ಬಾಂಗ್ಲಾದಲ್ಲಿರುವ 240 ವರ್ಷಗಳಷ್ಟು ಹಳೆಯ ಚರ್ಚ್ ನಲ್ಲಿ ಹಿಂದೂ ಉಪಾಸಕರ ಸೇವೆ
ಢಾಕಾ, ಜೂ.22: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸುಮಾರು 240 ವರ್ಷದ ಹಿಂದೆ ನಿರ್ಮಿಸಿದ್ದ ಚರ್ಚ್ ಈಗ ಪ್ರಾರ್ಥನೆ, ಪೂಜೆಗಳಿಲ್ಲದೆ ಪರಿತ್ಯಕ್ತ ರೀತಿಯಲ್ಲಿದ್ದರೂ ಈ ಚರ್ಚ್ನಲ್ಲಿ ಕಡೆಯದಾಗಿ ಉಳಿದುಕೊಂಡಿರುವ ಹಿಂದೂ ಉಪಾಸಕರೊಬ್ಬರು ಚರ್ಚ್ ನ ಪವಿತ್ರ ಕಾರ್ಯ ಮುಂದುವರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಶಂಕರ್ ಘೋಷ್ ಎಂಬ ಹಿಂದೂ ವ್ಯಕ್ತಿ ದಿನಾ ಬೆಳಿಗ್ಗೆ ಚರ್ಚ್ ನ ಬಾಗಿಲು ತೆಗೆದು ಶಿಲುಬೆಯ ಸಂಕೇತ ಮಾಡಿ ದೈನಂದಿನ ಪ್ರಾರ್ಥನಾ ವಿಧಿ ಪೂರೈಸುತ್ತಿದ್ದಾರೆ. 16ನೇ ಶತಮಾನದಲ್ಲಿ ಢಾಕಾದಲ್ಲಿ ನೂರಾರು ಅಮೆರಿಕನ್ನರಿದ್ದರು. ಕ್ರಮೇಣ ಈ ಪ್ರದೇಶದಲ್ಲಿ ಪ್ರಮುಖ ವ್ಯಾಪಾರಿಗಳಾಗಿ, ವಕೀಲರಾಗಿ , ಸರಕಾರಿ ಉದ್ಯೋಗಿಗಳಾಗಿ ನೆಲೆ ಕಂಡುಕೊಂಡ ಇವರಿಗಾಗಿ ಕ್ರೈಸ್ತ ಧರ್ಮಪ್ರಾಂತ್ಯವು ಚರ್ಚ್ ಒಂದನ್ನು ನಿರ್ಮಿಸಿತು. ಸುಮಾರು 40 ವರ್ಷದ ಹಿಂದೆ, ಢಾಕಾದಲ್ಲಿ ಅಮೆರಿಕನ್ ವ್ಯಕ್ತಿಯ ಮಾಲಕತ್ವದ ಸೆಣಬಿನ ಕಾರ್ಖಾನೆಯಲ್ಲಿ ಘೋಷ್ ಕೆಲಸಕ್ಕೆ ಸೇರಿದ್ದ. ಕ್ರಮೇಣ ಈತನಿಗೆ ಚರ್ಚ್ ನ ನಿರ್ವಹಣೆ ನಡೆಸುತ್ತಿದ್ದ ಕುಟುಂಬದೊಡನೆ ಸ್ನೇಹ ಬೆಳೆಯಿತು.
ಅವರ ಸಲಹೆಯಂತೆ ಘೋಷ್ ಚರ್ಚ್ ನ ಆಡಳಿತಾಧಿಕಾರಿ ಮೈಕೆಲ್ ಜೋಸೆಫ್ ಮಾರ್ಟಿನ್ ಅನ್ನು ಭೇಟಿಯಾದಾಗ, ತನ್ನ ಸಹಾಯಕನಾಗಿ ಕೆಲಸ ಮಾಡುವಂತೆ ಮಾರ್ಟಿನ್ ಆಹ್ವಾನಿಸಿದ. ಇದಕ್ಕೆ ಒಪ್ಪಿದ ಘೋಷ್ 1985ರಲ್ಲಿ ಚರ್ಚ್ ನ ಆವರಣವನ್ನು ಪ್ರವೇಶಿಸಿದವ ಬಳಿಕ ಅಲ್ಲಿಂದ ಹೊರಬಂದಿಲ್ಲ. ಮಾರ್ಟಿನ್ 2014ರಲ್ಲಿ ಕೆನಡಾಕ್ಕೆ ಹಿಂತಿರುಗಿದಾಗ ಚರ್ಚ್ ನ ಕೀಲಿಕೈಯನ್ನು ಘೋಷ್ಗೆ ನೀಡಿದ್ದ. 89 ವರ್ಷದ ಮಾರ್ಟಿನ್ 2020ರಲ್ಲಿ ತೀರಿಕೊಂಡಾಗ ಘೋಷ್ ಚರ್ಚ್ ನ ಪೂರ್ಣಾವಧಿ ಪಾಲಕನಾದ.
ಈಗ ಚರ್ಚ್ ನ ಆಡಳಿತದ ನಿಯಂತ್ರಣ ಲಾಸ್ಏಂಜಲೀಸ್ ಮೂಲದ ಉದ್ಯಮಿ ಆರ್ಮನ್ ಅರ್ಸ್ಲೇನಿಯನ್ ಕೈಯಲ್ಲಿದ್ದು ಆತ ಚರ್ಚ್ ನಿರ್ವಹಣೆಗೆ ಆರ್ಥಿಕ ನೆರವು ಒದಗಿಸುತ್ತಿದ್ದಾನೆ. ನಮ್ಮ ಚರ್ಚ್ ನಲ್ಲಿ ಘೋಷ್ ಕುಟುಂಬಕ್ಕೆ ವಿಶೇಷ ಸ್ಥಾನಮಾನವಿದೆ ಎಂದು ಅರ್ಸ್ಲೇನಿಯನ್ ಹೇಳುತ್ತಿರುತ್ತಾನೆ. ಚರ್ಚ್ ಆವರಣದಲ್ಲಿ ತನ್ನ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ಘೋಷ್, ಪ್ರತೀ ದಿನ ಚರ್ಚ್ ಬಾಗಿಲು ತೆಗೆದು ಬಲಿಪೀಠದಲ್ಲಿ ಕ್ಯಾಂಡಲ್ ಹೊತ್ತಿಸುತ್ತಾನೆ.
ಬಳಿಕ ಚರ್ಚ್ ಆವರಣದಲ್ಲಿ ಸಮಾಧಿ ಮಾಡಲಾಗಿರುವ 400 ಅಮೆರಿಕನ್ನರ ಪರವಾಗಿ ಕ್ರೈಸ್ತಧರ್ಮದ ಪ್ರಾರ್ಥನೆ ನೆರವೇರಿಸುತ್ತಾನೆ. ಈತನ ಸಹಾಯಕ್ಕೆ ಹಲವು ಸಹಾಯಕರೂ ಇದ್ದಾರೆ. ಇಲ್ಲಿ ದಿನನಿತ್ಯ ಹಲವು ಬೀದಿನಾಯಿಗಳಿಗೆ ಆಹಾರವನ್ನೂ ನೀಡಲಾಗುತ್ತಿದೆ. ಈ ಚರ್ಚ್ ನಲ್ಲಿ ಹಲವು ದಶಕಗಳಿಂದ ಜ್ಞಾನಸ್ನಾನ ಹಾಗೂ ವಾರದ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿಲ್ಲ. ಆದರೆ ಈಸ್ಟರ್ ಹಾಗೂ ಕ್ರಿಸ್ಮಸ್ ದಿನದಂದು ಢಾಕಾದ ರಾಯಭಾರಿಯ ನೆರವಿನಿಂದ ಕ್ರೈಸ್ತ ಪಾದ್ರಿಯೊಬ್ಬರು ಇಲ್ಲಿ ಪ್ರಾರ್ಥನೆ ನೆರವೇರಿಸುತ್ತಾರೆ.
ನನ್ನನ್ನೂ ಇಲ್ಲಿಯೇ ಸಮಾಧಿ ಮಾಡಬೇಕು: ಘೋಷ್
ಇದು ದೇವಮಂದಿರವಾಗಿದೆ. ಬೇರೆ ಯಾವ ಕೆಲಸವೂ ನನಗೆ ಹಿಡಿಸಲಿಲ್ಲ. ಈ ಕೆಲಸ ನನಗೆ ಮೆಚ್ಚುಗೆಯಾಗಿದೆ. ಈ ಪವಿತ್ರಕಾರ್ಯದ ಅವಕಾಶ ಸಿಕ್ಕಿದ್ದು ದೇವರ ಕೃಪೆ ಎಂದೇ ಭಾವಿಸುತ್ತೇನೆ. ಚರ್ಚ್, ಮಸೀದಿ ಅಥವಾ ದೇವಾಲಯವಿರಲಿ, ಎಲ್ಲಾ ಕಡೆ ಒಬ್ಬರೇ ದೇವರು ಎಂದು ನನ್ನ ನಂಬಿಕೆ. ಈ ಚರ್ಚ್ ನನಗೆ ಅಚ್ಚುಮೆಚ್ಚಿನ ತಾಣವಾಗಿದೆ. ಸತ್ತಮೇಲೆ ನನ್ನನ್ನೂ ಇಲ್ಲಿಯೇ ಸಮಾಧಿ ಮಾಡಬೇಕೆಂಬುದು ನನ್ನ ಕೊನೆಯಾಸೆ ಎಂದು ಘೋಷ್ ಹೇಳಿದ್ದಾನೆ.