ಮೀಸಲಾತಿ: ಒಣಗುತ್ತಿರುವ ಕೆರೆಯಲ್ಲಿ ಮೀನುಗಾರಿಕೆಗೆ ಪೈಪೋಟಿ?

Update: 2021-02-17 08:14 GMT

ಮೂಲಭೂತ ಬದಲಾವಣೆಯನ್ನು ಒಳಗಾಗಿಸಿಕೊಳ್ಳದ ಮೀಸಲಾತಿ ಹೋರಾಟಗಳು ಪರೋಕ್ಷವಾಗಿ ದಲಿತ ಹಿಂದುಳಿದ ಆಶಯಗಳ ಶತ್ರುಗಳಾದ ಕಾರ್ಪೊರೇಟ್-ಬ್ರಾಹ್ಮಣಶಾಹಿ ಚೌಕಟ್ಟಿನೊಳಗೆ ಸಿಲುಕಿಕೊಂಡು ಭ್ರಮಾತ್ಮಕ ಪರಿಹಾರದ ಬೆನ್ನಹಿಂದೆ ಬೀಳುವಂತಾಗುತ್ತದೆ. ಒಣಗುತ್ತಿರುವ ಕೆರೆಯಲ್ಲಿ ಮೀನು ಹಿಡಿಯಲು ಪೈಪೋಟಿ ನಡೆಸುವಂತಾಗುತ್ತದೆ. ಬರಗಾಲದಲ್ಲಿ ಒಣಬೇಸಾಯದಂತಾಗುತ್ತದೆ. ಅಲ್ಲವೇ?

ದಿಲ್ಲಿಯಲ್ಲಿ ಎಲ್ಲಾ ಜಾತಿ-ವರ್ಗಗಳಿಗೆ ಸೇರಿದ ರೈತಾಪಿ ಜನರು ಕಾರ್ಪೊರೇಟ್ ಹಾಗೂ ಪ್ರಭುತ್ವದ ಆಕ್ರಮಣದಿಂದ ಒಕ್ಕಲುತನವನ್ನು ರಕ್ಷಿಸಿಕೊಳ್ಳಲು ಚಾರಿತ್ರಿಕ ಹೋರಾಟ ನಡೆಸಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಸಾಪೇಕ್ಷವಾಗಿ ಮುಂದುವರಿದ ಜಾತಿಗಳು ಹಿಂದುಳಿದ ಮೀಸಲಾತಿಗಾಗಿಯೂ, ಹಿಂದುಳಿದ ಜಾತಿಗಳು ಹೆಚ್ಚುವರಿ ಮೀಸಲಾತಿಗೂ ಪಾದಯಾತ್ರೆಗಳನ್ನು ಮಾಡುತ್ತಿವೆ. ಮತ್ತೊಂದು ಕಡೆ ಮೋದಿ ಸರಕಾರವು ಈ ಬಾರಿ ಬಜೆಟ್‌ನಲ್ಲೂ ಮೀಸಲಾತಿ ಒದಗಿಸುತ್ತಿರುವ ಸರಕಾರದ ಗಾತ್ರ ಹಾಗೂ ಸರಕಾರಿ ಮಧ್ಯಪ್ರವೇಶ ಹಾಗೂ ಒಡೆತನದ ವಲಯಗಳನ್ನು ಇನ್ನಷ್ಟು ಕಿರಿದುಗೊಳಿಸಿದೆ. ಹೀಗಾಗಿ, ಪರೋಕ್ಷವಾಗಿ ಮೀಸಲಾತಿಯನ್ನೇ ಮತ್ತಷ್ಟು ಅಪ್ರಸ್ತುತ ಮಾಡಿಬಿಡುವ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿ ಘೋಷಿಸಿವೆ.

ಕಳೆದ ಎರಡು ದಶಕಗಳಿಂದ ಕೃಷಿ ಬಿಕ್ಕಟ್ಟು ಹೆಚ್ಚುತ್ತಿದೆ. ಗ್ರಾಮೀಣ ಬದುಕು ಅತ್ಯಂತ ಸಂಕಷ್ಟಕ್ಕೊಳಗಾಗಿದೆ. ಪಾರಂಪರಿಕವಾಗಿ ಜೀವನೋಪಾಯಗಳ ಮೂಲವಾಗಿದ್ದ ಕಸುಬುಗಳು ಆದಾಯದ ಒರತೆಯನ್ನು ಕಳೆದುಕೊಳ್ಳುತ್ತಾ ಗ್ರಾಮೀಣ ಸಮಾಜದ ಮಧ್ಯಮ ಹಾಗೂ ಯಜಮಾನಿಕ ಜಾತಿಗಳು ಅಪಾರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕೃಷಿಯಿಂದ ಬಲವಂತವಾಗಿ ಹೊರದೂಡಲ್ಪಡುತ್ತಿರುವ ಈ ಸಮುದಾಯಗಳು ನಗರದಲ್ಲಿಯೂ ಮರ್ಯಾದೆಯ ಬದುಕನ್ನು ನಡೆಸಲಾಗದೆ ಆರ್ಥಿಕ ಮುಗ್ಗಟ್ಟಿನೊಂದಿಗೆ ಸಾಂಸ್ಕೃತಿಕ-ಸಾಮಾಜಿಕ ಬಿಕ್ಕಟ್ಟನ್ನೂ ಎದುರಿಸುತ್ತಿವೆ. ಕೃಷಿ ಅವಲಂಬಿತ ಜಾತಿಗಳ ಈ ಬಗೆಯ ಅತಂತ್ರ ಹಾಗೂ ಅಭದ್ರತೆಯನ್ನು ಹಿಂದುತ್ವ ರಾಜಕಾರಣಕ್ಕೆ ಗೊಬ್ಬರವಾಗಿ ಬಳಸಿಕೊಂಡ ಸಂಘಪರಿವಾರ ಕೃಷಿ ಆಧಾರಿತ ಹಿಂದುಳಿದ ಜಾತಿಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದೇನೋ ನಿಜ. ಆದರೆ ಗ್ರಾಮೀಣ ಬದುಕಿನ ಅಡಿಪಾಯವಾಗಿದ್ದ ಕೃಷಿಯ ಬಿಕ್ಕಟ್ಟನ್ನು ಬಗೆಹರಿಸುವ ಯಾವ ಉದ್ದೇಶವನ್ನೂ ಹೊಂದಿರದ ಕಾರ್ಪೊರೇಟ್-ಹಿಂದುತ್ವವಾದಿ ಸರಕಾರಗಳು ಒಣಗುತ್ತಿರುವ ಮೀಸಲಾತಿ ಕೆರೆಗೆ ಅವಕಾಶಗಳ ನೀರು ಹರಿಸುವ ಬದಲು ಇರುವ ನೀರಿಗೆ ಬರಗೆಟ್ಟಿರುವ ಜಾತಿಗಳು ಬಡಿದಾಡುಕೊಳ್ಳುವಂತೆ ಮಾಡುತ್ತಿವೆ.

ಮೋದಿ ಕಾಲದಲ್ಲಿ ಮೀಸಲಾತಿ: ಒಡೆದಾಳುವ ರಾಜನೀತಿ

 ಮೋದಿ ಸರಕಾರ ಅಧಿಕಾರಕ್ಕೆ ಬಂದ ಈವರೆಗೆ ಮೀಸಲಾತಿಯಲ್ಲಿಲ್ಲದ ಬಲಾಢ್ಯ ಜಾತಿಗಳು ಮತ್ತು ವಿವಿಧ ಹಿಂದುಳಿದ ಜಾತಿಗಳಲ್ಲಿರುವ ಜಾತಿ ಪ್ರತಿಷ್ಠೆಯ ಹಾಗೂ ಹಿಂದುತ್ವದ ಒಲುಮೆಯ ಒಂದು ಬಲಾಢ್ಯ ವರ್ಗ ದೇಶದೆಲ್ಲೆಡೆ ತಮಗೂ ಮೀಸಲಾತಿ ವಿಸ್ತರಿಸುವುದಕ್ಕೆ ಅಥವಾ ಇರುವ ಮೀಸಲಾತಿಯ ಹೆಚ್ಚಳಕ್ಕೆ ಅಥವಾ ಹೆಚ್ಚು ಅವಕಾಶಗಳಿರುವ ಮೀಸಲಾತಿಯ ಪ್ರವರ್ಗಕ್ಕೆ ಬದಲಾವಣೆಗೆ ಆಗ್ರಹಿಸುತ್ತಾ ಬೃಹತ್ ಜಾತಿ ಸಮಾವೇಶಗಳನ್ನು ಸಂಘಟಿಸುತ್ತಾ ಬಂದಿವೆ.

ಆದರೆ ಈ ಪ್ರಕ್ರಿಯೆಯಲ್ಲಿ ಹಿಂದುತ್ವದ ತುಪ್ಪವನ್ನು ಮೂಗಿಗೆ ಸವರುತ್ತಾ ಮೀಸಲಾತಿಯ ಹಿಂದಿನ ತಾತ್ವಿಕತೆಯಾಗಿರುವ: ಪ್ರಾತಿನಿಧ್ಯದಲ್ಲಿ ಸಾಮಾಜಿಕ ನ್ಯಾಯದ ನೀತಿಯನ್ನೂ ಗೌಣಗೊಳಿಸಲಾಗುತ್ತಿದೆ ಹಾಗೂ ಭ್ರಾಮಕ ಅಭಿವೃದ್ಧಿಯ ಅಬ್ಬರದಲ್ಲಿ, ಉದಾರೀಕರಣ- ಖಾಸಗೀಕರಣದ ಕಾರ್ಪೊರೇಟ್ ಹಾಗೂ ನವ ಬ್ರಾಹ್ಮಣ್ಯದ ಹುನ್ನಾರಗಳ ಆಕ್ರಮಣಕಾರಿ ಅನುಷ್ಠಾನಗಳಿಂದಾಗಿ ಮೀಸಲಾತಿಯ ಅವಕಾಶಗಳೇ ವೇಗವಾಗಿ ಕುಸಿಯುತ್ತಾ ಸಾಮಾಜಿಕ ನ್ಯಾಯವನ್ನು ಪರೋಕ್ಷವಾಗಿ ವಿಫಲಗೊಳಿಸುತ್ತಿರುವ ವಾಸ್ತವವನ್ನೂ ಮರೆಸಿಬಿಡಲಾಗುತ್ತಿದೆ. ವಾಸ್ತವದಲ್ಲಿ ಈ ದೇಶದ ಅಸ್ಪಶ್ಯ ಸಮುದಾಯಗಳಿಗೆ ಆಡಳಿತ, ರಾಜಕೀಯ, ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಜನಸಂಖ್ಯಾ ಪ್ರಮಾಣಕ್ಕನುಗುಣವಾದ ಪ್ರಾತಿನಿಧ್ಯವನ್ನು ಒದಗಿಸುವುದನ್ನು ಸಾಂವಿಧಾನಿಕವಾಗಿ ಖಾತರಿ ಮಾಡಲಾಗಿದೆ. ಆ ಅರ್ಥದಲ್ಲಿ ಮೀಸಲಾತಿಯು ಒಂದು ಬಡತನ ನಿವಾರಣಾ ಕಾರ್ಯಕ್ರಮವಲ್ಲ. ಸಮಾನತೆ ಹಾಗೂ ಪರಿವರ್ತನೆ ತರುವ ಕಾರ್ಯಕ್ರಮವಲ್ಲ. ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾತಿನಿಧ್ಯವನ್ನು ಖಾತರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸುವ ಕಾರ್ಯಕ್ರಮವಾಗಿದೆ. ಸಾಂವಿಧಾನಿಕವಾಗಿ ಮೀಸಲಾತಿಯ ಪ್ರಥಮ ಹಕ್ಕುದಾರರು ಈ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಅಂಚಿನಲ್ಲಿರುವವರೇ ಆಗಿದ್ದಾರೆ. ಹೀಗಾಗಿ ಅಸ್ಪಶ್ಯತೆಯೇ ಈ ಮೀಸಲಾತಿಗೆ ಮಾನದಂಡವಾಗಬೇಕು. ಆದರೆ ಕ್ರಮೇಣವಾಗಿ ಹಲವಾರು ಸ್ಪಶ್ಯ ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇನ್ನಿತರ ಶೋಷಣೆ-ದಮನಕ್ಕೆ ಗುರಿಯಾದ ಸಮುದಾಯಗಳು ಈ ಮೀಸಲಾತಿಗಳೊಳಗೆ ಸೇರಿಕೊಂಡವು. ಹೀಗೆ ಮೀಸಲಾತಿಯ ಮೂಲ ತಾತ್ವಿಕತೆಯಲ್ಲೇ ಸಡಿಲತೆಗಳು ಹುಟ್ಟಿಕೊಂಡವು. ಕರ್ನಾಟಕದಂತಹ ಕಡೆಗಳಲ್ಲಿ ಈ ಬೆಳವಣಿಗೆಗಳು ದಮನಕ್ಕೊಳಗಾದವರ ನಡುವೆಯೇ ಒಂದು ಬಗೆಯ ಯಾದವೀ ಕಲಹವನ್ನು ಹುಟ್ಟುಹಾಕಿದೆ. ಈ ಯಾದವೀ ಕಲಹವನ್ನು ನ್ಯಾಯಬದ್ಧವಾಗಿ ಬಗೆಹರಿಸಬಲ್ಲ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಕೇಂದ್ರದ ಮನುವಾದಿ ಮೋದಿ ಸರಕಾರ ಈ ಶೋಷಿತರ ನಡುವಿನ ಕಲಹದ ಬೆಂಕಿಗೆ ತುಪ್ಪಸುರಿಯುತ್ತಾ ರಾಜಕೀಯ ಹಾಗೂ ಸಾಮಾಜಿಕ ಲಾಭವನ್ನು ಪಡೆದುಕೊಳ್ಳುತ್ತಿದೆ. ಇನ್ನು ಮೇಲಿನ ಮೀಸಲಾತಿ ರಕ್ಷಣೆಯಡಿಯಲ್ಲಿ ಬರದ ಆದರೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಇತರ ಹಿಂದುಳಿದ ವರ್ಗಗಳ (ಒಬಿಸಿ)ನ್ನು ಗುರುತಿಸಿ ಅವರಿಗೂ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರಗಳು ಕಾಲಕಾಲಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಸಂವಿಧಾನದಲ್ಲಿ ಅವಕಾಶಗಳನ್ನು ಕಲ್ಪಿಸಲಾಯಿತು. ಪ್ರಾರಂಭದಲ್ಲಿ ಕೆಲವು ಸಮುದಾಯಗಳಿಗೆ ಈ ರೀತಿಯ ವಿಶೇಷ ಆದ್ಯತೆಗಳನ್ನು ನೀಡುವುದು ಆರ್ಟಿಕಲ್ 14 ಮತ್ತು 15ರ ಸಮಾನತೆಯ ಆಶಯಗಳನ್ನು ಉಲ್ಲಂಘಿಸುತ್ತದೆಂದೂ ಕೋರ್ಟುಗಳೇ ಸರಕಾರದ ಮೀಸಲಾತಿ ಶಾಸನಗಳನ್ನು ರದ್ದುಗೊಳಿಸಿದವು. ಆದರೆ ಸಂಸತ್ತಿನಲ್ಲಿ ಹಲವಾರು ತಿದ್ದುಪಡಿಗಳನ್ನು ತಂದು ನ್ಯಾಯಾಂಗ ಅಡಚಣೆಗಳನ್ನು ನಿವಾರಿಸಿಕೊಳ್ಳಲಾಯಿತು. ಆದರೂ ಇಂದಿರಾ ಸಾಹಿನಿ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಮೀಸಲಾತಿಗೆ ವಿಧಿಸಿರುವ ಶೇ. 50ರ ಅವೈಜ್ಞಾನಿಕ ಮೇಲ್ಮಿತಿ ನೀತಿ ಈಗಲೂ ಮುಂದುವರಿದಿದೆ. ಸಾಮಾಜಿಕ ಪ್ರಾತಿನಿಧ್ಯದ ಮೀಸಲಾತಿಗೆ ಸಾಮಾಜಿಕ ಹಿಂದುಳಿದಿರುವಿಕೆಯೇ ಪ್ರಧಾನ ಮಾನದಂಡವಾಗಬೇಕೇ ವಿನಾ ಆರ್ಥಿಕ ಹಿಂದುಳಿದಿರುವಿಕೆಯಲ್ಲ ಎಂಬ ಮೀಸಲಾತಿ ತಾತ್ವಿಕತೆಯನ್ನು ಹಾಗೂ ಶೇ. 50ರ ಮೇಲ್ಮಿತಿಯನ್ನೂ ಉಲ್ಲಂಘಿಸಿ ಮೋದಿ ಸರಕಾರವು ಮೇಲ್ಜಾತಿ ಬಡವರಿಗೆಂದು ಜಾರಿ ಮಾಡಿರುವ ಶೇ. 10ರ ಹೆಚ್ಚುವರಿ ಮೀಸಲಾತಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದ ದಾವೆಯನ್ನು ಸುಪ್ರೀಂ ಕೋರ್ಟು ವಿಚಾರಣೆಗೆ ಅಂಗೀಕರಿಸಿದ್ದರೂ ಅದರ ಜಾರಿಗೆ ತಡೆ ಹಾಕದೆ ಮನುವಾದಿ ಧೋರಣೆಯ ಕೋರ್ಟ್ ಮೋದಿ ಸರಕಾರದ ನವಬ್ರಾಹ್ಮಣಶಾಹಿ ನೀತಿಗಳಿಗೆ ಪರೋಕ್ಷ ಬೆಂಬಲ ನೀಡಿದೆ.

ಪಾದಯಾತ್ರೆಗಳ ಧೂಳು- ಸ್ಪಷ್ಟಗೊಳ್ಳದ ಗುರಿಗಳು

ಸಂದರ್ಭ ಹೀಗಿರುವಾಗ ಕರ್ನಾಟಕದಲ್ಲಿ ಕುರುಬರು ತಮ್ಮನ್ನು ಹಿಂದುಳಿದ ಮೀಸಲಾತಿಯ 2-ಎ ಪ್ರವರ್ಗದಿಂದ ಎಸ್ಟಿ ಮೀಸಲಾತಿಗೆ ಸೇರಿಸಬೇಕೆಂದೂ, ಮಹಾರಾಷ್ಟ್ರದ ಮರಾಠರಂತೆ, ಗುಜರಾತಿನ ಪಟೇಲರಂತೆ, ಕರ್ನಾಟಕದಲ್ಲಿ ಸಾಮಾಜಿಕವಾಗಿ ಬಲಾಢ್ಯ ಸಮುದಾಯವೇ ಆಗಿರುವ ಪಂಚಮಸಾಲಿ ಲಿಂಗಾಯತರು ತಮ್ಮನ್ನು 3-ಬಿ ಪ್ರವರ್ಗದಿಂದ ತಮಗಿಂತ ಸಾಕಷ್ಟು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳ ಪ್ರವರ್ಗವಾದ 2-ಎ ಪ್ರವರ್ಗಕ್ಕೆ ಸೇರಿಸಬೇಕೆಂದೂ ಪಾದಯಾತ್ರೆ, ಜಾತಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಇದರ ಜೊತೆಗೆ, ದಲಿತ ಮೀಸಲಾತಿಯೊಳಗೆ ಒಳಮೀಸಲಾತಿಯನ್ನು ಆಗ್ರಹಿಸುತ್ತಾ ಮಾದಿಗ ಸಮುದಾಯವೂ ಸಹ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಾ ಸರಕಾರದ ಮೇಲೆ ಒತ್ತಡ ಹೇರುತ್ತಿದೆ. ಸೋಜಿಗವೆಂದರೆ ಈ ಎಲ್ಲ ಸಮಾವೇಶಗಳನ್ನು ಸಂಘಟಿಸುತ್ತಿರುವ ನಾಯಕರಲ್ಲಿ ಕರ್ನಾಟಕದ ಬಿಜೆಪಿ ಸರಕಾರದ ಮಂತ್ರಿವರ್ಯರುಗಳೂ ಸೇರಿಕೊಂಡಿದ್ದಾರೆ. ಹೀಗಾಗಿ ಯಾರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆಂಬುದೇ ಸ್ಪಷ್ಟವಾಗದಂತಾಗಿದೆ.

ಸಂವಿಧಾನ ತಿದ್ದುಪಡಿಯಾಗದೇ ಒಳಮೀಸಲಾತಿ ಈಡೇರುವುದೇ?

ಇದರಲ್ಲಿ ದಲಿತ ಒಳಮೀಸಲಾತಿಗಾಗಿ ಸದಾಶಿವ ಆಯೋಗವನ್ನು ಜಾರಿ ಮಾಡಬೇಕೆಂಬ ಆಗ್ರಹ ದಶಕದಷ್ಟು ಹಳೆಯದಾಗಿದ್ದು ಕಾಂಗ್ರೆಸನ್ನೂ ಒಳಗೊಂಡಂತೆ ಎಲ್ಲಾ ಸರಕಾರಗಳು ಅದನ್ನು ಕಡೆಗಣಿಸುತ್ತಾ ಬಂದಿವೆ. ದಲಿತರೊಳಗೆ ಮಹಾ ವಿಭಜನೆಯನ್ನೇ ತಂದಿರುವ ಈ ಆಂದೋಲನದ ಪರೋಕ್ಷ ರಾಜಕೀಯ ಫಲಾನುಭವಿಯಾಗಿರುವ ಬಿಜೆಪಿ ಈ ವಿಷಯದಲ್ಲಿ ಮಾದಿಗ ಸಮುದಾಯಕ್ಕೆ ಅತಿ ಹೆಚ್ಚು ದ್ರೋಹ ಬಗೆಯುತ್ತಿದೆ. ಏಕೆಂದರೆ ದಲಿತ ಮೀಸಲಾತಿಯೊಳಗೆ ಒಳಮೀಸಲಾತಿ ಜಾರಿಯಾಗಬೇಕೆಂದರೆ ಒಳಮೀಸಲಾತಿ ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಕೊಟ್ಟಿರುವ ಅದೇಶವನ್ನು ಏಳು ಅಥವಾ ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ತಿದ್ದುಪಡಿ ಮಾಡಬೇಕು. ಅದು ಈ ಸದ್ಯಕ್ಕೆ ಆಗದ ಮಾತು ಅಥವಾ ಸಂಸತ್ತು ಸಂವಿಧಾನದ 342ನೇ ವಿಧಿಗೆ ತಿದ್ದುಪಡಿ ತರಬೇಕು. ಇದು ಎಲ್ಲಾ ರಾಜ್ಯಗಳಿಗೂ ಸಂಬಂಧಪಡುವ ವಿಷಯವಾದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಗಳು ತಿದ್ದುಪಡಿಯನ್ನು ಅನುಮೋದಿಸಬೇಕಾಗುತ್ತದೆ. ಇಂದು ಲೋಕಸಭೆಯಲ್ಲಿ ಅಗಾಧ ಬಹುಮತ ಹೊಂದಿರುವ ಬಿಜೆಪಿ, ರಾಜ್ಯಸಭೆಯಲ್ಲೂ ಏಕಮಾತ್ರ ದೊಡ್ಡ ಪಕ್ಷವಾಗಿದೆ ಹಾಗೂ 16ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಇದೆ. ಹಾಗೆ ನೋಡಿದರೆ, ಮೇಲ್ಜಾತಿ ಮೀಸಲಾತಿ ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ ಎರಡೇ ದಿನಗಳಲ್ಲಿ ಅನುಮೋದನೆ ಪಡೆದುಕೊಂಡ ಮೋದಿ ಸರಕಾರಕ್ಕೆ ರಾಜಕೀಯ ಇಚ್ಛೆ ಇದ್ದಲ್ಲಿ ಒಂದೇ ವಾರದಲ್ಲಿ ಒಳಮೀಸಲಾತಿ ಶಾಸನವನ್ನು ಜಾರಿಗೆ ತರಬಹುದು. ಆದರೆ ಮನುವಾದಿ ಮೋದಿ ಸರಕಾರ ಉದ್ದೇಶಪೂರ್ವಕವಾಗಿಯೇ ಅದಕ್ಕೆ ಮುಂದಾಗದೆ ದಲಿತರ ನಡುವೆ ಯಾದವೀ ಕಲಹವನ್ನು ಹಚ್ಚಿ ಬೇಳೆ ಬೇಯಿಸಿಕೊಳ್ಳುತ್ತಿದೆ.

ಕುರುಬರು ಎಸ್ಟಿ ಎನ್ನುವ ಅಧಿಕಾರ ರಾಜ್ಯಕ್ಕಿದೆಯೇ?

ಇನ್ನು ಕುರುಬರನ್ನು ಎಸ್ಟಿ ವರ್ಗೀಕರಣಕ್ಕೆ ಸೇರಿಸಿಕೊಳ್ಳುವುದೂ ಸಹ ರಾಜ್ಯ ಸರಕಾರದ ಪರಿಧಿಯಲ್ಲಿಲ್ಲ. ರಾಜ್ಯ ಸರಕಾರ ಅದರ ಬಗ್ಗೆ ಕೇಂದ್ರಕ್ಕೆ ಶಿಫಾರಸ್ ಮಾಡಬಹುದಷ್ಟೆ. ಆದರೆ 2011ರ ಸೆನ್ಸಸ್ಸಿನ ಪ್ರಕಾರ ಕರ್ನಾಟದಲ್ಲಿರುವ ಎಸ್ಟಿ ಜನಸಂಖ್ಯೆ ಶೇ.3. ಅದರ ಅನುಪಾತಕ್ಕನುಗುಣವಾಗಿ ಎಸ್ಟಿ ಮೀಸಲಾತಿಯೂ ಶೇ.3 ಮಾತ್ರ ಇದೆ. ಆದರೆ ಕುರುಬರ ಜನಸಂಖ್ಯೆ ಶೇ.7. ಹೀಗಾಗಿ ಒಂದು ವೇಳೆ ಕುಲಶಾಸ್ತ್ರೀಯ ಅಧ್ಯಯನದಂತೆ ಕುರುಬರು ಎಸ್ಟಿ ವರ್ಗೀಕರಣಕ್ಕೆ ಅರ್ಹರಾದರೂ ಒಟ್ಟಾರೆ ಎಸ್ಟಿ ಮೀಸಲಾತಿ ಹೆಚ್ಚಾಗದೆ ಪ್ರಯೋಜನವಿಲ್ಲ. ಅದನ್ನು ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಅದೂ ಕೂಡಾ ಕೇಂದ್ರದ ಬಿಜೆಪಿ ರಾಜಕೀಯ ತೀರ್ಮಾನವನ್ನೇ ಅವಲಂಬಿಸಿರುತ್ತದೆ.

ಮೀಸಲಾತಿ ಹೆಚ್ಚಾಗದೆ ಅತಿಕ್ರಮವಾಗದೇ ಪಂಚಮಸಾಲಿ ಬೇಡಿಕೆ?

ಪಂಚಮಸಾಲಿ ಲಿಂಗಾಯತರನ್ನು 3ಬಿ ಯಿಂದ 2ಎಗೆ ಸೇರಿಸುವ ಅಧಿಕಾರ ಯಡಿಯೂರಪ್ಪನವರ ಸರಕಾರಕ್ಕಿದೆ. ಆದರೆ ಅದಕ್ಕಾಗಿ ನ್ಯಾಯಾಲಯಗಳು ವಿಧಿಸಿರುವ ಪ್ರಕ್ರಿಯೆಗಳಿವೆ. ಅದರಲ್ಲಿ ಮುಖ್ಯವಾದದ್ದು ಆಯಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಮತ್ತು ಪ್ರಮಾಣವಾರು ಪ್ರಾತಿನಿಧ್ಯಗಳ ಅಧ್ಯಯನ. ಅಂತಹ ಅಧ್ಯಯನಗಳ ವೈಜ್ಞಾನಿಕ ಬೆಂಬಲವಿಲ್ಲದೆ ಮೀಸಲಾತಿಗಳು ಊರ್ಜಿತವಾಗುವುದಿಲ್ಲ. ಆದರೆ ತಮ್ಮತಮ್ಮ ಸಮುದಾಯಗಳ ಬೇಡಿಕೆಗೆ ಪೂರಕವಾಗದ ಅಧ್ಯಯನಗಳನ್ನು ಅವೈಜ್ಞಾನಿಕವೆಂದು ಬಹಿಷ್ಕರಿಸುವ ರಾಜಕೀಯ ರಾಜಕಾರಣವೂ ಚಾಲ್ತಿಯಲ್ಲಿರುವುದರಿಂದ ಹಾಲಿ ಕರ್ನಾಟಕ ಸರಕಾರ ನಡೆಸಿರುವ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಅಧ್ಯಯನ ಸದ್ಯಕ್ಕೆ ಬೆಳಕು ಕಾಣುವ ಸಾಧ್ಯತೆ ಇಲ್ಲ.

  ಇರಲಿ. ವಾಸ್ತವವಾಗಿ, ಪಂಚಮಸಾಲಿ ಲಿಂಗಾಯತರು 2-ಎ ಜಾತಿಯಲ್ಲಿ ಈಗಿರುವ ಇತರ ನೂರು ಹಿಂದುಳಿದ ಜಾತಿಗಳಿಗಿಂತ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವ ಜಾತಿಯಾಗಿದ್ದಾರೆ. ಈಗ 2-ಎ ಪ್ರವರ್ಗಕ್ಕೆ ಶೇ.15ರಷ್ಟು ಮೀಸಲಾತಿ ದಕ್ಕುತ್ತಿದ್ದು ಕುರುಬರು ಮತ್ತು ಈಡಿಗರನ್ನು ದಾಟಿ ಈ ಮೀಸಲಾತಿಯ ಸೌಲಭ್ಯಗಳು ಆ ಪ್ರವರ್ಗದಲ್ಲಿರುವ ಬಹುಸಂಖ್ಯಾತ ದುರ್ಬಲ ಜಾತಿಗಳಿಗೆ ಸಿಕ್ಕಿರುವುದು ಅತ್ಯಲ್ಪ. ಈಗ ಕುರುಬರಿ ಗಿಂತ, ಈಡಿಗರಿಗಿಂತ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಲಿಂಗಾಯತರು 2-ಎ ದಲ್ಲಿ ಸೇರಿಕೊಂಡರೆ ಸಿಂಹ ಪಾಲು, ಹುಲಿಪಾಲು, ನರಿಪಾಲು ಎಲ್ಲವೂ ಒಂದೇ ಜಾತಿಯ ಪಾಲಾಗುವ ಸಂಭವವೇ ಹೆಚ್ಚು. ಆಗ ಉಳಿದ ದುರ್ಬಲ ಜಾತಿಗಳಿಗೆ ಮೀಸಲಾತಿಯ ಯಾವ ಸೌಲಭ್ಯಗಳು ಸಿಗುವುದಿಲ್ಲ.

ಇದೇ ಸಮಯದಲ್ಲಿ ಲಿಂಗಾಯತ, ಕುರುಬ ಸಮುದಾಯದ ಬಹುಸಂಖ್ಯಾತರು ಬಡರೈತಾಪಿಗಳೇ ಆಗಿದ್ದು ಕೃಷಿ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಅವರಿಗೆ ಮೀಸಲಾತಿಯ ಮೂಲಕ ಅಲ್ಪಸ್ವಲ್ಪಸೌಲಭ್ಯವಾದರೂ ಸಿಗಬೇಕೆಂದರೆ 2-ಎ ಪ್ರವರ್ಗದ ಅಥವಾ ಅವರು ಈಗಿರುವ 3-ಬಿ ಪ್ರವರ್ಗದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಒಟ್ಟಾರೆ ಮೀಸಲಾತಿಯ ಮೇಲ್ಮಿತಿ ಶೇ. 50 ಕ್ಕಿಂತ ಹೆಚ್ಚಾಗಬೇಕು ಹಾಗೂ ಸರಕಾರಿ ಅವಕಾಶಗಳೂ ಹೆಚ್ಚಬೇಕು. ಶೇ.50ರ ಮೀಸಲಾತಿ ಮೇಲ್ಮಿತಿ ರದ್ದಾಗದೇ ನ್ಯಾಯ ಸಿಗುವುದೇ?

ಮೊದಲನೆಯದಾಗಿ ಎಲ್ಲಾ ಮೀಸಲಾತಿ ಸಮುದಾಯಗಳೂ ಸಾಂವಿಧಾನಿಕ ಪೀಠವು 1993ರಲ್ಲಿ ವಿಧಿಸಿದ ಅವೈಜ್ಞಾನಿಕವಾದ ಶೇ. 50ರ ಮೇಲ್ಮಿತಿಯನ್ನು ರದ್ದುಗೊಳಿಸಲು ಹೋರಾಡಬೇಕಿದೆ. ಹಾಗೆಯೇ ಶೇ. 50ರ ಮೀಸಲಾತಿ ನಿರ್ಬಂಧವಿದ್ದರೂ ಮೇಲ್ಜಾತಿ ಬಡವರಿಗೆ ಮಾತ್ರ ಮೀಸಲಾತಿಯನ್ನು ಜಾರಿಗೊಳಿಸಿದ ಮೋದಿ ಸರಕಾರದ ಪಕ್ಷಪಾತಿ ನಡೆಯನ್ನೂ ಪ್ರಶ್ನಿಸಬೇಕಿದೆ ಹಾಗೂ ಅದನ್ನು ರದ್ದುಗೊಳಿಸದ ಸುಪ್ರೀಂ ಕೋರ್ಟಿನ ಪಕ್ಷಪಾತಿ ನಡೆಯನ್ನೂ ಪ್ರಶ್ನಿಸಬೇಕಿದೆ. ಏಕೆಂದರೆ ಒಂಭತ್ತನೇ ಶೆಡ್ಯೂಲಿನಲ್ಲಿ ಸೇರಿಸಲ್ಪಟ್ಟ ತಮಿಳುನಾಡು ಸರಕಾರದ ಶಾಸನವನ್ನು ಹೊರತುಪಡಿಸಿ ದೇಶದ ವಿವಿಧ ರಾಜ್ಯ ಸರಕಾರಗಳು ಹಿಂದುಳಿದ ಜಾತಿಗಳಿಗೆ ಶೇ. 50ಕ್ಕಿಂತಲೂ ಹೆಚ್ಚುವರಿ ಮೀಸಲಾತಿಯನ್ನು ಕಲ್ಪಿಸಿದ ಎಲ್ಲಾ ಶಾಸನಗಳನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ ಶೇ. 50ರ ಮೇಲ್ಮಿತಿಯನ್ನು ದಾಟಿ ಮೇಲ್ಜಾತಿ ಬಡವರಿಗೆಂದು ಮೋದಿ ಸರಕಾರ ಕಲ್ಪಿಸಿದ ಶೇ. 10 ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಅದನ್ನು ವಿರೋಧಿಸಿ ದಾಖಲಾಗಿರುವ ಅಹವಾಲನ್ನು ವಿಚಾರಣೆಗೂ ಕೈಗೆತ್ತಿಕೊಳ್ಳುತ್ತಿಲ್ಲ. ಆದರೂ, ಮಹಾರಾಷ್ಟ್ರದ ಮರಾಠಾ ಮೀಸಲಾತಿ ಶಾಸನದ ಬಗ್ಗೆ ಮತ್ತೊಂದು ಸಾಂವಿಧಾನಿಕ ಪೀಠವು ಇದೇ ಮಾರ್ಚ್ 8ರಿಂದ ವಿಚಾರಣೆ ಪ್ರಾರಂಭಿಸುತ್ತಿದೆ. ಅದರಲ್ಲಿ ಮಹಾರಾಷ್ಟ್ರ ಶಾಸನವು ಶೇ. 50ರ ಮಿತಿಯನ್ನು ದಾಟಿ ಮರಾಠಾ ಮೀಸಲಾತಿ ಕಲ್ಪಿಸಿರುವುದರ ಬಗ್ಗೆ ನ್ಯಾಯಾಲಯವು ತನ್ನ ತೀರ್ಮಾನ ನೀಡಬೇಕಿದೆ. ಅದನ್ನು 11 ಜನರ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇದೆ. ಹೀಗಾಗಿ ಕೋರ್ಟಿನಲ್ಲಿ ತೀರ್ಮಾನವಾಗದೆ ಅಥವಾ ಸಂಸತ್ತು ಶೇ. 50ರ ಮೇಲ್ಮಿತಿಯನ್ನು ಅಸಿಂಧುಗೊಳಿಸುವ ಶಾಸನವನ್ನು ಮಾಡದೆ ರಾಜ್ಯದ ಹಿಂದುಳಿದ ವರ್ಗಗಳಿಗೆ ಹೆಚ್ಚುವರಿ ಮೀಸಲಾತಿ ಸಿಗುವುದಿಲ್ಲ. ಹೆಚ್ಚುವರಿ ಮೀಸಲಾತಿ ಸಿಗದಿದ್ದಲ್ಲಿ ಹಿಂದುಳಿದವರಲ್ಲಿ ಪ್ರಬಲವಾದವರು ಅವರಿಗಿಂತ ಹಿಂದುಳಿದವರ ಪಾಲನ್ನು ಕಸಿಯುವಂತಾಗುತ್ತದೆ. ಸಾಮಾಜಿಕ ನ್ಯಾಯದ ಹೆಸರಲ್ಲಿ ದೊಡ್ಡ ಸಾಮಾಜಿಕ ಅನ್ಯಾಯವಾಗುತ್ತದೆ.

ಖಾಸಗೀಕರಣ ನಿಲ್ಲದೆ ಶಿಕ್ಷಣ-ಉದ್ಯೋಗ ಬಹುಜನರಿಗೆ ದಕ್ಕುವುದೇ?

ಇದರಷ್ಟೇ ಮುಖ್ಯವಾದ ಹಾಗೂ ಮೀಸಲಾತಿಯ ಭಾವೋನ್ಮಾದದಲ್ಲಿ ಚರ್ಚೆಗೆ ಬರದಿರುವ ವಿಷಯವೇನೆಂದರೆ ಒಂದು ವೇಳೆ ಶೇ. 50ರ ಮೀಸಲಾತಿ ಮೇಲ್ಮಿತಿ ಹೆಚ್ಚಿದರೂ, ಮೀಸಲಾತಿಯು ಜನಸಂಖ್ಯಾ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಿಸಿದರೂ, ಒಳಮೀಸಲಾತಿಯನ್ನೂ ಒದಗಿಸಿದರೂ, ಉದಾರೀಕರಣ ಮತ್ತು ಜಾಗತೀಕರಣದ ಮೂಲಕ ಸರಕಾರಿ ವಲಯವೇ ಕಿರಿದಾಗುತ್ತಿರುವಾಗ ಈ ಮೀಸಲಾತಿಯಿಂದ ನಿಜಕ್ಕೂ ಹಿಂದುಳಿದ ಹಾಗೂ ಅಸ್ಪಶ್ಯ ಸಮುದಾಯಗಳಿಗೆ ಎಷ್ಟು ಅವಕಾಶ ದಕ್ಕೀತು?

 ದಲಿತರಿಗೆ ಹಾಗೂ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಗುತ್ತಿದ್ದದ್ದು ಸರಕಾರಿ ಶಾಲೆ, ಕಾಲೇಜು ಮತ್ತು ಸರಕಾರಿ ಆಡಳಿತ ಯಂತ್ರಾಂಗ ಹಾಗೂ ಸರಕಾರಿ ವಲಯದ ಕಾರ್ಖಾನೆಗಳಲ್ಲಿ. ಆದರೆ 1991ರಲ್ಲಿ ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ ಸರಕಾರದ ಖಾಸಗೀಕರಣವನ್ನು ಮೋದಿ ಸರಕಾರ ಇನ್ನೂ ಆಕ್ರಮಣಶೀಲವಾಗಿ ಮುಂದುವರಿಸಿದೆ. ಮೊನ್ನೆಯ ಬಜೆಟ್‌ನಲ್ಲಿ ಕೂಡಾ ಇನ್ನುಮುಂದೆ ಎಲ್ಲಾ ವಲಯಗಳಲ್ಲಿ ಇರುವ ಸರಕಾರಿ ಉದ್ಯಮಗಳನ್ನು ಮುಚ್ಚುವುದಾಗಿ ಅಥವಾ ಖಾಸಗೀಕರಿಸುವುದಾಗಿ ಘೋಷಿಸಿದೆ. ಮೊನ್ನೆ ಸುಮಾರು ಲಕ್ಷಕ್ಕೂ ಮೀರಿ ಉದ್ಯೋಗಿಗಳಿರುವ ನಾಲ್ಕು ಬ್ಯಾಂಕುಗಳನ್ನು ಖಾಸಗೀಕರಿಸಲು ಹೆಸರಿಸಲಾಗಿದೆ. ಹಾಗೆಯೇ ಕನಿಷ್ಠ ಸರಕಾರ-ಗರಿಷ್ಠ ಅಡಳಿತದ ಹೆಸರಲ್ಲಿ ಸರಕಾರಿ ಆಡಳಿತದಲ್ಲಿ ಉದ್ಯೋಗಗಳನ್ನು ಭರ್ತಿ ಮಾಡುವುದನ್ನು ನಿಲ್ಲಿಸಲಾಗಿದೆ.

ಆದ್ದರಿಂದ ಸರಕಾರವು ಖಾಸಗೀಕರಣವನ್ನು ನಿಲ್ಲಿಸದೆ ಮತ್ತು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ಆರ್ಥಿಕ ನೀತಿಗಳನ್ನು ಜಾರಿಗೆ ತರದೇ ಶೇ. 100 ರಷ್ಟು ಮೀಸಲಾತಿ ಘೋಷಿಸಿದರೂ ಅದು ಶೋಷಿತರ ನಡುವೆಯೇ ಇನ್ನಷ್ಟು ಯಾದವೀ ಕಲಹವನ್ನು ಹೆಚ್ಚು ಮಾಡುತ್ತದೆಯೇ ವಿನಾ ಪ್ರಾತಿನಿಧ್ಯವನ್ನಾಗಲೀ, ಸಾಮಾಜಿಕ ನ್ಯಾಯವನ್ನಾಗಲೀ, ಸಮಾನ ಅವಕಾಶಗಳನ್ನಾಗಲೀ ಒದಗಿಸುವುದಿಲ್ಲ.

ಇಂದು ಮೀಸಲಾತಿಗಾಗಿ ಅಥವಾ ಪ್ರವರ್ಗ ಬದಲಾವಣೆಗಾಗಿ ಹೋರಾಡುತ್ತಿರುವ ಸಾಮಾಜಿಕವಾಗಿ ಬಲಾಢ್ಯರಾದ ಕೃಷಿ ಸಮುದಾಯಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಕುಸಿಯುತ್ತಿವೆ. ಅದಕ್ಕೆ ಕಾರಣ ದಿನೇ ದಿನೇ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟು ಹಾಗೂ ಉದ್ಯೋಗವನ್ನು ಒದಗಿಸದ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆ. ಇದು ಬದಲಾಗದೆ ಬಿಕ್ಕಟ್ಟಿನಲ್ಲಿರುವ ಕೃಷಿ ಸಮುದಾಯದ ಬದುಕು ಬದಲಾಗುವುದಿಲ್ಲ. ಮೀಸಲಾತಿಯ ಪ್ರವರ್ಗ ಬದಲಾವಣೆಗಳೂ ಈ ಅಸಲಿ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ.

ಮೂಲಭೂತ ಬದಲಾವಣೆಯನ್ನು ಒಳಗಾಗಿಸಿಕೊಳ್ಳದ ಮೀಸಲಾತಿ ಹೋರಾಟಗಳು ಪರೋಕ್ಷವಾಗಿ ದಲಿತ ಹಿಂದುಳಿದ ಆಶಯಗಳ ಶತ್ರುಗಳಾದ ಕಾರ್ಪೊರೇಟ್-ಬ್ರಾಹ್ಮಣಶಾಹಿ ಚೌಕಟ್ಟಿನೊಳಗೆ ಸಿಲುಕಿಕೊಂಡು ಭ್ರಮಾತ್ಮಕ ಪರಿಹಾರದ ಬೆನ್ನಹಿಂದೆ ಬೀಳುವಂತಾಗುತ್ತದೆ. ಒಣಗುತ್ತಿರುವ ಕೆರೆಯಲ್ಲಿ ಮೀನು ಹಿಡಿಯಲು ಪೈಪೋಟಿ ನಡೆಸುವಂತಾಗುತ್ತದೆ. ಬರಗಾಲದಲ್ಲಿ ಒಣಬೇಸಾಯದಂತಾ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News