ಕೋವಿಡ್ ಬಿಕ್ಕಟ್ಟು: ರಾಜಕೀಯ ಪರಿಹಾರವಿಲ್ಲದೆ ವ್ಯಾಕ್ಸಿನ್ ಪರಿಣಾಮ ಬೀರದು

Update: 2021-05-11 19:30 GMT

ಭಾರತದಲ್ಲಿ ಕೋವಿಡ್ ಸೋಂಕು ಹರಡಲು ಪ್ರಾರಂಭವಾದ ನಂತರ ಅಂದರೆ 2020ರ ಜನವರಿಯಿಂದ 2021ರ ಮಾರ್ಚ್‌ವರೆಗೆ, ಅಂದರೆ 13 ತಿಂಗಳ ಅವಧಿಯಲ್ಲಿ, ಭಾರತದಲ್ಲಿ ದಾಖಲಾಗಿದ್ದ ಒಟ್ಟಾರೆ ಕೋವಿಡ್ ಸೋಂಕಿತರ ಪ್ರಮಾಣ ಕೇವಲ 1ಕೋಟಿ.

ಆದರೆ 2021ರ ಮಾರ್ಚ್- ಎಪ್ರಿಲ್ ಎರಡೇ ತಿಂಗಳಲ್ಲಿ ಹೆಚ್ಚಾದ ಕೋವಿಡ್ ಸೋಂಕಿತರ ಪ್ರಮಾಣ 1.2 ಕೋಟಿ! ಇಂದು ಜಗತ್ತಿನ ಎಲ್ಲಾ ವೈದ್ಯಕೀಯ, ವೈಜ್ಞಾನಿಕ ಸಂಸ್ಥೆಗಳು ಅಧ್ಯಯನಪೂರ್ವಕವಾಗಿ ಸ್ಪಷ್ಟಪಡಿಸುತ್ತಿರುವಂತೆ ಈ ಪ್ರಮಾಣದ ಏರಿಕೆಗೆ ನೇರ ಕಾರಣ ಕುಂಭ ಮೇಳ ಹಾಗೂ ಚುನಾವಣಾ ರ್ಯಾಲಿಗಳು.


ಈ ಅಂಕಣವನ್ನು ಬರೆಯುವ ಹೊತ್ತಿಗೆ ಭಾರತದಲ್ಲಿ ಅನುದಿನ ಸೋಂಕಿತರಾಗುತ್ತಿರುವವರ ಸಂಖ್ಯೆ 4.25 ಲಕ್ಷವನ್ನೂ, ಅನುದಿನ ಸಾಯುತ್ತಿರುವವರ ಸಂಖ್ಯೆ 4,000ವನ್ನೂ ದಾಟುತ್ತಿದೆ. ಇಂದು ಭಾರತವು, ಜಗತ್ತಿನ ಅನುದಿನದ ಸೋಂಕಿತರ ಹಾಗೂ ಸಾವಿನ ಪಟ್ಟಿಯಲ್ಲಿ ಅಮೆರಿಕವನ್ನು ಮೀರಿಸಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದು ಕಡೆ ಜಗತ್ತಿನಾದ್ಯಂತ ಕೋವಿಡ್ ಲಸಿಕಾ ಪ್ರಯೋಗ ಜನವರಿಯಲ್ಲೇ ಪ್ರಾರಂಭವಾದರೂ ಇದುವರೆಗೂ ಭಾರತದಲ್ಲಿ ಮೋದಿ ಸರಕಾರ ತನ್ನ ಜನಸಂಖ್ಯೆಯ ಶೇ. 7ರಷ್ಟು ಜನರಿಗೆ ಮಾತ್ರ ಒಂದು ಡೋಸು ಲಸಿಕೆ ನೀಡಿದೆ. ಕೇವಲ ಶೇ. 1.8ರಷ್ಟು ಜನರಿಗೆ ಮಾತ್ರ ಎರಡನೇ ಸುತ್ತಿನ ಲಸಿಕೆ ನೀಡಿ ಜಗತ್ತಿನಲೇ ಕನಿಷ್ಠ ಶೇಕಡಾವರು ಲಸಿಕೆ ನೀಡಿರುವ ದೇಶಗಳ ಪಟ್ಟಿಯಲ್ಲಿದೆ. ಇದರ ಜೊತೆಗೆ, ಸಾಕಷ್ಟು ಸಮಯವಿದ್ದರೂ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಬೇಕಾದ ವೈದ್ಯಕೀಯ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡಿಕೊಳ್ಳದಿದ್ದರಿಂದ ಇಂದು ಭಾರತದಲ್ಲಿ ಈಗಾಗಲೇ 2.5 ಲಕ್ಷ ಅಮಾಯಕರು ಸೂಕ್ತ ಆರೈಕೆ ಸಿಗದೆ ಪ್ರಾಣಬಿಟ್ಟಿದ್ದಾರೆ. ಇಂದು ಭಾರತದ ನದಿಗಳಲ್ಲಿ ಸುಡುವ ಖರ್ಚಿಗೆ ಕಾಸು ಒದಗಿಸಲಾಗದೆ ಬಡವರ ಹೆಣಗಳು ಅನಾಥವಾಗಿ ತೇಲಿಹೋಗುತ್ತಿವೆ. ಇದು ಅನಿವಾರ್ಯವೇನಾಗಿರಲಿಲ್ಲ.

ಏಕೆಂದರೆ, ಕೊರೋನ ವೈರಸ್ ದಾಳಿ ಮಾಡಿದ ಎಲ್ಲಾ ದೇಶಗಳಲ್ಲೂ ಇದೇ ಪರಿಸ್ಥಿತಿಯೇನಿಲ್ಲ. ಕೋವಿಡ್ ಮೊದಲನೇ ಅಲೆಯ ಪ್ರಾರಂಭದಲ್ಲ್ಲಿ ಭಾರತಕ್ಕಿಂತ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಚೀನಾ, ಅಮೆರಿಕ, ದ. ಕೊರಿಯಾ, ಇರಾನ್, ಸ್ಪೈನ್, ಇಟಲಿ, ಜರ್ಮನಿಯಂತಹ ದೇಶಗಳಲ್ಲಿ ಎರಡನೇ ಅಲೆಯು ಭಾರತಕ್ಕೆ ಹೋಲಿಸಿದಲ್ಲಿ ಯಾವ ಗಂಭೀರ ಪರಿಣಾಮವನ್ನೂ ಉಂಟುಮಾಡಿಲ್ಲವೆಂದೇ ಹೇಳಬಹುದು. ಕಾರಣವೇನು? ಕೊರೋನ ವೈರಸ್ಸೇನೂ ಪಕ್ಷಪಾತಿಯಾಗಿಲ್ಲ. ಅದರ ವಿರುದ್ಧದ ಯುದ್ಧದಲ್ಲಿ ನಾಯಕತ್ವ ನೀಡಬೇಕಾದ ಸರಕಾರಗಳು ಯಾರ-ಯಾವ ಪಕ್ಷಪಾತಿಯಾಗಿವೆ ಎಂಬುದೇ ಪರಿಣಾಮಗಳಲ್ಲಿರುವ ವ್ಯತ್ಯಾಸಗಳಿಗೆ ಕಾರಣವಾಗಿವೆ. ಉದಾಹರಣೆಗೆ, ಕೋವಿಡ್ ಎದುರಿಸುವಲ್ಲಿ ಯಾವ್ಯಾವ ದೇಶಗಳು ವೈಜ್ಞಾನಿಕ ದೃಷ್ಟಿ, ದೂರಗಾಮಿ ಯೋಜನೆ, ಜನರ ಮಾನಸಿಕ ತಯಾರಿ, ಕೊರೋನ ವಿರುದ್ಧ ರಾಷ್ಟೀಯ ಒಗ್ಗಟ್ಟನ್ನು ಪ್ರದರ್ಶಿದವೋ- ಅಂದರೆ ಒಟ್ಟಾರೆಯಾಗಿ ವೈಜ್ಞಾನಿಕ, ಸಾಮಾಜಿಕ, ಆರ್ಥಿಕ ತಯಾರಿಗಳನ್ನು ಮಾಡಿಕೊಳ್ಳಬಲ್ಲ ರಾಜಕೀಯ ನಾಯಕತ್ವವನ್ನು ಹೊಂದಿದ್ದವೋ- ಆ ದೇಶಗಳು ಎರಡನೇ ಅಲೆಯನ್ನು ಯಶಸ್ವಿಯಾಗಿ ಎದುರಿಸುತ್ತಿವೆ. ಆದ್ದರಿಂದಲೇ ಆ ದೇಶಗಳಲ್ಲಿ ಮೂರನೇ ಅಲೆಯ ಅಪಾಯವೂ ಕಡಿಮೆಯಾಗಿದೆ.

ಆದರೆ, ಯಾವ್ಯಾವ ದೇಶಗಳ ಸರಕಾರಗಳು, ಕೊರೋನ ಎದುರಿಸುವಲ್ಲಿ ಜನರ ಬಗ್ಗೆ ನಿಷ್ಕರುಣೆ ಮತ್ತು ನಿಷ್ಕಾಳಜಿಗಳನ್ನೂ ತೋರುತ್ತಾ ಯಾವ ತಯಾರಿಗಳನ್ನು ಮಾಡಿಕೊಳ್ಳಲಿಲ್ಲವೋ, ಕೋವಿಡ್ ಬಿಕ್ಕಟ್ಟಿನಲ್ಲೂ ಖಾಸಗಿ ಕಾರ್ಪೊರೇಟ್ ಬಂಡವಾಳಿಗರ ಲಾಭವನ್ನು ಹೆಚ್ಚುಮಾಡಲು ಪೂರಕವಾದ ನೀತಿಗಳನ್ನೂ, ಬಿಕ್ಕಟ್ಟಿನ ಸಮಯದಲ್ಲಿ ಜನರನ್ನು ಒಡೆದಾಳುತ್ತಾ ರಾಜಕೀಯ ಲಾಭ ಪಡೆದುಕೊಳ್ಳುವ ನೀತಿಗಳನ್ನು ಅನುಸರಿಸಿದವೋ-ಆರ್ಥಾತ್ ಯಾವ ದೇಶಗಳಲ್ಲಿ ಜನರನ್ನು ಕೊಂದು ತಿನ್ನುವ ಪ್ಯಾರಾಸೈಟಿಕ್ ಕ್ರಿಮಿನಲ್ ರಾಜಕೀಯ ನಾಯಕತ್ವವಿದೆಯೋ ಆ ದೇಶಗಳಲ್ಲಿ ಜನರು ಎರಡನೇ ಅಲೆಯಲ್ಲಿ ಅಪಾರ ಸಾವು-ನೋವುಗಳನ್ನು ಎದುರಿಸುತ್ತಾ ಮೂರನೇ ಅಲೆಗೂ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.

ಇಂತಹ ದೇಶಗಳ ಸಾಲಿನಲ್ಲಿ ಮೋದಿಯ ನಾಯಕತ್ವದ ನತದೃಷ್ಟ ಭಾರತ ಮುಂಚೂಣಿಯಲ್ಲಿದೆ. ಹೀಗಾಗಿ, ಕೋವಿಡ್ ಎಂಬುದು ವೈದ್ಯಕೀಯ ಸಮಸ್ಯೆಯಾಗಿದ್ದರೂ ಅದು ಸಾಮಾಜಿಕ ದುರಂತವಾಗಲು ಕಾರಣವಾಗಿದ್ದು ಮಾತ್ರ ರಾಜಕೀಯ ನಾಯಕತ್ವದ ಕಾರಣದಿಂದಾಗಿಯೇ ಎಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ ಇದೇ ಬಗೆಯ ಕ್ರಿಮಿನಲ್- ಕಮ್ಯೂನಲ್ ರಾಜಕೀಯ ನಾಯಕತ್ವ ಮುಂದುವರಿದರೆ ಕೋವಿಡ್ ದುರಂತದಿಂದ ಅದರಲ್ಲೂ ಅದರ ಮೂರನೇ ಅಲೆಯಿಂದ ಈ ದೇಶ ವ್ಯಾಕ್ಸಿನ್ ದೊರೆತರೂ ಪಾರಾಗುವುದಿಲ್ಲ.

ಭಾರತದಲ್ಲಿ ಕೋವಿಡ್ ಹರಡುವಿಕೆ
ಮೊದಲ ಅಲೆ- ಕೊರೋನ ವೈರಸ್‌ಗೆ ಸರಕಾರಿ ಮೌಢ್ಯ, ನಿಷ್ಕರುಣೆಗಳ ಪೋಷಣೆ

ಹಾಗೆ ನೋಡಿದರೆ, ಭಾರತದಲ್ಲಿ ಕೊರೋನವನ್ನು ಮೊದಲನೇ ಅಲೆಯಲ್ಲೇ ಕಟ್ಟಿಹಾಕುವ ಎಲ್ಲಾ ಸಾಧ್ಯತೆಗಳಿತ್ತು. ಭಾರತದಲ್ಲಿ ಮೊತ್ತ ಮೊದಲ ಕೊರೋನ ಪ್ರಕರಣ ಪತ್ತೆಯಾಗಿದ್ದು 2020ರ ಜನವರಿ 30ರಂದು. ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಯಲ್ಲಿ. ಆ ನಂತರ ಇಡೀ ಫೆಬ್ರವರಿಯಲ್ಲಿ ನಿಧಾನವಾಗಿ ಕೋವಿಡ್ ಸೋಂಕು ಹೆಚ್ಚುತ್ತಾ ಹೋದರೂ ಮೋದಿ ಸರಕಾರ ಯಾವ ಎಚ್ಚರಿಕೆಯನ್ನೂ ಪಾಲಿಸಲಿಲ್ಲ. ಬದಲಿಗೆ ಆ ವೇಳೆಗಾಗಲೇ ಕೋವಿಡ್ ಸಂತ್ರಸ್ತರಲ್ಲಿ ಎರಡನೇ ಸ್ಥಾನದಲ್ಲಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ ಅನ್ನು ಕರೆಸಿ ನಮೋ ಟ್ರಂಪ್ ಕಾರ್ಯಕ್ರಮ ನಡೆಸಿತು. ಮಾರ್ಚ್ 13ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಸಾಂಕ್ರಾಮಿಕವಾಗಿದೆ ಎಂದು ಇಡೀ ವಿಶ್ವಕ್ಕೆ ಎಚ್ಚರಿಕೆ ಕೊಟ್ಟರೂ ಮಾರ್ಚ್ 16ಕ್ಕೆ ಭಾರತದ ಆರೋಗ್ಯ ಮಂತ್ರಿ ಭಾರತದಲ್ಲಿ ಅಂತಹ ಯಾವ ಅಪಾಯವೂ ಇಲ್ಲ ಎಂದು ಆ ಎಚ್ಚರಿಕೆಯನ್ನು ತಿರಸ್ಕರಿಸಿದರು. ಮುಸ್ಲಿಂ ದೇಶಗಳಿಂದ ವಿಮಾನಯಾನವನ್ನು ಫೆಬ್ರವರಿಯಲ್ಲೇ ನಿರ್ಬಂಧಿಸಿದರೂ, ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿದ್ದ ಅಮೆರಿಕದ ಮೇಲೆ ಮಾರ್ಚ್ 18ರವರೆಗೆ ವಿಮಾನಯಾನ ನಿರ್ಬಂಧ ಹೇರಲೇ ಇಲ್ಲ.

ನಂತರದಲ್ಲಿ ಮಾರ್ಚ್ 24ರಂದು ಅತ್ಯಂತ ಅಮಾನವೀಯವಾಗಿ ಲಾಕ್‌ಡೌನ್ ಹೇರಿ ಜನರನ್ನು ಕೋವಿಡ್‌ನೊಂದಿಗೆ ಹಸಿವಿನ ಕಾಡ್ಗಿಚ್ಚಿಗೂ ಗುರಿ ಮಾಡಿದ್ದು, ಕೋವಿಡ್ ಎದುರಿಸಲು ಬೇಕಾದ ಯಾವ ವೈದ್ಯಕೀಯ ಕ್ರಮಗಳನ್ನೂ ತೆಗೆದುಕೊಳ್ಳದೆ ಕೋವಿಡ್ ಸಾಂಕ್ರಾಮಿಕವನ್ನು ‘ಕೊರೋನ ಜಿೆಹಾದ್’ ಎಂದು ಕರೆಯಲು ಅವಕಾಶ ಕೊಟ್ಟು ಜನರನ್ನು ದಾರಿ ತಪ್ಪಿಸಿದ್ದು.. ಇವೆಲ್ಲ ಇನ್ನೂ ಹಸಿಹಸಿ ನೆನಪಿನಲ್ಲೇ ಇರುವ ಅಂಶಗಳು.. ಲಾಕ್‌ಡೌನ್‌ನ ಸ್ಮಶಾನ ಮೌನದ ಸಂದರ್ಭವನ್ನು ಬಳಸಿಕೊಂಡೇ ಮೋದಿ ಸರಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ, ಪರಿಸರ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳನ್ನೆಲ್ಲಾ ಒಂದೊಂದಾಗಿ ಜಾರಿ ಮಾಡಿತೇ ವಿನಾ ಅದರಿಂದ ಜನರನ್ನು ಬಚಾವು ಮಾಡಲು ಯಾವ ಆರ್ಥಿಕ-ವೈದ್ಯಕೀಯ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೂ ಸೆಪ್ಟಂಬರ್ ವೇಳೆಗೆ ಮೋದಿ ಸರಕಾರದ ಯಾವ ನಿಮಿತ್ತವೂ ಇಲ್ಲದಂತೆ ಕೋವಿಡ್ ಪ್ರಮಾಣ ಭಾರತದಲ್ಲೂ ಇಳಿಯತೊಡಗಿತು.

ಎರಡನೇ ಅಲೆ- ಕೊರೋನ ವೈರಸ್‌ಗೆ ಸರಕಾರದ ಕ್ರಿಮಿನಲ್ ಬೇಜವಾಬ್ದಾರಿ, ಆತ್ಮರತಿಯ ಪೋಷಣೆ 
ಆದರೆ ಜನಜಾಗೃತಿ ಹೆಚ್ಚಿರುವ ಪ್ರಜಾತಾಂತ್ರಿಕ ರಾಷ್ಟ್ರಗಳಲ್ಲಿ ಸರಕಾರಗಳು 2020ರ ಸೆಪ್ಟಂಬರ್ ವೇಳೆಗೆ ಕೋವಿಡ್ ಪ್ರಮಾಣ ಕುಸಿಯುತ್ತಿದ್ದರೂ, ಎರಡನೇ ಅಲೆಯ ಸಾಧ್ಯತೆಯ ಬಗ್ಗೆ ವೈಜ್ಞಾನಿಕ ಸಲಹೆಗಳಿಗೆ ಕಿವಿಗೊಟ್ಟು ತಮ್ಮ ತಮ್ಮ ದೇಶವನ್ನು ಅದರಿಂದ ಸುರಕ್ಷಿತವಾಗಿಟ್ಟುಕೊಳ್ಳುವೆಡೆ ತಯಾರಿ ಪ್ರಾರಂಭಿಸಿದ್ದವು. ಅದರಲ್ಲಿ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಮತ್ತು ಚೀನಾ ಕೂಡಾ ಕೋವಿಡ್ ವ್ಯಾಕ್ಸಿನ್ ತಯಾರಿಗೆ ಮತ್ತು ತಮ್ಮ ತಮ್ಮ ದೇಶಗಳಿಗೆ ಬೇಕಾಗುವಷ್ಟು ಸರಬರಾಜು ಮಾಡಲು ವ್ಯಾಕ್ಸಿನ್ ತಯಾರಿಕಾ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದವು. ಇಂದು ಅಮೆರಿಕ, ಕೆನಡಾ, ಐರೋಪ್ಯ ದೇಶಗಳಲ್ಲಿ ಆ ದೇಶಗಳಿಗೆ ಬೇಕಿರುವ ಎರಡು ಪಟ್ಟು ವ್ಯಾಕ್ಸಿನ್ ದಾಸ್ತಾನುಗಳಿವೆ. ಅಷ್ಟು ಮಾತ್ರವಲ್ಲ. ಮೊದಲನೇ ಅಲೆಯಿಂದ ಪಾಠ ಕಲಿತು ಬಾಂಗ್ಲಾದೇಶ, ಶ್ರೀಲಂಕಾದಂತಹ ದೇಶಗಳು ಕೂಡಾ ಎರಡನೇ ಅಲೆಯನ್ನು ಎದುರಿಸಲು ತಮ್ಮ ದೇಶಗಳ ವೈದ್ಯಕೀಯ ಸಾಮರ್ಥ್ಯ- ಹಾಸಿಗೆ, ಆಸ್ಪತ್ರೆ, ಆಕ್ಸಿಜನ್, ವೆಂಟಿಲೇಟರ್-ಹೆಚ್ಚಿಸುವ ಕಡೆ ಒತ್ತುಕೊಟ್ಟಿದ್ದವು.

ಆದರೆ ನಮ್ಮ ದೇಶದಲ್ಲಿ ಮೋದಿ ಸರಕಾರ ಮಾಡಿದ್ದೇನು? 2020ರ ಸೆಪ್ಟಂಬರ್ ನಂತರ ದೇಶದೆಲ್ಲೆಡೆ ಎಲ್ಲೆಲ್ಲಿ ಮೊದಲನೇ ಅಲೆಯನ್ನು ಎದುರಿಸಲು ಹೆಚ್ಚುವರಿ ಹಾಗೂ ತಾತ್ಕಾಲಿಕ ಆಸ್ಪತ್ರೆಗಳನ್ನು, ಕೊರೋನ ಕೇರ್ ಸೆಂಟರ್‌ಗಳನ್ನು ಕಟ್ಟಲಾಗಿತ್ತೋ ಅವೆಲ್ಲವನ್ನೂ ಮುಚ್ಚಲಾಯಿತು. ಅದರಲ್ಲಿ ಬೆಂಗಳೂರಿನಲ್ಲಿ ಕಟ್ಟಲಾಗಿದ್ದ 10,000 ಬೆಡ್ ಸಾಮರ್ಥ್ಯದ ಸುಸಜ್ಜಿತ ಆದರೆ ತಾತ್ಕಾಲಿಕ ಕೋವಿಡ್ ಸೆಂಟರ್ ಕೂಡಾ ಒಂದು. ಇನ್ನು ಕೋವಿಡ್ ತಗಲುವ ಪ್ರತಿ 100 ಜನರಲ್ಲಿ 80 ಜನರಿಗೆ ತನ್ನಿಂದ ತಾನೇ ಮಾಯವಾಗಿ 15 ಜನರಿಗೆ ಲಘು ಪರಿಣಾಮಗಳು ಕಾಣಿಸಿಕೊಂಡು ಮಾಯವಾದರೂ, ಉಳಿದ ಐದು ಜನಕ್ಕೆ ಐಸಿಯು ಬೆಡ್, ವೆಂಟಿಲೇಟರ್ ಮತ್ತು ಆಕ್ಸಿಜನ್ ಪೂರಕೆ ಸೌಲಭ್ಯಗಳು ಬೇಕಾಗುತ್ತದೆಂದು ಮೊದಲನೇ ಅಲೆಯಲ್ಲೇ ಸ್ಪಷ್ಟವಾಗಿತ್ತು ಹಾಗೂ ಭಾರತದಲ್ಲಿ ಇದಕ್ಕೆ ಬೇಕಾದ ಯಾವ ತಯಾರಿಯೂ ಇಲ್ಲವೆಂಬುದು ಮೊದಲನೇ ಅಲೆಯ ಪರಿಣಾಮವು ಎತ್ತಿತೋರಿಸಿತ್ತು.

ಅಷ್ಟು ಮಾತ್ರವಲ್ಲ. ಡಿಸೆಂಬರ್ ವೇಳೆಗಾಗಲೇ ಮತ್ತೊಂದು ಕೋವಿಡ್ ಮ್ಯುಟೆಂಟ್ ವೈರಸ್ ಭಾರತದಲ್ಲಿ ಪತ್ತೆಯಾಗುತ್ತಿರುವ ಬಗ್ಗೆ ಮತ್ತು ಅದು ಹರಡುತ್ತಿರುವ ಬಗ್ಗೆ ಮೋದಿ ಸರಕಾರಕ್ಕೆ ಮಾಹಿತಿಯಿತ್ತು. ಆದರೆ ಅದನ್ನು ಪರಿಗಣಿಸಲು ಮೋದಿ ಸರಕಾರ ಸಿದ್ಧವಿರಲಿಲ್ಲವಾದ್ದರಿಂದ ಅತ್ಯಗತ್ಯವಾದ ಯಾವ ವೈದ್ಯಕೀಯ ಮೂಲಭೂತ ಸೌಕರ್ಯವನ್ನು ಹೆಚ್ಚಿಸಿಕೊಳ್ಳಲೇ ಇಲ್ಲ.

ಇದಕ್ಕೆ ತದ್ವಿರುದ್ಧವಾಗಿ 2021ರ ಫೆಬ್ರವರಿಯ ಆದಿಯಲ್ಲಿ ಡ್ಯಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರು ‘‘ಭಾರತವು ಕೊರೋನ ವಿರುದ್ಧದ ಯುದ್ಧದಲ್ಲಿ ಗೆಲುವನ್ನು ಸಾಧಿಸಿ ಇಡೀ ವಿಶ್ವಕ್ಕೆ ಮಾದರಿಯನ್ನು ಹಾಕಿಕೊಟ್ಟಿದೆ’’ಯೆಂದು ಕೊಚ್ಚಿಕೊಂಡರು. ಇಲ್ಲಿಂದ ಹಿಂದಿರುಗಿದ ಮೋದಿಯನ್ನು ಅವರ ಪಕ್ಷದ ಭಟ್ಟಂಗಿಗಳು ‘‘ಭಾರತವನ್ನು ಕಾಪಾಡಿದ ಮಹಾ ಪುರುಷ’’ನೆಂದೂ, ‘‘ಭಾರತಕ್ಕೆ ದೇವರು ನೀಡಿದ ಕೊಡುಗೆ’’ಯೆಂದೂ ಭಜನೆ ಮಾಡಿದರು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕೋವಿಡ್ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ನಾಯಕತ್ವ ನೀಡಿದ ಮೋದಿಗೆ ಬಾಷ್ಪಾಂಜಲಿಯನ್ನು ಅರ್ಪಿಸಿತು!!

ಆದರೆ ಮೋದಿ ಸರಕಾರ ಮತ್ತು ಬಿಜೆಪಿ ಈ ದುರುದ್ದೇಶಪೂರ್ವಕ ಆತ್ಮರತಿಯಲ್ಲಿ ಇಡೀ ದೇಶವನ್ನು ಎರಡನೇ ಅಲೆಯ ಗಂಡಾಂತರಕ್ಕೆ ಸಿಲುಕಿಸಿದ್ದು ಮಾರ್ಚ್ ಮೊದಲ ವಾರದಲ್ಲೇ ಸ್ಪಷ್ಟವಾಯಿತು. ಭಾರತದಲ್ಲಿ ಕೊರೋನ ವೈರಸ್‌ನ ಬಯಾಲಜಿ ಮತ್ತಿತರ ಅಂಶಗಳನ್ನು ಅನುದಿನವೂ ಅಧ್ಯಯನ ಮಾಡುತ್ತಾ ಸರಕಾರಕ್ಕೆ ಸಲಹೆ ನೀಡಲು ಭಾರತದಲ್ಲಿ ರುವ 10 ಪ್ರಮುಖ ಸರಕಾರಿ ಸಂಶೋಧನಾ ಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡ ಐಘೆಖಇಎ ಎಂಬ ಸಮಿತಿಯನ್ನು ಸ್ಥಾಪಿಸಲಾಗಿದೆ. ಅವರು ಮಾರ್ಚ್ ಮೊದಲ ವಾರದಲ್ಲಿ ಅತ್ಯಂತ ಸ್ಪಷ್ಟವಾಗಿ, ಭಾರತದಲ್ಲಿ ಮೊದಲನೇ ಅಲೆಗಿಂತಲೂ ಅತ್ಯಂತ ಮಾರಕವಾದ ಕೋವಿಡ್ ಮ್ಯುಟೆಂಟ್ ವೈರಸ್ ಪತ್ತೆಯಾಗಿದೆ ಯೆಂದೂ, ಅದು ಅತ್ಯಂತ ವೇಗವಾಗಿ ಭಾರತದಲ್ಲಿ ಹರಡುತ್ತಿದೆಯೆಂದೂ, ಕೂಡಲೇ ಅದನ್ನು ತಡೆಹಿಡಿಯಲು ಯೋಜನೆಗಳನ್ನು ರೂಪಿಸದಿದ್ದರೆ ಭಾರತವು ದೊಡ್ಡ ಅನಾಹುತಕ್ಕೆ ಗುರಿಯಾಗುತ್ತದೆಂದೂ ಎಚ್ಚರಿಸಿದ್ದರು.
ಆದರೂ,
 -ಭಾರತದ ಒಕ್ಕೂಟ ಸರಕಾರದ ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರು ಮಾರ್ಚ್ 7ರಂದು ಭಾರತವು ಕೋವಿಡ್ ಯುದ್ಧದಲ್ಲಿ ಸಂಪೂರ್ಣ ಗೆಲುವು ಸಾಧಿಸಿದೆಯೆಂದು ಘೋಷಿಸಿದರು.

ಏಕೆಂದರೆ ಆ ವೇಳೆಗಾಗಲೇ ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನ ಸಭೆಗೆ ಚುನಾವಣೆಯನ್ನು ಘೋಷಿಸಿತ್ತು ಮತ್ತು ಪ. ಬಂಗಾಳ ಹಾಗೂ ಅಸ್ಸಾಂ ಚುನಾವಣೆ ರ್ಯಾಲಿಗಳು ಮತ್ತು ಅಲ್ಲಿ ಚುನಾವಣಾ ಗೆಲುವು ಸಾಧಿಸುವುದು ಬಿಜೆಪಿ ಈ ದೇಶದ ಜನರ ಆರೋಗ್ಯಕ್ಕಿಂತ ಮುಖ್ಯವಾಗಿತ್ತು!!
ಇದಾದ ನಂತರ..

-ಮಾರ್ಚ್ ಎರಡನೇ ವಾರದಲ್ಲಿ ಭಾರತೀಯ ರೋಗ ನಿಯಂತ್ರಣ ಕೇಂದ್ರ (ಐಸಿಡಿಸಿ)ದ ನಿರ್ದೇಶಕರು ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ರ್ಯಾಲಿ, ಜಾತ್ರೆ, ಜನಸಂದಣಿಯನ್ನು ನಿಯಂತ್ರಿಸುವ ಸಲಹೆಗಳನ್ನು ನೀಡಿದರು.

ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಅಧಿಕಾರದಾಹಿ ಆಡಳಿತರೂಢ ಬಿಜೆಪಿ ಪಕ್ಷ ದೇಶದೆಲ್ಲೆಡೆ ಲಕ್ಷಾಂತರ ಜನರನ್ನು ಒಟ್ಟು ಸೇರಿಸುತ್ತಾ ಚುನಾವಣಾ ರ್ಯಾಲಿಗಳನ್ನೂ ಹಾಗೂ ಹರಿದ್ವಾರದಲ್ಲಿ ಒಂದು ಕೋಟಿಯಷ್ಟು ಜನರು ಒಟ್ಟು ಸೇರಿದ ಮಾರ್ಚ್-ಎಪ್ರಿಲ್ ತಿಂಗಳಾದ್ಯಂತ ನಡೆದ ಕುಂಭ ಮೇಳಕ್ಕೂ ಅವಕಾಶ ಮಾಡಿಕೊಟ್ಟಿತು. -ಅಸ್ಸಾಮಿನ ಹಾಲಿ ಮುಖ್ಯಮಂತ್ರಿ ಮತ್ತು ಆಗಿನ ಆರೋಗ್ಯ ಮಂತ್ರಿಯೂ ಆಗಿದ್ದ ಹೇಮಂತ್ ಶರ್ಮಾ ಅವರಂತೂ ಅಸ್ಸಾಮಿನ ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ- ಎಪ್ರಿಲ್ 7ರಂದು- ಅಸ್ಸಾಮಿನಿಂದ ಕೋವಿಡ್ ಅನ್ನು ಸಂಪೂರ್ಣವಾಗಿ ಓಡಿಸಲಾಗಿದೆಯೆಂದು ಕೊಚ್ಚಿಕೊಂಡರು. -ಇದಾದ ಒಂದೇ ವಾರದಲ್ಲಿ ಮತ್ತೊಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ ಗೃಹಮಂತ್ರಿ ಅಮಿತ್ ಶಾ ಅವರೂ ಚುನಾವಣಾ ರ್ಯಾಲಿಗಳಿಂದ ಕೋವಿಡ್ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲವೆಂದು ಘೋಷಿಸಿದರು.

-ಇದರ ಜೊತೆಗೆ ಎಪ್ರಿಲ್ 17ರಂದು, ದಿನವೊಂದಕ್ಕೆ 2.5 ಲಕ್ಷ ಜನ ಕೋವಿಡ್‌ಗೆ ತುತ್ತಾಗುತ್ತಿದ್ದ ಸಂದರ್ಭದಲ್ಲೂ ಚುನಾವಣಾ ರ್ಯಾಲಿಗೆ ಲಕ್ಷಾಂತರ ಜನ ಸೇರುತ್ತಿರುವುದಕ್ಕೆ ಪ್ರಧಾನಿ ಮೋದಿಯವರು ಜನರನ್ನು ಅಭಿನಂದಿಸುತ್ತಿದ್ದರು.

ಇದರ ಪರಿಣಾಮವೇನು? ಭಾರತದಲ್ಲಿ ಕೋವಿಡ್ ಸೋಂಕು ಹರಡಲು ಪ್ರಾರಂಭವಾದ ನಂತರ ಅಂದರೆ 2020ರ ಜನವರಿಯಿಂದ 2021ರ ಮಾರ್ಚ್‌ವರೆಗೆ, ಅಂದರೆ 13 ತಿಂಗಳ ಅವಧಿಯಲ್ಲಿ, ಭಾರತದಲ್ಲಿ ದಾಖಲಾಗಿದ್ದ ಒಟ್ಟಾರೆ ಕೋವಿಡ್ ಸೋಂಕಿತರ ಪ್ರಮಾಣ ಕೇವಲ 1ಕೋಟಿ.

ಆದರೆ 2021ರ ಮಾರ್ಚ್- ಎಪ್ರಿಲ್ ಎರಡೇ ತಿಂಗಳಲ್ಲಿ ಹೆಚ್ಚಾದ ಕೋವಿಡ್ ಸೋಂಕಿತರ ಪ್ರಮಾಣ 1.2 ಕೋಟಿ! ಇಂದು ಜಗತ್ತಿನ ಎಲ್ಲಾ ವೈದ್ಯಕೀಯ, ವೈಜ್ಞಾನಿಕ ಸಂಸ್ಥೆಗಳು ಅಧ್ಯಯನಪೂರ್ವಕವಾಗಿ ಸ್ಪಷ್ಟಪಡಿಸುತ್ತಿರುವಂತೆ ಈ ಪ್ರಮಾಣದ ಏರಿಕೆಗೆ ನೇರ ಕಾರಣ ಕುಂಭ ಮೇಳ ಹಾಗೂ ಚುನಾವಣಾ ರ್ಯಾಲಿಗಳು. ಅರ್ಥಾತ್ ಸರಕಾರದ ಅಧಿಕಾರದಾಹಿ ರಾಜಕಾರಣ.

ಜನರ ಬಗ್ಗೆ ನಿಷ್ಕಾಳಜಿ ಮತ್ತು ನಿಷ್ಕರುಣೆ..

ಇವೆರಡೂ ಕಾರಣಗಳಿಂದ ಇಂದು ಎರಡನೇ ಅಲೆಯು ಭಾರತದ ಗ್ರಾಮೀಣ ಪ್ರಾಂತಕ್ಕೂ ವಿಸ್ತೃತವಾಗಿ ಹಬ್ಬುತ್ತಿದೆ. ಇದು ಕೇವಲ ಬೇಜವಾಬ್ದಾರಿಯೇ? ಉಡಾಫೆಯೇ?
ಅಥವಾ ಜನರ ಬಗ್ಗೆ ಅಥವಾ ದೇಶದ ಬಗ್ಗೆ ಯಾವುದೇ ಕಾಳಜಿಯಿಲ್ಲದ ಕ್ಷುಲ್ಲಕ ಅಧಿಕಾರದಾಹಿ ಕ್ರಿಮಿನಲ್ ಕೊಲೆಪಾತಕ ರಾಜಕಾರಣವೇ?

ಈ ನಿಷ್ಕರುಣ ಅಧಿಕಾರದಾಹಿ ರಾಜಕೀಯ ಧೋರಣೆಯಿಂದಾಗಿಯೇ 2020ರ ಸೆಪ್ಟಂಬರ್‌ನಿಂದ ಈವರೆಗೆ ಸಾಕಷ್ಟು ಸಮಯವಿದ್ದರೂ ಮೋದಿ ಸರಕಾರ ದೇಶವನ್ನು ಎರಡನೇ ಅಲೆಯಿಂದ ಕಾಪಾಡಲು ಬೇಕಾದ ಲಸಿಕೆಯನ್ನು ಕೂಡಿಡಲು, ತುರ್ತು ಸಂದರ್ಭದಲ್ಲಿ ಜನರನ್ನು ಉಳಿಸಲು ಬೇಕಾದ ವೈದ್ಯಕೀಯ ಸೌಲಭ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಯಾವ ತಯಾರಿಯನ್ನೂ ಮಾಡಿಕೊಳ್ಳಲಿಲ್ಲ. ಮಾರ್ಚ್‌ನಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ದೇಶದ ಎಲ್ಲಾ ಜನರಿಗೂ ಲಸಿಕೆಯನ್ನು ನೀಡಲು ರೂ. 35,000 ಕೋಟಿಯನ್ನು ಎತ್ತಿಡಲಾಗಿದೆಯೆಂದೂ ಘೋಷಿಸಲಾಗಿತ್ತು. ಆದರೆ ಈವರೆಗೆ ಅದರಲ್ಲಿ ವೆಚ್ಚವಾಗಿರುವುದು ಕೇವಲ 3,000 ಕೋಟಿ ಮಾತ್ರ.

ಜೊತೆಗೆ 45 ವಯಸ್ಸಿಗಿಂತ ಕೆಳಗಿನ ದೇಶವಾಸಿಗಳಿಗೆ ಸರಕಾರ ಉಚಿತವಾಗಿ ಲಸಿಕೆ ಕೊಡುವುದಿಲ್ಲವೆಂದೂ ಘೋಷಿಸಿದೆ. ಕಾರಣವಿಷ್ಟೆ. ಭಾರತದಲ್ಲಿ ವ್ಯಾಕ್ಸಿನ್ ಉತ್ಪಾದನೆ ಮಾಡುತ್ತಿರುವ ಎರಡು ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡಲು. ಸರಕಾರದ ಈ ಬೇಜವಾಬ್ದಾರಿಯಿಂದಾಗಿಯೇ ಇಂದು ದೇಶದ ಜನ ಹುಳಗಳಂತೆ ದಿನನಿತ್ಯ ಸಾಯುತ್ತಿದ್ದಾರೆ. ಇದೀಗ ಭಾರತದ ಜನರ ಮೇಲೆ ಮೂರನೇ ಅಲೆಯು ಅಪ್ಪಳಿಸಲಿದೆ. ಮೂರನೇ ಅಲೆ-ರಾಜಕೀಯ ಔಷಧವಿಲ್ಲದೆ ಕೊರೋನ ವ್ಯಾಕ್ಸಿನ್ ಪರಿಣಾಮಕಾರಿಯಲ್ಲ
ಎರಡನೇ ಅಲೆಯಿಂದ ಜನರು ಬದುಕುಳಿಯಬೇಕೆಂದರೆ ಯುದ್ಧೋಪಾದಿ ಯಲ್ಲಿ ಮತ್ತು ಅತ್ಯಂತ ತುರ್ತಾಗಿ ಎಲ್ಲಾ ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು, ಆಸ್ಪತ್ರೆ ಸೌಲಭ್ಯಗಳು ದೊರೆಯಬೇಕಿದೆ. ಅದಾಗಬೇಕೆಂದರೆ:

-ಅಪಾಯದ ಕಾಲಘಟ್ಟದಲ್ಲಿ ಅತ್ಯಗತ್ಯ ವೈದ್ಯಕೀಯ ಸೌಲಭ್ಯ ಅಗತ್ಯವಿರುವ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು. ಅದಕ್ಕಾಗಿ ಲಭ್ಯವಿರುವ ಸೌಲಭ್ಯಗಳನ್ನೆಲ್ಲಾ ಕಡ್ಡಾಯವಾಗಿ ಸರಕಾರ ತನ್ನ ಸುಪರ್ಧಿಗೆ ತೆಗೆದುಕೊಳ್ಳಬೇಕು...ಇದೊಂದು ವೈದ್ಯಕೀಯ ನಿರ್ಣಯವಲ್ಲ. ರಾಜಕೀಯ ಕ್ರಮ. ಅದರ ಉತ್ಪಾದನೆ, ಸರಬರಾಜು, ವಿತರಣೆಯನ್ನು ದೈನಂದಿನ ಮಟ್ಟದಲ್ಲಿ ನಿರ್ವಹಣೆ ಮಾಡಲು ಅಗತ್ಯ ಪರಿಣಿತಿಯನ್ನೊಳಗೊಂಡ ವಿಕೇಂದ್ರೀಕೃತ ಸಕ್ಷಮ ಪ್ರಾಧಿಕಾರಗಳು ಸ್ಥಾಪನೆಯಾಗಬೇಕು...ಇದೂ ಕೂಡಾ ಆಡಳಿತಾತ್ಮಕ-ರಾಜಕೀಯ ಕ್ರಮ.

-ಉತ್ಪಾದನಾ ಸಾಮರ್ಥ್ಯವನ್ನೂ ಒಳಗೊಂಡಂತೆ ಹಾಸಿಗೆ, ವೆಂಟಿಲೇಟರ್, ದಾದಿ, ಡಾಕ್ಟರನ್ನೊಳಗೊಂಡ ವೈದ್ಯಕೀಯ ಮೂಲಭೂತ ಸೌಕರ್ಯಗಳಿಗೆ ಆದ್ಯತೆಯ ಮೇಲೆ ಹಣಕಾಸು, ಅದನ್ನು ಕ್ರೋಡೀಕರಿಸುವ ಸಲುವಾಗಿ ತಾತ್ಕಾಲಿಕ ತುರ್ತು ಕಾನೂನು ಕ್ರಮಗಳು ರೂಪುಗೊಳ್ಳಬೇಕು....

ಮತ್ತು ಮೂರನೇ ಅಲೆಯಿಂದ ಭಾರತ ಬಚಾವಾಗಬೇಕೆಂದರೆ ಆದಷ್ಟು ಬೇಗ ಅಂದರೆ ಕೆಲವೇ ತಿಂಗಳುಗಳಲ್ಲಿ ದೇಶದ ಕನಿಷ್ಠ 90 ಕೋಟಿ ಜನರಿಗಾದರೂ ಪರಿಣಾಮಕಾರಿ ವ್ಯಾಕ್ಸಿನ್‌ಗಳನ್ನು ಉಚಿತವಾಗಿ ಕೊಡಬೇಕು. ಇದಾಗಬೇಕೆಂದರೆ ಸರಕಾರ ತನ್ನ ದುಂದು ವೆಚ್ಚಗಳನ್ನೆಲ್ಲ ನಿಲ್ಲಿಸಿ ಇದಕ್ಕೆ ಬೇಕಿರುವ ಹಣಕಾಸು ಸಂಪನ್ಮೂಲಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಇಲ್ಲದಿದ್ದರೆ ಭಾರತ ಮೂರನೇ ಅಲೆಯನ್ನು ಮಾತ್ರವಲ್ಲ..ನಾಲ್ಕನೇ ಅಲೆಯನ್ನೂ ಎದುರಿಸಬೇಕಾಗುತ್ತದೆ. ಇವೆಲ್ಲವೂ ರಾಜಕೀಯ ಪರಿಹಾರಗಳೇ ಆಗಿವೆ.

ಆದ್ದರಿಂದ ಜನರನ್ನು ಮತ್ತು ದೇಶವನ್ನು ಬಚಾವು ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಜನರ ತುರ್ತು ಪರಿಹಾರಕ್ಕೆ ಖಾಸಗಿ ಉದಾತ್ತ ಚೈತನ್ಯಗಳನ್ನು ಸಂಘಟಿಸುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಒತ್ತನ್ನು ಈ ರಾಜಕೀಯ ಸವಾಲನ್ನು ಎದುರಿಸಲು ಮತ್ತು ರಾಜಕೀಯ ಪರಿಹಾರವನ್ನು ಸಾಧಿಸಲು ಜನರನ್ನು ಸಜ್ಜುಗೊಳಿಸಲು ನೀಡುವ ಅಗತ್ಯವಿದೆ. ಅಲ್ಲವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News