ಯುಎಪಿಎ ಮತ್ತು ಎನ್‌ಐಎ: ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾಪದ ಪಾಲೆಷ್ಟು?

Update: 2021-07-20 19:30 GMT

ಹೊಸ ಕಾಯ್ದೆ ತಾವು 2002ರಲ್ಲಿ ಜಾರಿಗೆ ತಂದ POTA ಕಾಯ್ದೆಯ ನಕಲಾಗಿದೆಯೆಂದೂ ಹಾಗೂ ಅದನ್ನು ರದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕೆಂದೂ ಬಿಜೆಪಿ ಪಟ್ಟು ಹಿಡಿಯಿತು. ಬಿಜೆಪಿಯ ಈ ದ್ವೇಷಭಕ್ತಿಯ ಟ್ರಾಪಿಗೆ ಬಿದ್ದ ಕಾಂಗ್ರೆಸ್ ತಾನು ಬಿಜೆಪಿಗಿಂತ ದೊಡ್ಡ ದೇಶಭಕ್ತ ಎಂದು ತೋರಿಸಿಕೊಳ್ಳಲು ಹೇಗೆ ತಮ್ಮ ಕಾಯ್ದೆ ಅಗಿಂತಲೂ ಭೀಕರವಾಗಿದೆ ಎಂದು ಸಮರ್ಥಿಸಿಕೊಂಡಿತು!!


ಭಾಗ-2

ದೇಶಭದ್ರತೆಯ ಹೆಸರಲ್ಲಿ ರಾಜ್ಯಗಳ ಪರಮಾಧಿಕಾರವನ್ನು ಉಲ್ಲಂಘಿಸುವ ಎನ್‌ಐಎ
ಇದೇ ಸಂದರ್ಭವನ್ನು ಬಳಸಿಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಒಂದು ಹೊಸ ಎನ್‌ಐಎ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ ಕಾನೂನನ್ನು ಮಾಡಿತು. ನಮ್ಮ ದೇಶದ ಸಂವಿಧಾನದ ಏಳನೇ ಶೆಡ್ಯೂಲಿನ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರಕಾರಗಳ ಜವಾಬ್ದಾರಿ ಮತ್ತು ಅಧಿಕಾರ. ಒಂದು ವೇಳೆ ಕೇಂದ್ರ ತನಿಖಾ ದಳಗಳು ರಾಜ್ಯದಲ್ಲಿ ತನಿಖೆಯನ್ನು ಮಾಡಬೇಕೆಂದರೂ ರಾಜ್ಯ ಸರಕಾರಕ್ಕೆ ತಿಳಿಸಿ ಅದರ ಅನುಮತಿಯನ್ನು ಪಡೆದು ಮಾಡಬೇಕು.

ಆದರೆ ಈ ಹೊಸ ಎನ್‌ಐಎ ಕಾಯ್ದೆಯ ಪ್ರಕಾರ ಕಾಯ್ದೆಯ ಶೆಡ್ಯೂಲಿನಲ್ಲಿ ಕೇಂದ್ರ ಸರಕಾರ ನಿಗದಿ ಪಡಿಸಿರುವ ಅಪರಾಧಗಳು ದೇಶದಲ್ಲಿ ಎಲ್ಲೇ ಸಂಭವಿಸಿದರೂ ಕೇಂದ್ರ ಸರಕಾರದ ಆದೇಶದ ಮೇರೆಗೆ ಎನ್‌ಐಎ ರಾಜ್ಯಗಳ ಅನುಮತಿಯನ್ನು ಕೇಳದೆ ನೇರವಾಗಿ ಆ ಪ್ರಕರಣಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು ಹಾಗೂ ಅಂತಹ ತನಿಖೆಗೆ ರಾಜ್ಯ ಸರಕಾರಗಳ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ ಹಾಗೂ ಯಾವುದೇ ಆಸ್ತಿಪಾಸ್ತಿಗಳ ಜಪ್ತ್ತಿ ಇತ್ಯಾದಿಗಳನ್ನು ಮಾಡಬಹುದು. ಜೊತೆಗೆ ಈ ಪ್ರಕರಣಗಳ ವಿಚಾರಣೆಗಳು ಕೇಂದ್ರ ಸರಕಾರ ಸೂಚಿಸುವ ವಿಶೇಷ ಎನ್‌ಐಎ ನ್ಯಾಯಾಲಯಗಳಲ್ಲೇ ನಡೆಯಬೇಕು. ಅರ್ಥಾತ್ ಈ ವಿಷಯಗಳಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ತನ್ನ ಸ್ವಾಯತ್ತತೆಯನ್ನೇ ಕಳೆದುಕೊಳ್ಳುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದ್ದ ಭೀಮಾ ಕೋರೆಗಾಂವ್ ಪ್ರಕರಣ. 2018ರ ಜೂನ್‌ನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿತ್ತು. ಆ ಸರಕಾರ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಮೋದಿ ಕೊಲೆ ಸಂಚೆಂಬ ತಿರುವನ್ನು ನೀಡಿ ದೇಶಾದ್ಯಂತ ಮೋದಿ ಸರಕಾರದ ವಿರೋಧಿಗಳನ್ನೆಲ್ಲಾ ಯುಎಪಿಎ ಅಡಿ ಬಂಧಿಸಿತು. ಆದರೆ ತನಿಖೆಯನ್ನು ರಾಜ್ಯ ಪೊಲೀಸರೇ ನಡೆಸುತ್ತಿದ್ದರು. ಏಕೆಂದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇತ್ತು.

ಆದರೆ 2019ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಶಾಸನ ಸಭಾ ಚುನಾವಣೆಯ ನಂತರ ಅಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನಾ ಸರಕಾರ ಅಧಿಕಾರಕ್ಕೆ ಬಂತು ಹಾಗೂ ಆ ಸರಕಾರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಿಂದಿನ ಬಿಜೆಪಿ ಸರಕಾರ ರಾಜಕೀಯ ಸಂಚನ್ನು ಮಾಡಿ ಮಾನವ ಹಕ್ಕು ಕಾರ್ಯಕರ್ತರನ್ನು ಸಿಲುಕಿಸಿರುವ ಬಗ್ಗೆ ವಿಶೇಷ ತನಿಖೆಯನ್ನು ನಡೆಸುವ ಸಿದ್ಧತೆಯನ್ನು ನಡೆಸಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಕೇಂದ್ರ ಸರಕಾರ ಎನ್‌ಐಎ ಕಾಯ್ದೆ ಕೊಡುವ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರಕಾರಕ್ಕೆ ಯಾವ ಸೂಚನೆಯನ್ನೂ ಕೊಡದೆ ಇಡೀ ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಆ ನಂತರ ಶಿವಸೇನಾ ಮುಖ್ಯಮಂತ್ರಿ ಅದಕ್ಕೆ ಒಪ್ಪಿಗೆ ಸೂಚಿಸಿದ್ದು ಬೇರೆ ವಿಷಯ. ಇಂತಹ ಫೆೆಡರಲ್ ವಿರೋಧಿ ಹತಾರವನ್ನು 2008ರ ತಿದ್ದುಪಡಿಯ ಮೂಲಕ ಹರಿತ ಮಾಡಿಕೊಟ್ಟದ್ದು ಮಾತ್ರ ಕಾಂಗ್ರೆಸ್ ಸರಕಾರವೇ. ಎರಡೂ ಮಸೂದೆಗಳ ಬಗ್ಗೆ 2008ರ ಡಿಸೆಂಬರ್‌ನಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಗಳಲ್ಲಿ ತಲಾ ಒಂದೊಂದು ದಿನಗಳ ಚರ್ಚೆ ಮಾತ್ರ ನಡೆಯಿತು. ಬಿಜೆಪಿಯು ಭಯೋತ್ಪಾದನೆಯನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂಬ ವಿಷಯವನ್ನು ರಾಜಕೀಯ ಪ್ರಚಾರ ಮಾಡಿಕೊಳ್ಳಲು ಸಂಸತ್ತಿನ ವೇದಿಕೆಯನ್ನು ಬಳಸಿಕೊಂಡಿತು. ಹೇಗೆ ಹೊಸ ಕಾಯ್ದೆ ತಾವು 2002ರಲ್ಲಿ ಜಾರಿಗೆ ತಂದ POTA ಕಾಯ್ದೆಯ ನಕಲಾಗಿದೆಯೆಂದೂ ಹಾಗೂ ಅದನ್ನು ರದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಯಾಚಿಸಬೇಕೆಂದೂ ಪಟ್ಟು ಹಿಡಿಯಿತು. ಬಿಜೆಪಿಯ ಈ ದ್ವೇಷಭಕ್ತಿಯ ಟ್ರಾಪಿಗೆ ಬಿದ್ದ ಕಾಂಗ್ರೆಸ್ ತಾನು ಬಿಜೆಪಿಗಿಂತ ದೊಡ್ಡ ದೇಶಭಕ್ತ ಎಂದು ತೋರಿಸಿಕೊಳ್ಳಲು ಹೇಗೆ ತಮ್ಮ ಕಾಯ್ದೆ POTAಗಿಂತಲೂ ಭೀಕರವಾಗಿದೆ ಎಂದು ಸಮರ್ಥಿಸಿಕೊಂಡಿತು!!

ಎಡಪಕ್ಷಗಳು, ಆರ್‌ಜೆಡಿ ಹಾಗೂ ಇತರ ಪಕ್ಷಗಳು ಕಾಯ್ದೆಯನ್ನು ತರಾತುರಿಯಲ್ಲಿ ಜಾರಿ ಮಾಡಬಾರದೆಂದು ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದೂ ಆಗ್ರಹಿಸಿದವು. ಆದರೆ, ವಿಪರ್ಯಾಸವೆಂದರೆ ಕಾಯ್ದೆಯಲ್ಲಿನ ಕೆಲವು ಅಂಶಗಳ ಬಗ್ಗೆ ವೋಟಿಂಗ್ ನಡೆದಾಗ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳು ಪೂರ್ಣಪ್ರಮಾಣದಲ್ಲಿ ಹಾಜರೂ ಇರಲಿಲ್ಲ. ಉದಾಹರಣೆಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ 180 ದಿನಗಳ ಅವಕಾಶ ಕೊಡಕೂಡದು ಎಂಬ ಪ್ರಸ್ತಾವದ ಪರವಾಗಿ ಕೇವಲ 27 ಓಟುಗಳು ಬಿದ್ದವು. ಆಗ ಸಂಸತ್ತಿನಲ್ಲಿ ಎಡಪಕ್ಷಗಳ ಸಂಖ್ಯಾಬಲವೇ 59 ಇತ್ತು!

ಅಷ್ಟು ಮಾತ್ರವಲ್ಲ. ಎಡಪಕ್ಷಗಳ ಸದಸ್ಯರು ರಾಜ್ಯಗಳು ಭಯೋತ್ಪಾದನೆಯನ್ನು ಎದುರಿಸಲು ಅಷ್ಟು ಶಕ್ತವಾಗಿಲ್ಲವಾದ್ದರಿಂದ ಎನ್‌ಐಎ ರಚನೆಯನ್ನು ಹಾಗೂ ಒಟ್ಟಾರೆ ಕಾಯ್ದೆಯನ್ನು ತಾವು ವಿರೋಧಿಸುತ್ತಿಲ್ಲವೆಂದೂ ವಿವರಿಸಿಕೊಂಡರು! ಆರ್‌ಜೆಡಿ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಫೆಡರಲ್ ಸ್ವರೂಪಕ್ಕಾಗಬಹುದಾದ ಧಕ್ಕೆಗಳ ಬಗ್ಗೆ ಮಾತ್ರ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿದವು. ಒಟ್ಟಿನಲ್ಲಿ ಈ ಸಾಂಕೇತಿಕ ಭಿನ್ನಮತಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಗತ್ತಿನಲ್ಲೇ ಅತ್ಯಂತ ಕರಾಳವಾದ ಕಾಯ್ದೆಯನ್ನು ಜಾರಿ ಮಾಡಿತು. ಆಸಕ್ತರು ಇದರ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆಯನ್ನು ಈ ವಿಳಾಸದಲ್ಲಿ ಓದಬಹುದು:https://eparlib.nic.in/bitstream/123456789/ 722419/1/10813.pdf

2012ರಲ್ಲಿ ಈ ಕಾಯ್ದೆಗೆ ಮತ್ತೊಂದು ತಿದ್ದುಪಡಿಯನ್ನು ಜಾರಿ ಮಾಡಿ ಆರ್ಥಿಕ ಭದ್ರತೆಗಳಿಗೆ ಅಪಾಯ ಉಂಟು ಮಾಡುವ ಕಂಪೆನಿಗಳನ್ನು, ಸಂಸ್ಥೆಗಳನ್ನೂ ಹಾಗೂ ಕ್ರಿಯೆಗಳನ್ನೂ ಟೆರರಿಸಂ ಎಂದು ಘೋಷಿಸಲಾಯಿತು. ಆಗಲೂ ಬಿಜೆಪಿ ಸಂಭ್ರಮಿಸಿದರೆ ಎಡವನ್ನೂ ಒಳಗೊಂಡಂತೆ ಉಳಿದ ವಿರೋಧ ಪಕ್ಷಗಳ ವಿರೋಧಗಳು ಸಾಂಕೇತಿಕಕ್ಕೆ ಸೀಮಿತವಾಯಿತು.

ಹಿಂದುತ್ವ ಟೆರರಿಸಂ ಮತ್ತು ಯುಎಪಿಎ

ಇಷ್ಟೆಲ್ಲಾ ಆದರೂ ಯುಪಿಎ ಸರಕಾರದ ಬಗ್ಗೆ ಹೇಳಬಹುದಾದ ಒಂದು ಮಾತೆಂದರೆ ಆ ಸರಕಾರ ಈ ಕಾಯ್ದೆಯನ್ನು ಅಮಾಯಕ ಆದಿವಾಸಿಗಳು ಹಾಗೂ ದಲಿತರ ಮೇಲೆ ಬಳಸಿದಷ್ಟು ಅಲ್ಪಸಂಖ್ಯಾತರ ಮೇಲೆ ಬಳಸಲಿಲ್ಲ ಹಾಗೂ ಹಿಂದುತ್ವವಾದಿ ಭಯೋತ್ಪಾದಕರನ್ನು ಬಂಧಿಸಲೂ ಈ ಅವಧಿಯಲ್ಲಿ ಈ ಕಾಯ್ದೆಯನ್ನು ಬಳಸಿದರು. ಆದರೆ ಹಿಂದುತ್ವವಾದಿ ಭಯೋತ್ಪಾದಕರನ್ನು ಸಹ ತ್ವರಿತವಾಗಿ ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಬೇಕೇ ವಿನಾ ವಿಚಾರಣೆಯಿಲ್ಲದೆ, ಜಾಮೀನಿಲ್ಲದೆ ಅನಿರ್ದಿಷ್ಟ ಕಾಲ ವಿಚಾರಣಾಧೀನ ಬಂದಿಗಳನ್ನಾಗಿ ಉಳಿಸಿಕೊಳ್ಳಬಾರದು.

ಆದರೆ ಅಂತಹವರ ಸಂಖ್ಯೆ ತುಂಬಾ ಕಡಿಮೆ ಹಾಗೂ ಮೋದಿ ಸರಕಾರ ಬಂದ ಮೇಲೆ ಅಂತಹವರಿಗೆ ಕೋರ್ಟುಗಳು ಉದಾರವಾಗಿ ಜಾಮೀನು ನೀಡುತ್ತಿರುವುದು ಮಾತ್ರವಲ್ಲ.. ಪ್ರಜ್ಞಾ ಸಿಂಗ್ ಅಂತಹವರು ಎಂಪಿಗಳೂ ಆಗಿದ್ದಾರೆ. ಹೀಗಾಗಿ ಇಂತಹ ಕಾಯ್ದೆಗಳನ್ನು ಹಿಂದುತ್ವ ಭಯೋತ್ಪಾದನೆಯ ಆರೋಪಿಗಳ ಮೇಲೆ ಬಳಕೆಯಾಗುವುದು ಪ್ರಜಾತಂತ್ರ ವಿರೋಧಿ ಕರಾಳ ಕಾಯ್ದೆಗಳಿಗೆ ಸಮರ್ಥನೆಯಾಗಬಾರದು.

ಏಕೆಂದರೆ ಇಂತಹ ಕಾಯ್ದೆಗಳು ಯಾವಾಗಲೂ ಬಲಿತೆಗೆದುಕೊಳ್ಳುವುದು ಆದಿವಾಸಿ, ದಲಿತ, ಅಲ್ಪಸಂಖ್ಯಾತ, ರೈತ, ಕಾರ್ಮಿಕರನ್ನು ಹಾಗೂ ನೈಜ ಪ್ರಜಾತಂತ್ರವಾದಿಗಳ ಸ್ವಾತಂತ್ರ್ಯಗಳನ್ನು ಹಾಗೂ ಪ್ರಾಣಗಳನ್ನೇ..

2019ರ ಮೋದಿ ತಿದ್ದುಪಡಿಗಳು-ನಾಮಕಾವಸ್ಥೆ ವಿರೋಧವೂ ಮಾಯ!  

2019ರಲ್ಲಿ ಎರಡನೇ ಬಾರಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಯುಎಪಿಎ ಅಡಿ ಯಾವುದೇ ಟೆರರಿಸ್ಟ್ ಸಂಘಟನೆ ಅಥವಾ ಗ್ಯಾಂಗಿನ ಸದಸ್ಯನಲ್ಲದ ಬಿಡಿವ್ಯಕ್ತಿಯನ್ನು ಬಂಧಿಸುವಂತಹ ಘೋರ ತಿದ್ದುಪಡಿಯನ್ನು ತಂದಿತು ಹಾಗೂ ಎನ್‌ಐಎ ಅಡಿ ಬೇರೆ ಯಾವುದಾದರೂ ರಾಜ್ಯದಲ್ಲಿ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವಾಗ ಆ ರಾಜ್ಯದ ಡಿಜಿಪಿಗೆ ತಿಳಿಸುವ ಅಗತ್ಯವಿಲ್ಲವೆಂಬ ಅಧಿಕಾರವನ್ನು ನೀಡಿತು. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಈ ತಿದ್ದುಪಡಿಯನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ವಿರೋಧಿಸಿದರೂ ರಾಜ್ಯ ಸಭೆಯಲ್ಲಿ ಬೆಂಬಲಿಸಿತು.

ಎಡಪಕ್ಷಗಳು, ಟಿಎಂಸಿ, ಡಿಎಂಕೆ ಮತ್ತು ಆರ್‌ಜೆಡಿಗಳನ್ನು ಬಿಟ್ಟರೆ ಬಿಎಸ್ಪಿ, ಎಸ್ಪಿ, ಆಮ್ ಆದ್ಮಿಯಂತಹ ಪ್ರಾದೇಶಿಕ ಪಕ್ಷಗಳೂ ಸಹ ಇಂತಹ ಅತ್ಯಂತ ಫೆಡರಲ್ ವಿರೋಧಿ ಹಾಗೂ ಮಾನವ ಹಕ್ಕು ವಿರೋಧಿ ತಿದ್ದುಪಡಿಯನ್ನು ಬೆಂಬಲಿಸಿದವು. ಹಾಗೆ ನೋಡಿದರೆ ಯುಎಪಿಎ ಮತ್ತು ಎನ್‌ಐಎ ದುರ್ಬಳಕೆಗಳು ಬಿಜೆಪಿಯ ನೇರ ಹಾಗೂ ಪರೋಕ್ಷ ಆಡಳಿತದಲ್ಲಿರುವ ಮಣಿಪುರ, ಉತ್ತರ ಪ್ರದೇಶ, ಅಸ್ಸಾಂ ಹಾಗೂ ತಮಿಳುನಾಡುಗಳಲ್ಲಿ (2019ರ ತನಕ) ಜಾಸ್ತಿ ನಡೆದಿರುವುದು ನಿಜವಾದರೂ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತು ಛತ್ತೀಸ್‌ಗಡಗಳಲ್ಲಿ ಹಾಗೂ ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲಿ ಕೂಡಾ ಯುಎಪಿಎ ಅನ್ನು ವಿವೇಚನೆಯಿಲ್ಲದೆ ಹಾಗೂ ರಾಜಕೀಯ ಭಿನ್ನಮತೀಯರ ಮೇಲೆ ಬಳಸಿರುವ ಸಾಕಷ್ಟು ಉದಾಹರಣೆಗಳಿವೆ. ಇದು ಯುಎಪಿಎ ಮತ್ತು ಎನ್‌ಐಎಯಂತಹ ಫ್ಯಾಶಿಸ್ಟ್ ಕಾಯ್ದೆಗಳನ್ನು ವಿರೋಧಿಸುವಲ್ಲಿ ಸಂಖ್ಯಾತ್ಮಕವಾಗಿ ಮಾತ್ರವಲ್ಲದೆ ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿಯೂ ಕಾಂಗ್ರೆಸ್‌ನಂತಹ ವಿರೋಧ ಪಕ್ಷಗಳಿಗಿರುವ ದೌರ್ಬಲ್ಯ ಮತ್ತು ಹಿತಾಸಕ್ತಿಗಳ ಸಾಮಾನ್ಯ ವರ್ಗಸ್ವರೂಪ. ಬಿಜೆಪಿಗಳ ದೇಶರಕ್ಷಣೆಯೆಂಬ ಬ್ಲಾಕ್ ಮೇಲ್ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ನೆಲೆಯಲ್ಲಿ ದೇಶರಕ್ಷಣೆಯ ರಾಜಕಾರಣವನ್ನು ಮುಂದಿಡಲಾಗದ ವೈಫಲ್ಯದಲ್ಲೇ ಬಿಜೆಪಿಯ ಜಯವಿದೆ.

ಇಂದು ವಿರೋಧಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷ, ತನ್ನ ರಾಜಕೀಯ ಅಸ್ತಿತ್ವದ ಕಾರಣಕ್ಕಾಗಿಯಾದರೂ ಯುಎಪಿಎ ಮತ್ತು ಎನ್‌ಐಎ ಬಗ್ಗೆ ತನ್ನ ಧ್ವನಿ ಎತ್ತಿರುವುದು ಒಳ್ಳೆಯದೇ. ಛತ್ತೀಸ್‌ಗಡ ಸರಕಾರ ಎನ್‌ಐಎ ತಿದ್ದುಪಡಿಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಅಹವಾಲನ್ನೂ ದಾಖಲಿಸಿದೆ. ಆದರೆ ಅಷ್ಟು ಸಾಲದು. ಮತ್ತದು ನಿಜವಾದ ಪ್ರಜಾತಾಂತ್ರಿಕ ವಿರೋಧ ಎಂದು ಪರಿಗಣಿಸಲಾಗದು. ಏಕೆಂದರೆ ಕಾಂಗ್ರೆಸ್‌ನಂತಹ ಈ ಹಿಂದಿನ ಅಧಿಕಾರರೂಢ ಪಕ್ಷಗಳು ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ತಾನು ಮಾಡಿಕೊಂಡ ರಾಜಿಯ ಬಗ್ಗೆ ಮರುಮೌಲ್ಯಮಾಪನ ಮಾಡಿಕೊಳ್ಳುವ ಅಗತ್ಯವಿದೆ.

ಎಲ್ಲಾ ವಿರೋಧ ಪಕ್ಷಗಳು ಇಷ್ಟನ್ನು ಮಾಡಬಹುದೇ?: 

-ಸಿಎಎ-ಎನ್‌ಆರ್‌ಸಿ ವಿಷಯಗಳಲ್ಲಿ ಕೆಲವು ವಿರೋಧ ಪಕ್ಷಗಳ ಸರಕಾರಗಳು ತಮ್ಮಲ್ಲಿ ಅದನ್ನು ಜಾರಿ ಮಾಡುವುದಿಲ್ಲ ಎಂದು ತೀರ್ಮಾನಿಸಿದಂತೆ ಎಲ್ಲಾ ವಿರೋಧ ಪಕ್ಷಗಳ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಯುಎಪಿಎಯನ್ನೂ ಬಳಸುವುದಿಲ್ಲ ಎಂದು ಘೋಷಿಸಬಲ್ಲವೇ? -ರಾಜ್ಯ ಸರಕಾರಗಳು ನಿರಾಕರಿಸಿದರೂ, ಎನ್‌ಐಎ ಅಡಿ ಕೇಂದ್ರ ಸರಕಾರವೇ ರಾಜ್ಯಗಳಲ್ಲಿ ಯುಎಪಿಎ ಬಂಧನಗಳನ್ನು ಮಾಡಬಹುದು. ಹೀಗಾಗಿ, ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಯುಎಪಿಎ ಮತ್ತು ಎನ್‌ಐಎ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಒಟ್ಟು ಅಹವಾಲನ್ನು ಸಲ್ಲಿಸಿ ಫ್ಯಾಶಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ದೇಶರಕ್ಷಣೆಯ ಕಥನವನ್ನು ಕಟ್ಟಬಲ್ಲವೇ?
-ಯುಎಪಿಎ ಮತ್ತು ಎನ್‌ಐಎ ಅನ್ನು ರದ್ದುಗೊಳಿಸೋಣ ಮತ್ತು ಭಾರತದ ಫ್ಯಾಶೀಕರಣವನ್ನು ತಡೆಗಟ್ಟೋಣ ಎಂಬುದನ್ನು ರಾಜಕೀಯ ಘೋಷಣೆಯಾಗಿ ಅಳವಡಿಸಿಕೊಳ್ಳಬಲ್ಲವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News