‘ಮೋದಿ ಭೂಮಿಯ ಕೊನೆ ಭರವಸೆಯೆಂದು ಬಣ್ಣಿಸುವ ವರದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾಗಿಲ್ಲ; ದಿ ಪ್ರಿಂಟ್ ವರದಿ
ಹೊಸದಿಲ್ಲಿ, ಸೆ.27: ಅಮೆರಿಕದ ಪ್ರತಿಷ್ಠಿತ ದಿನಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ನ ಮುಖಪುಟದಂತೆ ಕಾಣುವ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಸಚಿತ್ರ ವರದಿಯ ಸ್ಕ್ರೀನ್ಶಾಟ್ ಫೇಸ್ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್ಆ್ಯಪ್ ಗಳಲ್ಲೂ ಹರಿದಾಡುತ್ತಿದ್ದು, ಭಾರೀ ಸುದ್ದಿ ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಛಾಯಾಚಿತ್ರದೊಂದಿಗೆ "ಲಾಸ್ಟ್, ಬೆಸ್ಟ್ ಹೋಪ್ ಆನ್ ಆರ್ತ್ (ಭೂಮಿಯಲ್ಲಿನ ಕೊನೆಯ, ಅತ್ಯುತ್ತಮ ಭರವಸೆ) ಎಂಬ ಶೀರ್ಷಿಕೆಯನ್ನು ಈ ಸ್ಕ್ರೀನ್ಶಾಟ್ನಲ್ಲಿ ತೋರಿಸಲಾಗಿದೆ. ಸೆ.24-25ರಂದು ಮೋದಿಯರ ಅಮೆರಿಕ ಭೇಟಿಯನ್ನು ಪ್ರಸ್ತಾಪಿಸುತ್ತಾ "ಜಗತ್ತಿನ ಅತ್ಯಂತ ಪ್ರೀತಿಪಾತ್ರ ಹಾಗೂ ಅತ್ಯಂತ ಬಲಿಷ್ಠ ನಾಯಕ ನಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದಾರೆ" ಎಂಬ ಟ್ಯಾಗ್ಲೈನನ್ನು ಕೂಡಾ ಅದರಲ್ಲಿ ಬರೆಯಲಾಗಿದೆ.
ಆದರೆ ವೈರಲ್ ಆಗಿರುವ ಈ ಸ್ಕ್ರೀನ್ ಶಾಟ್ ನ್ಯೂಯಾರ್ಕ್ ಟೈಮ್ಸ್ ನ ಮುಖಪುಟವಲ್ಲವೆಂದು ಸುದ್ದಿಜಾಲತಾಣ ದಿ ಪ್ರಿಂಟ್.ಇನ್ ವರದಿಯೊಂದು ತಿಳಿಸಿದೆೆ. ವಾಸ್ತವವಾಗಿ ಸೆಪ್ಟೆಂಬರ್ 26ರ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಮೋದಿ ಬಗ್ಗೆ ಯಾವುದೇ ವರದಿಯು ಪ್ರಕಟವಾಗಿಲ್ಲವೆಂದು ಅದು ಹೇಳಿದೆ. ಅಲ್ಲದೆ ಈ ಪತ್ರಿಕೆಯ ಪುಟವನ್ನು ಲಿಂಕ್ ಮಾಡುವಂತಹ ಯುಆರ್ ಎಲ್ ಅನ್ನು ಕೂಡಾ ಯಾವುದೇ ಜಾಲತಾಣದಲ್ಲಿ ನೀಡಲಾಗಿಲ್ಲ.
ಆದರೆ ಈ ಸ್ಕ್ರೀನ್ ಶಾಟ್ ಅನ್ನು ನಿಕಟವಾಗಿ ಪರಿಶೀಲಿಸಿದಲ್ಲಿ, ಅದು ತಿರುಚಿಲ್ಪಟ್ಟ ಚಿತ್ರವೆಂಬುದು ಸ್ಪಷ್ಟವಾಗುತ್ತದೆ ಎಂದು ದಿ ಪ್ರಿಂಟ್. ಇನ್ ವರದಿ ಮಾಡಿದೆ. ಅಲ್ಲದೆ ಈ ಸ್ಕ್ರೀನ್ ಶಾಟ್ ನಲ್ಲಿ ಸೆಪ್ಟೆಂಬರ್ ಪದದ ಸ್ಪೆಲ್ಲಿಂಗ್ ಅನ್ನೂ ತಪ್ಪಾಗಿ ಬರೆಯಲಾಗಿದೆ. ಕಳೆದ ತಿಂಗಳು ಝೀ ನ್ಯೂಸ್ ಸುದ್ದಿ ವಾಹಿನಿ ಪ್ರಕಟಿಸಿದ ವರದಿಯೊಂದರಲ್ಲಿ ಪ್ರಕಟವಾದ ಮೋದಿಯವರ ಛಾಯಾಚಿತ್ರವನ್ನು ಈ ನಕಲಿ ಮುಖಪುಟದಲ್ಲಿ ಬಳಸಲಾಗಿರುವುದು ಕೂಡಾ ಬೆಳಕಿಗೆ ಬಂದಿದೆ ಎಂದು ಸುದ್ದಿಜಾಲತಾಣ theprint.in ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದ ಈ ಸ್ಕ್ರೀನ್ಶಾಟ್ ಅನ್ನು 76 ಸಾವಿರಕ್ಕೂ ಅಧಿಕ ಫಾಲೋವರ್ಗಳನ್ನು ಹೊಂದಿರವ ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ಚಾಹಲ್ ಮರು ಟ್ವೀಟ್ ಮಾಡಿದ್ದರು.