ಸಿರಿಯಾ ಇದ್ಲಿಬ್ ಪ್ರಾಂತ್ಯದಲ್ಲಿ ಸರಕಾರಿ ಪಡೆಗಳ ದಾಳಿ: 4 ಮಕ್ಕಳು ಮೃತ್ಯು

Update: 2021-08-21 16:49 GMT
photo : twitter.com/TRTWorldNow

 ದಮಾಸ್ಕಸ್, ಆ.21: ಬಂಡುಗೋರರು ಪ್ರಬಲವಾಗಿರುವ ಸಿರಿಯಾದ ಇದ್ಲಿಬ್ ಪ್ರಾಂತದ ದಕ್ಷಿಣದಲ್ಲಿರುವ ಕನ್ಸ್ಫಾರ ಗ್ರಾಮದ ಮೇಲೆ ರಶ್ಯ ಬೆಂಬಲಿತ ಸಿರಿಯಾ ಸರಕಾರಿ ಪಡೆಗಳು ನಡೆಸಿದ ಸರಣಿ ದಾಳಿಯಲ್ಲಿ 4 ಮಕ್ಕಳು ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುಾಗಿ ಮಾಧ್ಯಮಗಳು ವರದಿ ಮಾಡಿವೆ.

ಸರಕಾರಿ ಪಡೆಗಳ ಫಿರಂಗಿ ದಾಳಿಯಿಂದ ಮನೆಯೊಂದು ನೆಲಸಮವಾಗಿದ್ದು ಮನೆಯೊಳಗಿದ್ದ 4 ಮಕ್ಕಳು ಮನೆಯ ಅವಶೇಷದಡಿ ಜೀವಂತ ಸಮಾಧಿಯಾದರು ಎಂದು ವರದಿಯಾಗಿದೆ. ಮನೆಯ ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದ ಕುಟುಂಬದ ಯಜಮಾನ ಫಿರಂಗಿ ದಾಳಿಯ ಸದ್ದು ಕೇಳಿ ಓಡಿ ಬಂದಿದ್ದು ಅವಶೇಷಗಳಡಿಯಿಂದ ತನ್ನ ಪತ್ನಿ ಹಾಗೂ ಎಳೆಯ ಮಗುವನ್ನು ರಕ್ಷಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದ್ಲಿಬ್ ಗಡಿಭಾಗದಲ್ಲಿರುವ ಪೂರ್ವ ಅಲೆಪ್ರೋ ಪ್ರಾಂತದಲ್ಲಿರುವ ಮನೆಯೂ ಫಿರಂಗಿ ದಾಳಿಯಿಂದ ಧ್ವಂಸವಾಗಿದ್ದು 2 ಮಕ್ಕಳ ಸಹಿತ 5 ಮಂದಿ ಗಾಯಗೊಂಡಿದ್ದಾರೆ. ಇತ್ತೀಚೆಗೆ ಮೃತಪಟ್ಟಿದ್ದ ತಮ್ಮ ತಂದೆಯ ಸಮಾಧಿಗೆ ಗೌರವ ಸಲ್ಲಿಸಿ ಹಿಂತಿರುಗುತ್ತಿದ್ದಾಗ ನಡೆದ ದಾಳಿಯಿಂದ ಮಕ್ಕಳು ಗಾಯಗೊಂಡರು. ಈ ಪ್ರಾಂತದಲ್ಲಿ ಬೆಳಿಗ್ಗೆ ರಶ್ಯಾದ ವಿಮಾನಗಳು ಗಸ್ತು ತಿರುಗುತ್ತಿದ್ದು ಅರ್ಧಗಂಟೆಯೊಳಗೆ ಫಿರಂಗಿ ದಾಳಿ ನಡೆದಿದೆ ಎಂದು ಗ್ರಾಮದ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ಅಲ್ ಹುಸೈನ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News