‘ಗಝ್ವ ಅಲ್ ಹಿಂದ್’ ಎಂಬ ಕಾಲ್ಪನಿಕ ಪೆಡಂಭೂತ

Update: 2021-08-20 19:30 GMT

ದುರದೃಷ್ಟವಶಾತ್ ಇಂದು ಪ್ರವಾದಿಯ ಮಾತುಕೃತಿಗಳ ಕುರಿತು ಸತ್ಯಕ್ಕಿಂತ ಹೆಚ್ಚು ಸುಳ್ಳುಗಳು ಪ್ರಚಾರದಲ್ಲಿವೆ. ಆದ್ದರಿಂದ ಅವರದು ಎನ್ನಲಾಗುವ ಒಂದು ಹೇಳಿಕೆ ನಮ್ಮ ಮುಂದೆ ಬಂದೊಡನೆ, ಪ್ರಥಮವಾಗಿ ಅವರು ಆ ಮಾತನ್ನು ಹೇಳಿದ್ದಾರೆಂಬುದು ನಿಜವೇ ಎಂಬುದನ್ನು ಪರೀಕ್ಷಿಸಿ ನೋಡಬೇಕು. ಹೇಳಿದ್ದಾರೆಂಬುದೇ ಸಂಶಯಾಸ್ಪದವಾಗಿದ್ದರೆ ಮತ್ತೆ ಆ ಕುರಿತು ಹೆಚ್ಚು ಚರ್ಚೆಯ ಅಗತ್ಯವಿಲ್ಲ. ಇನ್ನು ಹೇಳಿರುವುದು ಹೌದೆಂದು ಶೇ.100 ಖಚಿತವಾದ ಮೇಲೆ, ಅವರ ಆ ಮಾತಿನ ಅರ್ಥವೇನು, ತಾತ್ಪರ್ಯವೇನು, ಅದರ ಸಾಂದರ್ಭಿಕ ಹಿನ್ನೆಲೆಯೇನು? ಅದು ಸಾರ್ವತ್ರಿಕ ಆದೇಶವೇ? ಅಥವಾ ನಿರ್ದಿಷ್ಟ ಸನ್ನಿವೇಶಕ್ಕೆ, ನಿರ್ದಿಷ್ಟ ಕಾಲಕ್ಕೆ ಅಥವಾ ನಿರ್ದಿಷ್ಟ ಜನರಿಗೆ ಮಾತ್ರ ಸೀಮಿತವಾದ ಮಾತೇ? ಮುಂತಾದ ಅಂಶಗಳನ್ನು ವಿವರವಾಗಿ ಪರಿಶೀಲಿಸಬೇಕು. ಇದಕ್ಕೆ ಈ ರಂಗದ ಕೇವಲ ಪ್ರಾಥಮಿಕ ಜ್ಞಾನ ಅಥವಾ ಇಂಟರ್ನೆಟ್ ವಿವಿಯಲ್ಲಿ ಕಲಿತ ಶಾಸ್ತ್ರ ಖಂಡಿತ ಪರ್ಯಾಪ್ತವಾಗುವುದಿಲ್ಲ. 


ಜನರು ಧರ್ಮ ಪ್ರಜ್ಞೆಯ ಅಥವಾ ಧಾರ್ಮಿಕತೆಯ ಬದಲು ಧಾರ್ಮಿಕ ಉನ್ಮಾದ ಅಥವಾ ಭಾವುಕತೆಯನ್ನು ಮೈಗೂಡಿಸಿಕೊಂಡಾಗ ಅದಕ್ಕೆ ಮೊದಲು ಬಲಿಯಾಗುವುದು ಸತ್ಯ, ನ್ಯಾಯ ಮತ್ತು ನೈತಿಕ ಮೌಲ್ಯಗಳು. ಅದರಲ್ಲೂ ವಿಶೇಷವಾಗಿ, ಧರ್ಮ ಮತ್ತು ಆಧ್ಯಾತ್ಮಗಳ ಮೂಲಕವೇ ಕಲಿಸಲಾಗುವ ಉದಾತ್ತ ಮಾನವೀಯ ಮೌಲ್ಯಗಳು. ಈ ಉನ್ಮಾದ ಮತ್ತು ಭಾವುಕತೆಗಳ ಕೈಯಲ್ಲಿ ರುಂಡ ಕಡಿಸಿಕೊಳ್ಳುವವರ ಸಾಲಿನಲ್ಲಿ ಮುಂದಿನ ಸರದಿ ಬುದ್ಧಿ, ವಿವೇಕ ಮತ್ತು ತರ್ಕಗಳದ್ದು. ಯಾರೋ ಮಾರಕ ವಿಷ ಬೆರೆಸಿಕೊಟ್ಟ ಹಾಲನ್ನು ಕುಡಿದವನು ಹಾಲಿನಲ್ಲಿರುವ ಪೋಷಕಾಂಶಗಳಿಂದ ತನಗೆ ಗಝ್ವಬಲ ಬರುತ್ತದೆ ಎಂದು ನಂಬಿಕೊಂಡೇ, ವಿಷದ ಮಾರಕ ಪರಿಣಾಮಗಳಿಂದ ನರಳುತ್ತಿರುತ್ತಾನೆ. ಆ ಸ್ಥಿತಿಯಲ್ಲಿ ಅವನಿಗೆ ಮಿತ್ರರು ಶತ್ರುಗಳಾಗಿ ಮತ್ತು ಶತ್ರುಗಳು ಮಿತ್ರರಾಗಿ ಕಾಣಿಸಲಾರಂಭಿಸುತ್ತಾರೆ. ಪರಮ ಶತ್ರುಗಳಂತೂ ಮಹಾ ವಿಮೋಚಕರಾಗಿ ಕಾಣಿಸುತ್ತಾರೆ. ನ್ಯಾಯಪ್ರಜ್ಞೆ, ಮನೋವೈಶಾಲ್ಯ, ಔದಾರ್ಯ, ಸಹತಾಪ, ಮಾನವೀಯ ಸಂವೇದನೆ ಇತ್ಯಾದಿ ಒಳ್ಳೆಯದೆಲ್ಲವೂ ಅವರಿಗೆ ಅಪರಿಚಿತ ಹಾಗೂ ಅಪಥ್ಯವಾಗಿ ಬಿಡುತ್ತದೆ. ಒಂದು ಹಂತದಲ್ಲಿ ಕೆಲವರಿಗೆ ತಾವು ಇಂತಹ ಒಂದು ಮಾರಕ ಉನ್ಮಾದದಲ್ಲಿದ್ದೇವೆ ಎಂಬುದು ಮನವರಿಕೆಯಾಗಿ ಬಿಟ್ಟರೂ ಅವರು ಅದರಿಂದ ಹೊರಬರಲು ಚಿಕಿತ್ಸೆಗಾಗಿ ಧಾವಿಸುವುದಿಲ್ಲ. ಅದು ಯಾವುದೋ ದಿವ್ಯ, ಪಾವನ ಧಾರ್ಮಿಕ ಉನ್ಮಾದ ಎಂಬ ಭ್ರಮೆಯಿಂದ ಅವರು ಅದನ್ನು ಉಳಿಸಿಕೊಳ್ಳಲು ಮಾತ್ರವಲ್ಲ, ಮತ್ತಷ್ಟು ಗಟ್ಟಿಯಾಗಿ ಪೋಷಿಸಿ ಬೆಳೆಸಿಕೊಳ್ಳಲು ಹೆಣಗುತ್ತಾರೆ.

ವಿಮೋಚಕನ ಬರವಿಗೆ ಕಾಯುವ ಅಮಲು 

ಎಲ್ಲಿಂದಲೋ ಒಬ್ಬ ವಿಮೋಚಕ ಬರುತ್ತಾನೆ. ಬಂದು ನಮಗೆ ನಮ್ಮೆಲ್ಲ ಸಮಸ್ಯೆಗಳಿಂದ ಮುಕ್ತಿ ನೀಡಲಿದ್ದಾನೆ ಎಂಬ ಅಮಲು ಜನಸಮುದಾಯಗಳನ್ನು ನಿದ್ದೆಗೊಡ್ಡಿ ಅವರನ್ನು ನಿಷ್ಕ್ರಿಯ ಸೋಮಾರಿಗಳಾಗಿಸಿ ಬಿಡುತ್ತದೆ. ವಿಶೇಷವಾಗಿ, ದಾಸ್ಯದಲ್ಲಿರುವವರಿಗೆ, ದಾಸ್ಯದ ವಿರುದ್ಧ ಹೋರಾಡಿ ಅದರಿಂದ ಬಿಡುಗಡೆ ಪಡೆಯುವ ಬದಲು ತಮ್ಮನ್ನು ಕಟ್ಟಿಟ್ಟ ಸರಪಣಿಗಳನ್ನೇ ಮುದ್ದಿಸುತ್ತಾ ಸಾರ್ಥಕ್ಯದ ಭಾವದೊಂದಿಗೆ ದಾಸ್ಯದಲ್ಲಿ ಮುಂದುವರಿಯುವುದಕ್ಕೆ ಇಂತಹ ಭ್ರಮೆಗಳು ಬಲಿಷ್ಠ ನೆಪಗಳಾಗಿ ಬಿಡುತ್ತವೆ. ಮುಸ್ಲಿಮ್ ಮತ್ತು ಕ್ರೈಸ್ತರಿಗಿಂತ ದೀರ್ಘ ಇತಿಹಾಸ ಇರುವ ಯಹೂದಿ ಎಂಬೊಂದು ಪುಟ್ಟ ಸಮುದಾಯದವರು ಹಲವು ಶತಮಾನಗಳ ಕಾಲ ಒಬ್ಬ ವಿಮೋಚಕನ ಆಗಮನಕ್ಕಾಗಿ ಕಾತರದಿಂದ ಕಾದು ಕುಳಿತಿದ್ದರು. ಅವರ ಕೆಲವು ಪ್ರವಾದಿಗಳು ಮತ್ತು ಗ್ರಂಥಗಳು ಹೇಳಿದ್ದ ಭವಿಷ್ಯವಾಣಿಗಳನ್ನು ಅವರು ತಮಗೆ ಬೇಕಾದಂತೆ ಅರ್ಥೈಸಿಕೊಂಡರು. ಎಲ್ಲ ಯುಗಗಳಲ್ಲೂ ಅವರಿಗೆ, ಖಂಡಿತವಾಗಿಯೂ ಈ ಯುಗವೇ ತಮ್ಮ ವಿಮೋಚಕನ ಆಗಮನದ ಯುಗ ಎಂಬಂತೆ ಅನಿಸುತ್ತಿತ್ತು. ಕೊನೆಗೆ 20ನೇ ಶತಮಾನದಲ್ಲಿ ದಮನ ಮತ್ತು ಅಪಮಾನದ ಪರಮಾವಧಿಯನ್ನು ಅನುಭವಿಸಿದ ಬಳಿಕ ಅವರು, ತಮ್ಮ ವಿಮೋಚನೆಗೆ ಎಲ್ಲಿಂದಲೋ ಬರುವವರಿಗಾಗಿ ಕಾದು ಕುಳಿತರೆ ತಾವು ಸಂಪೂರ್ಣ ನಾಮಾವಶೇಷರಾಗುವುದು ಖಚಿತ ಎಂಬುದನ್ನು ಮನಗಂಡರು. ಅವರು ತಮ್ಮ ವಿಮೋಚನೆಯ ಹೊಣೆಯನ್ನು ತಾವೇ ಕೈಗೆತ್ತಿಕೊಂಡರು.

ಎಲ್ಲ ಬಗೆಯ ಯೋಜನೆ, ಕಾರ್ಯತಂತ್ರಗಳನ್ನು ರಚಿಸಿಕೊಂಡರು. ಗರಿಷ್ಠ ಮಟ್ಟದಲ್ಲಿ ಪರಿಶ್ರಮಿಸಿದರು. ಕೊನೆಗೆ ಅವರಿಗೆ, ಸ್ವಂತ ದೇಶ ಇದ್ದವರನ್ನು ನಿರಾಶ್ರಿತರಾಗಿಸಿಯಾದರೂ ತಮ್ಮದೇ ಒಂದು ಬಲಿಷ್ಠ, ಸ್ವತಂತ್ರ ಹಾಗೂ ಸುಭದ್ರ ದೇಶವನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಅವರ ದೇಶ ಕಳೆದ ಏಳು ದಶಕಗಳಿಂದ ಅಸ್ತಿತ್ವದಲ್ಲಿದೆ, ಬೆಳೆಯುತ್ತಲೂ ಇದೆ. ನಮ್ಮ ಭಾರತದಲ್ಲಿ ಇಂದು ನಮ್ಮನ್ನಾಳುತ್ತಿರುವ ಮನುವಾದ ಮತ್ತು ಬ್ರಾಹ್ಮಣ್ಯದ ಪ್ರತಿಪಾದಕರಲ್ಲಿನ ಒಂದು ವರ್ಗವು ಕೂಡಾ ಒಂದು ಹಂತದಲ್ಲಿ ಇಂತಹ ಭ್ರಮೆಯಲ್ಲಿತ್ತು. ವಿಮೋಚಕನ ನಿರೀಕ್ಷೆಯಲ್ಲಿತ್ತು. ಅವರು ಬ್ರಾಹ್ಮಣ್ಯಕ್ಕೆ ಅಥವಾ ಬ್ರಾಹ್ಮಣ್ಯದ ಪಾರಮ್ಯಕ್ಕೆ ಹೇತುವಾಗುವ ‘ಚಾತುರ್ವರ್ಣ್ಯ ಧರ್ಮ ವ್ಯವಸ್ಥೆ’ ಗೆ ಕುತ್ತು ಬಂದಾಗಲೆಲ್ಲಾ ಸಾಕ್ಷಾತ್ ವಿಷ್ಣು ದೇವರೇ ಯಾವುದಾದರೂ ಅವತಾರ ತಾಳಿ ಭೂಮಿಗೆ ಬಂದು ಬಿಡುತ್ತಾನೆ ಎಂದು ನಂಬಿ, ಬಹುಕಾಲ ಕಾದು ಕುಳಿತಿದ್ದರು. ಜ್ಯೋತಿರಾವ್ ಫುಲೆ (1827 - 1890), ಶ್ರೀ ನಾರಾಯಣಗುರುಗಳು (1856 - 1928), ಡಾ. ಅಂಬೇಡ್ಕರ್ (1891 - 1956) ಮುಂತಾದವರೆಲ್ಲ ಬೆನ್ನುಬೆನ್ನಿಗೆ ಬಂದು ಚಾತುರ್ವರ್ಣ್ಯ ವ್ಯವಸ್ಥೆಗೆ ಸವಾಲೆಸೆದು ಹೋದರೂ ವಿಷ್ಣು ಮಾತ್ರ ಯಾವುದೇ ಹೊಸ ಅವತಾರ ತಾಳಿ ಧರೆಗೆ ಬರುತ್ತಿಲ್ಲ ಎಂಬುದು ಅವರ ಪಾಲಿಗೆ ನಿರಾಶಾದಾಯಕವಾಗಿತ್ತು. ಆದರೆ ಅವರು ಸ್ವತಃ ಗುಲಾಮರಾಗಿರದೆ, ಗುಲಾಮರ ಧಣಿಗಳಾಗಿದ್ದುದರಿಂದ ಗುಲಾಮರಂತೆ ಹತಾಶರಾಗಿ ಕೈಕಟ್ಟಿ ಕೂರಲಿಲ್ಲ. ಸ್ವತಃ ರಂಗಕ್ಕಿಳಿದು ಬಹಳ ಯೋಜಿತವಾದ ಸಕ್ರಿಯ ಶ್ರಮ ಆರಂಭಿಸಿದರು. ಸುಮಾರು ಒಂದು ಶತಮಾನದ ಹಿಂದೆ ಒಂದು ಸಂಘಟನೆಯನ್ನು ಸ್ಥಾಪಿಸಿದರು ಮತ್ತು ಕ್ರಮೇಣ ಅದನ್ನು ಒಂದು ದೈತ್ಯ ‘ಪರಿವಾರ’ವಾಗಿ ಬೆಳೆಸಿದರು. ಅನೇಕ ತಲೆಮಾರುಗಳಿಂದ ತಾವು ಸಮಾಜದ ಮೇಲೆ ಹೇರಿಟ್ಟಿದ್ದ ವರ್ಣ ವ್ಯವಸ್ಥೆಯ ಕ್ರೌರ್ಯದ ಬಲಿಪಶುಗಳಾಗಿದ್ದ ಮುಗ್ಧರನ್ನೇ ಮರುಳುಗೊಳಿಸಿ, ಅವರನ್ನೇ ಆ ವ್ಯವಸ್ಥೆಯ ಪರಮನಿಷ್ಠ ಕಾಲಾಳುಗಳಾಗಿ ಬಳಸಿಕೊಂಡರು. ನಯವಾಗಿ ಅವರ ಹೆಗಲೇರಿ ಸಮಾಜದ ಮೇಲೆ ತಮ್ಮ ಪಾರಮ್ಯವನ್ನು ಮತ್ತೆ ಪ್ರತಿಷ್ಠಾಪಿಸಿಕೊಂಡರು. ಅವರು ಶ್ರಮದ ಮಾರ್ಗ ಬಿಟ್ಟು ಕೇವಲ ಅವತಾರದ ಆಗಮನಕ್ಕಾಗಿ ಕಾದು ಕುಳಿತಿದ್ದರೆ ಇಂದು ಕೂಡಾ ಅವರಿಗೆ ಭಾರತವನ್ನಾಳುವ ಸರಕಾರ, ಪ್ರಧಾನಿ ಮತ್ತು ಪಕ್ಷದ ಸೂತ್ರಧಾರಿಗಳಾಗಿರಲು ಸಾಧ್ಯವಿತ್ತೇ? ಆದರೆ ಅದು ಸಾಧ್ಯವಾಗಿದೆ. ಅತ್ತ, ಕಾಯುತ್ತಾ ಕುಳಿತವರು ಕುಳಿತ ಸ್ಥಿತಿಯಲ್ಲೇ ಇದ್ದಾರೆ. ಅವರು ಎದ್ದು ನಿಲ್ಲದಿದ್ದರೆ, ಮುಂದಿನ ಹಂತ, ಸಂಪೂರ್ಣ ಕುಸಿತದ್ದು. ಕೇವಲ ನಿದ್ದೆಯದ್ದಲ್ಲ.

‘ಗಝ್ವ ಅಲ್ ಹಿಂದ್’ - ಹಾಗಂದರೇನು? 
ಇತ್ತೀಚೆಗೆ ನಮ್ಮ ದೇಶದ ಕೆಲವು ವಲಯಗಳಲ್ಲಿ ‘ಗಝ್ವ್ವ ಅಲ್ ಹಿಂದ್’ ಅಥವಾ ‘ಗಝ್ವ್ವ ಎ ಹಿಂದ್’ ಎಂಬೊಂದು ವಿಲಕ್ಷಣ ಹಾಗೂ ನಿಗೂಢ ಭ್ರಮೆ ಭಾರೀ ಚರ್ಚೆಯಲ್ಲಿದೆ. ಈ ಕುರಿತಾಗಿರುವ ಎಲ್ಲ ಚರ್ಚೆ, ವದಂತಿ ಮತ್ತು ಅಪಪ್ರಚಾರಗಳಿಗೆ ಮಾತ್ರವಲ್ಲ ಒಂದಷ್ಟು ಆವೇಶ, ಸಂದೇಹ ಮತ್ತು ಆತಂಕಗಳಿಗೆ ಗ್ರಾಸವಾಗಿರುವುದು ಕೆಲವು ತಥಾಕಥಿತ ‘ಹದೀಸ್’ಗಳು. ಹದೀಸ್ ಅಂದರೆ ಪ್ರವಾದಿ ಮುಹಮ್ಮದ್ (ಸ) ಅವರ ವಚನಗಳು ಮತ್ತು ಅವರ ಚಟುವಟಿಕೆಗಳ ಕುರಿತಾಗಿ ಅವರ ಸಮಕಾಲೀನರಿಂದ ಸಂಗ್ರಹಿಸಲಾದ ವರದಿಗಳು. ನೂರಾರು ಹದೀಸ್ ಗ್ರಂಥಗಳ ಪೈಕಿ ಒಂದೆರಡು ಗ್ರಂಥಗಳಲ್ಲಿ, ಪ್ರವಾದಿ (ಸ) ಹೀಗೆ ಹೇಳಿದ್ದರು ಎಂಬ, ಒಂದು ಭವಿಷ್ಯವಾಣಿಯ ಸ್ವರೂಪದ ಈ ಕೆಳಗಿನ ಹೇಳಿಕೆ, ಪದಗಳ ಅಲ್ಪಸ್ವಲ್ಪವ್ಯತ್ಯಾಸದೊಂದಿಗೆ ಕಂಡು ಬರುತ್ತದೆ:
‘‘ನನ್ನ ಅನುಯಾಯಿಗಳ ಪೈಕಿ ಎರಡು ಪಂಗಡಗಳನ್ನು ಅಲ್ಲಾಹನು ನರಕಾಗ್ನಿಯಿಂದ ರಕ್ಷಿಸಲಿದ್ದಾನೆ. ಒಂದು ‘ಅಲ್ ಹಿಂದ್’ನಲ್ಲಿ ಹೋರಾಡುವ ಪಂಗಡ ಮತ್ತು ಎರಡನೆಯದು ಈಸಾ ಬಿನ್ ಮರ್ಯಮ್(ಅ) ಅಥವಾ ಏಸು ಕ್ರಿಸ್ತರು (ಭೂಮಿಗೆ ಮರಳಿ ಬಂದಾಗ) ಅವರ ಜೊತೆಗೆ ನಿಲ್ಲುವ ಪಂಗಡ’’.

‘ಗಝ್ವ್ವ ಅಲ್ ಹಿಂದ್’ ಎಂಬ ಹೆಸರಲ್ಲಿ ಸದ್ಯ ನಮ್ಮ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮತಾಣಗಳಲ್ಲಿ ಕಂಡು ಬರುತ್ತಿರುವ ಚರ್ವಿತ ಚರ್ವಣವೆಲ್ಲಾ ಗಿರಕಿ ಹೊಡೆಯುತ್ತಿರುವುದು ಇದೇ ತಥಾಕಥಿತ ಹೇಳಿಕೆಯ ಸುತ್ತ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕೆಲವು ವಲಯಗಳು ಇದಕ್ಕೆ ‘‘ಮುಸ್ಲಿಮ್ ಸೇನೆಯೊಂದು ಬಂದು ಭಾರತದ ಮೇಲೆ ಆಕ್ರಮಣ ನಡೆಸಲಿದೆ’’ ಎಂಬ ವ್ಯಾಖ್ಯಾನವನ್ನು ನೀಡಿ ಆ ವ್ಯಾಖ್ಯಾನಕ್ಕೆ ಧಾರಾಳ ಪ್ರಚಾರ ನೀಡಿದ್ದಾರೆ. ಇದು ಸಾಕ್ಷಾತ್ ಪ್ರವಾದಿಗಳ ಭವಿಷ್ಯವಾಣಿಯಾದ್ದರಿಂದ ಇದು ಸುಳ್ಳಾಗಲು ಸಾಧ್ಯವಿಲ್ಲ ಎಂಬ ತರ್ಕವನ್ನೂ ಮಂಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಚಲಾವಣೆಗೆ ಬರತೊಡಗಿದ್ದ ಈ ಕುರಿತಾದ ಚರ್ಚೆ, ಇದೀಗ ನೆರೆಯಲ್ಲಿ ತಾಲಿಬಾನ್ ವಿಜಯದೊಂದಿಗೆ ಹೊಸದೊಂದು ಮಜಲನ್ನು ಪ್ರವೇಶಿಸಿದೆ. ಇದು ಎಂತಹ ಗೊಂದಲದ ಗೂಡೆಂದರೆ, ಇದನ್ನು ಬೇರೆ ಬೇರೆ ಕಿಡಿಗೇಡಿ ವಲಯಗಳು ತಮ್ಮ ಇಚ್ಛಾನುಸಾರ ತಮ್ಮದೇ ಆದ ಹುಚ್ಚು ಭ್ರಮೆಗಳ ಪೋಷಣೆಗೆ ಬಳಸಿಕೊಳ್ಳುತ್ತಿವೆ. ಹಾಗೆಯೇ ಕೆಲವು ಅರಾಜಕತಾವಾದಿ ಪಂಥಗಳು ಇದನ್ನು ಜನರ, ವಿಶೇಷವಾಗಿ ಮುಗ್ಧ ಯುವ ಪೀಳಿಗೆಯವರ ಕ್ರಿಯಾಶೀಲತೆಯನ್ನು ಕೊಂದು ಅವರನ್ನು ಖಯಾಲಿಗಳ ನಾಲೆಗೆ ನೂಕುವ ಅಪಾಯಕಾರಿ ಅಮಲು ಪದಾರ್ಥದ ರೂಪದಲ್ಲಿ ಉಪಯೋಗಿಸುತ್ತಿವೆ. ಅಫ್ಘಾನಿಸ್ತಾನದ ಭಯೋತ್ಪಾದಕ ಗುಂಪುಗಳು ಇದನ್ನು ಎಳೆಸೆಳೆದು ‘‘ನಾವು ಅಫ್ಘಾನಿಸ್ತಾನದ ಮೇಲೆ ಅಧಿಕಾರ ಸ್ಥಾಪಿಸಿಕೊಂಡ ಬೆನ್ನಿಗೆ ಚೀನಾದ ಉಯ್ ಘರ್ ಮುಸ್ಲಿಮರು, ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು ಮತ್ತು ಭಾರತದ ಕಾಶ್ಮೀರಿ ಮುಸ್ಲಿಮರ ವಿಮೋಚನೆಗೆ ಹೊರಡುತ್ತೇವೆ’’ ಎನ್ನುವ ಮೂಲಕ ತಮ್ಮ ಅನುಯಾಯಿ ವಲಯದಲ್ಲಿ ಹುಚ್ಚು ಆವೇಶ ಉಕ್ಕಿಸಲು ಹೆಣಗಿವೆ. ಪಾಕಿಸ್ತಾನದಲ್ಲೂ ಕೆಲವು ಹಿಂಸಾನಿರತ, ವಿಘ್ನ ಸಂತೋಷಿ ಪಂಥಗಳವರು ಈ ಅಮಲನ್ನು ಉದಾರವಾಗಿ ಹಂಚಿದ್ದಾರೆ.

ಸಾಮಾನ್ಯವಾಗಿ ಒಂದು ವಿಷಯವು ಧರ್ಮದ ಭಾಗವಾಗಿದ್ದರೆ, ಅದನ್ನು ಆಯಾ ಧರ್ಮದ ವಿದ್ವಾಂಸರು ಪ್ರಸ್ತಾಪಿಸುತ್ತಲಿರುತ್ತಾರೆ. ಆ ಕುರಿತು ಚರ್ಚಿಸುತ್ತಾರೆ, ಉಪದೇಶಿಸುತ್ತಾರೆ. ಆದರೆ ಜಗತ್ತಿನ ಯಾವುದೇ ಭಾಗದ ಪ್ರಧಾನ ಧಾರೆಯ ಮುಸ್ಲಿಮ್ ವಿದ್ವಾಂಸರು ಯಾರೂ ಈ ‘ಗಝ್ವ್ವ ಅಲ್ ಹಿಂದ್’ ವಿಷಯವನ್ನು ಚರ್ಚೆಗೆ ಎತ್ತಿಕೊಂಡದ್ದಿಲ್ಲ. ಯಾರಾದರೂ ಆ ಕುರಿತು ವಿಚಾರಿಸಿದಾಗಲೆಲ್ಲಾ, ಅದು ತೀರಾ ದುರ್ಬಲ ಹಾಗೂ ದೋಷಪೂರ್ಣ ವರದಿಗಳನ್ನು ಆಧರಿಸಿರುವ ಒಂದು ಕಟ್ಟು ಕತೆ ಮಾತ್ರ, ಪ್ರವಾದಿ (ಸ) ಹಾಗೆ ಹೇಳಿದ್ದರೆನ್ನುವುದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ, 16 ದಶಕಗಳಿಗೂ ದೀರ್ಘ ಇತಿಹಾಸವಿರುವ, ಪ್ರತಿವರ್ಷ ಜಗತ್ತಿನ ಹತ್ತಾರು ದೇಶಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧಕ ಮಟ್ಟದ ಶಿಕ್ಷಣ ನೀಡುವ ಭಾರತದ ಜಗದ್ವಿಖ್ಯಾತ ಇಸ್ಲಾಮೀ ವಿದ್ಯಾಕೇಂದ್ರ ದಾರುಲ್ ಉಲೂಮ್ ದೇವ್ ಬಂದ್ ನ ವಿದ್ವಾಂಸ ಮೌಲಾನಾ ಮುಫ್ತಿ ಸಲ್ಮಾನ್ ಮನ್ಸೂರ್ ಪುರಿಯವರೊಡನೆ ಈ ಕುರಿತು ಕೇಳಲಾಯಿತು. ಆಗ ಅವರು ನೀಡಿದ್ದ ಉತ್ತರದ ಸಾರಾಂಶ ಹೀಗಿದೆ: ‘‘ಈ ಕುರಿತು ಅನೇಕ ಹದೀಸ್ ವರದಿಗಳಿವೆ. ಯಾವುದೇ ಹದೀಸ್ ವರದಿಯ ಮೌಲ್ಯಮಾಪನ ಮಾಡುವ ವೇಳೆ ಮುಖ್ಯವಾಗಿ ಅದರ ‘ಮತನ್’ (ಪಠ್ಯ ಅಥವಾ ಮೂಲ ಪಾಠ) ಹೇಗಿದೆ? ಮತ್ತು ಅದರ ‘ಇಸ್ನಾದ್’ (ಸನದು ಅಥವಾ ಮಾಹಿತಿ ಮೂಲ, ಅಂದರೆ ಅದನ್ನು ವರದಿ ಮಾಡಿರುವವರ ಶೃಂಖಲೆ) ಹೇಗಿದೆ? ಎಂಬ ಎರಡು ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಒಂದು ವರದಿಯಲ್ಲಿರುವ ಪಠ್ಯವು ಮೇಲ್ನೋಟಕ್ಕೆ ಸರಿ ಎಂದು ಕಾಣಿಸಿದರೂ ಅದರ ವರದಿಗಾರರ ಶೃಂಖಲೆಯು ಅಸ್ಪಷ್ಟವಾಗಿದ್ದರೆ, ಗೊಂದಲಮಯವಾಗಿದ್ದರೆ ಅಥವಾ ಆ ಶೃಂಖಲೆಯಲ್ಲಿ ವಿಶ್ವಾಸಾರ್ಹರಲ್ಲದ ವ್ಯಕ್ತಿಗಳಿದ್ದರೆ ಆ ವರದಿ ಸ್ವೀಕಾರಯೋಗ್ಯವಾಗಿರುವುದಿಲ್ಲ. ‘ಗಝ್ವ್ವ ಅಲ್ ಹಿಂದ್’ ಕುರಿತಾದ ಹದೀಸ್ ವರದಿಗಳಲ್ಲೂ ಇಂತಹದೇ ದೋಷಗಳಿವೆ. ಆದ್ದರಿಂದ ಅದನ್ನು ಒಪ್ಪುವಂತಿಲ್ಲ.’’

 ಗಮ್ಮತ್ತೇನೆಂದರೆ, ಸದ್ಯ ಈ ವಿಷವು ವ್ಯಾಪಕ ಚಲಾವಣೆಯಲ್ಲಿರುವುದು, ಮೇಲ್ನೋಟಕ್ಕೆ ತೀರಾ ತದ್ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣಿಸುವ, ಆದರೆ ಮೂಲತಃ ಒಂದೇ ಸ್ವರೂಪದ ದ್ವೇಷ, ಹಿಂಸೆ ಮತ್ತು ವಿಧ್ವಂಸದ ಅಸ್ವಸ್ಥ ಮಾನಸಿಕತೆಯಿಂದ ನರಳುತ್ತಿರುವ ಎರಡು ಪ್ರತ್ಯೇಕ ವಲಯಗಳಲ್ಲಿ. ಒಂದು ಕಡೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ಮತಭ್ರಮಿತರು ಮತ್ತು ಮತಿಭ್ರಮಿತರು ‘ಗಝ್ವ್ವ ಎ ಹಿಂದ್’ ಎಂಬ ಕಾಲ್ಪನಿಕ ಪೆಡಂಭೂತದ ಸುತ್ತ ನರ್ತಿಸುತ್ತಿದ್ದಾರೆ. ಅಲ್ಲಿ ಕೂಡಾ ಪ್ರಧಾನ ಧಾರೆಯ ಮುಸ್ಲಿಮ್ ವಿದ್ವಾಂಸರಾಗಲಿ ಅಲ್ಲಿನ ದೊಡ್ಡ ಇಸ್ಲಾಮೀ ವಿದ್ಯಾ ಸಂಸ್ಥೆಗಳಾಗಲಿ ‘ಗಝ್ವ್ವ ಅಲ್ ಹಿಂದ್’ ಕುರಿತು ಮಾತನಾಡಿಲ್ಲ. ಯಾರಾದರೂ ಈ ಕುರಿತು ತಮ್ಮನ್ನು ಕೆದಕಿದರೆ ಮಾತ್ರ, ‘‘ಆ ವಿಷಯದಲ್ಲಿರುವ ಹದೀಸ್ ವರದಿಗಳು ನಂಬಲರ್ಹವಲ್ಲದ ಪುರಾವೆಗಳನ್ನು ಅವಲಂಬಿಸಿವೆ. ಆದ್ದರಿಂದ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ’’ ಎನ್ನುವ ಮೂಲಕ ಅದನ್ನು ತಳ್ಳಿ ಹಾಕಿದ್ದಾರೆ. ಅಲ್ಲಿ ‘ಗಝ್ವ್ವ ಅಲ್ ಹಿಂದ್’ ಎಂಬ ಅಮಲಿನ ಕಲ್ಪನೆಯನ್ನು ನಂಬಿ ಆ ಕುರಿತು ಚರ್ಚಿಸುತ್ತಾ ಹುಚ್ಚು ಆವೇಶದೊಂದಿಗೆ ಹಾರಾಡುತ್ತಿರುವುದು ಅಲ್ಲಿನ ಉನ್ಮಾದಿತರು ಮಾತ್ರ. ಅದು ಬಿಟ್ಟರೆ ಅಲ್ಲಿ, ಕ್ರಿಕೆಟ್ ಪಂದ್ಯದಲ್ಲಿ ಭಾರತದ ನಾಲ್ಕು ವಿಕೆಟ್ ಕಿತ್ತು, ಇನ್ನೇನು ಭಾರತವನ್ನೇ ಸುಲಭವಾಗಿ ಕಿತ್ತುಕೊಳ್ಳುತ್ತೇನೆ ಎಂಬಂತಹ ಧಾಟಿಯಲ್ಲಿ ಮಾತನಾಡುವ ಶುಐಬ್ ಅಕ್ತರ್ ತರದ ಕ್ರಿಕೆಟಿಗರು ಮತ್ತು ವೀಣಾ ಮಲಿಕ್ ಮಟ್ಟದ ನಟಿಯರು ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್‌ನಲ್ಲಿ ‘ಗಝ್ವ್ವ ಅಲ್ ಹಿಂದ್’ ಕುರಿತು ಓದಿ, ಆ ಕುರಿತು ಧರ್ಮೋಪನ್ಯಾಸಗಳನ್ನು ನೀಡತೊಡಗಿದ್ದಾರೆ.

ಇತ್ತ ನಮ್ಮ ದೇಶದ ಕಥೆಯೇನು? ಇಲ್ಲಿರುವ ನೆರೆಯ ಕಿಡಿಗೇಡಿಗಳ ಸಹಮನಸ್ಕ ಮನುವಾದಿಗಳು ಮತ್ತವರ ಕೆಲವು ತುತ್ತೂರಿ ಮಾಧ್ಯಮಗಳು ಕೂಡಾ ಅದೇ ಕೆಲಸವನ್ನು ಮತ್ತಷ್ಟು ಆವೇಶದಿಂದ ಮಾಡುತ್ತಿದ್ದಾರೆ. ಅವರು ಕೂಡಾ ‘ಗಝ್ವ್ವ ಎ ಹಿಂದ್’ ಎಂಬ ಶುದ್ಧ ಕಟ್ಟು ಕಥೆಯನ್ನು ತಾವು ನಂಬಿರುವಂತೆ ನಟಿಸುತ್ತಿದ್ದಾರೆ. ಪದೇ ಪದೇ ಅದನ್ನು ಪ್ರಸ್ತಾಪಿಸಿ, ಭಾರತವನ್ನು ಆಕ್ರಮಿಸಲು ಹೊರಗಿನಿಂದ ಪಡೆಗಳು ಬರಲಿಕ್ಕಿವೆ ಮತ್ತು ‘ಒಳಗಿನ ಶತ್ರುಗಳು’ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ರೈಲು ಬಿಟ್ಟು ಜನರನ್ನು ಕಳವಳಕ್ಕೆ ಕೆಡವಲು ಮತ್ತು ಅಕ್ಕಪಕ್ಕದವರ ಕುರಿತು ಸಂಶಯ ಬಿತ್ತಲು ಹೆಣಗಾಡುತ್ತಿದ್ದಾರೆ. ಆ ಕಡೆಯವರು ‘ಗಝ್ವ್ವ ಅಲ್ ಹಿಂದ್’ ಎಂಬ ತಮ್ಮದೇ ಭ್ರಮಾಲೋಕದ ಮಿತ್ರನ ಹೆಸರಲ್ಲಿ ಭಾರತದ ವಿರುದ್ಧ ಆವೇಶ ಉಕ್ಕಿಸುತ್ತಿದ್ದರೆ, ಈ ಕಡೆಯವರು ‘ಗಝ್ವ್ವ ಅಲ್ ಹಿಂದ್’ ಎಂಬ ಅದೇ ಪೆಡಂಭೂತವನ್ನು ಇಲ್ಲಿನ ಮುಸಲ್ಮಾನರ ವಿರುದ್ಧ ಆಕ್ರೋಶ ಬೆಳೆಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಸಮುದಾಯಗಳಿಗೆ ಜಾಗತಿಕ ಅಥವಾ ರಾಷ್ಟ್ರೀಯ ಮಟ್ಟದ ಒಂದು ಮಾರ್ಗದರ್ಶಿ ವ್ಯವಸ್ಥೆ ಇದ್ದರೂ ಅಪಾಯ, ಇಲ್ಲದಿದ್ದರೂ ಅಪಾಯ. ಇದ್ದರೆ, ಅದು ಹಿಂದೊಮ್ಮೆ ರೋಮ್‌ನಲ್ಲಿ ಆದಂತೆ, ಯಾರು ಯಾರದೋ ಸ್ವಾರ್ಥಕ್ಕಾಗಿ ದುರ್ಬಳಕೆಯಾಗಿ ಜನಸಾಮಾನ್ಯರ ಶೋಷಣೆಗೆ ಕಾರಣವಾಗುವ ಅಪಾಯವಿರುತ್ತದೆ. ಅದಿಲ್ಲದಿದ್ದರೆ, ಯಾರಾದರೂ ಅಪ್ರಬುದ್ಧ ಹಾಗೂ ಭ್ರಷ್ಟ ವ್ಯಕ್ತಿಗಳು ಅಥವಾ ತಮ್ಮದೇ ಸೀಮಿತ ಹಿತಾಸಕ್ತಿಗಳಿರುವ ಸಣ್ಣ ಗುಂಪುಗಳು, ತಪ್ಪು ಮಾಹಿತಿಗಳ ಮೂಲಕ ಜನರನ್ನು ದಾರಿಗೆಡಿಸುವ ಅಪಾಯವಿರುತ್ತದೆ. ಇಂದು ಜಗತ್ತಿನ ಹಲವೆಡೆಗಳಲ್ಲಿ ಮುಸ್ಲಿಮ್ ಸಮಾಜ ಅಂತಹ ಸನ್ನಿವೇಶವೊಂದನ್ನು ಎದುರಿಸುತ್ತಿದೆ. ಮುಸ್ಲಿಮರಲ್ಲಿನ ಕೆಲವರು, ಧರ್ಮ ಹಾಗೂ ಧಾರ್ಮಿಕ ವಿಷಯಗಳ ಕುರಿತು ಸತ್ಯವನ್ನು ಅರಿಯುವುದಕ್ಕೆ ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳು ಧಾರಾಳವಾಗಿ ಲಭ್ಯವಿದ್ದರೂ ಅಂತಹ ಮೂಲಗಳನ್ನು ಸಂಪರ್ಕಿಸುವ ಗೊಡವೆಗೆ ಹೋಗುವುದಿಲ್ಲ. ಅವರು ಕೇವಲ ತಮ್ಮ ಅಂಗೈಯಲ್ಲಿರುವ ‘ಅಲ್ಲಾಮಾ ಶೇಖ್ ಮೊಬೈಲ್’ ಸಾಹೇಬರನ್ನೇ ತಮ್ಮ ಮಹಾ ಗುರುವಾಗಿಸಿಕೊಂಡು, ಅವರ ಮಾರ್ಗದರ್ಶನದಲ್ಲೇ ದೊಡ್ಡ ದೊಡ್ಡ ತೀರ್ಮಾನಗಳನ್ನು ಕೈಗೊಂಡು ಬಿಡುತ್ತಾರೆ.

ತಂತ್ರಜ್ಞಾನದ ಮೂಲಕ ಜ್ಞಾನವು ಅಂಗೈಗೆ ಲಭ್ಯವಾಗುವುದು ಒಳ್ಳೆಯ ಬೆಳವಣಿಗೆ. ಆದರೆ ಇಂತಹ ಸವಲತ್ತಿನ ಫಲಾನುಭವಿಗಳಿಗೆ ಕನಿಷ್ಠ ಪಕ್ಷ ಜ್ಞಾನ ಯಾವುದು ಮತ್ತು ಅಜ್ಞಾನ ಯಾವುದೆಂಬುದನ್ನು ಪ್ರತ್ಯೇಕಿಸಿ ಗುರುತಿಸುವ ಸಾಮರ್ಥ್ಯ ತುಂಬಾ ಅವಶ್ಯಕ. ಅನ್ಯಥಾ, ಭಾರೀ ದುರಂತಗಳು ಸಂಭವಿಸುವುದು ಖಚಿತ. ಧರ್ಮದ ಅಪಕ್ವ ಹಾಗೂ ವಿಕೃತ ವ್ಯಾಖ್ಯಾನ ಹಾಗೂ ವಿಶ್ಲೇಷಣೆಗಳು ಸಾಕ್ಷಾತ್ ಧರ್ಮದ ಹೆಸರಲ್ಲೇ, ಧರ್ಮಕ್ಕೆ ತೀರಾ ತದ್ವಿರುದ್ಧವಾದ ಅಲ್ ಖಾಯಿದಾ, ಐಸಿಸ್ ಅಥವಾ ತಾಲಿಬಾನ್‌ಗಳಂತಹ ಗುಂಪುಗಳು ಪ್ರತಿನಿಧಿಸುವ, ಹಿಂಸೆಯೊಂದೇ ಎಲ್ಲಕ್ಕೂ ಪರಿಹಾರ, ಬಲಪ್ರಯೋಗವೊಂದೇ ಸುಧಾರಣೆಯ ಮಾರ್ಗ ಎಂಬಂತಹ ಉಗ್ರವಾದಿ ವಿಚಾರಧಾರೆಗಳು ಪ್ರಸಾರವಾಗುವುದಕ್ಕೆ ಕಾರಣವಾಗುತ್ತವೆ. ಕುರ್‌ಆನ್ ವಚನಗಳಿರಲಿ, ಪ್ರವಾದಿವರ್ಯರ ಮಾತುಗಳಿರಲಿ ಅವೆಲ್ಲಾ ಒಂದು ಸಾಲಿನ ಘೋಷಣೆಗಳಲ್ಲ. ಅವುಗಳಿಗೆ ಹಿನ್ನೆಲೆ ಮುನ್ನೆಲೆಗಳಿರುತ್ತವೆ. ಭಾಗವನ್ನು ಅರ್ಥೈಸಲು ಪೂರ್ಣದ ಜ್ಞಾನ ಅನಿವಾರ್ಯವಾಗಿರುತ್ತದೆ. ಕೇವಲ ಭಾಗವನ್ನು ಅವಲಂಬಿಸಿ ತೀರ್ಮಾನಗಳಿಗೆ ತಲುಪಿದರೆ ಹಲವು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಉದಾ: ಕುರ್‌ಆನ್‌ನಲ್ಲಿ ಒಂದು ಕಡೆ ‘‘ವಿಶ್ವಾಸಿಗಳೇ, ನೀವು (ಮದ್ಯದ) ಅಮಲಿನಲ್ಲಿರುವಾಗ ನಮಾಜ್‌ನ ಹತ್ತಿರ ಹೋಗಬಾರದು.....’’ ಎಂಬೊಂದು ಆದೇಶವಿದೆ (ಕುರ್ ಆನ್ - 4:43). ವಾಟ್ಸ್‌ಆ್ಯಪ್ ಮದ್ರಸಾದಲ್ಲಿ ಅಥವಾ ಪಿಂಟರೆಸ್ಟ್ ಧರ್ಮಪೀಠದಲ್ಲಿ ಕೇವಲ ಇಷ್ಟನ್ನು ಮಾತ್ರ ನೋಡಿ ನಂಬುವವರ ಗತಿ ಏನು? ಅಂಥವರು ಇದನ್ನು ಕಂಡೊಡನೆ, ಅಕ್ಕಪಕ್ಕದವರಿಗೆಲ್ಲ - ಇಸ್ಲಾಮ್ ಧರ್ಮದಲ್ಲಿ ಮದ್ಯಪಾನ ನಿಷಿದ್ಧವೇನಲ್ಲ, ನಮಾಜ್ ಸಲ್ಲಿಸುವುದಕ್ಕೆ ಹೋಗುವಾಗ ಅಮಲಿನಲ್ಲಿರುವುದು ಮಾತ್ರ ನಿಷಿದ್ಧ ಎಂಬ ಶುದ್ಧ ಅವಿವೇಕದ ಫತ್ವಾ (ಧಾರ್ಮಿಕ ತೀರ್ಪು) ಕೊಟ್ಟುಬಿಡುವ ಸಾಧ್ಯತೆ ಇದೆ. ನಿಜವಾಗಿ, ಕುರ್‌ಆನ್‌ನ ಪ್ರಸ್ತುತ ವಚನದ ನೈಜ ಹಿನ್ನೆಲೆ ಹೀಗಿದೆ: ಪ್ರವಾದಿಯ ಕಾಲದಲ್ಲಿ ಕಟ್ಟುನಿಟ್ಟಾದ ಮದ್ಯ ನಿಷೇಧದ ನಿಯಮವನ್ನು ಸಮಾಜದಲ್ಲಿ ಹಠಾತ್ತನೆ ಜಾರಿಗೊಳಿಸಿರಲಿಲ್ಲ. ಅಲ್ಲಿ ಮದ್ಯ ನಿಷೇಧವನ್ನು ಹಂತಹಂತವಾಗಿ ಜಾರಿಗೊಳಿಸಲಾಗಿತ್ತು. ಮದ್ಯದ ಭಕ್ತರೇ ತುಂಬಿದ್ದ ಆ ಸಮಾಜದಲ್ಲಿ ಮೊದಲು ಅದರ ವಿರುದ್ಧ ಪ್ರಚಾರ, ಉಪದೇಶ ಮತ್ತು ಜಾಗೃತಿಯ ವ್ಯಾಪಕ ಅಭಿಯಾನವನ್ನು ನಡೆಸಲಾಯಿತು. ಅದು ಕೆಟ್ಟದು ಹಾಗೂ ಹಾನಿಕರ ಎಂದು ಜನರಿಗೆ ಮನವರಿಕೆ ಮಾಡಿಸಲಾಯಿತು (ಕುರ್‌ಆನ್ - 2:219). ಎರಡನೆಯ ಹಂತದಲ್ಲಿ, ಮೇಲ�

Writer - ಎ. ಎಸ್. ಪುತ್ತಿಗೆ

contributor

Editor - ಎ. ಎಸ್. ಪುತ್ತಿಗೆ

contributor

Similar News