ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

Update: 2021-06-28 19:30 GMT

ಕನ್ನಡದ ಪರಂಪರೆಗೆ ಘನತೆ ತಂದ ಶರಣರು ಪ್ರತಿಪಾದಿಸಿದ ಸ್ಥಾವರ ಮತ್ತು ಜಂಗಮ ನೆಲೆಗಟ್ಟನ್ನು ಇಂದು ಜನಸಾಮಾನ್ಯರು ಸೇರಿದಂತೆ ಬರಹಗಾರರು, ರಾಜಕಾರಣಿಗಳಾದಿಯಾಗಿ ಎಲ್ಲರೂ ಎಡವಿದ್ದೇವೆ. ಭಾರತೀಯ ಪರಂಪರೆಯೊಳಗೆ ಬುದ್ಧ, ಅಂಬೇಡ್ಕರ್, ವಿವೇಕಾನಂದರು ಸೇರಿದಂತೆ ಎಲ್ಲಾ ತತ್ವಜ್ಞಾನಿಗಳು ಸ್ಮಾರಕಗಳ ವಿರೋಧಿಗಳೇ ಆಗಿದ್ದಾರೆ. ಬುದ್ಧ ಮೂಲದಲ್ಲಿ ಸ್ಮಾರಕದ ವಿರೋಧಿ. ಈ ಕಾರಣಕ್ಕೆ ಬೌದ್ಧರ ಮೊದಲ ಪಂಥ ಬುದ್ಧನ ಮೂರ್ತಿಯನ್ನು ಹೊಂದಿರಲಿಲ್ಲ. ಆನಂತರ ಉದಯಗೊಂಡ ಪಂಥವು ಅವರ ಮೂರ್ತಿಯನ್ನು ಹುಟ್ಟು ಹಾಕಿತು. ಭಾರತದ ತಾತ್ವಿಕ ನೆಲೆಯೇ ಮೂಲದಲ್ಲಿ ಸ್ಮಾರಕ, ಮೂರ್ತಿಗಳ ವಿರೋಧಿ ನೆಲೆ. ಇಲ್ಲಿ ನಿರಾಕಾರದ ಮೂಲಕವೇ ದಾರ್ಶನಿಕರ ದರ್ಶನವನ್ನು ಬಯಸಿದವರು. ಆದರೆ ಇಂದು ಮೂರ್ತಿ, ಸ್ಮಾರಕಗಳಿಗೆ ಧರ್ಮ ಮತ್ತು ಜಾತಿಗಳು ಪರಸ್ಪರ ಕತ್ತಿ ಮಸೆಯುತ್ತಿವೆ. ಮೈಸೂರಿನಲ್ಲಿ ಕಳೆದ 8 ವರ್ಷಗಳಿಂದ ಸ್ಮಾರಕ ಕಟ್ಟಲು ಶಾಲೆಯ ಜಾಗವನ್ನು ಕಬಳಿಸುವ ಕೆಲಸ ನಡೆಯುತ್ತಲೇ ಇದೆ. ಒಂದು ಶಾಲೆಯ ಉಳಿವಿಗಾಗಿ ನಿರಂತರವಾಗಿ 8 ವರ್ಷಗಳಿಂದ ಹೋರಾಟ ಮಾಡುತ್ತಲೇ ಬರಲಾಗಿದೆ. ರಾಮಕೃಷ್ಣ ಮಠವು ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಅದೇ ಜಾಗವನ್ನು ಆಯ್ಕೆ ಮಾಡಿಕೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕಿಂತಲೂ ಅಲ್ಲಿ ಸ್ಮಾರಕವೇ ಮುಖ್ಯವಾಯಿತೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇಂದು ವಿವೇಕಾನಂದರು ಬದುಕಿದ್ದರೆ ರಾಮಕೃಷ್ಣ ಆಡಳಿತ ಮಂಡಳಿಗೆ ವಿವೇಕದ ಪಾಠ ಹೇಳಿಕೊಡುತ್ತಿದ್ದರು. ವಿವೇಕಾನಂದರ ಅನುಪಸ್ಥಿತಿಯಲ್ಲಿ ಮಠ ಮಾಡಲು ಹೊರಟಿರುವ ಘೋರ ಅನ್ಯಾಯವಂತೂ ವಿವೇಕಾನಂದರಿಗೆ ಪ್ರತ್ಯಕ್ಷವಾಗಿ ಮಾಡಿದ ಅಪಮಾನ.

ವಿವೇಕಾನಂದರು ಮತ್ತು ಮೈಸೂರು ಸಂಸ್ಥಾನ

ವಿವೇಕಾನಂದರಿಗೂ ಮೈಸೂರು ಸಂಸ್ಥಾನಕ್ಕೂ ನಂಟಿತ್ತು. ಅಂದು ಚಾಮರಾಜೇಂದ್ರ ಒಡೆಯರ್ ರಾಜರಾಗಿದ್ದರೆ, ಶೇಷಾದ್ರಿ ಅಯ್ಯರ್ ಅವರು ದಿವಾನರಾಗಿದ್ದರು. ದಿವಾನರು ಮತ್ತು ರಾಜರು ವಿವೇಕಾನಂದರ ಚಿಂತನೆ ಮತ್ತು ಅಧ್ಯಾತ್ಮ ಪ್ರವಚನಗಳಿಂದ ಪ್ರಭಾವಿತರಾಗಿದ್ದರು. ಆದ್ದರಿಂದ ಅವರನ್ನು ಕಾಣುವುದಕ್ಕೆ ಒಡೆಯರ್ ಬಹಳ ಉತ್ಸುಕರಾಗಿದ್ದರು. ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋ ನಗರದಲ್ಲಿ ನಡೆಯುವ ಧಾರ್ಮಿಕ ಸಮ್ಮೇಳನಕ್ಕೆ ಹೋಗುವ ಮುನ್ನ 1892 ನವೆಂಬರ್ ಹೊತ್ತಿಗೆ ಮೈಸೂರಿಗೆ ಬಂದಿದ್ದರು. ಅವರು ಮೈಸೂರಿಗೆ ಬಂದ ಸಂದರ್ಭದಲ್ಲಿ ಒಡೆಯರ್ ಮತ್ತು ದಿವಾನರಿಗೆ ವಿವೇಕಾನಂದರನ್ನು ಕಾಣುವ ಮಹದಾಸೆಯಿತ್ತು. ಅವರ ಮಾತುಗಳನ್ನು ಕೇಳುವ ಬಯಕೆಯಿತ್ತು. ದಿವಾನ್ ಶೇಷಾದ್ರಿ ಅಯ್ಯರ್ ಅವರು ಖುದ್ದು ವಿವೇಕಾನಂದರನ್ನು ಕಂಡು ಮಹಾರಾಜರ ಬಳಿ ಕರೆದು ತರುತ್ತಾರೆ. ವಿವೇಕಾನಂದರು ತನ್ನ ಧ್ಯೇಯದ ಬಗ್ಗೆ ನಿರರ್ಗಳವಾಗಿ ವಿವರಿಸುತ್ತಲೇ, ಒಟ್ಟು ಭಾರತದ ಸ್ಥಿತಿಗತಿಗಳ ಕುರಿತಂತೆ ಒಂದು ಗಂಟೆಗೂ ಹೆಚ್ಚು ಸಮಯ ರಾಜರೊಡನೆ ಸಮಾಲೋಚನೆ ನಡೆಸುತ್ತಾರೆ.

ಮಹಾರಾಜರ ಭೇಟಿಯ ನಂತರ ವಿವೇಕಾನಂದರು ಹೊರಟದ್ದು ಸದ್ವಿದ್ಯಾ ಪ್ರೌಢಶಾಲೆಗೆ ಪ್ರವಚನ ನೀಡಲು. ಅಲ್ಲಿ ಪ್ರವಚನ ಮುಗಿದ ಆನಂತರ ಅವರು ಉಳಿದುಕೊಂಡಿದ್ದು ಶೇಷಾದ್ರಿ ಅಯ್ಯರ್ ಅವರ ಭವನದಲ್ಲಿ ಎಂದು ಸೋಮನಾಥಾನಂದ ಅವರ ಕೃತಿಯಾದ ‘ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ’ಯಲ್ಲಿ ಉಲ್ಲೇಖಿಸುತ್ತಾರೆ. ಆದರೆ ಅವರು ನಿರಂಜನಮಠದಲ್ಲಿ ಉಳಿದಿದ್ದರು ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ.

ಮೈಸೂರು ಸಂಸ್ಥಾನದಲ್ಲಿ ಶಾಲೆಯ ಉಗಮ
ಮೈಸೂರು ಸಂಸ್ಥಾನದಲ್ಲಿ ಶಾಲೆ ಆರಂಭಗೊಂಡಿದ್ದು ಮಹಾರಾಣಿ ವಾಣಿವಿಲಾಸ ಅವರಿಂದ. ಚಾಮರಾಜೇಂದ್ರ ಒಡೆಯರ್‌ರ ಪತ್ನಿ ವಾಣಿವಿಲಾಸರಿಗೆ ಓದು ಬರಹ ಬರುತ್ತಿರಲಿಲ್ಲ. ಪಂಡಿತನೊಬ್ಬ ಅರಮನೆಗೆ ಬಂದು ಪಾಠ ಹೇಳಿಕೊಡುತ್ತಿದ್ದ. ಒಬ್ಬ ರಾಣಿಯಾಗಿ ತನಗೇ ಶಿಕ್ಷಣ ದೂರವೆಂದರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು ಎಂದು 1881ರಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ನಡೆಸಲು ಪ್ರಾರಂಭ ಮಾಡುತ್ತಾರೆ. ಅಷ್ಟೊತ್ತಿಗೆ ಜ್ಯೋತಿಬಾ ಫುಲೆ ಅವರು ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ತೆರೆದ ಪ್ರಭಾವವೂ ಅವರ ಮೇಲಾಗಿರುತ್ತದೆ. ಮೊದಲು ಅರಮನೆಯ ಕೋಟೆಯೊಳಗಿನ ದೇವಸ್ಥಾನದ ಪಡಸಾಲೆಯಲ್ಲಿ ಶಾಲೆ ಪ್ರಾರಂಭವಾಗಿ ಅರಮನೆಯಿಂದಲೇ ವಿದ್ಯೆ ಕಲಿಯುವ ಮಕ್ಕಳಿಗೆ ಉಚಿತ ಸ್ಲೇಟ್ ಮತ್ತು ಬಳಪ ಒದಗಿಸಲಾಗುತ್ತಿತ್ತಂತೆ. ಮಕ್ಕಳ ಸಂಖ್ಯೆ ಹೆಚ್ಚಾದೊಡನೆ ಪಡಸಾಲೆಯಿಂದ ಜಗನ್‌ಮೋಹನ ಪ್ಯಾಲೆಸ್‌ಗೆ ಶಾಲೆಯನ್ನು ಸ್ಥಳಾಂತರಿಸಲಾಗುತ್ತದೆ. ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಿದೊಡನೆ ಈಗಿರುವ ನಾರಾಯಣಶಾಸ್ತ್ರಿ ರಸ್ತೆಯ ಮಹಾರಾಣಿ ಕಾಲೇಜಿಗೆ ಶಾಲೆ ಸ್ಥಳಾಂತರವಾಗುತ್ತದೆ. ಆ ಸಂದರ್ಭದಲ್ಲಿ ಅದೊಂದು ಪ್ರಾಥಮಿಕ ಶಾಲೆ. ಮುಂದೆ ಶಾಲೆ ಬೆಳೆಯುತ್ತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡ ಮೇಲೆ ಪ್ರಾಥಮಿಕ ಶಾಲೆ ನಿರಂಜನಮಠದ ಪಕ್ಕದಲ್ಲೇ ಇರುವ ಸರಕಾರಿ ಭೂಮಿಗೆ ಸ್ಥಳಾಂತರವಾಗುತ್ತದೆ. ಅದು ಸ್ವತಂತ್ರ ಕಟ್ಟಡವಾಗಿ ರೂಪುಗೊಂಡಿದ್ದು 1971ರಲ್ಲಿ. ಆ ಶಾಲೆಯೇ ಮಹಾರಾಣಿ NTM (New Type Model) ಶಾಲೆ. ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ಶಿಕ್ಷಣ ಕುರಿತು 1894ರಲ್ಲಿ ಚಿಕಾಗೋದಿಂದ ವಿವೇಕಾನಂದರು ಪತ್ರ ಬರೆಯುತ್ತಾರೆ. ಆದರೆ ಅವರು ಪತ್ರ ಬರೆಯುವ ಮುನ್ನವೇ ಶಾಲೆ ಆರಂಭಗೊಂಡಿದ್ದವು ಎಂಬುದು ಗಮನಾರ್ಹ. ಎನ್‌ಟಿಎಂ ಶಾಲೆಗೆ 1971ರಲ್ಲಿ ಹೊಸಕಟ್ಟಡ ಮತ್ತು ಜಾಗಸಿಕ್ಕಿತು ಎನ್ನುವುದನ್ನು ಬಿಟ್ಟರೆ, ಬೇರೆ ಬೇರೆ ಕಾರಣಕ್ಕೆ ಸ್ಥಳಾಂತರಗೊಂಡಿದೆ ಎಂಬುದನ್ನು ಹೊರತುಪಡಿಸಿದರೆ ಇದರ ಪಯಣ ಸುದೀರ್ಘ 140 ವರ್ಷಗಳು.

ಶಾಲೆಯ ಪಕ್ಕದಲ್ಲಿ ನಿರಂಜನ ಎನ್ನುವ ಹೆಸರಿನ ಮಠವೊಂದಿದೆ. ಅದನ್ನು ರಾಮಕೃಷ್ಣ ಮಠವೇ ನೋಡಿಕೊಳ್ಳುತ್ತಿದೆ. ಅಲ್ಲಿ ವಿವೇಕಾನಂದರು ತಂಗಿದ್ದರು ಎಂಬುದೆಲ್ಲಾ ಕೆಲವರು ಸೃಷ್ಟಿಸಿರುವ ಕಪೋಕಲ್ಪಿತ ಕತೆ. ವಿವೇಕಾನಂದರು ಮೈಸೂರಿಗೆ ಆಗಮಿಸಿದಾಗ ಉಳಿದು ಕೊಂಡದ್ದು ಶೇಷಾದ್ರಿ ಅಯ್ಯರ್ ಭವನದಲ್ಲಿಯೇ ವಿನಃ ನಿರಂಜನ ಮಠದಲ್ಲಲ್ಲ.

ಎಂಟು ವರ್ಷದಿಂದ ಸುದೀರ್ಘ ಹೋರಾಟ

ಮಹಾರಾಣಿ ಎನ್‌ಟಿಎಂ ಶಾಲೆ 140 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಂದು ಶಾಲೆ ಮತ್ತು ಅದರ ಜಾಗವನ್ನು ವಿವೇಕಾನಂದರ ಹೆಸರಿನಲ್ಲಿ ಕಬಳಿಸಲು ಪ್ರಯತ್ನಿಸಲಾಗುತ್ತಿದೆ. ಸ್ವತಃ ವಿವೇಕಾನಂದರು ಬದುಕಿದ್ದರೂ ಇದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. 2013ರಲ್ಲೇ ಈ ಪ್ರಯತ್ನ ನಡೆದಿದೆ. ಮೈಸೂರಿನ ಪ್ರಗತಿಪರ ಚಿಂತಕರು ಮತ್ತು ದಲಿತ ಸಂಘಟನೆಗಳ ಹೋರಾಟದ ಪ್ರಯತ್ನವಾಗಿ ಶಾಲೆ ಉಳಿದುಕೊಂಡಿತು. ಇದು ಇಷ್ಟಕ್ಕೆ ಸುಮ್ಮನಾಗಲಿಲ್ಲ, 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ವಿ.ಶ್ರೀನಿವಾಸ್ ಪ್ರಸಾದ್ ಅವರು ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿಯೂ ಇದು ಮುನ್ನೆಲೆಗೆ ಬಂತು. ಆಗಲೂ ಪ್ರಗತಿಪರರೆಲ್ಲಾ ಒಟ್ಟಾಗಿ ಕಷ್ಟ ಪಟ್ಟು ಶಾಲೆ ಉಳಿಸಿದರು. 2019ರಲ್ಲಿಯೂ ಸಂಘರ್ಷ ನಡೆದು ಶಾಲೆ ಉಳಿಯಿತು. ಇದೀಗ 2021ರಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ರಾಮಕೃಷ್ಣ ಮಠ ಅಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕು, ಶಾಲೆಯನ್ನು ವಿಸರ್ಜಿಸಿ ಜಾಗವನ್ನು ನಮ್ಮ ಮಠಕ್ಕೆ ಬಿಟ್ಟುಕೊಡಿ ಎಂದು ತಗಾದೆ ತೆಗೆದಿದೆ. ಶಾಲೆಯ ಮಕ್ಕಳು ಹಾಗೂ ಪ್ರಗತಿಪರ ಚಿಂತಕರೆಲ್ಲಾ ಅಲ್ಲಿ ಧರಣಿ ಕೂತಿದ್ದಾರೆ.

ರಾಮಕೃಷ್ಣ ಮಠಕ್ಕೆ ಈಗಾಗಲೇ ಸರಕಾರ ಸಾಕಷ್ಟು ಭೂಮಿಯನ್ನು ಮಂಜೂರು ಮಾಡಿಕೊಟ್ಟಿದೆ. ಆದರೂ ಇವರು ಶಾಲೆಯನ್ನು ಕೇಳುತ್ತಿರುವುದಕ್ಕೆ ನೈತಿಕತೆಯಿದೆಯೇ?. ಅಲ್ಲಿ ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರ ಮಕ್ಕಳು ಉಚಿತವಾಗಿ ವಿದ್ಯೆ ಕಲಿಯುತ್ತಿದ್ದಾರೆ. ಅದನ್ನು ಮುಚ್ಚಿದರೆ ಜನಸಾಮಾನ್ಯರು ತಮ್ಮ ಮಕ್ಕಳಿಗೆ ಲಕ್ಷಾಂತರ ರೂ. ಕೊಟ್ಟು ಹೇಗೆ ವಿದ್ಯೆ ಕೊಡಿಸಲು ಸಾಧ್ಯ? ಇದನ್ನು ತಿಳಿಯದ ಎಸ್. ಎಲ್. ಭೈರಪ್ಪಮುಂತಾದವರು ಮಠಕ್ಕೆ ಶಾಲೆಯ ಜಾಗವನ್ನು ಕೊಡಿಸಲು ರಿಯಲ್ ಎಸ್ಟೇಟ್ ದಲ್ಲಾಳಿಗಳಂತೆ ಹೋರಾಟ ಮಾಡುತ್ತಿದ್ದಾರೆ. ಸ್ಮಾರಕಕ್ಕಿಂತ ಅರಿವು ಮುಖ್ಯ ಎನ್ನುವುದನ್ನು ಶರಣರು ಈಗಾಗಲೇ ಹೇಳಿದ್ದಾರೆ. ಸ್ಮಾರಕ ಎನ್ನುವುದು ಚಲನರಹಿತವಾದದ್ದು, ಶಿಕ್ಷಣ ಎನ್ನುವುದು ಮನುಷ್ಯನನ್ನು ವಿಕಾಸಗೊಳಿಸುವ ಸಾಧನ. ಈ ಕಾರಣಕ್ಕೆ ಶರಣರು ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಪ್ರತಿಪಾದಿಸಿದ್ದು. ಮಕ್ಕಳ ಶಾಲೆಯ ಎದೆಯ ಮೇಲೆ ಸ್ಥಾವರ ಕಟ್ಟಲು ಹೊರಟಿರುವ ಮಠದ ಮಂಡಳಿಗೆ ಅವರ ಪರವಾಗಿ ವಕಾಲತ್ತು ಹಾಕುತ್ತಿರುವ ಚಿಂತಕರಿಗೆ ಶರಣರ ಚಿಂತನೆಗಳು ಇನ್ನಾದರೂ ಮಾದರಿಯಾಗಲಿ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News