನ್ನು ತಿದ್ದಿಕೊಳ್ಳುವ ಒಂದು ಮಾತನ್ನೂ ಆಡಿಲ್ಲ. ಬದಲಿಗೆ ಜನರ ಆಕ್ರೋಶದ ಉರಿಗೆ ತಮ್ಮ ನಂಜಿನ ಹಾಗೂ ಬೇಜವಾಬ್ದಾರಿ ಮಾತುಗಳ ಮೂಲಕ ಮತ್ತಷ್ಟು ಬೆಂಕಿ ತುಂಬಿದ್ದಾರೆ. ಮೋದಿಯವರ ಮೊನ್ನೆಯ ಭಾಷಣದಲ್ಲಿ ಅತ್ಯಂತ ಆತ್ಮವಂಚನೆಯಿಂದ ಕೂಡಿದ್ದ ಹಲವು ವಿಷಯಗಳಲ್ಲಿ ಪ್ರಮುಖವಾದ ಒಂದು ವಿಷಯವೆಂದರೆ ಸಿಖ್ಖರ ಕುರಿತು ವಿಶೇಷವಾಗಿ ಸುರಿಸಿದ ಮೊಸಳೆ ಕಣ್ಣೀರು. ಮೊದಲಿಗೆ ಸಿಖ್ಖರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳುತ್ತಾ ಇಡೀ ಸಿಖ್ ಸಮುದಾಯ ಮತ್ತೊಬ್ಬರ ಮಾತು ಕೇಳಿ ಹೋರಾಡುವ ಸ್ವಂತ ಬುದ್ಧಿ ಇಲ್ಲದ ಸಮುದಾಯ ಎಂಬಂತೆ ಅವಮಾನಿಸಿದ್ದಾರೆ. ಇದು ಅಧಿಕಾರದ ದುರಹಂಕಾರ ಮಾತ್ರವಲ್ಲದೆ ಸಂಘಪರಿವಾರಕ್ಕೆ ಸಿಖ್ ಸಮುದಾಯದ ಬಗ್ಗೆ ಇರುವ ಪೂರ್ವಗ್ರಹವನ್ನೂ ಎತ್ತಿ ತೋರಿಸುತ್ತದೆ.
ಅದರ ಜೊತೆಗೆ ‘‘ಕೆಲವರು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಏನಾಯಿತು ಎಂಬುದನ್ನು ನಾವು ಮರೆಯಬಾರದು. 1984ರಲ್ಲಿ ಪಂಜಾಬ್ ಹೆಚ್ಚು ಸಂಕಷ್ಟಕ್ಕೊಳಗಾಯಿತು’’ ಎಂದು ಪ್ರಧಾನಿ ಸ್ಥಾನದಿಂದ ಸದನದಲ್ಲಿ ಹೇಳುವ ಮೂಲಕ ಹೋರಾಟ ನಿರತ ಸಿಖ್ಖರು ಖಾಲಿಸ್ತಾನಿ ಉಗ್ರಗಾಮಿಗಳು ಎಂಬ ಸಂಘ ಪರಿವಾರದ ಉಗ್ರಗಾಮಿ ಟ್ರೋಲ್ ಪಡೆಗಳ ಅಪಪ್ರಚಾರಕ್ಕೆ ಪ್ರಧಾನಿ ಮೋದಿ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. 1984ರಲ್ಲಿ ನಡೆದದ್ದೇನು? ಅದರಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಪಾತ್ರವಿರಲಿಲ್ಲವೇ? 1984ರ ಜೂನ್ ತಿಂಗಳಲ್ಲಿ ಭಿಂದ್ರನ್‌ವಾಲೆ ನೇತೃತ್ವದ ಕೆಲವು ಖಾಲಿಸ್ತಾನಿ ಉಗ್ರಗಾಮಿಗಳು ಸಿಖ್ಖರ ಅತ್ಯಂತ ಪವಿತ್ರವೆಂದು ಭಾವಿಸುವ ಅಮೃತಸರದ ಸ್ವರ್ಣ ಮಂದಿರದಲ್ಲಿ ಅವಿತಿಟ್ಟುಕೊಂಡಿದ್ದರು. ಅವರನ್ನು ಅಲ್ಲಿಂದ ತೆರವು ಮಾಡಲು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದ ಸೇನೆಗೆ ಸ್ವರ್ಣ ಮಂದಿರದ ಮೇಲೆ ಸೇನಾ ದಾಳಿ ನಡೆಸಲು ಆದೇಶ ನೀಡಿದರು. ಪವಿತ್ರ ಮಂದಿರದ ಮೇಲೆ ಸೇನಾಪಡೆಗಳು ಬೂಟುಗಾಲು ಹಾಗೂ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿ ಭಿಂದ್ರನ್‌ವಾಲೆಯ ಜೊತೆಗೆ 500ಕ್ಕೂ ಹೆಚ್ಚು ಸಿಖ್ ಭಕ್ತರನ್ನೂ ಬಲಿ ತೆಗೆದುಕೊಂಡವು. ಇದು ಇಡೀ ಸಿಖ್ ಸಮುದಾಯವನ್ನೇ ಸಿಟ್ಟಿಗೆಬ್ಬಿಸಿತು. ಏಕೆಂದರೆ ಭಿಂದ್ರನ್‌ವಾಲೆ ಎಂಬ ಉಗ್ರ ಪ್ರತ್ಯೇಕತಾವಾದಿಯನ್ನು ಸೃಷ್ಟಿಸಿದ್ದೇ ಇಂದಿರಾ ಕಾಂಗ್ರೆಸ್. ಏಕೆಂದರೆ ಪಂಜಾಬ್ ಮತ್ತು ಹರ್ಯಾಣ ರಾಜ್ಯ ವಿಭಜನೆಯ ಕಾಲದಿಂದಲೂ ನದಿ ನೀರಿನ ಹಂಚಿಕೆಯಂತಹ ವಿಷಯಗಳಿಂದಲೂ ಒಳಗೊಂಡು ಪಂಜಾಬ್ ರಾಜ್ಯದ ಆರ್ಥಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಗಾಗಿ ಪಂಜಾಬ್‌ನ ಜನರು ಸಂವಿಧಾನದ ಚೌಕಟ್ಟಿನ ಒಳಗೆ ಸಾಕಷ್ಟು ಹೋರಾಟ ಮಾಡುತ್ತಾ ಬಂದಿದ್ದರು. ಅದರ ಭಾಗವಾಗಿಯೇ 1960ರ ದಶಕದಲ್ಲಿ ಆನಂದ್ ಸಾಹಿಬ್ ನಿರ್ಣಯಗಳಾಗಿದ್ದರೂ ಕೇಂದ್ರ ಸರಕಾರ ಅದನ್ನು ಜಾರಿಗೆ ತರದೇ ಪಂಜಾಬ್ ಹಾಗೂ ಸಿಖ್ಖರ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸಿಕೊಂಡು ಬಂದಿತ್ತು. ಈ ಕಾಂಗ್ರೆಸ್ ವಿರೋಧಿ ಭಾವನೆಯನ್ನು ಶಿರೋಮಣಿ ಅಕಾಲಿ ದಳವು ರಾಜಕೀಯವಾಗಿ ಬಳಸಿಕೊಂಡಿತ್ತು.
ಐತಿಹಾಸಿಕವಾಗಿಯೂ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಲವಾರು ಸಿಖ್ ಸಂಘಟನೆಗಳು ಸ್ವತಂತ್ರ ಭಾರತವು ಹಿಂದೂ ಆಧಿಪತ್ಯದ ದೇಶವಾಗುವ ಸಂಭವವಿದೆ ಎಂದು ಭಾವಿಸಿ ಪ್ರತ್ಯೇಕ ಖಾಲಿಸ್ತಾನವನ್ನು ಆಗ್ರಹಿಸಿದ್ದರು. ಸ್ವಾತಂತ್ರ್ಯಾನಂತರವೂ ಪಂಜಾಬ್‌ನ ನ್ಯಾಯಯುತ ಬೇಡಿಕೆಗಳಿಗೂ ಆಗುತ್ತಿದ್ದ ಅನ್ಯಾಯದ ಹಿನ್ನೆಲೆಯಲ್ಲಿ ದಿಲ್ಲಿ ಆಧಿಪತ್ಯದಿಂದ ಪಂಜಾಬ್‌ಗೆ ನ್ಯಾಯ ಸಿಗುವುದಿಲ್ಲ ಎಂಬ ಭಾವನೆ ಸಿಖ್ ಸಮುದಾಯದಲ್ಲಿ ಬಹಳ ಬಲವಾಗಿ ಬೇರೂರಲು ಪ್ರಾರಂಭಿಸಿತ್ತು ಹಾಗೂ ಪಂಜಾಬ್‌ನ ಪ್ರಧಾನಧಾರೆ ರಾಜಕೀಯ ಪಕ್ಷಗಳು ದಿಲ್ಲಿಯ ಜೊತೆ ಕೈಗೂಡಿಸಿರುವವರು ಎಂಬ ಅಭಿಪ್ರಾಯವೂ ದಟ್ಟವಾಗಿತ್ತು. ಇತಿಹಾಸದುದ್ದಕ್ಕೂ ದಿಲ್ಲಿ ವಿರುದ್ಧ ಹಲವಾರು ಯುದ್ಧಗಳನ್ನು ನಿರಂತರವಾಗಿ ನಡೆಸುತ್ತಲೇ ಬಂದಿರುವ ಮತ್ತು ಒಂದು ಸೈನಿಕ ಸಮುದಾಯವೇ ಆಗಿರುವ ಸಿಖ್ಖರಲ್ಲಿ ಈ ಭಾವನೆಗಳು ಬಹಳ ಬೇಗ ದಿಲ್ಲಿಯ ವಿರುದ್ಧದ ಸಶಸ್ತ್ರ ಹೋರಾಟಕ್ಕೂ ಕಾರಣವಾಯಿತು. ಸಿಖ್ ಯುವ ಸಮುದಾಯದಲ್ಲಿ ದಿಲ್ಲಿಯ ವಿರುದ್ಧ ನ್ಯಾಯ ಹಾಗೂ ಪ್ರತ್ಯೇಕ ಅಸ್ಮಿತೆಯ ಅಜೆಂಡಾಗಳನ್ನು ಇಟ್ಟುಕೊಂಡು ಹಲವಾರು ಸಶಸ್ತ್ರ ಯುವ ಸಂಘಟನೆಗಳು ಹುಟ್ಟಿಕೊಂಡು ಪರಸ್ಪರ ಹಿರಿಮೆಗೆ ಸೆಣಸಾಡ ಹತ್ತಿದವು. ಭಿಂದ್ರನ್‌ವಾಲೆ ಈ ಸಂದರ್ಭದ ಕೂಸು. ಆದರೆ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಭಿಂದ್ರನ್‌ವಾಲೆಯನ್ನು ಬಳಸಿಕೊಂಡು ಪಂಜಾಬ್‌ನ ರಾಜಕಾರಣವನ್ನು ತನ್ನ ಪರವಾಗಿ ರೂಢಿಸಿಕೊಳ್ಳುವ ಅಪಾಯಕಾರಿ ರಾಜಕೀಯದಾಟವನ್ನು ಪ್ರಾರಂಭಿಸಿತು. ಆದರೆ ಭಿಂದ್ರನ್‌ವಾಲೆ ಕ್ರಮೇಣ ಕಾಂಗ್ರೆಸ್ ಆಣತಿಯನ್ನು ಮೀರಿ ಸ್ವತಂತ್ರ ಖಾಲಿಸ್ತಾನ ಸ್ಥಾಪನೆಗಾಗಿ ದಿಲ್ಲಿ ಹಾಗೂ ಕಾಂಗ್ರೆಸ್ ವಿರುದ್ಧವೂ ಉಗ್ರ ಭಯೋತ್ಪಾದನಾ ಮಾರ್ಗವನ್ನು ಹಿಡಿದ. ಮತ್ತೊಂದೆಡೆ ತುರ್ತುಸ್ಥಿತಿಯಲ್ಲಿ ಅಧಿಕಾರ ಕಳೆದುಕೊಂಡ ಇಂದಿರಾಗಾಂಧಿಯವರ ಕಾಂಗ್ರೆಸ್ 1980ರಲ್ಲಿ ಮತ್ತೆ ಅಧಿಕಾರ ಪಡೆದ ನಂತರ ಈ ಹಿಂದಿನ ತಳಸಮುದಾಯ ಪರ ಘೋಷಣೆಗಳ ರಾಜಕಾರಣದಿಂದ ಅಧಿಕಾರ ಹಿಡಿಯುವುದು ಕಷ್ಟ ಎಂಬ ಗ್ರಹಿಕೆಗೆ ಬಂದಿತ್ತು. ಹೀಗಾಗಿ ದೇಶ ಆತಂಕದಲ್ಲಿದೆ, ಪಂಜಾಬ್‌ನಲ್ಲಿ ಹಾಗೂ ಕಾಶ್ಮೀರದಲ್ಲಿ ಹಿಂದೂಗಳು ಆತಂಕದಲ್ಲಿದ್ದಾರೆ, ದೇಶದ ಭದ್ರತೆಯನ್ನು ಕಾಪಾಡಲು ಬಲವಾದ ರಾಜಕೀಯ ನಾಯಕತ್ವ ಬೇಕು ಎಂಬ ಹೊಸ ಆತಂಕವಾದಿ ಹಾಗೂ ಮೃದು ಹಿಂದುತ್ವವಾದಿ ರಾಜಕಾರಣವನ್ನೂ ಪ್ರಾರಂಭಿಸಿತ್ತು. ಅರ್ಥಾತ್ ಇಂದು ಮೋದಿಯವರ ಬಿಜೆಪಿ ಮಾಡುತ್ತಿರುವ ಹಿಂದೂ ರಾಷ್ಟ್ರವಾದಿ ಆತಂಕವಾದಿ ರಾಜಕಾರಣದ ಲಾಭವನ್ನು ಮೊದಲು ಪ್ರಯೋಗ ಮಾಡಿದ್ದೇ 1980-84ರ ಇಂದಿರಾ ಕಾಂಗ್ರೆಸ್ ಎಂಬುದು ಇತಿಹಾಸದ ವಿಪರ್ಯಾಸ. ಅದೇನೇ ಇರಲಿ. ಈ ರಾಜಕಾರಣಕ್ಕೆ ಆಗ ಬಿಜೆಪಿ ಇನ್ನೂ ಪೈಪೋಟಿ ಕೊಡುತ್ತಿರಲಿಲ್ಲವಾದ್ದರಿಂದ ಅದರ ಲಾಭ ಹಾಗೂ ನಷ್ಟಗಳೆರಡನ್ನೂ ಕಾಂಗ್ರೆಸ್ಸೇ ಅನುಭವಿಸಬೇಕಿತ್ತು. ಈ ಸಂದರ್ಭದಲ್ಲಿ ಖಾಲಿಸ್ತಾನಿ ಉಗ್ರಗಾಮಿತ್ವದ ನಾಶಕ್ಕಾಗಿ ಆಪರೇಷನ್ ಬ್ಲೂ ಸ್ಟಾರ್ ಮಾಡಿದ ಇಂದಿರಾಗಾಂಧಿಯನ್ನು 1984ರ ಅಕ್ಟೋಬರ್ 31ರಂದು ಅವರ ಸಿಖ್ ಅಂಗರಕ್ಷಕರೇ ಹತ್ಯೆ ಮಾಡಿದರು.
ಆನಂತರ ಇಡೀ ದಿಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಸಿಖ್ಖರ ವಿರುದ್ಧ ನರಮೇಧ ಪ್ರಾರಂಭವಾಯಿತು. ದಿಲ್ಲಿಯಲ್ಲಂತೂ ಕಾಂಗ್ರೆಸ್‌ನ ಸಜ್ಜನ್ ಕುಮಾರ್, ಭಗತ್, ಟೈಟ್ಲರ್‌ರಂತಹ ಹಲವಾರು ದೊಡ್ಡ ನಾಯಕರೆೇ ಸಿಖ್ಖರ ಬೇಟೆಗೆ ನಾಯಕತ್ವ ವಹಿಸಿದರು. ದೀರ್ಘ ಕಾಲ ಅವರಲ್ಲಿ ಯಾರಿಗೂ ಶಿಕ್ಷೆಯೂ ಆಗಿರಲಿಲ್ಲ. ಇನ್ನೂ ಹಲವಾರು ನಾಯಕರ ಮೇಲೆ ಇದುವರೆಗೂ ಅಪರಾಧ ಸಾಬೀತುಮಾಡಲಾಗಿಲ್ಲ.
ಅದೇನೇ ಇರಲಿ ಇವೆಲ್ಲ ಎಲ್ಲರಿಗೂ ಗೊತ್ತಿರುವ ಕಥನ. ಬಿಜೆಪಿ ಮತ್ತು ಸಂಘ ಪರಿವಾರ ಅತ್ಯಂತ ಉತ್ಸಾಹದಿಂದ ಹಲವಾರು ಮಸಾಲೆಗಳನ್ನು ಸೇರಿಸಿ ಪ್ರಚಾರ ಮಾಡುವ ಕಥನ.
ಪಂಜಾಬನ್ನು ಹಿಂದೂ-ಸಿಖ್ ಎಂದು ವಿಭಜಿಸುತ್ತಾ ಬಂದ ಆರೆಸ್ಸೆಸ್-ಜನಸಂಘ
ಆದರೆ ದೇಶದಲ್ಲಿ ಸಿಖ್ ವಿರೋಧಿ ಪೂರ್ವಾಗ್ರಹಗಳನ್ನು ಬಿತ್ತುವುದರಲ್ಲಿ ಹಾಗೂ 1984ರ ಸಿಖ್ ನರಮೇಧದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಪಾತ್ರವೇನೆಂಬುದನ್ನು ಸಂಘಪರಿವಾರ, ಮೋದಿ ಮತ್ತು ಅವರ ಬಿಜೆಪಿ ಮುಚ್ಚಿಡುತ್ತಿದೆ. ಮೊದಲನೆಯದಾಗಿ ಪಂಜಾಬ್ ಒಂದು ಪ್ರತ್ಯೇಕ ರಾಜ್ಯವಾಗಬಾರದೆಂದು ಸಂಘಪರಿವಾರ ಮತ್ತು ಇಂದಿನ ಬಿಜೆಪಿಯ ಅಂದಿನ ರೂಪವಾಗಿದ್ದ ಜನಸಂಘವು ಸತತ ಪ್ರಯತ್ನ ಮಾಡುತ್ತದೆ. ಏಕೆಂದರೆ ಪಂಜಾಬ್ ಪ್ರತ್ಯೇಕ ರಾಜ್ಯವಾದರೆ ಅಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಪಂಜಾಬ್‌ನ ಹಿಂದೂಗಳನ್ನು ಜನಸಂಘ ಸಂಘಟಿಸುತ್ತದೆ. ಪಂಜಾಬ್ ಪ್ರತ್ಯೇಕ ರಾಜ್ಯವಾಗುವ ಹೊತ್ತಿನಲ್ಲಿ 1961ರ ಸೆನ್ಸಸ್‌ನಲ್ಲಿ ಪಂಜಾಬ್‌ನ ಹಿಂದೂಗಳೆಲ್ಲರೂ ತಮ್ಮ ಮಾತೃಭಾಷೆಯನ್ನು ಪಂಜಾಬ್ ಎಂದು ದಾಖಲಿಸದೆ ಹಿಂದಿ ಎಂದು ದಾಖಲಿಸಲು ಜನಸಂಘ ಪಂಜಾಬ್‌ನ ಹಿಂದೂಗಳಿಗೆ ಕರೆ ನೀಡುತ್ತದೆ. ಆ ಮೂಲಕ ಭಾಷೆಯನ್ನು ಧರ್ಮದ ಜೊತೆ ಬೆಸೆದು ಜನರನ್ನು ಒಡೆದಾಳುವ ನೀತಿಯನ್ನು ಪ್ರಯೋಗಿಸಿತ್ತು. ನಂತರ ಪಂಜಾಬ್‌ನ ಸಿಖ್ಖರಲ್ಲಿ ಕಾಂಗ್ರೆಸ್ ವಿರೋಧಿ ಭಾವನೆಯು ಮಡುಗಟ್ಟುತ್ತಿದ್ದರೂ ಅದರ ಲಾಭ ಅಕಾಲಿದಳಕ್ಕೆ ಸಿಗುತ್ತದೆಯೇ ಹೊರತು ತನಗಲ್ಲವೆಂದು ಅರ್ಥಮಾಡಿಕೊಂಡಿದ್ದ ಜನಸಂಘ ಪಂಜಾಬ್‌ನ ಹಿಂದೂಗಳಲ್ಲಿ ಸಿಖ್ಖರ ಬಗ್ಗೆ ಆತಂಕವನ್ನು ಸೃಷ್ಟಿಸುತ್ತಲೇ ತನ್ನ ರಾಜಕಾರಣವನ್ನು ನಡೆಸಿಕೊಂಡು ಬಂದಿತು.
1984ರ ಸಿಖ್ ನರಮೇಧ ಮತ್ತು ಆರೆಸ್ಸೆಸ್ ನಸುಗುನ್ನಿ ಪಾತ್ರ
ಆದರೆ ಒಟ್ಟಾರೆ 1984ರ ಸಿಖ್ ನರಮೇಧದ ಪ್ರಕರಣದಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿಗೆ ಅವಕಾಶವಾದದಿಂದ ವರ್ತಿಸುತ್ತಿರುವುದು ಆರೆಸ್ಸೆಸ್ ಮತ್ತು ಬಿಜೆಪಿಗಳು. ಗುಜರಾತ್‌ನಲ್ಲಿ ಸಂಘ ಪರಿವಾರ ನಡೆಸಿದ ಮುಸ್ಲಿಮರ ಮಾರಣಹೋಮದ ಬಗ್ಗೆ ಬಿಜೆಪಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದಾಗಲೆಲ್ಲ ಕಾಂಗ್ರೆಸ್‌ನವರು ಸಿಖ್ ನರಮೇಧ ನಡೆಸಲಿಲ್ಲವೇ ಎಂದು ಪ್ರತಿದಾಳಿ ನಡೆಸಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳುತ್ತಾ ಬಂದಿದ್ದಾರೆ. ಅದರಲ್ಲೂ 1999ರಿಂದ ಬಿಜೆಪಿಯ ಆಪ್ತಮಿತ್ರನಾಗಿದ್ದ ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಸಮಾಜವಾದಿ ಜಾರ್ಜ್ ಫೆರ್ನಾಂಡಿಸ್‌ರವರಂತೂ ಗುಜರಾತ್ ಪಾಪದಿಂದ ಬಿಜೆಪಿಯನ್ನು ರಕ್ಷಿಸಲು 84ರ ಸಿಖ್ ನರಮೇಧವನ್ನು ಪ್ರತ್ಯಸ್ತ್ರವನ್ನಾಗಿ ಬಳಸುವುದರಲ್ಲಿ ನಿಸ್ಸೀಮರಾಗಿದ್ದರು. 2002ರಲ್ಲಿ ಸಂಸತ್‌ನಲ್ಲಿ ಪೊಟಾ ಬಗ್ಗೆ ನಡೆದ ಚರ್ಚೆಯಲ್ಲೂ ಜಾರ್ಜ್ ಫೆರ್ನಾಂಡಿಸರು ಸಮಾಜವಾದಿಯಾಗಿದ್ದಾಗ ಕಲಿತ ವಾಕ್ಚಾತುರ್ಯವನ್ನೆಲ್ಲಾ ಬಳಸಿಕೊಂಡು ಸಿಖ್ ನರಮೇಧದ ಮುಂದೆ ಗುಜರಾತ್ ನರಮೇಧ ಏನೂ ಅಲ್ಲವೆಂದು ವಾದಿಸಿದ್ದರು.
ಆದರೆ 84ರ ನರಮೇಧದ ಬಗ್ಗೆ ಸಂಘಪರಿವಾರದ ನಿಲುವು ಮತ್ತು ಪಾತ್ರವೇನಾಗಿತ್ತು ಎಂಬುದನ್ನು ಮಾತ್ರ ಈ ಜಾರ್ಜ್ ಮತ್ತು ಸಂಘಪರಿವಾರ ಎರಡೂ ಮುಚ್ಚಿಹಾಕುತ್ತಿವೆ. ವಾಸ್ತವವಾಗಿ 1984ರಲ್ಲಿ ಜಾರ್ಜ್ ಫೆರ್ನಾಂಡಿಸರು ಇನ್ನೂ ಸಂಘಪರಿವಾರದ ಸನಿಹ ಸುಳಿಯದೆ ಇದ್ದಾಗ ‘ಪ್ರತಿಪಕ್ಷ’ ಎಂಬ ಹಿಂದಿ ವಾರಪತ್ರಿಕೆಯನ್ನು ಹೊರತರುತ್ತಿದ್ದರು. ಅದರ 1984ರ ನವೆಂಬರ್ 25ರ ಸಂಚಿಕೆಯಲ್ಲಿ ಸಿಖ್ ಹತ್ಯಾಕಾಂಡದಲ್ಲಿ ಆರೆಸ್ಸೆಸ್‌ನ ಪಾತ್ರದ ಬಗ್ಗೆ ಫೆರ್ನಾಂಡಿಸರು 'Indira Congress-RSS collusion' (ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್‌ಗಳ ಒಳ ಒಪ್ಪಂದ) ಎಂಬ ಲೇಖನವನ್ನು ಬರೆದಿದ್ದರು. ಅಲ್ಲದೆ ಸಿಖ್ ಹತ್ಯಾಕಾಂಡದ ಬಗ್ಗೆ ಆರೆಸ್ಸೆಸ್ ನಿಲುವೇನು ಎಂದು ಆಗಿನ ಆರೆಸ್ಸೆಸ್ ಪ್ರಮುಖರಲ್ಲಿ ಒಬ್ಬರಾದ ನಾನಾ ದೇಶಮುಖ್ ಎಂಬವರು ಗುರು ನಾನಕ್ ದಿವಸವಾದ ನವೆಂಬರ್ 8, 1984ರಂದು ಎಲ್ಲಾ ರಾಜಕೀಯ ಪಕ್ಷಗಳಿಗೂ ಕಳಿಸಿದ ಪತ್ರವೊಂದನ್ನು ಯಥಾವತ್ ಪ್ರಕಟಿಸಿದ್ದರು. ದಿಲ್ಲಿಯಲ್ಲಿ ಸಿಖ್ಖರ ನರಮೇಧವಾಗಿದ್ದು ನವೆಂಬರ್ 5-8ರ ನಡುವೆ ಎಂಬುದನ್ನು ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಅಷ್ಟು ಮಾತ್ರವಲ್ಲ ಆರೆಸ್ಸೆಸ್‌ನ ಆ ಪತ್ರದ ಬಗ್ಗೆ ಫೆರ್ನಾಂಡಿಸರು ತಮ್ಮ ಸಂಪಾದಕೀಯದಲ್ಲಿ ಹೀಗೆ ಬರೆದುಕೊಂಡಿದ್ದರು:
‘‘ಈ ಕೆಳಗಿನ ಪತ್ರವನ್ನು ಬರೆದಿರುವವರು ಆರೆಸ್ಸೆಸ್‌ನ ಪ್ರಮುಖ ಸಿದ್ಧಾಂತಕರ್ತರು ಮತ್ತು ನೀತಿ ನಿರ್ಣಯ ಮಾಡುವವರೂ ಆಗಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಅವರು ಈ ದಾಖಲೆಯನ್ನು ಎಲ್ಲಾ ಪ್ರಮುಖ ರಾಜಕಾರಣಿಗಳಿಗೂ ವಿತರಿಸಿದರು. ಇದಕ್ಕೆ ಒಂದು ಐತಿಹಾಸಿಕ ಮಹತ್ವವಿರುವುದರಿಂದ ನಾವು ನಮ್ಮ ಪತ್ರಿಕಾ ನೀತಿಯನ್ನು ಉಲ್ಲಂಘಿಸಿ ಅದರ ಪೂರ್ಣ ಪಾಠವನ್ನು ಪ್ರಕಟಿಸುತ್ತಿದ್ದೇವೆ. ಈ ದಾಖಲೆಯು ಆರೆಸ್ಸೆಸ್‌ಗೂ ಮತ್ತು ಇಂದಿರಾ ಕಾಂಗ್ರೆಸ್‌ಗೂ ಕುದುರುತ್ತಿರುವ ಗೆಳೆತನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.’’
ಆದರೆ ಫೆರ್ನಾಂಡಿಸರಿಗೂ ಮತ್ತು ಆರೆಸ್ಸೆಸ್‌ಗೂ ಗೆಳೆತನ ಕುದುರಿದ ನಂತರ ಇದರ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಈಗ ಮತ್ತೆ 1984ರ ಸಿಖ್ ನರಮೇಧ ಮತ್ತು 2002ರ ಗುಜರಾತ್ ಹತ್ಯಾಕಾಂಡಗಳನ್ನು ರಾಜಕೀಯ ಪಕ್ಷಗಳು ಅದರಲ್ಲೂ ವಿಶೇಷವಾಗಿ ಬಿಜೆಪಿ ಅಮಾನವೀಯವಾದ ಅವಕಾಶವಾದಿ ರಾಜಕಾರಣವಾದ ವಸ್ತುವನ್ನಾಗಿ ಮಾಡಿಕೊಳ್ಳುತ್ತಿರುವುದರಿಂದ ಈ ಮಹತ್ವದ ದಾಖಲೆಯ ಬಗ್ಗೆ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿರುವ ಶಂಸುಲ್ ಇಸ್ಲಾಂರವರು ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ನಾನಾ ದೇಶ್‌ಮುಖ್‌ರವರ ಆ ಸುದೀರ್ಘ ಪತ್ರದ ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ:
1. ಸಿಖ್ಖರ ನರಮೇಧವನ್ನು ಮಾಡಿದವರು ಯಾರೋ ಕೆಲವು ಸಮಾಜ ವಿರೋಧಿ ಪುಂಡರಲ್ಲ. ಬದಲಿಗೆ ಅದು ಭಾರತದ ಹಿಂದೂಗಳಲ್ಲಿ ಉಂಟಾಗಿದ್ದ ಸಹಜ ಆಕ್ರೋಶದ ಅಭಿವ್ಯಕ್ತಿಯಾಗಿದೆ.
2. ಇಂದಿರಾ ಗಾಂಧಿಯವರನ್ನು ಕೊಂದ ಇಬ್ಬರು ಸಿಖ್ಖರು ಮತ್ತು ಇಡೀ ಸಿಖ್ ಸಮುದಾಯದ ನಡುವೆ ನಾನಾ ದೇಶಮುಖರು ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವರ ಪ್ರಕಾರ ಇಡೀ ಸಿಖ್ ಸಮುದಾಯದ ಆದೇಶದಂತೆಯೇ ಅವರಿಬ್ಬರೂ ಇಂದಿರಾರವರನ್ನು ಹತ್ಯೆ ಮಾಡಿದ್ದಾರೆ.
3. ‘ಆಪರೇಷನ್ ಬ್ಲೂ ಸ್ಟಾರ್’ ಅತ್ಯಂತ ರಾಷ್ಟ್ರಭಕ್ತಿಯಿಂದ ಕೂಡಿದ ಕಾರ್ಯಾಚರಣೆಯಾಗಿದೆ. ಅದನ್ನು ವಿರೋಧಿಸುವುದು ರಾಷ್ಟ್ರದ್ರೋಹ.
4. ಸಿಖ್ಖರು ತಮ್ಮ ಮೇಲೆ ರಾಷ್ಟ್ರೀಯವಾದಿ ಹಿಂದೂಗಳು ನಡೆಸುತ್ತಿರುವ ದೌರ್ಜನ್ಯಗಳನ್ನು ಸಹಿಸಬೇಕೇ ವಿನಃ ಪ್ರತಿಭಟಿಸಬಾರದು.
5. ಇಂದಿರಾ ಗಾಂಧಿಯವರು ರಾಷ್ಟ್ರದ ದೊಡ್ಡ ನಾಯಕಿಯಾಗಿದ್ದು ಅಂಥವರನ್ನು ಕೊಂದಾಗ ಇಂತಹ ಹತ್ಯಾಕಾಂಡಗಳು ಸಂಭವಿಸುವುದು ಸಹಜ.
6. ‘‘ದೊಡ್ಡ ಮರವೊಂದು ಉರುಳಿದಾಗ ಸುತ್ತಮುತ್ತಲಲ್ಲಿ ಕಂಪನ ಉಂಟಾಗುವುದು ಸಹಜ’’ ಎಂಬ ರಾಜೀವ್ ಗಾಂಧಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ.
ಇದು ಸಂಘಪರಿವಾರ ಹಾಗೂ ಬಿಜೆಪಿಗಳ ಸಿಖ್ ವಿರೋಧಿ ರಾಜಕೀಯದ ಅಸಲಿ ಇತಿಹಾಸ. ಅದರ ಅಭಿವ್ಯಕ್ತಿಯೇ ಹೋರಾಟ ನಿರತ ಪಂಜಾಬ್ ರೈತರೆಲ್ಲಾ ಖಾಲಿಸ್ತಾನಿ ಉಗ್ರಗಾಮಿಗಳೆಂಬ ಮೋದಿಯವರ ಇಂಗಿತ ಹಾಗೂ ಬಿಜೆಪಿಗಳ ಪ್ರಚಾರ.