ಕೊಲ್ಲಿಯ ದೇಶಗಳ ಆಂತರಿಕ ಸ್ಥಿತಿ ಹೇಗಿದೆ? ಪರಸ್ಪರ ನಂಟುಗಳು ಹೇಗಿವೆ?
ಭಾಗ-21
ಕೊಲ್ಲಿಯ ಅರಬ್ ಮತ್ತು ಮುಸ್ಲಿಮ್ ದೇಶಗಳು ಒಂದುಗೂಡಿ ಇಸ್ರೇಲ್ ವಿರುದ್ಧ ಸಂಯುಕ್ತ ಕಾರ್ಯಾಚರಣೆಗೆ ಇಳಿದರೆ ಇಸ್ರೇಲನ್ನು ಸೋಲಿಸಿ, ಫೆಲೆಸ್ತೀನಿಗಳಿಗೆ ಅವರ ಹಕ್ಕನ್ನು ಕೊಡಿಸಲು ಸಾಧ್ಯವಿದೆ- ಇದು ಬಹುಕಾಲದಿಂದ ಹಲವು ವಲಯಗಳಲ್ಲಿ ಚಲಾವಣೆಯಲ್ಲಿರುವ ಒಂದು ಜನಪ್ರಿಯ ಪರಿಹಾರ. ಇಂದು ಕೊಲ್ಲಿಯಲ್ಲಿರುವ ಅರಬ್ ಮತ್ತು ಮುಸ್ಲಿಮ್ ದೇಶಗಳ ಪೈಕಿ ಪ್ರತಿಯೊಂದು ದೇಶದ ಆಂತರಿಕ ಸ್ಥಿತಿ ಹೇಗಿದೆ ಮತ್ತು ಈ ದೇಶಗಳ ಪರಸ್ಪರ ಸಂಬಂಧ ಹೇಗಿದೆ ಎಂಬುದನ್ನೊಮ್ಮೆ ಕಣ್ಣೆತ್ತಿ ನೋಡಿದವರು ಯಾರೂ ಜೀವನದಲ್ಲಿ ಮತ್ತೆಂದೂ ಇಂತಹ ಭ್ರಾಮಕ ಪರಿಹಾರದ ಬಗ್ಗೆ ಮಾತನಾಡಲಾರರು.
ಕೆಲವೇ ವರ್ಷಗಳ ಹಿಂದೆ ಬಹಳ ಸಂಪನ್ನ ಹಾಗೂ ಶಕ್ತಿಶಾಲಿ ದೇಶಗಳಾಗಿದ್ದ ಇರಾಕ್, ಸಿರಿಯಾ ಮತ್ತು ಲಿಬಿಯಾ ಇಂದು ತೀವ್ರ ಸ್ವರೂಪದ ಆಂತರಿಕ ಬಿಕ್ಕಟ್ಟಿಗೆ ತುತ್ತಾಗಿ ಅರಾಜಕತೆಯ ಸ್ಥಿಯಲ್ಲಿವೆ. ಯಮನ್, ದಕ್ಷಿಣ ಸುಡಾನ್, ಲೆಬನಾನ್ ಮತ್ತು ಅಫ್ಘಾನಿಸ್ತಾನಗಳು ಆಂತರಿಕವಾಗಿ ಛಿದ್ರವಾಗಿದ್ದು ದೀವಾಳಿಯೆದ್ದಿವೆ. ಬಹರೈನ್‌ನಲ್ಲಿ ಒಂದು ರಾಜ ಮನೆತನ ಅಲ್ಲಿಯ ಬಹುಸಂಖ್ಯಾತ (ಸುಮಾರು ಶೇ.65) ಶಿಯಾ ಸಮುದಾಯವನ್ನು ಸಂಪೂರ್ಣ ದಾಸ್ಯದಲ್ಲಿಟ್ಟು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಮತ್ತು ಸ್ವತಃ ತನ್ನ ದೇಶದ ಪ್ರಜೆಗಳ ಆಕ್ರೋಶದ ಮುಂದೆ ಅಸ್ಥಿರವಾಗಿದೆ. 4 ದಶಕಗಳ ಹಿಂದೆ ಫೆಲೆಸ್ತೀನ್ ಸಮಸ್ಯೆ ಮತ್ತು ಇಸ್ರೇಲ್‌ನ ದಬ್ಬಾಳಿಕೆಯ ಸವಾಲು ಜೀವಂತವಿದ್ದಾಗಲೇ ಆಗಿನ ಕೊಲ್ಲಿ ಪ್ರದೇಶದ ಅತ್ಯಂತ ಶಕ್ತ ರಾಷ್ಟ್ರವಾಗಿದ್ದ, ಸದ್ದಾಮ್ ಹುಸೈನರ ಇರಾಕ್‌ನ ಪಡೆಗಳು, ನೆರೆಯ ಇರಾನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಮಾಡಿದವು. ಆಕ್ರಮಣಕ್ಕೆ ತಕ್ಷಣದ ಪ್ರಚೋದನೆ ಇರಾನ್ ಕಡೆಯಿಂದ ಬಂದಿತ್ತು. 1979ರಲ್ಲಿ ಇರಾನ್‌ನಲ್ಲಿ ಅಲ್ಲಿನ ಶಿಯಾ ವಿದ್ವಾಂಸ ಆಯತುಲ್ಲಾ ಖುಮೈನಿಯವರ ನೇತೃತ್ವದಲ್ಲಿ ನಡೆದ ಕ್ರಾಂತಿಯಲ್ಲಿ, ಪ್ರಾಚೀನ ಕಾಲದಿಂದ ಅಲ್ಲಿದ್ದ ರಾಜಾಳ್ವಿಕೆಯನ್ನು ಕಿತ್ತೊಗೆದು ಒಂದು ಇಸ್ಲಾಮಿ ಸರಕಾರವನ್ನು ಸ್ಥಾಪಿಸಲಾಗಿತ್ತು. ಅತ್ತ ಇರಾಕ್‌ನಲ್ಲಿ ಶೇ.60 ಕ್ಕೂ ಹೆಚ್ಚಿನ ಜನ ಶಿಯಾ ಪಂಥೀಯರಾಗಿದ್ದು, ಸದ್ದಾಮ್‌ರ ದಬ್ಬಾಳಿಕೆಯಿಂದ ರೋಸಿ ಹೋಗಿದ್ದರು. ಅವರು ಇರಾನ್‌ನ ಕ್ರಾಂತಿಯನ್ನು ಇರಾಕ್‌ಗೆ ವಿಸ್ತರಿಸುವ ಶ್ರಮವನ್ನು ಆರಂಭಿಸಿದ್ದರು. ಈ ಶ್ರಮಗಳಿಗೆ ಇರಾನ್‌ನ ಪೂರ್ಣ ಬೆಂಬಲವೂ ಇತ್ತು. ಇದರಿಂದ ಸರ್ವಾಧಿಕಾರಿ ಸದ್ದಾಮ್‌ರ ಪೀಠ ಅಭದ್ರವಾಗಿ ಬಿಟ್ಟಿತ್ತು. 1980ರಲ್ಲಿ ಸದ್ದಾಮ್‌ರ ಪಡೆಗಳು ಇರಾನ್ ಮೇಲೆ ಭಾರೀ ಪ್ರಮಾಣದ ಆಕ್ರಮಣ ನಡೆಸಿದವು. ಸೌದಿ ಅರೇಬಿಯಾ ಸಹಿತ ಕೊಲ್ಲಿಯ ಎಲ್ಲ ರಾಜ ಮನೆತನಗಳು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಸದ್ದಾಮ್‌ರ ಬೆಂಬಲಕ್ಕೆ ನಿಂತಿದ್ದವು. ಇರಾನ್ ನಂತಹ ಕ್ರಾಂತಿ ತಮ್ಮ ದೇಶಕ್ಕೆ ಬಂದರೆ ತಾವೆಲ್ಲ ಬೀದಿ ಸೇರಬೇಕಾಗುತ್ತದೆ ಎಂಬ ಭಯ ಆ ಎಲ್ಲ ಸರ್ವಾಧಿಕಾರಿಗಳಿಗೂ ಇತ್ತು. 1988ರಲ್ಲಿ ಯುದ್ಧ ಮುಗಿಯಿತು. ಆದರೆ ಸತತ 8 ವರ್ಷ ನಡೆದ ಅಷ್ಟೊಂದು ದೀರ್ಘ, ವ್ಯಾಪಕ ಹಾಗೂ ದುಬಾರಿ ಯುದ್ಧದಿಂದಾಗಿ ಕೊಲ್ಲಿಯಲ್ಲಿ ಇಸ್ರೇಲ್‌ಗೆ ಬೆದರಿಕೆಯಾಗಿದ್ದ ಎರಡು ಶಕ್ತಿಶಾಲಿ ದೇಶಗಳು ತೀರಾ ದುರ್ಬಲವಾಗಿ ಬಿಟ್ಟವು. ಈ ಯುದ್ಧದಲ್ಲಿ ಎರಡೂ ಕಡೆ ವ್ಯಾಪಕ ನಾಶನಷ್ಟಗಳಾದವು. ಎಷ್ಟೋ ನಗರಗಳು ನಾಶವಾದವು. 10 ಲಕ್ಷಕ್ಕೂ ಹೆಚ್ಚು ಜೀವಗಳು ಬಲಿಯಾದವು. ಎರಡೂ ಕಡೆಯವರಿಗೆ 1,200 ಶತಕೋಟಿ (ಬಿಲಿಯನ್) ಡಾಲರ್‌ಗಳ ಆರ್ಥಿಕ ನಷ್ಟವಾಯಿತು.
ಈ ವಿನಾಶ ಪರ್ವ ಮುಗಿದು ಎರಡು ವರ್ಷಗಳೊಳಗೆ ಇನ್ನೊಂದು ವಿನಾಶ ಪರ್ವ ಆರಂಭವಾಯಿತು. 1990 ಆಗಸ್ಟ್ ತಿಂಗಳಲ್ಲಿ ಇರಾಕ್ ಸೇನೆ ಕುವೈತ್ ದೇಶದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ವಶಪಡಿಸಿಕೊಂಡು ಅದನ್ನು ಇರಾಕ್‌ನ 19ನೇ ಪ್ರಾಂತವೆಂದು ಘೋಷಿಸಿತು. ಕುವೈತ್ ನ ವಿಮೋಚನೆಗಾಗಿ ಅಮೆರಿಕದ ನೇತೃತ್ವದಲ್ಲಿ 35 ದೇಶಗಳ ಭಾರೀ ಒಕ್ಕೂಟವೊಂದರ ರಚನೆಯಾಯಿತು. ಇದು ಎರಡನೇ ಜಾಗತಿಕ ಮಹಾ ಯುದ್ಧದ ಬಳಿಕ ರೂಪುಗೊಂಡ ಅತಿದೊಡ್ಡ ಮಿಲಿಟರಿ ಒಕ್ಕೂಟವಾಗಿತ್ತು. 1991 ಜನವರಿ ತಿಂಗಳಲ್ಲಿ ಪ್ರಸ್ತುತ ಒಕ್ಕೂಟದ ಸಂಯುಕ್ತ ಪಡೆಗಳು ಬೃಹತ್ ಕಾರ್ಯಾಚರಣೆಯೊಂದನ್ನು ಆರಂಭಿಸಿದವು. 6 ವಾರಗಳ ಈ ಭೀಕರ ಕಾರ್ಯಾಚರಣೆಯಲ್ಲಿ ಇರಾಕ್ ಸಂಪೂರ್ಣ ಸೋತಿತು. ಅದರ ಸೇನಾ ಶಕ್ತಿ ಧ್ವಂಸವಾಯಿತು. ಉತ್ತರ ಇರಾಕ್ ನಲ್ಲಿದ್ದ ಕುರ್ದಿಸ್ತಾನದ ದಕ್ಷಿಣ ಭಾಗವನ್ನು ಇರಾಕ್‌ನಿಂದ ಪ್ರತ್ಯೇಕಿಸಿ ಸ್ವತಂತ್ರಗೊಳಿಸಲಾಯಿತು. ಕುವೈತ್ ಬಹುತೇಕ ನಾಶವಾಯಿತು. ಹೆಚ್ಚಿನ ಅರಬ್ ದೇಶಗಳು ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳ ಜೊತೆ, ಆರ್ಥಿಕತೆ ಹಾಗೂ ಭದ್ರತೆಯ ದೃಷ್ಟಿಯಿಂದ ತಮಗೆ ತೀರಾ ಪ್ರಕೂಲವಾದ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಯಿತು. ಈ ಯುದ್ಧದಲ್ಲಿ ತನಗೆ 60 ಬಿಲಿಯನ್ ಡಾಲರ್ ಖರ್ಚಾಗಿದೆ ಎಂದು ಅಮೆರಿಕ ಹೇಳಿಕೊಂಡಿತು. ಆ ಪೈಕಿ 32 ಬಿಲಿಯನ್ ಡಾಲರ್‌ಗಳನ್ನು ಕುವೈತ್ ಮತ್ತು ಸೌದಿ ಸರಕಾರಗಳು ಪರಿಹಾರವಾಗಿ ಪಾವತಿಸಿದವು.
ಸರಿ. ಈ ಯುದ್ಧವು ಫೆಲೆಸ್ತೀನ್ ಅನ್ನು ಬಾಧಿಸಿದ್ದು ಹೇಗೆ? ಮೊದಲನೆಯದಾಗಿ ಇದರಿಂದ ಬಲಿಷ್ಠ ಮಿಲಿಟರಿ ಶಕ್ತಿಯಾಗಿದ್ದ ಇರಾಕ್ ಎಂಬ ಅರಬ್ ದೇಶ ಮತ್ತು ತನ್ನ ಅಪಾರ ಶ್ರೀಮಂತಿಕೆಗೆ ಖ್ಯಾತವಾಗಿದ್ದ ಕುವೈತ್ ಎಂಬ ಇನ್ನೊಂದು ಅರಬ್ ದೇಶ-ಹೀಗೆ ಎರಡೆರಡು ದೇಶಗಳು ಧ್ವಂಸವಾದವು. ಕುವೈತ್ ಮೇಲೆ ಇರಾಕ್ ಆಕ್ರಮಣ ಆರಂಭವಾದ ಹಂತದಲ್ಲಿ, ಲಕ್ಷಾಂತರ ಸಂಖ್ಯೆಯಲ್ಲಿ ಕುವೈತ್‌ನಲ್ಲಿದ್ದ ಫೆಲೆಸ್ತೀನ್ ನಿರಾಶ್ರಿತರು ಸ್ಥಳೀಯರಿಗಿಂತ ಹೆಚ್ಚು ಉತ್ಸಾಹದಿಂದ ಇರಾಕ್ ಪಡೆಗಳ ವಿರುದ್ಧ ಪ್ರತಿರೋಧ ಪ್ರಕಟಿಸಿ ಇರಾಕ್ ಪಡೆಗಳ ಕೋಪಕ್ಕೆ ಪಾತ್ರರಾದರು. ಅವರ ಮೇಲೆ ವಿಶೇಷ ಪ್ರತಿಬಂಧಗಳನ್ನು ಹೇರಲಾಯಿತು. ಪರಿಣಾಮವಾಗಿ, ಆಕ್ರಮಣ ಆರಂಭವಾಗಿ ಕೆಲವೇ ದಿನಗಳೊಳಗೆ ಸುಮಾರು 2 ಲಕ್ಷ ಫೆಲೆಸ್ತೀನ್ ನಿರಾಶ್ರಿತರು, ಇರಾಕ್ ನಿಯಂತ್ರಣದಲ್ಲಿದ್ದ ಕುವೈತ್ ಅನ್ನು ಬಿಟ್ಟು ಬೇರೆಡೆ ಆಶ್ರಯ ಹುಡುಕಬೇಕಾಯಿತು. ಈ ಮಧ್ಯೆ ಪಿಎಲ್‌ಒ ನಾಯಕ ಯಾಸಿರ್ ಅರಫಾತ್, ಇರಾಕ್ ಅನ್ನು ಸಮರ್ಥಿಸಿ ಮಾತನಾಡಿದ್ದರಿಂದ, ಕುವೈತ್ ಪರವಿದ್ದ ಎಲ್ಲ ಅರಬ್ ದೇಶಗಳ ಮೂಡ್ ಬದಲಾಯಿತು. ಅವರು ಅರಫಾತ್ ಮತ್ತವರ ಪಕ್ಷದ ವಿರುದ್ಧ ಮಾತ್ರವಲ್ಲ ಫೆಲೆಸ್ತೀನ್‌ನ ಜನರ ವಿರುದ್ಧವೇ ಅಸಮಾಧಾನ ಪ್ರದರ್ಶಿಸಲು ಆರಂಭಿಸಿದರು. ಆವರೆಗೆ ಉದಾರವಾಗಿ ತನ್ನ ನೆಲದಲ್ಲಿ ಫೆಲೆಸ್ತೀನಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದ ಕುವೈತ್ ಸರಕಾರ, ಯುದ್ಧ ಮುಗಿದೊಡನೆ, ತನ್ನಲ್ಲಿದ್ದ ಫೆಲೆಸ್ತೀನಿ ನಿರಾಶ್ರಿತರ ಪೈಕಿ 2 ಲಕ್ಷ ಮಂದಿಯನ್ನು ದೇಶದಿಂದ ಹೊರಕ್ಕೆ ಅಟ್ಟಿ ಬಿಟ್ಟಿತು!
ಅತ್ತ ಕುವೈತ್ ಮೇಲೆ ಆಕ್ರಮಣ ನಡೆದಾಗ ಸದ್ದಾಮ್‌ಗೆ ಬೆಂಬಲ ಸೂಚಿಸಿದರೆಂದು ಆರೋಪಿಸಿ, ಸೌದಿ ಅರೇಬಿಯಾ ಸರಕಾರವು, ತನ್ನಲ್ಲಿದ್ದ ಯಮನ್ ಮೂಲದ ಕೆಲವು ಲಕ್ಷ ಬಡ ಕಾರ್ಮಿಕರನ್ನು ಮನೆಗೆ ಕಳಿಸಿತು.
ನೀವು ಕೇವಲ ಭಾಷಣ, ಠರಾವು, ಪತ್ರಿಕಾ ಹೇಳಿಕೆ ಇತ್ಯಾದಿಗಳನ್ನು ಅವಲಂಬಿಸದೆ ಸ್ವಲ್ಪ ಹತ್ತಿರ ಹೋಗಿ ನೋಡಿದರೆ, ಒಂದು ವಿಷಯ ಬಹಳ ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಅದೇನೆಂದರೆ, ಫೆಲೆಸ್ತೀನ್ ಎಂಬುದು ಯಾವುದೇ ಅರಬ್ ಅಥವಾ ಮುಸ್ಲಿಮ್ ದೇಶದ ಆದ್ಯತೆಯಲ್ಲ! ಹಾಗೆಯೇ, ಯಾವುದೇ ಅರಬ್ ಅಥವಾ ಮುಸ್ಲಿಮ್ ದೇಶ ಇಸ್ರೇಲ್ ಅನ್ನು ತನ್ನ ಪ್ರಥಮ ವಿರೋಧಿ ಎಂದು ಪರಿಗಣಿಸುವುದಿಲ್ಲ! ಎಷ್ಟೋ ವರ್ಷಗಳ ಕಾಲ ಇರಾಕ್ ಪಾಲಿಗೆ ಪ್ರಥಮ ಶತ್ರು ಇರಾನ್ ಆಗಿತ್ತು. ಇರಾನ್ ವಿರುದ್ಧ 8 ವರ್ಷಗಳ ಯುದ್ಧ ನಡೆಸಿದ ಬಳಿಕ ಇರಾಕ್, ಕುವೈತ್ ಮೇಲೆ ಆಕ್ರಮಣ ಮಾಡಿತು. ಆಗ ಕುವೈತ್ ಇರಾಕ್‌ನ ಪ್ರಥಮ ಶತ್ರುವಾದರೆ, ಇರಾಕ್ ಎಲ್ಲ ಅರಬ್ ದೇಶಗಳ ಪ್ರಥಮ ಶತ್ರುವಾಗಿ ಬಿಟ್ಟಿತು!
► ‘ಅರಬ್ ವಸಂತ’ ಎಂಬ ಬಂಡಾಯದ ಅಲೆ
ಹೆಚ್ಚಿನ ಅರಬ್ ದೇಶಗಳ ಜನತೆ ಹಲವು ದಶಕಗಳಿಂದ ಅಮೆರಿಕ ಮತ್ತು ಯುರೋಪ್ ಬೆಂಬಲಿತ ಸರ್ವಾಧಿಕಾರಿ ಸರಕಾರಗಳ ಅಧೀನದಲ್ಲಿ ನರಳುತ್ತಿದ್ದಾರೆ. ಅಪರೂಪಕ್ಕೊಮ್ಮೆ ಎಲ್ಲಾದರೂ ಅವರು ಈ ಸರ್ವಾಧಿಕಾರಿಗಳ ವಿರುದ್ಧ ಮಾತನಾಡಲು ಹೊರಟರೆ ಅತ್ಯಂತ ಅಮಾನುಷಾಗಿ ಅವರ ಸದ್ದಡಗಿಸಲಾಗುತ್ತದೆ.
ಟ್ಯುನೀಷಿಯಾದಲ್ಲಿ 2010 ಡಿಸೆಂಬರ್‌ನಲ್ಲಿ ಮುಹಮ್ಮದ್ ಬೂ ಅಝೀಝಿ ಎಂಬ ಬಡ ತರಕಾರಿ ವ್ಯಾಪಾರಿಯೊಬ್ಬ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಾ ಸರಕಾರಿ ಕಚೇರಿ ಎದುರು ಆತ್ಮಾಹುತಿ ಮಾಡಿಕೊಂಡ. ಇದರೊಂದಿಗೆ, ಸರ್ವಾಧಿಕಾರದ ವಿರುದ್ಧ ಬಂಡಾಯದ ಹೊಸ ಸರಣಿಯೊಂದು ಆರಂಭವಾಯಿತು. ಬಹಳ ಕ್ಷಿಪ್ರವಾಗಿ ಬೆಳೆದು, ಹೆಚ್ಚಿನೆಲ್ಲಾ ಅರಬ್ ಸಮಾಜಗಳಿಗೆ ತಲುಪಿದ ಈ ಬಂಡಾಯ ‘ಅರಬ್ ವಸಂತ’ (ಅರಬ್ ಸ್ಪ್ರಿಂಗ್) ಎಂದೇ ಪ್ರಸಿದ್ಧವಾಯಿತು. ಲಿಬಿಯಾ, ಈಜಿಪ್ಟ್, ಯಮನ್, ಸಿರಿಯಾ, ಬಹರೈನ್ ಮುಂತಾದ ಹಲವು ದೇಶಗಳನ್ನು ಆವರಿಸಿತು. ಅಲ್ಲೆಲ್ಲಾ ಸರ್ವಾಧಿಕಾರವನ್ನು ಖಂಡಿಸಿ, ಪ್ರಜಾಸತ್ತೆ, ಆರ್ಥಿಕ ಸುಧಾರಣೆ ಹಾಗೂ ಉದ್ಯೋಗಾವಕಾಶಗಳಿಗಾಗಿ ಆಗ್ರಹಿಸಿ, ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದರು. ಬಂಡಾಯದ ಜನಪ್ರಿಯತೆ ಹೆಚ್ಚಿದಂತೆ, ಸರ್ವಾಧಿಕಾರಿ ಸರಕಾರಗಳು ತಮ್ಮ ಪಡೆಗಳನ್ನು ಮತ್ತು ಪುಂಡಪೋಕರಿಗಳನ್ನು ಬೀದಿಗಿಳಿಸಿ, ಎಲ್ಲ ಬಗೆಯ ಹಿಂಸಾ ವಿಧಾನಗಳನ್ನು ಪ್ರಯೋಗಿಸಿ ಅವರ ಧ್ವನಿಯನ್ನು ಹತ್ತಿಕ್ಕಲು ಶ್ರಮಿಸಿದವು. ಆದರೆ ಬಂಡಾಯವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಅವರಿಗೆ ಸಾಧ್ಯವಾಗಲಿಲ್ಲ. ವಿವಿಧ ದೇಶಗಳ, ವಿವಿಧ ಭಾಗಗಳಲ್ಲಿ, ಬೇರೆಬೇರೆ ಸ್ವರೂಪದಲ್ಲಿ ಪ್ರತಿಭಟನೆ ಮುಂದುವರಿದದ್ದು ಮಾತ್ರವಲ್ಲ, ಅದರ ಪ್ರತಿಧ್ವನಿ ಮೊರೊಕ್ಕೋ, ಅಲ್ಜೀರಿಯ, ಇರಾಕ್, ಕುವೈತ್, ಒಮಾನ್, ಲೆಬನಾನ್, ಜೋರ್ಡನ್ ಮುಂತಾದ ದೇಶಗಳಲ್ಲೂ ಮೊಳಗತೊಡಗಿತು. ಹೆಚ್ಚಿನ ಸರ್ವಾಧಿಕಾರಿಗಳಲ್ಲಿ ಮತ್ತು ರಾಜ ಮಹಾರಾಜರಲ್ಲಿ ನಡುಕ ಹುಟ್ಟಿತು. ಟ್ಯುನೀಷಿಯಾದಲ್ಲಿ ಬಂಡಾಯ ಆರಂಭವಾಗಿ ಎರಡೇ ವಾರದಲ್ಲಿ ಅಲ್ಲಿನ ಅಧ್ಯಕ್ಷ ಝಯ್ನುಲ್ ಆಬಿದೀನ್ ಪದತ್ಯಾಗ ಮಾಡಿ, ದೇಶಬಿಟ್ಟು ಸೌದಿ ಅರೇಬಿಯಾದಲ್ಲಿ ಆಶ್ರಯ ಪಡೆದರು. 2011 ಫೆಬ್ರವರಿಯಲ್ಲಿ ಈಜಿಪ್ಟ್‌ನ ಹುಸ್ನಿ ಮುಬಾರಕ್ ಅಧಿಕಾರ ಕಳೆದುಕೊಂಡರು. ಆ ವರ್ಷ ಮಾರ್ಚ್‌ನಲ್ಲಿ ಸಿರಿಯಾ ಮತ್ತು ಮೊರೊಕ್ಕೋದಲ್ಲಿ ರಾಷ್ಟ್ರವ್ಯಾಪಿ ಆಂದೋಲನಗಳು ನಡೆದವು. ಜುಲೈಯಲ್ಲಿ ಮೊರೊಕ್ಕೋದಲ್ಲಿ, ರಾಜಾಳ್ವಿಕೆಯ ಅಧಿಕಾರಗಳನ್ನು ಸೀಮಿತಗೊಳಿಸುವ ಆಧ್ಯಾದೇಶವೊಂದಕ್ಕೆ ಅಂಗೀಕಾರ ದೊರೆಯಿತು. ಆಗಸ್ಟ್‌ನಲ್ಲಿ, ಲಿಬಿಯಾದಲ್ಲಿ ಸರಕಾರದ ವಿರುದ್ಧ ಸಶಸ್ತ್ರ ದಂಗೆಗಳು ನಡೆದವು. ಸೆಪ್ಟಂಬರ್‌ನಲ್ಲಿ ಯಮನ್‌ನಲ್ಲಿ ಪ್ರಖ್ಯಾತ ‘ಮಿಲಿಯನ್ ಮ್ಯಾನ್ ಮಾರ್ಚ್’ ನಡೆಯಿತು. 5 ದಶಕಗಳಿಗಿಂತಲೂ ದೀರ್ಘ ಕಾಲ ತನ್ನನ್ನು ಲಿಬಿಯಾದ ಮೇಲೆ ಹೇರಿಕೊಂಡಿದ್ದ ಸರ್ವಾಧಿಕಾರಿ ಮುಅಮ್ಮರ್ ಗದ್ದಾಫಿಯ ಯುಗವು ಅಕ್ಟೋಬರ್‌ನಲ್ಲಿ ಹೀನಾಯ ಅಂತ್ಯವನ್ನು ಕಂಡಿತು. ಅದೇ ತಿಂಗಳಲ್ಲಿ ಟ್ಯುನೀಷಿಯಾದಲ್ಲಿ ಪ್ರಥಮ ಪ್ರಜಾಸತ್ತಾತ್ಮಕ ಸಂಸದೀಯ ಚುನಾವಣೆ ನಡೆಯಿತು. ಈಜಿಪ್ಟ್ ಮತ್ತು ಯಮನ್ ನಲ್ಲೂ ಪ್ರಮುಖ ರಾಜಕೀಯ ಬದಲಾವಣೆಗಳುಂಟಾದವು.
ಅರಬ್ ವಸಂತದ ಅಪಾಯವನ್ನು ಗುರುತಿಸಿದ ಹೆಚ್ಚಿನ ಸರ್ವಾಧಿಕಾರಿ ಅರಬ್ ಸರಕಾರಗಳು ಬಂಡಾಯ ಮತ್ತು ಭಿನ್ನತೆಯ ಯಾವ ಕುರುಹೂ ತಮ್ಮ ನೆಲದಲ್ಲಿ ಕಾಣಿಸದಂತೆ ಅದನ್ನು ಅಮಾನುಷವಾಗಿ ಅಳಿಸಿ ಹಾಕಿದವು. ಈ ಕಾರ್ಯದಲ್ಲಿ ಮಾನವ ಹಕ್ಕುಗಳನ್ನು ಹತ್ತಿಕ್ಕುವ ತಮ್ಮ ಹಳೆಯ ನೈಪುಣ್ಯವನ್ನು ಮತ್ತು ಇಸ್ರೇಲ್ ಹಾಗೂ ಅಮೆರಿಕ ಒದಗಿಸಿದ ಬಹಳ ಸೂಕ್ಷ್ಮ ಮಟ್ಟದ ಬೇಹುಗಾರಿಕಾ ತಂತ್ರಜ್ಞಾನವನ್ನು ಆ ಸರಕಾರಗಳು ಬಹಳ ಚೆನ್ನಾಗಿ ಬಳಸಿಕೊಂಡವು.
ಅರಬ್ ವಸಂತವು ಕಾಣಿಸಿಕೊಂಡ ಎಲ್ಲ ನಾಡುಗಳಲ್ಲೂ ಅರಬ್ ಸರ್ವಾಧಿಕಾರಿಗಳ ಇಬ್ಬಂದಿತನ, ಅಸಾಮರ್ಥ್ಯ ಮತ್ತು ಸಂವೇದನಾ ಶೂನ್ಯತೆಯ ಪ್ರಮುಖ ಪುರಾವೆಯಾಗಿ, ಫೆಲೆಸ್ತೀನ್ ಬಿಕ್ಕಟ್ಟನ್ನು ಪ್ರಸ್ತಾಪಿಸಲಾಯಿತು. ಅರಬ್ ವಸಂತದಿಂದಾಗಿ, ಈ ಭೂಭಾಗದಲ್ಲಿ ಸ್ವಾತಂತ್ರ ಮತ್ತು ಪ್ರಜಾಸತ್ತೆಯ ತವಕ ಹಾಗೂ ಸರ್ವಾಧಿಕಾರದ ವಿರುದ್ಧ ರೋಷ ಎಷ್ಟು ಆಳವಾಗಿದೆ ಎಂಬುದನ್ನು ಜಗತ್ತು ಗಂಭೀರವಾಗಿ ಗಮನಿಸುವಂತಾಯಿತು. ಅದೇ ರೀತಿ ಸರ್ವಾಧಿಕಾರಿಗಳ ಜೊತೆ ನಿಂತು, ಸ್ವಾತಂತ್ರ ಹೋರಾಟಗಾರರನ್ನು ದಮನಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿರುವ ಅಮೆರಿಕ ಮತ್ತು ಯೂರೋಪಿನ ಪ್ರಜಾಸತ್ತಾತ್ಮಕ ಸರಕಾರಗಳ ನಾಟಕ ಪ್ರತಿಭೆಯನ್ನೂ ಅದು ಬೆಳಕಿಗೆ ತಂದಿತು.
(ಮುಂದುವರಿಯುದು)