ತೈಲ ಬೆಲೆ ಗಗನಕ್ಕೆ; ರೂಪಾಯಿ ಪಾತಾಳಕ್ಕೆ

Update: 2021-10-12 03:50 GMT
ಸಾಂದರ್ಭಿಕ ಚಿತ್ರ (Source: PTI)

ಮುಂಬೈ, ಅ.12: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾಗಿ ಸಾಗುತ್ತಿರುವ ನಡುವೆಯೇ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದರ 75.36ಕ್ಕೆ ಕುಸಿದಿದೆ. ಡಾಲರ್ ಮತ್ತು ತೈಲ ದುಬಾರಿಯಾಗಿರುವುದು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗುವ ಭೀತಿ ಇದೆ. ಪರಿಣಾಮವಾಗಿ 10 ವರ್ಷಗಳ ಸರ್ಕಾರಿ ಬಾಂಡ್‌ಗಳ ಮೇಲಿನ ಪ್ರತಿಫಲ ಶೇಕಡ 6.34ಕ್ಕೇರಿದ್ದು, ಇದು 18 ತಿಂಗಳಲ್ಲೇ ಗರಿಷ್ಠ.

ತೈಲ ಬೆಲೆ ಏಳು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು ಹಾಗೂ ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಹೆಚ್ಚಿಸಿಕೊಂಡಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್, ದ್ರವ್ಯತೆ ಕಡಿಮೆ ಮಾಡುವ ದೃಷ್ಟಿಯಿಂದ ಬಾಂಡ್ ಮರುಖರೀದಿಗೆ ಮುಂದಾಗಲಿದೆ ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಡಾಲರ್ ತನ್ನ ಮೌಲ್ಯ ವರ್ಧಿಸಿಕೊಂಡಿದೆ. ಅಧಿಕ ಹಣದುಬ್ಬರದ ಭೀತಿ ಹಾಗೂ ಸರ್ಕಾರದ ಭದ್ರತೆಗಳ ಖರೀದಿ ಕಾರ್ಯಕ್ರಮದಲ್ಲಿ ಹೆಚ್ಚವರಿ ಖರೀದಿಯ ಅಗತ್ಯತೆ ಇಲ್ಲ ಎಂದು ಆರ್‌ಬಿಐ ಘೋಷಿಸಿರುವುದು ಬಾಂಡ್ ಮೇಲಿನ ಪ್ರತಿಫಲ ಹೆಚ್ಚಳಕ್ಕೆ ಪ್ರಮುಖ ಕಾರಣ.

ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಿ ಡಾಲರ್ ಮಾರಾಟ ಆರಂಭಿಸದಿದ್ದರೆ ರೂಪಾಯಿ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. 637 ದಶಲಕ್ಷ ಡಾಲರ್ ವಿದೇಶಿ ವಿನಿಮಯ ಮೀಸಲು ಮತ್ತು ಅಧಿಕ ಬಂಡವಾಳ ಒಳಹರಿವಿನ ಪರಿಣಾಮವಾಗಿ ಮಾರುಕಟ್ಟೆ ಅಸ್ಥಿರತೆಯ ಭೀತಿ ಇಲ್ಲ. ಆದರೆ ತೈಲ ಬೆಲೆ ಏರಿಕೆ ಮತ್ತು ವಿದೇಶಿ ವಿನಿಮಯ ದರದುಬ್ಬರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರ್ಕಾರ ವಿಧಿಸಿದ ತೆರಿಗೆ ಕಡಿತಗೊಳಿಸಲು ಒತ್ತಡ ತರಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಸೋಮವಾರ ರೂಪಾಯಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 75.11 ಮೌಲ್ಯದೊಂದಿಗೆ ಆರಂಭವಾಗಿ ಮಧ್ಯಾಹ್ನದ ವೇಳೆಗೆ 75.06ಕ್ಕೆ ಮೌಲ್ಯ ಹೆಚ್ಚಿಸಿಕೊಂಡಿತು. ಆದರೆ ಮತ್ತೆ ಪ್ರಪಾತಕ್ಕೆ ಬಿದ್ದು 75.39ರೊಂದಿಗೆ ಅಂತ್ಯವಾಯಿತು. ದೇಶೀಯ ಘಟಕ ಅಂತಿಮವಾಗಿ ಒಂದು ಡಾಲರ್‌ಗೆ 75.36 ರೂಪಾಯಿಯೊಂದಿಗೆ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News