ಶೀತಲ ಸಮರದಲ್ಲಿ ಪಾಲುದಾರರ ಶೋಧ
► ಭಾಗ - 24
ಅಮೆರಿಕಕ್ಕೆ ಇಸ್ರೇಲ್ ಎಂಬ ದೇಶ ಅಷ್ಟೊಂದು ಆಪ್ತವಾಗಿ ಬಿಡಲು ಶೀತಲ ಸಮರದ ಆರಂಭದ ಪರ್ವದಲ್ಲಿನ ಅನಿವಾರ್ಯ ಸನ್ನಿವೇಶವೂ ಕಾರಣವಾಗಿತ್ತು ಎಂಬೊಂದು ವಾದವಿದೆ. ಅದು ಭಾಗಶಃ ಸತ್ಯವೂ ಹೌದು. ಆದರೆ ಭಾಗಶಃ ಮಾತ್ರ. ಇಸ್ರೇಲ್ ಸ್ಥಾಪನೆಯಾದದ್ದು 1948ರಲ್ಲಿ. ಆ ವರ್ಷವು ಐತಿಹಾಸಿಕವಾಗಿ ಬಹಳ ನಿರ್ಣಾಯಕವಾಗಿತ್ತು. ಏಕೆಂದರೆ ಆಗ ತಾನೇ ವಿನಾಶಕಾರಿ ಎರಡನೇ ಜಾಗತಿಕ ಮಹಾ ಯುದ್ಧವು ಮುಗಿದು,ಶೀತಲ ಸಮರದ ಹೊಸ ಯುಗವೊಂದು ಆರಂಭವಾಗಿತ್ತು. ಜಾಗತಿಕ ಯುದ್ಧದ ವೇಳೆ ಜರ್ಮನಿ, ಇಟಲಿ ಮತ್ತು ಜಪಾನ್‌ಗಳ ಬೆನ್ನು ಮುರಿದೊಡನೆ, ಆತನಕ ಅವರ ವಿರುದ್ಧ ಒಂದೇ ಪಾಳಯದಲ್ಲಿದ್ದ ಅಮೆರಿಕ, ಬ್ರಿಟನ್, ಫ್ರಾನ್ಸ್, ಸೋವಿಯತ್ ಯೂನಿಯನ್ ಮತ್ತು ಚೀನಾಗಳ ಏಕತೆಯಲ್ಲಿ ಬಿರುಕು ಮೂಡಿತ್ತು. ಹೊಸ ಹಿತಾಸಕ್ತಿಗಳ ಆಧಾರದಲ್ಲಿ, ತೀರಾ ಭಿನ್ನ ಘಟಕಗಳನ್ನೊಳಗೊಂಡ ಹೊಸ ಪಾಳಯಗಳು ರೂಪುಗೊಳ್ಳತೊಡಗಿದವು. ಪ್ರತಿಯೊಂದು ಪಾಳಯದವರಿಗೂ, ಸಾಮಾನ್ಯವಾಗಿ ಜಗತ್ತಿನ ಎಲ್ಲ ಪ್ರಾಂತಗಳಲ್ಲಿ ಮತ್ತು ವಿಶೇಷವಾಗಿ ಹೆಚ್ಚು ಸಂಪನ್ಮೂಲಗಳಿರುವ ಆಯಕಟ್ಟಿನ ಸ್ಥಳಗಳಲ್ಲಿ ನಂಬಲರ್ಹ ಪಾಲುದಾರರು ಬೇಕಿತ್ತು. ಆ ಹಂತದಲ್ಲಿ ಇಸ್ರೇಲ್ ಕೈಯಲ್ಲಿ ಬೇರೆ ಆಯ್ಕೆಯೂ ಇರಲಿಲ್ಲ. ತನ್ನ ಬಂಡವಾಳಶಾಹಿ ಧೋರಣೆಗೆ ತಕ್ಕಂತೆ ಸಹಜವಾಗಿಯೇ ಅದು ಬಂಡವಾಳಶಾಹಿ ಅಮೆರಿಕದ ಮಡಿಲಲ್ಲಿ ಆಸರೆ ಪಡೆಯಿತು. ವಸಾಹತು ಯುಗದಿಂದ ಆಗ ತಾನೇ ಹೊರಬಂದಿದ್ದ ಅರಬ್ ಜಗತ್ತು ಆಗ ಭಾರೀ ಗೊಂದಲದಲ್ಲಿತ್ತು. ಎಲ್ಲೂ ಭವಿಷ್ಯದ ಕುರಿತು ವೈಚಾರಿಕ ಸ್ಪಷ್ಟತೆಇರಲಿಲ್ಲ. ಎಷ್ಟೋ ಕಡೆ ಹೊಸದಾಗಿ ಜನಪ್ರಿಯರಾಗಿದ್ದ ಅರಬ್ ಯುವ ನಾಯಕರು, ವೈಚಾರಿಕ ಬಿಕ್ಕಟ್ಟಿಗೆ ತುತ್ತಾಗಿದ್ದರು. ಇಸ್ಲಾಮೀ ವಿಚಾರಧಾರೆಯ ಪ್ರಭಾವ ತುಂಬಾ ಸೀಮಿತವಾಗಿತ್ತು. ಎಡವಿರಲಿ, ಬಲವಿರಲಿ ಸಂಸ್ಕೃತಿ ಮತ್ತು ವಿಚಾರಧಾರೆ ಪಶ್ಚಿಮದಿಂದಲೇ ಬರಬೇಕಿತ್ತು. ಆಧುನಿಕತೆ, ಸಮಾಜವಾದ ಮತ್ತು ಅರಬ್ ರಾಷ್ಟ್ರೀಯವಾದದ ಒಂದು ಮಿಶ್ರಣ ರಚಿಸಿಕೊಂಡು ತಮ್ಮ ಗೊಂದಲವನ್ನು ಹಂಚುವುದರಲ್ಲಿ ನಿರತರಾಗಿದ್ದರು. ಇಂತಹ ಸನ್ನಿವೇಶದಲ್ಲಿ ಇಸ್ರೇಲ್ ನಂತಹ ಸಮರ್ಥ ಪಾಲುದಾರನ ಅಗತ್ಯ ಅಮೆರಿಕ ಮಾತ್ರವಲ್ಲ, ಆ ಭೂಭಾಗದಲ್ಲಿ ಹಿತಾಸಕ್ತಿಗಳಿರುವ ಎಲ್ಲರಿಗೂ ಇತ್ತು.
ಧರ್ಮಕ್ಕೇನಾದರೂ ಪಾತ್ರವಿತ್ತೇ?
ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕ್ರೈಸ್ತ ಮತಾನುಯಾಯಿ ಗಳಿರುವ ದೇಶ ಅಮೆರಿಕ. ಹಾಗೆಯೇ ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರು ಇರುವ ದೇಶ ಕೂಡ ಅಮೆರಿಕ. 2018-19 ರ ಸಮೀಕ್ಷೆಯೊಂದರಲ್ಲಿ ಅಮೆರಿಕದ 65ಶೇ. ವಯಸ್ಕ ನಾಗರಿಕರು ತಮ್ಮನ್ನು ಕ್ರೈಸ್ತರೆಂದು ಗುರುತಿಸಿಕೊಂಡರು. (1990 ರಲ್ಲಿ ಆ ರೀತಿ ಗುರುತಿಸಿಕೊಂಡವರ ಸಂಖ್ಯೆ 85ಶೇ.ದಷ್ಟಿತ್ತು). ಅಮೆರಿಕದಲ್ಲಿನ ಕ್ರೈಸ್ತರ ಪೈಕಿ ಎಲ್ಲ ಕೆಥೊಲಿಕ್ ಪಂಥೀಯರ ಜನಸಂಖ್ಯಾ ಪ್ರಮಾಣ 22.7ಶೇ.ದಷ್ಟಿದೆ ಮತ್ತು ಎಲ್ಲ ಬಗೆಯ ಪ್ರೊಟೆಸ್ಟೆಂಟ್ ಪಂಥೀಯರ ಪ್ರಮಾಣ 48.5ಶೇ.ದಷ್ಟಿದೆ. ಪ್ರೊಟೆಸ್ಟೆಂಟ್‌ಗಳಲ್ಲೂ ಇವಾಂಜೆಲಿಕಲ್ ಕ್ರಿಶ್ಚಿಯನ್ ಎಂಬ ಪಂಗಡ ದವರು ಅತ್ಯಧಿಕ ಬಲಿಷ್ಠರಾಗಿದ್ದು Pew ಸಂಶೋಧನಾ ಕೇಂದ್ರದವರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಇವಾಂಜೆಲಿಕಲ್ ಕ್ರೈಸ್ತರ ಪ್ರಮಾಣ 25.4ಶೇ.ದಷ್ಟಿದೆ.
ಝಿಯೊನಿಝಮ್ ಎಂಬುದು ಮೂಲತಃ ಒಂದು ಯಹೂದಿ ಆಂದೋಲನವಾಗಿದ್ದರೂ, ಇವಾಂಜೆಲಿಕಲ್ ಕ್ರೈಸ್ತರ ನಡುವೆ ಝಿಯೋನಿಝಮ್‌ನ ಪ್ರತಿಪಾದಕರು ಯಾವಾಗಲೂ ಗಣ್ಯ ಸಂಖ್ಯೆಯಲ್ಲಿ ಕಂಡು ಬಂದಿದ್ದು ಅವರನ್ನು ಕ್ರಿಶ್ಚಿಯನ್ ಝಿಯೋನಿಸ್ಟ್ ಗಳೆಂದು ಕರೆಯಲಾಗುತ್ತದೆ. ಕಳೆದ ಹಲವು ದಶಕಗಳಲ್ಲಿ ವಿವಿಧ ಅಮೆರಿಕನ್ ಸರಕಾರಗಳು ಇಸ್ರೇಲ್ ಕುರಿತಂತೆ ತಾಳುತ್ತ ಬಂದಿರುವ ‘ನಿಶ್ಶರ್ತ ಬೆಂಬಲ’ದ ನಿಲುವಿಗೆ ಪ್ರಸ್ತುತ ಇವಾಂಜೆಲಿಕಲ್ ಕ್ರೈಸ್ತ ಪಂಥ ಮತ್ತು ಅದರೊಳಗಿನ ಝಿಯೋನಿಸ್ಟ್ ಪಂಗಡದವರ ಒತ್ತಡವೇ ಕಾರಣ ಎಂಬುದು ಇತ್ತೀಚೆಗೆ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಕ್ರೈಸ್ತರಲ್ಲಿ ವಿವಿಧ ಪಂಥಗಳ ನಂಬಿಕೆಗಳು ಭಿನ್ನವಾಗಿರುತ್ತವೆ. ಏಸು ಜಗತ್ತಿಗೆ ಮರಳಿ ಬಂದು ಈ ಭೂಮಿಯ ಮೇಲೆ ಸರ್ವ ಸುಭಿಕ್ಷ ದೇವರ ಸಾಮ್ರಾಜ್ಯವನ್ನು ಸ್ಥಾಪಿಸುವರೆಂಬ ನಂಬಿಕೆ ಹೆಚ್ಚಿನೆಲ್ಲ ಕ್ರೈಸ್ತರಲ್ಲಿದೆ. ಇವಾಂಜೆಲಿಕಲ್ ಕ್ರೈಸ್ತರ ಒಂದು ದೊಡ್ಡ ವರ್ಗದಲ್ಲಿ ‘ಡಿಸ್ಪೆನ್ಸೇಶನಲ್ ಪ್ರಿ ಮಿಲ್ಲೇನಿಯಲಿಝಮ್’ (dispensational pre-millennialism) ಎಂಬೊಂದು ನಂಬಿಕೆ ಇದೆ. ಈ ನಿರ್ದಿಷ್ಟ ನಂಬಿಕೆಯ ಪ್ರಕಾರ ಮೊದಲನೆಯ ಬಾರಿ ಏಸು ಭೂಮಿಗೆ ಬಂದಾಗ ಯಹೂದಿಗಳು ಅವರನ್ನು ತಿರಸ್ಕರಿಸಿದ್ದರು. ಆಗ ಏಸು ಅವರನ್ನು ಕೈಬಿಟ್ಟು ತನ್ನ ಗುರಿಸಾಧನೆಗಾಗಿ ಚರ್ಚನ್ನು ಅವಲಂಬಿಸಿದನು. ಹೀಗೆ ಚರ್ಚ್ ಯುಗ ಆರಂಭವಾದ ಬಳಿಕವೂ ಯಹೂದಿಗಳು ದೇವರಿಗೆ ಪ್ರೀತಿ ಪಾತ್ರರಾಗಿಯೇ ಇದ್ದರು. ಲೋಕಾಂತ್ಯಕ್ಕೆ ತುಂಬಾ ಮುನ್ನವೇ ಅವರು ಧಾರ್ಮಿಕ ಪುನರ್ಜನ್ಮ ಪಡೆಯಲಿದ್ದಾರೆ. ಅವರೆಲ್ಲಾ ಜೆರುಸಲೇಮ್ ನಲ್ಲಿ ಒಟ್ಟುಸೇರಿ ತಮ್ಮ ಆರಾಧನಾಲಯವನ್ನು ನಿರ್ಮಿಸಲಿದ್ದಾರೆ. ಆ ಬಳಿಕ ಹಲವು ಘಟನೆಗಳ ದೀರ್ಘ ಸರಮಾಲೆಯೊಂದು ನಡೆದು ಕೊನೆಗೆ ಮಾನವಕುಲದ ಕೊನೆಯ ಸಮರವಾದ ಅಂತಿಮ ಮಹಾ ಸಮರ ನಡೆಯಲಿದೆ. ಅದು ಮುಗಿಯುವಾಗ ಯಹೂದಿಗಳೆಲ್ಲಾ ಏಸುವನ್ನು ತಮ್ಮ ವಿಮೋಚಕನಾಗಿ ಅಂಗೀಕರಿಸುವರು. ಇಷ್ಟಾದ ಬಳಿಕ ಏಸು, ತನ್ನ ಪೂರ್ಣ ವೈಭವದೊಂದಿಗೆ ಮರಳಿ ಬಂದು ದೇವರ ಸಾಮ್ರಾಜ್ಯವನ್ನು ಸ್ಥಾಪಿಸುವನು. ಅದು ಒಂದು ಸಾವಿರ ವರ್ಷದ ಪ್ರಶಾಂತ ಆಡಳಿತವಾಗಿರುವುದು.
ಹೀಗೆ ಕ್ರೈಸ್ತರ ಈ ವಿಭಾಗವು ಯಹೂದಿಗಳ ಮೇಲಿನ ಪ್ರೀತಿಯಿಂದಲ್ಲವಾದರೂ, ಏಸು ಬರುತ್ತಾನೆ ಮತ್ತು ಅದಕ್ಕೆ ಪೂರ್ವಭಾವಿಯಾಗಿ ನಡೆಯಬೇಕಾದ ಎಲ್ಲ ಘಟನೆಗಳಿಗೆ ದಾರಿ ಸುಗಮಗೊಳಿಸಿಕೊಡುವುದು ತಮ್ಮ ಕರ್ತವ್ಯ ಎಂಬ ಮುಗ್ಧ ನಂಬಿಕೆಯಿಂದ, ಇಸ್ರೇಲ್‌ನ ನಿರ್ಮಾಣ, ಜೆರುಸಲೇಮ್ ಮೇಲೆ ಯಹೂದಿ ಆಕ್ರಮಣ, ಅಲ್ಲಿಯ ನಿವಾಸಿಗಳ ನಿರ್ಮೂಲನ - ಹೀಗೆ ಎಲ್ಲವನ್ನೂ ಉತ್ಸಾಹದಿಂದ ಬೆಂಬಲಿಸುತ್ತಾ ಬಂದಿದೆ. ಈ ವರೆಗಿನ ಎಲ್ಲ ಅಮೆರಿಕನ್ ಸರಕಾರಗಳು ಇಸ್ರೇಲ್ ವಿಷಯದಲ್ಲಿ ತಾಳುತ್ತಾ ಬಂದಿರುವ ಕಣ್ಣು ಮುಚ್ಚಿ ಇಸ್ರೇಲ್ ಅನ್ನು ಬೆಂಬಲಿಸುವ ಧೋರಣೆಗೆ ಈ ಪ್ರಬಲ ಪಂಗಡದ ಒತ್ತಡವೇ ಕಾರಣ ಎಂಬುದನ್ನು ಹೆಚ್ಚಿನ ವೀಕ್ಷಕರು ಒಪ್ಪುತ್ತಾರೆ. ಕಳೆದ ಬಾರಿ ಅಮೆರಿಕವನ್ನು ಆಳುತ್ತಿದ್ದ ಟ್ರಂಪ್ ಮತ್ತವರ ರಿಪಬ್ಲಿಕನ್ ಪಕ್ಷಕ್ಕೆ ಪ್ರಸ್ತುತ ಇವಾಂಜೆಲಿಕಲ್ ಕ್ರೈಸ್ತರು ಭಾರೀ ಬೆಂಬಲ ನೀಡಿದ್ದರು. ಒಂದು ಸಮೀಕ್ಷೆಯ ಪ್ರಕಾರ ಈ ಸಮುದಾಯದ 81ಶೇ. ಶ್ವೇತ ಮತದಾರರು ಟ್ರಂಪ್ ಪರ ಮತಚಲಾಯಿಸಿದ್ದರು.
ಅಡ್ವೊಕೆಸಿ ಜಾಲಗಳ ಪ್ರಭಾವ
ದೂರಗಾಮಿ ಯಹೂದಿ ಹಿತಾಸಕ್ತಿಗಳಿಗಾಗಿ, ಯೋಜಿತವಾಗಿ ಹೋರಾಡಲು ಬದ್ಧವಾಗಿದ್ದ ಅನೇಕ ಯಹೂದಿ ಸಂಘಟನೆಗಳು ಅಮೆರಿಕ ಮತ್ತು ಯೂರೋಪಿನ ವಿವಿಧೆಡೆ ಬಹುಕಾಲದಿಂದ ಸಕ್ರಿಯವಾಗಿದ್ದವು. ಆಪೈಕಿ ಕೆಲವು ಗುಪ್ತ ಹಾಗೂ ಅನಾಮಿಕ ಸಂಘಟನೆಗಳಾಗಿದ್ದವು. ಅಮೆರಿಕದಲ್ಲಿ 1897ರಲ್ಲಿ ಅಧಿಕೃತವಾಗಿ ಝಿಯೋನಿಸ್ಟ್ ಸಂಘಟನೆ ಆರಂಭವಾದಾಗಿನಿಂದ ಅಲ್ಲಿ ಝಿಯೋನಿಸ್ಟ್ ಲಾಬಿಯ ಅಡ್ವೊಕೆಸಿ ಚಟುವಟಿಕೆಗಳು ಹೆಚ್ಚು ಸಂಘಟಿತವಾಗಿ ನಡೆಯಲಾರಂಭಿಸಿದವು. ಅಮೆರಿಕದಲ್ಲಿ ಯಹೂದಿಗಳ ಜನಸಂಖ್ಯೆ ಕೇವಲ 2.4ಶೇ.ದಷ್ಟಿದ್ದರೂ ಅಲ್ಲಿ ಅವರು, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯರಂಗದಲ್ಲಿ ಯಾರೂ ಕಡೆಗಣಿಸಲು ಸಾಧ್ಯವೇ ಇಲ್ಲದಷ್ಟು ಬಲಿಷ್ಠರಾಗಿದ್ದಾರೆ. ಸಮಾಜದ ಪ್ರಭಾವಶಾಲಿ ನಾಯಕರು, ಮಾಧ್ಯಮಗಳು, ಪಕ್ಷ, ಸಂಘಟನೆ, ಆಂದೋಲನಗಳು, ಉದ್ಯಮಿಗಳು ಇವರೆಲ್ಲರ ಜೊತೆ ಸದಾ ಸಂಪರ್ಕದಲ್ಲಿದ್ದು, ಝಿಯೋನಿಸ್ಟ್ ಅಜೆಂಡಾದ ಪರ ಅಭಿಪ್ರಾಯ ರೂಪಿಸುವುದು, ಪಕ್ಷಗಳ ನಿಲುವು ಹಾಗೂ ಸರಕಾರಗಳ ಧೋರಣೆಗಳನ್ನು ಇಸ್ರೇಲ್ ಮತ್ತು ಝಿಯೋನಿಸ್ಟ್ ಹಿತಾಸಕ್ತಿಗನುಸಾರ ಬಾಗಿಸುವುದು - ಇವೇ ಮುಂತಾದ ಕೆಲಸಗಳನ್ನು ಇವರ ಅಡ್ವೊಕೆಸಿ ಗುಂಪುಗಳು ಒಂದು ಶತಮಾನಕ್ಕೂ ಹೆಚ್ಚುಕಾಲ ಬಹಳ ಪರಿಣಾಮಕಾರಿಯಾಗಿ ಮಾಡಿದವು. ಅವರು ಈ ವಿಧಾನದ ಮೂಲಕ ಎಷ್ಟು ಮೌನವಾಗಿ ಹಾಗೂ ಎಷ್ಟು ಸಮರ್ಥವಾಗಿ ತಮ್ಮ ಗುರಿಗಳನ್ನು ಸಾಧಿಸಿದರೆಂದರೆ, ಅವರ ಕಾರ್ಯ ವೈಖರಿ, ತಂತ್ರಗಾರಿಕೆಗಳೆಲ್ಲಾ ಎಲ್ಲೆಡೆ ಕುತೂಹಲ ಕೆರಳಿಸಿದ್ದಲ್ಲದೆ ವ್ಯಾಪಕ ಮೆಚ್ಚುಗೆಯನ್ನೂ ಪಡೆದವು. ಅವರ ಎಷ್ಟೋ ಸಾಧನೆಗಳು, ಅವು ಸಾಧಿತವಾದ ಎಷ್ಟೋ ದಶಕಗಳ ಬಳಿಕ ಬೆಳಕಿಗೆ ಬಂದು, ಕಥಾವಸ್ತುಗಳಾಗಿ ಬಿಟ್ಟವು. ಇಂದು ಕೂಡಾ ಝಿಯೋನಿಸ್ಟ್ ಮತ್ತು ಇಸ್ರೇಲಿ ಅಡ್ವೊಕೆಸಿ ಸಂಸ್ಥೆಗಳು ಅಮೆರಿಕದಲ್ಲಿ ವಿವಿಧ ಪಕ್ಷ, ಸರಕಾರ ಮತ್ತು ನಾಯಕರನ್ನು ತಮ್ಮ ಇಚ್ಛಾನುಸಾರ ಕುಣಿಸುವಷ್ಟು ಶಕ್ತಿಶಾಲಿಯಾಗಿವೆ. ಈ ಗುಂಪುಗಳನ್ನು ಮನಸಾರೆ ದ್ವೇಷಿಸುವವರು ಕೂಡ ಯಾವುದೇ ವಿಷಯದಲ್ಲಿ ಇವರಿಗೆ ಇಷ್ಟವಿಲ್ಲದ ಅಥವಾ ಇವರ ವಿರುದ್ಧ ನಿಲುವು ತಾಳಲು ಧೈರ್ಯ ಪಡುವುದಿಲ್ಲ. ಅಮೆರಿಕದ ಮೇಲೆ ನೇರವಾಗಿ ಪ್ರಭಾವ ಬೀರುವ ಮೂಲಕ ಈ ಲಾಬಿ ಜಗತ್ತಿನ ಹತ್ತಾರು ಪ್ರಮುಖ ದೇಶಗಳ ಮೇಲೆ ಪರೋಕ್ಷ ಪ್ರಭಾವ ಬೀರಿತು. ಸಾಲದ್ದಕ್ಕೆ ಪೂರ್ವ ಮತ್ತು ಪಶ್ಚಿಮದ ಹೆಚ್ಚಿನೆಲ್ಲಾ ದೇಶಗಳಲ್ಲಿ ತನ್ನ ಸಮರ್ಥ ಜಾಲವನ್ನು ಯಶಸ್ವಿಯಾಗಿ ಸ್ಥಾಪಿಸಿತು. ಅಮೆರಿಕದಲ್ಲಿನ ಇಸ್ರೇಲಿ ಮತ್ತು ಝಿಯೋನಿಸ್ಟ್ ಲಾಬಿಯ ತಜ್ಞರ ಪ್ರಕಾರ, ಈ ಲಾಬಿಯವರು ಪ್ರತಿಭಾವಂತ ಹಾಗೂ ಪ್ರಭಾವಶಾಲಿ ನಾಯಕರನ್ನು ಅವರ ತಾರುಣ್ಯದ ದಿನಗಳಿಂದಲೇ ಸೂಕ್ಷ್ಮವಾಗಿ ವೀಕ್ಷಿಸುತ್ತಾ ಅವರ ಕುರಿತಾದ ದಾಖಲೆ ನಿರ್ಮಿಸುತ್ತಾ ಬಂದಿರುತ್ತಾರೆ. ಇಸ್ರೇಲ್‌ನ ಹಿತಾಸಕ್ತಿಗಳಿಗೆ ವಿರುದ್ಧವಾದ ನಿಲುವು ತಾಳುವ ನಾಯಕರನ್ನು ಗುರುತಿಸಿ, ಅವರನ್ನು ಹಗರಣಗಳಲ್ಲಿ ಸಿಲುಕಿಸುವ ಅಥವಾ ಅವರ ಕೊರಳಿಗೆ ‘ಆಂಟಿ ಸೆಮೆಟಿಕ್’ ಎಂಬ ಕೊಳಕು ಪಟ್ಟಿ ಕಟ್ಟುವ ಮೂಲಕ ಅವರನ್ನು ಶಾಶ್ವತ ಅಸ್ಪಶ್ಯರಾಗಿಸಿ ಬಿಡುತ್ತಾರೆ.
ಅಮೆರಿಕದಲ್ಲಿ ಇಸ್ರೇಲಿ ಲಾಬಿ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸೂಚಿಸುವ ಸಹಸ್ರಾರು ಜೋಕುಗಳು ಜನಪ್ರಿಯವಾಗಿವೆ. ಇತ್ತೀಚೆಗೆ ಟ್ರಂಪ್ ವಿರೋಧಿ ಪತ್ರಕರ್ತನೊಬ್ಬ ಹಂಚಿಕೊಂಡ ಒಂದು ತಾಜಾ ಜೋಕ್ ಇಲ್ಲಿದೆ:
ಜೋ ಬೈಡನ್, ಮೊನ್ನೆ ತಾನೇ ಒಂದು ಯುನಿವರ್ಸಿಟಿಯಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಏಸು, ಮೇರಿ, ಪವಿತ್ರಾತ್ಮ, ಬೈಬಲ್ ಇವರೆಲ್ಲರನ್ನೂ ಅವಾಚ್ಯ ಪದಗಳಿಂದ ಬಯ್ದಿದ್ದರು ಎಂದು ನೀವು ನಾಳೆ ಸಾಬೀತು ಪಡಿಸಿದರೆ ಅದರಿಂದ ಜೋ ಬೈಡನ್‌ರಿಗೆ ಯಾವ ನಷ್ಟವೂ ಆಗುವುದಿಲ್ಲ. ಹಾಗೆಯೇ ನೀವು, ಅವರು 20 ವರ್ಷಗಳ ಹಿಂದೆ ಕೊಲೆ ಮತ್ತು ಅತ್ಯಾಚಾರದ ಆರೋಪವೊಂದರಲ್ಲಿ ಸಿಕ್ಕಿ ಬಿದ್ದು ಜೈಲುವಾಸ ಅನುಭವಿಸಿದ್ದರೆಂದು ಸಾಬೀತು ಪಡಿಸಿದರೂ ಅವರ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಆದರೆ ನೀವೆಲ್ಲಾದರೋ, ಅವರು ಹೈಸ್ಕೂಲ್ ನಲ್ಲಿದ್ದಾಗ, ಹೋಲೊ ಕಾಸ್ಟ್ ಅನ್ನು ನಿರಾಕರಿಸಿದ್ದರು, ಇಸ್ರೇಲ್ ಸರಕಾರದ ಧೋರಣೆಯನ್ನು ‘ಅಪಾರ್ಥಿಡ್’ (apartheid) ನೀತಿಗೆ ಹೋಲಿಸಿದ್ದರು ಅಥವಾ ಇಸ್ರೇಲ್ ವಿರುದ್ಧ ದಿಗ್ಬಂಧನ ಹೇರುವ ಕುರಿತು ಮಾತನಾಡಿದ್ದರು ಎಂದು ಆರೋಪಿಸಿದರೆ ಸಾಕು. ಬೈಡನ್ ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಪಕ್ಷವು ಮುಂದಿನ ಕನಿಷ್ಠ ಐದು ಮಹಾ ಚುನಾವಣೆಗಳಲ್ಲಿ ಹೀನಾಯ ಸೋಲುಣ್ಣಬೇಕಾಗುತ್ತದೆ.
ಇಸ್ರೇಲಿ ಲಾಬಿ ಇಷ್ಟು ಶಕ್ತಿಶಾಲಿಯಾಗಿದ್ದರೆ ಮತ್ತು ನಿಜಕ್ಕೂ ರಾಜಕಾರಣಿಗಳು ಅದಕ್ಕೆ ಇಷ್ಟು ಅಂಜುತ್ತಾರೆಂದಾದರೆ ಇಸ್ರೇಲ್ ಕುರಿತು ಅಮೆರಿಕದ ಎಲ್ಲ ಧೋರಣೆ ಮತ್ತು ನಿರ್ಧಾರಗಳು ಪ್ರಸ್ತುತ ಲಾಬಿಯಿಂದಲೇ ನಿರ್ದೇಶಿತವಾಗಿರುತ್ತವೆ ಎಂಬ ಬಗ್ಗೆ ಸಂಶಯಕ್ಕೆ ಎಡೆಯೇ ಎಲ್ಲಿದೆ?.