ರಹಮತ್ ತರೀಕೆರೆಯವರ ಜನಸಂಸ್ಕೃತಿಗಳ ಅಧ್ಯಯನ ಮತ್ತು ಪ್ರಮೇಯಗಳು

Update: 2021-08-29 19:30 GMT

ಭಾಗ-2

ರಹಮತ್ ತರೀಕೆರೆಯವರ ಸಂಶೋಧನಾ ಬರಹಗಳ ಪ್ರಮೇಯಗಳ ಪ್ರಮುಖ ಕ್ಯಾನ್ವಾಸು ಕರ್ನಾಟಕ ಕೇಂದ್ರಿತವಾದುದು. ಸೂಫಿ, ನಾಥ, ಶಾಕ್ತ, ಗುರುಪಂಥಗಳ ಕುರಿತು ಅವರು ಮಾಡಿದ ಸಂಶೋಧನೆಗಳು ಕರ್ನಾಟಕವೆಂಬ ಸ್ಥಳ ನಿರ್ದಿಷ್ಟತೆಯನ್ನು ಹೊತ್ತುಕೊಂಡೇ ಹೊರಡುತ್ತವೆ.


ತರೀಕೆರೆಯವರಂಥವರ ಸಂಶೋಧನಾ ವಿಧಾನಗಳು ಮತ್ತು ಅಂತಹ ವಿಧಾನಗಳ ಮೂಲಕ ರೂಪುಗೊಂಡ ಕೃತಿಗಳು ಹಲವು ರೀತಿಯ ಶಕ್ತಿ ಮತ್ತು ಮಿತಿಗಳನ್ನೊಳಗೊಂಡಿವೆ. ಅವುಗಳ ಶಕ್ತಿ ಏನೆಂದರೆ ಬಯಾಲಜಿಯ ಲ್ಯಾಬಿನಲ್ಲಿ ಕಪ್ಪೆಯನ್ನು ಕೊಯ್ದು ಬಿಡಿಸಿಟ್ಟಂತೆ ವಿವರಿಸುವ ಕ್ರಮಬದ್ಧ ವಿವರಣೆ, ಸ್ಪಷ್ಟತೆಗಳು ಅಧ್ಯಯನಕಾರ ಮತ್ತು ಓದುಗ ಇಬ್ಬರನ್ನೂ ದಿಕ್ಕು ತಪ್ಪಿಸುವುದಿಲ್ಲ. ಅಂತಹ ಕಡೆ ವಿಚಾರ ಮಂಡನೆಯ ನಿಖರತೆ, ನಿರ್ದಿಷ್ಟತೆ, ಕರಾರುವಾಕ್ಕುತನಗಳು ಎದ್ದು ಕಾಣುತ್ತವೆ. ಕಸುಬುದಾರ ವಿದ್ವಾಂಸರು ಅಳವಡಿಸಿಕೊಂಡು ಬರೆವ ತತ್ವಶಾಸ್ತ್ರೀಯ, ತಾರ್ಕಿಕ ಸಂಶೋಧನಾ ವಿಧಾನಗಳನ್ನೇ ನಾವು ‘ಅಕಡೆಮಿಕ್ ಶಿಸ್ತು’ ಎಂಬ ಕೆಟಗರಿಗೆ ಸೇರಿಸಿ ವಿವರಿಸುತ್ತೇವೆ. ಈ ಮಾದರಿಯನ್ನು ಹಿಂದೆ ಆಗಿ ಹೋದ ಭಾರತದ ಹಲವು ದರ್ಶನಗಳನ್ನು ಮಂಡಿಸಿದ ತತ್ವಶಾಸ್ತ್ರಜ್ಞರು, ಮೀಮಾಂಸಕರು ಮತ್ತು ಆಧುನಿಕ ಪಶ್ಚಿಮದ ಸಮಾಜ ವಿಜ್ಞಾನಗಳ ಶಿಸ್ತುಗಳಲ್ಲಿ ಕೆಲಸ ಮಾಡುತ್ತಿರುವ ವಿದ್ವಾಂಸರುಗಳು ಬಳಸುತ್ತಾರೆ.

 ಈ ಅಕಡೆಮಿಕ್ ಆದ ಅಧ್ಯಯನ ವಿಧಾನಗಳು ಅನೇಕ ಬಾರಿ ನೀರಸವಾಗಿ ಸುತ್ತಿದ ಕಡೆಯೇ ಏಕ ಪ್ರಕಾರವಾಗಿ ಸುತ್ತುವ ಹದ್ದಿನಂತೆ ಬೋರು ಹೊಡೆಸುತ್ತವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಗರಗಳು ರೂಪಿಸಿಕೊಂಡ ಪಾರ್ಕುಗಳಂತೆ ಕಾಣುತ್ತವೆ. ಬಹುಶಿಸ್ತುಗಳಲ್ಲಿ ಪ್ರವೇಶವಿರುವ ಅಗಾಧ ಪ್ರತಿಭೆಯ ವಿದ್ವಾಂಸರ ಬರಹಗಳು ದಟ್ಟ ಅರಣ್ಯ ಹೊಕ್ಕಂತೆ ಕಾಣಿಸುತ್ತವೆ. ದಟ್ಟ ಅಡವಿಗಳ ಅಗಾಧತೆ, ನಿಗೂಢತೆ, ವೈವಿಧ್ಯತೆ, ಧುತ್ತನೆ ಎದುರಾಗಿ ಬೆಚ್ಚಿಬೀಳಿಸುವ ಕಣಿವೆ, ಕೊರಕಲು, ಪ್ರಾಣಿ, ಕೀಟ, ಬಂಡೆ, ಹೂವು, ತಿಳಿನೀರು, ಜಲಪಾತಗಳ ಬೆಚ್ಚಿ ಬೀಳಿಸುವ ಶಕ್ತಿ ಪಾರ್ಕುಗಳಲ್ಲಿ ದಕ್ಕಲಾರದು. ನಕಾಶೆಯ ಹಂಗು ಮೀರಿ ನಡೆವ ಚಾರಣಿಗರು ಮಾತ್ರ ದೊಡ್ಡ ರಿಸ್ಕು ತೆಗೆದುಕೊಳ್ಳುವ ಸಾಹಸಕ್ಕೆೆ ಕೈ ಹಾಕುತ್ತಾರೆ. ತಾವು ನಡೆಯುತ್ತ, ನಡೆಯುತ್ತ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮಂಡಿಸುತ್ತಾರೆ. ಅಂಥವರಲ್ಲಿ ಡಿ.ಆರ್., ಹರಾರಿ, ಟಾಗೂರ್, ಫೆನಾನ್, ಸೈದ್, ಮ್ಯಾಕ್ಸ್ ವೆಬರ್, ಪೌಲೊ ಫ್ರೈರೆ, ಹಾಬ್ಸ್ವಾನ್, ಕೊಸಾಂಬಿ, ಶಂಬಾ, ರಾಚಿಂ ಢೇರೆ, ನಾಗಾರ್ಜುನ, ಅಲ್ಲಮ, ಚೋಮ್ಸ್ಕಿ, ಗ್ರಾಮ್ಷಿ, ನೀಷೆ ಹೀಗೆ ಪಟ್ಟಿ ಮಾಡಬಹುದು. ಇವರು ವಿವರಗಳ ಮೂಲಕವೇ ಪ್ರಮೇಯಗಳನ್ನು ಕಟ್ಟುತ್ತಾರೆ. ಇವರನ್ನೂ ಎರಡು ಮೂರು ಗುಂಪು ಮಾಡಬಹುದು. ಪ್ರಭುತ್ವಗಳನ್ನು ಎದುರು ಹಾಕಿಕೊಂಡು, ಬದುಕಿದ್ದಷ್ಟೂ ದಿನಗಳು ತಲ್ಲಣಗಳ ಮಧ್ಯದಲ್ಲೇ ಬದುಕಿದ ಗ್ರಾಮ್ಷಿ, ಫೆನಾನ್, ಫ್ರೈರೆ, ಎರಡನೇ ಹಂತದ ಚೋಮ್ಸ್ಕಿ ಮುಂತಾದ ಲೋಕಚಿಂತಕರಿದ್ದಾರೆ. ಇವರು ಪ್ರಭುತ್ವಗಳ ತೀವ್ರ ವಿಮರ್ಶಕರೂ ಆಗಿದ್ದರು. ಜೊತೆಗೆ ತಮ್ಮ ಚಿಂತನೆಗಳನ್ನು ಮಂಡಿಸಲು ಅತ್ಯಂತ ಪ್ರಖರವಾದ ವಿಶ್ವಾತ್ಮಕ ನೆಲೆಗಟ್ಟಿನ ಪ್ರಮೇಯಗಳನ್ನು ಮಂಡಿಸಿದರು. ಉಳಿದ ಅನೇಕರು ಸಮಾಜಗಳನ್ನು, ನಾಗರಿಕತೆಗಳ ಚಲನೆಗಳನ್ನು ವಿವರಿಸಲು ನಿರ್ದಿಷ್ಟ ಸಂಗತಿಗಳನ್ನು ಆರಿಸಿಕೊಂಡು ವಿಶ್ವಾತ್ಮಕ ಪ್ರಮೇಯಗಳನ್ನು ಮಂಡಿಸಿದರು. ಟಾಗೂರರು ‘ನ್ಯಾಶನಲಿಸಂ’ ಕುರಿತು ಬರೆದ ಪ್ರಬಂಧಗಳು, ಮ್ಯಾಕ್ಸ್ ವೆಬರ್ ಬರೆದ ‘ದ ಪ್ರೊಟೆಸ್ಟೆಂಟ್ ಎಥಿಕ್ಸ್ ಆ್ಯಂಡ್ ದ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ’ ಕೃತಿಗಳು ಅತ್ಯುತ್ತಮ ಮಾದರಿಗಳು.

ತರೀಕೆರೆಯವರ ಬರಹಗಳಲ್ಲಿ ಕುವೆಂಪು ಮತ್ತು ಮಾಸ್ತಿಯವರ ನಿರೂಪಣಾ ವಿಧಾನ ಕಾಣಿಸುತ್ತವೆ. ಕೆಲವೊಮ್ಮೆ ಶಂಬಾ ಅವರ ವಿವರಣಾತ್ಮಕ ನೆಲೆಗಳೂ ಕಾಣಿಸುತ್ತವೆ. ಸಮೃದ್ಧ ವಿವರಗಳನ್ನು ವಿವಿಧ ಮೂಲಗಳಿಂದ ತಂದು ಸಮೃದ್ಧ ಹರವಿನ ನದಿಯಂತೆ ಮಾಡಿ ಪ್ರಮೇಯಗಳನ್ನು ಮಂಡಿಸುತ್ತಲೆ ಶಂಬಾ ಅವರು ಓದುಗರು ಸ್ಪಷ್ಟ ನಿಲುವು ಮತ್ತು ಪೊಸಿಷನ್ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಅವರು ಹಟ್ಟಿಕಾರರ ಬಗ್ಗೆ ಬರೆಯುವಾಗ ಪಶುಪಾಲಕರು ಚಲಿಸಿದ್ದು ಹೇಗೆ? ಸಂಸ್ಕೃತಿ, ನಾಗರಿಕತೆಗಳನ್ನು ರೂಪಿಸಿದ್ದು ಹೇಗೆ ಎಂದು ಹತ್ತಾರು ಟೂಲುಗಳ ಮೂಲಕ ವಿವರಿಸುತ್ತಾರೆ. ನಾನು ಗಮನಿಸಿದ ಹಾಗೆ ಶಂಬಾ ಅವರು ಸುಮಾರು 15ಕ್ಕೂ ಹೆಚ್ಚು ಜ್ಞಾನಶಿಸ್ತುಗಳನ್ನು ಬಳಸಿ ತಮ್ಮ ಪ್ರಮೇಯಗಳನ್ನು ಮಂಡಿಸುತ್ತಾರೆ. ಮಾಸ್ತಿಯವರ ಬರವಣಿಗೆಯ ವಿಧಾನಗಳು ಘಟನೆ, ಕೃತಿ, ವ್ಯಕ್ತಿಗಳು ಮತ್ತು ಓದುಗರ ನಡುವೆ ಕೆಟಲಿಸ್ಟ್ ಮಾದರಿಯಂತೆ ಕೆಲಸ ಮಾಡುತ್ತವೆ. ಶಂಬಾ, ಡಿ.ಆರ್., ಕೆ.ವಿ. ಸುಬ್ಬಣ್ಣ, ಮೈಖೆಲ್ ವ್ಹಿಟ್ಝೆಲ್, ಶೆಲ್ಡನ್ ಪೊಲಾಕ್ ಮುಂತಾದವರು ಸಂಶೋಧನೆಯ ತಾತ್ವಿಕ ಅನುಸಂಧಾನಗಳಲ್ಲಿ ತಾಂತ್ರಿಕವಾದ ರಚನಾತ್ಮಕತೆ ಎಂಬುದು ಮೇಲುಗೈ ಪಡೆಯದ ಹಾಗೆ ನೋಡಿಕೊಳ್ಳುತ್ತಾರೆ. ರಹಮತ್ ತರೀಕೆರೆ, ವಿವೇಕ್ ರೈ, ಕೆ.ವಿ. ನಾರಾಯಣ್ ಮುಂತಾದವರು ಸ್ಟ್ರಕ್ಚರ್ ಎಂಬುದು ಬಹಳ ಮುಖ್ಯ ಎಂದು ಭಾವಿಸುತ್ತಾರೆ. ಸ್ಟ್ರಕ್ಚರ್ ಇಲ್ಲದೆ ಇವರ ಬರಹಗಳು ಮುಂದಕ್ಕೆ ಹೋಗಲಾರವು. ಲಗಾಮು ಹಾಕಿದ ಕುದುರೆಗಳಿಗಿರುವ ಮಿತಿ ಮತ್ತು ಫೋಕಸ್ಡ್ ಆದ ಶಕ್ತಿಯು ಈ ರೀತಿಯ ಚಿಂತನೆಗಳಲ್ಲಿ ಕಾಣಿಸುತ್ತದೆ.

ರಹಮತ್ ತರೀಕೆರೆಯವರ ಸಂಶೋಧನಾ ಬರಹಗಳ ಪ್ರಮೇಯಗಳ ಪ್ರಮುಖ ಕ್ಯಾನ್ವಾಸು ಕರ್ನಾಟಕ ಕೇಂದ್ರಿತವಾದುದು. ಸೂಫಿ, ನಾಥ, ಶಾಕ್ತ, ಗುರುಪಂಥಗಳ ಕುರಿತು ಅವರು ಮಾಡಿದ ಸಂಶೋಧನೆಗಳು ಕರ್ನಾಟಕವೆಂಬ ಸ್ಥಳ ನಿರ್ದಿಷ್ಟತೆಯನ್ನು ಹೊತ್ತುಕೊಂಡೇ ಹೊರಡುತ್ತವೆ. ಈ ಅಧ್ಯಯನಗಳ ಪ್ರಮುಖ ಉದ್ದೇಶ ಕರ್ನಾಟಕದ ಜನ ಸಂಸ್ಕೃತಿಗಳನ್ನು ಹೆಕ್ಕಿ ತೆಗೆಯುವುದೂ ಆಗಿದೆ. ಶುದ್ಧತೆ, ಶ್ರೇಷ್ಠತೆ ಮತ್ತು ಪ್ರತ್ಯೇಕತೆಯನ್ನು ಪ್ರತಿಪಾದಿಸುವ, ಮತಾತೀತವಾಗಿ ಹರಡಿಕೊಂಡಿರುವ ಪುರೋಹಿತಶಾಹಿ ಮತ್ತು ಆಳುವ ಸಂಸ್ಕೃತಿಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಂಸ್ಕೃತಿಗಳು ಎಂದು ಸೂಫಿ, ನಾಥ, ಗುರು ಮತ್ತು ಶಾಕ್ತ ಪಂಥಗಳು ಪ್ರತಿಪಾದಿಸುತ್ತವೆ. ಆಳುವ ಸಂಸ್ಕೃತಿಗಳು ತಮ್ಮೆಲ್ಲ ಸೈದ್ಧಾಂತಿಕ ಮತ್ತು ವರ್ತನೆಗಳ ಮೂಲಕ ‘ಎಕ್ಸ್‌ಕ್ಲೂಸಿವ್ ರಾಜಕಾರಣ’ ಮಾಡಲು ನಿರಂತರ ಪ್ರಯತ್ನಿಸುತ್ತವೆೆ. ಅವುಗಳನ್ನು ಎದುರು ಹಾಕಿಕೊಂಡು ‘ಇನ್‌ಕ್ಲೂಸಿವ್’ ಆದ ರಾಜಕೀಯ ಪ್ರಮೇಯಗಳನ್ನು ಜನರ ಮಧ್ಯೆ ಮಂಡಿಸಿ, ಆಚರಣಾತ್ಮಕವಾಗಿ ಕೂಡ ಪರ್ಯಾಯವಾದ ಸಂಸ್ಕೃತಿಗಳನ್ನು ಪ್ರತಿಪಾದಿಸಿದ ಈ ಪಂಥಗಳು ಇಂದಿಗೂ ಜನರ ಮಧ್ಯೆ ತಮ್ಮೆಲ್ಲ ಮಿತಿಗಳ ನಡುವೆಯೂ ಜೀವಂತವಾಗಿರುವುದನ್ನು ತರೀಕೆರೆಯವರು ಗುರುತಿಸುತ್ತಾರೆ. ಅವುಗಳೂ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಅವುಗಳ ಮೇಲೂ ಆಳುವ ಸಂಸ್ಕೃತಿಗಳ ಮನುಷ್ಯ ವಿರೋಧಿ, ಮೂಲಭೂತವಾದಿ ಪ್ರಮೇಯಗಳು ಆಕ್ರಮಣ ಮಾಡುತ್ತಿರುವುದನ್ನು ವಿವರಿಸುತ್ತಾರೆ.

ಇಷ್ಟಾದರೂ ಈ ಜನಸಂಸ್ಕೃತಿಗಳು ತಮ್ಮ ಮೂಲ ಆಶಯವಾದ ಇನ್‌ಕ್ಲೂಸಿವ್ ತತ್ವಗಳ ಆಶಯಗಳನ್ನು ಧರಿಸಿರುವುದರಿಂದ ಪ್ರತ್ಯೇಕತೆಯನ್ನು ಹೇಳುವ ಪ್ರಧಾನ ಸಂಸ್ಕೃತಿಗಳನ್ನು ಎದುರು ಹಾಕಿಕೊಳ್ಳುತ್ತವೆ. ಹಾಗಾಗಿ ಇವೂ ಕೂಡ ಆರಂಭದಲ್ಲಿ ಪ್ರತಿ ಸಂಸ್ಕೃತಿಗಳೇ ಆಗಿದ್ದವು. ಇಷ್ಟಿದ್ದರೂ ಯಾಕೆ ರಹಮತ್ ತರೀಕೆರೆಯವರ ಈ ಮಹತ್ವದ ಅಧ್ಯಯನಗಳು ನಾಡಿನಲ್ಲಿ ದೊಡ್ಡ ಸಂಚಲನವನ್ನು ಹುಟ್ಟಿಸಲಿಲ್ಲ? ಎಂಬ ಪ್ರಶ್ನೆ ಎದುರು ಕೂತು ಕಾರಣ ಕೇಳುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೂಲಕ ಅವರ ಸಂಶೋಧನಾ ಕೃತಿಗಳ ಶಕ್ತಿ ಮತ್ತು ಮಿತಿಗಳನ್ನೂ ಗುರುತಿಸಬಹುದು. ಒಂದು, ತರೀಕೆರೆಯವರ ಸಂಶೋಧನಾ ಕೃತಿಗಳು ಬಹಳ ಸಾರಿ ಬಹುಶಿಸ್ತುಗಳ ಸಪೋರ್ಟಿಲ್ಲದೆ ತುಸು ಸೊರಗುತ್ತವೆ ಹಾಗೂ ಏಕತಾನತೆಯಿಂದ ಬಳಲುತ್ತವೆ. ಶಂಬಾ ಮತ್ತು ಡಿ.ಆರ್. ತಮ್ಮ ಚಿಂತನೆಗಳನ್ನು ಮಂಡಿಸುವಾಗ ಸಮಾಜ ವಿಜ್ಞಾನ, ಪುರಾಣ, ಕುಲಶಾಸ್ತ್ರ ಮತ್ತು ವಿಜ್ಞಾನಶಾಸ್ತ್ರಗಳ ಹಲವು ಶಿಸ್ತುಗಳನ್ನು ಏಕೀಭವಿಸಿ ದುಡಿಸಿಕೊಳ್ಳುತ್ತಾರೆ. ಅಂಥದನ್ನು ಮಾಡಲು ತರೀಕೆರೆಯವರಿಗೆ ಶಕ್ತಿಯಿದ್ದರೂ ಮೆಥೆಡಾಲಜಿಯ ತಾಂತ್ರಿಕ ಹಂಗಿನಿಂದಾಗಿ ಅದನ್ನು ಕತ್ತರಿಸಿ ಪಕ್ಕಕ್ಕೆ ಎಸೆದುಬಿಡುತ್ತಾರೆ. ಇದರಿಂದಾಗಿ ಅವರ ಈ ಬರಹಗಳು ಕಟ್ಟಿದ ಕಾಲುವೆಯಲ್ಲಿ ನೀರು ಹರಿಸಿದಂತೆ ತೋರುಗಾಣಿಸುತ್ತವೆ. ಮೈದುಂಬಿದ ನದಿಯ ಸೊಗಸು, ಆಳ, ವಿಸ್ತಾರಗಳು ಕಾಣೆಯಾಗಿಬಿಟ್ಟಿವೆಯಲ್ಲ ಎಂಬ ಕೊರಗು ಗಂಭೀರ ಓದುಗರಲ್ಲಿ ಉಳಿದುಬಿಡುತ್ತದೆ.

ಎರಡು, ತರೀಕೆರೆಯವರು ಉದ್ದೇಶಪೂರ್ವಕವಾಗಿ ತೌಲನಿಕ ಅಧ್ಯಯನ ಮಾದರಿಗಳನ್ನು ನಿರಾಕರಿಸುತ್ತಾರೆ. ತೌಲನಿಕ ಮಾದರಿಗಳು ವಸಾಹತುವಾದಕ್ಕೆ ಬಲಿಯಾದ ದೇಶಗಳಲ್ಲಿದ್ದು ಸಂಶೋಧನೆ ನಡೆಸಿದ್ದ ಚಿಂತಕರುಗಳ ರಾಜಕೀಯ ಮಿತಿ ಎಂದು ಗ್ರಹಿಸುತ್ತಾರೆನ್ನಿಸುತ್ತದೆ. ಇದು ತುಸು ಮಟ್ಟಿಗೆ ನಿಜ ಕೂಡ. ಕಲೋನಿಯಲ್ ರಾಷ್ಟ್ರಗಳ ಚಿಂತಕರು ಉದ್ದೇಶಪೂರ್ವಕವಾಗಿ ತೌಲನಿಕ ಅಧ್ಯಯನ ವಿಧಾನಗಳನ್ನು ನಿರಾಕರಿಸುತ್ತಾರೆ. ಅಲ್ಲಿನ ಚಿಂತಕರು ಪೌರ್ವಾತ್ಯ ದೇಶಗಳಲ್ಲೂ ತಮಗೆ ಸರಿಸಾಟಿಯಾಗುವ ಚಿಂತಕರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಅವರ ಕಲೋನಿಯಲ್ ಸುಪ್ರಿಮಸಿಯ ಮನಸ್ಸು ನಿರಾಕರಿಸಲೆತ್ನಿಸುತ್ತದೆ. ಅಮೆರಿಕದ ವಿವಿಯಲ್ಲಿ ಕೆಲಸ ಮಾಡಿದ ಇಸ್ರೇಲಿನ ಹರಾರಿ ಟಾಗೂರರ ‘ನ್ಯಾಶನಲಿಸಂ’ ಕೃತಿಯನ್ನು ಓದಿರುವಂತೆ, ಪ್ರಭಾವಿತನಾಗಿರುವಂತೆ ಕಾಣುತ್ತದೆ. ಆದರೆ ಆತ ತಪ್ಪಿಯೂ ಟಾಗೂರರ ಹೆಸರನ್ನು ಉಲ್ಲೇಖಿಸುವುದಿಲ್ಲ. ಆದರೆ ಪೂರ್ವ ದೇಶಗಳ, ಆಫ್ರಿಕದ, ದಕ್ಷಿಣ ಅಮೆರಿಕದ ಚಿಂತಕರ ಪ್ರಬಲ ನಿರೂಪಣಾ ನೆಲಗಟ್ಟು ತೌಲನಿಕವಾದುದು. ಡಿ.ಆರ್. ಅಲ್ಲಮ ಮತ್ತು ಅಭಿನವಗುಪ್ತನ ಜೊತೆ ನಿಲ್ಲಿಸಿ ಹೋಲಿಸಿ ಪ್ರಮೇಯ ಕಟ್ಟುತ್ತಾರೆ. ಡಿ.ಆರ್.ರ ಸಂಸ್ಕೃತಿ ಮೀಮಾಂಸೆಯ ಪ್ರಧಾನ ನೆಲೆಯೇ ತೌಲನಿಕವಾದುದು. ತುಲನಾತ್ಮಕ ಐಡಿಯಾಲಜಿಯು ರಾಜಕೀಯವಾಗಿ ಮಿತಿಗಳಲ್ಲಿದ್ದರೂ ಮನುಷ್ಯನ ಮೆಟಫಿಸಿಕಲ್ ಆದ ಪ್ರಜ್ಞೆಯ ಮೂಲಕ ದಾಖಲಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಹಾಗಾಗಿಯೆ ರೂಪಕಗಳನ್ನು ರಾಜಕೀಯ ಪರಿಭಾಷೆಗಳು ಎಂದು ಸ್ಟುವರ್ಟ್ ಚೇಸ್ ತನ್ನ ‘ಟಿರನಿ ಆಫ್ ವರ್ಡ್ಸ್’ ಕೃತಿಯಲ್ಲಿ ಚರ್ಚಿಸುತ್ತಾನೆ. ತರೀಕೆರೆಯವರು ಕರ್ನಾಟಕದ ನಾಥ ಪಂಥ ಕೃತಿಯಲ್ಲಿ ಈ ತೌಲನಿಕ ಅಧ್ಯಯನ ವಿಧಾನವನ್ನು ತುಸುಮಟ್ಟಿಗೆ ಅಳವಡಿಸಿಕೊಂಡಿದ್ದಾರೆ. ಆದರೆ ಅದು ವಿವರಗಳ ಮಟ್ಟಿಗೆ ನಿಂತುಬಿಡುತ್ತದೆಯೇ ಹೊರತು, ಪ್ರಮೇಯಗಳಾಗುವುದಿಲ್ಲ.

ಸಂಶೋಧನೆಗಳನ್ನು ವಿವರಿಸಲು ತೌಲನಿಕ ಮಾದರಿಗಳನ್ನು ಬಿಟ್ಟುಕೊಟ್ಟೂ ಸಹ ಹಲವು ವಿದ್ವಾಂಸರು ಜಾಗತಿಕವೆನ್ನಿಸುವ ಪ್ರಮೇಯಗಳನ್ನು ಮಂಡಿಸಿದ್ದಾರೆ. ಮೇಲೆ ಪ್ರಸ್ತಾಪಿಸಿದ ಹಾಗೆ ಟಾಗೂರ್, ಮ್ಯಾಕ್ಸ್ ವೆಬರ್, ನೀಷೆ, ಹರಾರಿ ಮುಂತಾದವರ ಸಂಶೋಧನೆಯ ಬರಹಗಳಲ್ಲಿ ತೌಲನಿಕ ಪ್ರಮೇಯಗಳಿರುವುದಿಲ್ಲ. ನೀಷೆ ಚರಿತ್ರೆಯ ಮೇಲೆ ಬರೆದ ಬರಹಗಳು, ವೆಬರ್‌ನ ‘ದ ಪ್ರೊಟೆಸ್ಟೆಂಟ್ ಎಥಿಕ್ಸ್ ಆ್ಯಂಡ್ ದ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ’, ಟಾಗೂರರ ‘ನ್ಯಾಶನಲಿಸಂ’, ಹರಾರಿಯ ‘ಸೇಪಿಯನ್ಸ್’, ಶಂಬಾ ಅವರ ‘ಋಗ್ವೇದ ಸಾರ ನಾಗಪ್ರತಿಮಾ ವಿಚಾರ’ ಸೇರಿದಂತೆ ಬಹುಪಾಲು ಕೃತಿಗಳನ್ನು ಈ ವಿಧಾನಕ್ಕೆ ಉದಾಹರಣೆಯಾಗಿ ಹೆಸರಿಸಬಹುದು. ಈ ಕೃತಿಗಳು ನಿರ್ದಿಷ್ಟ ಸಂಗತಿಗಳನ್ನು ಮಂಡಿಸುತ್ತಿದ್ದರೂ ಸಹ ಆಳದಲ್ಲಿ ವಿಶ್ವಾತ್ಮಕ ಚಿಂತನೆಗಳನ್ನು ಪ್ರತಿಪಾದಿಸುತ್ತಿರುತ್ತವೆ. ಡಿ. ಆರ್. ಹೇಳುವಂತೆ ‘ವಿಶಿಷ್ಟವಾಗದೆ ವಿಶ್ವಾತ್ಮಕವಾದರೆ’ ಅದೂ ಕೃತಕವಾಗಿರುತ್ತದೆ. ಆದರೆ ವಿಶಿಷ್ಟವಾಗುವ ತೀವ್ರ ಹಂಬಲದಲ್ಲಿ ವಿಶ್ವಾತ್ಮಕತೆಯ ಸಾಧ್ಯತೆಗಳನ್ನು ನಿರಾಕರಿಸಿದರೆ ಚಿಂತನೆಗಳು ದ್ವೀಪದಂತಾಗಿಬಿಡುತ್ತವೆ. ಹರಾರಿ ಮತ್ತು ಸ್ಟೀಫನ್ ಹಾಕಿಂಗ್ ಪದೇ ಪದೇ ಪ್ರಸ್ತಾಪಿಸಿದ ಸಂಗತಿಗಳೆಂದರೆ, ‘ಜಾಗತಿಕ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳಿಲ್ಲ, ಅವಕ್ಕೆ ಜಾಗತಿಕವಾದ ಪರಿಹಾರಗಳೇ ಬೇಕು’. ಶ್ರೇಷ್ಠತೆ, ಪ್ರತ್ಯೇಕತೆಯ ಪ್ರಮೇಯಗಳು, ಮೂಲಭೂತವಾದ, ಕೋಮುವಾದ, ಭಯೋತ್ಪಾದನೆ, ಸಾಂಸ್ಕೃತಿಕ ಯಜಮಾನಿಕೆ, ನಿಸರ್ಗದ ಬಿಕ್ಕಟ್ಟುಗಳು, ಐಡೆಂಟಿಟಿ ರಾಜಕಾರಣ, ಧಾರ್ಮಿಕ ಸಂಸ್ಥೆಗಳು, ಸಂಘಟನೆಗಳು ಪ್ರಜಾತಂತ್ರದ ಮೇಲೆ ಸಾಧಿಸುತ್ತಿರುವ ಹಿಡಿತ, ಬಂಡವಾಳವಾದ ಸೃಷ್ಟಿಸಿರುವ ಸಂಕಷ್ಟಗಳು ಮುಂತಾದವುಗಳಿಗೆ ಸ್ಥಳೀಯವಾಗಿ ಉತ್ತರ ಕಂಡುಕೊಳ್ಳಲಾಗದು. ಅದ್ದರಿಂದ ಜಾಗತಿಕ ಚಿಂತನೆಗಳ ಜೊತೆ ನಮ್ಮ ಚಿಂತನೆಗಳು ಕನೆಕ್ಟ್ ಆಗದೆ ಹೋದರೆ ನಾವು ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. ಅತ್ಯುತ್ತಮ ರಾಷ್ಟ್ರೀಯ ಪ್ರಜ್ಞೆಯು ಅತ್ಯುತ್ತಮ ಜಾಗತಿಕ ಪ್ರಜ್ಞೆಯೂ ಆಗಿರುತ್ತದೆ ಎಂಬುದನ್ನು ನಾವು ಕಂಡುಕೊಳ್ಳಲೇಬೇಕು. ಕಪ್ಪುಪ್ರಜ್ಞೆಯನ್ನು ಜಾಗತಿಕ ಪ್ರಜ್ಞೆಯ ಭಾಗವಾಗಿಸಿದ ಫೆನಾನ್‌ನಿಂದ ನಾವು ಕಲಿಯುವುದು ಬಹಳಷ್ಟಿದೆ. ಒಕಾಂಕೊ ಒಬ್ಬನೆ ವಸಾಹತುಶಕ್ತಿಯ ವಿರುದ್ಧ ಹೋರಾಡಿ ಇಂದು ಗೆಲ್ಲಲಾರ ಎಂಬುದನ್ನು ನಮ್ಮ ತಲೆಮಾರು ಬೇಗ ಅರ್ಥಮಾಡಿಕೊಳ್ಳಬೇಕು.

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News